- ಡಿ. ಎಸ್. ಶ್ರೀಧರ
ಜನವರಿ 9, 2024. ಇದು ನನಗೆ ಅನಿರೀಕ್ಷಿತ ಸಂತಸ ತಂದ ದಿನ. ಡಾ.ಎಂ.ಪ್ರಭಾಕರ ಜೋಶಿಯವರು ಹಾಗೂ ಸದ್ಯ ಕೆನಡಾ ದೇಶದಲ್ಲಿ ಉದ್ಯೋಗಿಯಾಗಿದ್ದರೂ ಮಣ್ಣಿನ ಕಲೆಯ ಆಸ್ವಾದನೆಯನ್ನು ಬಿಡದ ಸೊರಬದ ಬಳಿಯ ರಾಗು ಕಟ್ಟಿನಕೆರೆಯವರು ನಮ್ಮ ಮನೆಗೆ ಬಂದಿದ್ದರು. ಡಾ.ಪ್ರಭಾಕರ ಜೋಶಿಯವರೇ ನನ್ನೊಂದಿಗೆ ಸಂದರ್ಶನವನ್ನು ರಾಗು ಅವರಿಗಾಗಿ ನಡೆಸಿಕೊಟ್ಟುದನ್ನು ದಾಖಲಿಸಲಾಯಿತು. ಪೂರ್ವ ಸೂಚಿತ ಸಂದರ್ಶನವಲ್ಲವಾದುದರಿಂದ ಸಂದರ್ಶನದ ಶಿಸ್ತು ಬಂದಿದೆಯೋ, ಕೊರತೆ ಇದೆಯೋ ತಿಳಿಯದು. ಆದರೆ ಡಾ.ಜೋಶಿಯವರು ಕೇಳುವ ವೈಖರಿಗೆ ಎಂತಹ ಮರೆತ ವಿಷಯವಾದರೂ ನೆನಪಿಗೆ ಬರುತ್ತದೆ. ಸಂದರ್ಶನ ನನ್ನ ಯಕ್ಷಗಾನೀಯ ಚಟುವಟಿಕೆಗಳು ಬೆಳೆದು ಬಂದ ಬಗೆ, ಶಿಕ್ಷಣ, ಪ್ರಸಂಗ ರಚನೆಯ ಹಿನ್ನೆಲೆ, ಯಕ್ಷಗಾನೀಯವಾದ ಬೇರೆಬೇರೆ ಚಟುವಟಿಕೆಗಳು, ಸಾಹಿತ್ಯದ -ಅದರಲ್ಲೂ ಪೌರಾಣಿಕ ಕಾದಂಬರಿಗಳ ರಚನೆಯ ಪ್ರಯತ್ನಗಳನ್ನು ದಾಖಲಿಸಿಕೊಂಡರು.
ಡಾ.ಜೋಶಿಯವರ ಸಂದರ್ಶನದ ಜೊತೆಗೆ ನೆನಪಿನ ಪುಟಗಳನ್ನು ತೆರೆದುಕೊಳ್ಳಲು ಅನುವಾದ ಈ ಸಂದರ್ಭ ನನ್ನ ಮುಂದಿನ ದಾರಿಗೆ ಒಂದುಬಗೆಯ ಲಯವನ್ನು ತಂದುಕೊಟ್ಟದ್ದು ಸತ್ಯ. ಆತ್ಮಕಥೆಯಂತಹ ಬರೆಹದತ್ತ ಮನಮಾಡಬಹುದೇನೋ ಅನ್ನಿಸಿದೆ. ಒಂದು ಕೆಲಸ ಮತ್ತೊಂದಕ್ಕೆ ನಾಂದಿಯಾದರೆ ಸಂತೋಷವೇ.
ನಂತರ ಶ್ರೀ ರಾಗು ಕಟ್ಟಿನಕೆರೆಯವರೂ ಅವರೇ ನಡೆಸಿ ಕಿರು ಸಂದರ್ಶನವನ್ನು ದಾಖಲಿಸಿಕೊಂಡರು. ಅವರ ಸಂದರ್ಶನ ಪ್ರಸಂಗ ರಚನೆ, ಛಂದಸ್ಸು, ರಾಗಗಳು, ಮಟ್ಟುಗಳ ಬಯಕೆ, ದಾಖಲೀಕರಣ, ಕಾಲಮಿತಿ ಪ್ರಯೋಗ, ಪ್ರಸಂಗ- ಪುರಾಣ ಮುಂತಾದ ವಿಚಾರಗಳಮೇಲಿದ್ದು.. ನನ್ನ ಅನುಭವಗಳ ನೆಲೆಯಲ್ಲಿ ಉತ್ತರಿಸಿದೆ.
ಒಂದು ಸಾರ್ಥಕ ದಿನ ಸಂಪನ್ನಗೊಂಡ ತೃಪ್ತಿ..
ಸಂದರ್ಶನದ ಕೊನೆಗೆ ಅನ್ನಿಸಿದ್ದು ವಿಷಯದ ವ್ಯಾಪ್ತಿ ವಿಶಿಷ್ಟವಾಗಬೇಕಿದ್ದರೆ ನೆನಪಿನ ಸಂಗ್ರಹವೂ ಸಾಂದ್ರವಾಗಿರಬೇಕು.. ಯಕ್ಷಗಾನದ ಅರ್ಥಗಾರಿಕೆ ಹಾಗೇ ಅಲ್ಲವೆ?