‘ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ ಅವರು ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ’ ಎಂದು ಸ್ಮರಿಸುತ್ತಾರೆ ಅವರ ಒಡನಾಡಿಯಾಗಿದ್ದ ಹಾಗೂ ಅವರ ಜೊತೆಗೆ ಅನೇಕ ತಾಳಮದ್ದಲೆ ಕಾರ್ಯಕ್ರಮಗಳಲ್ಲಿ ಅರ್ಥದಾರಿಯಾಗಿ ಭಾಗವಹಿಸಿದ್ದ ಖ್ಯಾತ ಯಕ್ಷಗಾನ ವಿದ್ವಾಂಸ ಮತ್ತು ಸಂಶೋಧಕ ಡಾ.ಎಂ ಪ್ರಭಾಕರ ಜೋಶಿ ಅವರು.

‘ಕುಂಬ್ಳೆ ಅವರು ಬಹಳ ಪ್ರತಿಕೂಲ ವಾತಾವರಣದಲ್ಲಿ ಬೆಳೆದಿದ್ದರೂ, ಸ್ವಂತ ಪರಿಶ್ರಮದಿಂದ ಯಕ್ಷಗಾನದ ಶ್ರೇಷ್ಠ ಕಲಾವಿದರಾಗಿ, ಮಾತುಗಾರರಾಗಿ ಹೊರಹೊಮ್ಮಿದರು. ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಕುಂಬ್ಳೆ ಸುಂದರ ರಾವ್ ಅವರು ಯಕ್ಷಗಾನದಲ್ಲಿ ಮಾತುಗಾರಿಕೆಗೆ ಹೊಸ ರೂಪ ನೀಡಿದ ಇಬ್ಬರು ಶ್ರೇ ಷ್ಠ ಕಲಾವಿದರು. ಕುಂಬ್ಳೆ ಅವರದು ತುಂಬಾ ಭಾವನಾತ್ಮಕವಾದ ಹಾಗೂ ಪರಿಣಾಮಕಾರಿಯಾದ ಮಾತುಗಾರಿಕೆ’ ಎಂದು ಜೋಶಿ ಬಣ್ಣಿಸಿದರು.
‘ಹಲವಾರು ಮೇಳಗಳಲ್ಲಿ ತಿರುಗಾಟ ಮಾಡಿದ ಕುಂಬ್ಳೆ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಸುರತ್ಕಲ್ ಮೇಳ ಹಾಗೂ ಧರ್ಮಸ್ಥಳ ಮೇಳಗಳಲ್ಲಿ ಕಲಾವಿದರಾಗಿ ಅವರು ಹೆಚ್ಚು ಸಮಯ ಕಲಾ ವ್ಯವಸಾಯ ಮಾಡಿದ್ದಾರೆ. ಭರತ, ಕರ್ಣ, ವಿಶ್ವಾಮಿತ್ರ ಮೊದಲಾದ ಹಲವು ಪಾತ್ರಗಳಲ್ಲಿ ಅವರು ಛಾಪುಮೂಡಿಸಿದ್ದರು. ಈ ಪಾತ್ರಗಳಿಗೆ ಹೊಸ ರೂಪ ಕೊಟ್ಟ ವ್ಯಕ್ತಿ. ಒಬ್ಬ ನಟನ ಬಲದಿಂದಲೇ ಮೇಳಕ್ಕೆ ಜನಾಕರ್ಷಣೆ ಉಂಟುಮಾಡಿದಂತಹ ಮೇರು ಕಲಾವಿದ ಅವರು’ ಎಂದರು.
‘ತಾಳಮದ್ದಲೆಯಲ್ಲಿ ಸಂವಾದಕ್ಕೆ ಒದಗುವ ಮಾತುಗಾರ. ತಾಳಮದ್ದಲೆಯಲ್ಲಿ ನನ್ನ ಮತ್ತು ಅವರ ಜೋಡಿ ಒಂದು ಕಾಲದಲ್ಲಿ ಬಹಳ ಜನಪ್ರಿಯವೂ ಆಗಿತ್ತು.’ ಎಂದು ಮೆಲುಕು ಹಾಕಿದರು.
‘ಒಬ್ಬ ಯಕ್ಷಗಾನ ಕಲಾವಿದನಾಗಿ ಯಾವುದೇ ಹಣದ ಬಲ, ಜಾತಿಯ ಬಲ, ಗುಂಪಿನ ಬಲ ಇಲ್ಲದೆ ಅವರು ಸುರತ್ಕಲ್ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದು ಕೂಡ ದೊಡ್ಡ ಸಾಧನೆಯೇ ಸರಿ. ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಅವಕಾಶ ಮಾಡಿಕೊಟ್ಟ ಬಿಜೆಪಿ, ಸುರತ್ಕಲ್ ಜನತೆ ಹಾಗೂ ಯಕ್ಷಗಾನ ಕಲಾವಿದರು ಹೆಮ್ಮೆ ಪಡುವಂತ ಸಾಧನೆ ಇದು. ಯಕ್ಷಗಾನ ಕಲಾವಿದರು ಈ ರೀತಿ ಸಾಧನೆ ಮಾಡಿದ್ದು ರಾಜಕೀಯ ರಂಗದಲ್ಲೂ ಹೊಸತು‘ ಎಂದು ಅವರು ಹೇಳಿದರು.
‘ಅವರ ಬಹುಮುಖ ಸಾಧನೆಗೆ ಬಹುಮುಖ ಮನ್ನಣೆಯು ಸಿಕ್ಕಿದೆ. ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರೂ ಆಗಿದ್ದರು. ಅವರು ಹಾಕಿಕೊಟ್ಟ ದಾರಿಯಲ್ಲಿ ಯಕ್ಷಗಾನದ ಮಾತುಗಾರಿಕೆ ಮುಂದುವರಿಯಲಿ. ಅವರ ಹೆಸರನ್ನು ಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಳ್ಳುವ ಅಗತ್ಯ ಇದೆ’ ಎನ್ನುತ್ತಾರೆ ಜೋಶಿ.
(ಪ್ರಜಾವಾಣಿ)