ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಕಲಾ ಸಂಘಟಕ, ಉತ್ತಮ ಶಿಕ್ಷಕ, ಉತ್ತಮ ಕೃಷಿಕ ಬಂಟ್ವಾಳ ತಾಲೂಕು ಇರಾ ಗ್ರಾಮದ ಬಿ. ಚಂದ್ರಶೇಖರ ರಾವ್ ಕುಕ್ಕಾಜೆ ಇವರು ತಮ್ಮ 88 ರ ವಯಸ್ಸಿನಲ್ಲಿ ದಿನಾಂಕ 27/05/2021 ರಂದು ನಮ್ಮನ್ನಗಲಿದರು.

ಅಜ್ಜ ಕೃಷ್ಣ ಶಾಸ್ತ್ರಿಗಳು ಪಂಡಿತರೆಂದೇ ಪ್ರಸಿದ್ಧಿಪಡೆದ ಅಧ್ಯಾಪಕರು. ತಂದೆ ಬಿ.ವೆಂಕಟರಾಯರು ಅರಳದ ಹೆಸರಾಂತ ಶ್ರೀ ಚಂದ್ರನಾಥ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೀರ್ತಿಗಳಿಸಿದವರು. ಅದೇ ಪರಂಪರೆಯುಲ್ಲಿ ಇವರು ವೃತ್ತಿಯಿಂದಲೂ ಪ್ರವೃತ್ತಿಯಿಂದಲೂ ರಕ್ತಗತವಾಗಿ ಬಂದ ಅಧ್ಯಾಪನ ಕಲೆಯನ್ನು ಸಿದ್ಧಿಸಿಕೊಂಡು ಪ್ರಸಿದ್ಧಿಯನ್ನು ಪಡೆವರು.

1934ರಲ್ಲಿ ಜನಿಸಿದ ಇವರು ಪುತ್ತೂರಿನ ಬಲ್ನಾಡ್ ನವರು. ತಂದೆಯ ಆಕಸ್ಮಿಕ ಅಗಲುವಿಕೆಯಿಂದ ತಬ್ಬಲಿಯಾದ ಇವರನ್ನು 6 ನೇ ವಯಸ್ಸಿನಲ್ಲಿ ಇವರ ತಾಯಿಯ ತಂದೆ , ಇವರ ಅಜ್ಜ ಮಂಚಿ ಗ್ರಾಮದ ಪ್ರಸಿದ್ದ ಮನೆತನದ ಪತ್ತುಮುಡಿ ಅನಂತಯ್ಯನವರು ಪತ್ತುಮುಡಿ ಮನೆಯಲ್ಲೆ ಬೆಳೆಸಿದರು. ಬಂಟ್ವಾಳದಲ್ಲಿ ಹೈಸ್ಕೂಲ್ ಶಿಕ್ಷಣ, ಕಾಸರಗೋಡಿನ ಮಾಯಿಪ್ಪಾಡಿಯಲ್ಲಿ ಶಿಕ್ಷಕ ತರಬೇತಿ, ಸ್ವಾಧ್ಯಾಯದಿಂದ ಕನ್ನಡ ವಿದ್ವಾನ್ ಪದವಿ, ಹಿಂದಿ ಭಾಷಾಭೂಷಣ ಪದವಿ ಗಳಿಸಿದರು. 1954 ರಲ್ಲಿ ಸಿದ್ದಕಟ್ಟೆಯ ಸೈಂಟ್ ಪೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿದರು 19ವರ್ಷದ ಸುಧೀರ್ಘ ಸೇವಾನುಭವದ ಫಲವಾಗಿ ಮುಖ್ಯೋಪಾಧ್ಯಯರಾಗಿ ಭಡ್ತಿ ಹೊಂದಿ ಒಟ್ಟು 38 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು.

ಪತ್ತುಮುಡಿ ಮನೆತನದ ಪರಿಸರ ಮತ್ತು ಕುಕ್ಕಾಜೆ ಹಾಗೂ ತನ್ನ ಕಾರ್ಯಕ್ಷೇತ್ರದ ಪರಿಸರ ಯಕ್ಷಗಾನದ ಆಡೋಂಬಲವೇ ಆಗಿದ್ದ ಕಾರಣ ಬಾಲ್ಯದಿಂದಲೇ ಯಕ್ಷಗಾನಾಸಕ್ತಿಯನ್ನು ಬೆಳೆಸಿಕೊಂಡಿದ್ದರು. ಕುಕ್ಕಾಜೆಯಲ್ಲಿ ಯಕ್ಷಗಾನ ಕಲಾವಿಕಾಸ ಸಂಘ ಕಟ್ಟಿಕೊಂಡು ಗೆಳೆಯರಾದ ಮೇರಾವು ಮಹಾಬಲ ರೈ, ಕುಕ್ಕಾಜೆ ದೂಮಣ್ಣ ರೈ, ಭಾಗವತ ಸುಳ್ಯ ಸುಬ್ರಾಯ ಭಟ್, ಮಹಾಬಲ ಭಟ್, ಶಿವರಾಮಮಯ್ಯ ಪುಚ್ಚೆಕೆರೆ ಮುಂತಾದವರ ಜೊತೆ ಸೇರಿ 3 ದಶಕಗಳಿಗೂ ಮಿಕ್ಕಿ ತಾಳಮದ್ದಲೆ ಕೂಟ ನಡೆಸಿದ್ದಾರೆ. ಅಪರೂಪಕ್ಕೆ ಒಂದೆರಡು ಆಟಗಳಲ್ಲೂಭಾಗವಹಿಸಿದ್ದಿದೆ. ಹಿರಿಯ ಅರ್ಥಧಾರಿಗಳಾದ ಪೊಳಲಿ ಶಾಸ್ತ್ರಿ, ಶೇಣಿ. ಸಾಮಗ,ಪೆರ್ಲ, ಮೂಡಂಬೈಲು, ಜೋಷಿ ಮೊದಲಾದವರ ಜೊತೆ ಕೂಟಗಳಲ್ಲಿ ಭಾಗವಹಿಸಿದ ಕೀರ್ತಿ ಇವರದು. 1955 ರಿಂದ 2010 ರ ತನಕವೂ ಯಕ್ಷಪಯಣ. ಕಸವಿಲ್ಲದ ಮಾತು,ಸೊಗಸಾದ ವಿವರಣೆ, ಪಾತ್ರ ರಚನೆಯ ಜಾಣ್ಮೆ, ಹಿತಮಿತವಾದ ಪ್ರತಿಪಾದನೆ, ಸರಸ ಮತ್ತು ತಿಳಿ ಹಾಸ್ಯ ಮಿಶ್ರಿತ ಸಂಭಾಷಣೆ ಇವರ ವೈಶಿಷ್ಟ್ಯ. ಕರ್ಣ, ಅರ್ಜುನ, ಮಾಗದ,ಸುಧನ್ವ,ಉತ್ತರ, ಕೌರವ, ಕೃಷ್ಣ ಮುಂತಾದ ಗಂಡು ಪಾತ್ರಗಳಲ್ಲದೆ, ಮಂಡೋದರಿ, ದ್ರೌಪದಿ, ಪ್ರಭಾವತಿ ಮುಂತಾದ ಸ್ತ್ರೀಪಾತ್ರಗಳನ್ನು ಸೊಗಸಾಗಿ ನಿರ್ವಹಿಸುತ್ತಿದ್ದರು. ಕರ್ಮ ಬಂಧದ ಭೀಷ್ಮ ಅವಿಸ್ಮರಣೀಯ ಪಾತ್ರ. ಬಂಟ್ವಾಳ ಶ್ರಾವಣಮಾಸದ ಯಕ್ಷ ಕೂಟ, ಬೊಂಡಾಲ ಯಕ್ಷಗಾನ ಕೂಟ ಗಳ ಖಾಯಂ ಸದಸರಾಗಿದ್ದರ್‍ಯು. 2007 ರಲ್ಲಿ ಪೊಳಲಿ ಶಾಸ್ತ್ರಿ ಪ್ರಶಸ್ತಿ, 2018 ರಲ್ಲಿ ಉಡುಪಿ ಕಲಾ ರಂಗದ ಪ್ರಶಸ್ತಿ ಗಳಲ್ಲದೆ, ಬಂಟ್ವಾಳ ಶ್ರಾವಣ ಮಾಸ ಯಕ್ಷಗಾನ ಕೂಟ ದ ಸನ್ಮಾನ, ಕೂಟ ಮಹಾಜಗತ್ತು ಗೌರವ, ಇರಾ ಸೋಮನಾಥೇಶ್ವರ ಯಕ್ಷಗಾನ ಕಲಾ ಸಂಘದ ಸನ್ಮಾನ ಮುಂತಾದ ಅನೇಕ ಗೌರವಗಳು ಸಂದಿವೆ.

ಸಾರ್ವಜನಿಕ ಸೇವೆಯಲ್ಲೂ ತೊಡಗಿಸಿಕೊಂಡ ಇವರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಚಿ-ಇರಾ ಇದರಲ್ಲಿ 25 ವರ್ಷಗಳ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಬೆಳ್ಳಿ ಹಬ್ಬವನ್ನು ಎಲ್ಲರನ್ನೂ ಒಟ್ಟು ಸೇರಿಸಿ ವಿಜ್ರಂಭಣೆಯಿಂದ ಆಚರಿಸುವಲ್ಲಿ ಶ್ರಮ ವಹಿಸಿದ್ದಾರೆ. ಸುಳ್ಯ ಮಹಾದೇವ ದೇವಸ್ಥಾನ, ಕುಕ್ಕಾಜೆ ಸಿದ್ಧಿವಿನಾಯಕ ಭಜನಾ ಮಂದಿರ ಹಾಗು ಇನ್ನಿತರ ಶ್ರದ್ಧಾಕೇಂದ್ರಗಳ ಕಾರ್ಯಕ್ರಮದ ಯಶಸ್ಸಿಗೆ ತನ್ನದ್ದಾದ ದೇಣಿಗೆಯನ್ನು ನೀಡಿದವರು. ಸಹಕಾರ ಕ್ಷೇತ್ರದಲ್ಲೂ ಕೈಯಾಡಿಸಿದ ಇವರು ಕುಕ್ಕಾಜೆ ಮಹಾದೇವ ಸೊಸೈಟಿಯ ಸ್ಥಾಪಕ ನಿರ್ದೇಶಕರಾಗಿದ್ದರು.

ಇರಾ ಸೋಮನಾಥೇಶ್ವರನ ಪರಮ ಭಕ್ತರಾದ ಇವರಿಗೆ, ಇರಾ ಎಂದರೆ ಬಹಳ ಅಚ್ಚುಮೆಚ್ಚಿನ ಕಾರ್ಯಕ್ಷೇತ್ರ. ಕಲ್ಲಾಡಿ ವಿಠಲ ಶೆಟ್ಟರ ಮೇಲೆ ಇವರಿಗಿದ್ದ ಅಭಿಮಾನ ಮತ್ತು ಕಲ್ಲಾಡಿ ಯವರಿಗೆ ಚಂದ್ರಶೇಖರ ರಾಯರ ಮೇಲಿದ್ದ ಗೌರವ, ಪ್ರೀತಿ ಉಲ್ಲೇಖನೀಯ.

ಕ್ಷೇತ್ರದ ಎಲ್ಲಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇವರ ಸಲಹೆ ಸೂಚನೆಗಳಿಗೆ ಕಲ್ಲಾಡಿ ವಿಠಲ ಶೆಟ್ಟರು ಹಾಗೂ ಸಮಿತಿಯವರು, ಭಗವದ್ಭಕ್ತರು ಮಾನ್ಯತೆ ನೀಡುತ್ತಿದ್ದರು. ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ಮತ್ತು ಇರಾ ಸೋಮನಾಥೇಶ್ವರ ಯಕ್ಷಗಾನ ಕಲಾ ಸಂಘದ ಗೌರವ ಸಲಹೆಗಾರರಾಗಿದ್ದರು. ಇರಾ ಸೋಮನಾಥ ಕ್ಷೇತ್ರದ ಅವಿಭಾಜ್ಯ ಅಂಗವೇ ಆಗಿದ್ದರು ಎಂದರೆ ಅತಿಶಯೋಕ್ತಿಯಲ್ಲ.

ಇಬ್ಬರು ಗಂಡು ಮಕ್ಕಳು, ಓಬ್ಬರು ಹೆಣ್ಣು ಮಗಳನ್ನು ಪಡೆದ ಸುಖಿ ಸಂಸಾರಿ. ಒಳ್ಳೆಯ ಶಿಕ್ಷಕ, ಕೃಷಿಕ, ಕಲಾವಿದ, ಮಾರ್ಗದರ್ಶಕ ಇವರ ಅಗಲುವಿಕೆ ನಿಜವಾದ ಅರ್ಥದಲ್ಲಿ ತುಂಬಲಾರದ ನಷ್ಟ. ಇವರ ಆದರ್ಶ ಬದುಕು ನಮಗೆ ದಾರಿ ದೀಪ. ಇವರ ಆತ್ಮಕ್ಕೆ ಇರಾ ಕುಂಡಾವು ಸೋಮನಾಥೇಶ್ವರನೂ, ಕಟೀಲಿನ ಭ್ರಮರಾಂಭೆಯು ಚಿರಶಾಂತಿಯನ್ನೀಯಲಿ ಎಂದು ಪ್ರಾರ್ಥಿಸುತ್ತೇವೆ.

ಆಡಳಿತ ಮೊಕ್ತೇಸರರು, ಸದಸ್ಯರು ಆಡಳಿತ ಸಮಿತಿ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಇರಾ ಕುಂಡಾವು.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇವಾ ಸಮಿತಿ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಇರಾ ಕುಂಡಾವು.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ) ಇರಾ ಕುಂಡಾವು.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಕಲಾ ಸಂಘ
ಹಾಗೂ ಊರ ಅಭಿಮಾನಿ ಗಳು

error: Content is protected !!
Share This