ಇತ್ತೀಚೆಗೆ ಮಿತ್ರರ ಸಲುವಾಗಿ ಯಕ್ಷಗಾನ ಬಯಲಾಟಕ್ಕೆ ಸಭಾಭವನ ಹುಡುಕುವ ಅನಿವಾರ್ಯ ಅವಕಾಶ ಒದಗಿಬಂತು. ಒಂದ ಅರ್ಥದಲ್ಲಿ ಇದು ಅನಿವಾರ್ಯವೂ ಹೌದು. ಯಕ್ಷಗಾನದ ಕಾರ್ಯಕ್ರಮವಲ್ಲವೇ? ಅದನ್ನು ಒಂದು ಸದವಕಾಶ, ಯೋಗ ಎಂದು ತಿಳಿಯಬೇಕು. ಆ ನಂತರ ಈ ಅವಕಾಶ ಒಂದು ಯೋಗವೆಂಬಂತೆ ಕಂಡಿತಾದರೂ ಅದು ಯಾವ ರೀತಿಯ ಯೋಗ ಎಂಬುದಾಗಿ ಯೋಚಿಸುವಂತೆ ಆದದ್ದು ಮಾತ್ರ ವಿಪರ್ಯಾಸ ಎನ್ನಬೇಕು.

ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರ ಅದರ ಪಕ್ಕದಲ್ಲೇ ಇರುವ ಪುರಭವನ ಮತ್ತದರ ಜತೆಗಿರುವ ಇತರ ಸಭಾಭವನಗಳು ದುರಸ್ತಿಗಾಗಿ ಕದಮುಚ್ಚಿಯಾಗಿತ್ತು. ಇದರಿಂದ ಸಭಾಭವನ ಸಮಯಕ್ಕೆ ಲಭ್ಯವಿಲ್ಲವಾಗಿತ್ತು. ರಾಜಾಜಿನಗರದ ರಾಜ್ ಕುಮಾರ್ ಕಲಾಕ್ಷೇತ್ರ ಈ ಮೊದಲೇ ದುರಸ್ತಿಗಾಗಿ ಮುಚ್ಚಿತ್ತು. ಸಾಮಾನ್ಯವಾಗಿ ಯಕ್ಷಗಾನಕ್ಕೆ ಲಭ್ಯವಿದ್ದ ಭವನಗಳು ಹೀಗೆ ಎಕಾ ಎಕಿ ಮುಚ್ಚಿದ ಬಾಗಿಲನ್ನು ತೋರಿಸಿದಲ್ಲಿ ನಿಗದಿ ಮಾಡಿದ ಕಾರ್ಯಕ್ರಮ ನಿರ್ವಹಿಸ ಬೇಕಾದರೆ ಹೆಗಲಲ್ಲಿ ಮಣಭಾರದ ಹೊರೆಯನ್ನು ಹೊತ್ತ ಅನುಭವ. ಹೆಗಲ ಮೇಲೆ ಹೊರೆ ಇದ್ದಾಗ ಇನ್ನೊಬ್ಬನ ಹೆಗಲು ಬಯಸುವುದು ಸಹಜ. ಹಾಗಾಗಿ ನನ್ನ ಒಂದು ಭುಜ ಆ ಭಾರವನ್ನು ಹೊರುವುದು ಅನಿವಾರ್ಯವಾಗಿತ್ತು. ಮಿತ್ರನ ಮನವಿಯಂತೆ ಒಂದಷ್ಟು ನಾನು ಸುತ್ತಾಡಿದೆ. ಅದು ವಿಚಿತ್ರ ಅನುಭವವನ್ನು ಒದಗಿಸಿಬಿಟ್ಟಿತು.

ಎಲ್ಲದರಲ್ಲೂ ವಿಭಿನ್ನ ಅಭಿರುಚಿಯನ್ನು ತೋರಿಸುವ ನಾವು, ಕಲೆಯಲ್ಲೂ ಅದನ್ನು ತೋರಿಸುತ್ತೇವೆ. ಬೆಂಗಳೂರಿನಂತಹ ವಿಬ್ಭಿನ್ನ ಸಾಂಸ್ಕೃತಿಕ ಅಭಿರುಚಿಯ ತಾಣದಲ್ಲಿ ಸಭಾಭವನ ಸಿಗದಿರಲು ಸಾಧ್ಯವಿಲ್ಲ ಎಂಬುದೇ ನನ್ನೆಣಿಕೆಯಾಗಿತ್ತು. ಆದರೆ ಹೊಳೆಗೆ ಹಾರಿದ ಮೇಲೆ ಸುಳಿಯ ಅನುಭವವಾದಂತೆ ಸಮಸ್ಯೆಯ ನಿಜವಾದ ಅನುಭವ ಆಗತೊಡಗಿತು. ಅದರಲ್ಲೂ ಒಂದು ಸಭಾಭವನ ಕಛೇರಿಯಲ್ಲಿ ಆದ ಅನುಭವ ಬಹಳ ವಿಚಿತ್ರವೂ ಗಾಬರಿಯೂ ತರಿಸುವಂತಹುದಾಗಿತ್ತು. ಅಲ್ಲಿ ಹೋದಾಗ ಅಧ್ಯಕ್ಷ ಮಹಿಳಾ ಮಣಿ ಒಬ್ಬರು ಇಲ್ಲದೇ ಕಾದು ಕಾದು ಅವರ ಸಮಯ ಹೊಂದಿಸಿ ಹೇಗೋ ಬೇಟಿಯಾಯಿತು. ಸಭಾಭವನದ ಬೇಡಿಕೆ ಇಟ್ಟಾಗ ಬಹಳ ಆಕೆಗೆ ಸಂತಸವಾಯಿತು. ದಿನಾಂಕ ಎಲ್ಲ ಕೇಳಿ ಡೈರಿ ನೋಡಿ ಕೊನೆಯಲ್ಲಿ ಕೇಳಿದರು ಯಾವ ಕಾರ್ಯಕ್ರಮಕ್ಕೆ?  ಎಂದು  ’ಯಕ್ಷಗಾನ’ ಎಂದೊಡನೆ ಸನ್ನಿವೇಶವೇ ಬದಲಾದ ಅನುಭವ.  ’ಯಕ್ಷಗಾನಕ್ಕೆ ಇಲ್ಲ. ಕ್ಷಮಿಸಿ’  ಹೌಹಾರಿದಂತೆ ಹೇಳಿ ಮುಗಿಸಿದಳು. ಅಂಗವೈಕಲ್ಯವೋ ಕುಜದೋಷವೋ ಇದ್ದ ಹುಡುಗಿಗೆ ವಿವಾಹ ಸಂಭಂಧವನ್ನು  ಕೇಳಿದೆನೋ ಎಂಬ ಭಾವದಲ್ಲಿ ಆಕೆ ಹೇಳಿದಂತಾಯಿತು.  ಜತೆಗೆ ಕ್ಷಮಿಸಿ…. ಈ ಕ್ಷಮಾ ಯಾಚನೆಯ ಔಚಿತ್ಯ ಯಾಕೋ ಎಂದುಕೊಂಡೆ.

ಬಹಳಷ್ಟು ಕಡೆಗಳಲ್ಲಿ ಇದೇ ಅನುಭವ. ರೂಪ ಬೇರೆಯಾದರೂ ಒಳಗಿನ ಭಾವ ಒಂದೇ. ಸಭಾಭವನ ಯಕ್ಷಗಾನಕ್ಕೆ ಇಲ್ಲ. ಯಕ್ಷಗಾನದ ಮೇಲಿರಿಸಿದ ಅಭಿಮಾನಕ್ಕೆ ಈ ರೀತಿಯ ಮೌಲ್ಯಮಾಪನವಾದೀತು ಎಂಬ ನಿರೀಕ್ಷೆ ನನಗಿರಲಿಲ್ಲ. ಹಾಡಿ ಹೊಗಳುವುದಕ್ಕೆ ಸಾವಿರವಿರುತ್ತದೆ ಆದರೆ ವಾಸ್ತವದ ಚಿತ್ರಣ ವಿಭಿನ್ನವಾಗಿರುತ್ತದೆ. ಬಹಳಷ್ಟು ಕಡೆಗಳಲ್ಲಿ ಕೊಟ್ಟ ಕಾರಣ ಸಾಮಾನ್ಯ ಒಂದೇ….ಅದು ಮೇಲೆ ನೋಡಿ ಉಗುಳಿದಂತೆ.

ಇಲ್ಲಿ ಯಾವ ವ್ಯವಸ್ಥೆಯತ್ತ ನೋಟ ಹರಿಸಬೇಕೆಂಬುದೇ ತಿಳಿಯದಂತಾಯಿತು. ನಮ್ಮಲ್ಲಿ ಎಲ್ಲವೂ ಇದ್ದ ಸುಸಂಸ್ಕೃತ ಜೀವನವೇ ಪ್ರಶ್ನಾರ್ಹವಾದಾಗ ಯಾವುದರತ್ತ ಬೆರಳು ತೋರಬೇಕು? ಇನ್ನಾದರೂ ಎಚ್ಚತ್ತುಕೊಳ್ಳಬೇಕು. ಕಾರಣ ಇಷ್ಟೆ, ಒಂದು ಕಡೆ ಶಾಲಾವಠಾರದಲ್ಲಿನ ರಂಗಮಂಟಪದಲ್ಲಿ ಮೊದಲೊಮ್ಮೆ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮರುದಿನ ಶಾಲೆಯ ಶೌಚಾಲಯ ಮತ್ತು ಪರಿಸರ ಸಿಗರೇಟು ತುಂಡು, ಗುಟ್ಕಾವರ್ಣಗಳಿಂದ ತುಂಬಿ ಗಬ್ಬೆದ್ದು ನಾರುವಂತಾಗಿತ್ತು. ಅಷ್ಟು ಮಾತ್ರವಲ್ಲ, ಶಾಲೆಯ ಚಿಣ್ಣರಿಗೆ ಎಂದು ಕಾಣದ ಹೆಂಡದ ಬಾಟಲಿ ಕಂಡರೆ ಅದರ ಪರಿಣಾಮವೇನಾಗಬಹುದು. ಒಂದು ವೇಳೆ ನಮ್ಮ ಮಕ್ಕಳಿಗೆ ಇಂತಹ ಸಂದರ್ಭ ಎದುರಾದರೆ ನಾವೆಷ್ಟು ಶಾಲೆಯ ಆಢಳಿದ ಬಗ್ಗೆ ಪ್ರತಿಭಟಿಸುವುದಿಲ್ಲ?  ಯಾರೋ ಕೆಲವರ ಮತಿಗೆಟ್ಟ ವ್ಯವಹಾರಕ್ಕೆ ಯಕ್ಷಗಾನ ಸಮುದಾಯವೇ ಮೌಲ್ಯ ಮಾಮನಕ್ಕೆ ತುತ್ತಾದದ್ದು ಖೇದನೀಯ ವಿಚಾರವಾಗುತ್ತದೆ.

ದುಶ್ಚಟಗಳು ದುರ್ವ್ಯಸನಗಳು ಸ್ವತಃ ಆತನನ್ನು ಬಾಧಿಸಿದರೆ ಅದು ಆತನ ವಿಧಿ. ಆದರೆ ಅದು ಪರರಿಗೆ ಬಾಧೆಯಾದರೆ? ಪುಟ್ಟ ಮಗುವನ್ನು ಮುದ್ದಿನಿಂದ ಎತ್ತಿಕೊಂಡು ಬಾಯಿಯಲ್ಲಿ ಸಿಗರೇಟು ಇರಿಸಿ ಅದರ ಹೊಗೆಯನ್ನು ಆ ಮಗುವಿನ ಮುಖಕ್ಕೆ ರಾಚಿದರೆ ಪರಿಣಾಮ ಅದೇ ಮಗು ಅನುಭವಿಸುವಂತಾಗುತ್ತದೆ. ಇದು ಹಾಗೆ. ಮುದ್ದಿನಿಂದ ತಮ್ಮ ಬಾಧೆ ಇನ್ನೊಬ್ಬರ ಹೆಗಲಿಗೇರಿಸಿದಂತೆ.  ಇಲ್ಲಿ ಯಾರದೋ ದುರ್ವ್ಯಸನದ ಬಾಧೆ ಎಲ್ಲರಿಗೂ ಅಂಟಿಸಿದಂತೆ.

ಇನ್ನು ಕಾರ್ಯಕ್ರಮವನ್ನು  ನಡೆಸುವಾಗ ಜತೆಯಲ್ಲಿ ಇನ್ನೂ ಒಂದು ಫಲಕ ಹಾಕುವ ಅನಿವಾರ್ಯತೆ ಒದಗಿಬರುತ್ತದೆ. ’ ಮದ್ಯ ಮಾಂಸ ಧೂಮ ಪಾನ ಮುಂತಾದವುಗಳು ನಿಷೇಧಿಸಲ್ಪಟ್ಟಿದೆ’. ಇದು ಪರೋಕ್ಷವಾಗಿ ನಮ್ಮ ಸ್ಥಾನವನ್ನು ನಾವೇ ಗುರುತಿಸಿದಂತೆ. ಇವುಗಳನ್ನೆಲ್ಲ ನಿಯಮ ನಿಬಂಧನೆ ಒದಗಿಸಿ ನಿಯಂತ್ರಿಸುವ ಸ್ಥಿತಿಗೆ ನಾವು ತಲುಪಿದ್ದೇವೆ ಎಂದರೆ ಯಾವುದನ್ನು ಬೆರಳೆತ್ತಿ ತೋರುವುದು? ವಿದ್ಯಾರ್ಥಿಗಳ ಹಾಸ್ಟೆಲ್ ಒಂದರಲ್ಲಿ ಹೊರಗೆ ಒಂದು ನಿಯಮಾವಳಿಯ ಫಲಕ ತೂಗು ಹಾಕಿತ್ತು. ಅದರಲ್ಲಿದ್ದ ಒಂದು ನಿಯಮ, ’ ಮದ್ಯ ಮಾಂಸ ಧೂಮ ಪಾನ ಮುಂತಾದವುಗಳು ನಿಷೇಧಿಸಲ್ಪಟ್ಟಿದೆ’. ಇದನ್ನು ಕಂಡು ಆವಾಗ ಅನ್ನಿಸಿತ್ತು ನಮ್ಮ ವಿದ್ಯಾರ್ಥಿಗಳ ಮೌಲ್ಯವನ್ನೇ ಈ ನಿಯಮ ಪ್ರಶ್ನಿಸಿದಂತೆ ಅಲ್ಲವೇ? ವಿದ್ಯಾರ್ಥಿ ನಿಲಯದಲ್ಲಿ ನಿಯಮ ಮಾಡಿ ನಿಷೇಧಿಸುವ ಮಟ್ಟಿಗೆ ನಮ್ಮ ವಿದ್ಯಾರ್ಥಿಗಳ ಜೀವನ ಮೌಲ್ಯ ತಗ್ಗಿದೆ ಎಂದರೆ ಅದು ನಿಜ ಅರ್ಥದಲ್ಲಿ ಮೇಲೆ ನೋಡಿ ಉಗುಳಿದ ಹಾಗೆ. ಇಂತಹ ವಿಚಾರ ಸೂಕ್ಷ್ಮವನ್ನು ತಿಳಿದುಕೊಳ್ಳುವ ಜ್ಞಾನ ನಮಗಿಲ್ಲವಾಗಿದೆ. ನಮ್ಮ ಮನೆಯ ತಿಜೋರಿಗೆ ನಾವು ಬೀಗ ಹಾಕುವಾಗ ನಮ್ಮ ಮನೆ ಮಂದಿಯನ್ನೂ ನಾವು ಅನುಮಾನಿಸಿದಂತೆ ಅಲ್ಲವೇ ? ಬಹಳ ಸೂಕ್ಷ್ಮ ವಿಚಾರವಿದು.

ಎದುರು ದೊಡ್ಡದಾಗಿ ನಿಯಮಗಳ ನಿಷೇಧಗಳ ಫಲಕವನ್ನು ಹಾಕಿದರೂ,  ಒಳಗೆ ವೇಷ ರೈಸ ಬೇಕು ಎಂದು ಮದಿರೆಯನ್ನು  ನಾವೇ ಒದಗಿಸಿ ಅತಿಥಿ ಸತ್ಕಾರ ಮಾಡಿಬಿಡುತ್ತೇವೆ. ಅದೇನೋ ಕಲಾವಿದರನ್ನು ಸತ್ಕರಿಸುವಲ್ಲಿ ಇದೆಲ್ಲ ಅನಿವಾರ್ಯ ಅಂಗಗಳಾಗುವುದು ದುರಂತ ಎನ್ನಬೇಕು.  ಎಂತಹ ವಿಪರ್ಯಾಸ?  ಊಟ ವಸನಕ್ಕಿಂತ ಅದುವೇ ಪ್ರಧಾನವಾದರೆ,  ಅದರ ಪರಿಣಾಮ ಮರುದಿನ ಸುತ್ತಲ ಪರಿಸರದಲ್ಲಿ ಆರಂಭವಾಗಿ ಈಗ ಅದು ಸಂಪೂರ್ಣ  ಜಗತ್ತನ್ನೇ ಅವರಿಸಿದೆ.ಈಕಾರಣದಿಂದ ಯಕ್ಷಗಾನಕ್ಕೆ ಸಭಾಭವನವೇ ಲಭ್ಯವಿಲ್ಲವಾಗುವುದು ಒಂದು ಅಪರಾಧಿ ಪ್ರಜ್ಞೆಯನ್ನಾದರೂ ನಮ್ಮಲ್ಲಿ ಬೆಳೆಸುವುದಿಲ್ಲವಲ್ಲ ಎಂಬುದು ಖೇದನೀಯ. ದುರ್ವ್ಯಸನ ಕೇವಲ ಯಕ್ಷಗಾನಕ್ಕಷ್ಟೇ ಸೀಮಿತವಲ್ಲ. ಆದರೂ ಪ್ರಹಾರದ ಪೆಟ್ಟು ಬೀಳುತ್ತಿರುವುದು ಇಲ್ಲಿಗೇ ಅಂತ ಅನ್ನಿಸುತ್ತದೆ. ಯಾವ ದುರಂತದತ್ತ ನಮ್ಮ ಮುಖ ತಿರುಗಿದೆ? ದುಶ್ಚಟಗಳಿಗೆ ಯಾರೂ ಹೊರತಲ್ಲ ಎಂದು ಉಡಾಫೆಯಲ್ಲಿ ಪ್ರತಿಕ್ರಿಯಿಸಿದರೂ ಅವುಗಳ ಪರಿಣಾಮವನ್ನು ತಿಳಿಯುವ ಸಾಮಾನ್ಯ ಜ್ಞಾನವಾದರೂ ಇರಬೇಕು. ಇದನ್ನು ಮಾನವೀಯತೆ ಎಂದು ಗುರುತಿಸಬೇಕು. ಹಾಗಾಗಿ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಎಲ್ಲವನ್ನೂ ನಿಯಮದಿಂದ ನಿಬಂಧನೆಯಿಂದ ಕಟ್ಟಿಹಾಕುವುದು ಸಾಧ್ಯವಿಲ್ಲ. ನಮ್ಮ ತನವನ್ನು ನಾವು ಗೌರವಿಸಿ ಜತನದಿಂದ ರಕ್ಷಿಸಿಕೊಳ್ಳಬೇಕು. ಆಗ ನಮ್ಮ ಜತೆಗೆ ನಮ್ಮ ಪರಿಸರವೂ ಹಿತಕರವಾಗುತ್ತದೆ. ಇಲ್ಲವಾದರೆ ನಾವು ಪರಿತಪಿಸಬೇಕು ಮಾಡು ಸಿಕ್ಕದಲ್ಲ…?

ಯಕ್ಷಗಾನಂ ಗೆಲ್ಗೆ

(ರಾಜಕುಮಾರ್ ಬೆಂಗಳೂರು)

error: Content is protected !!
Share This