ಶ್ರೀ ಶ್ರೀಧರ ಷಡಕ್ಷರಿ, ಕತಗಾಲ್, ಕುಮಟಾ (71) – ಯಕ್ಷಗಾನ

ತಮ್ಮ ಇಪ್ಪತ್ತನೇ ವಯಸ್ಸಿನಿಂದಲೇ ಯಕ್ಷಗಾನ ಕಾಶಿ ಗುಂಡಬಾಳ ಮೇಳದಲ್ಲಿ ವೇಷ ಹಾಕಲು ಸುರು ಮಾಡಿದ ಇವರು ಮುಂದೆ ಇಡಗುಂಜಿ, ಅಮೃತೇಶ್ವರಿ, ಕರ್ಕಿ ಮೇಳ ಎಲ್ಲದರಲ್ಲಿಯೂ ವಿಶೇಷವಾಗಿ ಸ್ತ್ರೀ ಪಾತ್ರ ನಿರ್ವಹಿಸಿ ತುಂಬಾ ಖ್ಯಾತಿ ಗಳಿಸಿದರು. ಅವಶ್ಯಕತೆ ಬಿದ್ದಾಗ ಹಾಸ್ಯ, ಪುಂಡು ವೇಷಗಳಲ್ಲಿಯೂ ಮೇಳಕ್ಕೆ ಒದಗಿಬಂದ ಕಲಾವಿದರು.
ಶಿವರಾಮ ಕಾರಂತರ ಬ್ಯಾಲೆಯಲ್ಲಿ ಅಭ್ಯಾಸ, ಪ್ರಾಚಾರ್ಯ ನಾರಾಯಣ ಉಪ್ಪೂರರಲ್ಲಿ ಭಾಗವತಿಕೆ ಅಭ್ಯಾಸ ಮಾಡಿ ಯಕ್ಷಗಾನದ ಸವ್ಯಸಾಚಿಯಾಗಿ ಕಲಾಭಿಮಾನಿಗಳ ಕಣ್ಮಣಿ ಆಗಿ ಮೆರೆಯುತ್ತಿದ್ದ ಇವರಿಗೆ ಧುತ್ತೆಂದು ಉದರಕ್ಕೆ ಸಂಭಂದಿಸಿದ ವಿರಳ ಕಾಯಿಲೆಯೊಂದು ಕಾಣಿಸಿಕೊಂಡು ,ಹಲವಾರು ವರ್ಷಗಳ ಕಾಲ ಕಲಾಲೋಕದಿಂದ ದೂರ ಇರುವಂತೆ ಮಾಡಿತು.


ಅಂಥ ಸಮಯದಲ್ಲಿಯೂ ಅತ್ಯಂತ ಸ್ವಾಭಿಮಾನಿಯಾದ ಇವರ ಚಿಂತೆ- ಚಿಂತನೆ ಎಲ್ಲವೂ ಎಂದೆಂದಿಗೂ ಯಕ್ಷರಂಗದ ಕುರಿತಾಗಿಯೇ ಇತ್ತು , ಅವರನ್ನ ಭೇಟಿ ಆದವರೆಲ್ಲವರೂ ಕೆಲವೇ ಕ್ಷಣಗಳಲ್ಲಿ ಅವರ ವ್ಯಕ್ತಿತ್ವದ ದರ್ಶನ ಆಗುತ್ತಿತ್ತು. ನನಗೂ ಅದೇ ಅನುಭವ ಆಯಿತು.
ಬೆಂಗಳೂರಿನಿಂದ ಊರಿಗೆ ಹೋದಾಗ ನಿಶ್ಚಯವಾದ ಸಂಗೀತ ಕಾರ್ಯಕ್ರಮ ನಿಂತು ಹೋದಾಗ ಇವರನ್ನ ಭೇಟಿಆಗಲೇಬೇಕೆಂಬ ಹಠಕ್ಕೆ ಬಿದ್ದು ಸುರಿಯುತ್ತಿರುವ ಜಡಿಮಳೆ, ಪ್ರಯಾಣಿಸುತ್ತಿದ್ದ ಕಾರನ್ನೇ ಅಲುಗಾಡಿಸುತ್ತಿದ್ದ ಬಿರುಗಾಳಿ ಲೆಕ್ಕಿಸದೇ ಕುಮಟಾ – ಶಿರಸಿ ರಸ್ತೆಯಲ್ಲಿರುವ ಇವರ ಆನೆಗೊಂದಿ ಸ್ವಗ್ರಹಕ್ಕೆ ಹೋಗಿ ಭೇಟಿಆಗಿ ತಾಸುಗಟ್ಟಲೇ ಹಳೆಯ ನೆನಪುಗಳನ್ನೆಲ್ಲ ಕೆದಕುತ್ತಾ ಮನೆಯ ಗೋಡೆಯ ತುಂಬೆಲ್ಲಾ ನೇತಾಡುತ್ತಿದ್ದ ಫೋಟೋಗಳನ್ನೆಲ್ಲ ದಿಟ್ಟಿಸುತ್ತಿದ್ದೆ.

ಕೆರೆಮನೆ ಶಂಭು ಹೆಗಡೆ, ನೆಬ್ಬೂರು ನಾರಾಯಣ ಭಾಗವತರ ಫೋಟೋಗಳಂತೂ ದೇವರ ಪೀಠದ ಹತ್ತಿರವೇ ರಾರಾಜಿಸುತ್ತಿತ್ತು. ಹಲವಾರು ಸಂಘ ಸಂಸ್ಥೆಗಳು ನೀಡಿದ ಸನ್ಮಾನ ಪತ್ರಗಳನ್ನೆಲ್ಲಾ ನೇವರಿಸುತ್ತಾ ಅದನ್ನ ಕೊಟ್ಟವರನ್ನೆಲ್ಲ ನೆನಪಿಸುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದನ್ನ ನೋಡಿದಾಗ ಎಂತಹ ಹೃದಯವಂತ ವ್ಯಕ್ತಿ ಇವರು ಅಂತಾ ಅನಿಸಿತು.
ಒಳಗಿನಿಂದ ಹಳೆಯ ಆಲ್ಬಮ್ ಎಲ್ಲವನ್ನೂ ತಂದು ರಾಶಿ ಹಾಕಿದಾಗ ಒಂದೊಂದೇ ನೋಡುತ್ತಾ ಹೋದಂತೆ ಕೆರೆಮನೆ ಮೇಳದಲ್ಲಿದ್ದಾಗ ವಿದೇಶಯಾತ್ರೆ, ಮಂಟಪ ಉಪಾಧ್ಯಾಯರ ಒಡನಾಟ ಅವರ ಕುಟುಂಬದ ಆಪ್ತ ಸ್ನೇಹಿತ ಎಂದು ಹೇಳುವ ಹೆಮ್ಮೆ,ಏ ಪಿ ಪಾಠಕರ ಅಭಿಮಾನಿ ಇದೆಲ್ಲದರ ಪ್ರತಿಬಿಂಬ ಅನಿಸಿತು.

ಯಕ್ಷಗಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅನೇಕ ಫೋಟೋಗಳು, ಪತ್ರಿಕಾ ಬರಹಗಳು (ಅಲ್ಲಿಯ ಹವಾಮಾನಕ್ಕೆ ಹಾಳಾಗಿದ್ದರೂ) ಫೋಟೋ ಕ್ಲಿಕ್ಕಿಸಿಕೊಂಡು ಇವರ ಧರ್ಮಪತ್ನಿ ನೇತ್ರಾವತಿ ಅವರ ಆತಿಥ್ಯ ಸ್ವೀಕರಿಸಿ ಬಂದೆ.


ಆಗಲೇ ನಿರ್ಧಾರ ಮಾಡಿದ್ದೆ. ಅದು ಕಾರ್ಯಗತ ಆಗುತ್ತಿದೆ ಎಂಬ ಸಂತೋಷದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇನ್ನೊಂದು ಖುಷಿಯ ವಿಚಾರ ಎಂದರೆ ಇವರ ಮನೆಯ ಪಕ್ಕದಲ್ಲೇ ಇರುವ ನನ್ನ ಕಾಲೇಜ ಸಹಪಾಠಿ ವಿವೇಕ ಎಂ ಜಾಲಿಸತ್ಗಿ (ಹೆಮ್ಮೆಯ ದೊಡ್ಡ ಮಾದರಿ ಕೃಷಿಕ) ಐವತ್ತು ವರ್ಷಗಳ ನಂತರ ಭೇಟಿಯಾಗಿ ಕಾಲೇಜುದಿನಗಳ ನೆನಪನ್ನು ಹಂಚಿಕೊಳ್ಳುವ ಸುಯೋಗವೂ ದೊರೆಯಿತು.
ಇವರನ್ನು ಆಶ್ವಾಸನ- 2024 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ವಿವರ ಮುಂದೆ ತಿಳಿಸುವೆ.