ಈ ಮೇಳ ಎರಡು ಹಂತದಲ್ಲಿ ಮೆರೆದು ನಿಜಾರ್ಥದಲ್ಲಿ ಮುಳುಗಡೆಯಾಯಿತು. ಹನ್ನಾರ ಎಂಬುದು ಹಿಂದಿನ ಕನ್ನಡಜಿಲ್ಲೆಯ, ಇಂದಿನ ಶಿವಮೊಗ್ಗಜಿಲ್ಲೆಯ ಒಂದು ಮಾಗಣೆ (ಸೀಮೆ)ಯ ಮುಖ್ಯಸ್ಥಳ.

ಸುಮಾರು ಕ್ರಿ.ಶ ೧೭೫೦ರ ಸುಮಾರಿಗೆ ಪ್ರಾರಂಭವಾಗಿ ೧೯೦೦ ರವರೆಗೆ ಇದ್ದ ಈ ಮೇಳ ಕಾರಣಾಂತರಗಳಿಂದ ನಿಂತು ಹೋಗಿತ್ತು. ಇದು ಇತ್ತು ಎಂಬುದು ಈ ಪ್ರದೇಶದಲ್ಲಿ ದೊರೆಯುವ ಪ್ರಸಂಗ ಪ್ರತಿಗಳು, ಹಳೆಯ ವೇಷ ಭೂಷಣಗಳಿಂದಷ್ಟೇ ತಿಳಿಯುತ್ತದೆ. (ಡಾ.ಶಿವರಾಮ ಕಾರಂತರು ಈ ಪ್ರದೇಶದಿಂದ ಐವತ್ತಕ್ಕೂ ಹೆಚ್ಚು ಪ್ರಸಂಗಗಳನ್ನು ಸಂಗ್ರಹಿಸಿದ್ದರು ಎಂಬುದನ್ನು ಅವರ ಯಕ್ಷಗಾನ ಬಯಲಾಟ ಕೃತಿಯಲ್ಲಿ ದಾಖಲಿಸಿದ್ದಾರೆ). ಕೆಳದಿಯ ಅರಸರ ಕಾಲದ ಬರವಣಿಗೆ, ಯಕ್ಷಗಾನ ಪ್ರಸಂಗಗಳು (ಈಗ ಪ್ರಸಿದ್ಧವಾಗಿರುವ ಪಾರಿಜಾತ ಪ್ರಸಂಗ, ರಕ್ಮಿಣೀ ಕಲ್ಯಾಣ ಆಗಿನ ಕೆಳದಿ ಸುಬ್ಬನ ಕೃತಿಗಳು) ಕಾವ್ಯಗಳಿಂದ ತಿಳಿಯುತ್ತವೆ.

ನಂತರ ಎರಡನೆಯ ಹಂತದಲ್ಲಿ ಸುಮಾರು ೧೯೪೦ರ ನಂತರ ಮೇಳ ಇನ್ನೊಮ್ಮೆ ಸ್ಥಳೀಯ ಯುವಕರ ಉಮೇದಿನಿಂದ ರೂಪುಗೊಂಡು ಬಯಲಾಟದ ಮೇಳವಾಗಿ ಪ್ರಸಿದ್ಧವಾಗಿತ್ತು.ಒಳ್ಳೆಯ ಕಲಾವಿದರೂ ಇದ್ದು, ಲಿಂಗದ ಕೈ ಮಹಾಬಲಯ್ಯನವರು ದಶಾವತಾರಿ ಎಂದೇ ಪ್ರಸಿದ್ಧರಾಗಿದ್ದರು. ಈ ಮೇಳಕ್ಕೆ ಕರಾವಳಿ ಕಲಾವಿದರ ಸಂಪರ್ಕವಿತ್ತು. ಮೇಳ ನಿಂತ ಮೇಲೆ ಇಲ್ಲಿಯ ಕಲಾವಿದರು ಘಟ್ಟದ ಕೆಳಗಿನ ಮೇಳದಲ್ಲೂ ಇದ್ದರು. ಆರುತಿಂಗಳ ತಿರುಗಾಟವನ್ನೂ ನಡೆಸುತ್ತಿದ್ದರು. ವಿಶೇಷವೆಂದರೆ ಕೀರ್ತಿ, ಶೇಷ ತೆಕ್ಕಟ್ಟೆ ಆನಂದ ಮಾಸ್ತರ್, ಮರವಂತೆ ನರಸಿಂಹದಾಸರಂತಹ ಕಲಾವಿದರ ರಂಗ ಪ್ರವೇಶವಾದುದು ಇಲ್ಲಿ ಎಂದು ಕೇಳಿದ್ದೇನೆ.
ನನ್ನ ತಂದೆಯವರೂ ಈ ಮೇಳದ ಒಬ್ಬ ಕಲಾವಿದರು. ಮೇಳ ಪ್ರಾರಂಭವಾಗಿ ಎರಡು ವರ್ಷಗಳ ಕಾಲ ಬಣ್ಣವನ್ನೂ ತಮ್ಮ ಖರ್ಚಿನಲ್ಲೇ ಒದಗಿಸಿಕೊಂಡು ವೇಷ ಮಾಡುತ್ತಿದ್ದರಂತೆ.

ಮಹಾಬಲಯ್ಯನವರು ಪ್ರಸಾದನ ಸಾಮಗ್ರಿಗಳನ್ನೂ ತಯಾರಿಸುತ್ತಿದ್ದು ಭಾಗವತ ,ವೇಷಧಾರಿ,ಮೃದಂಗ ವಾದಕರೂ ಆಗಿದ್ದರು.ಇವರ ಪ್ರಯತ್ನದಿಂದ ಒಂದು ದೇವೀಮಹಾತ್ಮೆಗಾಗುವಷ್ಟು ವೇಷಸಾಮಗ್ರಿ ಸಿದ್ಧವಾಗಿತ್ತು. ಬೆಳ್ಳಿ ಕಿರೀಟ, ತ್ರಿಶೂಲ ಮೀನಾಕ್ಷಿ ಟೊಪ್ಪಿ, ಎಲ್ಲಾ ಬಗೆಯ ಆಯುಧಗಳು ಹೀಗೆ ಒಂದು ಸುಸಜ್ಜಿತ ಮೇಳವಾಗಿ ಸಾಕಷ್ಟು ಪ್ರಸಿದ್ಧವೂ ಆಗಿ ಮಾರಣಕಟ್ಟೆಯಂತಹ ಮೇಳಗಳೊಂದಿಗೆ ಜೋಡಾಟವನ್ನೂ ಮಾಡಿತ್ತು.

ಕಾಲ ಪ್ರವಾಹ ಬದಲಾಯಿತು.ಲಿಂಗನಮಕ್ಕಿ ಯೋಜನೆ ಪ್ರಾರಂಭವಾಗಿ ಹನ್ನಾರ ಈ ಯೋಜನೆಯಲ್ಲಿ ಮುಳುಗಡೆಯಾದಾಗ ನದೀತೀರದ ಕೃಷಿಕ ಕಲಾವಿದರು ಊರು ಬಿಡಬೇಕಾದ ಅನಿವಾರ್ಯತೆಗೆ ಒಳಗಾದರು.ಎಲ್ಲೆಲ್ಲೋ ನೆಲೆಕಂಡರು.ಅದು ಯಕ್ಷಗಾನದ ಗಂಧಗಾಳಿ ಇಲ್ಲದ ಊರೂ ಆಗಿದ್ದರೆ ಅವರ ಕಲಾಜೀವನವೂ ಮುಳುಗಡೆಯಾಯಿತು!

ಈಗ ಅಲ್ಲಿಯೇ ಉಳಿದವರಿಗೆ ಮೇಳ ನಡೆಸುವುದು ಕಷ್ಟವಾಗಿ ಮುಂದೇನು ಎಂಬ ಪ್ರಶ್ನೆ ಕಾಡುವ ಸಮಯಕ್ಕೆ ವೀರಭದ್ರ ನಾಯಕರ ಹಿರಿತನದಲ್ಲಿ ಕೊಲ್ಲೂರು ಮೇಳಪ್ರಾರಂಭವಾಗುವಾಗ ಅವರ ಕೇಳಿಕೆಯಂತೆ ಸಂಪೂರ್ಣ ಉಚಿತವಾಗಿ(ಅಂದಿನ ಮಾನದಲ್ಲೂ ಲಕ್ಷಾಂತರ ರೂಪಾಯಿಯ) ಮೇಳದ ಸಾಮಗ್ರಿಗಳನ್ನು, ಮುಂದೆ ಯಾರಾದರೂ ಸಮರ್ಥರು ಮುಂದುವರಿಸುವುದಿದ್ದರೆ ಹಿಂದಕ್ಕೆ ಕೊಡಬೇಕೆಂಬ ಬಾಯ್ದರೆ ಒಡಂಬಡಿಕೆಯೊಂದಿಗೆ ಹನ್ನಾರ ಮೇಳ ಕೊಲ್ಲೂರಿಗೆ ಹಸ್ತಾಂತರವಾಯಿತು.

ಹನ್ನಾರದವರೇ ಆದ ವಿಠಲದಾಸ ಕಾಮತರೂ ಕೊಲ್ಲೂರು ಮೇಳವನ್ನು ಕೆಲಕಾಲ ನಡೆಸಿದ್ದರು. ಅವರು ಮೊಟ್ಟಮೊದಲಿಗೆ (ಬಡಗಿನಲ್ಲಿ) ಟೆಂಟ್ ಮೇಳ ಕಟ್ಟಿದವರೆಂದೂ ದಾಖಲಾದರು.

ಮುಂದೆ ಕೊಲ್ಲೂರು ಮೇಳ ವೈಭವದಿಂದಲೇ ನಡೆಯಿತಾದರೂ ಅದೂ ಕೂಡಾ ನಿಂತುಹೋಯಿತು.ಆಗ ಕೊಲ್ಲೂರು ದೇವಸ್ಥಾನ ಎಂಡೋಮೆಂಟ್ ಆಡಳಿತಕ್ಕೆ ಬಂದಿತ್ತು. ಹನ್ನಾರ ಮೇಳವನ್ನು ನೀಡುವಾಗ ದಾಖಲೆಗಳಲ್ಲಿ ನೀಡಿಲ್ಲವಾದ ಕಾರಣ ಹನ್ನಾರದಲ್ಲಿ ಮತ್ತೊಮ್ಮೆ ಮೇಳವೆಬ್ಬಿಸುವ ಉಮೇದು ಕೆಲವರಲ್ಲಿ ಬಂದರೂ ಸಾಮಗ್ರಿ ಹಿಂದೆ ಸಿಗಲಿಲ್ಲ. ಕೊಲ್ಲೂರು ಮೇಳ ಎಂಬ ಹೆಸರಿನಲ್ಲಿ ಮುಂದೆ ಬೇರೆ ಮೇಳ ಬಂದುದೂ ಉಂಟು.ಆದರೆ ಆಮೇಳದ ಯಾವ ಸಾಮಗ್ರಿಯೂ ಸಿಗಲಿಲ್ಲ.
ಊರೊಂದು ಮುಳುಗುವಾಗ ಅಲ್ಲಿಯ ಕಲೆ, ಸಂಸ್ಕೃತಿ ಅಭಿರುಚಿ, ಭವಿಷ್ಯ ಎಲ್ಲ ಮುಳುಗುತ್ತದೆ ಎಂಬುದಕ್ಕೆ ನಮ್ಮ ಹನ್ನಾರ ಮೇಳ ಸಾಕ್ಷಿಯಾಯಿತು.
ಈಗ ಹನ್ನಾರವೆಂಬ ಊರಿನ ಮೇಲೆ ನೂರಾರು ಅಡಿ ನೀರು ನಿಲ್ಲುತ್ತದೆ.ಕರ್ನಾಟಕದ ತುಂಬೆಲ್ಲಾ ಬೆಳಕು ಹರಿಸಿದ ಲಿಂಗನಮಕ್ಕಿ ಜಲಾಶಯದಿಂದಾಗಿ ಹನ್ನಾರಮೇಳ ಈಗ ಕತ್ತಲೆಯೊಳಗೆ ಕಳೆದೇ ಹೋಗಿದೆ.

  • ಶ್ರೀಧರ ಡಿ.ಎಸ್.
error: Content is protected !!
Share This