ತಾಳಮದ್ದಳೆಯಲ್ಲಿ ಅರ್ಥ ಹೇಳಬೇಕಿದ್ದರೆ ಪುರಾಣ ಜ್ಞಾನ ಚೆನ್ನಾಗಿರಬೇಕು. ಅದನ್ನು ಆವರಿಸಿಕೊಂಡಿರುವ ತತ್ವಶಾಸ್ತ್ರ ಗೊತ್ತಿರಬೇಕು. ವಿಶ್ವಜನೀನ ಸಂಸ್ಕೃತಿಯಿಂದ ಹಿಡಿದು ಆಧುನಿಕ ಸಮಾಜ ಶಾಸ್ತ್ರ ತನಕ ಗೌರವಿಸುವ ಮನಸ್ಸೂ ಬೇಕು. ಅರ್ಥಧಾರಿ ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಕಲಾವಿದ. ಸಮಯಸ್ಫೂರ್ತಿ ಜೀವನಾಸಕ್ತಿಗಳನ್ನು ಬೆರೆಸಿ ಸಭೆಯನ್ನು ತಿಳಿದು ಆಶು ಭಾಷಣ ಮಾಡಬಲ್ಲ ಅವನ ಸಾಮರ್ಥ್ಯ ಪರೀಕ್ಷೆ ಪಂಡಿತರಿಂದ ಹಿಡಿದು ಪಾಮರನ ತನಕ ಸಭಾಸದನದಲ್ಲಿ ಪ್ರತಿ ನಿಮಿಷ ನಿಕಷಕ್ಕೆ ಒಡ್ಡಲ್ಪಡುತ್ತದೆ.

ಅರ್ಥಧಾರಿಗಳು ನನಗೆ ಎಂದೂ ಕುತೂಹಲ ಕೆರಳಿಸುವ ಮಹನೀಯರಾಗಿ ಕಾಣಿಸಿದ್ದಾರೆ. ಶೇಣಿ ಅವರಿಂದ ಹಿಡಿದು ಮೊನ್ನೆ ಮೊನ್ನೆ ( ೨೦೧೭ ಮೇ ೧೩_೧೪) ಮೈಸೂರಲ್ಲಿ ಸನ್ಮಾನಗೊಂಡ ಶ್ರೀ ಪ್ರಭಾಕರ ಜೋಶಿ ತನಕ ಸಾಲು ಸಾಲು ಕಲಾವಿದರ ಮಾತುಗಳನ್ನು ಕೇಳಿದ್ದೇನೆ. ವೇಷಧಾರಿಗಳನ್ನು ಗುರುತಿಟ್ಟು ನೆನಪಿಟ್ಟುಕೊಳ್ಳುವುದು ಕಷ್ಟ. ಅರ್ಥಧಾರಿಗಳು ಮಾತ್ರ ನಮಗೆ ತುಂಬ ಹತ್ತಿರ ಇರುತ್ತಾರೆ. ಕಾಲೇಜಿನಲ್ಲಿದ್ದಾಗ ಕೆಲವು ಸಂಜೆಗಳನ್ನು ಶೇಣಿ ಗೋಪಾಲಕೃಷ್ಣ ಭಟ್ಟರೊಂದಿಗೆ ಕಳೆದ ಒಬ್ಬ ಭಾಗ್ಯಶಾಲಿಯಾಗಿ ನಾನು ಎಂದೂ ಈ ಕಲಾವಿದರನ್ನು ಪ್ರೀತಿಸಿದ್ದೇನೆ..ಹುಚ್ಚನಂತೆ.

ಪುಸ್ತಕವಿದನ್ನು ಮೊನ್ನೆ ಮೈಸೂರಿನ ರಘುಪತಿ ತಾಮ್ಹನ್ಕರ್ ಕೊಟ್ಟರು. ಮೈಸೂರಿನಲ್ಲಿ ಜೋಶಿ ಅವರನ್ನು ಸಮ್ಮಾನಿಸಿದ ತಂಡದಲ್ಲಿ ಅವರೂ ಇದ್ದರೆಂದು ತಿಳಿಯಿತು.

ಕೃತಿಗೆ ಗ. ನಾ ಭಟ್ಟರ ತೂಕದ ಮುನ್ನುಡಿ ಇದೆ. ಒಳ ಹೂರಣವಾಗಿ ಕೆಲವು ಲೇಖನಗಳ ಮಾಲೆ ರೈಲಿನಂತೆ ಪ್ರಭಾಕರ ಜೋಶಿ ಅವರನ್ನು ಸುತ್ತುತ್ತದೆ.

ಡಾ.ರಮಾನಂದ ಬನಾರಿ , ಸೇರಾಜೆ ಸೀತಾರಾಮ ಭಟ್ಟ , ವೆಂಕಟರಾಮ ಭಟ್ಟ , ಚಂದ್ರಶೇಖರ ದಾಮ್ಲೆ , ರಾಧಾಕೃಷ್ಣ ಕಲ್ಚಾರ್ , ಪ್ರೊ ಎಂ ಎ ಹೆಗಡೆ , ಉಜಿರೆ ಅಶೋಕ ಭಟ್ , ಗ.ನಾ.ಭಟ್ಟ , ಡಾ. ವಿಜಯನಾಥ ಭಟ್ , ಡಾ. ಕೆ ಎಂ ರಾಘವ ನಂಬಿಯಾರ್ ಮುಂತಾದವರ ನುಡಿ ನಮನಗಳು ಸಂಗತವಾಗಿವೆ.

ನನಗೆ ಹೆಚ್ಚು ಪ್ರಿಯವಾದದ್ದು ಅವರ ಭಾಷಣ , ಮಾತುಗಾರಿಕೆ , ಲೇಖನಗಳು ಮತ್ತು ಸ್ನೇಹ ಶೀಲತೆ (ಡಾ l ಬನಾರಿ) ಜೋಶಿ ಒಂದು ಎನ್ಸೈಕ್ಲೋಪೀಡಿಯಾ (ಸೇರಾಜೆ). ಮಂಗಳೂರಿನಲ್ಲಿ ಏರ್ಯರು ಹಾಗೂ ಮುಳಿಯ ಮಹಾಬಲ ಭಟ್ಟರೊಂದಿಗೆ ಯಕ್ಷಗಾನ ಪರಿಷತ್ತನ್ನು ಸ್ಥಾಪಿಸಿದವರು ಜೋಶಿ (ಡಾ.ದಾಮ್ಲೆ) ಜೋಶಿ ಅವರದ್ದು ಅರ್ಥಧಾರಿಯಾಗಿ ಐದು ದಶಕಗಳ ಅನುಭವ. ಆದುದರಿಂದ ಅವರ ಅರ್ಥಗಾರಿಕೆಯ ವಿಶ್ಲೇಷಣೆ ಎಂದರೆ ಅದು ತಾಳ ಮದ್ದಳೆಯ ಇತಿಹಾಸದ ವಿಶ್ಲೇಷಣೆಯೂ ಹೌದು. ( ರಾಧಾಕೃಷ್ಣ ಕಲ್ಚಾರ್) ಜೋಶಿ ಅವರದು ವ್ಯಾಪಕ ಓದು. ಸಮಕಾಲೀನ ವಿಚಾರಧಾರೆಗಳ ಪರಿಚಯ , ವರ್ತಮಾನದ ವಿದ್ಯಮಾನಗಳ ವಿಶ್ಲೇಷಣೆಯಲ್ಲಿ_ ನುರಿತವರು (ಎಂ ಎ ಹೆಗಡೆ) ಜೋಶಿಯವರು ಅರ್ಥಗಾರಿಕೆಯಲ್ಲಿ ಮೂರು ತಲೆಮಾರುಗಳ ಕೊಂಡಿಯಾಗಿದ್ದಾರೆ. ಶೇಣಿಯವರ ಸಮಗ್ರತೆ , ಸಾಮಗರ ಶೈಲಿ , ತೆಕ್ಕಟ್ಟೆಯವರ ಜ್ಞಾನ , ಪದರೀತಿ , ದೇರಾಜೆಯವರ ಮೊನಚು , ಪೆರ್ಲ ಪಂಡಿತರ ಗಾಂಭೀರ್ಯ , ಮಾರೂರು ಭಂಡಾರಿ ಅವರ ನಿರ್ವಹಣಾ ಕ್ರಮ , ರಾಮದಾಸ ಸಾಮುಗರ ಭಾವುಕತೆಗಳು ಇವರಲ್ಲಿ ಮುಪ್ಪುರಿಗೊಂಡಿವೆ ( ಅಶೋಕ ಭಟ್ ಉಜಿರೆ) ಜೋಶಿ ಒಬ್ಬ ಅರ್ಥಧಾರಿಯಷ್ಟೇ ಅಲ್ಲ , ಅವರೊಬ್ಬ ಅಕಡೆಮಿಕ್ ಪರ್ಸನ್ ..ಪಾಂಡಿತ್ಯ , ಶೈಕ್ಷಣಿಕ ಶಿಸ್ತಿನ ಮನುಷ್ಯ ( ಗ.ನಾ. ಭಟ್ಟ) ಅವರೊಂದಿಗೆ ಒಡನಾಡಿದ ಈ ಎಲ್ಲ ಸಂದರ್ಭಗಳು ( ಡಾ. ವಿಜಯನಾಥ ಭಟ್) ಹೀಗೆ ತಮ್ಮ ಲೇಖನಗಳಲ್ಲಿ ಈ ಎಲ್ಲರೂ ಜೋಶಿಯವರನ್ನು ಕಂಡರಿಸಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಕೆ ಎಂ ರಾಘವ ನಂಬಿಯಾರ್ ಅವರು

” ಅವರ ಅಭಿಯಾನದ ಒಂದು ದೊಡ್ಡ ಪ್ರಾಪ್ತಿ ಎಂದರೆ ನಾವು ಆರಾಧಿಸಿದ ಅರ್ಥದಾರಿಗಳಾದ ಶೇಣಿ ಗೋಪಾಲಕೃಷ್ಣ ಭಟ್ಟರು, ಹರಿದಾಸರಾದ ಮಲ್ಪೆ ಶಂಕರನಾರಾಯಣ ಸಾಮಗರು , ಪಂಡಿತ ಪೆರ್ಲ ಕೃಷ್ಣ ಭಟ್ಟರು , ಹರಿದಾಸ ರಾಮದಾಸ ಸಾಮಗರು ಇಂಥವರು ಬಯಸಿದ ಇದಿರು ಅರ್ಥಧಾರಿಯಾಗಿ ಹೋರಾಟಕ್ಕೆ ನಿಂತುದು. ಕಾಳಗ ಪ್ರಸಂಗಗಳ ಅರ್ಥಗಾರಿಕೆ ಅಂದರೆ ವಿದ್ವತ್ತೆಯ ಒಂದು ಹೋರಾಟವೇ ತಾನೆ. ಇದರಲ್ಲಿ ಅವರಿಗೆ ಧನ್ಯತೆ ಇದೆ.ಅವರ ಕೊಡುಗೆ ಏನು ಎಂದು ಕೇಳಿದರೆ ಈ ರಂಗಕ್ಕೆ ಅರ್ಥಶಾಸ್ತ್ರ ತತ್ವಶಾಸ್ತ್ರ ಸಹಿತ ಜ್ಞಾನದ ಹಲವು ಶಾಖೆಗಳ ಪರಿಜ್ಞಾನವನ್ನು ಆವರಣ ಭಂಗವಿಲ್ಲದೆ ನೀಡಿದ ಸಾಧನೆ ಎನ್ನಬಹುದು ” ಎಂದು ಮುಂತಾಗಿ ಹೇಳುತ್ತಾರೆ.

ಈ ಅಭಿನಂದನಾ ಗುಚ್ಛದ ಕೊನೆಯ ಭಾಗದಲ್ಲಿ ಡಾ. ಪ್ರಭಾಕರ ಜೋಷಿ ಅವರ ವಿನಯ ಭರಿತ ಮಾತುಗಳೂ ಇವೆ. ” ನಾನು ಮೂಕನಾಗಿದ್ದೇನೆ” ಅಂದಿದ್ದಾರವರು.

ಲೇಖನ – ಪ್ರೊ. ಪಿ. ಏನ್ ಮೂಡಿತ್ತಾಯ

error: Content is protected !!
Share This