ವಿಶ್ವ ಚೈತನ್ಯವನ್ನು ನಮ್ಮಷ್ಟು ವೈವಿಧ್ಯಮಯವಾಗಿ, ವೈಶಿಷ್ಟ್ಯ ಪೂರ್ಣವಾಗಿ  ಬೇರೆ ಯಾವುದೇ ಸಂಸ್ಕೃತಿಯ ಮಂದಿ ಕಲ್ಪಿಸಿರಲಾರರು. ಸೃಷ್ಟಿಗೊಬ್ಬ, ಸ್ಥಿತಿಗೊಬ್ಬ, ಲಯಕ್ಕೆ ಇನ್ನೊಬ್ಬ, ಸಂಪತ್ತಿಗೆ – ವಿದ್ಯೆಗೆ, ಆರೋಗ್ಯಕ್ಕೆ, ಮಳೆಗೆ – ಬೆಳೆಗೆ ಹೀಗೆ ಕೋಟಿ ಸಂಖ್ಯೆಯಲ್ಲಿ ದೇವ – ದೇವತೆಗಳನ್ನು ಆರಾಧಿಸುವ ನಾವು ವಿಘ್ನಗಳ ನಿವಾರಣೆಗಾಗಿ ಒಬ್ಬ ದೇವರನ್ನು  ಪೂಜಿಸುತ್ತೇವೆ ಆ ದೇವರೆ ಆದಿಪೂಜಿತ ಗಣಪತಿ.

ಮಾನವ ಬದುಕುಕಟ್ಟಿಕೊಂಡು ನೆಮ್ಮದಿಯ ಜೀವನ ಆರಂಭಿಸಿದ ದಿನಗಳಿಂದ  ವಿಘ್ನನಿವಾರಕನ ಉಪಾಸನೆ ಆರಂಭವಾಗಿದೆ. ಬದುಕು ನಿರ್ವಿಘ್ನವಾಗಿ, ನಿರಾತಂಕವಾಗಿ, ನಿರಾಳವಾಗಿ ತಲ್ಲಣಗಳಿಲ್ಲದೆ ಮುನ್ನಡೆಯ ಬೇಕೆಂಬುದು ಅಪೇಕ್ಷಣೀಯವಾಯಿತು. ಆಗ  ವಿಘ್ನಗಳನ್ನು ದೂರೀಕರಿಸುವ, ನಿವಾರಿಸುವ ದೇವರು  ಅನಿವಾರ್ಯವಾಯಿತು.  ಅದೇ ವಿಘ್ನೇಶನ ನಂಬಿಕೆಯ ಮೂಲ. ಇದು ಮನುಕುಲ ಭರವಸೆ ಮತ್ತು ವಿಶ್ವಾಸಗಳಿಂದ ಸ್ವೀಕರಿಸಿದ ಶ್ರದ್ಧೆ. ಆದುದರಿಂದ ಗಣಪತಿ ಆದಿಪೂಜಿತ .

ವೇದ ಪೂರ್ವಕಾಲದಿಂದ, ವೇದಕಾಲಕ್ಕೆ ಮುಂದೆ ವೇದೋತ್ತರಕಾಲಕ್ಕೆ ಬಳಿಕ ಇತಿಹಾಸ ಕಾಲಕ್ಕೆ ಅಂದರೆ ಈ ಎಲ್ಲಾ ಹಂತಗಳಲ್ಲಿ, ಭಿನ್ನ ಚಿಂತನೆಗಳೊಂದಿಗೆ, ಕಾಲ – ಸಂದರ್ಭ – ಮನೋಧರ್ಮಗಳನ್ನು  ಆಧರಿಸಿ ಮೂಲ ಆರಾಧನಾ ಚಿಂತನೆ ಬದಲಾಗುತ್ತಾ ಪರಿಪಕ್ವಗೊಳ್ಳತ್ತಾ ನಾವು ಇಂದು ಕಾಣುವ ಅಥವಾ ಕೈಗೊಳ್ಳುವ ಆರಾಧನಾ  ವಿಧಾನದವರೆಗೆ ಗಣಪನ ಪೂಜೆ – ಗಣಪನ ಕಲ್ಪನೆಯು ಮನುಕುಲದ ವಿಕಾಸದೊಂದಿಗೆ ಸಾಗಿ ಬಂದಿದೆ .ಮೂಲ ತಿಳಿಯದಷ್ಟು, ಒಪ್ಪದಷ್ಟು ಆರಾಧನೆ ಬದಲಾಗಿದೆ. ಇದಕ್ಕೆ ಗಣಪತಿ ವಿಘ್ನ ನಿವಾರಕನಿರುವುದೇ ಕಾರಣ. ಯಾರೂ ವಿಘ್ನಗಳನ್ನು ಬಯಸುವುದಿಲ್ಲ, ಆ ಮೂಲಕದ  ಆತಂಕ ಯಾರಿಗೂ ಬೇಡ. ಆದುದರಿಂದ  ಗಣಪತಿ ಜನಪ್ರಿಯ, ತ್ರಿಜಗವಂದಿತ, ಸರ್ವ ಕಾರ್ಯಾರಂಭಗಳಲ್ಲಿ ಪ್ರಾರ್ಥಿಸಲ್ಪಡುವವ.

ಬೇಟೆ ಸಂಸ್ಕೃತಿಯ ನೆನಪಾಗಿ ಉಳಿದಿರುವುದು ಬೆಣಚುಕಲ್ಲಿನ ಗಣಪತಿಯ ಕಲ್ಪನೆ. ಕೃಷಿ ಜೀವನ ಶೈಲಿಯ ಗುರುತಾಗಿ ಸೆಗಣಿಯಲ್ಲಿ ಗರಿಕೆಯನ್ನು ನೆಟ್ಟು” ಸೆಗಣಿಯ ಗಣಪಂಗೆ ಸಂಪಗೆಯರಳಲ್ಲಿ‌ ಪೂಜಿಸಿದರೆ …” ಎಂಬ ನೆನಪು,  ಕಬ್ಬು ಪ್ರಧಾನವಾಗಿ ಆನೆ ಮುಖಹೊಂದಿರುವ ಸ್ವರೂಪದ ಆರಾಧನೆ. ಇಂತಹ ಜಾನಪದ ಹಿನ್ನೆಲೆಗೆ ಗಣೇಶನ ಆಕಾರವನ್ನೆ ಆಧಾರವಾಗಿ ನೀಡುವ ವಿದ್ವಾಂಸರಾದ ಪ್ರೊ.ಎಸ್.ಕೆ. ರಾಮಚಂದ್ರ ರಾವ್ ಅವರು ಒಂದು ಕಾಲಕ್ಕೆ ಗಣೇಶನ ಪ್ರಭಾವದ ಹರವು ಗ್ರಾಮಕ್ಕೊ, ಜನಪದಕ್ಕೊ ಸೀಮಿತವಾಗಿದ್ದು ಅದು ಸುಮಾರು ಎರಡು ಸಾವಿರ ವರ್ಷಗಳಷ್ಟು ಕಾಲ ವ್ಯಾಪಕವಾಗಿ ಹರಡಿದ್ದಿರಬಹುದು ಎನ್ನುತ್ತಾರೆ.

ಗುಪ್ತವಂಶದ ದೊರೆಗಳ ಕಾಲದಿಂದ ಗಣೇಶನ ಮೂರ್ತಿಶಿಲ್ಪ ಹೆಚ್ಚುಕಡಿಮೆ ಒಂದೇ ತೆರನಾಗಿರುವುದನ್ನು ಗಮನಿಸ ಬಹುದು. ಆನೆಯ ತಲೆ, ಬೊಜ್ಜು ಮೈ, ಬಿಡುವಾಗಿ ಕುಳಿತ ಭಂಗಿ, ಕೈಗಳಲ್ಲಿ ತಿನಿಸು ಹಾಗೂ ಪುರುಷ ಎಂದೇ ಮೂರ್ತಿಕಲ್ಪನೆ. ಗಣೇಶಾನಿ ಅಥವಾ ವೈನಾಯಕಿ‌ ಎಂದು ಹೆಣ್ಣು ರೂಪದಲ್ಲಿಯೂ ಗಣಪತಿ ಕಾಣಿಸಿ ಕೊಂಡಿರುವುದಿದೆ. ಪುರಾತನ ಶಿಲ್ಪಗಳು ಆನೆಯ ತಲೆಯನ್ನಷ್ಟೆ ಸ್ಪಷ್ಟವಾಗಿ ಕೆತ್ತಿ ಉಳಿದಂತೆ ಮೈಯನ್ನು ಹಾಗೆಯೇ ಬಿಟ್ಟಂತೆಯೂ ಇರು ಶಿಲ್ಪಗಳು ಕಾಣಸಿಗುತ್ತವೆ  ಎನ್ನುತ್ತಾರೆ ರಾವ್ ಅವರು.

ಗಣಪತಿಯ ಮೂಲವನ್ನು ಋಗ್ವೇದದಷ್ಟು ಪ್ರಾಚೀನತೆಗೆ ಒಯ್ಯಬಹುದು. “ಗಣಾನಾಮ್ ಗಣಪತಿಮ್ ಹವಾಮಹೇ ….” ಎಂಬ ಮಂತ್ರ ಇದಕ್ಕೆ ಪುಷ್ಟಿಕೊಡುತ್ತದೆ. ಈ ಗಣಪತಿ ಬ್ರಹ್ಮಣಸ್ಪತಿಯು. ಗಜವದನ-ಗಣೇಶ-ವಿಘ್ನೇಶ್ವರ.  ಋಗ್ವೇದದ ಗಣಪತಿ ಬ್ರಹ್ಮಣಸ್ಪತಿಯು ವಾಚಸ್ಪತಿ – ಬ್ರಹಸ್ಪತಿಯಾಗಿ ಜ್ಞಾನದ ಸಂಕೇತವಾಗಿ ಅನಾವರಣಗೊಳ್ಳುತ್ತಾನೆ. ಬಂಗಾರಕೆಂಪು ಬಣ್ಣ ಹಾಗೂ ಆಯುಧಗಳನ್ನು ಪಡೆದು ಯಾವುದೇ ಕಾರ್ಯಾರಂಭದಲ್ಲಿ‌ ಸ್ಮರಣೆ ಮಾಡುವ ಕ್ರಮ  ರೂಢಿಗೆ ಬಂತು.

ನಮ್ಮ ದೇವರು ಮತ್ತು ದೇವತೆಗಳ ಸಂಖ್ಯೆ ಕೇಳಿದರೆ ಅಚ್ಚರಿಗೊಳ್ಳುವ ವಿದೇಶಿಯರು ನಮಗೆ ಗೊಂದಲಗಳಿಲ್ಲವೆ ಎಂದು ಪ್ರಶ್ನಿಸುತ್ತಾರೆ. ಆದರೆ ಯಾವ ಹಿಂದುಗಳಿಗೆ – ಭಾರತೀಯರಿಗೆ ದೇವರುಗಳ ಕುರಿತಾಗಿ ಗೊಂದಲ ಇದೆ ಹೇಳಿ. ಆಯಾ ಸಂದರ್ಭಗಳಲ್ಲಿ ಆಯಾ ದೇವರ ಆರಾಧನೆ .ಆದರೆ ಗಣಪನ ಆರಾಧನೆ ನಿತ್ಯ ನಿರಂತರ. ಏಕೆಂದರೆ  ವಿಘ್ನಗಳು ಸಾರ್ವಕಾಲಿಕವಾದುವುಗಳು.

|ಐತಿಹಾಸಿಕ ಗಣಪತಿ|

ಇತಿಹಾಸಕಾರರು ಗಜಾನನ  ಪರಿಕಲ್ಪನೆಯನ್ನು ಆರುವಿಭಾಗದಲ್ಲಿ ಗುರುತಿಸುತ್ತಾರೆ. ಮಹಾಗಣಪತಿ, ಹರಿದ್ರಾ ಗಣಪತಿ, ಉಚ್ಛಿಷ್ಟ ಗಣಪತಿ, ನವನೀತ ಗಣಪತಿ, ಸ್ವರ್ಣಗಣಪತಿ, ಸಂತಾನ ಗಣಪತಿ ಎಂಬುದು ಈ ಪ್ರಭೇದಗಳು .

ನಮ್ಮಲ್ಲಿರುವ ಬಹುತೇಕ ಎಲ್ಲಾ ದೇವಾಲಯಗಳಲ್ಲಿ‌ ಗಣಪತಿ ಉಪಸ್ಥಾನ ಸಾನ್ನಿಧ್ಯವಾಗಿರುತ್ತವೆ. ಗಣಪತಿಯೇ ಪ್ರಧಾನವಾಗಿರುವ ದೇವಾಲಯಗಳೂ ಇವೆ. ಡಾ. ಗುರುರಾಜ ಭಟ್ಟರು ಹೇಳುವಂತೆ ಕ್ರಿ.ಶ. ಐದನೇ ಶತಮಾನದಿಂದೀಚೆಗೆ ಗಣಪತಿಯ ಮೂರ್ತಿಗಳು ನಮ್ಮ ಜಿಲ್ಲೆಗಳಲ್ಲಿ ಲಭಿಸುತ್ತವೆ. ಹೊಯ್ಸಳ ಪೂರ್ವದಲ್ಲಿ ಗಣಪತಿಯೊಂದಿಗೆ ಇಲಿ ಇರುವುದು ಕಂಡುಬರುವುದಿಲ್ಲ. ಮುಂದೆ ಇಲಿಯ ಸಾಂಗತ್ಯ ಗಣಪತಿಗೆ ಒದಗಿಬರುತ್ತದೆ.

ಸೊಂಡಿಲಿನ ತಿರುವನ್ನು ಆಧರಿಸಿ ಬಲಮುರಿ ,ಎಡಮುರಿ ಎಂಬ ಎರಡು ಪ್ರತಿಮಾಲಕ್ಷಣಗಳನ್ನು ಗಮನಿಸ ಬಹುದು. ಇದರಲ್ಲಿ ಬಲಮುರಿ ಗಣಪತಿ ಹೆಚ್ಚು ಅನುಗ್ರಹಕಾರಕನು ಎಂಬುದು ನಂಬಿಕೆ. ಈ ಎಲ್ಲಾ ಚಿಂತನೆಗಳಿಗೆ ಗಣಪತಿ ಸಂಬಂಧದ ಪುರಾಣಗಳು ಪುಷ್ಟಿನೀಡುತ್ತವೆ. ಅಂದರೆ ಅಷ್ಟು ಸಂಖ್ಯೆಯಲ್ಲಿ ಗಣಪತಿಯ ಪುರಾಣಗಳಿವೆ, ಋಷಿ ಮುನಿಗಳು ಆಸಕ್ತಿಯಿಂದ ಈ ವಿಕಟನ ಕುರಿತು ಚಿಂತನೆ ನಡೆಸಿ ಪುರಾಣಗಳನ್ನೆ ಬರೆದಿದ್ದಾರೆ.

| ಗಣಪನ ಭಂಗಿಗಳು |

ಕುಳಿತ ಭಂಗಿ , ನಿಂತದ್ದು, ಎರಡು ಕೈ, ನಾಲ್ಕು ಕೈ ಮುಂತಾದುಗಳನ್ನು ಗಮನಿಸಿ ತಲೆ ಆಭರಣ ಇಲ್ಲದ ಎರಡು ಕೈಗಳಿರುವ ಅಥವಾ ನಾಲ್ಕು ಕೈಗಳಿರುವ ನಿಂತ ಹಾಗೂ ಕುಳಿತ ಭಂಗಿಯಲ್ಲಿ ಇರುವಂತಹದ್ದು. ತಲೆ ಆಭರಣ ಹೊಂದಿ ಎರಡು ಕೈ, ನಾಲ್ಕು ಕೈ, ಅಲಂಕಾರ ರಹಿತ, ಪ್ರಭಾವಳಿ ಇಲ್ಲದಿರುವ, ನಾಲ್ಕು ಕೈಯೊಂದಿಗೆ ತಲೆಯ ಆಭರಣ ಕರಂಡ ಮುಕುಟ ಧರಿಸಿರುವ, ನಾಗಬಂಧ, ವಾಹನ, ಕರಂಡ ಮುಕುಟದ ಸ್ಪಷ್ಟ ಕೆತ್ತನೆ ಇರುವ, ಹೀಗೆ ಸಮಭಂಗ, ತ್ರಿಭಂಗ, ನೃತ್ಯಭಂಗ, ನಮೂನೆಗಳನ್ನು ಗುರುರಾಜ ಭಟ್ಟರು ಗುರುತಿಸಿ ದಾಖಲಿಸಿರುವರು‌.

| ಗಜಾನನ ದರ್ಶನ |

ರೂಪ, ಆಯುಧ, ವಾಹನ, ಜನ್ಮವೃತ್ತಾಂತ, ಪ್ರಿಯವಾದ ಭಕ್ಷ್ಯ, ನೆಲೆನಿಂತ ಕ್ಷೇತ್ರಗಳು ಅಥವಾ ಆರಾಧನಾ ಸ್ಥಾನಗಳು, ವಿದ್ಯೆಯ ವಿಶೇಷ ಅನುಗ್ರಹ, ಕಲೆಗಳಾದ ನೃತ್ಯ, ಯಕ್ಷಗಾನ ಮುಂತಾದುವುಗಳಿಗೆ ಆರಾಧ್ಯ ದೇವರು, ಆಸುರೀ ಶಕ್ತಿಗಳ ಮರ್ದನ ಮುಂತಾದುವುಗಳಲ್ಲಿ ಪ್ರಸಿದ್ಧಿ.

ಮಣ್ಣಿನಿಂದ ರೂಪವನ್ನು ಪಡೆದ ಗಣಪ ಕೃಷಿ ಸಂಬಂಧಿ ವೃತ್ತಿಗಳಿಗೆ ಅಧಿದೇವರು. ಮೊದಲ ಪೂಜೆ ಹೀಗೆ ಬಹು ಆಯಾಮಗಳಲ್ಲಿ ತತ್ತ್ವಜ್ಞಾನವನ್ನು, ಅಷ್ಟೆ ಸುಲಭ ದೈವೀಕಲ್ಪನೆಗಳನ್ನು ಕಂಡುಕೊಳ್ಳಬಹುದಾದ ಗಜಾನನ ವಿಶ್ವರೂಪ ವಿಶ್ವದಾದ್ಯಂತ ಹರಡಿರುವುದು ಸತ್ಯ ತಾನೆ. ಆಸ್ತಿಕರಿಗೆ, ನಾಸ್ತಿಕರಿಗೆ ಚಿಂತಕರಿಗೆ, ಕವಿಗಳಿಗೆ ಬಹುಪ್ರಿಯನಾದ ಗಣಪತಿಗೆ ಇಪ್ಪತ್ತೊಂದು ನಮಸ್ಕಾರ.

| ಆರಾಧನೆಗೆ ಪರ್ವದಿನ |

ಭಾದ್ರಪದ ಶುದ್ಧ ಚೌತಿ ಗಣೇಶ ಚತುರ್ಥಿಯೆಂದೇ ಪ್ರಸಿದ್ದಿ. ಮನೆಮನೆಗಳಲ್ಲಿ ಯಥಾಶಕ್ತಿ ಆರಾಧನೆ. ಜನಪದರು ಕಬ್ಬಿನಲ್ಲಿ ಅಂದರೆ ಕಬ್ಬಿನ ಜಲ್ಲೆಯನ್ನು ತುಂಡುಮಾಡಿ‌ ಹಂತ ಹಂತವಾಗಿ ಜೋಡಿಸಿಟ್ಟು ಗಣಪತಿಯನ್ನು ಕಲ್ಪಿಸಿ  ಭಕ್ಷ್ಯಗಳನ್ನು ಸಮರ್ಪಿಸಿ ಪೂಜಿಸುತ್ತಾರೆ.

ವೈದಿಕರು ಆಹ್ವಾನಿಸಿ,

ಷೊಡಶೋಪಚಾರಗಳಿಂದ ಪೂಜಿಸುತ್ತಾರೆ, ಗಣಪತಿಯ ಮೂರ್ತಿಯನ್ನಿಟ್ಟು‌ ಆರಾಧಿಸುವವರೂ ಇದ್ದಾರೆ. ಪ್ರತಿ ಮನೆಗಳಲ್ಲಿ ಪೂಜೆಗೊಳ್ಳುವ ದೇವರು ಗಣಪತಿ. ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವಗಳು ಜನಪ್ರಿಯವಾಗಿವೆ. ಮನೆಗಳಲ್ಲಿ ಸಣ್ಣ ಸಂಖ್ಯೆಯಲ್ಲಿ ಗಣಹೋಮಗಳು ನಡೆದರೆ, ದೇವಾಲಯಗಳಲ್ಲಿ ಮತ್ತು ಸಾರ್ವಜನಿಕ ಗಣಪತಿ ಇಡುವಲ್ಲಿ ನೂರು, ಸಹಸ್ರ ಸಂಖ್ಯೆಯಲ್ಲಿ (ಅಷ್ಟದ್ರವ್ಯ) ಗಣಯಾಗ ನೆರವೇರುತ್ತವೆ.

– ಕೆ.ಎಲ್ .ಕುಂಡಂತಾಯ

error: Content is protected !!
Share This