ಏಳದೆ ಮಂದಾರ ರಾಮಾಯಣ ಸಪ್ತಾಹದ ಸಮಾರೋಪ ಸಮಾರಂಭ ಮೂಡಬಿದ್ರೆಯ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನದಲ್ಲಿ ನಡೆಯಿತು.

ಮೂಡುಬಿದ್ರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಸರ್ವಾಧ್ಯಕ್ಷತೆ ವಹಿಸಿದ್ದರು. ಏಳದೆ  ಮಂದಾರ ರಾಮಾಯಣದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಪ್ರಭಾಕರ ಜೋಶಿ, ತುಳುನಾಡಿನ ತುಳು ಭಾಷೆಯಲ್ಲಿ  ಮಂದಾರ ರಾಮಾಯಣ ಮಹಾಕಾವ್ಯವು ರಾಮಾಯಣದ ಎಲ್ಲ ಪಾತ್ರಗಳನ್ನು ಒಳಗೊಂಡಿದೆ. ಆ ಪಾತ್ರಗಳೆಲ್ಲವೂ ಅಥವಾ ರಾಮಾಯಣವು ಕರಾವಳಿ ಕರ್ನಾಟಕ ಅಥವಾ ತುಳುನಾಡಿನಲ್ಲಿಯೇ ನಡೆದಿದೆಯೋ ಎಂಬಂತೆ ಕವಿ ಮಂದಾರರು ಚಿತ್ರಿಸಿದ್ದಾರೆ. ಪಾತ್ರಗಳಿಗೆ ಜೀವ ಕಳೆ ತುಂಬಿದ್ದಾರೆ. ಮಂದಾರ ರಾಮಾಯಣ ಮಹಾಕಾವ್ಯ ಬರೆಯುತ್ತಿದ್ದ ಸಂದರ್ಭದಲ್ಲಿ ಕವಿ ಮಂದಾರರ ಮತ್ತು ತನ್ನ ಒಡನಾಟದ ಬಗ್ಗೆ, ಪರಸ್ಪರ ಪ್ರೀತಿ ಗೌರವಗಳ ಬಗ್ಗೆ ಜೋಶಿಯವರು ನೆನಪಿಸಿದರು.

ಗ್ರಂಥ ಮುದ್ರಣಕ್ಕೆ ಮುಂಚೆ ಅವುಗಳ ತಯಾರಿ ಬಗ್ಗೆ ಅವರು ತೆಗೆದುಕೊಂಡ ಕ್ರಮಗಳು, ತನ್ನ ಮತ್ತು ಮಂದಾರರ ಸುದೀರ್ಘ ಅವಧಿಯ ಒಡನಾಟ ಮಂದಾರರ ವ್ಯಕ್ತಿತ್ವ ಎಲ್ಲವನ್ನು ಮನಮುಟ್ಟುವಂತೆ ಸಭಾ ಕಾರ್ಯಕ್ರಮದಲ್ಲಿ ಜೋಶಿ ಅವರು ವಿವರಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ ಹಾಗೂ ಭದ್ರಾ ತುಳು ಕೂಟದ ಸ್ಥಾಪಕ ಅಧ್ಯಕ್ಷ ಚಂದ್ರಹಾಸ ದೇವಾಡಿಗ ಅವರನ್ನು ಮಂದಾರ ಸನ್ಮಾನ್ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮತ್ತು ಉದ್ಯಮಿ ಶ್ರೀಪತಿ ಭಟ್  ಅವರು ಮಂದಾರ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆ  “ಮನೆಮನೆ ಮಂದಾರ ರಾಮಾಯಣ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಂದಾರ ಕೇಶವ ಭಟ್ಟರ ಮಗಳು ಶಾರದಾ ಮಣಿ ಏಳದೆ ಮಂದಾರ ರಾಮಾಯಣದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ, ಮಂದಾರ ಕೇಶವ ಭಟ್ಟರು ಹುಟ್ಟಿದ ವಾಸಿಸಿದ ಮನೆ ಕಳೆದ ಮೂರು ವರ್ಷಗಳಿಂದ ತ್ಯಾಜ್ಯದಲ್ಲಿ ಮುಳುಗಿದ್ದು, ಇನ್ನೆಂದು ವಾಸ ಯೋಗ್ಯವಲ್ಲದ ಸ್ಥಿತಿ ತಲುಪಿದೆ. ಈ ಬಗ್ಗೆ ಜಿಲ್ಲಾಡಳಿತ ಸರ್ಕಾರ ಕ್ರಮ ಕೈಗೊಳ್ಳದಿರುವುದು ಆಡಳಿತ ನಡೆಸುವ ಮಂದಿಗೆ ಕವಿಗಳ ಬಗ್ಗೆ ಇರುವ ಅನಾದರ, ಮತ್ತು ಅಸಡ್ಡೆ ಮುಖಕ್ಕೆ ರಾಚುವಂತಿದೆ. ಇನ್ನೊಬ್ಬರ ಬದುಕಿನ ಜೊತೆ ಚೆಲ್ಲಾಟ ಆಡುವ ಆಡಳಿತ ವ್ಯವಸ್ಥೆಯನ್ನ ಖಂಡಿಸಿದರು.

ಸಭೆಯಲ್ಲಿ ತುಳು ವರ್ಲ್ಡ್ ಅಧ್ಯಕ್ಷರು ಸದಸ್ಯರು, ತುಳು ಕೂಟ ಬೆದ್ರಾ ಅಧ್ಯಕ್ಷರು ಸದಸ್ಯರು, ಮಂದಾರ ಪ್ರತಿಷ್ಠಾನ ಅಧ್ಯಕ್ಷರು ಸದಸ್ಯರು, ದವಳತ್ರಯ  ಟ್ರಸ್ಟ್ ಅಧ್ಯಕ್ಷರು ಸದಸ್ಯರು, ಹಲವು ಯಕ್ಷಗಾನ ಕಲಾವಿದರು, ಹಲವು ಸಂಘ-ಸಂಸ್ಥೆಯ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು ಡಾ. ರಾಜೇಶ್ ಆಳ್ವಾ ಕಾರ್ಯಕ್ರಮ ನಿರೂಪಿಸಿದರು ಹಾಗೂ ಡಾ. ರಾಜೇಶ್ ಭಟ್ ಮಂದಾರ ಸ್ವಾಗತ, ಪ್ರಸ್ತಾವನೆ, ವಂದನಾರ್ಪಣೆಗೈದರು. 

error: Content is protected !!
Share This