ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ಪ್ರಾತಿನಿಧಿಕ, ಅಭಯ ಚೈತನ್ಯ,ಅಸಾಧಾರಣ ಚೇತನರಾಗಿದ್ದಾರೆ ಮಾತ್ರವಲ್ಲದೆ ಸರ್ವಸ್ವವನ್ನೂ ಯಕ್ಷಗಾನ ಕಲೆಗೆ ಅರ್ಪಿಸಿದ ಮಹಾನ್ ಪುರುಷರಾಗಿದ್ದಾರೆ ಎಂದು ವಿದ್ವಾಂಸ ಪ್ರಭಾಕರ ಜೋಶಿಯವರು ಹೇಳಿದರು.

ಅವರು ಮಂಗಳೂರು‌ ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ ಶುಕ್ರವಾರ ಜಾಲತಾಣದಲ್ಲಿ‌ ನೇರಪ್ರಸಾರದ ಮೂಲಕ ನಡೆದ ಹೊಸ್ತೋಟ ಸ್ಮೃತಿ ಸಂಜೆ ಹಾಗೂ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹೊಸ್ತೋಟ ಸ್ಮ್ರತಿ ಸ್ಮರಣೆಯನ್ನು ನೆರವೇರಿಸಿ ಮಾತನಾಡಿದರು.
ಹೊಸ್ತೋಟರು ಯಕ್ಷಗಾನದಲ್ಲಿ ಭಗವತ್ತ್ ತತ್ವ ತಿಳಿದವರಾಗಿದ್ದಾರೆ.ಎಲ್ಲ ವಿಭಾಗದ ಮೊದಲ ದರ್ಜೆಯ ಪಂಡಿತರಾಗಿ ಗುರುತಿಸಿಕೊಳ್ಳುವ ಅವರು ಸಮರ್ಪಿತ, ವ್ಯವಸ್ಥಿತ, ನಿರ್ಭೀತ, ವಿರಳ ವ್ಯಕ್ತಿಯಾಗಿದ್ದಾರೆ. ಅವರ ಕಲಾ ಚೈತನ್ಯ ಯಕ್ಷಗಾನದ ಕ್ಷೇತ್ರದಲ್ಲಿ‌ಇನ್ನಷ್ಟು ಉದ್ಭವಿಸಲಿ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಂತಹ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಅವರು ಮಾತನಾಡಿ, ಹೊಸ್ತೋಟ ಮಂಜುನಾಥ ಭಾಗವತರುಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ.ಯಕ್ಷಗಾನ ಸಂಪ್ರದಾಯವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ಯಕ್ಷಗಾನ ಅಧ್ಯಯನ ಕೇಂದ್ರ ಮಾಡುತ್ತಾ ಇದೆ. ಕೇಂದ್ರವು ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಿಕೊಂಡಿದ್ದು ವಿವಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಪೋಷಕರಾದ‌‌ ನಾರಾಯಣ ಭಟ್ ಕೊಡಕ್ಕಲ್ಲು ಅವರು ಅತಿಥಿಯಾಗಿ ಭಾಗವಹಿಸಿದ್ದರು.

ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ ವಂದಿಸಿದರು. ಯಕ್ಷಮಂಗಳ ವಿದ್ಯಾರ್ಥಿ ಪುರುಷೋತ್ತಮ ಅವರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹೊಸ್ತೋಟ ಮಂಜುನಾಥ ಭಾಗವತರು ವಿರಚಿತ ಶ್ರೀರಾಮ ನಿರ್ಯಾಣ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಸವಿನಯ ನೆಲ್ಲಿತೀರ್ಥ, ಯಜ್ಞೇಶ್ ರೈ ಕಟೀಲು ಭಾಗವಹಿಸಿದ್ದರು.

ಅರ್ಥಧಾರಿಗಳಾಗಿ ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ್ ಭಟ್, ಭಾಸ್ಕರ ರೈ ಕುಕ್ಕುವಳ್ಳಿ, ಪ್ರೊ.ಶ್ರೀಪತಿ ಕಲ್ಲೂರಾಯ, ಮೇಘಶ್ರೀ ಕಜೆ ಅವರು ಭಾಗವಹಿಸಿದ್ದರು. ಅಬ್ಬಕ್ಕ ಯೂಟ್ಯೂಬ್ ಚಾನೆಲ್ ಮೂಲಕ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಯಕ್ಷಗಾನ ಅಧ್ಯಯನ ಕೇಂದ್ರವು ಕಳೆದ ಹತ್ತು ವರ್ಷಗಳಿಂದ ಹತ್ತು ಹಲವಾರು ಯಕ್ಷಗಾನ ಚಟುವಟಿಕೆಗಳನ್ನು ನಡೆಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಮುಂದೆ ನಡೆಯಲಿರುವ ದಶಮ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಡಾ.ದಯಾನಂದ ಪೈ ಅವರಲ್ಲಿ ಚರ್ಚಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

error: Content is protected !!
Share This