30-04-1983 ನನಗೆ ಜೀವನದಲ್ಲಿಯೇ ಮರೆಯಲಾರದ ದಿನ.

ಅಂದು ನಮ್ಮ ಮನೆತನದ ಹಿರಿಯರಾದ ಶ್ರೇಷ್ಠ ಯಕ್ಷಗಾನ ಕಲಾವಿದರಾದ

ಶ್ರೀ ಅಣ್ಣುಹಿತ್ತಲ ಸದಾನಂದ ಹೆಗಡೆ ಅವರ ಜನ್ಮ ಶತಮಾನೋತ್ಸವ ಆಚರಿಸಿದ ದಿನ

ಮನೆತನದ ಹಿರಿಯರು, ಕಿರಿಯರು, ಅಳಿಯಂದಿರು ,ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಎಲ್ಲರೂ ಸೇರಿ ಸಡಗರ ಸಂತಸದಲ್ಲಿ ಸಂಭ್ರಮಿಸಿದ ದಿನ.
( ಇವರ ಒಟ್ಟೂ ಸಂಖ್ಯೆಯೇ ನೂರಕ್ಕೂ ಹೆಚ್ಚು.)

ಸದಾನಂದ ಹೆಗಡೆಯವರ ಮಕ್ಕಳಾದ ಶಂಭು, ಗಣೇಶ, ರಾಮಪ್ಪ, ಶಿವರಾಮ ಇವರ ನೇತೃತ್ವದಲ್ಲಿ ನಡೆದ ಸವಿ ನೆನಪಿನ ದಿನ. ಹಲವು ವರ್ಷಗಳ ಕಾಲದ ನಂತರ ಅಣ್ಣುಹಿತ್ತಲ ಅಂಗಳದಲ್ಲಿ ಪುನಃ ಯಕ್ಷಗಾನದ ಚಂಡೆ ಮದ್ದಳೆ ತಾಳಗಳ ಅಬ್ಬರದ ರಿಂಗಣ ಮಾರ್ದನಿಸಿದ ದಿನ. ರಾಷ್ಟ್ರ ಪ್ರಶಸ್ತಿ ವಿಜೇತ ಕೆರೆಮನೆ ಶಿವರಾಮ ಹೆಗಡೆ ಅವರು ತಮ್ಮ ಕಲಾಗುರು ಸದಾನಂದ ಹೆಗಡೆ ಅವರನ್ನು ಸ್ಮರಿಸಿ ಗುರು ಗೌರವ ಸಲ್ಲಿಸಿ ನಮಿಸಿದ ದಿನ.

74 ರ ಹರೆಯದ ಕೆರೆಮನೆ ಶಿವರಾಮ ಹೆಗಡೆ ಅವರು ಗುರುಗಳ ನೆನಪಿಗಾಗಿ “ಕರ್ಣ ಪರ್ವ” ದಲ್ಲಿ ವೃಷಸೇನನನ್ನು ಯುದ್ಧಕ್ಕೆ ಕಳುಹಿಸಿ ಕೊಡುವವರೆಗೆ ಕೌರವನ ಪಾತ್ರವನ್ನು ನಿರ್ವಹಿಸಿ, ಯಕ್ಷ ದೇವತೆಯ ಮುಂದೆ ಕಟ್ಟಿದ ಗಜ್ಜೆಯನ್ನ ಕೊನೆಯದಾಗಿ ಬಿಚ್ಚಿಟ್ಟ ದಿನ. (ಅದೇ ಅವರ ಕೊನೆಯ ಪಾತ್ರವಂತೆ)

ಕೆರೆಮನೆ ಶಂಭು ಹೆಗಡೆಯವರು , “ಶ್ರೀ ಇಡಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ” ಇದಕ್ಕೆ ದೊರೆತ ಪ್ರಥಮ ಗೌರವ “ಸದಾನಂದ ಪ್ರಶಸ್ತಿ” ಸ್ವೀಕರಿಸಿದ ದಿನ. ಕೆರೆಮನೆಯಲ್ಲೂ ಆದಿನ ಸಂಭ್ರಮದ ವಾತಾವರಣ ಇತ್ತು. ಯಾಕೆಂದರೆ ದಿವಂಗತ ಗಜಾನನ ಹೆಗಡೆ ಅವರ ಮಗಳಾದ ಅಂಬಿಕಾ ಅವಳ ಮದುವೆ ಶಾಂತಾರಾಮ ಭಟ್ಟ ,ಹಾಸಣಗಿ (ಈಗ ಹುಬ್ಬಳ್ಳಿ) ಅವರಿಗೆ ಶಂಭು ಹೆಗಡೆ ಅವರೇ ಧಾರೆ ಎರೆದು ನೇತೃತ್ವ ವಹಿಸಿದ ಎರಡನೇ ದಿನ.

ಪ್ರಸಂಗ – ಕರ್ಣಾರ್ಜುನ ಕಾಳಗ

ಭಾಗವತರು – ಶ್ರೀ ನೆಬ್ಬೂರು ನಾರಾಯಣ ಹೆಗಡೆ,
ಮದ್ದಳೆ – ಶ್ರೀ ಪ್ರಭಾಕರ ಭಂಡಾರಿ, ಕರ್ಕಿ
ಚಂಡೆ – ಶ್ರೀ ಸತ್ಯನಾರಾಯಣ ಭಂಡಾರಿ, ಕರ್ಕಿ .
ಕೌರವ – ಶ್ರೀ ಶಿವರಾಮ ಹೆಗಡೆ, ಕೆರೆಮನೆ, (ಮೊದಲು)
ಕೌರವ– ಶ್ರೀ ನರಸಿಂಹ ಭಟ್, ಯಲ್ಲಾಪುರ (ಎರಡನೇ)
ಅರ್ಜುನ – ಶ್ರೀ ಜಂಬೂರ ರಾಮಚಂದ್ರ ಶಾನುಭೋಗ,
ಶಲ್ಯ – ಶ್ರೀ ಮಹಾಬಲ ಹೆಗಡೆ, ಕೆರೆಮನೆ,
ಕರ್ಣ – ಶ್ರೀ ಶಂಭು ಹೆಗಡೆ, ಕೆರೆಮನೆ,
ಕೃಷ್ಣ – ಶ್ರೀ ಎಂ. ಎ. ಹೆಗಡೆ, ಸಿದ್ದಾಪುರ,
ವೃಷಕೇತು – ಶ್ರೀ ನಾಗಪ್ಪ ಗೌಡ, ಗುಣವಂತೆ,
ಭೀಮ – ಶ್ರೀ ಶಿವಾನಂದ ಹೆಗಡೆ, ಕೆರೆಮನೆ,
ಬ್ರಾಹ್ಮಣ – ಶ್ರೀ ಕುಂಜಾಲು ರಾಮಕೃಷ್ಣ ನಾಯಕ.
ಮುಂದಿನ ಪ್ರಸಂಗ, ಚಂದ್ರಾವಳಿ ವಿಲಾಸದಲ್ಲಿ ಕೃಷ್ಣ ಯಾಜಿ, ಬಳ್ಕೂರು
ಇವರು ಕೃಷ್ಣನ ಪಾತ್ರ ವಹಿಸಿದ್ದರು. ಉಳಿದವರ ಹೆಸರು ನೆನಪಿಗೆ ಬರುವುದಿಲ್ಲ.

ವೇದಿಕೆ ಮೇಲಿದ್ದ ಊರ ಪ್ರಮುಖರಾದ ಶ್ರೀ ಪದ್ಮಯ್ಯ ಮಂಜು ಗೌಡ ಇವರು ನಮ್ಮ ಊರಲ್ಲಿ ಮಾಧ್ಯಮಿಕ ಶಾಲೆ ಇಲ್ಲದ ಕಾಲದಲ್ಲಿ ಪ್ರತಿ ದಿನವೂ ಬರೀಗಾಲಿನಲ್ಲಿ ಮನೆಯಿಂದ ಹೊರಟು ಶರಾವತಿ ನದಿ ತಟದ ವರೆಗೆ ಬಂದು ದೋಣಿಯಲ್ಲಿ ದಾಟಿ ಹೊನ್ನಾವರದ ಸೈಂಟ್ ಥಾಮಸ್ ಹೈಸ್ಕೂಲು ನಂತರ ಮುಂದೆ ಕಾಲೇಜ್ ಅಭ್ಯಾಸ ಮುಗಿಸಿ ( ದಿನವೂ ಒಟ್ಟೂ ಸುಮಾರು ಹದಿನೈದು ಕಿಲೋಮೀಟರ್ ನಡಿಗೆ) 1968 ರಲ್ಲಿ ಬಿ. ಎಸ್. ಸಿ ಪದವಿ ಪಡೆದ ಆ ಸಮಾಜದ ಪ್ರಥಮ ಪದವೀಧರರು. ಹೊನ್ನಾವರದ ಪಿ ಎಲ್ ಡಿ ಬ್ಯಾಂಕ್ ನಲ್ಲಿ 33 ವರ್ಷ ಸೇವೆ ಸಲ್ಲಿಸಿ, ಈಗಲೂ ಸಾಧ್ಯವಾದ ಸಮಾಜ ಮುಖಿ ಸೇವೆಸಲ್ಲಿಸುತ್ತಿರುವ , ಮೃದು ಭಾಷಿ,ಎಲ್ಲಾ ಸಮುದಾಯದವರಿಂದ ಲೂ ಪ್ರೀತಿ ಗೌರವ ಪಡೆದ ವ್ಯಕ್ತಿ.

ಇನ್ನೊಬ್ಬರು ನರಸ ಗೌಡ ಈಗ ನಮ್ಮೊಂದಿಗೆ ಇಲ್ಲ, ಅವರು ಸಮಾಜ ಸುಧಾರಣೆಗೆ ಬಹಳ ಮಹತ್ವ ಕೊಟ್ಟವರು, ಆಕಾಲದಲ್ಲಿ ನಾನೂ ಸೇರಿ ಯುವಕರೆಲ್ಲ ಕೂಡಿ ಕಟ್ಟಿದ ಊರಿನಲ್ಲಿ ಕಳ್ಳ ಭಟ್ಟಿ ದಂಧೆ, ಪಾನ ನಿಷೇಧ ತಡೆಯುವ ತಂಡದ ಪ್ರಮುಖರಾಗಿದ್ದರು. ಇನ್ನೂ ವಿಶೇಷ ಎಂದರೆ ಶ್ರೀ ಶ್ರೀಧರ ಭಟ್ಟ, ಆಣೆಮೆಟ್ಲು ಇವರ ನೇತೃತ್ವದಲ್ಲಿ ಇದ್ದ ಚಿದಾನಂದೇಶ್ವರ ಯಕ್ಷಗಾನ ಮಂಡಳಿ, ಹೆಬ್ಬೈಲು, ಇದರ ಮುಖ್ಯ ಸ್ತ್ರೀ ವೇಷಧಾರಿ, ನಾನು ಅವರ ರತಿ, ವಿದುನ್ಮತಿ ಪಾತ್ರ ನೋಡಿ ಸಂತೋಷ ಪಟ್ಟವನೇ. ( ಈ ಮೇಳದ ಕುರಿತು ಮುಂದೆ ಬರೆಯುತ್ತೇನೆ)

ಉಳಿದ ಮುಖ್ಯ ಅತಿಥಿಗಳಾಗಿ ಬಂದಿದ್ದ ಡಾ. ಪದ್ಮನಾಭಯ್ಯ, ಹೈಗುಂದ ಹಾಗೂ ವಿದ್ವಾನ್ ರಾ. ಭ. ಹಾಸಣಗಿ, ಮಂಚಿಕೇರಿ ಪರಿಚಯವನ್ನೂ ನನ್ನ ಹಿಂದಿನ ಬರಹದಲ್ಲಿ ಉಲ್ಲೇಖಿಸಿದ್ದೇನೆ. ತೆಗೆದ ಹಲವು ಫೋಟೋಗಳಲ್ಲಿ ಕೆಲವಷ್ಟೇ ಫೋಟೋ ದೊರಕಿದೆ..

1883 ರಲ್ಲಿ ಜನಿಸಿದ ಸದಾನಂದ ಹೆಗಡೆಯವರು ಕುಮಟಾ ಗಿಬ್ಸ್ ಹೈಸ್ಕೂಲಿನಲ್ಲಿ ಓದಿ1900 ರಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಹಡಗಿನಲ್ಲಿ ಮುಂಬಯಿಗೆ ಹೋಗಿ ಮುಗಿಸಿ ಬಂದಿದ್ದರಂತೆ. ಆಗಿನ ಬ್ರಿಟಿಷರ ಆಳ್ವಿಕೆಯಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾದವರಿಗೆ ಆಡಳಿತದಲ್ಲಿ ದೊಡ್ಡ ಹುದ್ದೆಯೇ ದೊರಕುತ್ತಿತಂತೆ. ಆದರೆ
ರಕ್ತಗತವಾಗಿ ಬಂದ ಯಕ್ಷಗಾನ ಕಲೆ ಅವರನ್ನು ಕೈಬೀಸಿ ಕರೆಯುತ್ತ ಇತ್ತು ಅಂತ ಕಾಣಿಸುತ್ತದೆ. ಅದನ್ನೇ ವೃತ್ತಿಯಾಗಿ ಸ್ವೀಕರಿಸಿದರು. ಆದರೆ ಮುಂದೆ ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬೇಕು ಎಂಬ ಮನಸ್ಸಿದ್ದರೂ ವಿಧಿ ಅವರನ್ನೂ ಅ ಕಾಲದಲ್ಲಿ, 57 ನೇ ವಯಸ್ಸಿನಲ್ಲಿಯೇ ಕಸಿದು ಕೊಂಡಿತು. ಇವರ ಮಡದಿ ಮಾದೇವಿ ನಮಗೆಲ್ಲಾ ಅಮ್ಮಮ್ಮ, ಗಜನಿಮಠದ ಪ್ರಖ್ಯಾತ ವೈದಿಕರಾದ ಶಂಭು ಭಟ್ಟರ ಸಹೋದರಿ. ಇವರ ತಮ್ಮ ತಿಮ್ಮಣ್ಣ ಹೆಗಡೆ ಒಳ್ಳೆಯ ವೇಷಧಾರಿಗಳಾಗಿದ್ದರು.

ಫೋಟೋ ಕೃಪೆ ಶ್ರೀ ಕೆ. ಜಿ. ಹೆಗಡೆ, ಇವರ ಮೊಮ್ಮೊಗನಿಂದ, ನನ್ನಿಂದ ಒಂದು ವರ್ಷ ಹಿರಿಯವ. ಸಹಪಾಠಿ, ಏಕಪಾಠೀ, ಅಂದರೆ ನಾನು ರಾತ್ರಿಯೆಲ್ಲಾ ಚಿಮಣಿ ಎಣ್ಣೆ ದೀಪದಲ್ಲಿ ತಡ ರಾತ್ರಿಯವರೆಗೂ ಓದಿದರೆ ಪಕ್ಕದಲ್ಲಿ ಎಂಟು ಘಂಟೆಗೆ ಮುಸುಕು ಹಾಕಿ ಮಲಗಿದ ಈ ಮಹಾಶಯನಿಗೆ ಪರೀಕ್ಷೆಯಲ್ಲಿ 90 ರ ಮೇಲೆಯೇ ಮಾರ್ಕ್ಸ ಕಟ್ಟಿಟ್ಟ ಬುತ್ತಿ, ನನಗೆ ಮೂವತ್ತೈದು ಬಿದ್ದರೆ ಹಿರಿಯರ ಪುಣ್ಯ ಆಗಿತ್ತು. ಈ ಎಪ್ಪತ್ತೊಂದರ ವಯಸ್ಸಿನಲ್ಲಿಯೂ ಗಣಿತ, ವಿಜ್ಞಾನ ಕಲಿಸುವ ಹುಮ್ಮಸ್ಸು ಒಂದಿಷ್ಟೂ ಕಡಿಮೆ ಆಗಲಿಲ್ಲ. ಇವನ ವಿಶೇಷತೆ, ಕ್ರಿಯಾ ಶೀಲತೆ ಸಾರ್ವಜನಿಕವಾಗಿ ಗೋಚರಿಸುವುದು ನಮ್ಮ ಕೆರೆಮನೆ ಶಿವಾನಂದನ ನೇತೃತ್ವದ ವಾರ್ಷಿಕ ನಾಟ್ಯೋತ್ಸವ ಸಂದರ್ಭದಲ್ಲಿ. ಮೂರು ತಿಂಗಳ ಮೊದಲಿನಿಂದ ಸುರು ಆಗಿ ಉತ್ಸವ ಮುಗಿದು ಹದಿನೈದು ದಿನಗಳ ವರೆಗೆ ಶಿವಾನಂದ ಒಂದನೇ ವೇಷಧಾರಿ ಆದರೆ ಇವನೇ ಎರಡನೇ ಪಾತ್ರಧಾರಿ. ಆ ಮೇಲೆ
ರಾಜೇಶ್ವರಿ. ಪರೋಪಕಾರಿ ಮನೋಭಾವ.

ಕಾರ್ಯಕ್ರಮಕ್ಕೆ ಮುಂದಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿದ ಇನ್ನೊಬ್ಬ ನಮ್ಮ ಕುಟುಂಬದವನೇ ಆಗಿ ಬೆಳೆದ ಕೆ. ಜಿ. ಭಟ್ಟ, ಕೊಕ್ಕೇಶ್ವರ, ಚಿಕ್ಕಂದಿನಲ್ಲಿಯೇ ತಾಯಿ ಕಳೆದು ಕೊಂಡಿದ್ದ,ಈತ ಅಣ್ಣುಹಿತ್ತಲಿನಲ್ಲಿಯೆ ಬೆಳೆದ, ಹಾಗಾಗಿ ನಮಗೆಲ್ಲಾ ಒಡಹುಟ್ಟಿದ ಅಣ್ಣನಂತಿದ್ದ, ಆ ದಿನ ಅತ್ಯಂತ ಉತ್ಸಾಹ ದಿಂದ ಓಡಾಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣನಾದ. ದೀರ್ಘ ಕಾಲ ಬೈಂದೂರಿನಲ್ಲಿ ಶಿಕ್ಷಕ ವೃತ್ತಿ ಜೀವನ ಮುಗಿಸಿ ಅಪ್ಸರಕೊಂಡ ಮಠ ಹತ್ತಿರ ವಾಸ ಇದ್ದರು. ಒಳ್ಳೇ ಶಿಕ್ಷಕ, ನಾಟಕ ಕಲಾವಿದ, ಸಂಗೀತ ಯಕ್ಷಗಾನ ಪ್ರಿಯ ನಾಗಿದ್ದ. ಕಳೆದ ವರ್ಷ ನಮ್ಮನ್ನಗಲಿದ. ಲೇಖನ ಬಹಳ ದೀರ್ಘ ಆಯಿತು.

ಮರೆಯಲಾರದ ಆ ದಿನವನ್ನ, ನನ್ನ ಹಿನ್ನೆಲೆಯನ್ನು ಹೀಗೆ ಹಂಚಿಕೊಂಡು ನನ್ನಷ್ಟಕ್ಕೆ ನಾನೇ ಸಂಭ್ರಮಿಸುತ್ತಿದ್ದೆನೆ.

ವಂದನೆಗಳು.
ಜಿ. ಎಸ್. ಹೆಗಡೆ, “ಸಪ್ತಕ” ಬೆಂಗಳೂರು.

error: Content is protected !!
Share This