Obituary

ಹೆಸರಾಂತ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ಅಪಘಾತದಲ್ಲಿ ನಿಧನ

ಹೆಸರಾಂತ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ಅಪಘಾತದಲ್ಲಿ ನಿಧನ

ಹೆಸರಾಂತ ಹವ್ಯಾಸಿ ಯಕ್ಷಗಾನ ಭಾಗವತರಾದ ರಾಮಚಂದ್ರ ಅರ್ಬಿತ್ತಾಯ ಅವರು ಕುಲ್ಕುಂದದಲ್ಲಿ  ಶನಿವಾರ ಮುಂಜಾನೆ ನಡೆದ ಅಪಘಾತದಲ್ಲಿ ನಿಧನರಾದರು.
ಸಾಧು ಸ್ವಭಾವದ ರಾಮಚಂದ್ರ ಅರ್ಬಿತ್ತಾಯರು ಹಿರಿಯ ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯ ಅವರ ಸೋದರಳಿಯ. ಅವರ ಮನೆಯಲ್ಲೇ ಯಕ್ಷಗಾನ ಕಲಿತಿದ್ದರು. ಕಡಬ, ಸುಳ್ಯ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಪರಿಸರದಲ್ಲಿ ಯಕ್ಷಗಾನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅರ್ಬಿತ್ತಾಯರು, ಸುಮಧುರ ಕಂಠ ಮತ್ತು ಸಂಪ್ರದಾಯಬದ್ಧ ಯಕ್ಷಗಾನ ಹಾಡುಗಳಿಂದಾಗಿ ಜನಪ್ರಿಯರಾಗಿದ್ದರು.
ಕುಕ್ಕೆ ಸುಬ್ರಹ್ಮಣ್ಯ-ಸುಳ್ಯ ಪರಿಸರದಲ್ಲಿ ಭಜನಾ ಕಾರ್ಯಕ್ರಮಗಳಲ್ಲಿಯೂ ಸಕ್ರಿಯರಾಗಿದ್ದ ರಾಮಚಂದ್ರ ಅರ್ಬಿತ್ತಾಯರು ತಾಯಿ, ತಂಗಿ ಹಾಗೂ ಸಹೋದರನನ್ನು ಅಗಲಿದ್ದಾರೆ.
ಕುಲ್ಕುಂದದಲ್ಲಿ ನಸುಕಿನ ಜಾವ, ಶಟಲ್ ಬ್ಯಾಡ್ಮಿಂಟನ್ ಅಭ್ಯಾಸಕ್ಕಾಗಿ ತಮ್ಮ ಸ್ನೇಹಿತರ ಮನೆಗೆ  ಸುಬ್ರಹ್ಮಣ್ಯದಿಂದ ಕುಲ್ಕುಂದಕ್ಕೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಕಡವೆ ಅಡ್ಡ ಬಂದು, ಸ್ಕೂಟರ್ ಪಲ್ಟಿಯಾಗಿ, ರಾಮಚಂದ್ರರು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಅಸು ನೀಗಿದರೆ, ಸಹೋದರ ರವಿ ಅವರಿಗೂ ಗಾಯಗಳಾಗಿವೆ.
ಅತ್ಯಂತ ವಿನೀತ ಸ್ವಭಾವದ ಅವರು, ಕುಮಾರಸ್ವಾಮಿ ಶಾಲೆಯಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಉತ್ತಮ ಕ್ರಿಕೆಟ್, ಹಾಗೂ ರಾಜ್ಯಮಟ್ಟದ ಶಟ್ಲ್ ಆಟಗಾರರೂ ಆಗಿದ್ದ ರಾಮಚಂದ್ರ ಅರ್ಬಿತ್ತಾಯರೇ ಅವರ ಕುಟುಂಬಕ್ಕೆ ಆಸರೆಯಾಗಿದ್ದರು.

ಬೊಟ್ಟಿಗೆರೆ ಪುರುಷೋತ್ತಮ ಪೂಂಜ‌ ನಿಧನ

ಬೊಟ್ಟಿಗೆರೆ ಪುರುಷೋತ್ತಮ ಪೂಂಜ‌ ನಿಧನ

ಯಕ್ಷಗಾನ ಭಾಗವತ, ಪ್ರಸಂಗಕರ್ತ ಪುರುಷೋತ್ತಮ ಪೂಂಜರು ಅಸೌಖ್ಯದಿಂದ ನಿನ್ನೆ 14-8-2021 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು. ಅವರಿಗೆ 68ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಬಿ.ಎಸ್ಸಿ ಪದವಿ ಮುಗಿಸಿ ಮುಂಬಯಿಯಲ್ಲಿ ಉದ್ಯೋಗಿ ಯಾಗಿ ಅಲ್ಲಿರುವಾಗಲೇ ವೇಷಗಳನ್ನು ಮಾಡುತ್ತಾ ಮುಂದೆ ಯಕ್ಷಗಾನದ ಮೇಲಿನ ಸೆಳೆತದಿಂದ ಊರಿಗೆ ಬಂದು‌ ಭಾಗವತರಾಗಿ ಪುತ್ತೂರು, ಕರ್ನಾಟಕ ಮೇಳಗಳಲ್ಲಿ‌ ಏಳು ವರ್ಷ ತಿರುಗಾಟ ಮಾಡಿ ಕಳೆದ ಮೂರು ದಶಕದಿಂದ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದರು. ತುಳು ಮತ್ತು ಕನ್ನಡದಲ್ಲಿ ಹತ್ತಾರು ಶ್ರೇಷ್ಠ ಪ್ರಸಂಗಗಳನ್ನು ರಚಿಸಿದ್ದಾರೆ. ಮಾನಿಷಾದವಂತೂ‌ ಆಟಕೂಟಳಲ್ಲಿ ಸಾವಿರಾರು ಪ್ರದರ್ಶನ ಕಂಡಿದೆ. ಯಕ್ಷಗಾನ ಗುರುಗಳಾಗಿ‌ ಅತ್ಯುತ್ತಮ ನಿರ್ದೇಶಕರಾಗಿ‌ ಮಾನಿತರಾಗಿದ್ದಾರೆ.‌ ಹಲವು ಪುರಸ್ಕಾರಗಳಿಗೆ ಭಾಜನರಾದ ಅವರಿಗೆ ಉಡುಪಿಯ ಯಕ್ಷಗಾನ ಕಲಾರಂಗ ಎರಡು ವರ್ಷದ ಹಿಂದೆ ಯಕ್ಷಗಾನ ವಿದ್ವಾಂಸರಿಗಾಗಿರುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್‌, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿರಿಯ ಅರ್ಥದಾರಿ ಸಿದ್ಧಕಟ್ಟೆ ಕೆ. ವಾಸು ಶೆಟ್ಟಿ ನಿಧನ

ಹಿರಿಯ ಅರ್ಥದಾರಿ ಸಿದ್ಧಕಟ್ಟೆ ಕೆ. ವಾಸು ಶೆಟ್ಟಿ ನಿಧನ

ಯಕ್ಷಗಾನದ ಹಿರಿಯ ಅರ್ಥಧಾರಿ, ಪ್ರಗತಿಪರ ಕೃಷಿಕ ಕುತ್ಲೋಡಿ ವಾಸು ಶೆಟ್ಟಿ (90) 26-07-2021 ರಂದು ಸಿದ್ಧಕಟ್ಟೆ ಸಮೀಪದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಎಳವೆಯಿಂದಲೇ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಪಳಗಿ ಪ್ರಸಿದ್ಧರ ಕೂಟಗಳಲ್ಲಿ ಭಾಗವಹಿಸಿ ಖ್ಯಾತರಾಗಿದ್ದರು. ಸ್ಥಳೀಯವಾಗಿ ಯಕ್ಷಗಾನ ಸಂಘಗಳನ್ನು ಸ್ಥಾಪಿಸಿ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ವಿಫುಲವಾದ ಪುರಾಣ ಜ್ಞಾನ ಹಾಗೂ ಯಕ್ಷಗಾನ ಪ್ರಸಂಗಗಳ ಸಮಗ್ರ ಮಾಹಿತಿ ಹೊಂದಿದ್ದ ವಾಸು ಶೆಟ್ಟರು ಭೀಷ್ಮ, ಕರ್ಣ, ಕೌರವ, ವಾಲಿ, ಮಾಗಧ, ರಾಮ, ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ಪ್ರಭುತ್ವ ಸಾಧಿಸಿದ್ದರು. ಇವರಿಗೆ ಪೊಳಲಿ ಶಾಸ್ತ್ರಿ ಪ್ರಶಸ್ತಿ, ಬಂಟ್ವಾಳ ಸಾಹಿತ್ಯ ಸಮ್ಮೇಳನ ಗೌರವ ಸಂದಿದೆ. ಉಡುಪಿಯ ಯಕ್ಷಗಾನ ಕಲಾರಂಗವು ಆರು ವರ್ಷದ ಹಿಂದೆ ಮಟ್ಟಿಮುರಳೀಧರ ರಾವ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರು ಮಕ್ಕಳು, ಕುಟುಂಬಿಕರು ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಯಕ್ಷಗಾನ ಕಲಾರಂಗದ ದಾನಿ ಪ್ರೊ. ಕೃಷ್ಣಮೂರ್ತಿ ನಿಧನ

ಯಕ್ಷಗಾನ ಕಲಾರಂಗದ ದಾನಿ ಪ್ರೊ. ಕೃಷ್ಣಮೂರ್ತಿ ನಿಧನ

ಯಕ್ಷಗಾನ ಕಲಾರಂಗದ ದಾನಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪ್ರೊ. ಕೃಷ್ಣಮೂರ್ತಿ (66 ವರ್ಷ) ಇಂದು (10-06-2021) ಶಿರ್ವದ ಮನೆಯಲ್ಲಿ ನಿಧನಹೊಂದಿದರು. ವಿದ್ಯಾರ್ಥಿಗಳ ಬಗ್ಗೆ ಅತೀವ ಪ್ರೀತಿ ಕಾಳಜಿ ಹೊಂದಿದ್ದ ಇವರು ವಿದ್ಯಾಪೋಷಕ್ ಗೆ ತಾವು ನಿವೃತ್ತಿ ಹೊಂದುವ ಸಂದರ್ಭದಲ್ಲಿ ದೊಡ್ಡಮೊತ್ತದ ನೆರವು ನೀಡಿದ್ದರು. ಇವರು ಪತ್ನಿ ಹಾಗೂ ಅಪಾರ ವಿದ್ಯಾರ್ಥಿ ಮಿತ್ರರನ್ನು ಆಗಲಿದ್ದಾರೆ. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ವಾಗ್ಮಿ ಪ್ರೊ. ಎಂ.ಎ.ಹೆಗಡೆ ನಿಧನ

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ವಾಗ್ಮಿ ಪ್ರೊ. ಎಂ.ಎ.ಹೆಗಡೆ ನಿಧನ

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ಪ್ರಸಂಗಕರ್ತೃ, ವಾಗ್ಮಿ ಪ್ರೊ. ಎಂ.ಎ.ಹೆಗಡೆ (73) ಅವರು ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ‌ ನಿಧನರಾದರು. ಎಂ.ಎ.ಹೆಗಡೆ ಅವರಿಗೆ ಕೋವಿಡ್‌ ಸೋಂಕು ತಗುಲಿರುವುದು ಏಪ್ರಿಲ್ 13ರಂದು ದೃಢ‍ಪಟ್ಟಿತ್ತು. ಶನಿವಾರ ಮುಂಜಾನೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಯಕ್ಷಗಾನದ ಅರ್ಥಧಾರಿ ಹಾಗೂ ಪ್ರಸಂಗಕರ್ತರಾಗಿದ್ದ ಅವರು ಎರಡನೇ ಅವಧಿಗೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಕೋವಿಡ್–19 ಲಾಕ್‌ಡೌನ್‌ ಅವಧಿಯಲ್ಲಿ ಹಿರಿಯ ಹಾಗೂ ಪ್ರಸಿದ್ಧ ಯಕ್ಷಗಾನ ಹಿರಿಯ ಕಲಾವಿದರ ಜೊತೆ ವರ್ಚುವಲ್‌ ರೂಪದಲ್ಲಿ ‘ಮಾತಿನ ಮಂಟಪ’ ಮಾತುಕತೆ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಡಿ 100ಕ್ಕೂ ಅಧಿಕ ಕಲಾವಿದರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದರು. ‘ಮಾತಿನ ಮಂಟಪ’ ಕಾರ್ಯಕ್ರಮದ ಮೂಲಕ 70 ವರ್ಷ ಮೀರಿದ ಕಲಾವಿದ ಸಂದರ್ಶನವನ್ನು ವರ್ಚುವಲ್‌ ರೂಪದಲ್ಲಿ ಕಟ್ಟಿಕೊಟ್ಟಿದ್ದರು. ಈ ಸರಣಿಯಲ್ಲಿ 50ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಅಕಾಡೆಮಿಯು ರೂಪಿಸಿತ್ತು. ಕಲಾವಿದರ ಸಾಧನೆ, ಚಿಂತನೆ ಹಾಗೂ ಅವರ ಕಲಾ ಬದುಕನ್ನು ಯಕ್ಷಗಾನದ ಅಭಿಮಾನಿಗಳಿಗೆ ತಿಳಿಸುವ ಈ ಕಾರ್ಯಕ್ರಮ ಸರಣಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಕಾಡೆಮಿ‌ ಅಧ್ಯಕ್ಷರಾಗಿ ಕಲೆ, ಕಲಾವಿದರ ಉನ್ನತಿಗಾಗಿ ಎಂ.ಎ.ಹೆಗಡೆ ಅವರು ಸಾಕಷ್ಟು ಶ್ರಮಿಸಿದ್ದರು. ಕಲಾವಿದರ ವಲಯದಲ್ಲಿಯೂ ಹೆಗಡೆ ಅವರ ಬಗ್ಗೆ ಅಪಾರ ಗೌರವವಿತ್ತು.

ಯಕ್ಷರಂಗದ ಖ್ಯಾತಿಯ ಡಾ. ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ!

ಯಕ್ಷರಂಗದ ಖ್ಯಾತಿಯ ಡಾ. ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ!

ಯಕ್ಷರಂಗದ ಖ್ಯಾತಿಯ ಧರ್ಮಸ್ಥಳ ಮೇಳದ  ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಧರ್ ಭಂಡಾರಿ (73 ವ) ಅವರು ಇಂದು ಮುಂಜಾನೆ ನಿಧನ ಹೊಂದಿದರು.

ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಪುತ್ತೂರು ಶ್ರೀಧರ ಭಂಡಾರಿಯವರ ಅಭಿಮನ್ಯು ಪಾತ್ರ ಭಾರಿ ಪ್ರಸಿದ್ಧಿ ಪಡೆದಿತ್ತು. ರಂಗಸ್ಥಳದಲ್ಲಿ ಚುರುಕಿನ, ವೇಗದ ನಡೆಯಿಂದ ಅವರಿಗೆ ಸಿಡಿಲಮರಿ ಎಂಬ ಬಿರುದು ಒಲಿದಿತ್ತು. ಒಮ್ಮೆಗೆ 200ರಿಂದ 250ರಷ್ಟು ಧೀಂಗಿಣ ಹಾಕುತ್ತಿದ್ದ ಶ್ರೀಧರ ಭಂಡಾರಿ ಅವರು ಬಭ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಮುಂತಾದ ಪಾತ್ರಗಳಲ್ಲಿ ಸೈ ಎನಿಸಿದ್ದರು.

ಶ್ರೀಧರ ಭಂಡಾರಿಯವರು ತಮ್ಮ 62 ನೆಯ ವಯಸ್ಸಿನಲ್ಲಿ ಖಾಸಗಿ ಸುದ್ದಿವಾಹಿನಿಯ ‘ಶಭಾಶ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ 3 ನಿಮಿಷಗಳಲ್ಲಿ 148 ಧೀಂಗಿಣಗಳನ್ನು ಹೊಡೆದು ದಾಖಲೆ ನಿರ್ಮಿಸಿದ್ದರು.

ಯಕ್ಷಗಾನ ಸೇವೆಗಾಗಿ ಪುತ್ತೂರು ಶ್ರೀಧರ ಭಂಡಾರಿಯವರಿಗೆ ಅಮೇರಿಕಾದ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಗೌರವಕ್ಕೆ ವಿಶ್ವದಾದ್ಯಂತ ಆಯ್ಕೆಯಾದ ಕೇವಲ 35 ಜನರಲ್ಲಿ ಪುತ್ತೂರು ಶ್ರೀಧರ ಭಂಡಾರಿ ಓರ್ವರು.

ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಅನಿಲ ಹಾಗೂ ಪುತ್ರ ದೇವಿ ಪ್ರಕಾಶರನ್ನು ಅಗಲಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂಡ್ಸೆ ನಾರಾಯಣ ಗಾಣಿಗ ನಿಧನ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ವಂಡ್ಸೆ ನಾರಾಯಣ ಗಾಣಿಗ (84) (01-02-2021) ನಿಧನರಾದರು. ಅವರು ಪತ್ನಿ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

40 ವರ್ಷಗಳ ಕಾಲ ರಂಗಸ್ಥಳದಲ್ಲಿ ತಿಟ್ಟು ಬೇಧವಿಲ್ಲದೇ ಕಲಾವ್ಯವಸಾಯ ಮಾಡಿದ ಕಲಾ ‘ಕೃಷಿಕ’ ವಂಡ್ಸೆ ನಾರಾಯಣ ಗಾಣಿಗರ ಕಲಾ ಸಾಧನೆಯ ಕಿರೀಟಕ್ಕೆ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಸಂಸ್ಥೆ ತನ್ನ ರಜತ ಸಂಭ್ರಮದ ಸಂದರ್ಭದಲ್ಲಿ ಅವರನ್ನು ಗೌರವಿಸಿತ್ತು. ತನ್ನ 12ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ನಾರಾಯಣ ಗಾಣಿಗರು ಬಹುಬೇಗ ಪ್ರಸಿದ್ಧಿಯ ಪಥವೇರಿದರು. ಸ್ತ್ರೀ ಭೂಮಿಕೆಯಲ್ಲಿ ಹಲವಾರು ಪೌರಾಣಿಕ ಪ್ರಸಂಗಗಳ ಪಾತ್ರಕ್ಕೆ ಸುಭದ್ರವಾದ ತಳಹದಿ ಒದಗಿಸಿದ ಕೀರ್ತಿ ಇವರದ್ದು. ಮಾರಣಕಟ್ಟೆ, ಮಂದಾರ್ತಿ, ಕೊಲ್ಲೂರು, ಧರ್ಮಸ್ಥಳ, ಕುಂಡಾವು, ಕೂಡ್ಲು, ಸುರತ್ಕಲ್, ಇಡಗುಂಜಿ ಮೊದಲಾದ ಮೇಳಗಳಲ್ಲಿ ನಾಲ್ಕುವರೆ ದಶಕಗಳ ಕಾಲ ಕಲಾಸೇವೆಗೈದಿದ್ದಾರೆ. ಸ್ವರದ ಮಾರ್ಧವತೆ ಮೂಲಕ ಹಾವ-ಭಾವ, ಒನಪು-ಒಯ್ಯಾರದ ಪ್ರಕಾಷ್ಠ ಪ್ರತಿಭೆ, ಶೃಂಗಾರ ಕರುಣಾ, ಭಕ್ತಿ ರಸಗಳಲ್ಲಿ ಇವರ ಅಭಿನಯ ಅನುಪಮ. ಮೋಹಿನಿ, ಶಿವೆ, ಸುಶೀಲೆ, ರೂಪರೇಖಾ, ಪ್ರಭಾವತಿ ಪಾತ್ರಗಳು ಹೆಣ್ಣನ್ನೇ ನಾಚಿಸಿವೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Vidyavachaspati Bannanje Govindacharya

Vidyavachaspati Bannanje Govindacharya

Bannanje Govindacharya

Vidyavachaspati Bannanje Govindacharya, a renowned sanskrit scholar and widely regarded as one of the greatest exponents on Madhva philosophy, passed away at his residence in Ambalpady here on Sunday, December 13 due to age-related illness.

Bannanje Govindacharya was 84 and is survived by four daughters. He had lost his son a few days ago.

Hailing from Bannanje near Udupi, Govindacharya was born in 1936. He was one of the greatest experts on Madhva philosophy, and was best known for his pravachanas which are very popular among Tuluvas and Kannadigas all over the world.

Bannanje Govindacharya was well-versed in Veda Bhashya, Upanishad Bhashya, Mahabharata, Puranas and Ramayana, he has written copious commentaries on Veda Suktas, Upanishads, Shata Rudriya, Brahma Sutra Bhashya, and Gita Bhashya. He leaves behind a rich legacy of around 4000 pages of Sanskrit Vyakhyana to his name with 50 odd books and around 150 books, including those in other languages.

Bannanje Govindacharya had translated works like Madhwaramayana and Mangalashtaka to Kannada and published several writings on the Upanishads, Bhagavadgita as well as several essays on various philosophical texts.

Bannanje Govindacharya will also be remembered for translating several texts from Sanskrit to Kannada. Some of them are ‘Bana Bhattana Kadambari’, a translation of Bana Bhatta’s novel, Kalidasa’s ‘Shakuntala’, ‘Shudraka’s Mrichakatika’ as ‘Aaveya Mannina Atada Bandi’, which won the Sahitya Akademi’s award for translation in 2001, and Bhavabhuti’s ‘Uttaramacharita’.

Bannanje Govindacharyaalso penned dialogues for three Kannada movies on Madhwacharya, Shankaracharya and Ramanujacharya. He also served as the consultant for the movie ‘Madhvacharya’ directed by G V Iyer.

Bannanje Govindacharya was awarded the Padma Shri for 2009 for his contribution to “Literature and Education”

ಕೆ. ದಾಮೋದರ ಐತಾಳ ನಿಧನ

ಕೆ. ದಾಮೋದರ ಐತಾಳ ನಿಧನ

ಉಡುಪಿ ಬಳಕೆದಾರರ ವೇದಿಕೆಯ ವಿಶ್ವಸ್ಥರಾಗಿದ್ದ ನಿವೃತ್ತ ಶಿಕ್ಷಕ, ಶಿಕ್ಷಣಾಧಿಕಾರಿ, ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದ ಕೆ. ದಾಮೋದರ ಐತಾಳ (86 ವರ್ಷ) ಇಂದು 08-12-2020ರಂದು ಮುಂಜಾನೆ 2 ಗಂಟೆಗೆ ಕಡಿಯಾಳಿಯ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 5 ವರ್ಷಗಳ ಹಿಂದೆ ಯಕ್ಷಗಾನ ಕಲಾರಂಗದ ಕೋಶಾಧಿಕಾರಿಯಾಗಿದ್ದ ಎಸ್. ಗೋಪಾಲಕೃಷ್ಣ ಇವರ ನೆನಪಿನಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ ನೀಡುವ ‘ಸೇವಾ ಭೂಷಣ’ ಪ್ರಸಸ್ತಿಯನ್ನು ನೀಡಿ ಗೌರವಿಸಿದ್ದನ್ನು ಸ್ಮರಿಸಿಕೊಳ್ಳಬಹುದು. ಐತಾಳರ ನಿಧನದಿಂದ ಉಡುಪಿ ಓರ್ವ ಸಜ್ಜನ ಹಿರಿಯ ಸಾಮಾಜಿಕ ಕಾರ್ಯಕರ್ತನನ್ನು ಕಳೆದು ಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!
Share This