ಡಾ. ಎಂ. ಪ್ರಭಾಕರ ಜೋಶಿ

ಸಾಂಪ್ರದಾಯಿಕ ಕಲೆಗಳ ವಿಚಾರದಲ್ಲಿ ಮುಖ್ಯವಾಗಿ ಪ್ರದರ್ಶನ ಕಲೆಯ ವಿಚಾರದಲ್ಲಿ ಸಂಪ್ರದಾಯ, ಪರಂಪರೆ, ಮೂಲ, ಪ್ರಯೋಗ ಮೊದಲಾದ ಸಂಗತಿಗಳಲ್ಲಿ ನಡೆಯುವ ಚರ್ಚೆ, ನಿರಂತರ ಸಂವಾದ ಅದು. ಆದರೆ ಯಾವನೇ ಒಬ್ಬ ವಿಮರ್ಶಕ, ಚಿಂತಕನು ಈ ವಿಷಯದಲ್ಲಿ ಕಲಾ ಮೌಲ್ಯಕ್ಕಿಂತ ಹೆಚ್ಚಾಗಿ ಕಲೇತರ ವಾದಗಳು, ಪ್ರಾಯ:ವ್ಯಕ್ತಿಪರ ಅಥವಾ ವ್ಯಕ್ತಿವಿರೋಧ ಧ್ವನಿಗಳು ಮೊದಲಾದುವನ್ನು ಬೆರೆಸಿ ಚಿಂತಿಸಿದರೆ ಅದು ಜಿಗುಟಿನ ಪ್ರವೃತ್ತಿ ಎನಿಸಬಹುದು.

ಸತತ ಪ್ರಯೋಗ:

ಮೊದಲಾಗಿ ನೆನಪಿಟ್ಟುಕೊಳ್ಳಬೇಕಾದ ಸತ್ಯ ಯಾವುದೇ ಒಂದು ಕಲೆ ಅಥವಾ ಸಾಂಸ್ಕೃತಿಕ ಪ್ರಕಾರವು ಸ್ವತಂತ್ರವಾಗಿ ಹುಟ್ಟಿ ಹಾಗೇ ಬೆಳೆದ ಬಾಳಲಿಲ್ಲ ಎಂಬುದು. ಹಾಗಾಗಿ ಸ್ವತಂತ್ರ ಉದಯ ಎಂಬುದು ಅತ್ಯಂತಿಕ ಸತ್ಯವಾಗಿ ಇಲ್ಲವೇ ಇಲ್ಲ. ಯಾವುದೇ ಸಾಂಪ್ರದಾಯಿಕ ಕಲೆಯೂ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಕೃಷಿ ಇತ್ಯಾದಿ ಚಟುವಟಿಕೆಗಳ ಆಂಗವಾಗಿ ಕಿರಿದಾಗಿ ಜನ ಬೇರೆ ಬೇರೆ ಅಂಶಗಳು ಅದಕ್ಕೆ ಸೇರಿ ಕೆಲವಂಶ ಕಳೆದು, ಬದಲಿಸಿ ಬೆಳೆಯುತದೆ. ಇದಕ್ಕೆ ಅಪವಾದ ಇಲ್ಲ. ಪ್ರತಿಯೊಂದು ಕಲೆಯೂ ಯಾವುದೋ ಒಂದು ಮೂಲ ಆಚರಣೆ ಳ, ವಿಧಿಗಳ, ಚಟುವಟಿಕೆಗಳ ಪರಿಷ್ಕರಣೆಯೇ ಹಾಗಾಗಿ ಪ್ರಯೋಗ, ಪ್ರಾಯೋಗಿಕತೆಗಳು ಸತತ. ಪ್ರಯೋಗಗಳ ಸರಣಿಯೇ ಪರಂಪರೆ-ಹೌದು,
ಕಲಾಮೌಲ್ಯದ ದೃಷ್ಟಿಯಿಂದ ಇದರಲ್ಲಿ ಗ್ರಾಹ್ಯ, ತ್ಯಾಜ್ಯಗಳಿದ್ದೇ ಇವೆ.

ಯಾವುದೇ ರಂಗಭೂಮಿಯಲ್ಲಿ ಪಾರಂಪರಿಕ, ಪ್ರಾಯೋಗಿಕ (ನೂತನ ಕಲಾತ್ಮಕ), ವ್ಯವಸಾಯ, ಹವ್ಯಾಸಿ, ಪ್ರಧಾನ, ಉಪವಾಹಿನಿಗಳು ಇದ್ದೇ ಇರುತ್ತವೆ. ಇರದಿದ್ದರೆ ಅದು ಜೀವಂತವಲ್ಲ ಎಂದರ್ಥ.

ಕಾಳಜಿ ಮತ್ತು ಎಚ್ಚರ:

ಕಲೆಯ ಸಂವಿಧಾನದ ಕಾಳಜಿ, ಕಲೆಯ ಒಳಗಿರುವ ಅಂಗೋಪಾಂಗ ಸಾಮಗ್ರಿ, ಶ್ರೀಮಂತಿಕೆ, ರಸಾನುಭವದ ನಡೆ, ನಿಯಮಗಳು ನಷ್ಟವಾಗಿ ಕಲೆಯ ಅಂಗಭಂಗಗೊಳ್ಳುವ ಬಗ್ಗೆ ಕಾಳಜಿ ಸ್ವಾಗತಾರ್ಹ ಮಾತ್ರವಲ್ಲ ಮೌಲಿಕವಾದುದು. ಅಷ್ಟೇ ಮೌಲಿಕವಾದುದು ಪರಿವರ್ತನೆ, ಉನ್ನತೀಕರಣ, ಮೌಲ್ಯವರ್ಧನೆ ಮತ್ತು ಬಹುತ್ವದ ಎಚ್ಚರ. ಕಲಾವಿದನೋ, ನಿರ್ದೇಶಕನೋ ಅರ್ಥಪೂರ್ಣವಾಗಿ ಯೋಚಿಸಿ ಸಂಯೋಜಿಸಿದ ಕಲಾ ವಿನ್ಯಾಸಗಳ ಕುರಿತು ತೆರೆದ ಮನಸ್ಸು, ಪ್ರೀತಿಯ ಪರಿಶೀಲನೆ, ಪ್ರಯೋಗಗಳ, ತಿರಸ್ಕಾರ, ಹೀಗಳೆಯುವಿಕೆಯಿಂದ ಕಲೆ ಬೆಳೆಯುವುದಿಲ್ಲ, ಕೋಪಗೊಂಡು ಮೂಲೆ ಸೇರಿದಂತಾಗುತ್ತದೆ, ಅಷ್ಟೆ, ಅಳಲೆಕಾಯಿ ಚಿಕಿತ್ಸೆ ಎಲ್ಲ ಕ್ಷೇತ್ರಗಳಲ್ಲೂ ತಪ್ಪು. ಆದರೆ ನೈಜ ಪ್ರಯತ್ನವನ್ನು ಸ್ವೀಕರಿ ಎಂದು ಗುಡಿಸಿಹಾಕುವುದು ಅದಕ್ಕಿಂತ ದೊಡ್ಡ ತಪ್ಪು.

ಒಳಗೆ ಮತ್ತು ಹೊರಗೆ:

ರಂಗದೊಳಗೆ ಇರುವ ವೃತ್ತಿನಿರತರಿಂದ ಆದ ಪ್ರಯೋಗಗಳು ಸಹಜ ಬೆಳವಣಿಗೆಗಳು, ಮೌಲಿಕ ಸಂವಿಧಾನಕ್ಕೆ ಚೌಕಟ್ಟಿಗೆ ಹೊಂದಿ ಕಾಣುವ ಕ್ರಿಯೆಗಳು ಹೊರಗಿನಿಂದ ಬಂದದ್ದು ಅಸಹಜ, ವಿಲಕ್ಷಣ ಅಥವಾ ಬಂದನಿಕೆ ಎಂಬ ಸಿದ್ಧಾಂತವೂ ಸರಿಯಲ್ಲ, ಯಕ್ಷಗಾನದಿಂದಲೇ ಉದಾಹರಣೆಗಳನ್ನು ಹೇಳಬಹುದು-ನಾಟಕ, ಕ್ಯಾಲೆಂಡರ್ ವೇಷಗಳು ಕಲಾವಿದರಿಂದ ಬೆಳಕಿಗೆ ಬಂದವು. ನಾಟಕ ನಟ ನಂಜುಡಯ್ಯನವರ ಹನುಮಂತನ ನೈಜ ಕಪಿರೂಪದ ವೇಷ ಚಿತ್ರ ನೋಡಿ ಅಡಿ ತಪ್ಪಿದ ನಮ್ಮ ನಟರು ಅವರ ವೇಷವನ್ನು ರಂಗಕ್ಕೆ ತಂದರು. ಇದು ಸಹಜವೆನ್ನೋಣವೇ? ಹಿಮ್ಮೇಳದ ಸಮವಸ್ತ್ರ ತ್ಯಜಿಸಿದ್ದು, ನಾಲ್ಕು ಮದ್ದಳೆ, ಎಂಟು ಚಂಡೆ ಬಾರಿಸುವುದು, ಚಿತ್ರವಿಚಿತ್ರ ಗಲ್ಲ ಮೀಸೆಗಳ ಬಳಕೆ, ಸರಿಯಾದ ಸಮತೋಲ ಇಲ್ಲದ ಚಿತ್ರ ವಿಚಿತ್ರ ಬಣ್ಣಗಳ ಬಟ್ಟೆಗಳ ಕೀಳು ಅಂದರೆ ಅಭಿರುಚಿ ಇಲ್ಲದ ವಸ್ತ್ರಾಲಂಕಾರಗಳು ಕಲಾವಿದರಿಂದಲೇ ಬಂದುದಲ್ಲವೇ? ಆ ಕಾರಣಕ್ಕಾಗಿ ಅವು ಸ್ವೀಕಾರಾರ್ಹವೇ? ಒಳಗಿನವರಲ್ಲದೆ, ವ್ಯವಾಯಿಗಳಲ್ಲದ ತಜ್ಞರು ಮಾಡಿದ ಕೆಲವು ಪರಿಷ್ಕಾರಗಳು ಮತ್ತು ನೂತನ ರಚನೆಗಳು ಉತ್ತಮವಾಗಿಲ್ಲವೇ? ಹಾಗಾಗಿ ಯಾರು ಸರಿ ಎಂಬುದಲ್ಲ, ಯಾವುದು ಸರಿ, ಮಾಡಿದ್ದು ಹೇಗಿದೆ ಎಂಬುದೇ ಮುಖ್ಯ.

ಒಂದು ಜನವರ್ಗಕ್ಕೆ ಗುಂಪಿಗೆ, ವೃತ್ತಿಗೆ ಜನಾಂಗಕ್ಕೆ ಕಲೆಗೆ ವ್ಯವಸ್ಥಿತ ಮಾರ್ಗದರ್ಶನ ಸುಧಾರಣೆಗಳಿಗೆ ಪ್ರಜ್ಞಾವಂತಿಕೆಯುಳ್ಳ, ಆ ಕ್ಷೇತ್ರದ ಹೊರಗಿನ ನೇತೃತ್ವವೇ ಅಗತ್ಯ, ಒಳಗಿದ್ದವರಿಗೆ ದುಸ್ಥಿತಿ ತೀವ್ರವಾಗಿ ಕಾಡುವುದಿಲ್ಲ – ಎಂಬ ವಾದವೂ ಇದೆ. ಕೆಲಮಟ್ಟಿಗೆ ಈ ವಾದವೂ ಸರಿ.

ಮೂಲದ ವ್ಯಾಮೋಹ:

ವ್ಯಕ್ತಿಗೂ, ಕಲೆಗೂ, ಜನಾಂಗಕ್ಕೂ, ರಾಷ್ಟ್ರಕ್ಕೂ ಒಂದು ಪ್ರಮಾಣದಲ್ಲಿ ಮೂಲಪ್ರೀತಿ, ಮೂಲ ಮೋಹ ಸಹಜ. ಆದರೆ ಅದು ವ್ಯಾಧಿಯಾಗಿರಬಾರದು, ಗೀಳಾಗಬಾರದು. ಮೌಲಿಕತೆ, ಮೌಲ್ಯಗಳಿಗೆ ಸಂಬಂಧಿಸಿ ಮೂಲಪ್ರೇಮ ಇರುವುದು ಸೂಕವೇ. ಆದರೆ ಕಲೆಗಳನ್ನು ಆ ಮೂಲ ರೂಪ
ದಲ್ಲಿಡುವುದು, ಸಂಬಂಧಿತ ಮೂಲ ಜನಾಂಗಕ್ಕೆ ವಾಪಾಸು ಕೊಡುವುದು , ಮುಗ್ಧಸುಂದರ ಸಹಜ ವಾತಾವರಣಕ್ಕೆ ಮರಳಿಸುವುದು ಇವೆಲ್ಲ ರಮ್ಯ. ಆದರೆ ಆಗದ ಹೋಗದ ಅವಾಸ್ತವ ಸಂಗತಿಗಳು. ಹಾಗೆಲ್ಲ ಆಗಬೇಕಾದರೆ ಜನಾಂಗವೂ ಮೂಲದ ಸ್ಥಿತಿಗೆ ಹೋಗಬೇಕಾದೀತು. ಅದಕ್ಕೆ ನಾವು ಸಿದ್ದರೇ?ಭರತನಾಟ್ಯವನ್ನು ದೇವಾಲಯದ ಸೇವೆಗೆ, ಸಂಗೀತವನ್ನು ಕೇವಲ ಆರಾಧನೆಗೆ ಅಥವಾ ಅನುಷ್ಠಾನಕ್ಕೆ, ದೇವರ ಚಿತ್ರಗಳನ್ನು, ಮೂರ್ತಿಗಳನ್ನು ದೇವರ ಕೋಣೆಗೆ ಹಿಂದಿರುಗಿಸಿ ಸೀಮಿತಗೊಳಿಸಲು ಸಾಧ್ಯವೇ? ಹೀಗೆಯೇ ಎಲ್ಲವನ್ನೂ ಊಹಿಸಿ ನೋಡಬಹುದು.

ಸಂಕೇತ ಮತ್ತು ಅನುಕರಣೆ:

ಯಾವನೋ ಪ್ರಯೋಗ ದೃಷ್ಟಿಯುಳ್ಳ ಕಲಾವಿದ ಒಂದು ಹೊಸ ಬಳಕೆ (ವಸ್ತ್ರ ವಿನ್ಯಾಸ, ಭೂಷಣ, ಕರವಸ್ತ್ರ ಯಾವುದಾದರೂ ಆಗಿರಬಹುದು) ತಂದೆನೆಂದಿಟ್ಟುಕೊಳ್ಳೋಣ. ಅದನ್ನು ಬೇರಾರೂ ಅಯೋಚಿತವಾಗಿ ಅನುಕರಿಸಿ, ಕಳಪೆ ಅಥವಾ ವಿಚಿತ್ರ ಅನುಚಿತ ಮಾದರಿಗಳನ್ನು ಸೃಷ್ಟಿಸುತ್ತಾನೆ. ಇದು ವಿಶ್ವಸಾಮಾನ್ಯ. ಇದಕ್ಕೆ ಮೂಲ ಪ್ರಯೋಗ ಕರ್ತನು ಹೊಣೆಯಲ್ಲಿ ಸಾಂಪ್ರದಾಯಿಕ ಬಯಲಾಟಗಳಲ್ಲೂ ಮುಖ್ಯ ವೇಷಗಳು ಕರವಸ್ತ್ರ(ಪಾರಿಭಾಷಿಕವಾಗಿ ಕೈವಸ್ತ್ರ ಅಥವಾ ಟುವಾಲ) ಹಿಡಿಯುವ ಕ್ರಮ ಎರಡೂ ತಿಟ್ಟುಗಳಲ್ಲಿದೆ. ಇದೊಂದು ರಾಜ ಗಾಂಭೀರ್ಯದ ಸಂಕೇತವೆಂದೂ ಇರಬಹುದು. ಗೌಣವಾಗಿ ಮುಖದ ಬೆವರನ್ನು ಒತ್ತಿಕೊಳ್ಳಲೂ ಇರಬಹುದು. ಹಸಭಾವ ಬಾರದವನೆಗೆ ಟುವಾಲು ಅನುಕೂಲ ಎಂದು ಅದನ್ನು ಲೇವಡಿ ಮಾಡಲೂಬಹುದು. ಆದರೆ ಅದು ಸತ್ಯವಲ್ಲ.

ಮಗ್ರ, ಸಮತೋಲ ದೃಷ್ಟಿಯ ಅಗತ್ಯ:

ಕಲೆಯ ಅರ್ಥೈಸುವಿಕೆ, ಪ್ರಗತಿಯ ಚಿಂತನೆ, ಮೌಲ್ಯ ಮಾಪನ, ವಿಚಾರ ಚರ್ಚಿ, ಕಲಾಪ್ರಜ್ಞೆಯ ಪ್ರಜ್ಞಾನಿರ್ಮಾಣ, ಸಾತತ್ಯ ರಕ್ಷಣೆ, ಸಾಂಸ್ಕೃತಿಕ ಸಂಪತ್ತು ಮತ್ತು ಜವಾಬ್ದಾರಿಗಳ ಎಚ್ಚರ ನಿರ್ಮಿಸುವುದು, ಪ್ರೋತ್ಸಾಹ, ಸಹಾನುಭೂತಿ, ತಿದ್ದುವಿಕೆ – ಇವು ಕಲಾವಿಮರ್ಶೆಯ ಉದ್ದೇಶಗಳು, ಕೆಲಸಗಳು.

ಕಲೆಯ ಬುಡವನ್ನೇ ಅಲ್ಲಾಡಿಸುವ ವಿತಂಡವಾದವೂ ಸಲ್ಲದು. ಅತಿರೇಕದ, ಬೇಜವಾಬ್ದಾರಿಯ, ಧೋರಣೆ ಇಲ್ಲದ ಪರಿವರ್ತನೆ ಏನಾಗುತ್ತದೆ? ನಮ್ಮದು ಹೀಗೆ ಎಂಬ ವಾದ, ಹಣಕ್ಕಾಗಿ, ಜನರಿಗಾಗಿ ಹೀಗೆ ಇತ್ಯಾದಿ ವಾದಗಳೂ ಸಾಧುವಲ್ಲ, ಮುನ್ನೋಟ ಎಲ್ಲದ, ಪ್ರಯೋಗ ಸಹಾನುಭೂತಿ ಇಲ್ಲದ ಜಡ ಪರಂಪರಾವಾದವೂ ತಾರಕವಲ್ಲ. ಕಲಾಮೌಲ್ಯದ ಪ್ರೀತಿ ಇಲ್ಲದ ಎಂತ್ರೋಪೋಲೊಜಿಕಲ ವಾದಗಳೂ ನಿಯೋಜಕ. (ಕಲೆ ಬದಲಾಗುವಂಥದ್ದೆ, ಆದರೇನೂ ಗಾಬರಿಯಾಗಬೇಡಿ, ಹೊಂದಿಕೊಳ್ಳಿ, ಆಆ ಕಾಲದ ಸಾಮಗ್ರಿಯ ಮಿತಿ ಮತ್ತು ಪ್ರಭಾವದಿಂದ ಕಲೆ ಏನೇನೋ ಆಗುತ್ತ ಹೋಗುತ್ತದೆ. ಹಾಗಾದುದಕ್ಕೆ ನಾವು ಸಾಕ್ಷಿ ಮಾತ್ರ. ಸರಿ ತಪ್ಪು ತೀರ್ಮಾನಕ್ಕೆ ನಾವು ಅರ್ಹರಲ್ಲ -ಎಂಬಿತ್ಯಾದಿ ವಾದ.)

ರುಚಿ ಶುದ್ದಿ, ಕಲಾಮಾಧ್ಯಮದ ಪರಿಚಯ, ಶೈಲಿ ನಿಷ್ಠೆ, ಅದರ ಉಳಿಯುವಿಕೆ ಮತ್ತು ಗುಣವೃದ್ಧಿಗಳ ಬಗೆಗಿನ ಬದ್ಧತೆ ಇರುವ ಸಂತುಲಿತ ವಿಮರ್ಶಾ ಪಂಥವೇ ನ್ಯಾಯವಾಗಿ ಬೇಕಾದುದು.

error: Content is protected !!
Share This