ಲಕ್ಷ್ಮೀಶ ತೋಳ್ಪಾಡಿ

‘ಅಧ್ಯಾಸಭಾಷ್ಯ’ – ಹೌದು. ಇದು ಅನನ್ಯ! ಅಧ್ಯಾಸಭಾಷ್ಯದಲ್ಲಿ ಶಂಕರರು ಮಾಡಿದ್ದೇನೆಂದರೆ ಅನುಭವದ ಪ್ರಕ್ರಿಯೆಯನ್ನು ವಿವರಿಸಿದ್ದು, ಅನುಭವದಲ್ಲಿ ಅದರ ಪ್ರಕ್ರಿಯೆಯೂ ಅಡಗಿದೆ.

ತನ್ನ ಅನುಭವ ಹೀಗೆ ಎನ್ನುವುದಕ್ಕಿಂತ ಹೆಚ್ಚಿಗೆ ಅನುಭವದ ಪ್ರಕ್ರಿಯೆಯನ್ನು ಸಾಂಗೋಪಾಂಗ ವಿವರಿಸಬಲ್ಲವರು ಆಚಾರ್ಯ ಪುರುಷರು. ಪ್ರಕ್ರಿಯೆಯ ಭಾಷೆಯು ಜ್ಞಾನದ ಪರಿಭಾಷೆಯೇ ಆಗಿರುತ್ತದಲ್ಲದೆ ಅದು ಕರ್ಮ, ಭಕ್ತಿ, ಉಪಾಸನೆಗಳ ಪರಿಭಾಷೆಯಾಗಿರುವುದಿಲ್ಲ. ಆದುದರಿಂದಲೇ ಅಧ್ಯಾಸಭಾಷ್ಯದ ಭಾಷೆಯು ವೈಚಾರಿಕ ಭಾಷೆಯಾಗಿರುವುದು. ಅದು ತನಕ, ವೈದಿಕ ಗ್ರಂಥಗಳ ವ್ಯಾಖ್ಯಾನಗಳ ಚರಿತ್ರೆಯಲ್ಲಿಯೇ ಇಂಥ ವೈಚಾರಿಕ ಭಾಷೆಯು ಬಳಕೆಯಾದುದಿಲ್ಲ. ಉಪನಿಷತ್ತುಗಳಲ್ಲಿ ಈ ರೀತಿಯ ಭಾಷೆಯ ಹೊಳಹು ಇದೆ. ಬುದ್ಧನಲ್ಲಿ ನೇರವಾಗಿ ಬಳಕೆಯಾಗಿದೆ. ನಿಜ. ಆದರೆ ಬುದ್ಧನ ಮಾತುಗಳು ವ್ಯಾಖ್ಯಾನರೂಪವಾಗಿ ಬಂದಿಲ್ಲ. ತನ್ನ ಅನುಭವ ಹೀಗಿದೆ ಎನ್ನುವುದೇ ಬುದ್ಧನ ನಿಲುವು.

ತಾನು ನಿರೂಪಿಸುವ ಮಾರ್ಗದಲ್ಲಿ ನಡೆದರೆ ನನ್ನ ಅನುಭವ ನಿಮಗೂ ಸಂಭವಿಸುತ್ತದೆ ಎನ್ನುವವನು ತನಗಿಂತ ಪೂರ್ವದಲ್ಲಿ ಇಂಥ ಅನುಭವ ಪಡೆದವರಿದ್ದಿರಲಾರರೇ ಎನ್ನುವ ಕುತೂಹಲವನ್ನು ತೋರಿಸುವುದಿಲ್ಲ. ಶಂಕರರು ವ್ಯಾಖ್ಯಾನವು ಏಕಕಾಲಕ್ಕೆ ವ್ಯಾಖ್ಯಾನವೂ ಆಗಿದ್ದುಕೊಂಡೇ ಅನುಭವದ ನೇರವಾದ ಮಂಡನೆಯೂ ಆಗಬಹುದೆಂದು ಅಧ್ಯಾಸಭಾಷ್ಯದಲ್ಲಿ ತೋರಿಸಿದರು! ಅನುಭವದ ಪ್ರಕ್ರಿಯೆಯು ಅನುಭವದ ವ್ಯಾಖ್ಯಾನವೂ ಆಗಿರುವುದಾಗಿ, ಅದು ಅದರಲ್ಲೇ ಇದೆ – ಎಂದು ಗುರುತಿಸಿದರು! ವ್ಯಾಖ್ಯಾನವೇ ಒಂದು ‘ಕಾಣೆ’ ಯಾಗಿರಬಾರದೇಕೆ? ಇಂಥದೊಂದು ಸ್ಪೋಪಜ್ಞ ವಿವರಣೆಯನ್ನು ಅದು ಸ್ವಕಪೋಲ ಕಲ್ಪಿತವೆಂದು, ತನ್ನ ಪೂರ್ವಾಗ್ರಹವನ್ನು ವ್ಯಾಸಸೂತ್ರಗಳ ಮೇಲೆ ಹೇರಿದ್ದು ಎಂದು ವಾದಿಸುವುದು ಖಂಡಿತವಾಗಿ ಅನುದಾರವೂ ಅಸೂಕ್ಷ್ಮವೂ ಆದದ್ದು.

ನಾನಾ ರೀತಿಯಲ್ಲಿ ಪ್ರಕಟಗೊಂಡಿರುವ ಪರಸ್ಪರ ವಿರುದ್ಧವೆಂದು ಕಾಣುವಂತೆ ಕೂಡಾ ಇರುವ ವೇದವಾಕ್ಯಗಳಿಗೆ ಅರ್ಥ ಮಾಡುವುದು ನಿಜವಾದ ಅರ್ಥವಿದೆಂದು ಕಂಡುಕೊಳ್ಳುವುದು ಹೇಗೆ?

ಇದು ಸಮಸ್ಯೆ. ನಿನ್ನ ಅನುಭವದ ನೆಲೆಯಲ್ಲಿಯೇ ಅರ್ಥವನ್ನು ಕಂಡುಕೊಳ್ಳಬೇಕೆನ್ನುವುದು ಕೃಷ್ಣನ ಪರಿಹಾರ ಗೀತೆಯಲ್ಲಿ, ವೇದಗಳಲ್ಲಿ ಇರುವುದೆಲ್ಲ ನನ್ನ ಅನುಭವವೇ – ಎಂದಿದ್ದಾನೆ! ಬ್ರಹ್ಮಜ್ಞಾನಿಯ ಅನುಭವದಲ್ಲಿ ವೇದ ಸಮಸ್ತವೂ ಅಡಗಿದೆ – ಎಂಬ ಮಾತೂ ಹೇಳಿದ್ದಾನೆ. ನಿಜ. ಶಂಕರರು ಈ
ನಿರ್ದೇಶನವನ್ನೇ ಪಾಲಿಸಿದ್ದು, ಆದರೆ ಅನುಭವದ ನೆಲೆಯಲ್ಲಿ ಅರ್ಥ ಮಾಡುವುದು ಇಷ್ಟು ಕ್ಲಿಷ್ಟವಾಗಿರುವುದೇಕೆ ಎಂದು ಅವರು ಹೇಳಲೇಬೇಕಿತ್ತು. ಕ್ಲಿಷ್ಟ ಏಕೆಂದರೆ ಅನುಭವದ ಸ್ವರೂಪವೇ ಹಾಗಿದೆ! ಎಂದು ಅಧ್ಯಾಸಭಾಷ್ಯದಲ್ಲಿ ವಿವರಿಸಿದರು.

ಅನುಭವವು ನೇರವಾಗಿಲ್ಲ. ಅವು ವಿವರ್ತಿತ ಸ್ವರೂಪದಲ್ಲಿವೆ. ನಮ್ಮ ಇಂದ್ರಿಯಗಳು ಅನುಭವವನ್ನು ಗ್ರಹಿಸುವಾಗ ವಿವರ್ತ ಸ್ವರೂಪದಲ್ಲೇ ಗ್ರಹಿಸುತ್ತವೆ. ಏಕೆಂದರೆ ನಮ್ಮ ಬಗೆಗಿನ ನಮ್ಮ ಖುದ್ದು ತಿಳುವಳಿಕೆಯೇ ಅರಿವಿನ ವಿವರ್ತವಾಗಿದೆ. ವಿವರ್ತವೆಂದರೆ ಇನ್ನೊಂದು ರೀತಿಯಲ್ಲಿ – ಪ್ರತಿಫಲನ ಅಥವಾ ಪ್ರತಿಬಿಂಬ. ಪ್ರತಿಬಿಂಬವು ಅದಲು ಬದಲಾಗಿ – ಎಡ, ಬಲವಾಗಿಯೇ ಕಾಣಿಸಿಕೊಳ್ಳುವುದು.

ಅಂದರೆ ಹೇಗೆ ಇದೆಯೋ ಹಾಗೆ – ಯಥಾವತ್ತಾಗಿ ಅಲ್ಲ. ಅಯಥಾವತ್ತಾಗಿ ತೋರಿಕೊಳ್ಳುವುದು. ಪ್ರತಿಫಲಿಸುವುದು ಬೆಳಕಿನ ಸಹಜಗುಣವೇ ಆದರೂ ಪ್ರತಿಫಲನ ವ್ಯಾಪಾರವು ಮಾತ್ರ ಹೀಗಿರುವುದು. ನಮ್ಮದು ಪ್ರೋಯ ಪರಂಪರೆಯಾದುದರಿಂದ, ಶ್ರುತಿ ವಾಕ್ಯಗಳಿಗೆ ಅರ್ಥ ಮಾಡುವಾಗ, ಅಂದರೆ ನಮ್ಮ ಕಿವಿಗಳ ಶ್ರವಣಾನುಭವವನ್ನು ನೆಚ್ಚುವಾಗ ಈ ವಿವರ್ತಿತ ಸ್ವರೂಪದ ಎಚ್ಚರವನ್ನು ಕಳೆದುಕೊಳ್ಳಬಾರದು.

ವೇದಗಳೇ – ಈ ಎಚ್ಚರವನ್ನು ಕಳೆದುಕೊಳ್ಳಬಾರದೆಂಬ ಎಚ್ಚರವನ್ನು ನೀಡುತ್ತವೆ! ತನ್ನನ್ನು ಓದುವ ಕೇಳುವ – ಎರಡು ಬಗೆಗಳು ಇವೆ. ಪರಾ, ಅಪರಾ ವಿದ್ಯೆಗಳೆಂದು ಅವುಗಳ ಹೆಸರುಗಳೆಂದು ವೇದವೇ ಹೇಳುವುದೊಂದು ದೊಡ್ಡ ಸೋಜಿಗ! ಅಂದರೆ – ವರ್ತಿತ ಸ್ವರೂಪವನ್ನೂ ತೋರಿಸುತ್ತಲೇ, ಅದರ ಜೊತೆಗೇ ‘ಸತ್ಯ’ವನ್ನು ಸೂಚಿಸುವ ರೀತಿ ಇದು! ಈ ರಹಸ್ಯದ ಅತ್ಯುತ್ತಮ ಉದಾಹರಣೆ ಎಂದರೆ – ಉಪನಿಷತ್ತಿನಲ್ಲಿ ಬರುವ ಎರಡು ಹಕ್ಕಿಗಳು ಒಂದೇ ಮರದಲ್ಲಿ ನೆಲೆಯಾಗಿರುವ ಚಿತ್ರ!

ಅದು ದೈತ ಸ್ಥಿತಿಯನ್ನು ಸೂಚಿಸುವ ಚಿತ್ರವಲ್ಲ ನಿಜವನ್ನು ವಿವರ್ತಿತವಾಗಿರುವುದರ ಜೊತೆಗೆ ಇಟ್ಟು ತೋರಿಸುತ್ತಿರುವ ಚಿತ್ರ! ಈ ಚಿತ್ರ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ! ಇಂಥ ಸೂಚನೆಗಳನ್ನು ಶಂಕರರಂತೆ ಗ್ರಹಿಸಿದ ಮತ್ತೊಬ್ಬ ದಾರ್ಶನಿಕನಿಲ್ಲವೆನಿಸುತ್ತದೆ!

ನಾಮ – ರೂಪಗಳನ್ನು ಮೀರದೆ ಸತ್ಯ ತಿಳಿಯಲಾರದೆನ್ನುವುದು ಉಪನಿಷತ್ತುಗಳ ಸಂದೇಶ. ‘ನಾಮ’ವೆಂದರೇನು? ನಾಮವೆಂದರೆ ಭಾಷೆ ನಾಮವೆಂದರೆ ವಾಗ್ಮಿಯ. ನಾಮವೆಂದರೆ ಶಬ್ದ ಪ್ರಪಂಚ. ಇದನ್ನು ಮೀರುವುದೆಂದರೇನು?

ಶಬ್ದಕ್ಕೆ ನಾವು ಮಾಡುವ ಮಾಡುತ್ತಿರುವ ಅರ್ಥವು ವಿವರ್ತಿತವಾದ ಅರ್ಥ. ಅಪರಾವಿದ್ಯೆಗೆ – ಅಂದರೆ ಲೌಕಿಕಕ್ಕೆ ಸಂಬಂಧಿಸಿದ ಅರ್ಥ. ಶಬ್ದವು ಭಗವದ್ವಾಚಕವೆಂದು ತಿಳಿಯಲಾಗದೆ ಮಾಡುತ್ತಿರುವ ಅರ್ಥ. ಈ ವಿವರ್ತವನ್ನು ಮೀರುವುದೇ ನಾಮ – ರೂಪಗಳನ್ನು ಮೀರಬೇಕೆನ್ನುವುದರ ಅರ್ಥ.

ಆಗಲೇ ನಿಜವಾದ ಪ್ರೋತ್ರಿಯತ್ವ ಆಗಲೇ ವೇದ – ಪ್ರಾಮಾಣ್ಯ! ಈ ವಿಚಾರಗಳೆಲ್ಲ ನಾರದ – ಸನತ್ಕುಮಾರ ಸಂವಾದದಲ್ಲಿ ಬಂದಿದೆ.

ಇರುವುದನ್ನು ಇರುವ ಹಾಗೇ ತೋರಿಸಬೇಕು. ತೋರಿಸಬೇಕಾದರೆ ವಿವರ್ತದ ಜೊತೆಗೇ ನಿಜವನ್ನು ತೋರಿಸಬೇಕು. ‘ಮಾಯೆ’ ಎಂಬ ಪದವನ್ನು ಬಳಸಬೇಕಾದರೆ – ಮಾಯೆಯ ಜೊತೆಗೇ ಮಾಯೆಯನ್ನು ಮೀರಿದ ನಿಜವನ್ನು ತೋರಿಸಬೇಕು. ಇದು ಆಧುನಿಕದಲ್ಲಿ ಆಧುನಿಕವಾದ್ದು, ಅಧ್ಯಾಸಭಾಷ್ಯದಲ್ಲಿ ಶಂಕರರು ಮಾಡಿದ್ದು ಇದನ್ನು ‘ಅವರು ಬೆಳಕಿಗೆ ನರಳಿತ್ತ ಆಚಾರ್ಯ!’

(ಹೊಸದಿಗಂತ) 5-5-2022

error: Content is protected !!
Share This