
ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ (76) ಹೃದಯಘಾತದಿಂದ ಇಂದು (05.07.2024) ನಿಧನರಾದರು. ಕುಂಬ್ಳೆ ಕಮಲಾಕ್ಷ ನಾಯಕ್‍ರಲ್ಲಿ ನಾಟ್ಯಾಭ್ಯಾಸ ಹಾಗೂ ಶೇಣಿ ಗೋಪಾಲಕೃಷ್ಣ ಭಟ್ಟರಿಂದ ಅರ್ಥಗಾರಿಕೆಯನ್ನು ಕಲಿತು, 13ನೇ ವಯಸ್ಸಿನಲ್ಲಿಯೇ ಕಲಾ ಸೇವೆಯನ್ನು ಆರಂಭಿಸಿದ ಇವರು ಕುಂಡಾವು, ಕೂಡ್ಲು, ಮುಲ್ಕಿ, ಕರ್ನಾಟಕ ಹಾಗೂ ದೀರ್ಘ ಕಾಲ ಧರ್ಮಸ್ಥಳ ಮೇಳ ಹೀಗೆ ನಿರಂತರ ಆರು ದಶಕಗಳ ಕಾಲ ಕಲಾಸೇವೆಗೈದಿದ್ದರು. ಆರಂಭದಲ್ಲಿ ಸ್ತ್ರೀ ವೇಷ, ಪುಂಡು ವೇಷಗಳನ್ನು ಮಾಡುತ್ತಿದ್ದು, ಅನಂತರ ರಾಜ ವೇಷಗಳನ್ನೇ ಹೆಚ್ಚಾಗಿ ಮಾಡುತ್ತಿದ್ದರು. ದಮಯಂತಿ, ಚಂದ್ರಮತಿ, ಸೀತೆ, ಶ್ರೀದೇವಿ, ಅಮ್ಮು ಬಳ್ಳಾಲ್ತಿ, ಶ್ರೀರಾಮ, ಶ್ರೀಕೃಷ್ಣ, ಅರ್ಜುನ, ಕರ್ಣ, ಭೀಷ್ಮ, ಧರ್ಮರಾಯ ಮೊದಲಾದ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಗೌರವಕ್ಕೆ ಪಾತ್ರರಾಗಿರುವ ಕುಂಬ್ಳೆ ಶ್ರೀಧರ ರಾಯರು ದುಬಾಯಿ, ಬೆಹರಿನ್‍ಗಳಲ್ಲಿಯೂ ವೇಷಗಳನ್ನು ಮಾಡಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಯಕ್ಷಗಾನ ಕಲಾರಂಗ ಸೇರಿದಂತೆ ವಿವಿಧ ಸಂಘಟನೆಗಳು ಇವರ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ. ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ನಿಷ್ಠಾವಂತ, ಸರಳ ಸಜ್ಜನಿಕೆಯ ಕಲಾವಿದರಾದ ಶ್ರೀಧರ ರಾಯರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.