ಬಡಗುತಿಟ್ಟು ಯಕ್ಷರಂಗದ ಹಿರಿಯ ಕಲಾವಿದ ನೆಬ್ಬೂರು ನಾರಾಯಣ ಭಾಗವತ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಇವರ ನಿಧನದಿಂದ ಬಡಗುತಿಟ್ಟಿನ ಮೇರು ಭಾಗವತರ ಪರಂಪರೆ ಕೊಂಡಿಯೊಂದು ಕಳಚಿದೆ.

ಶಿರಸಿ ತಾಲೂಕಿನ ಹಣಗಾರಿನಲ್ಲಿರುವ ಸ್ವಗೃಹದಲ್ಲಿ ಶನಿವಾರ ಮುಂಜಾನೆ ಮನೆ ಅಂಗಳದಲ್ಲಿ ಬೆಳೆದಿದ್ದ ಹೂವುಗಳನ್ನು ಕೊಯ್ದು ದೇವರ ಫೋಟೋಗಳಿಗೆ ಹಾಕಿ ಎರಡು ಹೆಜ್ಜೆ ಇಡುತ್ತಿದ್ದಂತೆ ಹೃದಯಾಘಾತಕ್ಕೊಳಗಾದ ನೆಬ್ಬೂರರು, ಅಲ್ಲಿಯೇ ಕುಸಿದುಬಿದ್ದು ಕೊನೇ ಉಸಿರೆಳೆದರು. ನೆಬ್ಬೂರರು ಪತ್ನಿ ಶರಾವತಿ ಹೆಗಡೆ, ಪುತ್ರ ವಿನಾಯಕ ಮತ್ತು ಪತ್ರಿ ಶಕುಂತಲಾರನ್ನು ಅಗಲಿದ್ದಾರೆ.

ಇಂಪಾದ ಕಂಠಸಿರಿ: ಏಳು ದಶಕಗಳ ಕಾಲ ತಮ್ಮ ಇಂಪಾದ ಕಂಠದಿಂದ, ಶಾಸ್ತ್ರೀಯ ಹಾಗೂ ಶುದ್ಧ ಸಂಪ್ರದಾಯ ಬದ್ಧ ಭಾಗವತಿಕೆಯಿಂದ ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನೆಬ್ಬೂರರು, ಬಡಗುತಿಟ್ಟಿನ ಮೇರು ಭಾಗವತರಲ್ಲಿ ಒಬ್ಬರಾಗಿದ್ದರು. ಯಕ್ಷಗಾನದ ಮೂಲ ಶೈಲಿಗೆ ಧಕ್ಕೆಯಾಗದಂತೆ ತಮ್ಮದೇ ಆದ ವಿಶಿಷ್ಟ ಹಾಡುಗಾರಿಕೆಯಿಂದ ಅಪಾರ ಪ್ರೇಕ್ಷಕರ ಪ್ರೀತಿ, ಗೌರವ ಗಳಿಸಿದ್ದ ನೆಬ್ಬೂರರು, ಪೌರಾಣಿಕ ಪ್ರಸಂಗಗಳಿಗೆ ಅನಿವಾರ್ಯ ಎಂಬ ಮಟ್ಟಿಗೆ ಬೆಳೆದು ನಿಂತರು.

1936ರಲ್ಲಿ ಗಣಪಿ ಹೆಗಡೆ ಹಾಗೂ ದೇವರು ಹೆಗಡೆ ದಂಪತಿಗಳ ಮಗನಾಗಿ ಹುಟ್ಟಿದ ನಾರಾಯಣ, ಓದಿದ್ದು ನಾಲ್ಕನೇ ತರಗತಿ. ನಂತರ ಗೋಕರ್ಣದ ಶಿಕ್ಷಕ ಸುಬ್ರಾಯ ಬಸ್ತೀಕರ ಹಾಗೂ ಕೊಡಗಿಪಾಲ ಗಣಪತಿ ಹೆಗಡೆ, ಶಿವರಾಮ ಹೆಗಡೆ ಅವರ ಒಡನಾಟದಿಂದ ಯಕ್ಷಗಾನದ ಗೀಳು ಹೆಚ್ಚಿಸಿಕೊಂಡರು.

ಬಹುತೇಕರಿಗೆ ಭಾಗವತಣ್ಣ, ನಾಣಿ ಭಾಗೋತ್ರು, ನಾರಾಯಣ ಭಾಗವತಣ್ಣ ಎಂದೇ ಹೆಸರಾಗಿದ್ದ ನೆಬ್ಬೂರರು, ಕೆರೆಮನೆ ಮೇಳದ ಶಿವರಾಮ ಹೆಗಡೆ ಅವರ ಗರಡಿಯಲ್ಲಿ ಪಳಗಿ, ಮಹಾಬಲ ಹೆಗಡೆ, ಶಂಭು ಹೆಗಡೆ ಅವರ ಒಡನಾಟದಲ್ಲಿ ಹೆಸರು ಮಾಡಿದರು. ಪೌರಾಣಿಕ ಯಕ್ಷಗಾನದಲ್ಲಿ ತಮ್ಮದೇ ಛಾಪು ಮೂಡಿಸಿ ನೆಬ್ಬೂರು ಶೈಲಿ ಹುಟ್ಟು ಹಾಕಿದರು. ಕೋಟ ಅಮೃತೇಶ್ವರಿ ಮೇಳ, ಇಡುಗುಂಜಿ ಕೆರೆಮನೆ ಮೇಳಗಳಲ್ಲಿ ಮೂರು ತಲೆಮಾರಿನ ಕಲಾವಿದರನ್ನು ಕುಣಿಸಿ, ಮೆರೆಸಿದ ಹೆಗ್ಗಳಿಕೆ ಇವರದ್ದು.

ಸಂದ ಪ್ರಶಸ್ತಿಗಳು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ಶೇಣಿ ಪ್ರಶಸ್ತಿ, ಪ್ರೊ| ಬಿ.ವಿ.ಆಚಾರ್ಯ ಪ್ರಶಸ್ತಿ, ಸಾರ್ಥ ಪ್ರಶಸ್ತಿ, ನಾವುಡ ಪ್ರಶಸ್ತಿ, ಶ್ರೀ ಅನಂತ ಪ್ರಶಸ್ತಿ, ವಿಠಲ ಶಾಸ್ತ್ರಿ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಕೆರೆಮನೆ ಶಂಭು ಹೆಗಡೆ ವಜ್ರಮಹೋತ್ಸವ ಪ್ರಶಸ್ತಿಗಳು ಇವರ ಮುಡಿಗೇರಿವೆ. ನೆಬ್ಬೂರು ನಾರಾಯಣ ಭಾಗವತರ ಹೆಸರಿನಲ್ಲಿ ಪ್ರತಿಷ್ಠಾನ ಕೂಡ ಕಾರ್ಯ ನಿರ್ವಹಿಸುತ್ತಿದೆ.

error: Content is protected !!
Share This