ಸಿರಿಚಂದನ ಯಕ್ಷನುಡಿಸರಣಿಯಲ್ಲಿ ಪ್ರೇಮಲತಾ ಎಲ್ಲೋಜಿರಾವ್ ಅಭಿಮತ ‘ಭಾಷೆ ಸಂಸ್ಕಾರ ಉಳಿಸಿ ಬೆಳೆಸಲು ಮಕ್ಕಳಿಗೆ ಯಕ್ಷಗಾನ ಕಲಿಸಿ’

 

ಮುಳಿಯಾರು : “ಭಾಷೆ ಮತ್ತು ಸಂಸ್ಕಾರಗಳು ದಿನದಿಂದ ದಿನಕ್ಕೆ ಕೊರಗುತ್ತಿವೆ ಸಾಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸುವುದರ ಬದಲು ಈ ಮಣ್ಣಿನ ಕಲೆ ಯಕ್ಷಗಾನವನ್ನು ವಿದ್ಯಾರ್ಥಿಗಳಿಗೆ ಮತ್ತು ತಮ್ಮ ಮಕ್ಕಳಿಗೆ ಕಲಿಸಿ. ಈ ಮೂಲಕ ನಮ್ಮ ಭಾಷೆ ಮತ್ತು ಸಂಸ್ಕಾರ ಉಳಿಯುತ್ತದೆ; ಬೆಳೆಯುತ್ತದೆ” ಎಂದು ಪ್ರೇಮಲತಾ ಎಲ್ಲೋಜಿರಾವ್ ಅವರು ಅಭಿಪ್ರಾಯಪಟ್ಟಿದ್ದಾರೆ. ಸಿರಿಚಂದನ ಕನ್ನಡ ಯುವಬಳಗದ ವತಿಯಿಂದ ಪ್ರತಿ ತಿಂಗಳು ನಡೆದುಕೊಂಡುಬರುತ್ತಿರುವ ಯಕ್ಷನುಡಿಸರಣಿ–03. ಮನೆ ಮನೆ ಅಭಿಯಾನ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. “ಕಾಸರಗೋಡಿನ ಕನ್ನಡ ಸೇವೆಗೆ ಯುವ ತಲೆಮಾರು ಮುಂದೆ ಬರುತ್ತಿಲ್ಲ ಎಂಬ ಕೂಗು ಹಲವು ವರ್ಷಗಳಿಂದ ನಿರಂತರ ಕೇಳಿಬರುತ್ತಿದ್ದು, ಅದನ್ನು ಇಲ್ಲವಾಗಿಸುವ ಸದುದ್ದೇಶದಿಂದ ಮಲ್ಲಮೂಲೆಯವರು ಜಿಲ್ಲೆಯ ಯುವಮನಸ್ಸುಗಳನ್ನು ಒಂದುಗೂಡಿಸಿ ಮನೆ ಮನೆಗಳಲ್ಲಿ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ತಲೆಮಾರಿನಲ್ಲಿ ಭಾಷೆ ಸಂಸ್ಕೃತಿಯ ಕುರಿತು ಎಚ್ಚರ ಮೂಡಿಸುವ ಮಹತ್ವದ ಯೋಜನೆಗೆ ನಾಂದಿ ಹಾಡಿದ್ದಾರೆ. ಈ ಮೂಲಕ ಗ್ರಾಮೀಣ ಪ್ರದೇಶಗಳಲ್ಲೂ ಭಾಷೆಯ ಮಹತ್ವ ತಿಳಿಯುವಂತಾಗಿದೆ. ಇದು ಇಂದಿನ ಅನಿವರ‍್ಯತೆಯೂ ಹೌದು. ಭಾಷೆ ಅಳಿಯುತ್ತಿದೆ ಎಂದು ಸಂಕಟ ಪಡುವ ಅಗತ್ಯವಿಲ್ಲ. ಅದಕ್ಕಾಗಿ ನಮ್ಮಲ್ಲಿ ಹಲವಾರು ಕಲೆಗಳಿವೆ. ಆದರೆ ಅದನ್ನು ಇಂದು ಸಮರ್ಪಕವಾಗಿ ಹೊಸ ತಲೆಮಾರಿಗೆ ದಾಟಿಸುವ ಅಥವಾ ತಿಳಿಸುವ ಪ್ರಯತ್ನಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಯುವತಂಡವೊಂದು ಅಧ್ಯಾಪಕರೊಬ್ಬರ ಮಾರ್ಗದರ್ಶನದಲ್ಲಿ ಮಾಡುತ್ತಿರುವ ಈ ಪುಣ್ಯಕಾರ್ಯಕ್ಕೆ ಕಾಸರಗೋಡಿನ ಸಮಸ್ತರು ಹೆಗಲುಕೊಡಬೇಕಾಗಿದೆ.” ಎಂದು ಪ್ರೇಮಲತಾ ಎಲ್ಲೋಜಿರಾವ್ ಅವರು ನುಡಿದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ ಹಿರಿಯ ಯಕ್ಷಗಾನ ಕಲಾವಿದ ಹಾಗೂ ವಿಶ್ರಾಂತ ಅಧ್ಯಾಪಕಡ್ಕ ಗೋಪಾಲಕೃಷ್ಣ ಭಟ್ ಮಾತನಾಡಿ, “ದಶಕಗಳ ಹಿಂದೆ ಯಕ್ಷಗಾನವು ಅಳಿದು ಹೋಗಿಯೇ ಬಿಡುತ್ತದೋ ಎಂಬ ಭೀತಿ ಎಲ್ಲರಲ್ಲಿತ್ತು. ಆದರೆ ಹಾಗಾಗಲಿಲ್ಲ. ಯಕ್ಷಗಾನದತ್ತ ಯುವತಲೆಮಾರು ಇತ್ತೀಚೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಯಕ್ಷಗಾನದಂತಹ ಕಲೆಗೆ ಸರ್ವಥಾ ನಾಶವಿಲ್ಲ ಎಂಬ ಸತ್ಯ ಈಗ ಅರಿವಾಗುತ್ತಿದೆ. ತ್ರಾಸದಾಯಕ ಕೆಲಸವಾದರೂ ವಿದ್ಯಾವಂತರು ಮನೆಮನೆಗಳಿಗೆ ಯಕ್ಷಗಾನದ ರುಚಿಯನ್ನು ಉಣಬಡಿಸುವ ಈ ಪ್ರಕ್ರಿಯೆಯು ನಿಜವಾದ ಅರ್ಥದಲ್ಲಿ ಈ ಮಣ್ಣಿನ ಸಂಸ್ಕೃತಿಗೆ ನೀಡುವ ಗೌರವ” ಎಂದರು.

ಹಿರಿಯರಂಗಕರ್ಮಿ ವಾಸು ಬಾಯಾರುದುಬೈ ಅವರು ಮಾತನಾಡಿ,” ಕಾಸರಗೋಡಿನ ಚರಿತ್ರೆಯಲ್ಲಿ ಈ ಸರಣಿ ಕಾರ್ಯಕ್ರಮವು ದಾಖಲಾಗುತ್ತದೆ. ನಗರ ಪ್ರದೇಶದಲ್ಲಿ ಸಭಾಂಗಣದಲ್ಲಿ ಮಾಡುವ ಕಾರ್ಯಕ್ರಮಕ್ಕಿಂತಲೂ ಹೆಚ್ಚು ಜನಇಂತಹ ಮನೆ ಮನೆ ಅಭಿಯಾನಗಳಲ್ಲಿ ಒಂದು ಸೇರುತ್ತಿರುವುದು ಮತ್ತು ಇದಕ್ಕೆ ನೇತೃತ್ವ ವಹಿಸಿದವರು ಯುವಕರು ಎಂಬ ವಿಷಯದಲ್ಲಿ ನನಗೆ ಹೆಮ್ಮೆಯಿದೆ” ಎಂದರು.

ಕಾರ್ಯಕ್ರಮದಲ್ಲಿ ಕನ್ನಡಜಾಗೃತಿ ವಿಶೇಷೋಪನ್ಸಾವು ನಡೆಯಿತು. ಉಪನ್ಯಾಸ ಮಾಡಿದ ಎಂ.ಫಿಲ್ ಸಂಶೋಧನ ವಿದ್ಯಾರ್ಥಿ ಸುಜಿತ್‌ಕುಮಾರ್ ಉಪ್ಪಳ ಮಾತನಾಡಿ, “ಕಾಸರಗೋಡಿನಲ್ಲಿ ಕನ್ನಡ ಉಳಿಸಿವ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ಯಾಕೆಂದರೆ ಕನ್ನಡ ಬೋಧಿಸುವ ಬಹುತೇಕ ಮಂದಿ ಅಧ್ಯಾಪಕರ ಉಪನ್ಯಾಸಕರ ಮಕ್ಕಳು ಕನ್ನಡ ಶಾಲೆಗೆ ಹೋಗುತ್ತಿಲ್ಲ. ಬಡ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಲು ಮನಸ್ಸು ಮಾಡದ ಹೆತ್ತವರು ಕನ್ನಡದ ಕುರಿತು ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತಾರೆ.” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಬಳಗದ ಜತೆಕಾರ್ಯದರ್ಶಿ ಸೌಮ್ಯಾ ಪ್ರಸಾದ್ ವಹಿಸಿ ಮಾತನಾಡಿ, ಕಳ್ಳಿಗೆ ಕುಣಿಕುಳ್ಳಾಯ ಹಾಗೂ ಪುರುಷೋತ್ತಮರಂತವರು ಕನ್ನಡದ ಉಳಿವಿಗಾಗಿ ತಮ್ಮ ಸ್ವಂತ ಸುಖವನ್ನು ಬದಿಗಿಟ್ಟವರು. ಆದರೆ ಅಂತಹ ದುಡಿಮೆ ಇಂದು ಕಾಸರಗೋಡಿನಲ್ಲಿ ಅತ್ಯಂತ ಕ್ಷೀಣಾವಸ್ಥೆಗೆ ತಲುಪಿದೆ. ಇದಕ್ಕಾಗಿ ಯುವಮನಸ್ಸುಗಳು ಒಂದಾಗಿ ಮುಂದುವರಿಯುವ ಫನದೊಂದಿಗೆ ಸಿರಿಚಂದನ ಕಾರ್ಯಪ್ರವೃತ್ತವಾಗಿದೆ.”ಎಂದರು.

ಬಳಗದ ಪೋಷಕರಾದ ಬಳ್ಳಮೂಲೆ ಗೋವಿಂದ ಭಟ್, ಯಕ್ಷತೂಣೀರ ಸಂಪ್ರತಿಷ್ಠಾನದ ಅಧ್ಯಕ್ಷ ಬಳ್ಳಮೂಲೆ ಈಶ್ವರ ಭಟ್, ಕಾರ್ಯದರ್ಶಿ ಮುರಳೀಕೃಷ್ಣ ಸ್ಕಂದ ಮಾತನಾಡಿದರು. ಬಳಗದ ಗೌರವ ಸಲಹೆಗಾರ ದಿವಾಣ ಶಿವಶಂಕರ ಭಟ್, ಬಳಗದ ಅಧ್ಯಕ್ಷ ರಕ್ಷಿತ್ ಪಿ ಎಸ್, ಪ್ರಶಾಂತ ಹೊಳ್ಳ, ರಾಜೇಶ್‌ ಎಸ್ ಪಿ, ಸ್ವಾತಿ ಸರಳಿ ಉಪಸ್ಥಿತರಿದ್ದರು. ಬಳಗದ ಮಾರ್ಗದರ್ಶಕ ಡಾ. ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಗದ ಸದಸ್ಯ ಧನೇಶ್‌ ಯು ವಂದಿಸಿದರು. ವರ್ಣ ಬಿ ಜಿ ಪ್ರಾರ್ಥನೆ ಹಾಡಿದರು.

ಯಕ್ಷನುಡಿಸರಣಿಯಲ್ಲಿ ಪರಿಸರಜಾಗೃತಿ ಮೂಡಿಸಿದ ವೃಕ್ಷರಕ್ಷಣ ತಾಳಮದ್ದಳೆ

 

ಅಮೃತ ಸೋಮೇಶ್ವರ ವಿರಚಿತ ಮಾರೀಷಕಲ್ಯಾಣ ಅಥವಾ ವೃಕ್ಷರಕ್ಷಣ ತಾಳಮದ್ದಳೆಯು ಸಿರಿಚಂದನ ಕನ್ನಡ ಯುವಬಳಗದ ಯಕ್ಷನುಡಿಸರಣಿ ಮನೆ ಮನೆ ಅಭಿಯಾನ-03 ಇದರ ಭಾಗವಾಗಿ ಬಳ್ಳಮೂಲೆ ಗೋವಿಂದ ಭಟ್ ಅವರ ಮನೆಯಲ್ಲಿ ನಡೆಯಿತು. ಬಳಗದ ಕಲಾವಿದರು ಪಾತ್ರಗಳಿಗೆ ಜೀವ ತುಂಬಿದರು. ಜೂನ್ ಐದರಂದು ವಿಶ್ವ ಪರಿಸರ ದಿನಾಚರಣೆಯು ಜಗತ್ತಿನಾದ್ಯಂತ ನಡೆದಿದ್ದು, ಬಳಗವು ಕನ್ನಡಕಂದನ ಸಿರಿಚಂದನ ಗಿಡಯೋಜನೆಯ ಮೂಲಕ ಜಿಲ್ಲೆಯ ಬೇರೆ ಬೇರೆ ಭಾಗದಕನ್ನಡ ವಿದ್ಯಾರ್ಥಿಗಳ ಮನೆಗೆ ತೆರಳಿ ಗಿಡ ನೆಡುವ ಕಾರ್ಯ ಮಾಡುತ್ತಿರುವುದಲ್ಲದೆ, ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಯಕ್ಷನುಡಿ ಸರಣಿಯಲ್ಲಿ ಈ ಸಲ ತಾಳಮದ್ದಳೆಯ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದ್ದು ಶ್ರೋತೃಗಳ ಗಮನ ಸೆಳೆಯಿತು.

ಪುರಾಣಕತೆಯ ಕೆಲವು ಭಾಗಗಳನ್ನು ಆಯ್ದುಕೊಂಡು ಅಮೃತ ಸೋಮೇಶರರು ಈ ಪ್ರಸಂಗವನ್ನು ತನ್ನದೇ ರೀತಿಯಲ್ಲಿ ರಚಿಸಿದ್ದರು. ಚಂದ್ರನ ಆಣತಿಯಂತೆ ಧನ್ವಂತರಿಯು ಗಿಡಮೂಲಿಕೆಗಳನ್ನು ಅರಣ್ಯವನ್ನು ಸಮೃದ್ಧವಾಗಿ ಬೆಳೆಸುತ್ತಾನೆ. ಆದರೆ ದುರಹಂಕಾರಿಯಾದ ಪಚೇತಸನು ನಾಗರಿಕತೆಯ ಹೆಸರಿನಲ್ಲಿ ಮೂಢನಾಗಿ ಅವುಗಳನ್ನೆಲ್ಲ ನಾಶ ಪಡಿಸುತ್ತಾ ಸಾಗುತ್ತಾನೆ. ವೃಕ್ಷ ಹಾಗೂ ಗಿಡಮೂಲಿಕೆಗಳ ಮಹತ್ವವನ್ನು ಅರ್ಥಮಾಡಿಕೊಂಡು ಸುಕ್ಷೇಮದಿಂದ ರಾಜ್ಯವಾಳುತ್ತಿದ್ದ ವಸುಪುರದ ಪದ್ಮಕನು ಕಾಡಿನ ಸಂರಕ್ಷಣೆಯನ್ನು ವ್ರತದಂತೆ ಪರಿಪಾಲಿಸುತ್ತಿರುತ್ತಾನೆ. ಆದರೆ ಅರಣ್ಯದ ಮಹತ್ವವರಿಯದ ದುರಹಂಕಾರಿ ಪ್ರಚೇತಸನನ ತೋಳುಬಲಕ್ಕೆ ಪದ್ಮಕ ಮಣಿಯಬೇಕಾಗುತ್ತದೆ. ವನದೇವಿ, ಯಕ್ಷ ಈ ಮುಂತಾದವರು ಪ್ರಚೇತಸನಿಗೆ ಹಿತೋಪದೇಶ ಮಾಡಿದರೂ ಫಲಕಾರಿಯಾಗುವುದಿಲ್ಲ. ಕೊನೆಗೆ ಚಂದ್ರನು ಭೂಮಿಗಿಳಿದು ಬಂದು ಪ್ರಚೇತಸನಿಗೆ ಬುದ್ಧಿವಾದ ಹೇಳಿದರೂ ದುರಹಂಕಾರಿಯಾದ ಆತ ಚಂದ್ರನ ಜತೆ ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಈ ಸಂದರ್ಭದಲ್ಲಿ ಶಿವನು ಪ್ರತ್ಯಕ್ಷಗೊಂಡು ಪ್ರಚೇತಸನ ಮನಪರಿವರ್ತನೆ ಮಾಡಿ, ಚಂದ್ರನ ಮಗಳು ಮಾರೀಷೆಯನ್ನು ಆತನಿಗೆ ಮದುವೆ ಮಾಡಿಕೊಡುವುದರ ಮೂಲಕ ಪ್ರಚೇತಸ ತನ್ನ ಕೆಟ್ಟ ಕಾರ್ಯವನ್ನು ಬಿಟ್ಟು ಅರಣ್ಯ ಸಂರಕ್ಷಣೆಯೂ ಪ್ರಕೃತಿಯ ಪ್ರತಿಯೊಂದು ಜೀವಜಾಲಗಳಿಗೂ ಅತ್ಯವಶ್ಯಕವಾಗಿರುವ ಸಂಗತಿಯನ್ನು ತಿಳಿಯುತ್ತಾನೆ ಮತ್ತು ಅದನ್ನು ನಾಡಿಗೆ ತಿಳಿಸುವ ಕಾರ್ಯಕ್ಕೆ ಮುಂದಾಗುತ್ತಾನೆ.

ಮಾರೀಷ ಕಲ್ಯಾಣ ಅಥವಾ ವೃಕ್ಷರಕ್ಷಣ ತಾಳಮದ್ದಳೆಯಲ್ಲಿ ಭಾಗವತರಾಗಿ ತಲ್ಪನಾಜೆ ಶಿವಶಂಕರ ಭಟ್, ಚೆಂಡೆಯಲ್ಲಿ ಬಳ್ಳಮೂಲೆ ಈಶ್ವರ ಭಟ್, ಮದ್ದಳೆಯಲ್ಲಿ ಈಶ್ವರ ಮಲ್ಲ, ಚಕ್ರತಾಳದಲ್ಲಿ ವಿಷ್ಣು ತತ್ವಮಸಿ ಸಹಕರಿಸಿದರು. ಅರ್ಥಧಾರಿಗಳಾಗಿ ಈಶ್ವರನಾಗಿ ಮಹೇಶ ಏತಡ್ಕ, ಚಂದ್ರನಾಗಿ ದಿವಾಣ ಶಿವಶಂಕರ ಭಟ್, ಧನ್ವಂತರಿಯಾಗಿ ವಸುಂಧರ ಹರೀಶ್, ವನದೇವತೆಯಾಗಿ ಶ್ರದ್ಧಾ ಭಟ್ ನಾಯರ್ಪಳ್ಳ, ಪದ್ಮಕನಾಗಿ ಡಾರತ್ನಾಕರ ಮಲ್ಲಮೂಲೆ, ಯಕ್ಷನಾಗಿ ಶಶಿಧರ ಕುದಿಂಗಿಲ, ಪ್ರಚೇತಸನಾಗಿ ಶೇಣಿ ವೇಣುಗೋಪಾಲ ಭಟ್, ಪುರಾಧೀಶನಾಗಿ ಮಣಿಕಂಠ ಪಾಂಡಿಬಯಲು ಸಹಕರಿಸಿದರು. ಯಕ್ಷಗಾನದ ಹಿರಿಯ ಕಲಾವಿದರಾದ ಅಡ್ಕ ಗೋಪಾಲಕೃಷ್ಣ ಭಟ್, ಬೆಳ್ಳಿಗೆ ನಾರಾಯಣ ಮಣಿಯಾಣಿ ಈ ಮುಂತಾದವರು ಉಪಸ್ಥಿತರಿದ್ದರು.

ವರದಿ – ಡಾ ರತ್ನಾಕರ ಮಲ್ಲಮೂಲೆ

error: Content is protected !!
Share This