ಖ್ಯಾತ ನಾಟಕದ ನಟ ಮೂಡುಗೋಡು ಶಾಂತಕುಮಾರರು ಶಿರವಂತೆಯಲ್ಲಿ ಶೂರ್ಪನಖಿ ಅರ್ಥ ಹೇಳಿದಾಗ ಅವತ್ತೋ ಅಥವಾ ಸುಮಾರು ಅದೇ ಕಾಲ ಘಟ್ಟದಲ್ಲಿಯೋ ಇನ್ನೇನು ಅಜ್ಜ ಹೌದು ಅಲ್ಲ ಎನ್ನುವ ಒಬ್ಬರು ದೂರ್ವಾಸ, ಶೂರ್ಪನಖಿ ಇತ್ಯಾದಿ ಅರ್ಥ ಹೇಳುತ್ತಿದ್ದರು. ಸುಮಾರು ೧೯೮೮. ಅವರದ್ದೇ ಆದ ಜಾಪು ಒಂದು ಗಡಸು ಇತ್ತು. ಅವರು ಯಾರೋ ಗೊತ್ತಿರಲಿಲ್ಲ. ಅದಾಗಿ ಸುಮಾರು ೭-೮ ವರ್ಷ ಆದಮೇಲೆ ಸಾಗರದ ವನಶ್ರೀಯಲ್ಲಿ ಹೊಸ್ತೋಟದ ಮಂಜು ಭಾಗವತರು ಆಟ ಕಲಿಸುತ್ತಾರೆ ಎಂದು ಕಲಿಯಲು ನಾನು ನನ್ನ ಸೋದರ ಬಾವ ಹೋದೆವು. ಓ ಇವರು ಅವರೇ – ಅವರೇ ಇವರು. ಕೈತಾಳ ಯಾವುದೋ ಹೇಳಿದರು. ನಾಲ್ಕು ದಿವಸದಲ್ಲಿ ಹೇಳಿಕೊಡುವ ವ್ಯವಹಾರ ಇದಲ್ಲ ಎಂದು ನಿಕ್ಕಿ ಆಯಿತು. ಅಲ್ಲಿ ಸಾಗರದ ಭಾಗವತ ಡಾಕ್ಟ್ರ ಮಗ ಇರಬೇಕು, “ಇವರಿಗೆ ಯಾವ ವೇಷಕೊಡುವುದು?” ಅಂದ. “ಅಲ್ಲಿವರೆಗೆ ಇದ್ದರೆ ನೋಡೋಣ” ಅಂದರು ಹೊಸತೋಟದವರು. ಸ್ವಲ್ಪ ಬೇಸರ ಎನಿಸಿದರೂ ಹೇಳಿದ್ದು ಸರಿಯೆ ಆಯಿತು. ಮತ್ತೆ ಹೋಗಲಾಗಲಿಲ್ಲ. ನೇರ ಮಾತಿನವರು. ಅವರ ತಾಳಮದ್ದಳೆ ಆಟದಲ್ಲಿ ಕಾಣುವ ಭಾವನೆ ನಿಜ ಜೀವನದಲ್ಲಿ ಮುಖದಲ್ಲಿ ಕಾಣುವುದು ಕಡಿಮೆ. ಅವರ ಇಷ್ಟದ ವಿಷ್ಯ ಬಂದರೆ ಕುಂತಲ್ಲೇ ಆಟ ಶುರು. ಮೈಯೆಲ್ಲ ಆಟ ಮುಖವೆಲ್ಲ ಆಟ. ಅಷ್ಟು ಭಾವಾಭಿವ್ಯಕ್ತಿ.  ಇದು ಸುಮಾರು ೧೯೯೪.

ಸುಮಾರು ಕಾಲ ಕಳೆದು ಹೋಯಿತು. ಆಗಾಗ ಹೊಸ್ತೋಟರ ಲೇಖನ ಅಥವಾ ಪುಸ್ತಕ ಓದಲು ಸಿಗುತ್ತಿತ್ತು. ಯಾವುದೋ ಒಂದು ಲೇಖನದಲ್ಲಿ “ಹೊಸತೋಟದವರ ಹಸ್ತಪ್ರತಿಯಿಂದ” ಎಂದು  ರಾಗಗಳ ವಿಚಾರವಾಗಿ ಇತ್ತು. ಬೆಳೆಯೂರು ಸಂಜಯ ಅವರಲ್ಲಿ ಕೇಳಿದಾಗ ಆ ಪುಸ್ತಕ ಮುದ್ರಣವಾಗಿಲ್ಲ ಎಂದಾದಮೇಲೆ ಅದನ್ನು ಮುದ್ರಿಸುವ ಎಂದು ಅನಿಸಿ ಅವರಲ್ಲಿ ಮಾತಾಡುವುದು ಬಂತು. ಅವರು ಮೋತಿಗುಡ್ಡೆ ಎಂಬಲ್ಲಿ ಇದ್ದಾರೆಂದು ತಿಳಿಯಿತು. ಮನೆಯವರ ಕಣ್ಣು ತಪ್ಪಿಸಿ ಮಾವ ಅಳಿಯ ಇರುಳ ಹೊತ್ತು ಮೋತಿಗುಡ್ಡೆಯನ್ನು ಹುಡುಕಿಕೊಂಡು ಹೊರಟೆವು. ಬೈಕಿನ ಮೇಲೆ. ಸುಮಾರು ಮಳೆ ಇತ್ತು. ಮೋತಿಗುಡ್ಡೆಯ ಬುಡ ಮುಟ್ಟುವ ಹೊತ್ತಿಗೆ ಭಾರಿ ಮಳೆ ಕಪ್ಪು. ಕೂಕು ಹಾಕಿ ಮುಖ ಕಾಣದವರಲ್ಲಿ ದಾರಿ ಕೇಳಿ ಹೋಗಿ ಆಯಿತು. ಸಾಹಸ. ಹೋದರೆ, ಮಳೆ ಎಷ್ಟು ಘೋರ ಎಂದರೆ ಯಾರ ಮಾತು ಕೇಳುವ ಸ್ಥಿತಿ ಇರಲಿಲ್ಲ. ಅದರ ಮೇಲೆ ಕತ್ತಲೆಯ ಭಾಗ್ಯ. ನಾವು ಹೊದ್ದು ಊರಲ್ಲ. ಹೆಸರೇ ಹೇಳುವಂತೆ ಗುಡ್ಡೆ! ಈ ಗುಡ್ಡೆ ಯಲ್ಲಾಪುರದ ಕಡೆಯವರ ಗುಡ್ಡೆ! ದೊಡ್ಡ ಪರ್ವತ ಎನ್ನುವುದೇ ಅದರ ಧ್ವನಿ. ಇದು ಬರುವುದು ಅಚವೆ ಗ್ರಾಮದಲ್ಲಿ. ಒಂದು ಅರಳಿ ಮರದ ಪಕ್ಕ ಹೊಸತೋಟದವರ ವಸತಿಯ ಕುಟೀರ. ಸಣ್ಣ ಎರಡು ಕೋಣೆಯ ಮನೆ. ಓಂದು ಕಡಿರಾಡಿನ ಜಗುಲಿ. ಬಾಗಿಲು ಹಾಕಿದ್ದರಿಂದ ಪಕ್ಕದ ಮನೆಗೆ ಹೋದೆವು. ಪಕ್ಕದ ಮನೆ ಇರುವುದು ಸ್ವಲ್ಪ ಕೆಳಗೆ. ಅಲ್ಲಿ ಒಂದು ಹಳೇ ಶೈಲಿಯ ಕುರ್ಚಿಯ ಮೇಲೆ ಯಕ್ಷಋಷಿಯ ದರ್ಶನ ಆಯಿತು. ಮನೆಯ ಮಗ ರವಿ ಇವರ ಶಿಷ್ಯ – ಮೃದಂಗದ ಅಭ್ಯಾಸ ನೆಡೆದಿತ್ತು. ಈ ಮನೆಯಲ್ಲೇ ಹೊಸ್ತೋಟದವರಿಗೆ ಊಟ ಉಪಚಾರ. ಸತ್ಕಾರ ಮಾಡುವ ಮನೆಯವರು ಒಳ್ಳೆಯವರು – ಸದ್ಗೃಹಸ್ತರು. ಕುಟೀರದ ಜಗುಲಿಗೆ ಬಂದು ನೆಲದ ಮೇಲೆ ಕುಂತೆವು. ನಾನು ಪ್ರವರ ಹೇಳಿ ಪುಸ್ತಕದ ವಿಚಾರಕ್ಕೆ ಬಂದೆ. ಒಪ್ಪಿದರು. ಆದರೆ ಸಹಜವಾದ ಎಚ್ಚರಿಕೆಯ ಭಾವವೂ ಕಂಡಿತು. ಅದು ಸ್ವ್ವಾಭಾವಿಕ. ಸ್ವಲ್ಪ ನಿರ್ಲಿಪ್ತ ಭಾವವೂ ಇತ್ತು. ಯಾಕೋ ಗೊತ್ತಿಲ್ಲ. ನಡು ರಾತ್ರಿ ಮರಳಿ ಮನೆಗೆ ಬಂದ ಮೇಲೆ ಮನೆಯವರು ಬೈದರು ಎಂದು ಬೇರೆ ಹೇಳುವುದೇನು ಬೇಡ! ಇದು ೨೦೧೩.

ಗೋಟಗಾರಿನ ಸೌಮ್ಯ ಮತ್ತು ಅರುಣರ ಮನೆಗೆ ಹಸ್ತಪ್ರತಿ ಡಿಟಿಪಿ ಸಂಗ್ರಹಿಸಲು ಹೋದೆ. ಋಷಿ ಇದ್ದರು. ಖುಷಿ ಆಯಿತು. “ಗಜಮುಖ ಹೇಳುವುದು ಯಾವ ರಾಗದಲ್ಲಿ” ಎಂದು ಕೇಳಿದ ನೆನಪು. “ಯಾರು ಹೇಳುವುದು ಎನ್ನುವುದರ ಮೇಲೆ ಹೋಗುತ್ತದೆ” ಎಂದರು. ಇನ್ನೂ ಸಲಿಗೆ ಬಂದಿಲ್ಲ ಎನ್ನುವುದು ಖಾತ್ರಿಯಾಯಿತು! ಆದರೆ ಸಂಗ್ರಹ ಸುಮಾರಾಯಿತು. ಹಂದಿಮೂಲೆ ಗಣಪತಿಯವರಿಂದ ಮತ್ತೆ ಸ್ವಲ್ಪ. ಹೀಗೆ ಯಕ್ಷಗಾನ ಮಾತಾಡಿದಾಗೆಲ್ಲ ಸಲುಗೆ ಸಿಗುತ್ತದೆ ಎಂದೂ ಇಲ್ಲ. ಆದರೆ ಮಾಡುವ ಕೆಲಸ ತಪ್ಪಿಸಲಿಲ್ಲ. ಹೊಸ್ತೋಟರ ಮೇಲೆ ಗೋಟಗಾರು ಮನೆಯವರಿಗೆ ಇದ್ದ ಸ್ನೇಹವೂ ಅಪಾರ.

ತಿದ್ದುಪಡಿಗೆ ಬೇಕಾದ ಪ್ರತಿ ಹಿಡಿದು ಅಣ್ಣನ ಜೊತೆಗೆ ಮತ್ತೆ ಮೋತಿಗುಡ್ಡೆಗೆ ಹೋದೆ. ಅಲ್ಲಿ ಮುಟ್ಟುವ ಹೊತ್ತಿಗೆ ಸ್ವಲ್ಪ ಕಪ್ಪಾಗಲು ಶುರುವಾಗಿತ್ತು. ತಟ್ಟಿ ಕಟ್ಟಿದ ಕುಟೀರದ ಜಗುಲಿಯಲ್ಲಿ ಕುಳಿತೆವು. ಯಕ್ಷಮಿತ್ರ ಪ್ರಕಾಶನದಲ್ಲಿ ಪುಸ್ತಕ ಆಗುವುದು ನಿಕ್ಕಿ ಆಯಿತು. ನಂತರ ಅಲ್ಲೆ ಮಾಡಿದ ಅವರ ಸಂದರ್ಶನದ ವಿಡಿಯೋವೇ ಇದೆ ಯೂಟ್ಯೂಬಿನಲ್ಲಿ. ವಿಷಯವನ್ನು ಸರಳವಾಗಿ ವಿವರಿಸುವ ಶಕ್ತಿ ಅವರಲ್ಲಿ ಸ್ವಾಭಾವಿಕವಾಗಿಯೇ ಇತ್ತು. ಯಕ್ಷಗುರುವಲ್ಲವೇ? ನಮ್ಮನ್ನು ಬಿಳ್ಕೊಡುವಷ್ಟರಲ್ಲಿ ನಮ್ಮ ಮೇಲೆ ಅವರಿಗೆ ಏನೋ ಒಂದು ವಿಶ್ವಾಸ ಮೂಡಿತ್ತು ಅನಿಸಿತು. ಆದರೆ ಯಾವುದು ಸಷ್ಟವಲ್ಲ. ಆಗ ಅರಬೈಲು ಅಳಿಯ ಎನ್ನುವುದು ನನ್ನ ಗುರುತು. ಅಲ್ಲಿಗೇ “ಬಿನ್ನಹಕೆ ಬಾಯಿಲ್ಲವಯ್ಯಾ” ಎನ್ನುವ ಲೇಖಕರ ಮಾತನ್ನು ಬರೆದು ಕಳಿಸಿದರು. ಪ್ರತಿಯನ್ನೂ ತಿದ್ದುಪಡಿ ಮಾಡಿ  ಬೇಗನೆ ಮುಟ್ಟಿಸಿದರು. ಆದರೆ ಚಿತ್ರಕ್ಕೆ ಏನುಮಾಡುವುದು?

ಬೆಳೆಯೂರಿನಲ್ಲಿ ವಿಡಿಯೋ ದಾಖಲೆಗೆ ಮತ್ತೆ ಭೇಟಿ. ಅಷ್ಟು ಹೊತ್ತಿಗೆ ಅವರ ರಾಮಕೃಷ್ಣ ಚರಿತ್ರೆ ದ್ವಿಪದಿ ಕಾವ್ಯದ ಮುದ್ರಣವಾಗಿತ್ತು. ಅವರ ಕಾಲಿಗೆಬಿದ್ದು ನಮಸ್ಕರಿಸಿ ಒಂದು ಪ್ರತಿ ಕೊಂಡೆ. ಅದರ ಹಣ ತಮಗಲ್ಲ ಪ್ರಕಾಶಕರಿಗೆ ಎಂದು ಅವರು ಸ್ಪಷ್ಟಪಡಿಸಿದರು. ದಿನವಿಡೀ ಅವರು ಅಭಿನಯಿಸಿ ತಾಳ ತೋರಿಸಿ. ದಾಖಲೆ ಆಯಿತು. ಅವರಿಗೆ ದಣಿವಿನ ಅರಿವು ಆದಂತೆ ತೋರಲಿಲ್ಲ. ಕಾಲು ಅಂಡಿಗೆ ಮುಟ್ಟುವಂತೆ ಕುಪ್ಪಳ ಹೊಡೆದು ಸ್ವತಃ ತೋರಿಸಿದರು. ಯಕ್ಷಶ್ರುತಿ ತಂತ್ರಾಂಶಕ್ಕೆ ಸುಮಾರು ೩ ವರ್ಷ ಆಗ. ತೋರಿಸಿದೆ. ನೋಡಿದರು. ವಿಶೇಷ ಆಸಕ್ತಿ ಎನೂ ಕಾಣಲಿಲ್ಲ. ಆದರೆ ನನ್ನಲ್ಲಿ ಸಂಶೋಧನೆಗೆ ಎಂದು ಪುಂಗಿಯ ಧ್ವನಿ ಇದೆ ಎಂದೆ. ಕಿವಿ ನೆಟ್ಟಗಾಯಿತು. ಒಂದು ಪದ ಹೇಳಿದರು ಪುಂಗಿ ಶ್ರುತಿಗೆ. ಯಾವಾಗಲೂ ಉದ್ದಕೂದಲಿಡುವ ಅವರ ತಲೆ ಕೂದಲ ಉದ್ದ ಆಗ ಸ್ವಲ್ಪ ಕಡಿಮೆ ಇತ್ತು. ಋಷಿಗೆ ಖುಷಿಯಾಗಿತ್ತು. ರಂಗನಾಥ ಅವರ, ಮನೆಯವರ ಸಹಕಾರ ಸಕ್ರೀಯತೆ ಅನನ್ಯ. ಇದು ೨೦೧೪ ಎಂದು ನೆನಪು. ಈಗ ಕಟ್ಟಿನಕೆರೆ ರಾಘವೇಂದ್ರ ಆದೆ.

“ಕೃಷ್ಣಯಾಜಿಯವರಿಂದ ಚಂಡೆಯ ಬಗ್ಗೆ ಬರೆಸಿ” ಎಂದರು. ಪಿಕೆ ಹೆಗಡೆಯವರ ಮೂಲಕ ವಿಡಿಯೋ ಮಾಡಿಸಿ ಅದೂ ಆಯಿತು. ನಂತರ ಹಲವಾರು ವರ್ಷ ಕೆಲಸ ಮುಂದುವರಿಸಲು ಆಗಲಿಲ್ಲ. ಕೆಲವು ವಿಘ್ನವೂ ಬಂತು. ಮಕ್ಕಳು ಮರಿ ಸಂಸಾರ – ಸೋಂಬೇರಿತನವೂ ಬೇಕಾದಷ್ಟಿದೆ ಅದರಲ್ಲಿ. ಆದರೆ ಹೊಸ್ತೋಟದವರಲ್ಲಿ ಫೋನ್ ಮೂಲಕ ಮಾತಾದರೆ ಎಂದೂ ಸಿಡಿಮಿಡಿ ಇಲ್ಲ. ಅವರಲ್ಲಿ ಏನೋ ನಂಬಿಕೆ ಕಾಣುತ್ತಿತ್ತು. ನನ್ನ ಭ್ರಮೆಯೂ ಇರಬಹುದು. ಅನಾರೋಗ್ಯ ಎಂದು ತಿಳಿದು ಮಾತಾಡಿದೆ ಇನ್ನು ಮೂರು ತಿಂಗಳಲ್ಲಿ ಪುಸ್ತಕ ಹೊರಡಿಸುವುದಾಗಿ ಮಾತು ಕೊಟ್ಟೆ. ಅಡ್ಡಿ ಇಲ್ಲ ಆಗಲಿ ಬೆಳೆಯೂರಿಗೆ ಬರುತ್ತೇನೆ ಅಲ್ಲಿ ಎಲ್ಲ ಮುಗಸ ಎಂದರು. ಯಾವ ಆತಂಕವೂ ಇರಲಿಲ್ಲ. ತನಗೆ ಕ್ಯಾನ್ಸರ್ ಆದ್ದು ಅವರಿಗೆ ಇನ್ನೂ ಗೊತ್ತಿರಲಿಲ್ಲ. ಮತ್ತೆ ಬೆಳೆಯೂರು ಬರಲೇ ಇಲ್ಲ – ನಾನೇ ಹೋದೆ ಕರಡು ತಿದ್ದಲು ಆಮೇಲೆ. “ರಾಗಕೋಶ” – “ಯಕ್ಷಗಾನ ಸಂಗೀತ” ಎಲ್ಲ ನೋಡಿ ರಾಗದ ಅಧ್ಯಾಯದಲ್ಲಿ ಸ್ವರಗಳನ್ನು ತೀವ್ರ ಕೋಮಲ ಹೀಗೆ ತಿದ್ದಿದೆ. ಇನ್ನು ಹೆಚ್ಚೇನೂ ಬಾಕಿ ಉಳಿದಿಲ್ಲ ಎಂಬ ಧೈರ್ಯ ಬಂತು. ಅವರ ಅರೋಗ್ಯ ಏನಾಗಬಹುದು ಎಂಬ ಕಳವಳ ಇತ್ತು. ನಿಟ್ಟೆ ಆಸ್ಪತ್ರೆಯಿಂದ ನಂತರ ಶಿರಸಿ ರೋಟರಿ ಆಸ್ಪತ್ರೆಯಿಂದ ಅವರೊಡನೆ ಶ್ರೀಪಾದ ಜೋಶಿ ಮಾತಾಡಿಸಿದರು. ಪುಸ್ತಕವನ್ನು ಮುದ್ರಣಕ್ಕೆ ಕಳುಹಿಸಲು ಬಿಡುಗಡೆಗೆ ಅನುಮತಿ ಕೋರಿದೆ. ಮಾತು ಸ್ಪಷ್ಟ ಇರಲಿಲ್ಲ ಬಹಳ ನೋವಿದೆ ಎಂದರು. ಏನು ಮಾಡುವುದು? ಕಳವಳವಾಯಿತು. ಇಲ್ಲಿ ಕಟ್ಟಿನಕೆರೆ ನಮ್ಮ ಮನೆಯವರ ಮನೆಯವಳ ಬೆಂಬಲ ಸಹಕಾರ ನೆನೆಯದಿದ್ದರೆ ಸರಿಯೇ? ಪ್ರಭಾಕರ ಜೋಶಿಯವರು ಮುನ್ನುಡಿಯನ್ನು ನಾಲ್ಕು ವರ್ಷ ಮೊದಲೆ ಬರೆದು ಕೊಟ್ಟಿದ್ದರು! 

ಡಿಸೇಂಬರ್ ೮ ರಂದು ಬೆಳಗ್ಗೆ ೧೧ಕ್ಕೆ ಬೆಂಗಳೂರಿಂದ ಬಂದ ಯಕ್ಷಗಾನ ಶಿಕ್ಷಣ-ಲಕ್ಷಣದ ಪ್ರತಿಯನ್ನು ಗಜಾನನ ಬಸ್ಸಿನಿಂದ ಭೈರಂಬೆ ಬಾವನ ಜೊತೆ ಹೋಗಿ ಶಿರಸಿಯಿಂದ ತಂದು ಕೆರೆಕೊಪ್ಪಕ್ಕೆ ತೆಗೆದುಕೊಂಡು ಹೋದೆ. ೪ಕೇ ದಿನದಲ್ಲಿ ಮುದ್ರಣ ಆಗಿತ್ತು ೨೦೦ ಪ್ರತಿ – ಒಟ್ಟು ಸಾವಿರ.  ಕಾರ್ಯಕ್ರಮ ಎಷ್ಟು ಹೊತ್ತಿಗೆ ಎಂದು ಮನೆಯ ಯಜಮಾನ ಸುಬ್ರಾಯರನ್ನು ಕೇಳಿದರಂತೆ. ನಾಲ್ಕು ಎಂದಾಗ – “ಇಷ್ಟು ಬೇಗ ಬಂದು ಏನು ಮಾಡುತ್ತಾರೋ” ಎಂದರಂತೆ. ಬಹಳ ನೋವಿನಲ್ಲಿದ್ದರು. ಪುಸ್ತಕ ತೆಗೆದು ಸ್ಥೂಲವಾಗಿ ಹೇಗೆ ಪೋಣಿಸಲ್ಪಟ್ಟಿದೆ ಎಂದು ಓದಿ ಹೇಳಿದೆ. ಒಳ್ಳೆದಾಗಲಿ ಎಂದರು. ಶಂಕರ ಭಾಗವತರು, ಸತೀಶ ದಂಟಕಲ್, ತಿಮ್ಮಪ್ಪ ಭಾಗವತರು ಇಡಗುಂಜಿ ಕೃಷ್ಣಯಾಜಿ ಯಾರೂ ಸಂಭಾವನೆ ಕೊಳ್ಳದೆ ನಾದ ನಮನ ಹೇಳಿದರು. ನಮ್ಮ ಯಕ್ಷಮಿತ್ರ ಟೊರಾಂಟೋ ಪ್ರಕಾಶನದ ಪುಸ್ತಕ “ಯಕ್ಷಗಾನ ಶಿಕ್ಷಣ-ಲಕ್ಷಣ” ಲೋಕಾರ್ಪಣೆಯಾಯಿತು. ಮೈಯ್ಯಲ್ಲಿ ನೋವಿದ್ದರೂ ಋಷಿಯ ಕಣ್ಣಲ್ಲಿ ಆನಂದ ಭಾಷ್ಪ ಇತ್ತು.

ಅವರ ಶುಶ್ರೂಷೆಯನ್ನು ಮಾಡಿದ ಶ್ರೀಪಾದ/ಸುಮಾ ಜೋಶಿ, ಭೈರಂಬೆ ನಾರಾಯಣ ಹೆಗಡೆ, ಸುಬ್ರಾಯ ಕೆರೆಕೊಪ್ಪ, ಇವರೆಲ್ಲರ ಮನೆಯವರು, ಸ್ವರ್ಣವಲ್ಲಿಯ ಮಠದವರು ಹೊಸ್ತೋಟದ ಮಂಜುನಾಥ ಭಾಗವತರ ಮೇಲೆ ತೋರಿದ ಪ್ರೀತಿ ಅನುಸರಣೀಯವಾದ್ದು. ಎಲ್ಲ ಮುಗಿಯುವ ಹೊತ್ತಿಗೆ ಕರೆದು ಒಂದು ವಿಡಿಯೋ ದಾಖಲೆ ನನ್ನ ಕೈಗಿತ್ತು ಒಂದು ಮಾತು ಹೇಳಿದರು, “ನಿಮ್ಮ ಕೈಗೆ ಏನೇ ಸಿಕ್ಕಿದರೂ ಅದು ಪ್ರಕಾಶಗೊಳ್ಳುತ್ತದೆ ಎಂದು ನನಗೆ ಗೊತ್ತಾಗಿದೆ – ಹಾಗಾಗಿ ಇದನ್ನು ನಿಮ್ಮ ಕೈಗೆ ಕೊಡುತ್ತಿದ್ದೇನೆ”. ಮುಟ್ಟಿ ಆಶೀರ್ವಾದ ಮಾಡಿದರು. ಹಿರಿಯ ಚೇತನವೊಂದು ಇಡುವ ಇಂತಹ ವಿಶ್ವಾಸಕ್ಕಿಂತ ಹಿರಿದಾದ ಆಶೀರ್ವಾದ ಬೆರುಂಟೇ? ಒಟ್ಟಾರೆ ಎಷ್ಟೋ ಜನ ಶ್ರಮಿಸಿದ್ದಾರೆ ಅವರಿಗೆಲ್ಲ ಇದು ಸಲ್ಲಲಿ.

ನಾನು ಹೊಸ್ತೋಟದವರೊಡನೆ ಬಹಳ ಒಡನಾಡಿದವ ಅಲ್ಲ. “ಅವರೇ” ಎನ್ನುವ ಸರ್ವನಾಮ. ನೀನು-ತಾನು ಎಂಬ ಸಲುಗೆ ಕೊನೆಗೂ ಇರಲಿಲ್ಲ. “ಮತ್ತೆ ನಾಳೆ ಮೋತಿಗುಡ್ಡೆಗೆ ಹೋಗಿ ಬರುವುದಿದೆ, ಮಠಕ್ಕೂ ಹೋಗಿ ಮಹಾಸಂಕಲ್ಪ ಮಾಡುವುದಿದೆ”, ಎಂದರು ಭಾಗವತರು. ಚೌಕಿಯಲ್ಲಿ ಮಂಗಳ ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂಬಲ್ಲಿಗೆ ಬಂತೋ ಎನಿಸುವಂತಿತ್ತು. ಎಲ್ಲ ಮುಗಿದು ಗಂಟು ಮೂಟೆ ಕಟ್ಟಿ ಹೋಗಿ ಬರುತ್ತೇನೆ ಅಂತ ಹೇಳಲೆಂದು ನೋಡಿದರೆ ದಣಿದ ಭಾಗವತರು ನಿದ್ರೆಯಲ್ಲಿದ್ದರು. ಈಗ ಚಿರನಿದ್ರೆ.

Share This