ಆಗಸ್ಟ್ 25ರಂದು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ
2019ರ ಶೇಣಿ ಪ್ರಶಸ್ತಿ ಪ್ರಧಾನ ಸಮಾರಂಭ
.

ಯಕ್ಷರಂಗದಲ್ಲಿ ದಂತಕಥೆಯಾಗಿ ಹೆಸರು ಸ್ಥಿರವಾಗಿರಿಸಿದ ಮಹಾನ್ ಕಲಾ ಚೇತನ ಶೇಣಿಯವರು. ಅವರು ತನ್ನ 82ರ ಹರೆಯದಲ್ಲಿ ಕಲಾಮಾತೆಯ ನಿರಂತರ ಸೇವೆಗಾಗಿಯೇ ರೂ.1 ಲಕ್ಷವನ್ನು ಮೂಲ ಬಂಡವಾಳವಾಗಿ ಕೊಟ್ಟು ಹುಟ್ಟು ಹಾಕಿದ ಸಂಸ್ಥೆ ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್ (ರಿ.).

ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆಗಾಗಿ ನಿಜಾರ್ಥದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್ (ರಿ.) ಎಂಬುವುದರಲ್ಲಿ ಎರಡು ಮಾತಿಲ್ಲ.

ಕಲೆಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟವರು ಶೇಣಿಯವರು. ಅವರ ಆ ಕೊಡುಗೆಗೆ, ಅವರ ಉದ್ದೇಶಗಳಿಗೆ ಪೂರಕಾರ್ಥ ಬರುವಂತೆ ಕಾರ್ಯ ನಿರ್ವಹಿಸುತ್ತಾ ಕಲಾಸೇವೆಯನ್ನು ಗೈಯುತ್ತಾ ಜನಮನ್ನಣೆಗೆ ಪಾತ್ರವಾದ ಈ ಶೇಣಿ ಗೋಪಾಲಕೃಷ್ಣ ಭಟ್ ಚಾರಿಯೇಟೇಬಲ್ ಟ್ರಸ್ಟ್.

ಶೇಣಿಯವರ ಶತಮಾನೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದೆ. ಆ ಸಂದರ್ಭದಲ್ಲಿ ದಿನಾಂಕ 2017 ಏ. 7ರಿಂದ 2018 ಡಿ.6ರ ತನಕ ದ.ಕ, ಉ.ಕ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 103 ಶೇಣಿ ಸಂಸ್ಮರಣಾ ಕಾರ್ಯಕ್ರಮವನ್ನು ಈ ಸಂಸ್ಥೆಯು ಸರಳವಾಗಿ ಹಾಗೂ ಶಿಸ್ತುಬದ್ಧವಾಗಿ ಪೂರ್ಣಗೊಳಿಸಿ ಯಕ್ಷಗಾನ ರಂಗದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿದೆ. ಈ ಕಾರ್ಯಕ್ರಮಗಳಲ್ಲಿ ಸಂಸ್ಥೆಯು ಅಲ್ಲಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಯಕ್ಷಗಾನ ಕಲಾರಾಧಕರನ್ನು ಗುರುತಿಸಿ ಒಟ್ಟು 88 ಮಂದಿಯನ್ನು ಗೌರವಿಸಿದೆ. ಆ ಮೂಲಕ ಅದೆಷ್ಟೋ ಎಲೆಮರೆಯ ಕಾಯಿಯಂತಿರುವ ಹಲವಾರು ಪ್ರತಿಭಾವಂತ ಕಲಾವಿದರಿಗೆ ಅವಕಾಶ ನೀಡಿ, ಶೇಣಿ ಚಾರಿಟೇಬಲ್ ಟ್ರಸ್ಟ್ ಅವರನ್ನು ಯಕ್ಷಗಾನಕ್ಕೆ ಪರಿಚಯಿಸಿದೆ. ಪ್ರತಿಭೆಯಿದ್ದ ಉದಯೋನ್ಮುಖರಿಗೆ ಅವಕಾಶ ನೀಡಿದರೆ ಅವರೂ ಕೂಡ ಕಲೆಯನ್ನು ಬೆಳಗಬಲ್ಲರು ಎಂಬ ಸತ್ಯವನ್ನು ಮನಗಂಡ ಶೇಣಿ ಚಾರಿಟೇಬಲ್ ಟ್ರಸ್ಟ್ ಕೇವಲ ಪ್ರಸಿದ್ಧರಿಗಷ್ಟೇ ಅವಕಾಶ ನೀಡದೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಿದೆ ಎಂಬುದು ಎಲ್ಲರೂ ಮೆಚ್ಚಬೇಕಾದ ನೆಮ್ಮದಿಯ ವಿಷಯ.

ಕಳೆದ ವರ್ಷ ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭವು ವಿಚಾರಗೋಷ್ಠಿ , ತಾಳಮದ್ದಳೆ, ಬಣ್ಣಗಾರಿಕೆಯ ಸ್ಪರ್ಧೆ ಹಾಗೂ ರಸಪ್ರಶ್ನೆ ಮತ್ತು ಯಕ್ಷಗಾನ ಬಯಲಾಟ ಮುಂತಾದ ಅರ್ಥಪೂರ್ಣವಾದ ಸಾರಸ್ವತ ಸಂಭ್ರಮಗಳಿಂದ ಯಶಸ್ವಿಯಾಗಿ ನಡೆದಿದ್ದು ಕಳೆದ ವರ್ಷ ತೆಂಕು ತಿಟ್ಟಿನ ಪ್ರಸಿದ್ಧ ಭಾಗವತ, ರಂಗನಾಯಕ ಖ್ಯಾತಿಯ ಶ್ರೀ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಪ್ರಸಿದ್ಧ ಛಾಂದಸ, ಪ್ರಸಂಗಕರ್ತ, ಯಕ್ಷಗಾನದ ಗುರು , ಛಂದೋವಾರಿಧಿ ಚಂದ್ರ ಶ್ರೀ ಗಣೇಶ ಕೊಲೆಕಾಡಿಯವರಿಗೆ ಈ ಸಂಸ್ಥೆ ಶೇಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಈ ವರ್ಷ ಶೇಣಿ ಪ್ರಶಸ್ತಿ ಪ್ರಧಾನ ಸಮಾರಂಭವು ಇದೇ ಬರುವ ಆಗಸ್ಟ್ 25, ಭಾನುವಾರದಂದು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ| ಉದಯಕುಮಾರ್ ಇವರು ಮಾಡಲಿದ್ದಾರೆ. ಆ ನಂತರ ಬೆಳಿಗ್ಗೆ 9.30ರಿಂದ ಬೆಳಿಗ್ಗೆ ಗಂಟೆ 10.30ರ ತನಕ ಶ್ರೀ ಗಣೇಶ ಕೊಲೆಕಾಡಿ ಶಿಷ್ಯವೃಂದದಿಂದ ಭಾಗವತಿಕೆಯ ಕೆಲವು ಪಾರಂಪರಿಕ ಮಟ್ಟುಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಮಟ್ಟುಗಳ ಛಂದೋ ವಿನ್ಯಾಸಗಳ ವಿವರಣೆ ಹಾಗೂ ಛಂದೋಬದ್ಧವಾದ ಯಕ್ಷಗಾನೀಯವಾದ ಹಾಡುಗಾರಿಕೆ ಈ ಕಾರ್ಯಕ್ರಮದ ಮೂಲಸ್ವರೂಪವಾಗಿದೆ.

ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಹಿಮ್ಮೇಳ ಗುರು, ತೆಂಕುತಿಟ್ಟಿನ ಹಿರಿಯ ಮದ್ದಳೆಗಾರರಾದ ಮುರಲೀಧರ ಭಟ್ ಕಟೀಲು ಇವರು ಭಾಗವಹಿಸಲಿದ್ದಾರೆ. ಶ್ರೀ ಗಣೇಶ ಕೊಲೆಕಾಡಿಯವರ ನಿರ್ದೇಶದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕಟೀಲು ಮೇಳದ ಭಾಗವತ ಶ್ರೀ ಅಂಡಾಲ ದೇವಿಪ್ರಸಾದ ಶೆಟ್ಟಿಯವರು ನಿರೂಪಿಸಲಿದ್ದಾರೆ.

ಪ್ರಾತ್ಯಕ್ಷಿಕೆಯಲ್ಲಿ ಕಲಾವಿದರಾಗಿ ಶ್ರೀ ಅಂಡಾಲ ದೇವೀಪ್ರಸಾದ ಶೆಟ್ಟಿ, ಶ್ರೀಮತಿ ಭವ್ಯಶ್ರೀ ಕುಲ್ಕುಂದ, ಶ್ರೀ ದೇವರಾಜ ಆಚಾರ್ಯ, ಶ್ರೀ ಗುರುರಾಜ ಉಪಾಧ್ಯಾಯ, ಶ್ರೀ ಸವಿನಯ ನೆಲ್ಲಿತೀರ್ಥ ಶ್ರೀ ಯಜ್ಞೇಶ ರೈ ಕಟೀಲು ಮುಂತಾದವರು ಭಾಗವಹಿಸಲಿದಾರೆ.

ಬೆಳಿಗ್ಗೆ 10.30ರಿಂದ 1.30ರ ತನಕ ಶೇಣಿ ಅರ್ಥ ಶ್ರೇಣಿ’ ವಿಚಾರಗೋಷ್ಠಿ ನಡೆಯಲಿದೆ. ಕವಿಗಳು ಹಿರಿಯ ವಿದ್ವಾಂಸರಾದ ಶ್ರೀ ಅಂಬಾತನಯ ಮುದ್ರಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ನಿಟ್ಟೂರು ಶ್ರೀ ಶಾಂತಾರಾಮ ಪ್ರಭು, ಶ್ರೀ ಎಂ.ಕೆ. ರಮೇಶ್ ಆಚಾರ್ಯ, ನಿವೃತ್ತ ಉಪನ್ಯಾಸಕರಾದ ಡಾ| ಜಿ.ಎಲ್. ಹೆಗಡೆ, ಹಿರಿಯ ಕಲಾ ವಿಮರ್ಶಕರಾದ ಡಾ| ಕೆ. ಪಿ. ಭಟ್ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ವಿಮರ್ಶಕ, ಬರಹಗಾರ ಶ್ರೀ ಕೆ. ಎಲ್. ಕುಂಡಂತಾಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಮಧ್ಯಾಹ್ನ 1.30ರಿಂದ 4.00ರ ತನಕ ‘ರಸಪ್ರಶ್ನೆ ಹಾಗೂ ಮುಖವರ್ಣಿಕೆ ಸ್ಪರ್ಧೆ’ ಶ್ರೀ ಸರ್ಪಂಗಳ ಈಶ್ವರ ಭಟ್, ಸೇರಾಜೆ ಸೀತಾರಾಮ ಭಟ್, ಡಾ ಎಸ್. ವಿ. ಗುರುದಾಸ್, ದಿವಾಕರ ಆಚಾರ್ಯ ಗೇರುಕಟ್ಟೆ, ಸದಾಶಿವ ಶೆಟ್ಟಿಗಾರ ಕಿನ್ನಿಗೋಳಿ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ. 1. ಪಿ.ಯು. ಕಾಲೇಜು ವಿಭಾಗ 2. ಪದವಿ ಕಾಲೇಜು ವಿಭಾಗ 3. ಸಾರ್ವಜನಿಕ ವಿಭಾಗ

1. ವಾಲ್ಮೀಕಿ ರಾಮಾಯಣ 2. ಮಹಾಭಾರತ 3. ಶ್ರೀ ಮದ್ಭಾಗವತ 4. ಶ್ರೀ ದೇವಿ ಭಾಗವತ (2,3,4 ವೇದವ್ಯಾಸ ವಿರಚಿತ) ಮಹಾ ಪುರಾಣಗಳನ್ನಾಧರಿಸಿ ರಸ ಪ್ರಶ್ನೆ ಸ್ಪರ್ಧೆಯ ಕೊನೆಯ ಸುತ್ತು. ಹಾಗೂ ಹಾಸ್ಯ ಯಾ, ಸ್ತ್ರೀ ಯಾ ಬಣ್ಣದ ವೇಷಗಳಲ್ಲಿ ‘ಮುಖವರ್ಣಿಕೆ ಸ್ಪರ್ಧೆ’ ಕೊನೆ ಸುತ್ತು ಹೀಗೆ ವಿಭಾಗದಲ್ಲಿ ನಡೆಯಲಿದೆ.

ಗಂಟೆ 4.00ರಿಂದ ಗಂಟೆ 5.00 ಸಮಾರೋಪ ‘ಶೇಣಿ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ನಡೆಯಲಿದೆ. ಟ್ರಸ್ಟ್ ಗೌರವಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ ಅರ್ಚಕರಾದ ವೇದಮೂರ್ತಿ ಕಮಲಾದೇವಿ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ನಿವೃತ್ತ ಉಪನ್ಯಾಸಕ ಡಾ| ಜಿ.ಎಲ್. ಹೆಗಡೆ ಕುಮಟಾ ಇವರನ್ನು ಸಂಮಾನಿಸಲಾಗಿದ್ದಾರೆ. ಹುಕ್ಲಮಕ್ಕಿ ಕಂಪೆನಿ ಕಾರ್ಯದರ್ಶಿ ಗೋಪಾಲಕೃಷ್ಣ ಹೆಗಡೆ ಅಭಿನಂದಿಸಲಿದ್ದಾರೆ. ಪ್ರಧಾನ ಅಭ್ಯಾಗತರಾಗಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪಿ.ಎಸ್. ಎಡಪಡಿತ್ತಾಯ, ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷರಾದ ಡಾ| ಎಂ. ಮೋಹನ್ ಆಳ್ವ, ಮೂಡುಬಿದಿರೆಯ ಉದ್ಯಮಿ ಶ್ರೀ ಪತಿ ಭಟ್, ಮಂಗಳೂರಿನ ಲೆಕ್ಕಪರಿಶೋಧಕರಾದ ಎಸ್.ಎಸ್. ನಾಯಕ್ ಭಾಗವಹಿಸಲಿದ್ದಾರೆ.

ಸಂಜೆ ಗಂಟೆ 5.00ರಿಂದ ‘ಮಹಿಷಮರ್ದಿನಿ’ ಯಕ್ಷಗಾನ ಬಯಲಾಟ ನಡೆಯಲಿದೆ. ಕಲಾವಿದರಾಗಿ ಕುರಿಯ ಗಣಪತಿ ಶಾಸ್ತ್ರಿ, ಕುದ್ರೆಕೂಡ್ಲು ರಾಮಮೂರ್ತಿ, ಆಡೂರು ಲಕ್ಷ್ಮೀನಾರಾಯಣ ಭಟ್, ವೇದವ್ಯಾಸ ರಾವ್, ಎಂ.ಕೆ. ರಮೇಶ್ ಆಚಾರ್ಯ, ಸತ್ಯಾನಂದ ರಾವ್ ಪೇಜಾವರ, ಜಗದಾಭಿರಾಮ ಪಡುಬಿದ್ರೆ, ರಾಧಾಕೃಷ್ಣ ನಾವಡ ಮಧೂರು, ದೀಪಕ್ ರಾವ್ ಪೇಜಾವರ, ಅಕ್ಷಯ್ ಕುಮಾರ್ ಮಾರ್ನಾಡ್, ಬಾಲಕೃಷ್ಣ ಮಣಿಯಾಣಿ, ಸುದರ್ಶನ ಸೂರಿಂಜೆ, ಸಂತೋಷ್ ಕುಮಾರ್ ಕರಂಬಾರ್, ರಘುರಾಮ ಕಾವೂರು, ಪ್ರಸಾದ ಗೌಡ ಸವಣೂರು ಮೊದಲಾದವರು ರಂಗವನ್ನು ಸಾಕ್ಷಾತ್ಕರಿಸಲಿದ್ದಾರೆ.

ವಿಶ್ವವಿದ್ಯಾಲಯ ಕಾಲೇಜು ಮಂಗಳೂರು, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ದ.ಕ.ಜಿಲ್ಲೆ ಮಂಗಳೂರು ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.

  • ಹರೀಶ್ ಕೊಡೆತ್ತೂರು
error: Content is protected !!
Share This