• ಡಾ.ಎಂ.ಪ್ರಭಾಕರ ಜೋಶಿ

ದೇರಾಜೆ ಸೀತಾರಾಮಯ್ಯ – ಅವರನ್ನು ಬಲ್ಲ ಎಲ್ಲರಲ್ಲಿ ಅಸಾಮಾನ್ಯ ಗೌರವವನ್ನು, ಆತ್ಮೀಯ ಪ್ರಶಂಸೆಯನ್ನು, ಕಲೆಯ ಕುರಿತ ತಮ್ಮ ಆದರ್ಶ ಕಲ್ಪನೆಯ ಸಾಕಾರ ಸ್ವರೂಪವೆಂಬ ಮೆಚ್ಚುಗೆಯನ್ನು, ವ್ಯಕ್ತಿಶಃ ಉತ್ತಮಿಕೆಯ ಎತ್ತರವನ್ನು ಸ್ಪಂದಿಸಿದ, ಬಿಂಬಿಸಿದ ಹೆಸರು. ಯಾವುದೇ ಕ್ಷೇತ್ರದಲ್ಲಿ ಇವರ ಹಾಗೆ – ಸಾರ್ವತ್ರಿಕವಾದ ಅಂಗೀಕಾರವನ್ನು, ಅವಿರೋಧ ಆಯ್ಕೆ’ಯನ್ನು ಗಳಿಸಿದವರು ವಿರಳ. “ವಿವಾದಾಸ್ಪದ’’ ಎನಿಸುವುದು, ಸಾಧಾರಣತಃ ಯಾವುದೇ ಕ್ಷೇತ್ರದ ಪ್ರಮುಖನಿಗೆ ಸಹಜ. ಆದರೆ ದೇರಾಜೆ ಇದಕ್ಕೊಂದು ಅಪವಾದವೆನ್ನಬಹುದು.

ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ದೇರಾಜೆಯ ಮಂಗಲ್ಪಾಡಿ ಕೃಷ್ಣಯ್ಯ ಸುಬ್ಬಮ್ಮನವರ ಪುತ್ರನಾಗಿ 1914ನೇ ಇಸವಿಯ ಲಕ್ಷದೀಪದ ಅಮಾವಾಸ್ಯೆಯಂದು ಜನಿಸಿದ ಸೀತಾರಾಮಯ್ಯನವರು ತಕ್ಕಷ್ಟು ಆರ್ಥಿಕ ಅನುಕೂಲತೆಯನ್ನೂ, ಮನೆತನದ ವರ್ಚಸ್ಸಿನ ಹಿನ್ನೆಲೆಯನ್ನೂ ಪಡೆದಿದ್ದವರು. ಆನುವಂಶಿಕ ಪಟೇಲಿಕೆಯಿಂದ ‘ಚೊಕ್ಕಾಡಿ ಪಟೇಲ’ರೆಂದೇ ಪರಿಚಿತರಾಗಿದ್ದವರು.

ದೇರಾಜೆಯವರು ಯಕ್ಷಗಾನದಲ್ಲಿ ಪ್ರವೃತ್ತರಾದದ್ದು ಏಕಕಾಲದಲ್ಲಿ ಎರಡು ನೆಲೆಗಳಲ್ಲಿ – ಅರ್ಥದಾರಿಯಾಗಿ ಮತ್ತು ಯಕ್ಷಗಾನ ನಾಟಕ ತಂಡವೊಂದರ ಸಂಘಟಕ-ಕಲಾವಿದನಾಗಿ. ಅವರ ಅರ್ಥಗಾರಿಕೆಯ ಧೋರಣೆಯು ಈ ಅಂಶವನ್ನು ಒಳಗೊಂಡೇ ಇದೆ. ತಾಳಮದ್ದಲೆಯ ನಾಟಕೀಯ ಗುಣ, ರಸಪರಿಪೋಷಗಳಿಗೆ ನಿಷ್ಠನಾಗಿದ್ದೂ, ಮಾತುಗಾರಿಕೆಯ ಎತ್ತರವನ್ನು ಸಾಧಿಸುವ ದೃಷ್ಟಿ ಅದು.

1931ರಲ್ಲಿ ಇವರು ಚೊಕ್ಕಾಡಿಯಲ್ಲಿ ‘ಶಾರದಾ ಪ್ರಸಾದಿತ ಯಕ್ಷಗಾನ ನಾಟಕ ಮಂಡಳಿ’ಯನ್ನು ಸಂಘಟಿಸಿದರು. ಈ ನಾಟಕ ಸಭೆಯ ಪ್ರದರ್ಶನಗಳು, ಯಕ್ಷಗಾನದ ಪ್ರಾಯೋಗಿಕ ರಂಗಭೂಮಿಯ (ಎಕ್ಸ್ ಪೆರಿಮೆಂಟಲ್ ಥೇಟರ್) ಮೊದಲ ಪ್ರಯತ್ನವೆಂಬ ಹೆಗ್ಗಳಿಕೆಗೆ ಅರ್ಹವಾಗಿದ್ದುವು. ಆಟಗಳಲ್ಲಿ ಆ ವರೆಗೆ ಕಾಣದಿದ್ದ ಹಲವು ಹೊಸ ವಿಷಯಗಳನ್ನು ಇವರು ಬಳಕೆಗೆ ತಂದರು. ಸ್ಥೂಲವಾದ ಸೂಚನೆಗಳ ಮೂಲಕ ಸೀತಾರಾಮಯ್ಯ ಪ್ರದರ್ಶನಗಳಿಗೆ ನಿರ್ದೇಶನ ನೀಡುತ್ತಿದ್ದರು. ಇಡಿಯ ರಂಗಕೃತಿಗೆ ಒಂದು ವಿಶಿಷ್ಟ ಆಶಯದ ಡಿಸೈನ್, ಪ್ರತಿಪಾದನೆಯ ಧೋರಣೆ ಇತ್ತು. ಪ್ರಸಂಗಕ್ಕೆ ಹೊಸ ಆಶಯವನ್ನು ನೀಡುವ ಪ್ರಯತ್ನವಿತ್ತು. ವೇಷಭೂಷಣಗಳು ಯಕ್ಷಗಾನದ ಮತ್ತು ಪೌರಾಣಿಕ ನಾಟಕದ ಸಮಕಾಲೀನ ಮಾದರಿಗಳ ಮಿಶ್ರಣವಾಗಿದ್ದುವು. ದೇರಾಜೆಯವರು ಇದರಲ್ಲಿ ಮುಖ್ಯವಾಗಿ ಹಾಸ್ಯಪಾತ್ರಗಳನ್ನೆ ನಿರ್ವಹಿಸುತ್ತಿದ್ದರು. ಆದರೆ, ಅದು ಬರಿಯ ಹಾಸ್ಯವಾಗದೆ, ಸಾಮಾಜಿಕ ವಿಶ್ಲೇಷಣೆಯ ಒಂದು ರೂಪಕವಾಗುವಂತೆ ಸಂಯೋಜಿಸುತ್ತಿದ್ದರು. ಪ್ರಹ್ಲಾದ ಚರಿತ್ರೆಯ ಪೆದ್ದ ವಿದ್ಯಾರ್ಥಿಯಾಗಿ ಅವರು, ಆ ಪೆದ್ದನು ಪ್ರಹ್ಲಾದನ ಸಂಸರ್ಗದಿಂದ ಜಾಣನಾಗುವ ಪ್ರಕ್ರಿಯೆಯನ್ನು ತೋರಿಸುತ್ತಿದ್ದರು. ವಿಠಲ ಶಾಸ್ತ್ರಿಗಳ ಕೃಷ್ಣ- ದೇರಾಜೆ ಅವರ ವಿಜಯ (ಮಕರಂದ) ಜೋಡಿ, ಯಕ್ಷಗಾನದಲ್ಲಿ ಕ್ರಾಂತಿ ಮಾಡಿದ ಒಂದು ಸಂಗತಿ. ಮಾಮೂಲಿ ಹಾಸ್ಯ ಸಂಬಾs ಷಣೆಗಳನ್ನು ತೆಗೆದುಹಾಕಿ, ಕೃಷ್ಣ-ವಿಜಯರ ಸಂವಾದದಲ್ಲಿ ಅನಾಗರಿಕರ ಸುಧಾರಣೆ, ಕೃಷ್ಣನ ಜೀವನದ ವ್ಯಾಖ್ಯಾನ- ಇಂತಹ ಆಶಯಗಳನ್ನವರು ಬಿಂಬಿಸಿದರು. ಇಂದು ತೆಂಕುತಿಟ್ಟಿನಲ್ಲಿ ಕಾಣುವ ಕೃಷ್ಣ-ಮಕರಂದರ ಸಂಭಾಷಣೆ ದೇರಾಜೆಯವರ ಕೊಡುಗೆ.

ಸತ್ಯಭಾಮೆ-ರುಕ್ಮಿಣಿಯರ ವಿವಾದ, ಸುಭದ್ರೆ-ರುಕ್ಮಿಣಿಯರ ಜಗಳದ ಸಂದರ್ಭಗಳಲ್ಲಿ ದೇರಾಜೆಯವರು ವಿಜಯನಾಗಿ, ಮಂಚದ ಅಡಿಯಲ್ಲಿ ಕುಳಿತು ಚಕ್ರತಾಳವನ್ನು ಬಡಿಯುತ್ತಿದ್ದರಂತೆ. “ಏಕೆ ಹಾಗೆ ಮಾಡಿದೆ?’’ ಎಂದು ಕೃಷ್ಣನು ಕೇಳಿದಾಗ- “ಕೃಷ್ಣನ ಮನೆಯಲ್ಲಿಯ ಈ ಜಗಳ, ಊರವರಿಗೆ ಕೇಳಿಸಬಾರದು” ಎಂದು ಅವರ ಉತ್ತರ. ಎಂತಹ ಅಸಾಧಾರಣ ಪಾತ್ರಕಲ್ಪನೆ!

ದೇರಾಜೆ-ಎಸ್. ಆರ್. ಚಂದ್ರ ಇವರ ಹಾಸ್ಯದಂಪತಿಗಳ ಪಾತ್ರಗಳು ವಿಡಂಬನೆಯ ಅಪೂರ್ವ ಮಾದರಿಯಾಗಿತ್ತು. ಸೀತೆ-ರಾವಣ ಸಂವಾದಕ್ಕೆ ಪ್ರತಿಯಾಗಿ, ರಾಕ್ಷಸ ದಂಪತಿಗಳ ಸಂಭಾಷಣೆ! ಇಂತಹ ಹಲವು ಸನ್ನಿವೇಶಗಳನ್ನವರು ಸೃಷ್ಟಿಸಿದ್ದರು.

ಸೀತಾರಾಮಯ್ಯನವರ ಅರ್ಥಗಾರಿಕೆಯು, ತಾಳಮದ್ದಲೆಯ ಅರ್ಥಗಾರಿಕೆಯ ಆದರ್ಶ ಮಾದರಿಯೆಂದು ಪರಿಗಣಿತವಾಗಿದೆ. ಭಾಷೆ, ಭಾವ, ಕಲ್ಪನಾಶಕ್ತಿ, ಸ್ವರದ ಬಳಕೆ ಅಭಿವ್ಯಕ್ತಿಯ ತಂತ್ರ, ಪ್ರತಿಪಾದನೆಯ ನಾವೀನ್ಯ, ತರ್ಕ, ಕಾವ್ಯಾತ್ಮಕತೆ – ಇದೆಲ್ಲವೂ ಹದವಾಗಿ ಬೆರೆತಿದ್ದ ಇವರ ಮಾತು, ಅರ್ಥದ ಅಂಗೋಪಾಂಗಗಳ ಅಸಾಧಾರಣವಾದ, ಅನ್ಯತ್ರ ದುರ್ಲಭವೆಂಬಷ್ಟು ಸುಂದರವಾದ ಸಮನ್ವಯದ ವಿದಾsನವಾಗಿತ್ತು. ಅನಾವಶ್ಯಕವೆನ್ನಬಹುದಾದ, ಒಂದು ಶಬ್ದವೂ ಅದರಲ್ಲಿ ಇರಲಿಲ್ಲವೆನ್ನಬಹುದು. ಧ್ವನಿಯ ಏರಿಳಿತದ ಸಹಜ ವಿಲಾಸ ಅವರಲ್ಲಿ ಅದ್ಭುತವಾಗಿತ್ತು.

ಪ್ರೇಕ್ಷಕರ ಕುತೂಹಲವನ್ನು ಕಾಯ್ದುಕೊಳ್ಳುತ್ತ ಹೋಗುತ್ತಿದ್ದ ಅವರು, ಸಮಯ ನೋಡಿ, ವಿಷಯಗಳನ್ನು ಬೆಸೆಯುತ್ತ, ಒಂದೊಂದೇ ಹೊಸ ವಿಚಾರಗಳನ್ನು ಪೋಷಿಸುತ್ತ ಪಾತ್ರರಚನೆ ಮಾಡುವ ರೀತಿ, ಚಿತ್ರಕಲಾವಿದನ ಚಿತ್ರರಚನಾ ವಿಧಾನವನ್ನು ನೋಡುವ ಅನುಭವವನ್ನು ರಸಿಕರಿಗೆ ನೀಡುವಂತಹದು. ಅವರು ಯಾವ ಹೊತ್ತಿಗೆ ಏನು ಹೊಸತು ಹೇಳಿಯಾರು ಎಂಬುದನ್ನು ಕಾಯುತ್ತಿರುವುದೇ ಪ್ರೇಕ್ಷಕರಿಗೊಂದು ವಿಶಿಷ್ಟ ಅನುಭವ. ಚುರುಕು ಉತ್ತರ, ಹಾಸ್ಯದ ಚಟಾಕಿ, ವಿಶಿಷ್ಟವಾದ ಕಲ್ಪನೆಗಳ ಬಾಂಬ್ ಸ್ಫೋಟ ಸದಾ ಅವರಲ್ಲಿ ಸಿದ್ಧ. ಆದರೂ ಅದು ಅತಿಯಾಗದಂತಹ ಸಂಯಮ. ಇದಿರಾಳಿಯ ಸಾಮರ್ಥ್ಯವನ್ನರಿತು ಹೊಂದಾಣಿಕೆ ಮಾಡುವ ಕೂಟ ಮನೋಧರ್ಮ, ದೀರ್ಘವೆನಿಸದ ಪೀಠಿಕೆ, ಸಂಭಾಷಣೆ, ಪ್ರಶ್ನೆ, ಒಂದು ಉತ್ತರ ಮತ್ತೆ ಮುಂದಕ್ಕೆ. ಹಿಂಜಿ ಚರ್ಚಿಸುವುದು ಬಹಳ ವಿರಳ. ಪ್ರೌಢತೆ, ಅಚ್ಚುಕಟ್ಟು, ನಾಜೂಕು ಮತ್ತು ತೀವ್ರ ಪರಿಣಾಮಗಳಲ್ಲಿ ದೇರಾಜೆ ಅರ್ಥಗಾರಿಕೆ ಸಾಟಿಯಿಲ್ಲದ ಸಿದ್ಧಿ.

ಚಿಕ್ಕ, ದೊಡ್ಡ, ಸ್ತ್ರೀ, ಪುರುಷ, ನಾಯಕ ಪ್ರತಿನಾಯಕ – ಎಲ್ಲ ಬಗೆಯ ಅರ್ಥಗಳನ್ನು ಅವರು ಹೇಳಿದವರಾದುದರಿಂದ, ಅವರಿಗೆ ಅರ್ಥಗಾರಿಕೆಯಲ್ಲಿ ವಿಶಿಷ್ಟ ಪ್ರಭುತ್ವ ಮತ್ತು ಸಮತೋಲಗಳೆರಡೂ ಸಿದ್ಧಿಸಿದ್ದುವು. ‘ದೊಡ್ಡ ಕೂಟ’ದ ಅರ್ಥದಾರಿ ಸೀತಾರಾಮಯ್ಯ ‘ಸಣ್ಣ ಕೂಟ’ದಲ್ಲಿ ಹೊರಗಿನವರಾಗಿ ಕಾಣುತ್ತಿರಲಿಲ್ಲ.

ಪಾತ್ರದ ತೂಕ ನೋಡಿ, ಅರೆದು ಕೊರೆದಿಟ್ಟಂತಹ ಮಾತುಗಾರಿಕೆಯಲ್ಲಿ ಕೇಳುಗನನ್ನು ಸೆಳೆದುಬಿಡುವ ಮೋಹಕಶಕ್ತಿ, ರಸದ ಪರಿಕಲ್ಪನೆಯ ಅತಿ ಸುಂದರ ದೃಷ್ಟಾಂತ, ಪಾತ್ರದ ಬಗ್ಗೆ ಖಚಿತ ಕಲ್ಪನೆ, ವಿನೂತನ ವ್ಯಾಖ್ಯಾನ ದೃಷ್ಟಿ. ಪ್ರಶ್ನೆ, ಪ್ರತಿಕ್ರಿಯೆ, ಉತ್ತರ – ಇವೆಲ್ಲ ತೀರ ಅನಿರೀಕ್ಷಿತ ರೂಪದವು; ಇದಿರಾಳಿಯ ಕಲ್ಪನೆಗೆ ಚಾಲನೆ ನೀಡುವಂತಹವು. ಪೌರಾಣಿಕವಾಗಿರುತ್ತಲೇ ಸಮಕಾಲೀನವಾಗಬಲ್ಲ ಮಹಾಕವಿಪ್ರತಿಭೆಯ ಸಿದ್ಧಿ, ದಾರ್ಶನಿಕ ವಿಚಾರಗಳನ್ನು ಆತ್ಮೀಯಗೊಳಿಸಬಲ್ಲ ವೈಖರಿ.

ಕುಬಣೂರು ಬಾಲಕೃಷ್ಣ ರಾಯರ ತಂಡದಲ್ಲಿ ದೇರಾಜೆ ಸೇರಿದ ಬಳಿಕ, ಅವರಿಗೆ ವ್ಯಾಪಕ ಕ್ಷೇತ್ರ ದೊರೆಯಿತೆನ್ನಬಹುದು. ಕುಬಣೂರು-ಶೇಣಿ-ದೇರಾಜೆ-ಪೆರ್ಲ ಇವರ ಸಮ್ಮಿಲನದಿಂದ ಉತ್ತಮ ಮೌಲ್ಯದ, ಶಿಸ್ತಿನ ತಾಳಮದ್ದಳೆಗಳನ್ನು ಊರ, ಪರವೂರ ರಸಿಕರು ಕೇಳುವಂತಾಗಿ, ತಾಳಮದ್ದಲೆಯ ಅಭಿರುಚಿಯ ಬೆಳವಣಿಗೆಯಲ್ಲಿ ಒಳ್ಳೆಯ ಕೆಲಸ ನಡೆಯಿತು.

ದೇರಾಜೆ-ಶೇಣಿ , ದೇರಾಜೆ-ಪೆರ್ಲ, ದೇರಾಜೆ-ಶಂಕರನಾರಾಯಣ ಸಾಮಗ- ಈ ಜೋಡಿಗಳು ಒಂದು ಬಗೆಯ ವಿಸಂಗತ ಸುಸಂಗತಿಗಳಾಗಿದ್ದುವು. ಏಕೆಂದರೆ, ಆ ಮೂವರೂ ಭಿನ್ನ ರೀತಿಯ ಕಲಾವಿದರು; ದೇರಾಜೆ ಮಾರ್ಗಕ್ಕಿಂತ ಭಿನ್ನ ಮಾತ್ರವಲ್ಲ, ಆ ಮೂವರೊಳಗೂ ಕಲಾಮಾರ್ಗದಲ್ಲಿ ತುಂಬ ಅಂತರವಿದೆ. ಆದರೂ ವಿಭಿನ್ನತೆಯಿಂದ ಬರುವ ಪೂರಕತೆ ಎಂಬಂತೆ ಅವರ ಜತೆಗಾರಿಕೆ ವಿಶೇಷವಾದ ರಸಾನುಭವವಾಗಿತ್ತು. ಶೇಣಿ-ದೇರಾಜೆ ಅವರ ಜತೆಯಂತೂ ಮಾತಿನ ಕಲ್ಪಕತೆ, ತರ್ಕದ ವರಸೆ, ಪಟ್ಟು, ಪೆಟ್ಟು, ತಂತ್ರ-ಪ್ರತಿತಂತ್ರಗಳಲ್ಲಿ ಏಕಕಾಲಕ್ಕೆ, ಎರಡು ಮಹಾನ್ ಪ್ರತಿಭೆಗಳ ತಾಕಲಾಟದಂತಿತ್ತು. ಭಿನ್ನ ಶೈಲಿಯ ಇಬ್ಬರು ಟೆನಿಸ್ ಆಟಗಾರರ ಪಂದ್ಯದ ಹಾಗೆ. ಶೇಣಿ, ದೇರಾಜೆ ಒಬ್ಬರ ಕಲ್ಪನೆಗೆ ಇನ್ನೊಬ್ಬರು ಮಿಂಚಿನ ವೇಗದಲ್ಲಿ ಸ್ಪಂದಿಸುತ್ತಿದ್ದರು. ಈ ಪ್ರಕ್ರಿಯೆ ಕೇಳುಗನನ್ನು ಅಕ್ಷರಶಃ ವಿಸ್ಮಯಗೊಳಿಸುತ್ತಿತ್ತು.

ದೇರಾಜೆ ಅವರ ದೊಡ್ಡ ವೈಶಿಷ್ಟ್ಯ – ಯಾವುದೇ ಪಾತ್ರಕ್ಕೆ ಅವರು ಎಜೆಸ್ಟ್ ಆಗುತ್ತಿದ್ದ ರೀತಿ; ಅವರ ಕರ್ಣ, ಭೀಷ್ಮ, ಹಂಸಧ್ವಜರು ಎಷ್ಟು ಯಶಸ್ವಿಯೋ ಸುಗ್ರೀವ, ಕೌರವ, ಶೂರ್ಪನಖೆಯರೂ ಅಷ್ಟೇ ಯಶಸ್ವಿ. ಅವರ ತಾಳಮದ್ದಲೆಯ ಕುಂಭಕರ್ಣ, ಮತ್ತದರ ಮರುದಿನವೇ ಭರತನ ಅರ್ಥ ಕೇಳಿದ ಪ್ರೇಕ್ಷಕ ನಿಜಕ್ಕೂ ಅವರ ಪ್ರತಿಭೆಯ ವ್ಯಾಪಕತೆಗೆ ದಂಗಾಗಿದ್ದ. ಸುದಾಮ, ಚಂದ್ರಾವಳಿಯ ಅತ್ತೆ, ವಿಜಯ, ವಿದುರ – ಇವು ಬಣ್ಣದ ರಂಗದಲ್ಲಿ ಅವರು ಮಿಂಚಿಸಿದ ಪಾತ್ರಗಳು.

ದೇರಾಜೆ ಅವರಿಗೆ ಹಾಸ್ಯರಸದಲ್ಲಿದ್ದ ವಿಶೇಷ ಸಿದ್ಧಿ, ತಾಳಮದ್ದಲೆ ರಂಗದಲ್ಲಿ ಬಳಕೆಯಾದ ಕ್ರಮದಿಂದ ಅವರ ನಿಜಪ್ರತಿಭೆಗೆ ಅನ್ಯಾಯವಾಯಿತೆನ್ನಬೇಕು. ಅವರ ಅರ್ಥಗಾರಿಕೆಯ ಪಕ್ವಸ್ಥಿತಿಯಲ್ಲಿ ಅಂದರೆ, 1955ರ ಬಳಿಕ, ಬಹುಪಾಲು ತಾಳಮದ್ದಲೆ ರಸಿಕರಿಗೆ ಅವರು ಸುಗ್ರೀವ, ಉತ್ತರಕುಮಾರ ಪಾತ್ರಗಳ ಕಲಾವಿದನಾಗಿ ಮಾತ್ರ ಪರಿಚಿತರಾದರು. ಅವರ ಅಭಿವ್ಯಕ್ತಿಯ ರಸೋತ್ಕರ್ಷ ಮಾದರಿಗಳಾದ ಭೀಷ್ಮ, ಕರ್ಣ, ಭರತ ಮೊದಲಾದುವು ಜನರಿಗೆ ಸಿಗಲಿಲ್ಲ. ಮತ್ತೆ ಅವರ ನಿವೃತ್ತಿಯ ಬಳಿಕ, ಸೀಮಿತ ಪ್ರೇಕ್ಷಕರಿಗಾಗಿ ಮಾತ್ರ ಆ ಅವಕಾಶ ದೊರೆತದ್ದು ಎಡನೀರು ಮಠದಲ್ಲಿ. ಅಲ್ಲಿ ಅವರ ವಿಭಿನ್ನ ಕಲಾಮುಖಗಳ ಅಭಿವ್ಯಕ್ತಿಯಾಯಿತೆನ್ನಬಹುದು.

ಸಾಮಾನ್ಯವಾಗಿ ವಾಕ್ಪರಂಪರೆಗೆ ಸೇರಿದವರು ಬರೆಯುವುದು ವಿರಳ ಎನ್ನುವರು. ಆದರೆ, ದೇರಾಜೆ ವಿಪುಲ ಲೇಖನಕಾರ್ಯ ಮಾಡಿದ್ದಾರೆ. ‘ಶ್ರೀರಾಮಚರಿತಾಮೃತಂ’, ‘ಶ್ರೀಮನ್ಮಹಾಭಾರತಕಥಾಮೃತಂ’ ಬೃಹತ್ ಗದ್ಯ ಕೃತಿಗಳು. ಜತೆಗೆ ಪ್ರಬಂಧ, ನಾಟಕ, ಕಾವ್ಯ ಇತ್ಯಾದಿ ಕೃತಿಗಳು..

ಬಹುಶಃ ಅರ್ಥದಾರಿ ಸೀತಾರಾಮಯ್ಯನೇ, ಲೇಖಕ ಸೀತಾರಾಮಯ್ಯನಿಗಿಂತ ಎಷ್ಟೋ ಸೃಜನಶೀಲ. ಅವರ ‘ರಾಮರಾಜ್ಯದ ರೂವಾರಿ’ಯಲ್ಲಿ, ರಾಮನಿಗೆ ಬಾಲ್ಯದಲ್ಲಿ ವಿಶ್ವಾಮಿತ್ರನ ಸಹವಾಸ ದೊರೆತುದೇ ಅವನ ಮುಂದಿನ ಬೆಳವಣಿಗೆಯ ಮೂಲ ಎಂಬ ಕಲ್ಪನೆ, ‘ರಾಮರಾಜ್ಯ ಪೂರ್ವರಂಗ’ದಲ್ಲಿ ರಾಮರಾಜ್ಯಕ್ಕೆ ಬುನಾದಿ ಹಾಕಿದಾತ ಭರತ ಎನ್ನುವ ಚಿಂತನೆ ತುಂಬಾ ಸುಂದರವಾದದ್ದು. ‘ಕುರುಕ್ಷೇತ್ರಕ್ಕೊಂದು ಆಯೋಗ’ ಮಹಾಭಾರತದ ಪಾತ್ರಗಳ ನಿಲುವುಗಳನ್ನು, ಆಯಾ ಪಾತ್ರದ ದೃಷ್ಟಿಯಿಂದ ಮಂಡಿಸುವ ಒಂದು ವಿನೂತನ ರೀತಿಯ ಬರಹ.

‘ಪ್ರಿಯದರ್ಶನಂ’ ಸೊಗಸಾದ ಪದ್ಯಗಂಧಿ ಗದ್ಯಕಾವ್ಯ. ದೇರಾಜೆ ವಿರಚಿತ ‘ಶ್ರೀರಾಮಚರಿತಾಮೃತಂ’, ರಾಮಾಯಣದ ಒಂದು ಬಗೆಯ ಪುನಃಕಥನ. ಅದಕ್ಕೆ ವಾಲ್ಮೀಕಿ ರಾಮಾಯಣವೇ ಮುಖ್ಯ ಆಧಾರ. ಆದರೆ ಅದು ವಾಲ್ಮೀಕಿ ರಾಮಾಯಣದ ಅನುವಾದವಲ್ಲ. ಕೆಲವು ವಿನೂತನ ಕಲ್ಪನೆಗಳೂ ಇವೆ. ಕಥನದಲ್ಲಿ ವ್ಯವಸ್ಥೆ ಇದೆ. ಅರ್ಥದಾರಿ ದೇರಾಜೆಯವರ ಪ್ರಭಾವ ಇಲ್ಲಿ, ಲೇಖಕ ದೇರಾಜೆ ಅವರಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಪಾತ್ರಗಳ ಅಂತರಂಗದ ವಿಶ್ಲೇಷಣೆ, ಚಿತ್ರಣದ ಪ್ರಯತ್ನಗಳು ಇಲ್ಲಿವೆ.

ದೇರಾಜೆ ಯಕ್ಷಗಾನದಿಂದ ನಿವೃತ್ತಿ ಘೋಷಿಸಿದ್ದು, ಒಂದು ವಿಶಿಷ್ಟ ಮಾದರಿ. ‘ಇನ್ನೂ ಬೇಕು’ ಎಂದು ತನಗೂ, ಜನರಿಗೂ ಅನಿಸುತ್ತಿರುವಾಗಲೇ ನಿವೃತ್ತನಾಗಬೇಕು ಕಿರಿಯರಿಗೆ ಅವಕಾಶವಾಗಬೇಕು ಎಂಬುದು ತನ್ನ ಧೋರಣೆಯೆಂದು ಅವರೇ ಹೇಳಿದ್ದಾರೆ.

ಅವರು ಊರ ಪಟೇಲಿಕೆಯನ್ನು ಬಿಟ್ಟದ್ದು ಒಂದು ಮಾದರಿ. ‘ಆನುವಂಶಿಕ ಪಟೇಲಿಕೆ ರದ್ದಾಗಬೇಕು’ ಎಂಬ ಮಾತು ಚರ್ಚಿತವಾಗುತ್ತಿರುವಾಗಲೇ, ಪಟೇಲಿಕೆ ತೊರೆದ ಪ್ರಥಮ ವ್ಯಕ್ತಿ ಅವರು.

ಬೆಳ್ಳಾರೆಯಲ್ಲಿದ್ದಾಗ ಗ್ರಾಮಪಂಚಾಯತಿನ ಅಧ್ಯಕ್ಷರು, ಸಹಕಾರಿ ಬ್ಯಾಂಕಿನ ಅಧ್ಯಕ್ಷರೂ, ಪುತ್ತೂರು ತಾಲೂಕು ಮಾರ್ಕೆಟಿಂಗ್ ಸೊಸಾಯಿಟಿಯ ಅಧ್ಯಕ್ಷರೂ ಆಗಿದ್ದರು. ಬೆಳ್ತಂಗಡಿಯಲ್ಲಿದ್ದಾಗ ಬೆಳ್ತಂಗಡಿ ತಾಲೂಕು ಮಾರ್ಕೆಟಿಂಗ್ ಸೊಸಾಯಿಟಿಯ ಅಧ್ಯಕ್ಷರೂ, ದ. ಕ. ಜಿಲ್ಲಾ ಕೃಷಿಕರ ಸಹಕಾರಿ ಮಾರಾಟ ಸಂಘದ ನಿರ್ದೇಶಕರೂ, ದ. ಕ. ಜಿಲ್ಲಾ ರೆಗ್ಯುಲೇಟೆಡ್ ಮಾರ್ಕೆಟಿಂಗ್ ಕಮಿಟಿಯ ಸದಸ್ಯರೂ ಆಗಿದ್ದರು. ಹೀಗೆ ಸಹಕಾರಿ ರಂಗದಲ್ಲೂ ಯಶಸ್ವಿಯಾಗಿ ಕೈ ಆಡಿಸಿದ ಅವರು, ರಾಜಕೀಯ ರಂಗದಿಂದ ಬಂದ ಕರೆಯನ್ನು ನಿರಾಕರಿಸಿದರು.

1946ನೇ ಇಸವಿಯಲ್ಲಿ ಚೊಕ್ಕಾಡಿಯಲ್ಲಿ ಶ್ರೀರಾಮ ದೇವಾಲಯವನ್ನು ಕಟ್ಟಿಸಿದರು. ಅದು ಒಂದು ಸಂಸ್ಕೃತಿಯಕೇಂದ್ರವಾಗಬೇಕೆAಬ ಯೋಚನೆ ಅವರದ್ದಾಗಿತ್ತು.

ಸೀತಾರಾಮಯ್ಯನವರ ವ್ಯಕ್ತಿತ್ವದ ಬಗೆಗೆ ಯಾವ ಪ್ರಶಂಸೆಯೂ ಅತಿಯಲ್ಲ. ಸಹಜ ಔದಾರ್ಯ, ಅಕೃತ್ರಿಮ ಸ್ನೇಹ, ನೇರ ಸರಳ ನಡೆನುಡಿ, ತೂಕಬದ್ಧ ವ್ಯವಹಾರ, ಚಿಂತನಶೀಲತೆಗಳ ದೇರಾಜೆ ಅವರ ಒಡನಾಟ- ಜೀವನ ಸಂಸ್ಕೃತಿಯ ಶ್ರೇಷ್ಠ ಮಾದರಿಯಂತೆ.

ಕಿರಿಯರೊಂದಿಗೆ ಬಿಗುಮಾನವಿಲ್ಲದೆ ಬೆರೆಯಬಲ್ಲ, ಗುಣವನ್ನು ಕೊಂಡಾಡಬಲ್ಲ ದೇರಾಜೆ ಅವರ ವಿನೋದಪ್ರಜ್ಞೆ ಬಹು ಪ್ರಸಿದ್ಧ. ನೈಚ್ಯವಿಲ್ಲದ, ಪರಿಷ್ಕೃತ ಹಾಸ್ಯ ಅವರದು. ರಂಗದಲ್ಲೂ, ರಂಗದ ಹೊರಗೂ ಯಾರನ್ನೂ ನೋಯಿಸದೆ, ರಂಜಿಸುವ ಮಾತ್ರವಲ್ಲ ಚಿಂತನಕ್ಕೆ ಹಚ್ಚುವ ವಿನೋದ – ಹಲವು ಪದರಿನ ಧ್ವನಿರಮ್ಯತೆಯ ಹಾಸ್ಯ ಕಾವ್ಯ ಅದು. ತನ್ನನ್ನೂ ಲೇವಡಿ ಮಾಡಿಕೊಳ್ಳುವ ತಮಾಷೆಗಳು, ಸಣ್ಣತನವಿಲ್ಲದ ವ್ಯಕ್ತಿಗೆ ಮಾತ್ರ ಸಿದ್ಧಿಸುವ ಅನೇಕ ವೈಯಕ್ತಿಕ ಗುಣಗೌರವಗಳು ಅವರಿಗೆ ಸಿದ್ಧಿಸಿದ್ದವು.

1984ನೇ ಇಸವಿ ಅಕ್ಟೋಬರ್ ಐದರಂದು ಅವರು ನಿಧನರಾದರು.

ಪರಿಸರದ ಮಿತಿಗಳ ಮಧ್ಯೆಯೂ, ಅಸಾಧಾರಣವಾದ ಎತ್ತರಕ್ಕೆ ಏರಿದ ದೇರಾಜೆ ಓರ್ವ ಅಸಾಮಾನ್ಯ ಕಲಾವಿದ. ಕಲಾವಿದತ್ವ ಮತ್ತು ಒಳ್ಳೆಯತನ ಎರಡೂ ದೊಡ್ಡ ಪ್ರಮಾಣದಲ್ಲಿ ಒಂದಾಗಿದ್ದ ವಿರಳ ವ್ಯಕ್ತಿತ್ವ.

(ದೇರಾಜೆಯವರ ಶ್ರೀ ರಾಮ ಚರಿತಾಮೃತಂ ಗ್ರಂಥದ ದ್ವಿತೀಯಾವೃತ್ತಿಯ ಮುನ್ನುಡಿಯಿಂದ) (2007)

error: Content is protected !!
Share This