ಡಾ.ಎಂ.ಪ್ರಭಾಕರ ಜೋಶಿ ಅವರ ಹೊಸ ಪುಸ್ತಕ ‘ಶ್ರೀ ವೀರೇಂದ್ರ ಹೆಗ್ಗಡೆ ದೃಷ್ಟಿ ಮತ್ತು ಸೃಷ್ಟಿ’

ಡಾ.ಎಂ.ಪ್ರಭಾಕರ ಜೋಶಿ ಅವರ ಹೊಸ ಪುಸ್ತಕ ‘ಶ್ರೀ ವೀರೇಂದ್ರ ಹೆಗ್ಗಡೆ ದೃಷ್ಟಿ ಮತ್ತು ಸೃಷ್ಟಿ’ ಒಂಬತ್ತು ಲೇಖನಗಳಲ್ಲಿ ಹೆಗ್ಗಡೆ ಅವರ ಅಂತರಂಗದ ಅಪೂರ್ವ ದರ್ಶನವನ್ನು ಮಾಡಿಸುವ ವಿಶಿಷ್ಟ ಕೃತಿ. ಚೊಕ್ಕ ಚಿಕ್ಕ ಮಾತುಗಳಲ್ಲಿ ಜೋಶಿ ಅವರು ಹೆಗ್ಗಡೆ ಅವರ ಬಹುಮುಖಿ ವ್ಯಕ್ತಿತ್ವವನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಲೇಖನಗಳನ್ನು ಓದಿಮುಗಿಸಿದಾಗ ಒಂದು ಸಾಂತ್ವನದ ಮತ್ತು ಸೃಜನಶೀಲ ಮನಸ್ಸಿನ ಒಳಗೆ ಪ್ರವೇಶಿಸಿದ ಸುಖ ದೊರಕುತ್ತದೆ.

ಇಲ್ಲಿನ ಲೇಖನಗಳು ಹೆಗ್ಗಡೆ ಅವರನ್ನು ಕುರಿತು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದುದಾದರೂ ಅವುಗಳ ನಡುವೆ ಒಂದು ಚಿಂತನೆಯ ಸ್ರೋತದ ಕೊಂಡಿ ಕಾಣಿಸುತ್ತದೆ.

‘ಧರ್ಮಸ್ಥಳ: ದೃಷ್ಟಿ ಮತ್ತು ಸೃಷ್ಟಿ’ ಎನ್ನುವ ಮೊದಲನೆಯ ಬರಹವು ಇಡೀ ಪುಸ್ತಕದ ಪ್ರವೇಶಿಕೆಯೂ ಹೌದು,ಥೀಸಿಸ್ ಕೂಡಾ ಹೌದು. ಒಂದು ಧಾರ್ಮಿಕ ಕ್ಷೇತ್ರವು ಹುಟ್ಟಿದ, ವಿಕಾಸಗೊಂಡ, ದೇಶದಲ್ಲೇ ಅನನ್ಯವಾಗಿ ಕಾಣಿಸಿಕೊಂಡ ಪ್ರಕ್ರಿಯೆ ಮತ್ತು ಅದರ ಹಿಂದಿನ ಹೆಗ್ಗಡೆ ಅವರ ಕಾರಣಿಕ ಶಕ್ತಿ- ಈ ಕುರಿತ ಬರಹದ ವಿನ್ಯಾಸವೇ ಒಂದು ಸಾಂಸ್ಕೃತಿಕ ಶೋಧದ ಮಾದರಿ.

‘ತೂಕ-ಸರಳತೆ- ಸಂಸ್ಕೃತಿ- ತುಂಬಿದ ವ್ಯಕ್ತಿತ್ವ’ ಲೇಖನ ಜೋಶಿ ಅವರ ಕಿರಿದರಲ್ಲಿ ಬಹುತ್ವವನ್ನು ಅಡಕಮಾಡುವ ಶೈಲಿಯ ಉತ್ತಮ ನಿದರ್ಶನ. ಇಲ್ಲಿನ ಪದಗಳಲ್ಲಿ ತೂಕ ಇದೆ,ಸರಳತೆ ಇದೆ; ಜೊತೆಗೆ ಹೆಗ್ಗಡೆ ಅವರ ವ್ಯಕ್ತಿತ್ವವನ್ನು ಸಹಜವಾಗಿ ಅನಾವರಣ ಮಾಡುವ ಕೌಶಲ ಇದೆ. ಇದೇ ಆಶಯದ ಇನ್ನೊಂದು ಕಿರುಬರಹ ‘ ಡಾ.ವೀರೇಂದ್ರ ಹೆಗ್ಗಡೆ: ಒಂದು ಮಹಾ ವಿದ್ಯಮಾನ ‘. ಇಂಗ್ಲಿಷ್ ನ Phenomenon ಪದಕ್ಕೆ ಸಂವಾದಿಯಾಗಿ ‘ ವಿದ್ಯಮಾನ’ ಎಂಬ ಪರಿಭಾಷೆಯನ್ನು ಬಳಸಲಾಗುತ್ತದೆ. Phenomenology ಎಂಬ ಶಾಸ್ತ್ರದ ವ್ಯಾಪ್ತಿಯಲ್ಲಿ ಹೆಗ್ಗಡೆ ಅವರ ಸಾಧನೆಯನ್ನು ವಿವರಿಸಲು ಈ ಪುಟ್ಟ ಬರಹ ಚಾಲನೆಯನ್ನು ಕೊಡುತ್ತದೆ.

‘ಪ್ರಜ್ಞಾ ನಿರ್ಮಾಣದ ಸತ್ಕಾರ್ಯ’ ಲೇಖನದಲ್ಲಿ ಧರ್ಮಸ್ಥಳದ ಸಮ್ಮೇಳನಗಳ ಮೂರು ಮಾದರಿಗಳು ಮತ್ತು ಅವುಗಳ ಮೂಲಕ ಧರ್ಮಸ್ಥಳದ ಸಾಂಸ್ಕೃತಿಕ ಚಹರೆಯಲ್ಲಿ ಆಗಿರುವ ಬದಲಾವಣೆಗಳನ್ನು ಸೂಕ್ತವಾಗಿ ಅವಲೋಕನ ಮಾಡಲಾಗಿದೆ.ಬಹುರೂಪಿ ಆಲೋಚನಾ ಕ್ರಮಗಳು ಗೋಷ್ಠಿಗಳಲ್ಲಿ ಸಮ್ಮೇಳನಗಳಲ್ಲಿ ಪ್ರಕಟವಾದಾಗ ಅವುಗಳ ಮೂಲಕ ಜನರಲ್ಲಿ ಧರ್ಮಸ್ಥಳದ ಬಗ್ಗೆ ಮತ್ತು ಹೆಗ್ಗಡೆ ಅವರಲ್ಲಿ ಭಿನ್ನ ಚಿಂತನೆಯ ಜನರ ಬಗ್ಗೆ ಉಂಟಾದ ಪರಿಣಾಮಗಳ ಫಲವಾಗಿ ಧರ್ಮಸ್ಥಳವು ಸಮತೆಯ ಮತ್ತು ಸಮನ್ವಯದ ಒಂದು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದ ವಿದ್ಯಮಾನದ ಸಂಕಥನದ ಒಳನೋಟ ಇಲ್ಲಿ ಸಿಗುತ್ತದೆ. ಈ ಬರಹ ನಿದರ್ಶನಗಳ ಮೂಲಕ ವಿಸ್ತರಣೆಗೊಂಡು ಒಂದು ಮುಖ್ಯ ಥೀಸಿಸ್ ಆಗುವ ಲಕ್ಷಣವನ್ನು ಹೊಂದಿದೆ.

ಜೋಶಿ ಅವರು ಹೆಗ್ಗಡೆ ಅವರೊಡನೆ ನಡೆಸಿದ ಎರಡು ಸಂದರ್ಶನಗಳು ಇಲ್ಲಿ ಸೇರ್ಪಡೆ ಆಗಿವೆ.’ಸಾಹಿತ್ಯ ಅಮೃತಾವಲೋಕನ’ ದಲ್ಲಿ ಧರ್ಮಸ್ಥಳದ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ಇತಿಹಾಸ ,ಬದಲಾವಣೆ ಮತ್ತು ಪರಿಣಾಮಗಳ ಸಮಾಲೋಚನೆ ಇದೆ. ಮತಧರ್ಮಗಳ ಬಗ್ಗೆ, ಸಾಹಿತಿಗಳ ಬಗ್ಗೆ, ಸಮ್ಮೇಳನಗಳ ಬಗ್ಗೆ ಹೆಗ್ಗಡೆ ಅವರ ಸ್ಪಷ್ಟ ಮತ್ತು ಉದಾರವಾದಿ ನಿಲುವುಗಳ ದರ್ಶನ ಆಗುವುದು ಈ ಸಂದರ್ಶನದ ವೈಶಿಷ್ಟ್ಯ.

ಯಕ್ಷಗಾನದ ಹಿರಿಯ ಕಲಾವಿದ- ವಿದ್ವಾಂಸ ಜೋಶಿ ಅವರು ‘ಯಕ್ಷ ಸುವರ್ಣ’ ಗ್ರಂಥಕ್ಕಾಗಿ ಮಾಡಿದ ಹೆಗ್ಗಡೆ ಅವರ ಸಂದರ್ಶನ ಕೇವಲ ಯಕ್ಷಗಾನ ವಿಮರ್ಶಕ ಮತ್ತು ಮೇಳದ ಯಜಮಾನರ ನಡುವಿನ ಮಾತಯಕತೆಯಾಗಿ ಉಳಿದಿಲ್ಲ. ಯಕ್ಷಗಾನ ಪ್ರಸಂಗ, ಮೇಳ,ಬದಲಾವಣೆ, ಅಭಿರುಚಿ ನಿರ್ಮಾಣ, ಕಲಾವಿದರ ಒಡನಾಟ- ಇಂತಹ ತಲಸ್ಪರ್ಶಿ ಸಂಗತಿಗಳ ಕುರಿತು ಹೆಗ್ಗಡೆ ಅವರ ಪ್ರಾಯೋಗಿಕ ಮತ್ತು ಚಿಂತನಶೀಲ ಅಭಿಪ್ರಾಯಗಳು ಇಲ್ಲಿ ದಾಖಲಾಗಿವೆ.

ಈ ಪುಸ್ತಕದಲ್ಲಿ ವಿಶೇಷವಾಗಿ ಗಮನ ಸೆಳೆಯುವ ಒಂದು ಲೇಖನ’ ಹೆಗ್ಗಡೆ ಅವರ ಆಸಕ್ತಿ- ವಿಮರ್ಶೆ- ಸ್ವಾರಸ್ಯ’. ಯಕ್ಷಗಾನಕ್ಕೆ ಸಂಬಂಧಿಸಿದ ಹಾಗೆಯೇ ಇರುವ ಈ ಬರಹದಲ್ಲಿ ಇರುವ ಪ್ರಸಂಗಗಳು ಸ್ವಾರಸ್ಯಕರ ಆಗಿವೆ ಅಷ್ಟೇ ಅಲ್ಲ, ಬೇರೆ ಎಲ್ಲೂ ಸಿಗದ ಹೆಗ್ಗಡೆ ಅವರ ವಿಮರ್ಶೆಯ ಮತ್ತು ಲಹರಿಯ ಮಾತುಗಳ ಸಂಚಯ ಇದೆ.ಹೆಗ್ಗಡೆ ಅವರ ಚಿಕಿತ್ಸಕ ಹಾಗೂ ಸದ್ಯೋಜಾತ ಪ್ರತಿಭೆಯ ಬಹು ಮಾದರಿಗಳು ಇಲ್ಲಿ ದೊರೆಯುತ್ತವೆ. ಪುರೂರವನಿಗಿಂತ ರಕ್ಕಸನೇ ವಾಸಿ, ರೆಡಿಮೇಡ್ ಚಪ್ಪಾಳೆ, ವೀರೇಂದ್ರ ಬೇಡ,ಗುರುತು,ಸಮಸ್ಯೆ-ಅರಿಕೆ,ಸಂಬಂಧಗಳ ಮರುಜೋಡಣೆ : ಇಂತಹ ಅನೇಕ ಕಿರು ಟಿಪ್ಪಣಿಗಳು ಹೆಗ್ಗಡೆ ಅವರ ವ್ಯಕ್ತಿತ್ವದ ಸೂಕ್ಷ್ಮ ದರ್ಶನ ಮಾಡಿಸುತ್ತವೆ.

ಡಾ.ಕೆ.ಚಿನ್ನಪ್ಪ ಗೌಡರು ‘ಪ್ರವರ್ಧಮಾನ’ ಗ್ರಂಥದಲ್ಲಿ ಪ್ರಭಾಕರ ಜೋಶಿ ಅವರು ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ಜೊತೆಗೆ ಹೊಂದಿದ್ದ ಸಂಬಂಧದ ಲೇಖನ ಇಲ್ಲಿ ಸೇರ್ಪಡೆ ಆಗಿದ್ದು, ಅದು ಈ ಪುಸ್ತಕದ ಆಶಯಕ್ಕೆ ಪೂರಕವಾಗಿದೆ. ಹೆಗ್ಗಡೆ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಸಂಪುಟ ‘ಧರ್ಮಯಾನ’ ವನ್ನು ಜೋಶಿ ಅವರು ಪರಿಚಯಿಸಿದ ಪತ್ರಿಕಾ ಬರಹವು ದೃಷ್ಟಿ- ಸೃಷ್ಟಿಯ ಭಾಗವಾಗಿದೆ. ಈ ಪುಸ್ತಕದ ಪೋಟೋಗಳ ಆಯ್ಕೆಯಲ್ಲಿ ಅಭಿರುಚಿ, ಆಸಕ್ತಿ ಅನನ್ಯತೆಯ ಲಕ್ಷಣಗಳು ಕಾಣಿಸುತ್ತವೆ.’ ಅನುಬಂಧ’ ಮಾಹಿತಿಗಳು ಪುಸ್ತಕದ ಆಶಯಕ್ಕೆ ಪುಷ್ಟಿ ನೀಡುತ್ತವೆ.

ಡಾ.ಪ್ರಭಾಕರ ಜೋಶಿ ಅವರ ದೃಷ್ಟಿ ಮತ್ತು ಸೃಷ್ಟಿ ಅವರ ಮಾತು ಮತ್ತು ಬರಹದಲ್ಲಿ ಭಿನ್ನ ಮತ್ತು ಚೆನ್ನ ಎನ್ನುವುದಕ್ಕೆ ಈ ಕಿರು ಹೊತ್ತಗೆ ಹೊಸ ಸೇರ್ಪಡೆ.

  • ಬಿ.ಎ.ವಿವೇಕ ರೈ
error: Content is protected !!
Share This