ಡಿ.ಕೆ. ಚೌಟ

ಕೃಷಿ, ರಂಗಭೂಮಿ, ಸಾಹಿತ್ಯ, ಕಲೆಸಹಿತ ವಿವಿಧಕ್ಷೇತ್ರಗಳಲ್ಲಿ ಸೇವೆಸಲ್ಲಿಸಿರುವ ಹಿರಿಯಚಿಂತಕ, ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಮಂಜೇಶ್ವರ ಸಮೀಪದ ಮೀಯಪದವಿನ ಡಿ.ಕೆ. ಚೌಟ(82) ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನಿಧನ ಹೊಂದಿದರು.

ಅವರು ಪತ್ನಿ ರಮಾ ಚೌಟ, ಪುತ್ರಿ ಡಾ| ಪ್ರಜ್ಞಾ ಚೌಟ, ಪುತ್ರ ಬಾಲಿವುಡ್‌ ಸಂಗೀತ ನಿರ್ದೇಶಕ ಸಂದೀಪ್‌ ಚೌಟ (ಮುಂಬಯಿ) ಅವರನ್ನು ಅಗಲಿದ್ದಾರೆ.

ದರ್ಬೆ ಕೃಷ್ಣಾನಂದ ಚೌಟ (ಡಿ.ಕೆ. ಚೌಟ) 1938 ಜೂನ್‌ 1 ರಂದು ಕಾಸರಗೋಡು ಜಿಲ್ಲೆಯ ಮೀಯಪದವಿನಲ್ಲಿ ಜನಿಸಿದರು. ಚಿತ್ರಕಲೆ ಹಾಗೂ: ರಂಗಭೂಮಿಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅವರು ಕಲಾ ಪೋಷಕರೂ ಆಗಿದ್ದರು. ರಂಗ ನಿರಂತರ ಸಂಸ್ಥೆಯ ಸಾರಥಿಯಾಗಿ ಅನೇಕ ಸಾಧನೆ ಮಾಡಿದ್ದಾರೆ. ಸೃಜನಶೀಲ ಬರಹಗಾರರಾಗಿ ಕನ್ನಡ ಹಾಗೂ ತುಳು ಭಾಷೆಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಅವರು ಬರೆದ ಮಿತ್ತಬೈಲ್‌ ಯಮುನಕ್ಕ, ಅರ್ಧಸತ್ಯ, ಬಾಕಿ ಸುಳ್ಳಲ್ಲ, ಕರಿಯಜ್ಜನ ಕಥೆಗಳು, ಪಿಲಿಪತ್ತಿ ಗಡಸ್‌, ಮೂರು ಹೆಜ್ಜೆ, ಮೂರು ಲೋಕ ಪ್ರಮುಖ ಕೃತಿಗಳಾಗಿ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಟ್ಟಿವೆ.

ತೋಟವೇ ಸಂಶೋಧನಾ ಕೇಂದ್ರ

ಡಿ.ಕೆ ಚೌಟ ಅವರು ಬೆಂಗಳೂರಿನಲ್ಲಿದ್ದರೂ ಮೀಯಪದವಿನಲ್ಲಿದ್ದ ತಮ್ಮ ಜಮೀನಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಅನೇಕ ಎಕರೆಗಳ ವಿಸ್ತಾರದಲ್ಲಿರುವ ಈ ತೋಟವು ಬೃಹತ್ತಾದ ಸಂಶೋಧನಾ ಕೇಂದ್ರವೇ ಆಗಿದೆ. ಇಲ್ಲಿನ ಪ್ರಬುದ್ಧ ಕೃಷಿ ಚಟುವಟಿಕೆಗಳು ವಿಶೇಷ ಪ್ರಶಂಸೆಗೆ ಒಳಗಾಗಿದ್ದುವು. 2015ರಲ್ಲಿ ಮೀಯವಪದವಿನಲ್ಲಿ ನಡೆದ ಕಾಸರಗೋಡು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಾಸರಗೋಡಿನ ಕನ್ನಡ ಪರ ಹೋರಾಟದಲ್ಲೂ ಗುರುತಿಸಿಕೊಂಡಿದ್ದರು. ಮಂಜೇಶ್ವರ ಗೋವಿಂದ ಪೈ ಟ್ರಸ್ಟ್‌ನ ಗೌರವ ಅಧ್ಯಕ್ಷರಾಗಿದ್ದರು. ಬೆಂಗಳೂರು. ಬಂಟರ ಸಂಘದ ಮಾಜಿ ಅಧ್ಯಕ್ಷರು.

ಚಿತ್ರ ಸಂತೆ ಖ್ಯಾತಿ

90ರ ದಶಕದಲ್ಲಿ ಸಿಜಿಕೆ ಮೂಲಕ ಕನ್ನಡ ರಂಗಭೂಮಿಗೆ ಪರಿಚಿತರಾದರು. ಅನಂತರದಲ್ಲಿ ಸಮುದಾಯ ಸೇರಿದಂತೆ ಕರ್ನಾಟಕದ ವಿವಿಧ ರಂಗ ತಂಡಗಳಿಗೆ ಅವರು ನೀಡಿದ ಸಹಕಾರ ಅನನ್ಯವಾದುದು. ಸಮುದಾಯದ ರುಡಾಲಿ, ಜುಗಾರಿ ಕ್ರಾಸ್‌ ಸೇರಿದಂತೆ ಸಮುದಾಯದ ಉತ್ಪವಗಳಿಗೆ ಅವರ ಆರ್ಥಿಕ ಸಹಾಯ ದೊರಕಿದೆ. ಸಿಜಿಕೆ ನಂತರ ರಂಗ ನಿರಂತರದ ಚುಕ್ಕಾಣಿ ಹಿಡಿದು ಸಂಘಟನೆಗೆ ಬಲ ತುಂಬಿದರು. ತಮ್ಮಸೃಜನಶೀಲ ಬರವಣಿಗೆಯ ಮೂಲಕ ತುಳು, ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಗಮನಾರ್ಹ. ಚಿತ್ರಕಲಾ ಪರಿಷತ್ತಿನ ಬೆಳವಣಿಗೆಯಲ್ಲಿ ಚೌಟ ಅವರ ಪಾತ್ರ ಬಹಳ ದೊಡ್ಡದು. ಚಿತ್ರ ಸಂತೆ ಮೂಲಕ ಅವರು ರಾಷ್ಟ್ರ ಮಟ್ಟದಲ್ಲಿ ಚಿತ್ರಕಲಾ ಪರಿಷತ್‌ ಖ್ಯಾತಿ ಪಡೆಯಲು ಕಾರಣವಾಯಿತು.

ಅನಂದ ಕೃಷ್ಣಕಾವ್ಯನಾಮ

ಬಾಂಬೆ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಅನಂತರ ಗಾನಾ, ನೈಜೀರಿಯಾ ಮತ್ತು ಲಂಡನ್‌ನಲ್ಲಿ ನೆಲೆಸಿದ್ದರು. ಅನಂತರ ಬೆಂಗಳೂರಿಗೆ ಬಂದು ರಂಗಭೂಮಿಯಲ್ಲಿ ಮತ್ತು ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದರು. ಆನಂದ ಕೃಷ್ಣ ಎಂಬ ಕಾವ್ಯನಾಮದಲ್ಲಿ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌, ಕರ್ನಾಟಕ ಸರಕಾರದ ತುಳು ಅಕಾಡೆಮಿಯ ಸಾಹಿತ್ಯ ಪ್ರಶಸ್ತಿ ಸಹಿತ ಅನೇಕ ಗೌರವಗಳನ್ನು ಪಡೆದುಕೊಂಡಿದ್ದರು.

ಪ್ರಗತಿಪರ ಕೃಷಿಕರಾದ ಡಾ| ಚಂದ್ರಶೇಖರ ಚೌಟ ಹಾಗೂ ಪ್ರಭಾಕರ ಚೌಟ ಅವರು ಡಿ.ಕೆ. ಚೌಟರ ಸಹೋದರರಾಗಿದ್ದಾರೆ. ಡಿ.ಕೆ. ಚೌಟರ ನಿಧನದಿಂದಾಗಿ ಕಾಸರಗೋಡು ಜಿಲ್ಲೆಯ ಚೌಟರ ತೋಟದಲ್ಲಿ ನೀರವ ಮೌನ ಆವರಿಸಿದೆ.

error: Content is protected !!
Share This