ನಮ್ಮನ್ನಗಲಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ. ಎ. ಹೆಗಡೆಯವರ ಕುರಿತು ಶ್ರದ್ಧಾಂಜಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ. ಎ. ಹೆಗಡೆಯವರನ್ನು ನಾವಿಂದು ಮಹಾಮಾರಿಯ ರೂಪದಲ್ಲಿ ಕಳೆದುಕೊಂದಿದ್ದೇವೆ. ಪ್ರೊ. ಎಂ. ಎ. ಹೆಗಡೆಯವರು ನಾಡಿನಾದ್ಯಂತ ಪ್ರಸಿದ್ಧರಾಗಿರುವದು ಅವರು ಯಕ್ಷಗಾನ ರಂಗದ ಸಮರ್ಥ ಅರ್ಥಧಾರಿ ಮತ್ತು ಪ್ರಸಂಗ ಕರ್ತರು ಎನ್ನುವದಾಗಿ. ವಾಸ್ತವವಾಗಿ ಇವರ ವಿದ್ವತ್ತಿನ ಅಳತೆ ಆಗಬೇಕಾಗಿರುವದು ಈ ರಂಗವನ್ನು ದಾಟಿ ಅವರಲ್ಲಿರುವ ಘನ ಪಾಂಡಿತ್ಯವನ್ನು ಸೂರೆಗೊಳ್ಳುವದರಮೂಲಕ. ತನ್ಮೂಲಕ ಕನ್ನಡ ಸಾಹಿತ್ಯಕ್ಕೆ ಮತ್ತು ಭಾರತೀಯ ದರ್ಶನ ಶಾಸ್ತ್ರಗಳಿಗೆ ಹೊಸ ಹರಿವು ಸಿಕ್ಕಂತಾಗುತ್ತದೆ.

ಯಕ್ಷಗಾನದ ಮೇರು ಕಲಾವಿದರಾದ ಕೆರಮನೆ ಶಂಭುಹೆಗಡೆಯವರ ಕೊನೆಯ ವೇಷ ಸೀತಾವಿಯೋಗದ ರಾಮನ ಪಾತ್ರದ ಕುರಿತು ಯಕ್ಷಗಾನಾಸಕ್ತರಿಗೆ ಚನ್ನಾಗಿ ಅರಿವಿದೆ. ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರ ರಾಮನಿರ್ಯಾಣ ಮತ್ತು ಸೀತಾವಿಯೋಗದವನ್ನು ಬರೆದ ಕವಿಗಳು ಬೇರೆ ಬೇರೆ ಎನ್ನುವದು ಹೆಚ್ಚಿನಕಲಾಸಕ್ತರಿಗೆ ಅರಿವಿಲ್ಲ. ರಾಮನಿರ್ಯಾಣ ರಾಮನ ವ್ಯಕ್ತಿತ್ವಕ್ಕೆ ಸೀತಾವಿಯೋಗದ ರಾಮನ ಪಾತ್ರ ಹಾಳತವಾಗಿ ಒಪ್ಪಿತವಾಗಿ ರಚಿಸಿದ ಪ್ರಸಂಗಕರ್ತ ಪ್ರೊ. ಎಂ. ಎ. ಹೆಗಡೆ ಎನ್ನುವದು ಮಾತ್ರ ಕೆಲವೇ ಯಕ್ಷಗಾನ ಪ್ರಿಯರಿಗೆ ತಿಳಿದ ಸಂಗತಿಯಾಗಿದೆ. ಸೀತಾವಿಯೋಗ ಕನ್ನಡ ಸಾಹಿತ್ಯದಲ್ಲಿಯೂ ಒಂದು ಮಹತ್ವವಾದ ಕೃತಿಯಾಗಿ ಉಳಿಯಬಲ್ಲ ಎಲ್ಲ ಲಕ್ಷಣಗಳನ್ನೂ ಒಳಗೊಂಡಿದೆ. ವಾಲ್ಮೀಕಿ ರಾಮಾಯಣ, ಕಾಳಿದಾಸನ ರಘುವಂಶ, ಭವಭೂತಿಯ ಉತ್ತರ ರಾಮ ಚರಿತ್ರೆಯ ಹೃದಯಸ್ಪರ್ಶಿ ಭಾಗ ಮತ್ತು ಭಾವಗಳನ್ನು ಒಂದೆಡೆ ರಸಪಾಕವನ್ನಾಗಿಸಿ ಕೊಟ್ಟ ಪ್ರಸಂಗಕರ್ತ ಪ್ರೊ. ಎಂ. ಎ. ಹೆಗಡೆಯವರು ಎಂದರೆ ಅದು ಅವರ ಸದ್ಯೋಜಾತ ಪ್ರತಿಭೆಯ ಒಂದು ಮಗ್ಗಲನ್ನು ಮಾತ್ರ. ಹೆಚ್ಚಿನವರಿಗೆ ಪ್ರಸಂಗಕರ್ತ ಹೆಗಡೆಯವರಿಗಿಂತ ಇಡಗುಂಜಿ ಮೇಳದಲ್ಲಿ ಅತಿಥಿ ಕಲಾವಿದರಾಗಿ ನಂತರ ತಾಳಮದ್ದಳೆಯಲ್ಲಿ ಗಂಭೀರವಾದ ಪಾತ್ರಗಳಿಗೆ ಜೀವ ತುಂಬುವ ಅರ್ಥಧಾರಿಯಾಗಿ ಅವರನ್ನು ನೋಡಿಮಾತ್ರ ಗೊತ್ತು. ಆದರೆ ಅಲಂಕಾರಶಾಸ್ತ್ರ, ವೇದಾಂತ, ಭಾರತೀಯ ತತ್ವದರ್ಶನ, ಭಕ್ತಿರಸ, ಅಂಗ್ಲ ಭಾಷೆಯ ಸಮರ್ಥ ಅನುವಾದಕ ಈ ಮೊದಲಾದ ವಿಷಯಗಳ ಕುರಿತು ಕನ್ನಡ ಸಾರಸ್ವತಲೋಕಕ್ಕೆ ಅನೇಕ ಗ್ರಂಥಗಳನ್ನು ಬಳುವಳಿಯಾಗಿ ಕೊಟ್ಟಂತಹ ವಿದ್ವಾಂಸರಾದ ಹೆಗಡೆಯವರು ಸಾಹಿತ್ಯ ಮತ್ತು ವಿದ್ವತವಲಯಗಳಲ್ಲೆಲ್ಲ ಅಪರಿಚಿತರಾಗಿಯೇ ಇದು ತನಕವೂ ಉಳಿದಿದ್ದಾರೆ.

ನಮ್ಮ ಅನೇಕ ಪ್ರಸಿದ್ಧ ಕಲಾವಿದರಬದುಕು ಪ್ರಾರಂಭವಾಗುವದೇ ಅವರ ಕಡುಬಡತನದ ಹಿನ್ನಲೆಯಿಂದ. ಆ ದೃಷ್ಠಿಯಿಂದ ನೋಡಿದರೆ ಮಹಾಬಲೇಶ್ವರ ಹೆಗಡೆಯವರ ಕುಟುಂಬ ಅನುಕೂಲದ ಹಿನ್ನೆಲೆಯಿಂದ ಬಂದವರೆಂದೇ ಹೇಳಬೇಕು. ಸಿರಿಯ ಗರ ಹೊಡೆಯದಿದ್ದರೂ ಮದ್ಯಮ ವರ್ಗಕ್ಕೆ ಸೇರಿದ ಮತ್ತು ಊರಿನಲ್ಲಿ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದು. ತಂದೆ ಅಣ್ಣಪ್ಪ ಹೆಗಡೆ ತಾಯಿ ಕಾಮಾಕ್ಷಿಯ ಆರು ಗಂಡು ಮತ್ತು ಎರಡು ಹೆಣ್ಣುಮಕ್ಕಳಲ್ಲಿ ಹಿರಿಯ ಮಗ. ತಾಯಿಯ ಮನೆಯಲ್ಲಿ ಇವರ ಅಜ್ಜ ತೀರಿಹೋದ ಕಾರಣದಿಂದ ಇವರ ತಂದೆಯವರು ಮಾವನಮನೆಯಲ್ಲಿ ಇದ್ದು ಚಿಕ್ಕವರಾಗಿದ್ದ ತನ್ನ ಬಾವಂದಿರನ್ನು ಬೆಳೆಸಬೇಕಾಯಿತು. ಅವರು ಒಂದು ಹಂತಕ್ಕೆ ಬಂದು ಆಸ್ತಿ ಪಾಸ್ತಿಗಳನ್ನು ನೋಡಲು ಸಮರ್ಥರಾದಮೇಲೆ ಅವರ ಮದುವೆ ಮಾಡಿ ಸಿದ್ದಾಪುರದ ಜೋಗಿನಮನೆಯಲ್ಲಿ ಆಸ್ತಿಮಾಡಿ ಅಲ್ಲಿ ನೆಲೆಸಿದರು. ಅಜ್ಜನಮನೆಯಲ್ಲಿ ಇವರ ಮೇಲೆ ಸಾಹಿತ್ಯ ಪ್ರಭಾವ ಬೀರಿದವರು ಇವರ ಮಾವ ದಂಟಕಲ್ ಪಟೇಲರೆಂದೇ ಪ್ರಸಿದ್ಧರಾದ ಗಣಪತಿ ಹೆಗಡೆಯವರು. ಅವರು ಒಳ್ಳೆಯ ಓದುಗರಾಗಿದ್ದರು. ಅದು ಬಾಲಕ ಮಹಾಬಲೇಶ್ವರನನ್ನ ಪ್ರಭಾವಿಸಿತು. ಓದಿನ ಜೊತೆಗೆ ಜಿಜ್ಞಾಸುತನವನ್ನೂ ಬೆಳೆಸಿಕೊಂಡರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹೆಗ್ಗರಣೆಯಲ್ಲಿ ಆಯಿತು. ಆ ಕಾಲದಲ್ಲಿ ಯಾವುದನ್ನೂ ಬಡಪೆಟ್ಟಿಗೆ ಇವರು ಒಪ್ಪಿಕೊಳ್ಳುತ್ತಿರಲಿಲ್ಲವೆಂದು ಇವರ ಸಮಕಾಲೀನರು ಹೇಳುತ್ತಿರುತ್ತಾರೆ. ಹಾಗಂತ ಮಾಣಿ ಸತ್ಯಾರ್ಥಿಯಾಗಿದ್ದನೇ ಹೊರತು ವ್ಯವಸ್ಥೆಯನ್ನು ವಿರೋಧಿಸುತ್ತಿರಲಿಲ್ಲ. ಅವರ ಈ ನಿಲುವೇ ಅವರ ಇತ್ತೀಚಿನ ಕೃತಿಗಳೊಲ್ಲಂದಾದ ‘ಹಿಂದೂ ಸಂಸ್ಕಾರಗಳು’ ಪುಸ್ತಕದಲ್ಲಿ ವ್ಯಕ್ತವಾಗಿರುವದನ್ನು ಕಾಣಬಹುದು. ಷೋಢಶ ಸಂಸ್ಕಾರಗಳ ಕುರಿತು ಪ್ರಾಚಿನರ ಅಭಿಮತವನ್ನು ಮತ್ತು ಅವುಗಳ ಪ್ರಸ್ತುತಯೆನ್ನು ಆಧುನಿಕ ಹಿನ್ನೆಲೆಯಲ್ಲಿ ತೌಲನಿಕವಾಗಿ ವಿವರಿಸಲಾಗಿದೆ. ಈ ಪುಸ್ತಕ ಅನೇಕ ವೈದಿಕ ಪಂಡಿತರಿಂದ ಮಾನ್ಯತೆಗೊಳಗಾಗಿದೆ. ಮುಂದೆ ಶಿರಸಿಯ ಎಂ. ಎ. ಆರ್ಟ್ಸ್ ಕಾಲೇಜಿನಲ್ಲಿ ಸಂಸ್ಕಂತದಲ್ಲಿ ಬಿ.ಎ. ಪದವಿಯನ್ನು ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಎಂ.ಎ. ಪದವಿಯನ್ನು 1971 ಪ್ರಥಮ ಸ್ಥಾನಗಳೊಂದಿಗೆ ಪಡೆದರು. ಕೆಲಕಾಲ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಮತ್ತು ಪಿ.ಸಿ. ಜಾಬಿನ್ಸ್ ಸೈನ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ನಂತರ ಸಿದ್ದಾಪುರದ ಮಹಾತ್ಮಾ ಗಾಂಧಿ ಕಾಲೇಜಿನಲ್ಲಿ ಸಂಸ್ಕತ ಪ್ರಾಧ್ಯಾಪಕ ಮತ್ತು ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದ್ದರು.

ಸಾಹಿತ್ಯದ ಕುರಿತಾದ ಅವರ ಹರಿವಿನ ಕುರಿತು ಚಿಂತಿಸಬೇಕಾದ ಅಗತ್ಯವಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಶಂಭಾ ಜೋಶಿ, ಗೌರೀಶ ಕಾಯ್ಕಿಣಿ, ವಿ. ಡಾ. ರಂಗನಾಥ ಶರ್ಮ, ಬಿ. ಎಚ್. ಶ್ರೀಧರ ಮುಂತಾದವರ ನಂತರ ಆ ಸಾಲಿನಲ್ಲಿ ಗಣಿಸಬೇಕಾದ ಕೆಲವೇ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಸಂಸ್ಕತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಈ. ಮಲ್ಲೇಪುರಂ ವೆಂಕಟೇಶರವರಂತೂ ಸಂಸ್ಕತ ಸಾಹಿತ್ಯದ ಕನ್ನಡ ಅನುವಾದಕರರಲ್ಲಿ ರಂಗನಾಥ ಶರ್ಮ, ಡಾ. ಎಚ್. ವಿ. ನಾಗರಾಜರಾವ್ ನಂತರ ಆ ಸಾಲಿನಲ್ಲಿ ಸೇರಬಲ್ಲ ವ್ಯಕ್ತಿ ಎಂದರೆ ಎಮ್. ಎ. ಹೆಗಡೆ ಎಂದು ಹೊಗಳಿದ್ದಾರೆ. ಕನ್ನಡ ಸಾಹಿತ್ಯಲೋಕದಲ್ಲಿ ಅಲಂಕಾರದ ಮೇಲೆ ವಿಸ್ತಾರವಾದ ಚರ್ಚೆ ನಡೆದೇ ಇಲ್ಲ. ಇವರು ಬರೆದ “ಅಲಂಕಾರ ತತ್ವ” ಭಾರತೀಯ ಕಾವ್ಯಮೀಮಾಂಸೆಯ ಸಂಕ್ಷಿಪ್ತ ಪರಿಚಯಗಳೊಂದಿಗೆ ಸುಮಾರು ನಲವತ್ತೈದು ಅರ್ಥಾಲಂಕಾರಗಳ ವಿಸ್ತ್ರತ ವಿವೇಚನೆಗಳನ್ನೊಳಗೊಂಡ ಗ್ರಂಥ. ಹಳೆಗನ್ನಡ ಮತ್ತು ಹೊಸಗನ್ನಡ ಕಾವ್ಯಗಳಿಂದ ಉದಾಹರಣೆಗಳನ್ನೊಳಗೊಂಡ ಈ ಬಗೆಯ ಪುಸ್ತಕ ಕನ್ನಡದಲ್ಲಿ ಮತ್ತೊಂದಿಲ್ಲ. ಇವರು ಅಡಿಗರ ಕಾವ್ಯದಲ್ಲಿನ ಅಲಂಕಾರದ ಕುರಿತು ಬರೆದ ಲೇಖನ ಖ್ಯಾತ ವಿಮರ್ಶಕ ಎಸ್. ಆರ್. ವಿಜಯಶಂಕರವರು ಅಡಿಗರ ಕುರಿತು ಸಂಪಾದಿಸಿದ ಪುಸ್ತಕದಲ್ಲಿ ಬಂದಿದೆ. ಅಡಿಗರನ್ನು ಹೊಸ ರೀತಿಯಿಂದ ಅವಲೋಕಿಸಿದ ಈ ಲೇಖನ ಸಾಹಿತ್ಯದ ಅಡಿಗರ ಕುರಿತಾದ ಅಧ್ಯಯನಾಸಕ್ತರಿಗೆ ಸಂಗ್ರಹಯೋಗ್ಯ. ಇವರ ಇನ್ನೊಂದು ಮಹತ್ವವಾದ ಕೊಡುಗೆ ಅದ್ವೆತ ವೇದಾಂತ ಪ್ರಖಾಂಡ ಪಂಡಿತರಾದ ಮಧುಸೂದನ ಸರಸ್ವತಿಯವರನ್ನು ಕನ್ನಡಕ್ಕೆ ಪರಿಚಯಿಸಿದ್ದು. ೧೫೪೦ ರಿಂದ ೧೬೪೦ರವರೆಗೆ ಬದುಕಿದ್ದ ಈ ಸನ್ಯಾಸಿ ಅಧ್ವೆತಸಿದ್ಧಾಂತದಲ್ಲಿ ಶಂಕರಾಚಾರ್ಯರ ನಂತರದ ದೊಡ್ಡ ಹೆಸರು. ಶಂಕರರ ಮಾಯಾವಾದವನ್ನು ಖಂಡಿಸಿದ ವಿಶಿಷ್ಟಾಧ್ವೆತ, ಧ್ವೆತ ತತ್ವಗಳಿಗೆ ಸಮರ್ಪಕವಾಗಿ ಉತ್ತರನೀಡಿ ಮತ್ತೆ ಅಧ್ವೆತ ತತ್ವವನ್ನು ಸುಭದ್ರವಾಗಿ ನೆಲೆಯೂರುವಂತೆ ಮಾಡಿದ ಮತ್ತು ಧರ್ಮ ರಕ್ಷಣೆಗಾಗಿ ಇಂದಿನ ನಾಗಾ ಸಾಧುಗಳ ಪರಂಪರೆಯನ್ನು ಹುಟ್ಟುಹಾಕಿದವರೂ ಸಹ ಮಧುಸೂದನ ಸರಸ್ವತಿಯವರೇ. ಅವರ ಭಗವದ್ ಭಕ್ತಿ ರಸಾಯನಮ್, ಸಿದ್ಧಾಂತ ಬಿಂದು ಮತ್ತು ಗೀತಾ ಗೂಢಾರ್ಥ ದೀಪಿಕಾ ಗ್ರಂಥಗಳನ್ನು ಕನ್ನಡಕ್ಕೆ ಹೆಗಡೆಯವರು ಅನುವಾದಿಸಿದ್ದಾರೆ. ‘ಗೀತಾ ಗೂಡಾರ್ಥ ದೀಪಿಕಾ’ ವಂತೂ ಕನ್ನಡದ ಖ್ಯಾತ ವಿದ್ವಾಂಸರಾದ ಡಾ. ಜಿ. ಎಸ್. ಅಮೂರರಂತವರೇ ಶ್ಲಾಘಿಸಿದ್ದಾರೆ. ಶೃಂಗೇರಿಯ ಜಗದ್ಗುರುಗಳು ಈ ಗ್ರಂಥದ ಹಲವು ವಾಕ್ಯಗಳನ್ನು ವಿವರಿಸಿ ಆಶಿರ್ವದಿಸಿದ್ದಾರೆ. ಇನ್ನು ‘ಸಿದ್ಧಾಂತ ಬಿಂದು’ ಅದ್ವೆತ ವೇದಾಂತಕ್ಕೆ ಸಂಬಧಿಸಿದ ಮಹತ್ವದ ಕೃತಿ. ಈ ಕೃತಿಗೆ ಸಂಸ್ಕತ ವಿಶ್ವವಿದ್ಯಾಲಯದವರು ಅನುವಾದಕ್ಕಾಗಿ ನೀಡುವ ಎಮ್. ಹಿರಣ್ಣಯ್ಯ ಪುರಸ್ಕಾರವೂ ಇವರಿಗೆ ದೊರೆತಿದೆ. ಶಂಕರಾಚಾರ್ಯರ ಬ್ರಹ್ಮಸೂತ್ರ “ಅಥಾತೋ ಬ್ರಹ್ಮ ಜಿಜ್ಞಾಸಃ” ದಿಂದ ತತ್ವ ಸಮನ್ವಯದವರೆಗಿನ ನಾಲ್ಕುಸೂತ್ರ ಬಾಷ್ಯದ ಅನುವಾದ ಮತ್ತು ಆ ಕುರಿತು ವಿವರವಾದ ವಾಖ್ಯಾನ ನೀಡಿದ ‘ಪರಮಾನಂದ ಸುಧಾ’ ಮತ್ತೊಂದು ಅಮೂಲ್ಯವಾದ ಗ್ರಂಥ. ಈ ವ್ಯಕ್ತಿಯ ಕುರಿತು ವಿಸ್ಮಯಗೊಳ್ಳುವದು ಇಲ್ಲೆ. ವೇದಾಂತ, ಬ್ರಹ್ಮ ಸೂತ್ರದಂತಹ ಶುಷ್ಕವಂದು ಸಾಮಾನ್ಯರು ಅಂದುಕೊಳ್ಳುವ ವಸ್ತುಗಳನ್ನು ಅಲಂಕಾರಶಾಸ್ತ್ರಗಳ ಸೌಂದರ್ಯದ ಆವರಣದಲ್ಲಿ ಬರೆಯಬಲ್ಲರು. ಅಲಂಕಾರಗಳ ಕುರಿತು ಬರೆದಂತೆ ಮಹಾಕಾವ್ಯ, ಕಾಳಿದಾಸಾದಿ ಕೃತಿ, ಯಕ್ಷಗಾನದ ಪ್ರಸಂಗಗಳಲ್ಲಿಯೂ ದರ್ಶನವನ್ನು ಬಳಸಿ ವೇದಾಂತದಲ್ಲೂ ಸೌಂದರ್ಯವನ್ನು ಅನಾವರಣಗೊಳಿಸಬಲ್ಲ ವಿಶಿಷ್ಟ ಪ್ರತಿಭೆ ಇವರದ್ದು. ಭಾಷೆ ಮತ್ತು ಶಬ್ಧ ಇವರಿಗೆ ಅತ್ಯಂತ ಆಸಕ್ತಿದಾಯಕ ವಿಚಾರ. ಇಂಗ್ಲೀಷನಲ್ಲಿ ಬಿಮರ್ ಕೃಷ್ಣ ಮತಿಲಾಲರ “The word and the world” ಕೃತಿಯನ್ನು “ಶಬ್ದ ಮತ್ತು ಜಗತ್ತು” ಎಂದು ಅನುವಾದಿಸಿದ್ದಾರೆ. ಇದನ್ನು ಅನುವಾದ ಎನ್ನುವದಕ್ಕಿಂತ ಒಂದು ಸ್ವತಂತ್ರ ಕೃತಿ ಎನ್ನುವಷ್ಟರ ಮಟ್ಟಿಗೆ ಕರೆಯಬಹುದಾಗಿದೆ. ಬಿಮರ್ ಕೃಷ್ಣರ ವಿಕ್ಟೋರಿಯನ್ ಇಂಗ್ಲೀಷನ್ನು ಇಷ್ಟು ಸರಳವಾಗಿ ಕನ್ನಡೀಕರಿಸಿದ್ದು ಉಭಯ ಭಾಷೆಗಳಮೇಲಿನ ಹಿಡಿತವಿದ್ದವರಿಗಷ್ಟೇ ಸಾಧ್ಯ. ಈ ಕೃತಿಯನ್ನು ಮೆಚ್ಚಿಕೊಂಡವರಲ್ಲಿ ಭಾಷಾ ತಜ್ಞ ಪ್ರೋ. ಈ. ವೆಂಕಟಸುಬ್ಬಯ್ಯನವರು ಇದರ ಪ್ರಕಾಶಕರರಾದ ಕೆ. ವಿ. ಸುಬ್ಬಣ್ಣನವರಿಗೆ ಪತ್ರಬರೆದು ಶ್ಲಾಘಿಸಿದ್ದಾರೆ. ದರ್ಶನ ಶಾಸ್ತ್ರಗಳಿಗೆ ಸಂಬಂಧಿಸಿದಂತೆ “ಭಾರತೀಯ ದರ್ಶನಗಳು- ಭಾಷೆ” ಎನ್ನುವ ಪುಸ್ತಕದಲ್ಲಿ ದರ್ಶನ ಶಾಸ್ತ್ರಗಳಲ್ಲಿ ಭಾಷೆಗೆ ಸಂಬಂಧಪಟ್ಟು ಏನೇನು ವಿಚಾರ ಬಂದಿದೆ ಎನ್ನುವದನ್ನು ಸರಳವಾಗಿ ವಿವರಿಸಿದ್ದಾರೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇನ್ನೋರ್ವ ವಿದ್ವಾಂಸ ಡಾ. ಪ್ರಭಾಕರ ಜೋಷಿಯವರೊಡಗೂಡಿ ಬರೆದ ‘ಭಾರತೀಯ ತತ್ವ ಶಾಸ್ತ್ರ ಪ್ರವೇಶ’ ಮತ್ತು ‘ಕುಮಾರಿಲ ಭಟ್ಟ’ ಸಂಸ್ಕೃತಿಯ ಅಧ್ಯಯನಾಸಕ್ತರಿಗೊಂದು ಅವಶ್ಯವಾಗಿರುವ ಗ್ರಂಥ. ಇವರ ಬರಹದಲ್ಲಿ ನಾವು ಕಾಣಬಹುದಾದದ್ದು ಭಾಷೆಯೊಂದಿಗೆ ಇವರು ಹೊಂದಿರುವ ತಾದ್ಯಾತ್ಮತನ. ಆನಂದವರ್ಧನನ ‘ಧ್ವನ್ಯಾಲೋಕ ಮತ್ತು ಅಭಿನವ ದರ್ಪಣ’ದ ವಿವರಣೆಯ ಅನುವಾದ ಮಾಡಿರುವ ‘ಲೋಚನ’ ಹೀಗೆ ಹೇಳುತ್ತಾ ಹೋದರೆ ಈ ವ್ಯಕ್ತಿಯ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ. ಅಭಿನವ ಗುಪ್ತನ “ಪ್ರತ್ಯಭಿಜ್ಞಾ ವಿಮರ್ಶಿನಿ” ಕಾಶ್ಮೀರಿ ಶೈವದರ್ಶನವನ್ನು ವಿವರಿಸುವ ಮಹತ್ವದ ಕೃತಿ. ಅದನ್ನು ಸಹ ಅವರು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ. ಪ್ರಾಚೀನ ದರ್ಶನಗಳು ಸಂಸ್ಕತದಿಂದ ಕನ್ನಡಕ್ಕೆ ಮತ್ತು ಕನ್ನಡದ ಕಾವ್ಯಗಳಲ್ಲಿ ಅಲಂಕಾರದ ಗುರುತಿಸುವಿಕೆ ಈ ಎರಡುಭಾಗಗಳಲ್ಲಿ ಕನ್ನಡ ಸಾರಸ್ವತಲೋಕಕ್ಕೆ ಇವರು ನೀಡಿದ ಕೊಡುಗೆ. ಈ ಕುರಿತು ಇನ್ನಷ್ಟು ಅಧ್ಯಯನ ಮತ್ತು ಕಮ್ಮಟಗಳು ಜರುಗಿ ಮಹಾಬಲೇಶ್ವರ ಹೆಗಡೆಯವರು ಸಲ್ಲಿಸಿದ ಸಾಹಿತ್ಯಸೇವೆಯ ಪರಿಚಯ ಸಮಗ್ರವಾಗಿ ಹೊರಬರಬೇಕಾಗಿದೆ.

ಇವರ ಈ ಅನನ್ಯ ಪ್ರತಿಭೆಯ ಹಿಂದೆ ಸಂಸ್ಕöತಸಾಹಿತ್ಯದ ಸೃಜನಶೀಲ ಓದಿನ ಹಿಂದೆ ಇವರ ಮೇಲೆ ಪ್ರಭಾವ ಬೀರಿದ್ದು ಇವರ ಧಾರವಾಡದ ವಿಶ್ವವಿದ್ಯಾಲಯದ ಗುರುಗಳಾದ ಡಾ. ಕೃಷ್ಣಮೂರ್ತಿ ಮತ್ತು ಡಾ. ಬಿ. ಎನ್. ಶಾನಭಾಗರು ಎನ್ನುವದನ್ನು ಅವರು ನನ್ನ ಹತ್ತಿರ ಹೇಳಿಕೊಂಡಿದ್ದರು. ಡಾ. ಕೃಷ್ಣಮೂರ್ತಿಯವರಂತೂ ಭಾರತೀಯ ದರ್ಶನ ಮತ್ತು ವೇದಾಂತಗಳಲ್ಲಿ ಅಧಿಕಾರವಾಣಿಯಿಂದ ಮಾತಾಡಬಲ್ಲ ಜಾಗತಿಕ ಮಟ್ಟದಲ್ಲಿನ ಪ್ರತಿಭೆ. ಶ್ರೀ ಬಿ. ಎಚ್. ಶ್ರೀಧರರೂ ತನ್ನಲ್ಲಿ ಅಧ್ಯಯನದ ಕಿಚ್ಚು ಹಚ್ಚಿದ ಮೂಲ ಗುರು ಎಂದೂ ಸಹ ಅವರು ಹೇಳಿದ್ದರು. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿಯವರೂ ಇವರ ಮೇಲೆ ಪ್ರಭಾವ ಬೀರಿದಾರೆ.

ಯಕ್ಷಗಾನದಲ್ಲಂತೂ ಇವರು ಸವ್ಯಸಾಚಿಯೇ ಸರಿ. ಸೀತಾವಿಯೋಗದ ಹೊರತಾಗಿ ತ್ರಿಶಂಕು ಚರಿತ್ರೆ, ರಾಜಾ ಕರಂಧಾಮ, ವಿಜಯೀ ವಿಶ್ವತ, ಧರ್ಮ ದುರಂತ, ವಜ್ರಕಿರೀಟ ಮತ್ತು ಇತ್ತೀಚೆಗೆ ಬರೆದ ಆದಿಚಿಂಚನಗಿರಿ ಕ್ಷೇತ್ರ ಮಹಾತ್ಮೆಯವರೆಗೆ ಸುಮಾರು 20ಕ್ಕೂ ಮಿಕ್ಕಿದ ಕೃತಿಗಳನ್ನು ಇವರು ರಚಿಸಿದ್ದಾರೆ. ಇವರ ಯಕ್ಷಗಾನದೊಂದಿಗಿನ ನಂಟು ಪ್ರಾರಂಭವಾಗುವದು ಇವರ ಬಾಲ್ಯದ ಕಾಲದಿಂದ. ಆ ಕಾಲದಲ್ಲಿ ಕೆರಮನೆ ವೆಂಕಟಾಚಲ ಭಟ್ಟ, ಹಸರುಗೋಡು ಲಕ್ಷ್ಮೀ ನಾರಾಯಣ ಮೊದಲಾದವರು ಹೆಸರಗೋಡಿನಲ್ಲಿ ಒಂದು ಯಕ್ಷಗಾನದ ಕಲಿಕಾ ಕೇಂದ್ರವನ್ನು ಆರಂಭಿಸಿದ್ದರು. ನೃತ್ಯದ ಕಲಿಕೆಗಾಗಿ ಕೆರಮನೆ ಶಂಭು ಹೆಗಡೆಯವರಿದ್ದರು. ಅಲ್ಲಿಗೆ ಹಾಯಸ್ಕೂಲಿನಲ್ಲಿ ಓದುತ್ತಿರುವ ಬಾಲಕ ಮಹಾಬಲೇಶ್ವರನ ಪ್ರವೇಶವಾಯಿತು. ಅಲ್ಲಿಂದ ಪ್ರಾರಂಭವಾದ ಶಂಭುಹೆಗಡೆಯವರೊಡನೆ ಇವರ ಸಂಬಂಧ ಆ ಮಹಾನ್ ಕಲಾವಿದನ ಕೊನೆಯ ಅಭಿನಯದ ಇವರ ರಚನೆ ‘ಸೀತಾವಿಯೋಗ’ದವರೆಗೂ ಅವಿಚ್ಛನ್ನವಾಗಿತ್ತು. ಶಂಭು ಹೆಗಡೆಯವರಲ್ಲಿ ಇವರಿಗೆ ಗುರುಭಾವ. ಹಾಗಾಗಿ ಇಡಗುಂಜಿ ಮೇಳಕ್ಕೆ ಒಂದು ಸಂದರ್ಭದಲ್ಲಿ ಶಂಭುಹೆಗಡೆಯವರಿಗೆ ಸಮರ್ಥ ಎದುರಾಳಿಯ ಕೊರತೆಯ ಸನ್ನಿವೇಶ ಎದುರಾದಾಗ ಆ ಮೇಳಕ್ಕೆ ಅತಿಥಿಕಲಾವಿದರಾಗಿ ಸೇರಿ ಶಂಭು ಹೆಗಡೆಯವರ ಪಾತ್ರಗಳಿಗೆ ಕಳೆಗುಂದುವಂತೆ ಎದುರುವೇಷವನ್ನು ಕಟ್ಟಿಕೊಟ್ಟರು. ಹೊಸ್ತೋಟ ಮಜುನಾಥ ಭಾಗವತರೂ ಇವರ ಕಲಿಕಾ ಗುರು. ಹದವಾದ ಕುಣಿತ, ಒಮ್ಮೊಮ್ಮೆ ಸ್ವಲ್ಪ ಗ್ರಾಮ್ಯ ಎನಿಸುವ ಆದರೆ ಸರಳವಾದ ಭಾಷೆಯ ಮೂಲಕ ವಿಷಯ ಪ್ರಸ್ತಾಪಿಸುವ ಹಾಗೇ ಆ ಅರ್ಥವನ್ನು ಆದ್ಯಾತ್ಮಿಕತೆಗೆ ಒಯ್ಯುವ ಅರ್ಥಧಾರಿಯಾಗಿ ತಾಳಮದ್ದಳೆಯಲ್ಲಿ ಬಹು ಬೇಡಿಕೆಯ ಕಲಾವಿದರು ಇವರಾಗಿದ್ದರು. ಇತ್ತೀಚೆಗೆ ರಾಜಶೇಖರ ಕವಿಯ ‘ಬಾಲರಾಮಾಯಣ’ ಸಂಸ್ಕತ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರ ಒಂದು ಅಂಕವನ್ನು ಪ್ರಸಿದ್ಧ ನಾಟಕ ನಿರ್ದೇಶಕ ಜಂಬೆಯವರು ರಂಗದಲ್ಲಿ ಆಡಿಸಿದ್ದಾರೆ.

ವೇದಾಂತ, ತತ್ವಸಾಸ್ತ್ರ, ದರ್ಶನಗಳ ಆಳವಾದ ಅದ್ಯಯನ ಬದುಕಿನಲ್ಲಿ ನಿರ್ಲಿಪ್ತಭಾವವನ್ನೂ, ಬದುಕಿನ ಸೌಂದರ್ಯವನ್ನು ಆಸ್ವಾಧಿಸುವ ರಸವಂತಿಕೆಯನ್ನೂ ಕೊಟ್ಟಿದೆ. ಇವರ ಎಲ್ಲ ಕಾರ್ಯಗಳಿಗೆ ಹಿನ್ನೆಲೆಯಾಗಿ ನಿಂತವರು ಇವರ ಮಡದಿ ಸಾವಿತ್ರಿ. ಮಗಳು ವಿದುಷಿ ಬಕುಲಾ ಹೆಗಡೆ ಹಿಂದುಸ್ಥಾನೀ ಸಂಗೀತದ ಕಲಾವಿದೆ. ಅಳಿಯ ಖ್ಯಾತ ಹಿಂದುಸ್ಥಾನಿ ಗಾಯಕ ಶ್ರೀಪಾದ ಹೆಗಡೆ ಸೋಮನಮನೆ. ಮಗ ವಿನಾಯಕ ಲೆಕ್ಕ ಪರಿಶೋಧಕರು ಅವರೊಂದಿಗೆ ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದರು. ಸಾಹಿತ್ಯ, ಕಲೆ, ನಾಟಕ, ಅನುವಾದ ಹೀಗೆ ಎಲ್ಲದರಲ್ಲಿಯೂ ತನ್ನ ತನವನ್ನು ಸ್ಥಾಪಿಸಿದ ಓರ್ವ ಅಪರೂಪದ ವಿದ್ವಾಂಸನನ್ನು ನಮ್ಮಿಂದ ಕಸಿದುಕೊಂಡ ಮಹಾಮಾರಿಯನ್ನು ಶಪಿಸುವ ದೌರ್ಭಾಗ್ಯ ನಮ್ಮದಾಗಿದೆ.

ವಿಜಯ ಕರ್ನಾಟಕ

error: Content is protected !!
Share This