ಡಾ| ಎಂ. ಪ್ರಭಾಕರ ಜೋಷಿ

ಕನ್ನಡ ಸಾಹಿತ್ಯದಲ್ಲಿ ಯಕ್ಷಗಾನಕ್ಕೆ ಸ್ಥಾನ ಸಿಗಲಿ, ಸಿಗದಿರಲಿ; ಆ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳುವ ಆವಶ್ಯಕತೆ ಇಲ್ಲ. ಆದರೆ ನಾವು ಯಕ್ಷಗಾನವನ್ನು ಯಕ್ಷಗಾನ ವಾಗಿಯೇ ಕಾಣಬೇಕು ಹಾಗೂ ಅದು ಯಕ್ಷಗಾನವಾಗಿಯೇ ಉಳಿಯಬೇಕು ಎಂದು ಹಿರಿಯ ವಿದ್ವಾಂಸ ಮತ್ತು ಅರ್ಥಧಾರಿ ಡಾ| ಎಂ. ಪ್ರಭಾಕರ ಜೋಶಿ ಅವರು ಹೇಳಿದರು.

ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ಜಿಲ್ಲಾ ಮಟ್ಟದ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಗುರುವಾರ ‘ಯಕ್ಷಗಾನ- ಸಮಷ್ಟಿ ಕಲೆ’- ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲೆ ನಿಂತ ನೀರಾಗಬಾರದು; ಹಾಗೆಂದು ಮಿತಿ ಮೀರಿ ಹರಿಯಲೂ ಬಾರದು. ಯಕ್ಷಗಾನದಲ್ಲಿ ಯಾವುದು ಮುಖ್ಯ ಎನ್ನುವುದನ್ನು ಗಮನಿಸಬೇಕೇ ಹೊರತು ಯಾರು ಮುಖ್ಯ ಎನ್ನುವುದಲ್ಲ. ಯಕ್ಷಗಾನ ಕಲೆಯನ್ನು ಆಸ್ವಾದಿಸುವ ಹೃದಯವಂತಿಕೆಯ ಪ್ರೇಕ್ಷಕ ವರ್ಗ ಬೇಕು ಎಂದರು.

ವಿರೂಪಗೊಳಿಸಬಾರದು

ವಿಚಾರ ಗೋಷ್ಠಿಯಲ್ಲಿ ಗಾಂಧಿನಗರ ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇ ಜಿನ ಸಹ ಪ್ರಾಧ್ಯಾಪಕ ಡಾ| ದಿನಕರ ಎಸ್‌. ಪಚ್ಚನಾಡಿ ಅವರು, ಬಯಲಾಟದ ಬಗ್ಗೆ ಮಾತನಾಡಿ, ಯಕ್ಷಗಾನ ಹಾಗಾಗ ಬೇಕು, ಹೀಗಾಗ ಬೇಕು ಎಂದು ಖಡಾ ಖಂಡಿತವಾಗಿ ಹೇಳುವ ಕಾಲ ಇದಲ್ಲ; ಇದು ಸಂಧಿಗ್ಧ ಕಾಲ. ಆದರೆ ಯಕ್ಷಗಾನವನ್ನು ವಿರೂಪಗೊಳಿಸಬಾರದು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಸಂಗ ಸಾಹಿತ್ಯದ ಉಲ್ಲೇಖವಿಲ್ಲ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಹೇಳಿದರು.

ವಿಮರ್ಶೆ ಬೆಳವಣಿಗೆಗೆ ಪೂರಕವಾಗಿರಲಿ

ಯಕ್ಷಗಾನ ಅರ್ಥಧಾರಿ ಜಬ್ಟಾರ್‌ ಸಮೊ ತಾಳಮದ್ದಳೆ ಕುರಿತು ಮಾತನಾಡಿ, ಯಕ್ಷಗಾನದಲ್ಲಿ ತಾಳಮದ್ದಳೆಯಲ್ಲಿ ಈಗ ಒಂದು ಪ್ರಸಂಗದಲ್ಲಿ ಎಲ್ಲ ಪಾತ್ರಗಳು ಬಳಕೆ ಆಗುತ್ತಿಲ್ಲ; ಸ್ತ್ರೀ ಪಾತ್ರಗಳು ಪ್ರಧಾನವಾಗಿರುವ ಪ್ರಸಂಗಗಳು ಈಗ ಕಡಿಮೆಯಾಗಿವೆ. ಬಳಸುವ ಪದ್ಯಗಳ ಸಂಖ್ಯೆ ಕಡಿಮೆಯಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಯಕ್ಷಗಾನ ಮತ್ತು ಕಲಾವಿದರ ಬಗ್ಗೆ ಬರುವ ಕೆಲವು ವಿಮರ್ಶೆಗಳು ಅಪಾಯಕಾರಿಯಾಗಿವೆ. ವಿಮರ್ಶೆ ಯಾವತ್ತೂ ಕಲೆಯ ಬೆಳವಣಿಗೆಗೆ ಪೂರಕವಾಗಿರಬೇಕು ಎಂದರು.

ಹಿಮ್ಮೇಳದ ಬಗ್ಗೆ ವಿಚಾರ ಮಂಡಿಸಿ ಕಲಾವಿದ, ಲೇಖಕ ಕೃಷ್ಣ ಪ್ರಕಾಶ ಉಳಿಯತ್ತಾಯ ಅವರು, ವಿಶ್ವ ರಂಗ ಭೂಮಿಗೆ ಸಂವಾದಿಯಾಗಿ ಹಿಮ್ಮೇಳವನ್ನು ಹೇಗೆ ಮೇಲಕ್ಕೆ ತರಬಹುದು ಎಂಬುದರ ಬಗ್ಗೆ ಚಿಂತನೆ ನಡೆಯಬೇಕು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ| ಬಿ.ಎಂ. ಹೆಗ್ಡೆ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ವೇದಿಕೆಯಲ್ಲಿದ್ದರು.

ಕೆಎಂಸಿ ಆಸ್ಪತ್ರೆಯ ಡಾ| ಪದ್ಮನಾಭ ಕಾಮತ್‌, ಶ್ರೀ ಕೃಷ್ಣ ಯಕ್ಷ ಸಭಾದ ಕೆ.ಎಸ್‌. ಕಲ್ಲೂರಾಯ, ಕಿನ್ನಿಗೋಳಿ ಯಕ್ಷಲಹರಿಯ ಸತೀಶ್‌ ಭಟ್ ಗೌರವ ಅತಿಥಿಗಳಾಗಿದ್ದರು. ಮೋಹನ್‌ ರಾವ್‌ ಸ್ವಾಗತಿಸಿ, ಪೂರ್ಣಿಮಾ ರಾವ್‌ ಪೇಜಾವರ ವಂದಿಸಿದರು. ಜಿ.ಕೆ. ಭಟ್ ಸೇರಾಜೆ ನಿರ್ವಹಿಸಿದರು.

-ಉದಯವಾಣಿ

error: Content is protected !!
Share This