ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಯಲ್ಲಿ ವೇಷಧಾರಿ ಯಾಗಿ,ಭಾಗವತನಾಗಿ, ರಂಗಕರ್ಮಿಯಾಗಿ,ಪ್ರಸಂಗಕರ್ತನಾಗಿ, ಹಲವಾರು ಸಂಘಸಂಸ್ಥೆಗಳ ಸ್ಥಾಪಕನಾಗಿ ಗುರುತಿಸಿಕೊಂಡ ತೆರೆಮರೆಯ ಹಿರಿಯ ಕಲಾವಿದ ಮೊಗೆಬೆಟ್ಟು ಹೆರಿಯ ನಾಯ್ಕ ಅವರನ್ನು ಪ್ರತಿಷ್ಟಿತ ಯಕ್ಷಗಾನ ಕಲೆಯ ಹಿತಚಿಂತಕ ಸಂಸ್ಥೆ ಯಾದ ಉಡುಪಿ ಯಕ್ಷಗಾನ ಕಲಾರಂಗವು 2024ರ ಸಾಲಿನ ಶಿರಿಯಾರ ಮಂಜುನಾಯ್ಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಿಜಕ್ಕೂ ಪ್ರಶಂಸನೀಯ ಸಂಗತಿಯಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್:17ರಂದು ಉಡುಪಿಯ ಕಲಾರಂಗದ ಸಭಾಭವನದಲ್ಲಿ ನಡೆಯಲಿದೆ.ಇದೇ ಸಂದರ್ಭದಲ್ಲಿ ಬೇರೆ ಬೇರೆ ಕಲಾವಿದರಿಗೂ ವಿವಿಧ ಮಹನೀಯರ ಹೆಸರಿನ ಪ್ರಶಸ್ತಿ ಪ್ರದಾನವೂ ನಡೆಯಲಿದೆ. ಕಲಾಭಿಮಾನಿಗಳ ಪಾಲಿನ ಪ್ರೀತಿಯ ಹೆರಿಯಣ್ಣನಿಗೆ ದೊರಕಿದ ಯೋಗ್ಯ ಗೌರವ ಇದಾಗಿದ್ದು ಅವರ ಶಿಷ್ಯರಿಗೆ, ಮಿತ್ರರಿಗೆ,ಹಿತೈಷಿಗಳಿಗೆ,ಸಮಗ್ರ ಕಲಾಭಿಮಾನಿಗಳಿಗೆ,ಸಂಘ,ಸಂಸ್ಥೆಗಳಿಗೆ ಅತ್ಯಂತ ಸಂತೋಷ ನೀಡಿದೆ.
ಕುಂದಾಪುರ ತಾಲ್ಲೂಕಿನ ಬೇಳೂರು ಗ್ರಾಮದ ಮೊಗೆಬೆಟ್ಟು ಎಂಬಲ್ಲಿ ವೀರ ನಾಯ್ಕ- ಚಂದು ಮೊಗವೀರ ದಂಪತಿಗಳ ಸುಪುತ್ರನಾಗಿ ಜನಿಸಿದ ಹೆರಿಯ ನಾಯ್ಕರು ಯಕ್ಷಗಾನ ಕಲೆಯಲ್ಲಿ ತಪಸ್ವಿಯಂತೆ ಬದುಕಿದವರು.ಸುಮಾರು ಐವತ್ತೈದು ವರ್ಷಗಳ ಕಾಲದ ಯಕ್ಷಗಾನ ಕ್ಷೇತ್ರದ ಸುದೀರ್ಘ ಅನುಭವದ ಮೊತ್ತವಾಗಿರುವ ಅವರು ಇದೀಗ ಎಪ್ಪತ್ತೆರಡರ ಹಿರಿತನದಲ್ಲಿದ್ದಾರೆ.
ಕಲಾಬದುಕಿನಲ್ಲಿ ಶಿರಿಯಾರರ ಅನುಭವ ದ್ರವ್ಯ ಪಡೆದ,ವೇಷಗಾರಿಕೆಯ ಮಾಹಿತಿ, ರಂಗವೈಭವವನ್ನು ಕಣ್ತುಂಬಿಸಿಕೊಂಡ ಇವರು ಮಂಜುನಾಯ್ಕರ ವೇಷಗಳಿಂದ ಸಾಕಷ್ಟು ಪ್ರಭಾವಿತರು. ಶಿರಿಯಾರ ಹಾಗೂ ಮೊಗೆಬೆಟ್ಟು ಆಸುಪಾಸಿನ ಊರುಗಳೂ ಹೌದು. ಇಂತಹ ಪ್ರಶಸ್ತಿ ಇವರ ಕಲಾಬದುಕಿನ ಸಂಜೆಗೆ ಕಿರೀಟಪ್ರಾಯವಾಗಿ ಒದಗಿದೆ. ಕಲಾರಂಗ ಸಂಸ್ಥೆ ಯಕ್ಷಗಾನದ ಕಲೆಯಲ್ಲಿ ಪರಿಶ್ರಮಿಸಿದವರನ್ನು, ಎಲೆಮರೆಯ ಸಾಧಕರನ್ನು ಯಾವತ್ತೂ ಗುರುತಿಸಿ ಗೌರವಿಸುತ್ತದೆ ಎಂಬುದಕ್ಕೆ ಇದು ಪ್ರಮಾಣ ಸಾಕ್ಷಿಯಾಗಿದೆ.
ಕೋಟದ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ( ಈಗಿನ ಹಂಗಾರಕಟ್ಟೆ ಯಕ್ಷಗಾನ ಕೇಂದ್ರ) ಯಕ್ಷಗಾನ ತರಗತಿಯಲ್ಲಿ ಇವರು 1975 ರ ಅವಧಿಯಲ್ಲಿ ಆರಂಭಿಕ ಯಕ್ಷಶಿಕ್ಷಣ ಪಡೆದವರು. ಇವರ ಸುಯೋಗವೆಂಬಂತೆ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರರ ಶಿಷ್ಯರಾಗಿ ತಾಳಮಾಹಿತಿ ಪಡೆದರು. ಅಲ್ಲಿಯೇ ಬೇಳಂಜೆ ತಿಮ್ಮಪ್ಪ ನಾಯ್ಕರ ಶಿಷ್ಯನಾಗಿ ಹೆಜ್ಜೆಗಾರಿಕೆಯನ್ನು ಕಲಿತರು.
ಮುಂದೆ ಮಂದಾರ್ತಿ, ಮಾರಣಕಟ್ಟೆ,ಅಮೃತೇಶ್ವರಿ,ರಂಜದಕಟ್ಟೆ ಮೊದಲಾದ ವೃತ್ತಿ ಮೇಳಗಳಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಸಂಗೀತ ಗಾರನಾಗಿ,ಸಹಭಾಗವತನಾಗಿ,ಪೋಷಕ ವೇಷಧಾರಿ ಯಾಗಿ ಸೇವೆ ಸಲ್ಲಿಸಿದರು. ಇವರು ಹಾರಾಡಿ ಕುಷ್ಟಗಾಣಿಗ, ಶಿರಿಯಾರ ಮಂಜುನಾಯ್ಕ,ವಂಡಾರು ಬಸವ, ಮರವಂತೆ ದಾಸ ಭಾಗವತರು ಸೇರಿದಂತೆ ಹಲವಾರು ಯಕ್ಷ ದಿಗ್ಗಜರೊಂದಿಗೆ ಕಲಿಕಾರ್ಥಿಯಾಗಿಕಲಾ ವಿದ್ಯೆ, ಅನುಭವ ಪಡೆದರು.ದೈಹಿಕ ಆರೋಗ್ಯ ಹದಗೆಟ್ಟ ಕಾರಣ ವೃತ್ತಿ ಮೇಳಕ್ಕೆ ವಿದಾಯ ಹೇಳಿ ಹವ್ಯಾಸೀ ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡರು. ಮೊಗೆಬೆಟ್ಟು, ನೂಜಿ,ಸಕ್ಕಟ್ಟು ಕಡೆಗಳಲ್ಲಿ ಕಲಾಸಂಘಗಳನ್ನು ಕಟ್ಟಿದರು. ಅದೆಷ್ಟೋ ಯುವಕರನ್ನು ಯಕ್ಷಗಾನಕ್ಕೆ ಎಳೆದುತಂದರು. ಯಕ್ಷಗಾನದ ರುಚಿ ಹತ್ತಿಸಿದರು.ತನಗೆ ತಿಳಿದಿರುವುದನ್ನು ಪ್ರಾಮಾಣಿಕವಾಗಿ ಕಲಿಸಿ, ಅವರ ಕಾಲಿಗೆ ಗೆಜ್ಜೆ ಕಟ್ಟಿಸಿ ರಂಗವೇರಿಸಿದರು.ಇದು ಹವ್ಯಾಸೀ ಯಕ್ಷ ರಂಗದಲ್ಲಿ ಬಹುಮುಖ್ಯ ಕೊಡುಗೆಯೂ ಆಯಿತು. ಇವರು ಕಲಿತದ್ದು ಕೇವಲ ಮೂರನೇ ತರಗತಿಯಾದರೂ ತನ್ನ ಕಲಾಜ್ಞಾನದಿಂದ ಆರು ಪ್ರಸಂಗಗಳನ್ನೂ ರಚಿಸಿ ವಿವಿಧ ಮೇಳಗಳಲ್ಲಿ ಪ್ರದರ್ಶಿಸಿ ಯಶಸ್ವಿಯಾಗಿದ್ದಾರೆ.
ಮೊಗೆಬೆಟ್ಟು ಹೆರಿಯ ನಾಯ್ಕರು ಯಕ್ಷಗಾನದಲ್ಲಿ ಎಲ್ಲಾ ಬಗೆಯ ವೇಷಗಳನ್ನೂ ಮಾಡಿದವರು. ಕಿರೀಟ ವೇಷ,ಕೇದಗೆಮುಂದಲೆ,ಮುಂಡಾಸು,ಸ್ತ್ರೀ ವೇಷ,ಕಿರಾತ,ಹಾಸ್ಯ,ಪ್ರೇತ,ಬಾಹುಕ,ಮುನಿ,ಹೆಣ್ಣುಬಣ್ಣ…ಹೀಗೆ… ಅವರ ಯಾವುದೇ ಪ್ರಸಂಗದ ದೇವೇಂದ್ರ,ಧರ್ಮರಾಯ ಗಮನೀಯ.ಶಂತನು,ಶತ್ರುಘ್ನ,ಕಮಲಭೂಪ,ಅರ್ಜುನ,ಶಲ್ಯ,ಮಹಿಷಾಸುರ, ವಿಷ್ಣು,ಕರಾಳನೇತ್ರೆ,ಅಜಮುಖಿ,ಸಂಜಯ,ಅಕ್ರೂರ, ಭೀಷ್ಮವಿಜಯದ ಪರಶುರಾಮ..ಮೊದಲಾದ ವೇಷಗಳು ಜನಪ್ರಿಯತೆ ಪಡೆದವು.ಪರಂಪರೆಯ ಶೈಲಿಯಲ್ಲಿಯೇ ಅವರ ವಿಶಿಷ್ಟ ನಡೆಯ ಪಾತ್ರಗಳು ಪ್ರಸಂಗಗಳಲ್ಲಿ ವಿಜೃಂಭಿಸಿವೆ. ಹವ್ಯಾಸಿ ಅರ್ಥಧಾರಿಯಾಗಿಯೂ ಇವರು ಭಾಗವಹಿಸಿರುತ್ತಾರೆ.ಮಂಗಳೂರು ಆಕಾಶವಾಣಿ ಯಲ್ಲಿಯೂ ಇವರ ಅರ್ಥಗಾರಿಕೆಯ ತಾಳಮದ್ದಳೆ ಕಾರ್ಯಕ್ರಮಗಳು ಪ್ರಸಾರವಾಗಿವೆ. ಇವರಿಗೆ ಹಲವಾರು ಸಂಘ ಸಂಸ್ಥೆಗಳ ಸನ್ಮಾನ ದೊರಕಿವೆ.ಸೂಡದಲ್ಲಿ ಸ್ಕಂದಪ್ರಶಸ್ತಿ ಪಡೆದಿರುತ್ತಾರೆ.ಕಾಳಾವರದಲ್ಲಿ ಸುವರ್ಣ ಪ್ರತಿಭಾ ಕಾರಂಜಿಯಲ್ಲಿ ಗುರುತಿಸಲಾಗಿದೆ. ವಡ್ಡರ್ಸೆ ರಥಬೀದಿ ಫ್ರೆಂಡ್ಸ್ ವತಿಯಿಂದ ಗೌರವ ಸನ್ಮಾನ ಸಿಕ್ಕಿದೆ.ಇತ್ತೀಚಿಗೆ ಯಕ್ಷ ನಕ್ಷತ್ರ ಟ್ರಸ್ಟ್ ( ರಿ)- ಕಿರಾಡಿ ಇವರ ವತಿಯಿಂದ ಗೌರವ ಪುರಸ್ಕಾರ ಪಡೆದಿರುತ್ತಾರೆ.
ತನ್ನ ಕಲಾ ಸೇವೆಯಲ್ಲಿ ಒದಗಿದ ಉಪ್ಪೂರರು,ಬೇಳಂಜೆ, ಶಿರಿಯಾರರು,ಹಾರಾಡಿ,ವಂಡಾರು,..ಮೊದಲಾದ ಕಲಾವಿದರನ್ನು, ಮಂದಾರ್ತಿ ಮೇಳದ ಆಗಿನ ಯಜಮಾನರಾದ ಭೋಜರಾಜ ಹೆಗ್ಡೆ, ಮಾರಣಕಟ್ಟೆಯ ಯಜಮಾನರಾದ ಎಂ.ಎಂ.ಹೆಗ್ಡೆಯವರನ್ನು,ಕೋಟ ಕೇಂದ್ರದಲ್ಲಿ ಅವಕಾಶ ನೀಡಿದ ಐರೋಡಿ ಸದಾನಂದ ಹೆಬ್ಬಾರ್ ಅವರನ್ನು ಹಾಗೂ ನನ್ನ ಕಲಾರಾಧನೆಯನ್ನು ಈ ಹಿಂದೆಯೂ ಗುರುತಿಸುವಲ್ಲಿ ಸಹಕರಿಸಿದ ಮುರಳಿ ಕಡೆಕಾರ್ ಅವರನ್ನು ಕೃತಜ್ಞತೆಯಿಂದ ಇವರು ಸ್ಮರಿಸುತ್ತಾರೆ.
ಕಲೆಗಾಗಿ ತನ್ನ ಬದುಕನ್ನು ಅಕ್ಷರಶಃ ಸಮರ್ಪಿಸಿದ,ತಾನು ದುಡಿದ ಹಣವನ್ನು ಯಕ್ಷಗಾನದ ಪ್ರದರ್ಶನ, ಸಂಘ,ಸಂಸ್ಥೆ ಗಳಿಗೆ ಸಂಪೂರ್ಣ ಉಪಯೋಗಿಸಿದ, ಯಕ್ಚಗಾನ ಪ್ರದರ್ಶನಕ್ಕಾಗಿ ಎಂಭತ್ತರ ದಶಕದ ಕಾಲದಲ್ಲಿ ಮಡದಿಯ ಒಡವೆಯನ್ನೂ ಗಿರವಿ ಇಟ್ಟ ಅಪರೂಪದ ಕಲಾವಿದರು ಹೆರಿಯ ನಾಯ್ಕರು.ಅವರು ಜೀವನಪೂರ್ತಿ ಉಸಿರಾಡಿದ್ದು ಯಕ್ಷಗಾನ..ಯಕ್ಷಗಾನ.
ಪತ್ನಿ, ಓರ್ವ ಮಗ( ಪ್ರಸಾದ್ ಕುಮಾರ್ ಮೊಗೆಬೆಟ್ಟು), ಸೊಸೆ, ಇಬ್ಬರು ಮೊಮ್ಮಕ್ಕಳೊಂದಿಗೆ ಮೊಗೆಬೆಟ್ಟಿನಲ್ಲಿ ಶ್ರೀಯುತರು ವಾಸಿಸುತ್ತಿದ್ದಾರೆ.
ಬದುಕಿನ ಸರ್ವ ಭಾಗವನ್ನು ಯಕ್ಷಗಾನ ಕಲೆಯೊಂದಿಗೆ ಕಳೆದು,ಇದೀಗ ಹದಗೆಟ್ಟ ಆರೋಗ್ಯದ ವೃದ್ಧಾಪ್ಯದಲ್ಲಿ ಇದ್ದಾರೆ. ಯೋಗ್ಯ ಕಲಾವಿದರ ಹೆಸರಿನ ಪ್ರಶಸ್ತಿಯನ್ನು ಯೋಗ್ಯ ಕಲಾವಿದರಿಗೆ ಕಲಾರಂಗ ನೀಡುತ್ತಿರುವುದು ಮೆಚ್ಚುವಂತಹ ವಿಷಯವಾಗಿದೆ.
ಬರಹ: ಚೇಂಪಿ ರಾಮಚಂದ್ರ ಆಚಾರ್ಯ