ಹೆಸರಾಂತ ಹವ್ಯಾಸಿ ಯಕ್ಷಗಾನ ಭಾಗವತರಾದ ರಾಮಚಂದ್ರ ಅರ್ಬಿತ್ತಾಯ ಅವರು ಕುಲ್ಕುಂದದಲ್ಲಿ  ಶನಿವಾರ ಮುಂಜಾನೆ ನಡೆದ ಅಪಘಾತದಲ್ಲಿ ನಿಧನರಾದರು.
ಸಾಧು ಸ್ವಭಾವದ ರಾಮಚಂದ್ರ ಅರ್ಬಿತ್ತಾಯರು ಹಿರಿಯ ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯ ಅವರ ಸೋದರಳಿಯ. ಅವರ ಮನೆಯಲ್ಲೇ ಯಕ್ಷಗಾನ ಕಲಿತಿದ್ದರು. ಕಡಬ, ಸುಳ್ಯ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಪರಿಸರದಲ್ಲಿ ಯಕ್ಷಗಾನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅರ್ಬಿತ್ತಾಯರು, ಸುಮಧುರ ಕಂಠ ಮತ್ತು ಸಂಪ್ರದಾಯಬದ್ಧ ಯಕ್ಷಗಾನ ಹಾಡುಗಳಿಂದಾಗಿ ಜನಪ್ರಿಯರಾಗಿದ್ದರು.
ಕುಕ್ಕೆ ಸುಬ್ರಹ್ಮಣ್ಯ-ಸುಳ್ಯ ಪರಿಸರದಲ್ಲಿ ಭಜನಾ ಕಾರ್ಯಕ್ರಮಗಳಲ್ಲಿಯೂ ಸಕ್ರಿಯರಾಗಿದ್ದ ರಾಮಚಂದ್ರ ಅರ್ಬಿತ್ತಾಯರು ತಾಯಿ, ತಂಗಿ ಹಾಗೂ ಸಹೋದರನನ್ನು ಅಗಲಿದ್ದಾರೆ.
ಕುಲ್ಕುಂದದಲ್ಲಿ ನಸುಕಿನ ಜಾವ, ಶಟಲ್ ಬ್ಯಾಡ್ಮಿಂಟನ್ ಅಭ್ಯಾಸಕ್ಕಾಗಿ ತಮ್ಮ ಸ್ನೇಹಿತರ ಮನೆಗೆ  ಸುಬ್ರಹ್ಮಣ್ಯದಿಂದ ಕುಲ್ಕುಂದಕ್ಕೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಕಡವೆ ಅಡ್ಡ ಬಂದು, ಸ್ಕೂಟರ್ ಪಲ್ಟಿಯಾಗಿ, ರಾಮಚಂದ್ರರು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಅಸು ನೀಗಿದರೆ, ಸಹೋದರ ರವಿ ಅವರಿಗೂ ಗಾಯಗಳಾಗಿವೆ.
ಅತ್ಯಂತ ವಿನೀತ ಸ್ವಭಾವದ ಅವರು, ಕುಮಾರಸ್ವಾಮಿ ಶಾಲೆಯಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಉತ್ತಮ ಕ್ರಿಕೆಟ್, ಹಾಗೂ ರಾಜ್ಯಮಟ್ಟದ ಶಟ್ಲ್ ಆಟಗಾರರೂ ಆಗಿದ್ದ ರಾಮಚಂದ್ರ ಅರ್ಬಿತ್ತಾಯರೇ ಅವರ ಕುಟುಂಬಕ್ಕೆ ಆಸರೆಯಾಗಿದ್ದರು.

error: Content is protected !!
Share This