ಸ್ಥಿರೀಕರಣ – ಪರಿಷ್ಕರಣ – ವಿಸ್ತರಣ
ಬೆಂಗಳೂರಿನಲ್ಲಿ – ಕರ್ನಾಟಕ ಸಾಂಸ್ಕೃತಿಕ ಕಲಾಪರಿಷತ್ತು ಸಂಘಟಿಸಿದ
ಐದನೆಯ ಯಕ್ಷಗಾನ ಸಮ್ಮೇಳನ (ದಿನಾಂಕ: ಜನವರಿ 2011) ಅಧ್ಯಕ್ಷೀಯ ಭಾಷಣ
ಸರ್ವಾಶಾ ಪರಿಪೂರಣಕ್ಷಮಕರಂ ಸರ್ವೋಪಕಾರೋದಯಂ |
ಸನ್ಮಾರ್ಗಾಭಿರತಂ ಸಮಸ್ತ ದುರಿತ ಪ್ರಧ್ವಂಸಿ ಸತ್ಯಾಸ್ಪದಂ |
ಬ್ರಹ್ಮಾವಾಸ ಮಹೇಶ ವೇದನಿಲಯಂ ವಿದ್ಯಾಧರೈರಾಜಿತಂ |
ಪ್ರತ್ಯಕ್ಷಂ ಭುವಿ ಭಾನು ಬಿಂಬ ಸದೃಷಂ ವಂದೇ ಸಭಾಮಂಡಲಂ |
ಗುರುವೆ ಪರಮಾನಂದ ಸದ್ಗುಣಭರಿತ ಪಾವನಚರಿತ ಸನ್ನುತ
ಸುರನರೋರಗ ಲೋಕರಕ್ಷಕ ವಿಶ್ವಮೂರುತಿಯೆ
ದುರಿತ ತಿಮಿರ ಪತಂಗ ವಿದ್ಯಾಶರಧಿ ಸರ್ವೋತ್ತುಂಗ ಸಂತತ
ಕರುಣದಿಂ ನೀನೆಮಗೆ ಪಾಲಿಸು ಮತಿಗೆ ಮಂಗಲವ
ವಾಚಾತೀತಂ ಮನೋತೀತಂ ಭಾವಾತೀತಂ ನಿರಂಜನಂ
ಸರ್ವಶೂನ್ಯಂ ನಿರಾಕಾರಂ ನಿಶ್ಶಬ್ದಂ ಬ್ರಹ್ಮ ಉಚ್ಚತೇ
– ಪಾರ್ತಿಸುಬ್ಬನ ಯಕ್ಷಗಾನ ‘ಸಭಾಲಕ್ಷಣ’ದಿಂದ
ಆತ್ಮೀಯರಾದ ಯಕ್ಷಗಾನ ಕಲಾವಿದರೆ, ಕಲಾಭಿಮಾನಿಗಳೆ, ಸಂಘಟಕರೆ,
ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ಈ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಆರಿಸಿ ತೋರಿಸಿದ ಈ ದೊಡ್ಡ ಗೌರವಕ್ಕಾಗಿ, ಪ್ರೀತಿಗಾಗಿ ಪ್ರತಿಷ್ಠಾನದ ಮುಖ್ಯಸ್ಥರಾದ ಸಾಂಸ್ಕೃತಿಕ ಕಾರ್ಯಸಾಹಸಿ ಶ್ರೀ ಎಸ್.ಎನ್.ಪಂಜಾಜೆ ಮತ್ತು ಬಳಗಕ್ಕೆ ಕೃತಜ್ಞತೆ ಎಂದಷ್ಟೇ ಹೇಳಿದರೆ ಸಾಲದು.
ವಂದೇ ಗುರುಪರಂಪರಾಂ
ಈ ಸಂದರ್ಭದಲ್ಲಿ ನಾನು ಯಕ್ಷಗಾನ ಕ್ಷೇತ್ರದಲ್ಲಿ ಪ್ರವೇಶಿಸಿ ಮುನ್ನಡೆಯಲು ಕಾರಣರಾದವರನ್ನು ಸಂಕ್ಷೇಪವಾಗಿ ಸ್ಮರಿಸುವುದು ನನ್ನ ಕರ್ತವ್ಯ. ನನ್ನ ಹಿರಿಯರು, ಯಕ್ಷಗಾನದ ಗುರುಗಳಾಗಿ ನಮ್ಮೂರ ಪರಿಸರದಲ್ಲಿ ಖ್ಯಾತರಾಗಿದ್ದ ನನ್ನ ಅಜ್ಜ ದಿ. ಅನಿರುದ್ಧ ಭಟ್ ಅವರು, ನನ್ನನ್ನು ಬೆಳೆಸಿದ ಮಾಳದ ಶ್ರೀ ಪರಶುರಾಮ ಯಕ್ಷಗಾನ ಮಂಡಳಿ, ಕಾರ್ಕಳದ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ, ಶ್ರೀ ವೆಂಕರಮಣ ಯಕ್ಷಗಾನ ಕಲಾ ಸಮಿತಿ, ವಿವಿಧ ಯಕ್ಷಗಾನ ಸಂಘಗಳು, ವೇದಿಕೆಗಳು, ಹಿರಿಕಿರಿಯ ಸಹವರ್ತಿಗಳು ಸ್ಮರಣೀಯರು. ಯಕ್ಷಗಾನದ ಮಹಾಕವಿ ಪ್ರತಿಭೆ ಶ್ರೀ ಡಾ|| ಶೇಣಿ ಅವರು, ಮಲ್ಪೆ ಸಾಮಗ ಸೋದರರು ಮೊದಲಾದ ಹಿರಿಯರಿಂದ ತೊಡಗಿ ಇಂದಿನ ನನ್ನ ಸಹಕಲಾವಿದರ ತನಕ ನನ್ನ ಬೆಳವಣಿಗೆಗೆ ಕಾರಣರು. ಡಾ|| ಶಿವರಾಮ ಕಾರಂತ, ಕುಕ್ಕಿಲ ಕೃಷ್ಣಭಟ್ಟರಿಂದ ಮೊದಲ್ಗೊಂಡು ಪ್ರೊ. ಅಮೃತ ಸೋಮೇಶ್ವರ, ಡಾ. ಕೆ.ಎಮ್. ರಾಘವ ನಂಬಿಯಾರ್, ದಿ.ಮಹಾಬಲ ಹೆಗಡೆ, ಶಂಭು ಹೆಗಡೆ ತನಕ ಅನೇಕ ಹಿರಿಕಿರಿಯರು ಸಂಶೋಧನೆ, ವಿಮರ್ಶೆಗಳಿಗೆ ಸಹವರ್ತಿಗಳು ಸ್ಪೂರ್ತಿದಾಯಕರು. ಸಂಘಟನೆಗಳು, ವೇದಿಕೆಗಳು, ಸಂಸ್ಥೆಗಳು, ಪ್ರಸಾರ ಮಾಧ್ಯಮಗಳು ನೀಡಿದ ಅವಕಾಶಗಳು, ಎಲ್ಲಾ ಕಲಾವಿದ ಮಿತ್ರರು ನೀಡಿದ ಅವಕಾಶ, ಪ್ರೀತಿ ಸ್ನೇಹಗಳು ಅವಿಸ್ಮರಣೀಯ. ನನ್ನ ಕುಟುಂಬದ ಸಹಾಯ ವಿಶೇಷವಾದದ್ದು. ಇವರೆಲ್ಲ ಒಂದಲ್ಲ ಒಂದು ಬಗೆಯಿಂದ ಗುರುಗಳೇ. ಅವರಿಂದ ನಾನು ಉಪಕೃತ.
ಹಿಂದಿನ ಸಮ್ಮೇಳನಗಳ ಅಧ್ಯಕ್ಷರಾದ ಹೊಸ್ತೋಟ ಮಂಜುನಾಥ ಭಾಗವತರು, ರಾಮದಾಸ ಸಾಮಗ, ದಿ. ಮುದೇನೂರು ಸಂಗಣ್ಣ, ಡಾ.ರಮಾನಂದ ಬನಾರಿ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ.
ನಿರೀಕ್ಷೆ
ಇಂತಹ ಸಮ್ಮೇಳನಗಳ ಅಧ್ಯಕ್ಷ ಭಾಷಣವೆಂಬುದು ಏನನ್ನು ಒಳಗೊಂಡಿರಬೇಕೆಂಬ ಕೆಲವು ನಿರೀಕ್ಷೆಗಳಿರುತ್ತವೆ. ಕಲೆಯ ಭೂತ ವರ್ತಮಾನ ಭವಿಷ್ಯಗಳ ವಿವೇಚನೆ, ಮುಖ್ಯತಃ, ಪ್ರಸ್ತುತ ಸ್ಥಿತಿ ಗತಿಗಳ ಮತ್ತು ಆಗಬೇಕಾದ ಕೆಲಸಗಳ ಚಿಂತನೆಗಳು ಇವೆಲ್ಲ ಅಪೇಕ್ಷಿತ. ಆದರೆ ಹೀಗೆ ಮಾಡುವಾಗ, ಎಲ್ಲಿ ಇದು ನಾನು ಭಯಪಡುವ ‘ಉಪದೇಶ ಸಂಹಿತೆಯಾಗುತ್ತದೋ’, ಅಲ್ಲ ‘ನನಗೆ ಚೆನ್ನಾಗಿ ಪರಿಣತಿ ಇರುವ ಪ್ರಸಂಗವಾದ ಅಧಿಕಪ್ರಸಂಗವಾಗಿಬಿಡುತ್ತದೋ’ ಎಂಬ (ಕುಶಿ ಅವರು ಟಂಕಿಸಿದ ಒಂದು ನುಡಿ ನಾಣ್ಯ) ಭೀತಿಯಿಂದಲೇ ಕೆಲವು ವಿಚಾರಗಳನ್ನು ಮಂಡಿಸುತ್ತೇನೆ. ಇದು ಮಾರ್ಗದರ್ಶಿ ಪ್ರವಚನವಲ್ಲ. ನಾವು ನೀವೆಲ್ಲ ಸೇರಿ ಸಹಚಿಂತನ ಮಾಡಬಹುದಾದ ‘ಸಂಗತಿ ಪ್ರಸಂಗ’, ಇದು ನಿಮ್ಮದೇ ಸಂಭಾಷಣ.
ಯಕ್ಷಗಾನ – ಯಕ್ಷಗಾನಗಳು
ಯಕ್ಷಗಾನವೆಂಬ, ಪ್ರಾಯಃ ಗೀತ ಪ್ರಬಂಧ ಜಾತಿಯಿಂದ ತನ್ನ ಹೆಸರನ್ನು ಹೊಂದಿರುವ ಈ ಸಾಂಪ್ರದಾಯಿಕ ರಂಗ ಪ್ರಕಾರವು ಕರ್ನಾಟಕವು ಹೆಮ್ಮೆಪಟ್ಟುಕೊಳ್ಳಬಹುದಾದ ಕಲಾ ಸಂಪದ. ಆಟ, ಬಯಲಾಟ, ದಶಾವತಾರ ಆಟ, ಕೇಳಿಕೆ ಹೀಗೆ ಬೇರೆ ಬೇರೆ ಹೆಸರುಗಳಿಂದ ಬಂದಿರುವ, ಕರಾವಳಿ-ಮಲೆನಾಡುಗಳಲ್ಲಿ ಪ್ರದರ್ಶನದಿಂದ ಅಭಿವೃದ್ಧಿ ಹೊಂದಿರುವ ಯಕ್ಷಗಾನವು ಭಾರತದಾದ್ಯಂತ ಕಾಣಿಸುವ ವಿಶೇಷತಃ ಅಸ್ಸಾಂನಿಂದ ಶ್ರೀಲಂಕಾದ ತನಕ ‘ಭಕ್ತ ಪಥ’ (ಬತ್ತದ ದಾರಿ, ಅಕ್ಕಿ ಪಟ್ಟಿ, Rice Belt ) ಯ ಸಬಲವಾದ ಚೈತನ್ಯಶಾಲಿ ಕಲೆಗಳ ಕುಟುಂಬಕ್ಕೆ ಸೇರಿದ್ದು ಈ ಎಲ್ಲಾ ಕಲೆಗಳೂ ಪರಸ್ಪರ ಸಂಬಂಧವುಳ್ಳವು, ಏಕಮೂಲವೆಂಬಷ್ಟು ಸಾಮ್ಯ, ಹಾಗೆಯೆ ವಿಚಿತ್ರ ಭಿನ್ನತೆಗಳು ಇವುಗಳೊಳಗಿವೆ.
ಕರ್ನಾಟಕದಲ್ಲಿ ಕರಾವಳಿಯ ಯಕ್ಷಗಾನ ತೆಂಕು, ಬಡಗು, ಉತ್ತರಕನ್ನಡ ತಿಟ್ಟುಗಳಲ್ಲದೆ, ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಪಾರಿಜಾತ, ಗಟ್ಟದ ಕೋರೆ, ಕೇಳಿಕೆ, ದಾಸರಾಟ ಮೊದಲಾದ ವಿವಿಧ ರೀತಿಯ ಬಯಲಾಟಗಳಿವೆ. ಇವುಗಳು ಒಂದೇ ಸಮೂಹದ ಕಲೆಗಳಾದರೂ, ಅವುಗಳು ಬೆಳೆದು ಬಂದ ಸ್ಥಿತಿ ಗತಿಗಳು ಬೇರೆ. ಎಲ್ಲ ಪ್ರಕಾರಗಳಿಗೆ ಹೊಂದುವಂತೆ ಅಡಕವಾದ ವಿವೇಚನೆ ಕಠಿಣ, ಆದರೂ ಇಲ್ಲಿ ಪ್ರಸ್ತಾಪಿಸಿದ ಅಂಶಗಳಲ್ಲಿ ಎಲ್ಲಾ ಪ್ರಕಾರಗಳಿಗೆ ಭಾಗಶಃ ಹೊಂದಿಕೆಯಾಗಬಹುದಾದವು. ಹತ್ತನೆಯ ಶತಮಾನದ ಬಳಿಕ ವಿಶೇಷ ಉತ್ಕರ್ಷವನ್ನು ಕಂಡ ಭಕ್ತಿ ಪಂಥದಿಂದ ರೂಪುಗೊಂಡು ಇಂದಿನವರೆಗೆ ಬೆಳೆದು ಬಂದಿರುವ ಕಲೆ ಬಯಲಾಟ. ಇದಕ್ಕೆ ಎಂಟು ಶತಮಾನಗಳ ಖಚಿತವಾದ ಹಿನ್ನೆಲೆ ಇದೆ. (ಜನ್ನನ ಯಶೋಧರ ಚರಿತೆಯ ‘ಕೇಳಿಕೆ’ಯ ಉಲ್ಲೇಖ – ಕುಕ್ಕಿಲ ಸಂಪುಟ. ಕುಕ್ಕಿಲ ಕೃಷ್ಣ ಭಟ್ಟ, ಕರ್ನಾಟಕ ಸಂಘ, ಪುತ್ತೂರು)
ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ಕಾಣುವ ನಾಟ್ಯರಂಗದ ಅನೇಕ ವಿವರಗಳು ನಮ್ಮ ಅಖಿಲ ಭಾರತೀಯ ಬಯಲಾಟಗಳ ಅನೇಕ ಅಂಶಗಳನ್ನು ತದ್ವತ್ತಾಗಿ ಹೋಲುತ್ತವೆ. (ಉಲ್ಲೇಖ ಅದೇ) ಅಂದರೆ, ಭಾರತದಲ್ಲಿ ಈ ಬಗೆಯ ನಾಟ್ಯ ಪರಂಪರೆ ಕ್ರಿಸ್ತಪೂರ್ವ ನಾಲ್ಕನೆಯ ಶತಮಾನಕ್ಕೂ ಮೊದಲಿನದು, ನಾಟ್ಯ ಶಾಸ್ತ್ರಕಾರನು ಸಂಗ್ರಹಿಸುವ ಕಾಲಕ್ಕೆ ಅವನ ಮುಂದೆ ಇದ್ದದ್ದು ಎಂಬುದು ಸ್ಪಷ್ಟ. ಅಲ್ಲಿಂದ ಮುಂದೆ ಇದು ಹಲವು ಹಂತಗಳನ್ನು ದಾಟಿ ಕವಲುಗಳಾಗಿ ಬೆಳೆದು ಬಹುಶಃ ಹದಿನಾರನೆಯ ಶತಮಾನಕ್ಕಾಗುವಾಗ, ಇಂದು ನಾವು ಕಾಣುವ ರೂಪಗಳ ಮಾತೃಕೆಯಾಗಿ ಆಕಾರಗೊಂಡಿರಬೇಕು.
‘ಯಕ್ಷಗಾನ’ ಒಂದು – ಅದರೊಳಗೆ ಹಲವು
ನಾವು ಕಲಾ ದೃಷ್ಟಿಯಿಂದ ಒಂದು ಬಗೆಯ ‘ಆದರ್ಶ ರೂಪ’ವನ್ನು ಕಲ್ಪಿಸಿಕೊಂಡು ಆ ಮಾನದಿಂದ ವಿಮರ್ಶಿಸುವುದು ಸಹಜವೇ. ಅದು ಕಲಾವಿಮರ್ಶೆಯ ದೃಷ್ಟಿಯಾದರೆ, ಅಧ್ಯಯನ ದೃಷ್ಟಿಯಿಂದ ಹಲವು ಬಗೆಯ ಯಕ್ಷಗಾನಗಳಿವೆ. ಸಾಂಪ್ರದಾಯಿಕ, ನಾಟಕ ಮಿಶ್ರಿತ, ಹವ್ಯಾಸಿ – ವ್ಯವಸಾಯಿ ಇತ್ಯಾದಿ ಪ್ರಾಯೋಗಿಕ ರೂಪವಾಗಿ ಬೇರೆಯೇ ಆಗಿ ಗಣನಾರ್ಹ. ಹೀಗೆ ಯಕ್ಷಗಾನ ಇದೆ, ಯಕ್ಷಗಾನಗಳೂ ಇವೆ.
ಪಾರಂಪರಿಕ ಕಲೆ – ಸ್ವತ್ವದ ಸತ್ವ
ಯಕ್ಷಗಾನವೂ, ತತ್ಸಮಾನವಾದ ಅನೇಕ ಸಾಹಿತ್ಯ ಕಲೆಗಳೂ (ಉದಾ, ಜಾತ್ರಾ, ತೆರುಕ್ಕುತ್, ಭಾಗವತರು, ದಶಾವತಾರಿ ಇತ್ಯಾದಿ) ಸಾರತಃ ಪಾರಂಪರಿಕ ರಂಗಕಲೆಗಳು, ನೃತ್ಯ ವಾದ್ಯ, ನಾಟಕ, ಆಹಾರ್ಯಾದಿ ಅಂಶಗಳ ಮಿಶ್ರಣವಾಗಿರುವ ‘ಸಮಗ್ರ’ ರಂಗಗಳು. ಇವು ಜಾನಪದವೋ, ಶಾಸ್ತ್ರೀಯವೋ (Folk classical) ಎಂಬ ಪ್ರಶ್ನೆಯನ್ನೆತ್ತಿಕೊಂಡು ಚರ್ಚೆ ನಡೆದಿದ್ದು ಹಲವು ಬಗೆಯ ನಿರ್ಣಯಗಳು ಬಂದಿವೆ. ಪಾಶ್ಚಾತ್ಯ Folk ಮತ್ತು classical ಎಂಬ ವಿಭಜನೆ ನಮ್ಮ ಪ್ರಾಕಾರಗಳಿಗೆ ಹಲವು ಬಾರಿ ಹೊಂದುವುದಿಲ್ಲ. ನಮ್ಮ ‘ದೇಶಿ’ – ‘ಮಾರ್ಗ’ ಎಂಬ ವಿಭಾಗವು ಜಾನಪದ ಮತ್ತು ಶಾಸ್ತ್ರೀಯ ಎಂಬ ಅರ್ಥದವು ಅಲ್ಲ. ಯಕ್ಷಗಾನವು ಆಂತರಿಕವಾಗಿಯೇ ಖಚಿತವಾದ ನಿರ್ಣಯಗಳನ್ನು ಅರ್ಥಾತ್ ಶಾಸ್ತ್ರವನ್ನು ಒಳಗೊಂಡ ಶಾಸ್ತ್ರೀಯ ಕಲೆ, ದೇಶಿ, ಕಲೆ, ಇದನ್ನು ಪಾರಂಪರಿಕ ರಂಗಭೂಮಿ (Traditional Theatre) ಅನ್ನುವುದು ಸೂಕ್ತ.
ಯಕ್ಷಗಾನದಂತಹ ಶೈಲಿ ಬದ್ಧವಾದ, ರಮ್ಯಾದ್ಭುತವಾದ ಮತ್ತು ಅವಾಸ್ತವ ರಂಗದ ಸತ್ವವು ನಿಂತಿರುವುದು ಅದರ ರೂಪ, ಸೌಂದರ್ಯ, ಗಾಂಭೀರ್ಯಗಳಲ್ಲಿ ಅರ್ಥಾತ್ ಅದರ ಗಾನ, ನರ್ತನ, ವೇಷಗಳ ಶೈಲಿ, ಅಭಿವ್ಯಕ್ತಿಯ ರಂಗ ವಿಧಾನಗಳು ಅಂಗೀಕೃತ ಮೂಲಾಂಶಗಳು. ಶೈಲಿಯ ಹೊರಗೆ ರೂಪವನ್ನು ಭಂಗಿಸಿ ಮಾಡುವ ‘ಹೊಸತನ’ವಾಗಲಿ, ರಂಗದ ಯಶಸ್ಸು ಆಗಲಿ ಇಲ್ಲಿ ಸ್ವೀಕಾರ್ಯವಲ್ಲ. ಯಕ್ಷಗಾನ ಯಕ್ಷಗಾನವಾಗಿ ಬಾಳಬೇಕು, ಬೆಳೆಯಬೇಕು, ಮೆರೆಯಬೇಕು, ಬೇರೆ ಏನೋ ಆಗಿ ಅಲ್ಲ. ಈ ಸ್ವತ ರಕ್ಷಣೆ, ಪ್ರಜ್ಞೆ, ಗುರುತಿನ ಪ್ರತ್ಯೇಕೆ ಅದರ ಜೀವಶಕ್ತಿ.
ಜತೆಗೆಯೆ ಗಮನಿಸಬೇಕಾದುದು ಯಕ್ಷಗಾನ ಕಲೆಯ ಪ್ರದರ್ಶನ ತಂತ್ರ, ರೂಪ, ಕಥಾನಕ, ಆಶಯಗಳಲ್ಲಿ ಕಲೋಚಿತವಾದ ಮತ್ತು ಕಾಲೋಚಿತವಾದ ಸುಧಾರಣೆಗಳಿಗೆ ಇದರಲ್ಲಿ ಅವಕಾಶ ಇದ್ದೇ ಇದೆ. ಕಲಾ ಸೌಂದರ್ಯ, ಪರಂಪರೆಯ ರಕ್ಷಣೆಯೆಂದರೆ ಇದ್ದಂತೆ ಇರುವುದು ಎಂದಷ್ಟೇ ಅಲ್ಲ. ನವೀನ ಜ್ಞಾನ ಪ್ರಭಾವ, ಪ್ರಗತಿಗಳನ್ನು ತನ್ನ ಹಾಗೆ ಜೀರ್ಣಿಸಿಕೊಂಡು ಆತ್ಮೀಕರಿಸಿಕೊಳ್ಳುವುದು, ಮುನ್ನೋಟದಿಂದ ಮುನ್ನಡೆಯುವುದೂ ಹೌದು.
ಶತಮಾನಗಳ ಕಾಲ ಬೆಳೆದು ಬಂದ ಒಂದು ರೂಪಕ್ಕೆ ಸಂದಿರುವ, ವಿವಧ ಅಂಗೋಪಾಂಗಗಳಿಂದ ಕೂಡಿದ ಪ್ರೌಢವೂ, ಸುಂದರವೂ, ಸಂಕೀರ್ಣವೂ ಆಗಿರುವ ಒಂದು ಸಮುಚ್ಚಯ ಕಲೆಯಲ್ಲಿ ಮುಂದಡಿಯಿಡುವಾಗ ತುಂಬಾ ಜಾಗೃತೆ, ಭಯ, ವಿನಯಗಳು ಅಗತ್ಯ. ಈ ದೃಷ್ಟಿಯಿಂದ ಯಕ್ಷಗಾನಕ್ಕೆ ಇಂದು ಬೇಕಾಗಿರುವುದು ಸ್ಥಿರೀಕರಣ-ಪರಿಷ್ಕರಣ-ವಿಸ್ತರಣ ಎಂಬ ತ್ರಿವಿಧ ಕ್ರಿಯಾ ಸೂತ್ರ ಎಂಬುದು ನನ್ನ ನಮ್ರವಾದ ನಿವೇದನೆ.
ಸ್ಥಿತಿ-ದ್ವಿಮುಖ ಚಲನೆ
ಈ ಕುರಿತು ಯೋಚಿಸುವುದಕ್ಕೆ ಹಿನ್ನೆಲೆಯಾಗಿ ಒಟ್ಟು ರಂಗ ಸ್ಥಿತಿ ಚಿತ್ರವನ್ನು ಗಮನಿಸಬಹುದು. ಸುಮಾರು ಮೂವತ್ತೈದು (ಈಗ ನಲವತ್ತೈದು) ವ್ಯವಸಾಯಿಕ, ಅರೆವ್ಯವಸಾಯಿಕ ತಂಡಗಳು, ನೂರರಷ್ಟು ಹವ್ಯಾಸಿ ಗುಂಪುಗಳು ಕರಾವಳಿ-ಮಲೆನಾಡುಗಳಲ್ಲಿವೆ. ಒಂದು ಸಾವಿರದಷ್ಟು (ಈಗ ಒಂದು ಸಾವಿರದ ಐನ್ನೂರು) ವ್ಯಾವಸಾಯಿಕ ಕಲಾವಿದರಿದ್ದಾರೆ. ಮಕ್ಕಳ ಮೇಳಗಳು, ಮಹಿಳಾ ತಂಡಗಳು, ಆಕಾಶವಾಣಿ ತಂಡಗಳಿವೆ. ಬೊಂಬೆಯಾಟದ ಐದು ತಂಡಗಳಿವೆ. ಹರಕೆ ಬಯಲಾಟದ ಮೇಳಗಳಲ್ಲಿ ಕೆಲವು ಹಲವು ವರ್ಷಗಳ ಮುಂಗಡ ಬುಕ್ಕಿಂಗ್ ಹೊಂದಿವೆ. ವರ್ಷಕ್ಕೆ ಸುಮಾರು ಹದಿನೈದು ಸಾವಿರ ಪ್ರದರ್ಶನಗಳಾಗುತ್ತಿವೆ. ಹಲವು ಸಂಶೋಧನೆ, ವಿಮರ್ಶೆ, ಕಮ್ಮಟ, ಗೋಷ್ಟಿಗಳು ಕಳೆದ ಐದು ದಶಕಗಳಲ್ಲಿ ಜರಗಿವೆ. ಶಿಕ್ಷಣ ಕೇಂದ್ರಗಳು ಕಾರ್ಯನಿರತವಾಗಿವೆ. ಹೀಗೆ ಒಟ್ಟು ಚಿತ್ರವು ಆಶಾದಾಯಕವಾಗಿದೆ. ಬಹುಶಃ ಯಕ್ಷಗಾನವು ದೇಶದ ಸಾಂಪ್ರದಾಯಿಕ ರಂಗಭೂಮಿಗಳಲ್ಲೇ ಅತ್ಯಂತ ಜೀವಂತ ರಂಗವಾಗಿರಬಹುದು. ಕರ್ನಾಟಕದ ಇತರ ಬಯಲಾಟಗಳು ಸಾಕಷ್ಟು ಜೀವಂತವಾಗಿವೆ. ಇದು ಒಂದು ಮುಖ.
ಇನ್ನೊಂದೆಡೆ, ಹರಕೆ ಆಟಗಳೆಂಬವು ಕೆಲವೊಮ್ಮೆ ‘ಹರಕೆ’ ಗಳೇ ಆಗುತ್ತಿವೆ. ಇಡೀಯ ರಾತ್ರಿಯ ಪ್ರದರ್ಶನಗಳಿಗೆ ಪೃಕ್ಷಕ ವರ್ಗ ಕಡಿಮೆಯಾಗುತ್ತಿದೆ. (ಇದಕ್ಕೆ ಚಿಕ್ಕ ಕುಟುಂಬಗಳು, ಕಾನೂನು ಭದ್ರತೆ ಸ್ಥಿತಿಗಳ ಆತಂಕ, ಸೌಲಭ್ಯದ ಅಪೇಕ್ಷೆ, ನಗರೀಕರಣ, ಹೆಚ್ಚು ಜನರು ದುಡಿಯಬೇಕಾದ ಸ್ಥಿತಿ, ಅಸ್ಥಿರವಾಗುತ್ತಿರುವ ಕೃಷಿ ಕ್ಷೇತ್ರ, ಮನೆಯಲ್ಲೇ ಸಿಗುವ ಎಲೆಕ್ಟ್ರಾನಿಕ್ ರಂಜನೆಯ ರಾಶಿಇತ್ಯಾದಿ ಸಾಮಾಜಿಕ ಕಾರಣಗಳಿವೆ) ಅಂತೆಯೇ ಡೇರೆ ಮೇಳಗಳ ಸಂಖ್ಯೆ ಇಳಿದಿದೆ. ಮೇಳಗಳ ಪ್ರಮಾಣಕ್ಕೆ ತಕ್ಕಂತೆ ಕಲಾವಿದರು ದೊರಕ್ಕುತ್ತಿಲ್ಲ. ಬಾಲ ಗೋಪಾಲ, ಕೋಡಂಗಿ ವೇಷಗಳಿಗೆ ತೀರ ಕೊರತೆ, ಇದೇ ಕೊರತೆ ಮುಂದೆ ಇತರ ವೇಷಗಳಿಗೆ ಬರಲಿದೆ. ಯಕ್ಷಗಾನ ಕೇಂದ್ರಗಳಿಗೆ ವಿದ್ಯಾರ್ಥಿಗಳೇ ಇಲ್ಲದ ಸ್ಥಿತಿ.
ರಂಗದ ಮೇಲೆ ಸುಲಭ ರಂಜಕ ಕಥಾನಕಗಳು. ಸಂಕರ ನೃತ್ಯಗಳು, ವಿಚಿತ್ರ ಅಭಿರುಚಿಗಳನ್ನು ಉಣಬಡಿಸುವ ತಂತ್ರಗಳು, ವೇಗದ ಆಕರ್ಷಣೆ, ಶೈಲಿ, ಭಂಗ, ‘ವಿಶೇಷ ಆಕರ್ಷಣೆ’, ಅಂಗೋಪಾಂಗ ಅಸಮಾಂಜಸ್ಯ ಪ್ರಯೋಗವೆಂಬ ಹೆಸರಿನ ಅಗ್ಗದ ನೂತನ ನಾವೀನ್ಯಾಗಳು ಆ ಯಕ್ಷಗಾನೀಯ ರೂಪಗಳು. ಇವೆಲ್ಲ ಶ್ರೀಮಂತ ಶೈಲಿ ಬದ್ಧ ಕಲೆಯೊಂದರ ಬುಡವನ್ನೇ ಅಲುಗಾಡಿಸಿ ಬಿಟ್ಟಿವೆ. ಇತರ ಕಲೆಗಳಿಗೆ ರಂಗಗಂಧ ನೀಡಬಲ್ಲ ಯಕ್ಷಗಾನ (ರಂಗ ಅವಧೂತ ಬಿ.ವಿ.ಕಾರಂತರ ನುಡಿ) ಸಿನಿಮಾ ಮೊದಲಾದ ಕಲೆಗಳಿಂದ ವಸ್ತುತಂತ್ರ ಪಡೆಯುವ ಸ್ಥಿತಿಗೆ ಬಂದಿದೆ. ನಮ್ಮ ಶ್ರೀಮಂತಿಕೆ ನಮಗೆ ಗೊತ್ತಿಲ್ಲವಾಗಿದೆ.
ವ್ಯಾವಸಾಯಿಕ ಅಸ್ಥಿರತೆ
ಯಕ್ಷಗಾನ ವೃತ್ತಿ ಇಂದು ಆಕರ್ಷಕವೇನಲ್ಲ. ಹಿಂದಿನ ಕಷ್ಟಗಳಿಗೆ ಹೋಲಿಸಿದಾಗ ಇಂದು ಸೌಲಭ್ಯ ಹೆಚ್ಚಿದ್ದರೂ ಮನೆಮನೆಗೆ ಬಂದ ಸೌಕರ್ಯ, ಆರ್ಥಿಕ ವಿಸ್ತಾರಗಳೆಡೆಯಲ್ಲಿ ಊರೂರು ತಿರುಗಿ, ಅಸೌಕರ್ಯ, ರಾತ್ರಿ ಇಡೀ ನಿದ್ದೆಗೆಡುವ ಕಠಿಣವಾದ ಉದ್ಯೋಗದತ್ತ ಬರುವವರು ಕಡಿಮೆಯಾಗುವುದು ಸಹಜ. ಇಷ್ಟು ಜನ ವ್ಯವಸಾಯಿ ಕಲಾವಿದರಿರುವುದೇ ಆಶ್ಚರ್ಯ. ಕಲೆಯ ಹುಚ್ಚು ಇಲ್ಲಿಯ ಒಂದು ಆಕರ್ಷಣೆ, ಕಲಾವಿದತ್ವ ಇನ್ನೊಂದು. ಇಂದಿನ ಸನ್ನಿವೇಶದಲ್ಲಿ ಯಕ್ಷಗಾನದ ಕಲಾವಿದ ಪಡೆಯುವ ದೊಡ್ಡ ಸಂಬಳ ಕೂಡಾ ತೃಪ್ತಿಕರ ಜೀವನದಲ್ಲ. ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಓದಿಸುವ ಕನಸು ಕಲಾವಿದನಿಗೂ ಸಹಜ ತಾನೇ? ಇದಕ್ಕೆಲ್ಲ ಈ ಗಳಿಕೆ ಪರ್ಯಾಪ್ತವಲ್ಲ. ಯಕ್ಷಗಾನದ ಶೈಲಿ ಸ್ವರೂಪಗಳ ಸಮಗ್ರ ಹಿಡಿತವಿರುವ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ.
ಮೇಳದ ಸಂಚಾಲಕ ಯಜಮಾನನಿಗೂ ಸಮಸ್ಯೆಗಳಿವೆ, ವೆಚ್ಚಗಳು ಏರುತ್ತಿವೆ. ‘ವೀಳ್ಯ’ ಏರಿಕೆಗೆ ವಿರೋಧ ಬರುತ್ತಿದೆ. ಹರಕೆ ಆಟಗಳ ಗೌಜಿ ಗದ್ದಲಗಳಿಗೆ ತುಂಬಾ ವೆಚ್ಚ ಮಾಡುವ ಹರಕೆದಾರರು ವೀಳ್ಯದ ಮೊತ್ತದ ಏರಿಕೆಗೆ ಅಸಮಾಧಾನ ಪಡುತ್ತಾರೆ. ಕಲಾವಿದರು ಶಿಸ್ತಿಗೊಳಪಟ್ಟು ಇರುವುದಿಲ್ಲ ಎಂದು ಮೇಳದ ಯಜಮಾನರು ಹೇಳುತ್ತಾರೆ. ಹುಟ್ಟಿನಲ್ಲಿ ವ್ಯವಸಾಯಿಕ ಯಕ್ಷಗಾನದ ಭವಿಷ್ಯ ಭದ್ರವಾಗಿಲ್ಲ. ಇನ್ನು ಮುಂದೆ ಹೆಚ್ಚು ಹೆಚ್ಚು ಕಲಾವಿದರು ಅರೆ ಹವ್ಯಾಸಿ ‘ಫ್ರೀಲ್ಯಾನ್ಸ್’ ವ್ಯವಸಾಯಿಗಳಾಗುವ ಲಕ್ಷಣಗಳು ಕಾಣಿಸುತ್ತಿವೆ, ಮೇಳಗಳ ರೂಪಗಳು ಬದಲಾಗಬಹುದು.
ಸ್ಥಿರೀಕರಣ
ಯಾವುದೇ ಕಲೆಯು ತನ್ನ ವಿಕಾಸವನ್ನು ಸಾಧಿಸಬೇಕಾದರೆ ತನ್ನನ್ನು ತಾನು ಕಂಡುಕೊಂಡು ಬಲಪಡಿಸಿಕೊಳ್ಳಬೇಕು. ಸ್ವಾತ್ಮಾನುಸಂಧಾನ ಮೊದಲು ಮತ್ತು ಆ ಬಳಿಕ ವಿಕಾಸ. ಯಕ್ಷಗಾನದ ತಿಟ್ಟುಗಳು ಮೊದಲು ತಮ್ಮ ಪ್ರತ್ಯೇಕ ರೂಪಗಳನ್ನು ಮರುಶೋಧನೆ ಮಾಡಿ, ಗುರುತಿಸಿ ಸ್ಥಿರೀಕರಿಸಬೇಕು. ದೊಡ್ಡಾಟ, ಗಟ್ಟದ ಕೋರೆಗಳು ಹಾಗೆಯೇ. ಕಲೆ ಒಳಗಿಂದ ಬೆಳೆಯಬೇಕು, ಸಂಕರ ಮತ್ತು ತೇಪೆಗಳಿಂದಲ್ಲ. ತನ್ನ ನೆಲೆಗಳ ಸ್ಪಷ್ಟ ಅರಿವಿದ್ದಾಗ, ಶೈಲಿಯ ಹಿಡಿತ ಸ್ಪಷ್ಟವಿದ್ದಾಗ ಅನ್ಯ ಪ್ರಭಾವಗಳು ಶೈಲಿಗೆ ಎರಕವಾಗಿ ಸೇರಿ ಹೊಂದಿ ಶೈಲಿ ವಿಸ್ತರಣಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ದಿ.ಕೆರೆಮನೆ ಶಂಭುಹೆಗಡೆ, ಶ್ರೀ ಕೆ. ಗೋವಿಂದ ಭಟ್ಟರ ನೃತ್ಯಶೈಲಿಗಳು ದೃಷ್ಟಾಂತಗಳು.
ಎಲ್ಲ ತಿಟ್ಟುಗಳಿಗೆ ಸಂಬಂಧಪಟ್ಟವರು ಮೊದಲು ತಮ್ಮ ತಿಟ್ಟುಗಳ ವೇಷಭೂಷಣ, ನೃತ್ಯ, ಗಾನ, ವಿಧಾನ, ರಂಗವಿಧಾನ, ಬಣ್ಣಗಾರಿಕೆಗಳ ಕುರಿತು ಸಮಗ್ರವಾದ ದೃಷ್ಟಿಯಿಂದ, ರಾಜಿ ಇಲ್ಲದ ಮೌಲಿಕ ಕಲಾ ಮೌಲ್ಯ ರಕ್ಷಣೆಯ (‘ಮೂಲ ಘಟಕ ಸಂರಕ್ಷಣೆ’ – ಡಾ. ಪುರುಷೋತ್ತಮ ಬಿಳಿಮನೆಯವರ ನುಡಿಗಟ್ಟು) ಕೆಲಸಕ್ಕೆ ಗಮನ ಕೊಡಬೇಕಾದುದು ಪ್ರಾಥಮಿಕ. ಇದು ತೆಂಕುತಿಟ್ಟಿಗೆ ಹೆಚ್ಚು ತುರ್ತಿನದು. ಕಾರಣ ಈ ತಿಟ್ಟು ಕಳೆದ ಏಳು ದಶಕಗಳಿಂದ ಸತತ ವಿಘಟನೆಗೊಳ್ಳುತ್ತ್ತ ಬಂದಿದೆ. ನಿಶ್ಚಿತ ವೇಷಗಳು, ಕಥೆಯ ನಡೆಯ, ಕಾಲ ಪ್ರಭೇದದಂತಹ ಸಾಮಾನ್ಯ ವಿಚಾರಗಳಲ್ಲೂ ಒಮ್ಮತವಿಲ್ಲದಿದ್ದರೆ ನಾವು ಇದನ್ನು ನಮ್ಮ ನಾಡಿನ ‘ಹೆಮ್ಮೆಯ ಕಲೆ’ ಎಂದು ಹೇಲುವುದು ಹುಸಿ ಪ್ರತಿಷ್ಟೆಯಾಗುತ್ತದೆ.
ದೊಡ್ಡಾಟ, ಸಣ್ಣಾಟ, ಗಟ್ಟದ ಕೋರೆ, ಬಯಲಾಟಗಳ ಸ್ವರೂಪ, ಸ್ಥಿರೀಕರಣ ಪರಿಷ್ಕಾರಗಳು ಒಟ್ಟೊಟ್ಟಿಗೆ ಆಗಬೇಕಾಗಿವೆ. ವೃತ್ತಿಪರತೆ, ಸಾತತ್ಯ, ಮತ್ತು ಶಿಕ್ಷಿತರ ಬೆಂಬಲ ಇಲ್ಲದೆ ಈ ಕಲೆಗಳು, ಶ್ರೀಮಂತ ಕಲೆಗಳಾದರೂ ಅಪರಿವಿಷ್ಕಾರದಿಂದ ಅಳಿವಿನತ್ತ ಸಾಗಿವೆ. ಬೇಕು ಮೂಡಲಪಾಯ, ದೊಡ್ಡಾಟಗಳಿಗೊಬ್ಬ ಕಾರಂತ, ಒಬ್ಬ ಕು.ಶಿ., ಒಬ್ಬ ಶಂಭು.
ಪರಿಷ್ಕರಣ – ನಿರ್ದೇಶನ
ಯಾವುದೇ ಕಲೆ ಕಾಲ ಕಾಲಕ್ಕೆ ತಕ್ಕ ಸೂಕ್ತ ಪರಿಷ್ಕಾರಗಳನ್ನು ಸಾಧಿಸಬೇಕಷ್ಟೆ? ಹಾಗೆ ಮಾಡುವಾಗ ಕಲಾ ಸ್ವರೂಪ ಗುಣವೃದ್ಧಿ, ಅಭಿವ್ಯಕ್ತಿ ಸೌಂದರ್ಯದ ವರ್ಧನ, ಸೌಲಭ್ಯದ ಅರ್ಥಪೂರ್ಣ ಅಳವಡಿಕೆ, ಕಥೆ-ಕಥಾನಕಗಳ ಅರ್ಥೈಸುವಿಕೆಯ ಮಂಡನೆ, ಆಶಯ, ಔದಾರ್ಯ, ಅಂಗೋಪಾಂಗಗಳಲ್ಲಿ ನಾಜೂಕು ಮತ್ತು ಬಳಕೆಯಲ್ಲಿ ಹೊಸ ಯೋಜನೆಗಳಾಗುವ ಅಗತ್ಯವಿದೆ. ಇದಾಗದಿದ್ದರೆ ಈ ತರಹದ ಕಲೆಗಳ ಭವಿಷ್ಯ ಭದ್ರವಾಗಲಾರವು.
ಈ ದೃಷ್ಟಿಯಿಂದ ಯಕ್ಷಗಾನವು ಪ್ರದರ್ಶನಗಳಿಗೆ ಒಂದು ಮಾಧ್ಯಮ ಬದ್ಧವಾದ ನಿರ್ದೇಶನದ ವ್ಯವಸ್ಥೆ ಅತೀ ಅಗತ್ಯ. ಭಾಗವತನೇ ನಿರ್ದೇಶಕನೆಂಬ ಹಳೆಯ ನಂಬುಗೆಯನ್ನು ಕುರಿತು ಮರಳಿ ಚಿಂತಿಸೋಣ. ‘ಭಾಗವತ ಭಾಗವತನೇ ಅವನ ಸ್ಥಾನವನ್ನಿಟ್ಟುಕೊಂಡು ನಿರ್ದೇಶನ ಸಾಧ್ಯ ಮತ್ತು ಅಗತ್ಯ’. (ಪ್ರೊ. ಉದ್ಯಾವರ ಮಾಧವ ಆಚಾರ್ಯ) ಇಡೀಯ ಪ್ರದರ್ಶನವನ್ನು ಯೋಚಿಸಿ ಕಲ್ಪಿಸಿ ಓತಪ್ರೋತವಾಗಿ ರೇಖಿಸಲು ಪ್ರತ್ಯೇಕವಾದ ನಿರ್ದೇಶನದ ವ್ಯವಸ್ಥೆ ಬೇಕು. ಮತ್ತು ಅದು ನಾಟಕ, ಚಲನಚಿತ್ರ, ನೃತ್ಯನಾಟಕಗಳ ನಿರ್ದೇಶನಗಳಿಗಿಂತ ಭಿನ್ನವು ಆಗಿರುವುದು. ಅಪೇಕ್ಷಿತ.
ಆಧುನಿಕ ತಂತ್ರ ಜ್ಞಾನವನ್ನು ನಾವು ಬಳಸಿಕೊಳ್ಳುವಾಗ ಯಕ್ಷಗಾನಕ್ಕೆ ಆಧುನಿಕ ಸಾಮಗ್ರಿ ತಂತ್ರಗಳನ್ನು ಹೊಂದಿಸಬೇಕಲ್ಲದೆ ಸಾಮಗ್ರಿಗೆ ಯಕ್ಷಗಾನವನ್ನು ಒಗ್ಗಿಸುವುದಲ್ಲ. ಈಗ ನಮಗೆ ಬೇಕಾದ ಬಗೆಯ ಬೇಕಾದಷ್ಟು ತೀವ್ರತೆಯ ಬೆಳಕನ್ನು ಮಾಡಬಹುದು. ಅತೀ ಸೂಕ್ಷ್ಮವಾದ ನಾದ ವ್ಯವಸ್ಥೆ, ಧ್ವನಿವರ್ಧಕ, ಎಲೆಕ್ಟ್ರಾನಿಕ್ ಶ್ರುತಿ ವ್ಯವಸ್ಥೆ ಲಭ್ಯ. ವರ್ಣದ್ರವ್ಯ ಸುಲಭವಾಗಿವೆ. ವೇಷಭೂಷಣ ರಚನೆಯಲ್ಲಿ ಫೈಬರ್, ಥರ್ಮೊಕೋಲ್, ಡ್ಯೂರೊಕೋಲ್‍ಗಳ ಬಳಕೆಯಿಂದ ಶೈಲಿಯನ್ನು ಉಳಿಸಿ ಉಜ್ವಲಗೊಳಿಸಲು ಶಕ್ಯ, ಅಪೇಕ್ಷಿತ. ಆದರೆ ನಾವು ಎಷ್ಟೋ ಬಾರಿ ಆಧುನಿಕ ಸೌಕರ್ಯ ಸಾಮಗ್ರಿಯನ್ನು ಫ್ಯಾಶನ್‍ನಂತೆ ಬಳಸುತ್ತೇವೆ. ಉದಾ: ಟ್ಯೂಬ್‍ಲೈಟ್ ಬೆಳಕು, ಜಗಜಗಿಸುವ ವೇಷ ಭೂಷಣ, ಮಾರಕ ವೇಷ ವಿಧಾನ ಇತ್ಯಾದಿ.
ಪರಿಷ್ಕರಣದ ಮೊದಲ ಹಂತವೆಂದರೆ ನಿರ್ಮಲೀಕರಣ, ನಾವೀನ್ಯದ ಹೆಸರಿನಲ್ಲಿ ಒಳಗೆ ನುಸುಳಿರುವ ವಿಕೃತಿಗಳನ್ನು ನಿರ್ದಾಕ್ಷಿಣ್ಯವಾಗಿ ನಿವಾರಿಸಬೇಕು. ಕಲೆಯೊಳಗೆ ವೈರಸ್ ಬಂದರೆ ಮತ್ತೆ ಹೋಗುವುದಿಲ್ಲ. ಉತ್ತಮಾಂಶ ಮಾಯವಾದರೆ ಮತ್ತೆ ಬರುವುದಿಲ್ಲ. ಇದೊಂದು ಕಟು ಸತ್ಯ. ನಮ್ಮ ಕಲೆಯ ಬಗೆಗೆ ಹೆಮ್ಮೆ ಪಡುವ ನಮಗೆ ಈ ಕುರಿತ ಎಚ್ಚರ ಅಗತ್ಯ. ಅತ್ಯುತ್ಸಾಹದಿಂದ ಕಲೆ ಕೆಡುತ್ತದೆ, ಅಜ್ಞಾನದಿಂದ ನಾಶವಾಗುತ್ತದೆ.
ಯಕ್ಷಗಾನದ ಸೌಂದರ್ಯಾಂಶದ ಪ್ರಜ್ಞಾಪೂರ್ವಕ ಅಭಿವ್ಯಕ್ತಿಗೆ, ಸರಿಯಾದ ಬಿಗಿಯಾದ ಅಭಿವ್ಯಕ್ತಿಗೆ ಬದ್ಧವಾದ ‘ಸಂವಹನ ವ್ಯವಸ್ಥೆ’ ಯಕ್ಷಗಾನದೊಳಗೆ ಬೆಳೆಯಬೇಕು. ಅದಕ್ಕಾಗಿ ಅತಿಯಾದ ಪುನರಾವರ್ತನೆ, ಜಾಳುಜಾಳಾದ ಅಭಿವ್ಯಕ್ತಿಗಳನ್ನು, ಬೊಬ್ಬೆ – ಗಲಾಟೆಯಂತಹ ಹಿಮ್ಮೇಳಗಳನ್ನು ನಾವು ತಿದ್ದಿ ಸರಿಪಡಿಸಲೇಬೇಕು. ಕಲೆಗೆ ಅನ್ಯವಾದ, ಕಲಾ ಸೌಂದರ್ಯದ ಭವಿಷ್ಯಕ್ಕೆ ಕಂಟಕಪ್ರಾಯವಾದ ಸುಡುಮದ್ದು, ಬ್ಯಾಂಡ್‍ವಾಲಗ, ಜಾತ್ರೆ ನಿರ್ಮಾಣ, ವ್ಯಕ್ತಿ ವೈಭವೀಕರಣಗಳನ್ನು ನಿರ್ದಾಕ್ಷಿಣ್ಯವಾಗಿ ನಿಯಂತ್ರಿಸಿ ರೂಪ ರಕ್ಷಣೆ ನಾವು ಮನಸ್ಸು ಮಾಡದಿದ್ದರೆ ‘ಪರಾಧೀನ ಸರಸ್ವತಿ’ ಎಂಬಂತೆ (ಚಿಂತಕ ಪ್ರೊ. ಪು.ಗ. ಸಹಸ್ರಬುದ್ಧೆ ಅವರ ಮಾತು) ಯಕ್ಷಗಾನವೆಂಬ ನಮ್ಮ ಸಂಪತ್ತಿನ ವಿನಾಶಕ್ಕೆ ನಾವು ಸಾಕ್ಷಿಗಳೂ, ಭಾಗಿಗಳೂ ಆಗಬೇಕಾಗುತ್ತದೆ.
ಇರುವ ಸಂಪನ್ಮೂಲ ಸಾಧನ ವ್ಯವಸ್ಥೆ, ಸರಕಾರಿ-ಖಾಸಗಿ ಪ್ರೋತ್ಸಾಹಗಳನ್ನು ಬಳಸಿ ಈ ಕುರಿತು ಸೂಕ್ತವಾದ ಅಭಿಯಾನವೊಂದನ್ನು ನಾವು ಮಾಡದಿದ್ದರೆ ಕಾಲ ಮಿಂಚಿ ಹೋಗಲಿದೆ. ಸಾಂಪ್ರದಾಯಿ ಸೌಂದರ್ಯದ ಸುಂದರ ಕಲೆಯಾಗಿದ್ದ ಮಹಾರಾಷ್ಟ್ರದ ದಶಾವತಾರಿ ಬಯಲಾಟ ಕಲೆ, ಇದೀಗ ಮರಾಠಿ ಸಂಗೀತ ನಾಟಕದ ಪಡಿಯಚ್ಚಾಗಿ ಸ್ವಂತದ ಸ್ವರೂಪ ನಾಶ ಹೊಂದಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ.
ಪರಿಷ್ಕರಣವೆಂದರೆ ನಮ್ಮ ಕಲೆ ಬೇರೇನೋ ಆಗುವುದಲ್ಲ, ತಾನಾಗಿದ್ದು ಬೆಳೆಯುವುದು. ‘ಬೇರೆ ಕಲೆಯಲ್ಲಿ ಏನನ್ನು ಸಾಧಿಸಿದ್ದಾರೆ. ಏನು ಪರಿಷ್ಕಾರ, ಹೇಗೆ ಮಾಡಿದ್ದಾರೆ ಎಂದು ನೋಡಿ ನಾವು ಅದನ್ನೇ ಇಲ್ಲಿ ತರುವುದಿಲ್ಲ. ಅವರು ಅವರ ಮಾಧ್ಯಮದಲ್ಲಿ ಸಾಧಿಸಿದ್ದನ್ನು ಆದರ್ಶವಾಗಿಸಿ, ಕಲೆಯಲ್ಲಿ ನಾವು ಮುನ್ನಡೆಯುವುದು’. (ದಿ.ಶಂಭು ಹೆಗಡೆ)
ಅಭಿನಯ
ವೇಷ, ನೃತ್ಯ, ಗಾನ, ರಂಗವಿಧಾನ, ಮಾತುಗಾರಿಕೆ, ವಾದನ ಎಲ್ಲ ಸೇರಿ ಅಭಿನಯ. ಇವು ಪರಸ್ಪರ ಪೂರಕ. ಯಾವುದನ್ನು ಬದಲಿಸಿದರೂ ಉಳಿದ ಅಂಶಗಳಿಗೆ ಅದು ಸಾಮರಸ್ಯದಿಂದ ಆಗಬೇಕು. ವೇಷ ಶೈಲಿಗೆ ಹೋದದ ಅಭಿನಯ, ಗಾನಕ್ಕೆ ಹೊಂದದ ವಾದನ ಇವೆಲ್ಲ ಸಮಸ್ಯೆಗಳಿಗೆ ಕಾರಣ.
ಇಂದು ಆಗಿರುವುದು ಇದೇ. ಉತ್ತರ ಕನ್ನಡ ಪದ್ಧತಿಯಲ್ಲಿ ಒಂದು ದೀರ್ಘ ಪರಂಪರೆಯ ಫಲವಾಗಿ ಮೂಡಿದ ಪದಾಭಿನಯ ಚಿತ್ರಾಭಿನಯಗಳನ್ನು ಇಂದು ಎಲ್ಲೆಡೆ ಅವಿಚಾರಿತವಾಗಿ, ಅದರ ಸರಿಯಾದ ತಿಳಿವಿಲ್ಲದೆ ಬಳಸುತ್ತಿದ್ದೇವೆ. ಇದು ಆಂಶಿಕ ವರ್ಗಾವಣೆ, ಸುಲಭ ದಾರಿಗಳ ಫಲ. ಇದರಿಂದ ಅಭಿನಯವೆಂಬ ಹೆಸರಿನ ವಿಕಾರಗಳು ರೂಪಿತವಾಗಿವೆ.
ವಿಚಿತ್ರವಾದ ಬಾಗುವಿಕೆ, ಅತಿರೇಕದ ಚಾಲೂಕುಣಿತ, ತೀರ ಚಿಲ್ಲರೆ ಅನಿಸುವ ಶಬ್ದ ಪುನರಾವರ್ತನೆಗಳು ಈ ರಂಗದ ಸ್ವರೂಪವನ್ನು ದಿಕ್ಕುಗೆಡಿಸಿವೆ. ಇಂತಹುದಕ್ಕೆಲ್ಲ ಚಪ್ಪಾಳೆಗಳೂ, ಪ್ರಶಂಸೆಗಳೂ ಸಲ್ಲುತ್ತಿರುವುದು ಖೇದಕರ. ಅಭಿನಯ ತತ್ವವು ತುಂಬ ಗಹನ. ಅದರ ಅಗ್ಗಗೊಳಿಸುವಿಕೆ ಸುಲಭ ಮತ್ತು ‘ಆಪತ್ಕಾರಿ’.
ಬಂದಿರುವ ಹೊಸತನಗಳಲ್ಲಿ ಕಲೆ ಇದೆ, ಕಳೆಯೂ ಇದೆ. ಕಳೆದ ನಾಲ್ಕಾರು ದಶಕಗಳಲ್ಲಿ ಆಗಿರುವ, ಬಂದಿರುವ ಎಲ್ಲವೂ ನಮಗೆ ಅಧ್ಯಯನ ಯೋಗ್ಯ, ಗೌರವಾರ್ಹ. ಆದರೆ ಸ್ವೀಕಾರ ಮಾಡಿ ಬೆಸೆಯುವಾಗ ಕಲಾ ಬದ್ಧತೆ ಮುಖ್ಯ. ದಾಕ್ಷಿಣ್ಯ ಮತ್ತು ಕ್ಷಣಿಕ ರಮಣೀಯತೆ ಅಲ್ಲ.
ವಿಸ್ತರಣ
ತನ್ನ ಕ್ಷೇತ್ರದಲ್ಲಿ ಯಕ್ಷಗಾನವು ಸ್ಥಿರೀಕರಣ, ಪರಿಷ್ಕರಣಗಳನ್ನು ಹೊಂದುವುದರ ಜೊತೆಗೆ, ಒಂದು ವಿಸ್ತರಣವನ್ನೂ ಸಾಧಿಸಬೇಕು. ವಿಸ್ತರಣವು ಬಹು ವಿಧ, ಭೌಗೋಲಿಕವಾಗಿ ಅನ್ಯ ಪ್ರದೇಶಗಳಿಗೆ, ಇತರ ಭಾಷೆಗಳಿಗೆ, ಅನ್ಯ ಮಾಧ್ಯಮಗಳಿಗೆ ಮತ್ತು ತನ್ನ ನೆಲೆಯಲ್ಲೇ ವಸ್ತು ವಿಸ್ತಾರ ಮತ್ತು ಅಭಿವ್ಯಕ್ತಿ ವಿಸ್ತಾರವನ್ನು ಸಾಧಿಸಬೇಕು.
ಯಕ್ಷಗಾನಕ್ಕೆ ಅಂತಹ ಕಲಾಸಾಮರ್ಥ್ಯ, ಸಾಧ್ಯತೆಗಳು ಇವೆ. ಕರ್ನಾಟಕದ ಹೊರಗೆ ಯಕ್ಷಗಾನವು ಬೇರೆ ಪ್ರಾಂತ್ಯಗಳಲ್ಲಿ, ಬೇರೆ ದೇಶಗಳಲ್ಲಿ ಹಲವು ಬಾರಿ ಪ್ರದರ್ಶಿತವಾಗಿದೆ. ಕಲಾರಸಿಕರ, ತಜ್ಞರ ಮನ್ನಣೆಯನ್ನೂ ಗಳಿಸಿದೆ. ವಿದೇಶಿ ಸಂಶೋಧಕರು ಯಕ್ಷಗಾನದ ಬಗೆಗೆ ಅಧ್ಯಯನಗಳನ್ನು ನಡೆಸಿದ್ದು, ಅವು ಎಷ್ಟೋ ವಿಷಯದಲ್ಲಿ ಉತ್ಕೃಷ್ಟವೂ, ನಮ್ಮ ಸಂಶೋಧಕರ ಸಂಶೋಧನೆಗಳಿಗಿಂತ ಭಿನ್ನವೂ ಆಗಿವೆ. ಮಾರ್ಗದರ್ಶಕವೂ ಆಗಿವೆ. (ಅಮೆರಿಕದ ಡಾ. ಮಾರ್ತಾ ಆಷ್ಟನ್, ಜರ್ಮನಿಯ ಡಾ. ಕ್ಯಾಥರಿನ್‍ರವರ ಮಹಾಪ್ರಬಂಧಗಳನ್ನಿಲ್ಲಿ ಸ್ಮರಿಸಬಹುದು) ಯಕ್ಷಗಾನ ಗೊಂಬೆಯಾಟವು ಮುಖ್ಯತಃ ದಿ|| ಕೆ.ಎಸ್. ಉಪಾಧ್ಯಾಯರ ಪ್ರಯತ್ನಗಳಿಂದ ವಿಶೇಷ ಪ್ರಸಾರಗಳಿಸಿದೆ. ಮಕ್ಕಳ ಮೇಳ-ಸಾಲಿಗ್ರಾಮ, ಡಾ|| ಕಾರಂತರ ತಂಡ, ಉಡುಪಿಯ ಯಕ್ಷಗಾನ ಕೇಂದ್ರ ಇವು ಸೀಮೋಲ್ಲಂಘನದ ದಾಖಲೆ ನಿರ್ಮಿಸಿದ ( ನಿ. ಶ್ರೀಧರ ಹಂದೆ) ಹೆಗ್ಗಳಿಕೆ ಹೊಂದಿವೆ.
ಹಿಂದಿ ಯಕ್ಷಗಾನ ಪ್ರದರ್ಶನಗಳಿಗೂ ನಾಲ್ಕು ದಶಕಗಳ ಇತಿಹಾಸವಿದೆ. ಅನ್ಯಪ್ರಾಂತ, ದೇಶಗಳಲ್ಲಿ ಯಕ್ಷಗಾನ ಪ್ರದರ್ಶನವಾದಾಗ, ಅದರ ಮಟ್ಟ ಯಾವುದೇ ಇರಲಿ ಅದನ್ನೊಂದು ಅದ್ಭುತವಾಗಿ, ಜನರು ಕಾಣುವುದು ಅನುಭವಕ್ಕೆ ಬರುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯೋತ್ಸವಗಳಲ್ಲಿ ಯಕ್ಷಗಾನವನ್ನು ಕೊನೆಯ ಪ್ರದರ್ಶನವಾಗಿ ಇರಿಸುತ್ತಾರೆ. ಕಾರಣ, ಯಕ್ಷಗಾನದ ಬಳಿಕ ಉಳಿದ ಯಾ ಪ್ರದರ್ಶನವೂ ಸಪ್ಪೆಯಾಗುತ್ತದೆ ! ಇದು ನಮಗೆ ಹೆಮ್ಮೆ ತರುವ ಧೈರ್ಯ ಮತ್ತು ಜಾಗ್ರತೆಯನ್ನು ಭೋಧಿಸುವ ಸಂಗತಿ. ಯಕ್ಷಗಾನದಂತಹ ಸಮೃದ್ಧ ರಂಗಗುಣದ ಕಲೆಯ ಹಸಿವು ಸರ್ವತ್ರ ಇದೆ. ಅದನ್ನು ಬಳಸಿ ವಿಸ್ತರಿಸುವುದು ನಮ್ಮ ಕೆಲಸ. ಇಂದಿನ ಪ್ರಸಾರ ಸಂಪರ್ಕ, ಪ್ರಯಾಣ ಸೌಲಭ್ಯಗಳ ದಿನಗಳಲ್ಲಿ ಇದು ಸುಲಭ. ಸರಿಯಾದ ನಿಷ್ಠಾವಂತ ನೇತೃತ್ವ ಮತ್ತು ಈ ಕೆಲಸಕ್ಕೊಪ್ಪುವ ಕಲಾವಿದರು ಇದ್ದರೆ, ಸಿದ್ಧರಾದರೆ ಅನೇಕ ಸಾಧ್ಯತೆಗಳು ಈ ದಿಕ್ಕಿನಲ್ಲಿ ಇವೆ.
ತನ್ನೊಳಗೆ
ಇದೆಲ್ಲ ಸಾಧಿತವಾಗುವುದು ಕಲೆ ತನ್ನತನದಲ್ಲಿ, ತನ್ನೊಳಗೆ ತಾನಾಗಿದ್ದು ಹೊಸ ಸಾಧ್ಯತೆಗಳಿಗೆ ಚಾಚಿಕೊಂಡಾಗ, ಅದು ಹೇಗೆ? ಎರಡು ಬಗೆ; ವಸ್ತು ಕಥಾನಕಗಳಲ್ಲಿ, ಅಭಿವ್ಯಕ್ತಿಯ ವಿಧಾನ ವಿಸ್ತಾರದಲ್ಲಿ ಬೆಳೆ ಭೆಳವಣಿಗೆಯಲ್ಲಿ ಕ್ರಿ.1800ರಿಂದಲೇ ವಸ್ತು ವಿಸ್ತಾರ ಜರಗುತ್ತಾ ಬಂದಿದೆ. (ಉದಾ: ಮಾನಸ ಚರಿತ್ರೆ) ಇಂದಿಗೂ ನಡೆದಿದೆ. ಅದರ ಕಲಾಮೌಲ್ಯ ಯೋಗ್ಯತೆಯ ವಿಮರ್ಶೆ ಪ್ರತ್ಯೇಕ —– ಇಲ್ಲಿ ಹೊಸ ಚಾಚುವಿಕೆಗಳ ಭರ, ವಾಣಿಜ್ಯಕರಣದ ಅಬ್ಬರ, ನಾವಿನ್ಶೈಕ ದೃಷ್ಟಿಯ ನಿರ್ಭರಗಳಲ್ಲಿ ಹಿಂತಿರುಗಿ ನೋಡದೆ, ಕಳೆದ ಅರ್ಧಶತಮಾನದಲ್ಲಿ ಶತಶತ ನೂತನ ಪ್ರಸಂಗಗಳೂ ಬಂದಿವೆ. ಕೆಲವು ನಿಜಕ್ಕೂ ನೈಜ ಪಂಥಾಹ್ವಾನಯುತ ನಾವೀನ್ಯವನ್ನು ಸಾಧಿಸಿದ್ದೂ ಹೌದು. ಇದಕ್ಕೆ ಬೇರೆ ಬೇರೆ ಕಾಲಗಳಲ್ಲೂ, ತಿಟ್ಟುಗಳಲ್ಲೂ ಉದಾಹರಣೆಗಳಿವೆ. ಡಾ|| ಕಾರಂತರಿಂದ ತೊಡಗಿ, ಇತ್ತೀಚಿನವರೆಗೆ ಪ್ರಾಯೋಗಿಕ ಯಕ್ಷಗಾನಗಳ ಒಂದು ಧೀರ್ಘ ಪರಂಪರೆ ಇದೆ. ನವೀನ ಪ್ರಯೋಗರಂಗ (Experimental Theatre) ಒಂದು ಗಹನವಾದ ವಿಚಾರ, ಪರಿವರ್ತನೆಯನ್ನೆಲ್ಲಾ ಪ್ರಯೋಗವೆಂದೂ, ವಿಕಾರಗಳನ್ನು ಪ್ರಗತಿಯೆಂದೂ ಸಮರ್ಥಿಸಲು ಈ ಪದ ಬಳಕೆ ಆಗಬಾರದು.
ದೈವಿಕ – ಲೌಕಿಕ
ಕಳೆದ ಹಲವು ವರ್ಷಗಳಲ್ಲಿ ಯಕ್ಷಗಾನದ ಪ್ರಧಾನರಂಗದಲ್ಲಿ ಕಾಣಿಸಿಕೊಂಡ ಕಥಾನಕಗಳಲ್ಲಿ ರಂಜನೆ, ಕಥನ ಕುತೂಹಲಗಳು ಮುಖ್ಯವಾಗಿ ಬಂದದ್ದು ನಿಜ. ಆದರೆ, ನಾಟಕಗಳಿಂದ, ಕಾಲ್ಪನಿಕ, ಜಾನಪದ, ಸಿನಿಮೀಯ, ಸಮ್ಮಿಶ್ರ – ಹೀಗೆ ಹಲವು ಕಥೆಗಳು ಬಂದು ಜನಪ್ರಯವಾಗುವುದಕ್ಕೆ ಇನ್ನೊಂದು ಕಾಣವೂ ಇದೆ. ಆನಾಭಿರುಚಿಯು ವಿಶಿಷ್ಟ ವರ್ಗದಿಂದ ಸಾಮಾನ್ಯಕ್ಕೆ, ಪೌರಾಣಿಕತೆಯಿಂದ ಲೌಕಿಕಕ್ಕೆ ಬದಲಾಗಿರುವುದು (Sacred to Secular) ಇದಕ್ಕೆ ಕಾರಣ. ಕಲಾಸಹೃದಯತೆಯಲ್ಲಿ ಅಡಿ (Taste – Base) ವಿಸ್ತರಿಸಿದ್ದೂ ಇದಕ್ಕೆ ಕಾರಣ. ಹಾಗಾಗಿ, ಗುಣಸುಂದರಿ, ಕನಕರೇಖೆ, ಸಿರಿಗಿಂಡೆ, ಕೋಟಿ ಚನ್ನಯ, ಶೂದ್ರತಪಸ್ವಿನಿ ಇತ್ಯಾದಿ ಪ್ರಸಂಗಗಳ ಜನಪ್ರಿಯತೆಯು ಕೇವಲ ಅಗ್ಗದ ಜನಪ್ರಿಯತೆಯೆಂದು ತಳ್ಳಿಹಾಕಲಾಗುವುದಿಲ್ಲ. ಅದಕ್ಕೆ ಸಾಮಾಜಿಕ – ಸಾಂಸ್ಕೃತಿಕ ಕಾರಣಗಳಿವೆ. ಅದು ವಿಸ್ತರಣೆಯೇ. ಆ ಬಗೆಯ ಅಭಿರುಚಿಯನ್ನು ಬಳಸಿ, ದಿಕ್ಕು ನೀಡಿ ಕಲೆಯ ಸ್ಥಿರೀಕರಣದ ತತ್ವದಿಂದ ಸಾಧಿಸುವುದು ಈ ರಂಗದ ಹೊಣೆಗಾರಿಕೆ.
ಯಕ್ಷಗಾನಕ್ಕೆ ಕಥೆಗಳು ಪೌರಾಣಿಕವಾಗಿರಬೇಕು ಎಂಬುದರ ತತ್ವ ಅವುಗಳು ಈ ಮಾಧ್ಯಮಕ್ಕೆ ಹೊಂದುತ್ತವೆ ಎಂಬುದು. ಅಂದರೆ – ಹೆಚ್ಚು ಖಚಿತವಾಗಿ ಹೇಳುವುದಾದರೆ ಪೌರಾಣಿಕ ಎಂಬುದಕ್ಕಿಂತ ಯಕ್ಷಗಾನ ಸ್ನೇಹಿ, ಯಕ್ಷಗಾನೀಯ ಅನ್ನುವುದು ಸರಿಯೇನೋ.
ವಿದ್ಯುನ್ಮಾನ, ವಿಶ್ವಗೋಳೀಯಕರಣ
ವಿದ್ಯುನ್ಮಾನ ಕ್ರಾಂತಿಯಿಂದಾಗಿ ಮನೆ ಮನೆಗೆ ಬಂದಿರುವ ಅಗ್ಗದ (ಎರಡೂ ಅರ್ಥದಲ್ಲಿ) ರಂಜನೆಯ ರಾಶಿಯ ಮುಂದೆ, ಜೀವಂತ ಪ್ರದರ್ಶನ ಕಲೆಯ ಉಳಿವು ಬಿಕ್ಕಟ್ಟಿನಲ್ಲಿರುವುದು ನಿಜ. ಈಗ ಪ್ರಚಲಿತವಿರುವ ಮಾದರಿಯ ವಿಶ್ವಗೋಳೀಕರಣ (Globalization) ದಿಂದಾಗಿ ಆಕಾಶ ಪಾತಾಳಗಳಿಂದಾಗುತ್ತಿರುವ ವಿವಧ ಪ್ರಕಾರಗಳ ಆಗಮನ ಆಕ್ರಮಣಗಳಿಂದ ನಮ್ಮ ಸುಂದರ ಸಾಂಪ್ರದಾಯಿಕ ರೂಪಗಳ ಅಡಿ ಕಂಪಿಸುತ್ತಿದೆ. “ಹೊಸ ಗಾಳಿ ಬರಲಿ, ಆದರೆ ಬಿರುಸಿನಿಂದ ಬಂದು ನನ್ನ ಆಸನ ಸಹಿತ ನನ್ನನ್ನು ಹಾರಿಸುವ ಝಂಝಾವಾತ ಬೇಡ” ಎಂದು ಮಹಾತ್ಮ ಗಾಂಧೀಜಿಯವರು ಹೇಳಿದರಂತೆ. ನಾವೂ ಇನ್ನೂ ಜೋರಾಗಿ ಹೇಳಬೇಕಾಗಿದೆ. “ವಿಶ್ವವ್ಯಾಪಿ”ಯಾದ ತೆಳ್ಳಗಿನ, ಏಕರೂಪಿ ಕಲಾಪ್ರಕಾರಗಳ ಭಾರವು ಸಾಂಸ್ಕೃತಿಕ ಭಯಾನಕತೆಯನ್ನು ಸೃಷ್ಟಿಸುತ್ತಿದೆ. ಮಾಧ್ಯಮಗಳಲ್ಲೂ, ಜನರ ಮಟ್ಟದಲ್ಲೂ, ಸರ್ವತ್ರ ಹಬ್ಬಿರುವ ಚಲಚಿತ್ರಾರಾಧನೆ ಇತರ ಕಲಾಪ್ರಕಾರಗಳಿಗೆ ಭಯೋತ್ಪಾದಕವಾಗಿದೆ. ಸಾಂಸ್ಕೃತಿಕ ದೃಷ್ಟಿಧೋರಣೆಗಳಲ್ಲಿ ನ್ಯಾಯವನ್ನು ವ್ಯವಸ್ಥಿತವಾದ ಬೆಂಬಲವನ್ನು (ಸಬ್ಸಿಡಿ ಯೋಜನೆ) ಗಳನ್ನು ನಾವು ಬಯಸುವುದು ಸಾಂಸ್ಕೃತಿಕ ಹಕ್ಕು, ನೀತಿನಿರ್ಮಾಪಕರ ಆದ್ಯ ಕರ್ತವ್ಯ ಎಂದು ಸೂಚಿಸಬಯಸುತ್ತೇನೆ.
ಈ ಮಧ್ಯೆ ಗಮನಿಸಬೇಕಾದ ಇನ್ನೊಂದು ಮುಖ ಎಂದರೆ ಎಲೆಕ್ಟ್ರಾನಿಕ್ ವಿಸ್ತರಣೆ ಮತ್ತು ವಿಶ್ವವ್ಯಾಪೀಕರಣಗಳು ಬಂದೇ ಬಂದಿವೆ, ಬರುತ್ತಿವೆ. ಅವು ಅನಿವಾರ್ಯ ಪ್ರಾರಂಭಗಳು, ಪ್ರಾರಬ್ಧಗಳೂ ಹೌದು, ಅವು ಉಪಕರಣಗಳು. ಅವುಗಳನ್ನು ಬಳಸುವ ರೀತಿಯಲ್ಲಿ ಮಾತ್ರ ನಮಗೆ ಒಂದಿಷ್ಟು ಆಯ್ಕೆ ಇರುವುದು.
ಟಿ.ವಿ., ವಿಡಿಯೋ, ಮೊದಲಾದ ಮಾಧ್ಯಮಗಳನ್ನು ನಾವು ಒಂದು ಅಪಾಯವೆಂದಷ್ಟೇ ನೋಡದೆ, ಅವಕಾಶ ಎಂದೂ ನೋಡಬಹುದು. ನಮ್ಮ ಕಲೆಯ ಸ್ವಭಾವಕ್ಕೆ ಹೊಂದುವಂತಹ ಅದರ ಗುಣವನ್ನು, ಸೌಂದರ್ಯವನ್ನು ಕಾಣಿಸುವ ದಾಖಲೀಕರಣ, ಪ್ರದರ್ಶನ ವಿಡಿಯೋಗಳ ತಯಾರಿಯ ಬಗೆಗೆ ಕೆಲಸಗಳಾಗಬೇಕಾಗಿವೆ. ಯಕ್ಷಗಾನ ಮತ್ತು ದಾಖಲೀಕೃತ ರಂಜನ ಮಾಧ್ಯಮ ವೀಡಿಯೋ, ಸಿನಿಮಾ ಮಾಧ್ಯಮಗಳೆರಡರಲ್ಲೂ ಹಿಡಿತವುಳ್ಳ, ಯಕ್ಷಗಾನದ ಕುರಿತು ಪ್ರೀತಿಯುಳ್ಳ ನಿರ್ದೇಶಕ-ನಿರ್ಮಾಪಕರಿಂದ ಇಂತಹ ಕೆಲಸ ಆಗಬೇಕು. ಈ ರೀತಿಯ ವ್ಯವಸ್ಥಿತ ಕಾರ್ಯವು ಯಕ್ಷಗಾನವನ್ನು ಬೇರೆ ಬೇರೆ ಮಟ್ಟಗಳಲ್ಲಿ ಬಿಂಬಿಸಿ ಪ್ರಚಾರ ಪ್ರಸಾರ ಪಡೆಸಲು ಅತ್ತ್ಯುತ್ತಮ ಸಾಧನವಾಗುವುದು. ಅದಕ್ಕಾಗಿ ಯಕ್ಷಗಾನವೂ ಹೆಚ್ಚು ಸೂಕ್ಷ್ಮವಾಗಿ, ಸೂಕ್ತ ಪರಿಪಾಕಕ್ಕೆ ಸಿದ್ಧವಾಗಬೇಕಾದುದು ಅಗತ್ಯ.
ಸಹಕಾರ ಜಾಲ
ಯಕ್ಷಗಾನದ ಬಗೆಗೆ ಶೈಕ್ಷಣಿಕ ಕಾರ್ಯ, ಪರಿಕಲ್ಪನಾತ್ಮಕವಾದ ಕೆಲಸಗಳನ್ನು ಮಾಡುವ ಸಂಸ್ಥೆಗಳೊಳಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕೆಲಸಗಳಿಗಾಗಿ ಒಂದು ಸಹಕಾರ ಜಾಲವನ್ನು (Co-operation Network) ಸ್ಥಾಪಿಸಿಕೊಳ್ಳಬಹುದು. ಅದರ ಮೂಲಕ ಮಾಹಿತಿ ಸಂಗ್ರಹ, ವಿನಿಮಯ ಮತ್ತು ವಿವಿಧ ರೀತಿಯ ಕಾರ್ಯಕ್ರಮಗಳ ರೂಪೀಕರಣದ ಒಂದು ವ್ಯವಸ್ಥೆಯನ್ನು ಯೋಜಿಸಿ ಕಾರ್ಯಗತಗೊಳಿಸುವುದು. ಯಕ್ಷಗಾನಕ್ಕೆ ಹಲವು ಹಂತಗಳಲ್ಲಿ ಬೇಡಿಕೆ ಇದೆ, ಅವುಗಳನ್ನು ಬೆಳೆಸಿಕೊಳ್ಳಲು ಇಂತಹ ಒಂದು ವ್ಯವಸ್ಥೆ ಅಗತ್ಯವಿದೆ.
ಸಂಘಟಕ ಮುಖ್ಯರ ಧೋರಣೆ
ಯಕ್ಷಗಾನ ಮೇಳಗಳನ್ನು ಹೊಂದಿರುವ ದೇವಾಲಯಗಳು, ಮೇಳಗಳ ಸಂಘಟಕರೂ, ಯಕ್ಷಗಾನ ಸ್ವರೂಪ ರಕ್ಷಣೆ, ಗುಣಮಟ್ಟ, ರುಚಿ-ಶುದ್ಧಿಗಳನ್ನು ಕಾಪಾಡುವ, ಬೆಳೆಸುವ ಹೊಣೆ ಉಳ್ಳವರು. ಈ ಘಟಕಗಳೆ ಈ ಕಥೆಯ ಉಳಿವು ಬೆಳವಣಿಗೆಗೆ ಮುಖ್ಯ ಆಧಾರ. ಇವರು ಯಕ್ಷಗಾನ ಸ್ವರೂಪಕ್ಕೆ ಗುಣಮಟ್ಟಕ್ಕೆ ಖಚಿತ ಬದ್ಧತೆಯನ್ನು, ವ್ಯವಸ್ಥಿತ ಸಾಂಸ್ಕೃತಿಕ ಧೋರಣೆಯನ್ನು ರೂಪಿಸುವುದು ಅತ್ಯಗತ್ಯವಾಗಿದೆ. ಹರಕೆದಾರರ, ಪ್ರಾಯೋಜಕರ ವಿಚಿತ್ರವಾದ, ಕಲೋಚಿತವಲ್ಲದ ಅಪೇಕ್ಷೆಗಳನ್ನು ಪೂರೈಸುತ್ತಾ ಹೋದರೆ ಕಲಾರೂಪ ಉಳಿಯಲಾರದು. “ನಮ್ಮ ಧೋರಣೆ ಹೀಗೆ, ಅದಕ್ಕೆ ಬದ್ಧರಾಗಿ ಭಕ್ತ ಜನರು ಹರಕೆ ಆಟಗಳನ್ನು ಆಡಿಸಬೇಕು.” ಎಂಬ ಖಚಿತ ನಿಲುವನ್ನು ಮೇಳದ ಸಂಘಟಕರು ಹೊಂದುವುದು ಕಲೆಯ ದೃಷ್ಟಿಯಿಂದ ಅನಿವಾರ್ಯ. ಕಲಾವಿದರನ್ನು ಸಿದ್ಧಪಡಿಸುವ ಕೇಂದ್ರಗಳಿಂದ ಬರುವವರು ಮೇಳಗಳಲ್ಲಿ ಕಲಾವಿದರಾಗುವುದರಿಂದ, ಮೇಳಗಳಿಗೆ ಶಿಕ್ಷಣ ಕೇಂದ್ರಗಳಿಗೆ ಬೆಂಬಲ ನೀಡುವ ನೈತಿಕ ಕರ್ತವ್ಯವಿದ್ದು, ಅದನ್ನು ಉದಾರವಾಗಿ ನಡೆಸಬೇಕಾಗಿದೆ. ಮೇಳ ಸಂಘಟಕರೆ ದಯವಿಟ್ಟು ಜಾಗೃತರಾಗಿರಿ.
ಕಲೆಯ ವಿಷಯದಲ್ಲಿ ಜನರ ಅಭಿರುಚಿ ಎಂಬ ಸ್ಥೂಲವಾದ ಆಧಾರ ಇದ್ದರೂ, ಕಲೆಯನ್ನು ಉಳಿಸಿ, ಮುಂದಿನ ಜನಾಂಗಕ್ಕೆ ದಾಟಿಸುವ ಮೊದಲ ಹೊಣೆ ಕಲಾವಿದನು ಎಂಬುದನ್ನು ಕಲಾವಿದರು ಮನಗಾಣಬೇಕು. ಇಲ್ಲಿ ಕಲಾವಿದರ ಜವಾಬ್ದಾರಿ ಮೊದಲನೆಯದು.
ಕಲಾವಿದರ ಹಿತರಕ್ಷಣೆ
ಕಲೆಯ ಬಗೆಗೆ ವಿಮರ್ಶಿಸುವಾಗ ನಾವು ಕಲಾವಿದನನ್ನು ಮರೆತು, ಆತನ ಸಮಸ್ಯೆಗಳನ್ನು ಬದಿಗಿರಿಸಿ ಮಾತಾಡುವಂತಿಲ್ಲ. ಯಕ್ಷಗಾನವೆಂಬುದು ಒಂದು ಕಷ್ಟದ ಕಸುಬು. ಊರಿಂದೂರಿಗೆ ತಿರುಗುವ, ನಿದ್ದೆಗೆಟ್ಟು ದುಡಿಯುವ ಉದ್ಯೋಗ. ಕಲಾವಿದನನ್ನು ರಂಗದಲ್ಲಿ ಕಂಡು ಸಂತೋಷಿಸುವ ನಾವು, ಆತನ ಕಷ್ಟಕಾಲದಲ್ಲಿ ನೆರೆವಾಗುವುದೂ ಅಗತ್ಯ. ಕಲಾವಿದರ ಜೀವನಕ್ಕೆ ಭದ್ರತೆ, ನಿವೃತ್ತಿ ಜೀವನಕ್ಕೆ ಆಧಾರಗಳನ್ನು ಒದಿಗಿಸುವ ಬಹು ದೊಡ್ಡ ಕಾರ್ಯವನ್ನು ಮೇಳಗಳು, ದೇವಾಲಯಗಳು, ಸರಕಾರ, ಸಂಸ್ಥೆಗಳು ಸಮಾಜ ಎಲ್ಲರೂ ಕೈಗೊಳ್ಳುವುದು ಅಗತ್ಯ. ಕೆಲವು ಕ್ಷೇತ್ರಗಳೂ, ಮೇಳಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ. (ಉದಾ – ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕಟೀಲು ಕ್ಷೇತ್ರದ ಮೇಳಗಳು.)
ಮಾದರಿಗಳು
ಕಲಾವಿದರನ್ನು ಒಂದು ಸಂಘಟನೆಗೊಳಪಡಿಸಿ, ಅವರಿಗಾಗಿ ಆ ಆಪತ್ ಸಹಾಯ ಇನ್ಶೂರೆನ್ಸ್, ಬಸ್ ಪ್ರಯಾಣಗಳಲ್ಲಿ ರಿಯಾಯಿತಿ ವ್ಯವಸ್ಥೆ ಮುಂತಾದ ಭದ್ರತಾ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ, ನಡೆಸುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗದ ಯಕ್ಷನಿಧಿಯ ಒಂದು ದಶಕದ ಕಾರ್ಯವು ದೇಶದ ಸಾಂಪ್ರದಾಯಿಕ ರಂಗಭೂಮಿಗೆ ಮಾದರಿಯಾಗಿರುವ ಒಂದು ಅಸಾಮಾನ್ಯ ಯೋಜನೆಯಾಗಿದ್ದು, ಇದರ ಹಿಂದೆ ಇರುವ ಚಿಂತನೆ, ಸಾಮರ್ಥ್ಯ, ಕಾರ್ಯತತ್ಪರತೆ, ತ್ಯಾಗ, ಬದ್ಧತೆಗಳು ಅತ್ಯಂತ ಪ್ರಶಂಸಾರ್ಹವಾಗಿವೆ. ಈ ನಿಧಿಯು ಇನ್ನಷ್ಟು ವಿಸ್ತಾರವಾಗಿ ಬೆಳೆದು, ಕಾರ್ಯವಿಸ್ತಾರ ಪಡೆದು ಯಕ್ಷಗಾನದ ಉದ್ಯೋಗಕ್ಕೆ ಭದ್ರತೆಯನ್ನು ನೀಡುವಂತಾಗಲಿ.
ಕಲಾರಂಗದ ಸಹಕಾರದೊಂದಿಗೆ ಉಡುಪಿಯ ಶಾಸಕ ಶ್ರೀ ಕೆ. ರಘುಪತಿ ಭಟ್ಟರು ರೂಪಿಸಿರುವ ಯಕ್ಷ ಶಿಕ್ಷಣ ಟ್ರಸ್ಟ್ ಒಂದು ಬೃಹತ್ ಯೋಜನೆ. ಶಾಲಾ ವಿದ್ಯಾರ್ಥಿಗಳ ಮಟ್ಟದಲ್ಲಿ ಯಕ್ಷಗಾನ ಶಿಕ್ಷಣದ ಮೂಲಕ ಅಭಿರುಚಿ, ನಿರ್ಮಾಣ ಪ್ರೋತ್ಸಾಹ, ಸಂವರ್ಧನ ಕಾರ್ಯದಲ್ಲಿ ಇದೊಂದು ದಾಖಲೆಯ ಉಪಕ್ರಮವಾಗಿದೆ.
ಸ್ಥಾಯೀ ಪ್ರದರ್ಶನ ವ್ಯವಸ್ಥೆ
ಯಕ್ಷಗಾನದ ಬಗೆಗೆ ಆಸಕ್ತರಾಗಿರುವ ಕಲಾಪ್ರೇಮಿಗಳು, ವಿಶೇಷತಃ ಬೇರೆ ಊರುಗಳ, ಪ್ರಾಂತ್ಯಗಳ ಮತ್ತು ಪರದೇಶಗಳ ಆಸಕ್ತರು, ನಮ್ಮ ಪ್ರದೇಶದಲ್ಲಿ ಬಂದಾಗ ಅಪೇಕ್ಷಿಸುವ ಒಂದು ವಿಷಯ. ಯಕ್ಷಗಾನ ಪ್ರದರ್ಶನವು ಒಂದು ಕಡೆ ಸ್ಥಾಯಿಯಾಗಿ ಸಿಗುವ ವ್ಯವಸ್ಥೆ, ಸಾಂಪ್ರದಾಯಿಕ ಸ್ವರೂಪದ, ಪ್ರೇಕ್ಷಕ ಸ್ನೇಹಿಯಾದ, ಮಿತ ಅವಧಿಯ ಅಂತಹ ಪ್ರದರ್ಶನಗಳನ್ನು ಕರಾವಳಿಯ ಎರಡು ಮೂರು ಕ್ಷೇತ್ರಗಳಲ್ಲಿ ಖಾಯಂ ಆಗಿ ಏರ್ಪಡಿಸಬಹುದಾಗಿದೆ. ಇದರಲ್ಲಿ ವಿವಿಧ ಮೇಳಗಳು, ನಿಶ್ಚಿತ ನಿಯಮ ಮತ್ತು ನಿಬಂಧನೆಗಳಿಗೆ ಒಳಪಟ್ಟು, ಪರ್ಯಾಯಕ್ರಮದಿಂದ ಪ್ರದರ್ಶನಗಳನ್ನು ನೀಡಿ ನಿರ್ವಹಿಸಬಹುದಾಗಿದೆ. ಆ ಕ್ಷೇತ್ರವು ಅದರ ಸಮನ್ವಯವನ್ನು ವ್ಯವಸ್ಥೆ ಮಾಡಬಹುದು. ಈ ವ್ಯವಸ್ಥೆಯು ಕಲಾ ಪ್ರಸಾರಕ್ಕೆ ದೊಡ್ಡ ಕೊಡುಗೆ ನೀಡಲಿದೆ.
ಸಂಶೋಧನೆ
ಯಕ್ಷಗಾನದ ಸಂಶೋಧನೆಗೆ ಸುಮಾರು ಒಂದು ಶತಮಾನದ ಇತಿಹಾಸವಿದೆ. ಹಲವು ಉತ್ತಮ ಕೃತಿಗಳು, ನೂರಾರು ಪ್ರಬಂಧಗಳು, ಇಪ್ಪತ್ತರಷ್ಟು ಡಾಕ್ಟರೇಟ್ ಬರಹಗಳೂ ಬಂದಿದ್ದು, ಒಟ್ಟಿನಲ್ಲಿ ಸಂಶೋಧನೆಯ ಗುಣಮಟ್ಟ ಚೆನ್ನಾಗಿದೆ, ಬಹುಪಾಲು ಕೃತಿಗಳು ಉತ್ತಮ ಮಟ್ಟದಲ್ಲಿವೆ. ಆದರೆ ಇನ್ನು ಮುಂದಕ್ಕೆ ಯಕ್ಷಗಾನ ಸಂಶೋಧನೆಯ, ಹೆಚ್ಚು ರಂಗೋಪಯೋಗಿ ಮತ್ತು ಅನ್ವಯಿಕವಾಗುವ ಅಗತ್ಯವಿದೆ. ಪುನಾರಚನೆ, ಪ್ರಾಯೋಗಿಕತೆ ಮತ್ತು ಅಭಿವ್ಯಕ್ತಿಯಲ್ಲಿ ಸಾಧ್ಯತೆಗಳ ವಿಸ್ತಾರದ ದೃಷ್ಟಿಯಿಂದ ಸಂಶೋಧನೆಯ ಯಕ್ಷಗಾನದ ಸ್ಥಿರೀಕರಣ-ಪರಿಷ್ಕರಣ ಮತ್ತು ವಿಸ್ತರಣಕ್ಕೆ ನೆರವಾದರೆ ಅವು ಸಾರ್ಥಕ.
ಅಕಾಡಮಿಯ ಕಾರ್ಯ
ಇದೀಗ ನಮಗೆ ಕರ್ನಾಟಕ ಬಯಲಾಟ ಅಕಾಡಮಿ ದೊರಕಿದೆ. ಆ ಕುರಿತು ನಾವು ಹೆಮ್ಮೆ ಪಡುವುದರ ಜೊತೆಗೆ ವಾಸ್ತವವಾಗಿ ಚಿಂತಿಸಬೇಕು. ಕರ್ನಾಟಕದ ಹಲವು ಬಯಲಾಟ ಪ್ರಕಾರಗಳು ಸೇರಿ ದೊಡ್ಡ ಗಾತ್ರದ ಒಂದು ರಂಗಭೂಮಿಯು ಅದರ ವ್ಯಾಪ್ತಿಯೊಳಗೆ ಬರುತ್ತದೆ. ಅಕಾಡಮಿ ಇದೀಗ ರೂಪಿತವಾಗಿದೆ. ಅವು ಆರಂಭಿಕ ಸಮಸ್ಯೆಗಳು, ಆರ್ಥಿಕ ಮಿತಿಗಳು, ಸಾಧ್ಯತೆಯ ಮಿತಿಗಳ ಮಧ್ಯೆ ಅದು ಕೆಲಸ ಮಾಡಬೇಕಾಗಿದೆ.
ಅಕಾಡಮಿಯು ಅಕಾಡೆಮಿಕ್ ಮತ್ತು ಉತ್ಸವಾದಿ ಅಲಂಕಾರಿಕ ಕಾರ್ಯಗಳೆಂಬ ಎರಡು ಬಗೆಯ ಮುಖಗಳಿಂದ ಕಾರ್ಯನಿರತವಾಗುವಂತಹುದು. ಅಕಾಡಮಿಯ ಮಿತಿಗಳೇನಿದ್ದರೂ, ಅದು ಮಾಡುವ ಕೆಲಸಗಲಿಗೆ, ಅದು ಕೊಡುವ ಪ್ರಶಸ್ತಿಗಳಿಗೆ ಪ್ರತ್ಯೇಕ ಮಾನ್ಯತೆ ಇದೆ. ನಿರೀಕ್ಷೆಗಳೂ ವಿಶೇಷವಾಗಿರುತ್ತವೆ. ಈ ಅರಿವಿನಿಂದ ಅದು ಕೆಲಸ ಮಾಡುವಂತಹುದು. ಅದರ ಕಾರ್ಯ, ಮನ್ನಣೆ ಪ್ರಶಸ್ತಿಗಳು, ಮುಖ್ಯವಾಗಿ ಸಾಂಕೇತಿಕ. ಅದು ಕಲೆಯಲ್ಲಿ ಆಗಬೇಕಾಗಿರುವ ವಿವಿಧ ಕಾರ್ಯಗಳಿಗೆ, ಮಧ್ಯವರ್ತಿ ಸಂಯೋಜಕ ಶಕ್ತಿಯಾಗಿ, ಪ್ರೇರಕ ಸಂಘಟಕ (ನೋಡಲ್) ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ, ಕೇಂದ್ರ ಸರಕಾರಗಳು, ಖಾಸಗಿ ವ್ಯವಸ್ಥೆಗಳ ಸಹಾಯ, ಸಮಾನ ಆಸಕ್ತ ಅಧ್ಯಯನ ಪೀಠ ಇತ್ಯಾದಿಗಳಿಂದ ವಿಚಾರ, ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಅದನ್ನು ವಿಧಾಯಕವಾಗಿ ಬಳಸುವಂತಹದು, ನೂತನ ಪರಿಕಲ್ಪನೆಗಳನ್ನು ಚಾಲ್ತಿಗೊಳಿಸುವಂತಹುದು, ವ್ಯವಸಾಯ ರಂಗಕ್ಕೆ ಸೂಚನಾತ್ಮಕ ಮಾರ್ಗದರ್ಶನ, ಮಸುಕಾಗಿರುವ ಪ್ರಕಾರಗಳ ಉಜ್ವಲೀಕರಣ – ಇವು ಅಕಾಡಮಿಯ ಕಾರ್ಯಗಳು.
ಯಕ್ಷಗಾನ ಕಲೆಗೆ ಪೋಷಕವಾಗಬಹುದಾದ ಹಲವು ಪ್ರಯೋಜನಗಳು ಕೇಂದ್ರ ಸರಕಾರದ ಜವಳಿ ಇಲಾಖೆ, ಕರಕುಶಲ ವಿಭಾಗ, ಶಿಕ್ಷಣ ಇಲಾಖೆ, ಸಂಸ್ಕೃತಿ ಇಲಾಖೆಗಳಲ್ಲೂ ರಾಜ್ಯ ಸರಕಾರದ ಯೋಜನೆಗಳಲ್ಲೂ ಇವೆ. ಆ ಕುರಿತು ಒಂದು ಸಾಧಾರಣ ಸಮೀಕ್ಷೆಯನ್ನು ಅಕಾಡಮಿ ನಡೆಸಬೇಕೆಂದು ಕೋರುತ್ತೇನೆ. ಪುನಾರಚನೆ ಪುನರುಜ್ಜೀವನದ ಅಗತ್ಯ ಬಯಲಾಟಗಳಿಗೆ ಹೆಚ್ಚು ಇದೆ. (ದೊಡ್ಡಾಟ, ಮೂಡಲಪಾಯ, ಗಟ್ಟದಕೋರೆ, ಸಣ್ಣಾಟ ಪ್ರಕಾರಗಳಿಗೆ).
ಶಿಕ್ಷಣ ಸ್ವರೂಪ
ಹಿಂದೆ ಯಕ್ಷಗಾನ ಶಿಕ್ಷಣವು-ಸಾಂಪ್ರದಾಯಿಕ ರೂಪದಲ್ಲಿ ಮೇಳಗಳ ತಿರುಗಾಟದಲ್ಲಿ, ಮಳೆಗಾಲದ ‘ನಾಟ್ಯಾಭ್ಯಾಸ’ಗಳಲ್ಲಿ ಜರುಗುತ್ತಿತ್ತು. 1970ರ ದಶಕದಿಂದೀಚೆ ಯಕ್ಷಗಾನ ಶಿಕ್ಷಣ ಕೇಂದ್ರಗಳು ರೂಪುಗೊಂಡವು. ಇದೀಗ ಕೇಂದ್ರಗಳಿಗೆ ವಿದ್ಯಾರ್ಥಿಗಳ ಕೊರತೆ ಬಂದಿದೆ. ಯಕ್ಷಗಾನವು ಉದ್ಯೋಗವಾಗಿ ಆಕರ್ಷಣವಾಗಿ ಉಳಿದಿಲ್ಲ. ಹಿಂದೆಯೂ ಇಂದೂ ವಿದ್ಯಾರ್ಥಿಗಳೆಲ್ಲರೂ ಪೂರ್ಣ ‘ಸ್ಕಾಲರ್‍ಸಿಪ್’ ಮೂಲಕ ಕಲಿತವರು. ಯಕ್ಷಗಾನ ಕೇಂದ್ರಗಳ ಪಾಠಪಟ್ಟಿ, ಕಲಿಸುವ ವಿಧಾನ ಮತ್ತು ವಿದ್ಯಾರ್ಥಿ ನೋಂದಣಿಯಲ್ಲಿ ಬದಲಾವಣೆಗಳಿಗೆ ಇರುವ ಅವಕಾಶಗಳನ್ನು ಪರಿಶೀಲಿಸಬಹುದಾಗಿದೆ. ಪಾಠಪಟ್ಟಿಯಲ್ಲಿ-ಸಾಂಪ್ರದಾಯಿಕ ಕಲೆಗಳ ಬಗೆಗಿನ ತಾತ್ವಿಕ ಚಿಂತನೆ, ಶೈಲಿ ವಿಚಾರ, ಕಲಾ ವಿಮರ್ಶೆ, ಅನ್ಯ ಸಮಾನ ಕಲೆಗಳ ಪರಿಚಯ, ನಿರ್ದೇಶನ ತತ್ವಗಳನ್ನು ಮತ್ತು ಅರ್ಥಗಳನ್ನು ಸಾಧಿಸಿದರೆ ಹೆಚ್ಚು ಸಮಗ್ರವಾಗುತ್ತದೆ. ಕೇಂದ್ರಗಳಲ್ಲಿ ಅರ್ಥಗಾರಿಕೆಯ ಕುರಿತು ಇನ್ನೂ ಲಕ್ಷ್ಯ ನೀಡುವುದು ಅಗತ್ಯ.
ಅಂತೆಯೇ, ಆಸಕ್ತರಿಗಾಗಿ ಕೇಂದ್ರಗಳಲ್ಲಿ ಸಾಯಂಕಾಲದ ತರಗತಿಗಳು, ವಾರದ ಪಾಠ, ಸಂಕ್ಷೀಪ್ತ ಕಾರ್ಯಕ್ರಮ(Crash Program) ವಿದ್ಯಾರ್ಥಿಗಳಿರುವಲ್ಲಿಗೆ ಗುರುಗಳು ಹೋಗಿ ಪಾಠ ಮಾಡುವ ಕಿರು ಕೋರ್ಸು ಮೊದಲಾದುವುಗಳ ಮೂಲಕ ಹೆಚ್ಚು ಜನರು ಕಲೆಯನ್ನು ಕಲಿಯುವ ಹಾಗೆ ರೂಪಿಸಲು ಸಾಧ್ಯ. ಇದು ವಿಸ್ತರಣದ ಒಂದು ರೂಪ.
ಮಹಾರೂಪಕ
ಸಹ್ಯಾದ್ರಿ, ಶ್ರೀಗಂಧ, ಪಂಪನಾರಣಪ್ಪನವರ ಕಾವ್ಯಗಳು ಇವೆಲ್ಲ ಕನ್ನಡದ ಹೆಮ್ಮೆಯ ಚೇತನಗಳೆಂಬ ಮಾತಿದೆ. ಅವುಗಳನ್ನು ಒಳಗೊಂಡಂತೆ, ಅಲ್ಲ ಮೀರಿ ನಿಲ್ಲುವ ಕನ್ನಡನಾಡಿನ ಸಂಸ್ಕೃತಿಯ ಮಹಾರೂಪ, ಮಹಾರೂಪಕ-ಯಕ್ಷಗಾನ. ನಾಡಿನ ನೆಲಜಲ ಇತಿಹಾಸಗಳ, ಕಾವೇರಿ, ಗೋದಾವರಿಗಳ, ಕೆಂಪು-ಕಪ್ಪು-ಬಿಳಿ ಮಣ್ಣುಗಳ, ಲೌಕಿಕ-ಭಾರತೀಯ, ವಿಶ್ವ ಮತ್ತು ಸ್ಥಳೀಯ ಸಂವೇದನೆಗಳ, ಕನ್ನಡದೊಳಗಿನ ಕನ್ನಡಗಳ, ತುಳು ಕೊಂಕಣಿ ಮತಿಯೊಳಗಣ ಸಾರ ಮಧು ಅದು. ಲೋಕಧರ್ಮಿಗಳ ವಿಚಿತ್ರ ಮಿಶ್ರಣ, ಧಾರ್ಮಿಕ ಉದಾರೀಕರಣ, ಭಕ್ತಿ-ಶಕ್ತಿ, ಸತ್ವ-ಕ್ಷಾತ್ರಗಳ, ನಯದೋಗುಗಳ ಜೋಡಣೆ, ಶಾಸ್ತ್ರ-ಜನಪದಗಳ ವಿಭಾಗವನ್ನು ಮೀರಿದ ನಿಜದ ದೇಸಿ. ನೀತಿ ಸಂಸ್ಕೃತಿ, ಚಿಂತನ, ರಂಜನ, ಪಾಂಡಿತ್ಯ, ಕಾವ್ಯಾತ್ಮಕತೆ, ಶಿಕ್ಷಣ-ರಸ, ವಾಚಾಳಿತನ-ಮೌನ ಅಭಿನಯ-ಅಭಿನವಗಳ ಪದರು ಪದರಿನ ಸಮನ್ವಯ ಜೀವನ ದರ್ಶನಗ್ರತಿಥವಾದ ನಾಡದೇವಿಯ ಓಲೆ, ಕನ್ನಡ ವಾಗ್ಮಿತೆಯ, ಅಭಿವ್ಯಕ್ತಿ ಶಕ್ತಿಯ ವೈಭವದ ಸಾಕಾರ. ನಾಡ ಶಾಲೆ, ರಾತ್ರೀ ವಿದ್ಯಾಲಯ, ನಮ್ಮ ಬದುಕಿನ ರೀತಿಯ, ಸಂಸ್ಕೃತಿ ಸಾರದ ರಕ್ಷಣಾಸ್ಥಾನ, ಅವಿಚಾರಿತ ಆಧುನಿಕತೆಯ ಉಬ್ಬರದೆದುರಿನ ಅಡಗುದಾಣ, ಗುರಾಣಿ ಮತ್ತು ಕಮ್ಮಟ, ಬದುಕಿನ ಕಿನ್ನೋಟ-ಮುನ್ನೋಟ.
ಅತಿಶ್ರದ್ಧೆ, ಅತಿ ತರ್ಕಗಳೆರಡನ್ನೂ ಅವಲಂಬಿಸಿದೆ. ನಮ್ಮ ಸರ್ವಶಕ್ತಿಯನ್ನು ಬಳಸಿ, ಇದನ್ನು ಉಳಿಸಿಕೊಳ್ಳೋಣ, ಬೆಳೆಸೋಣ, ಬೆಳೆಸೋಣ, ಮತ್ತೊಮ್ಮೆ ಎಲ್ಲರಿಗೂ ವಂದನೆಗಳು.
– ಡಾ. ಎಂ. ಪ್ರಭಾಕರ ಜೋಶಿ