ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಶ್ರೀ ಬಲಿಪ ನಾರಾಯಣ ಭಾಗವತರು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ‌ಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರದಾನ ಮಾಡುವ ಈ ಪ್ರಶಸ್ತಿ ರೂ. ಒಂದು ಲಕ್ಷ ನಗದು ಹೊಂದಿದೆ. ಹಾಗೂ ಬಲಿಪ ನಾರಾಯಣ ಭಾಗವತರಿಂದ ರಚಿಸಲ್ಪಟ್ಟ, ಕಳೆದ ವರ್ಷ “ಯಕ್ಷಧ್ರುವ ಪಟ್ಲ ಪ್ರತಿಷ್ಠಾನ” ದಿಂದ ಪ್ರಕಟಿಸಲ್ಪಟ್ಟ ಪ್ರಸಂಗಗಳ ಸಂಕಲನ ಜಯಲಕ್ಷ್ಮೀ ಗೆ ರೂ. 25,000 ನಗದಿನೊಂದಿಗೆ “ಪುಸ್ತಕ ಪ್ರಶಸ್ತಿ” ಲಭಿಸಿದೆ.

ಇಂದು ತೆಂಕು ತಿಟ್ಟು ಯಕ್ಷಗಾನದ ಭಾಗವತರಲ್ಲಿ ಬಲಿಪ ನಾರಾಯಣ ಭಾಗವತರು ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಕಲಾವಿದರು. ಯಕ್ಷರಂಗದ ಎಲ್ಲಾ ಒಳ – ಹೊರಗು ತಿಳಿದ ಭಾಗವತರು ಎಂದೇ ಪ್ರಸಿದ್ದರು. 60 ವರ್ಷಗಳ ಸುದೀರ್ಘ ಕಾಲ ಭಾಗವತಿಕೆ ಮಾಡಿದ ಅನುಭವಿಗಳು. ವರ್ತಮಾನ ಕಾಲದಲ್ಲಿ ಯಕ್ಷಗಾನದ ಪೂರ್ವರಂಗ ಸಂಗೀತವನ್ನು “ಇದಮಿತ್ಥಂ” ಎಂದು ನಿಖರವಾಗಿ ಹೇಳುವ ಸಾಮರ್ಥ್ಯವಿರುವ ಏಕೈಕ ಭಾಗವತರೂ ಹೌದು. ಸರಳ, ಸಜ್ಜನಿಕೆಯ ಬಲಿಪರು ಸುಮಾರು 60 ಕ್ಕಿಂತಲೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ಪುಸ್ತಕ ನೋಡದೇ ಕಂಠಪಾಟದಲ್ಲೇ ಹಾಡುವ ಅಪರೂಪದ ಭಾಗವತರೆಂದು ಗುರುತಿಸಲ್ಪಟ್ಟಿದ್ದಾರೆ.

ಬಲಿಪ ನಾರಾಯಣ ಭಾಗವತರು 13.03.1938 ರಲ್ಲಿ ಬಲಿಪ ಮಾಧವ ಭಟ್ – ಸರಸ್ವತೀ ದಂಪತಿಗಳ ಸುಪುತ್ರರಾಗಿ ಕಾಸರಗೋಡಿನ ಪಡ್ರೆ ಎಂಬಲ್ಲಿ ಜನಿಸಿದರು.
“ಬಲಿಪ ” ಮನೆತನವೆಂದರೆ ಭಾಗವತರ ಮನೆ ಎಂದೇ ಖ್ಯಾತಿ ಹೊಂದಿದ ಕಾಲವದು. ಇವರ ಅಜ್ಜ ದಿ. ಬಲಿಪ ನಾರಾಯಣ ಭಾಗವತರು (ಅಂದಿನ ಹಿರಿಯ ಬಲಿಪರು) ಯಕ್ಷರಂಗದಲ್ಲಿ ಮೆರೆದ ದೊಡ್ಡ ಹೆಸರು. ತಮ್ಮ ಅಪಾರ ಸಾಧನೆಯಿಂದ ಬಲಿಪ ಮಟ್ಟು ಎಂಬ ಶೈಲಿಯನ್ನು ಹುಟ್ಟು ಹಾಕಿದ “ಭಾಗವತ ಪಿತಾಮಹರು”. ತಮ್ಮ ಅಜ್ಜನಲ್ಲಿ ಹಾಗೂ ತಂದೆಯವರಲ್ಲಿ ಭಾಗವತಿಕೆ ಕಲಿತ ಪುಟ್ಟ ಬಾಲಕ, ನಾರಾಯಣ, ಮುಂದೆ ತಮ್ಮ ಅಜ್ಜನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದರು. ಏಳನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, ತಮ್ಮ 13 ನೇ ವಯಸ್ಸಿನಲ್ಲೇ “ಯಕ್ಷರಂಗ ಪ್ರವೇಶ” ಮಾಡಿದರು. ತಮ್ಮ ಅಜ್ಜನ “ಬಲಿಪ ಶೈಲಿ” ಯನ್ನೇ ಮುಂದುವರಿಸಿಕೊಂಡು ಬಂದಿರುವ ಬಲಿಪರು ” ಕಂಚಿನ ಕಂಠದ ಭಾಗವತರು ” ಎಂದೇ ಪ್ರಸಿದ್ಧರು. ಕೈಯಲ್ಲಿ ಜಾಗಟೆ ಹಿಡಿದು, ತಲೆಗೆ ಮುಂಡಾಸು ಕಟ್ಟಿ, ಹಣೆಗೆ ತಿಲಕವಿಟ್ಟು ಭಾಗವತಿಕೆಗೆ ಬಲಿಪರು ಕುಳಿತುಕೊಳ್ಳುವುದನ್ನು ನೋಡುವುದೇ ಅಂದ. ಕಪ್ಪು ಮೂರು ಅಥವಾ ಬಿಳಿ ನಾಲ್ಕರ (ಕೆಲವೊಮ್ಮೆ ಬಿಳಿ ಐದು !!) ಏರು ಶೃತಿಯಲ್ಲಿ ಹಾಡುವ ಬಲಿಪರ ಹಾಡನ್ನು ಕೇಳಲೆಂದೇ ಬರುವ ಅದೆಷ್ಟೋ ಲಕ್ಷಾಂತರ ಅಭಿಮಾನಿಗಳನ್ನು ಇಂದಿಗೂ ಹೊಂದಿರುವ ಬಲಿಪರು, ಯುವ ಭಾಗವತರೂ ನಾಚುವಂತೆ ಅಥವಾ ಅನುಕರಿಸುವಂತೆ ಹಾಡಬಲ್ಲವರು. ಬಲಿಪರ ಸುಶ್ರಾವ್ಯವಾದ ಏರುಕಂಠಕ್ಕೆ ಮರುಳಾಗದ ಅಭಿಮಾನಿಗಳಾದರೂ ಯಾರಿದ್ದಾರು ? ಧ್ವನಿವರ್ಧಕ ವ್ಯವಸ್ಥೆ ಇಲ್ಲದ ಕಾಲದಲ್ಲೂ ರಾತ್ರಿ 9.30 ರಿಂದ ಮುಂಜಾವಿನ ತನಕ ಒಬ್ಬರೇ ಭಾಗವತಿಕೆ ಮಾಡಿದ ಉದಾಹರಣೆಗಳು ಸಹಸ್ರಾರು .ಪದ್ಯಗಳ ಕಂಠಪಾಟವಲ್ಲದೇ, ಕಲಾವಿದರು ಜಾಸ್ತಿಯಿದ್ದಲ್ಲಿ, ಹೊಸ ಪಾತ್ರಗಳನ್ನು ಸೃಷ್ಠಿಸಿ, ರಂಗಸ್ಥಳದಲ್ಲೇ ಆ ಪಾತ್ರಗಳಿಗೆ “ಪದ್ಯ” ಕೊಟ್ಟ “ಆಶುಕವಿ” ಗಳೂ ಹೌದು. ಎಲ್ಲಾ ಪ್ರಸಂಗಗಳ “ನಡೆ” ತಿಳಿದಿದ್ದು , ರಂಗದಲ್ಲೇ ನಿರ್ದೇಶನ ನೀಡಬಲ್ಲ “ಅಸಾಮಾನ್ಯ ನಿರ್ದೇಶಕ” ರೂ ಹೌದು . ಯಕ್ಷಗಾನದ ಯಾವುದೇ, “ಜಿಜ್ಞಾಸೆ” ಗಳಿಗೆ ಬಲಿಪರ ಮಾತು “ಅಂತಿಮ ಮುದ್ರೆ” ಎಂಬುದು ಸತ್ಯದ ವಿಷಯ. ಇಂದಿಗೂ ಕೆಲವಾರು ಯಕ್ಷಗಾನೀಯ ವಿಷಯಗಳನ್ನು ಚರ್ಚಿಸಲು ವಿದ್ವಾಂಸರು, ಬಲಿಪರ ಮನೆಗೇ ಬರುವುದು.

ಆಶುಕವಿಗಳಾದ ಬಲಿಪರು
“ಪ್ರಸಂಗಕರ್ತ” ರಾಗಿಯೂ ಗುರುತಿಸಿಕೊಂಡಿದ್ದಾರೆ. ಸುಮಾರು 50 ಪ್ರಸಂಗ ರಚಿಸಿರುವ ಬಲಿಪರ ಪ್ರಸಂಗಗಳು ಇಂದಿಗೂ ಯಕ್ಷರಂಗದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಇವುಗಳಲ್ಲಿ 30 ಪ್ರಸಂಗಗಳು ಈಗಾಗಲೇ ಮುದ್ರಣ ಕಂಡು ಯಕ್ಷಗಾನ ಆಸಕ್ತರಿಗೆ ಲಭ್ಯವಿದೆ. ಪಟ್ಲ ಪ್ರತಿಷ್ಠಾನದವರು ಬಲಿಪರ 14 ಅಪ್ರಕಟಿತ ಪ್ರಸಂಗಗಳ ಸಂಕಲನ “ಜಯಲಕ್ಷ್ಮೀ” ಯನ್ನು ಕಳೆದ ವರ್ಷ ಪ್ರಕಟಿಸಿದ್ದು, ಇದೀಗ “ಪುಸ್ತಕ ಪ್ರಶಸ್ತಿ” ಗೆ ಆಯ್ಕೆಯಾಗಿದೆ.

5 ದಿನಗಳ ಕಾಲ ಆಡಬಲ್ಲ “ಶ್ರೀ ದೇವಿಮಹಾತ್ಮೆ” ಪ್ರಸಂಗ ರಚಿಸಿರುವ ಬಲಿಪರ ಕೃತಿ ಅತ್ಯಂತ ಶ್ರೇಷ್ಠ ಹಾಗೂ ಅಪರೂಪದ ಕೃತಿಯಾಗಿದೆ. ದುಃಶಾಸನವಧೆ, ಕುಮಾರ ವಿಜಯದಂಥಹ ಅಪರೂಪ ಹಾಗೂ ಕ್ಲಿಷ್ಟವಾದ ಪ್ರಸಂಗಗಳನ್ನು ಬಲಿಪರೇ ಹಾಡಬೇಕು ಎಂಬುದು ಇಂದಿಗೂ ಯಕ್ಷಗಾನ ಅಭಿಮಾನಿಗಳ ಅಭಿಮತ. ಯಕ್ಷಗಾನದ ಕೆಲವು ವಿಶಿಷ್ಠ ತಾಳಗಳು, ರಾಗಗಳು ಬಲಿಪರಿಗೆ ಮಾತ್ರ ಸೀಮಿತವೋ, ಎಂಬಂಥಹ ಅಪೂರ್ವ ಸಿದ್ಧಿ ಬಲಿಪರದು. ಬಲಿಪರು ಇದ್ದಲ್ಲಿ ಯಾವುದೇ ಪ್ರಸಂಗಗಳ ಪ್ರದರ್ಶನ ಯಶಸ್ವಿಯಾಗುವುದು ಖಚಿತ. ವೃತ್ತಿನಿರತ ಭಾಗವತರಾಗಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿರುವ ಬಲಿಪರು ಮೂಲ್ಕಿ, ಕೂಡ್ಲು, ಕುಂಡಾವು ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಕಟೀಲು ಮೇಳದಲ್ಲೇ ನಲ್ವತ್ತು ವರ್ಷಗಳ ದೀರ್ಘಕಾಲ ತಿರುಗಾಟ ನಡೆಸಿ, ಕಟೀಲು ಮೇಳದಲ್ಲಿರುವಾಗಲೇ ನಿವೃತ್ತರಾಗಿದ್ದರು. ಪಡ್ರೆ ಜಠಾಧಾರಿ ಮೇಳ ಕಟ್ಟಿ , ಮೇಳದ ಯಜಮಾನರಾಗಿಯೂ ಅನುಭವ ಪಡೆದವರು. ತಮ್ಮ ಆರು ದಶಕಗಳ ತಿರುಗಾಟದಲ್ಲಿ ಯಾರೊಂದಿಗೂ ವೈಷಮ್ಯ ಹೊಂದಿಲ್ಲದೇ “ಅಜಾತಶತ್ರು” ಎಂದೇ ಹೆಸರು ಗಳಿಸಿದ ಏಕೈಕ ಕಲಾವಿದರೆಂದರೆ ಬಲಿಪರು ಎಂದು ಧೈರ್ಯವಾಗಿ ಹೇಳಬಹುದು. ನೂರಾರು ಸಿ.ಡಿ.ಹಾಗೂ ಕ್ಯಾಸೆಟ್ ಗಳಲ್ಲಿ ತಮ್ಮ ಕಂಠಸಿರಿಯನ್ನು ರಸಿಕರಿಗೆ ಉಣಬಡಿಸಿದ ಬಲಿಪರ ಹಾಡುಗಳು, ಸಾವಿರಾರು ಅಭಿಮಾನಿಗಳ ಮೊಬೈಲ್ ಪೋನ್ ಗಳಲ್ಲಿ “ರಿಂಗ್ ಟೋನ್” ಆಗಿ ನಿತ್ಯ ಅನುರುಣಿಸುತ್ತಿವೆ. ಕೆಲವು ಅಪೂರ್ವ ರಾಗ, ತಾಳಗಳ ದಾಖಲೀಕರಣ ಬಲಿಪರಿಂದ ಆಸಕ್ತರು ಮಾಡಿಸಿಕೊಂಡಿದ್ದಾರೆ ಎಂಬುದು ಸಮಾಧಾನದ ಸಂಗತಿ.ಇಂದಿಗೂ, ತಮ್ಮ 80 ರ ಹರೆಯದಲ್ಲೂ ಭಾಗವತಿಕೆ ಮಾಡುವ ಸಾಮರ್ಥ್ಯ ಹೊಂದಿರುವುದು ಸಂತಸದ ವಿಚಾರವಾಗಿದೆ. ಯಕ್ಷಗಾನದ ಇತ್ತೀಚೆಗಿನ ಹೊಸ ಅವಿಷ್ಕಾರವಾದ “ಗಾನವೈಭವ” ಗಳಲ್ಲಿ, ಯುವ ಭಾಗವತರೊಂದಿಗೆ ಭಾಗವಹಿಸುವಾಗ, ಹೆಚ್ಚಿನ ಮೆಚ್ಚುಗೆ ಗಳಿಸುವುದು ಬಲಿಪರೇ ಎಂಬುದು, ಇವರ ಅಸಾಮಾನ್ಯ ಸಾಧನೆಗೆ ಹಿಡಿದ ಕನ್ನಡಿ.

ನಾಲ್ವರು ಮಕ್ಕಳನ್ನು ಹೊಂದಿರುವ ಬಲಿಪರ ಕಿರಿಯ ಮಗ ಪ್ರಸಾದ ಬಲಿಪರು ಕಟೀಲು ಎರಡನೇ ಮೇಳದ ಪ್ರಧಾನ ಭಾಗವತರಾಗಿದ್ದರೆ, ಎರಡನೇ ಮಗ ಶಿವಶಂಕರರು, ಹವ್ಯಾಸೀ ಭಾಗವತರಾಗಿದ್ದಾರೆ. ಹಿರಿಯ ಮಗ ಮಾಧವರು ಹಿಮ್ಮೇಳವಾದನದಲ್ಲಿ ಪರಿಣತರಾದರೆ, ಮೂರನೇ ಮಗ ಶಶಿಧರರು ಕೃಷಿಕರಾಗಿದ್ದಾರೆ. ಬಲಿಪರ ಸಾಧನೆಯನ್ನು ಪರಿಗಣಿಸಿ ಅಭಿಮಾನಿಗಳು ಸಾವಿರಾರು ಕಡೆಗಳಲ್ಲಿ ಸಂಮಾನಿಸಿದ್ದಾರೆ. ಈ ಸಂಮಾನ ಪತ್ರಗಳೆಲ್ಲಾ,ಇತ್ತೀಚೆಗೆ ಅವರ ಅಭಿಮಾನಿ ಬಳಗದವರಿಂದ ನಿರ್ಮಿಸಿದ ಬಲಿಪ ಭವನ” ದಲ್ಲಿ ರಾರಾಜಿಸುತ್ತಿವೆ. ಬಲಿಪರಿಗೆ 75 ಸಂವತ್ಸರ ಪೂರ್ತಿಯಾದ ಸಂದರ್ಭದಲ್ಲಿ, ಅವರ ಅಭಿಮಾನಿಗಳು ಬಲಿಪರ ಸ್ವಗೃಹದ ಬಳಿ ಸುಮಾರು ರೂಪಾಯಿ 15 ಲಕ್ಷ ವೆಚ್ಚದಲ್ಲಿ ಬಲಿಪ ಭವನ ವನ್ನು ಬಲಿಪರಿಗೆ ಕೊಡಮಾಡಿದ್ದು ಉಲ್ಲೇಖನೀಯ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಗ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ “ಜ್ಞಾನ ಪ್ರಶಸ್ತಿ”, ಮುದ್ದಣ ಪುರಸ್ಕಾರ, “ಕರ್ನಾಟಕ ಶ್ರೀ” ಪ್ರಶಸ್ತಿ, ದುಬೈಯಲ್ಲಿ ನೀಡಿದ ಸಂಮಾನ ಪ್ರಶಸ್ತಿ, ಅಗರಿ ಪ್ರಶಸ್ತಿ , “ಯಕ್ಷಸಂಗಮ – ಮೂಡಬಿದಿರೆ ಪ್ರಶಸ್ತಿ” ಯಂಥಹ ನೂರಾರು ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿರುವ ಬಲಿಪರಿಗೆ “ಯಕ್ಷಧ್ರುವ ಪಟ್ಲ ಪ್ರತಿಷ್ಠಾನ” ದವರು ನೀಡುವ ಒಂದು ಲಕ್ಷ ನಗದು ಸಹಿತ ಪಟ್ಲ ಪ್ರಶಸ್ತಿ 2017 ರಲ್ಲಿ ಲಭಿಸಿತ್ತು.

ದಕ್ಷಿಣ ಕನ್ನಡದ ಮೂಡಬಿದ್ರೆ ಸಮೀಪ ನೂಯಿ ಎಂಬ ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿರುವ ಬಲಿಪರು ಸುಖೀ ಸಂಸಾರಿಗಳು. ಇತ್ತೀಚೆಗೆ ಧರ್ಮಪತ್ನಿಯಾದ ಶ್ರೀಮತಿ ಜಯಲಕ್ಷ್ಮಿಯವರನ್ನು ಕಳೆದುಕೊಂಡಾಗ ತುಂಬಾ ನೊಂದುಕೊಂಡಿದ್ದರು.

” ಬಲಿಪ ” ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಬಲಿಪರೇ ಹೇಳಿದ ಸ್ವಾರಸ್ಯಕರ ಕಥೆಯೊಂದು ಹೀಗಿದೆ.

” ಅಂಗ್ರಾಜೆ ಮನೆತನ ” ದವರಾದ ಬಲಿಪರ ಹಿರಿಯರ ಮನೆ ಪಡ್ರೆಯಲ್ಲಿದೆ. ಅಲ್ಲೇ ಸನಿಹದಲ್ಲಿ ಸಾಲೆತ್ತಡ್ಕ ಎಂಬಲ್ಲಿ “ಬಲಿಪರ ಜಾಲು” ಎಂಬಲ್ಲಿ ಬಲಿಪರ ಹಿರಿಯ ಪೀಳಿಗೆಯವರು ವಾಸವಾಗಿದ್ದರು. ಈ ಕಾರಣಕ್ಕೆ “ಬಲಿಪ” ಎಂಬ ಹೆಸರು ಬಂದಿರಬಹುದು. ಇನ್ನೊಂದು ಕಥೆಯ ಪ್ರಕಾರ, ಬಲಿಪರ ಹಿರಿಯರೊಬ್ಬರು ಆ ಕಾಲದಲ್ಲಿ ತೀರ್ವೆ ಕಟ್ಟಲು ಮಡಿಕೇರಿಗೆ ಹೋಗುತ್ತಿದ್ದರು. ಅ ಕಾಲದಲ್ಲಿ ಮಡಿಕೇರಿಯಲ್ಲಿಯೇ ತೀರ್ವೆ ಕಟ್ಟಬೇಕಾಗಿತ್ತು. ಅಂದೆಲ್ಲಾ ಬಸ್ಸು ವಾಹನಗಳು ವಿರಳವಾದ ಕಾರಣ ನಡೆದೇ ಹೋಗುವುದು. ಒಂದು ಸಲ, ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ರಾತ್ರಿ ವೇಳೆ “ಅಡ್ಡ ಬಲಿಪ” ವನ್ನು (ಹೆಬ್ಬುಲಿ) ಕೊಂದರಂತೆ. ಅದನ್ನು ಅಲ್ಲಿನ ರಾಜರಿಗೆ ತೋರಿಸಿದರಂತೆ. ಅದರಿಂದ ಸಂತೋಷಗೊಂಡ ರಾಜ, ಅವರ ಸಾಹಸಕ್ಕೆ ಮೆಚ್ಚಿ, ನಿಮ್ಮ ಜಾಗೆಗೆ ಇಂದಿನಿಂದ ತೀರ್ವೆ ನೀಡಬೇಕಾಗಿಲ್ಲ ಎಂದರಂತೆ. ಆ ಪ್ರಕಾರ ಪಡ್ರೆಯ ಬಾರ್ಮೊಗ ಎಂಬ ಜಾಗೆಗೆ ಇಂದಿಗೂ ತೀರ್ವೆಯಿಲ್ಲ. ಬಲಿಪನನ್ನು ಕೊಂದ ಕಾರಣಕ್ಕೆ “ಬಲಿಪ” ಎಂಬ ಬಿರುದು ಅವರ ಮನೆತನಕ್ಕೆ ಬಂತು ಎಂಬ ಕಥೆಯೂ ಪ್ರಚಲಿತದಲ್ಲಿದೆ..

ಪಾರ್ತಿಸುಬ್ಬ ಪ್ರಶಸ್ತಿಗೆ ಅರ್ಹವಾಗಿಯೇ ಆಯ್ಕೆಯಾದ ಶ್ರೀ ಬಲಿಪ ನಾರಾಯಣ ಭಾಗವತರಿಗೆ ಶುಭವನ್ನು ಹಾರೈಸುತ್ತೇನೆ.

ಎಂ.ಶಾಂತರಾಮ ಕುಡ್ವಾ, ಮೂಡಬಿದಿರೆ

error: Content is protected !!
Share This