ನುಡಿ-ನಮನ

2003. ಪೂಜ್ಯ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದಂಗಳವರು, ಶ್ರೀ ಪಲಿಮಾರು ಮಠ – ಇವರ ಸಂಕಲ್ಪದ ‘ಶ್ರೀರಾಮ ಕಥಾ ವಾಹಿನಿ’ ಸರಣಿ ತಾಳಮದ್ದಳೆಯ ಸಮಾರೋಪ. ನನ್ನ ‘ಶೇಣಿ ಚಿಂತನ’ ಕೃತಿ ಬಿಡುಗಡೆ. ‘ಸಾಮಗ ಪಡಿದನಿ’ಗೆ ಅಂದೇ ಬೀಜಾಂಕುರ. ಎಂಟು ವರುಷದ ಬಳಿಕ ಮೊಳಕೆಯೊಡೆಯಿತು. ಮಿತ್ರ ವಾಸುದೇವ ರಂಗಾಭಟ್ಟರಿಂದ ಚಿಗುರಿತು. ‘ಸಾಮಗ’ ಎಂಬ ಮಹಾನ್ ವಾಙ್ಮಯ ವೃಕ್ಷದ ಚಿಕ್ಕ ಸಸಿಯಾಗಿ ಬೆಳೆಯಿತು ಈ ‘ಪಡಿದನಿ’.

ಇದು ಕೀರ್ತಿಶೇಷ ಹರಿದಾಸ ಮಲ್ಪೆ ರಾಮದಾಸ ಸಾಮಗರ ಅರ್ಥಗಾರಿಕೆಯ ರಿಪ್ಲೆಕ್ಟ್ – ಪಡಿದನಿ. ಕಳೆದ ಕಾಲದ ಅರ್ಥ ಸೊಬಗಿನ ಕಥನ. ಚಿಕ್ಕ ದಾಖಲಾತಿ. ಇದಕ್ಕಾಗಿ ವಾಸುದೇವ ರಂಗಾಭಟ್ಟರು ಸರಣಿ ತಾಳಮದ್ದಳೆಯ ಅಡಕ ತಟ್ಟೆಗಳನ್ನು ನೀಡಿದರು. ಜ್ಯೋತಿಷಿ, ವಿದ್ವಾನ್ ಪಂಜ ಭಾಸ್ಕರ ಭಟ್ ಬೆನ್ನು ತಟ್ಟಿದರು. ರಾಮದಾಸ ಸಾಮಗರ ಚಿರಂಜೀವಿ ವಾಸುದೇವ ಸಾಮಗರು ನನ್ನ ಈ ಕೈಂಕರ್ಯಕ್ಕೆ ಒಪ್ಪಿಗೆಯನ್ನಿತ್ತು ಹಾರೈಸಿದ್ದಾರೆ. ಹತ್ತು ದನಿಗಳು ಸೇರಿ ಹೊರ ಬಂತು, ಪಡಿದನಿ.

ಸಾಮಗರ ಅರ್ಥಗಾರಿಕೆ ಆರದ ಒರತೆ. ಹರಿಯುತ್ತಲೇ ಇರುವ ನೀರ ಝರಿ. ಆ ಝರಿಯಲ್ಲಿಳಿದ ಒಂದು ಹನಿಯನ್ನು ಬೊಗಸೆಯಲ್ಲಿ ಹಿಡಿದಿಡಲು ಪ್ರಯತ್ನ ಮಾಡಿದ್ದೇನಷ್ಟೇ. ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರು ‘ಹನಿ’ಯ ಸೊಬಗನ್ನು ಸಾಮಗರ ವ್ಯಕ್ತಿಚಿತ್ರದ ಮೂಲಕ ಚಿತ್ರಿಸಿದ್ದಾರೆ. ಇನ್ನೋರ್ವ ವಿದ್ವಾಂಸ ಪ್ರೊ: ಎಂ.ಎಲ್ ಸಾಮಗರು ಹನಿಯನ್ನು ‘ಮೊಗೆದು’ ಕೊಟ್ಟಿದ್ದಾರೆ.  ಚಿಕ್ಕ ಪ್ರಯತ್ನಕ್ಕೆ ದೊಡ್ಡ ಹೆಗಲನ್ನು ನೀಡಿದ ಇವರೆಲ್ಲರಿಗೂ ನಮನಗಳು.

ನನ್ನಲ್ಲಿ ಲಭ್ಯವಿದ್ದ ಯಕ್ಷಗಾನ ಪ್ರಸಂಗಗಳ ಪದ್ಯಗಳನ್ನು ಯಥಾವತ್ ಉಲ್ಲೇಖಿಸಿದ್ದೇನೆ. ಕೋಡಪದವಿನ ಹನುಮಾ ಲೈವ್ ಕ್ಯಾಸೆಟ್ಸ್ ಅವರ ನಚಿಕೇತ ಮತ್ತು ಯಕ್ಷಪಂಚಮಿಯವರ ಧ್ವನಿಸುರುಳಿಗಳನ್ನು ಪಡಿದನಿಗೆ ಬಳಸಿಕೊಂಡಿದ್ದೇನೆ.

ಉಡುಪಿಯ ಖ್ಯಾತ ಛಾಯಾಚಿತ್ರಗಾರ ಆಸ್ಟ್ರೋ ಮೋಹನ್ ಅವರು ಸಾಮಗರ ಉತ್ತಮ ಚಿತ್ರಗಳನ್ನು ಒದಗಿಸಿದ್ದಾರೆ.  ಹೆಮ್ಮೆಯ ಚಿತ್ರ ಕಲಾವಿದ ಎಸ್ಸಾರ್ ಪುತ್ತೂರು ಸುಂದರವಾಗಿ ಮುಖಚಿತ್ರವನ್ನು ರಚಿಸಿದ್ದಾರೆ. ಮಿತ್ರ ಗಂಗಾಧರ ಬೆಳ್ಳಾರೆಯವರು ಪುಟ ವಿನ್ಯಾಸವನ್ನು ಮಾಡಿದ್ದಾರೆ. ಶ್ರೀನಿಧಿ ಪ್ರೆಸ್ಸಿನ ರಾಜೇಂದ್ರ ಅವರು ಚಂದವಾಗಿ ಮುದ್ರಿಸಿದ್ದಾರೆ. ಎಲ್ಲರಿಗೂ ಆಭಾರಿ.

ನಮ್ಮ ಜೊತೆ ಇಂದು ಸಾಮಗರಿಲ್ಲ. ಅವರ ಅರ್ಥಗಾರಿಕೆಯ ಮಾದರಿಗಳು ಅಕ್ಷರದಲ್ಲಿ ಉಳಿಯಬೇಕೆನ್ನುವುದು ಪ್ರಕಟಣೆಯ ಆಶಯ. ಲಾಭೋದ್ದೇಶವಲ್ಲ.

‘ಸಾಮಗ ಪಡಿದನಿ’ ಕೃತಿಯು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿದೆ.

2010ರಲ್ಲಿ ಪುತ್ತೂರಿನ ಶ್ರೀ ಜ್ಞಾನಗಂಗಾವು ಪುಸ್ತಕವನ್ನು ಪ್ರಕಾಶಿಸಿತ್ತು.

ನಾ. ಕಾರಂತ ಪೆರಾಜೆ

error: Content is protected !!
Share This