( ಕುಂಜೂರು ಉತ್ಸವ ಪ್ರಯುಕ್ತ )

ಕುಂಜೂರಮ್ಮ

ಸುಮಾರು ಒಂದು ಸಾವಿರದ ಇನ್ನೂರು ವರ್ಷ ಪುರಾತನವಾದ ಕುಂಜೂರು ಶ್ರೀ ದುರ್ಗಾ ದೇವಸ್ಥಾನವು ಶಕ್ತಿ ಉಪಾಸನಾ ಸ್ಥಾನ. ಆದಿಮ ಚಿಂತನೆ, ಪುರಾಣ, ಇತಿಹಾಸಗಳ ಹಿನ್ನೆಲೆ ಇರುವ ಈ ದೇವಾಯತನ ಉಡುಪಿ ಜಿಲ್ಲೆ , ಕಾಪು ಹೋಬಳಿ ಎಲ್ಲೂರು ಗ್ರಾಮದ ಕುಂಜೂರಿನಲ್ಲಿದೆ.

ಮೂಲಸ್ಥಾನ ದುರ್ಗಾ ವಿಗ್ರಹವು ಆಕರ್ಷಕ, ಐತಿಹಾಸಿಕ ಮಹತ್ವಿಕೆಯ ಶಿಲ್ಪ ಸೌಂದರ್ಯವನ್ನು ಹೊಂದಿದೆ. ಸುಮಾರು ಮೂರು ಅಡಿ ಎತ್ತರದ ಕಡುಕರಿಶಿಲೆಯಿಂದ ರಚಿಸಲಾದ ಈ ಮೂರ್ತಿ ಅಪೂರ್ವವಾಗಿದ್ದು ಸುಮಾರು ಎಂಟು – ಒಂಬತ್ತನೆ ಶತಮಾನದ ನಿರ್ಮಿತಿ ಎಂದು ಬಿಂಬದ ಪ್ರತಿಮಾಲಕ್ಷಣವನ್ನು ಆಧರಿಸಿ ಖ್ಯಾತ ಇತಿಹಾಸಕಾರ ಡಾ. ಗುರುರಾಜ ಭಟ್ಟರು ಅಭಿಪ್ರಾಯಪಟ್ಟಿದ್ದಾರೆ. ಮಿತಲಂಕಾರದ ಈ ಮೂರ್ತಿಯು ಸ್ಕಂದಭಂಗದಲ್ಲಿದೆ. ಮುಖವು ವೃತ್ತಾಕಾರವಾಗಿದ್ದು ಶಂಕುವಿನಾಕಾರದ ಕಿರೀಟ ಹೊಂದಿದೆ. ಮಹಿಷನ ತಲೆಯ ಮೇಲೆ ಕಾಲಿಟ್ಟು ನಿಂತ ನಿರ್ದೇಶವಿದೆ .ಮಹಿಷಾಸುರನ ವಧಾನಂತರದ ಸಾವಧಾನಕರವಾದ ಮೋಹಕ ಭಂಗಿ ಎಂದು ಭಟ್ಟರು ವಿವರಿಸುತ್ತಾರೆ .

ಚತುರ್ಭುಜವಿರುವ ಈ ಶಿಲಾಪ್ರತಿಮೆಯ ಮೇಲಿನ ಬಲಕೈಯಲ್ಲಿ ಪ್ರಯೋಗ ಚಕ್ರ. ಮೇಲಿನ ಎಡ ಕೈಯಲ್ಲಿ ಶಂಖ. ಕೆಳಗಿನ ಬಲಕೈಯಲ್ಲಿ ತ್ರಿಶೂಲ. ಕೆಳಗಿನ ಎಡಕೈಯಲ್ಲಿ ಯಾವ ಆಯುಧವೂ ಇಲ್ಲ. ಉಡುಪಿ ಜಿಲ್ಲೆಯ ಐತಿಹಾಸಿಕ ಮಹತ್ವದ ಹಾಗೂ ಅಪೂರ್ವವೆಂದು ಗುರುತಿಸಬಹುದಾದ ಕೆಲವೇ ಪ್ರತಿಮೆಗಳಲ್ಲಿ ಇದು ಒಂದು.

ಬಲಿ ಮೂರ್ತಿ ಹತ್ತು ಇಂಚು ಎತ್ತರವಿದೆ. ಚತುರ್ಭಾಹುವಿರುವ ಈ ಮೂರ್ತಿ ಕ್ರಿ.ಶ. ಹದಿನಾಲ್ಕು – ಹದಿನೈದನೇ ಶತಮಾನದಷ್ಟು ಪ್ರಾಚೀನ. ಪ್ರತಿಮಾ ಲಕ್ಷಣವು ಮೂಲಸ್ಥಾನ ಪ್ರತಿಮೆಯನ್ನು ಹೋಲುತ್ತದೆ.

ಉಪಸ್ಥಾನ ಗಣಪತಿ, ಬಲಮುರಿ ಗಣಪತಿ .ಒಂಬತ್ತು – ಹತ್ತನೇ ಶತಮಾನ ಕಾಲದ ಬಿಂಬ . ಕುಳಿತ ಭಂಗಿಯ ಈ ಮೂರ್ತಿ ಕುಬ್ಜನಂತೆ ಕಾಣುತ್ತದೆಯಾದರೂ ಸುಂದರವಾಗಿದೆ.

ಮೂಲಸ್ಥಾನ ಪ್ರತಿಮೆ, ಜೀರ್ಣೋದ್ಧಾರ ಪೂರ್ವದ ದೇವಾಲಯ ನಿರ್ಮಾಣ ವಿಧಾನವನ್ನು ಆಧರಿಸಿ ದೇವಾಲಯಕ್ಕೆ ಪ್ರಾಚೀನತೆಯನ್ನು ಹೇಳಲಾಗಿದೆ. 2004 ನೇ ಇಸವಿಯಲ್ಲಿ ದೇವಾಲಯ ಜೀರ್ಣೋದ್ಧಾರ ವಾಗಿದೆ. ಅಂದಿನ ಜೀರ್ಣೋದ್ಧಾರ ಸಂಕಲ್ಪ ಇಂದಿಗೂ ನಿರಂತರವಾಗಿ ನಡೆಯುತ್ತಿದೆ. ಒಂದಿಲ್ಲೊಂದು ಅಭಿವೃದ್ಧಿ ಕುಂಜೂರಮ್ಮನ ಸನ್ನಿಧಿಯಲ್ಲಿ ನಡೆಯುತ್ತಲೇ ಇದೆ .

ಕುಂಜ – ಕುಂಜೂರು

ಒತ್ತೊತ್ತಾಗಿ ಮರಗಳು ಬೆಳೆದ “ಕುಂಜ” ಎಂಬಲ್ಲಿ ನದಿಯ ದಡದಲ್ಲಿ ಮಹರ್ಷಿ ಭಾರ್ಗವ ಯಾಗವೊಂದನ್ನು ಮಾಡಿ ದುರ್ಗಾಶಕ್ತಿಯನ್ನು ಸಂಕಲ್ಪಿಸಿದರು ಎನ್ನುವುದು ಪೌರಾಣಿಕ ಉಲ್ಲೇಖ. ” ತತ್ರ ಕುಂಜಪುರ ಕ್ಷೇತ್ರ ಕಲ್ಪನಂ ಪರಮಾದ್ಭುತಂ “.

ದೇವಾಲಯದ ಬದಿಯಿಂದ ದಕ್ಷಿಣಕ್ಕೆ ಇರುವ ವಿಶಾಲವಾದ ಬಯಲು ಒಂದು ಕಾಲಕ್ಕೆ ನದಿಯಾಗಿತ್ತು (ಈಗ ಬಯಲಿನ ನಡುವೆ ತೊರೆ ಒಂದು ಹರಿಯುತ್ತಿದೆ),ಅದು ಎರ್ಮಾಳು ಸಮೀಪ ಅಳಿವೆಕೋಡಿ ಎಂಬಲ್ಲಿ ಸಮುದ್ರ ಸಂಗಮಿಸಿತ್ತು (ಈಗ ಅಳಿವೆ ಮುಂದೆ ಹೋಗಿ ಪಡುಬಿದ್ರಿಯಲ್ಲಿದೆ). ಆಕಾಲದಲ್ಲಿ ವ್ಯಾಪಾರದ ದೊಡ್ಡ ಮಂಜಿಗಳು, ಹಡಗುಗಳು ಒಳಗೆ ಎಂದರೆ ಅರಬಿಕಟ್ಟದ ವರೆಗೆ ಬರುತ್ತಿದ್ದುವು. ಇದಕ್ಕೆ ಆ ಪರಿಸರದಲ್ಲಿರುವ ‘ಕಲ್ಲಕಂಡ’ ( ಮಂಜಿ ಮುಂತಾದುವುಗಳನ್ನು ನಿಲ್ಲಿಸಿ ಕಟ್ಡಿ ಹಾಕುತ್ತಿದ್ದ ಕಲ್ಲುಗಳು) ಹಾಗೂ ಸಮುದ್ರದ ಹಿನ್ನೀರು ಇಲ್ಲಿಯವರೆಗೆ ಬರುತ್ತಿತ್ತು ಎನ್ನವುದಕ್ಕೆ ‘ಉಪ್ಪುದ ಕಂಡ’ ಎಂಬ ಗದ್ದೆಗಳು ಪುರಾವೆಗಳಾಗುತ್ತವೆ. ಇಂದು ಈ ಪ್ರದೇಶವನ್ನು ಗಮನಿಸಿದಾಗ ನಂಬಲಾಗದಿದ್ದರೂ ” ಭೌಗೋಳಿಕ ಸ್ವರೂಪ ಪರಿವರ್ತನೆ” ಎಂಬ ಸಹಜ ಬದಲಾವಣೆ ಕರಾವಳಿಯ ಉದ್ದಕ್ಕೂ ಸಂಭವಿಸಿರುವುದನ್ನು ಕಾಣಬಹುದು.

‘ಕುಂಜ’ ಎಂಬುದೇ ಕಾಲಾಂತರದಲ್ಲಿ ಕುಂಜೂರು ಎಂದಾಯಿತು. ದುರ್ಗಾನಗರ ನಿರ್ಮಾಣ ಪೂರ್ವದ ಭೌಗೋಳಿಕ ಸ್ವರೂಪವನ್ನು ನೆನಪಿಸಿಕೊಂಡರೆ ಇದನ್ನು ಅರ್ಥೈಸಿಕೊಳ್ಳಬಹುದು. ಅಲ್ಲದೆ “ಕುಂಜೊತ್ತು” ಎಂಬ ಸ್ಥಳನಾಮವು ಇದಕ್ಕೆ ಪೂರಕವಾಗಿದೆ. ‘ಕುಂಜದ ಬದಿ’ ಎಂಬ ಅರ್ಥದಲ್ಲಿ ಈ ಹೆಸರು ಬಂದಿದೆ. ಅಂದರೆ ಅಲ್ಲಿಯ ವರೆಗೆ ಕುಂಜ ವ್ಯಾಪಿಸಿತ್ತು. ಉಚ್ಚಿಲ – ಮುದರಂಗಡಿ ರಸ್ತೆ ನಿರ್ಮಾಣ ಪೂರ್ವದ ಭೂಲಕ್ಷಣವನ್ನೊಮ್ಮೆ ಕಲ್ಪಿಸಿಕೊಳ್ಖಬೇಕಾಗುತ್ತದೆ. ಆಗ ಎಲ್ಲವೂ ನಿಚ್ಚಳ.

ಅಲ್ಲದೆ ಸುತ್ತಲ ಪರಿಸರದಲ್ಲಿರುವ ಸುಂಕದಕಟ್ಟೆ, ಬಂಡಸಾಲೆ, ಪಣಿಯೂರು (ವ್ಯಾಪಾರ ಕೇಂದ್ರ) ಮುಂತಾದ ಸ್ಥಳನಾಮಗಳು, ಇಲ್ಲಿದ್ದ ವಿಸ್ತಾರವಾದ ನದಿ, ವ್ಯಾಪಾರದ ಮಂಜಿ ಅಥವಾ ಹಡಗುಗಳು ಈ ನದಿ ಮೂಲಕ ಬರುತ್ತಿದ್ದುವು ಎಂಬ ಕ್ಷೇತ್ರಕಾರ್ಯ ಆಧರಿತ ಸಂಶೋಧನಾ ವಿವರಣೆಯನ್ನು ಸಮರ್ಥಿಸುತ್ತದೆ.

|ಆರಡ|

ಪಗ್ಗುಡು ಪದಿನೆಡ್ಮ ಪೋನಗ ಕುಂಜೂರುಡು ಕೊಡಿ ಏರ್ರೆ. ನಾಲೆಡ್ “ಕುಂಜೂರು ಆರಡ” .ಮೇ ಎರಡನೇ ತಾರೀಕು ಧ್ವಜಾರೋಹಣ. ಐದನೇ ತಾರೀಕ ಅವಭೃತ. ಇತ್ತೀಚೆಗೆ ಅಂಕುರಾರೋಪಣ ಪರಸ್ಸರ ಉತ್ಸವ ವೈಭವದಿಂದ ನೆರವೇರುತ್ತಿದೆ.

• ಕೆ .ಎಲ್ . ಕುಂಡಂತಾಯ

(ವಿಸ್ತಾರವಾದ ಕ್ಷೇತ್ರ ಪರಿಚಯಕ್ಕೆ ದೇವಾಲಯದಲ್ಲಿ ದೊರೆಯುವ “ಕುಂಜೂರು ಶ್ರೀ ದುರ್ಗಾ” ಪುಸ್ತಕ ಓದಿರಿ .)

error: Content is protected !!
Share This