ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ವಂಡ್ಸೆ ನಾರಾಯಣ ಗಾಣಿಗ (84) (01-02-2021) ನಿಧನರಾದರು. ಅವರು ಪತ್ನಿ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

40 ವರ್ಷಗಳ ಕಾಲ ರಂಗಸ್ಥಳದಲ್ಲಿ ತಿಟ್ಟು ಬೇಧವಿಲ್ಲದೇ ಕಲಾವ್ಯವಸಾಯ ಮಾಡಿದ ಕಲಾ ‘ಕೃಷಿಕ’ ವಂಡ್ಸೆ ನಾರಾಯಣ ಗಾಣಿಗರ ಕಲಾ ಸಾಧನೆಯ ಕಿರೀಟಕ್ಕೆ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಸಂಸ್ಥೆ ತನ್ನ ರಜತ ಸಂಭ್ರಮದ ಸಂದರ್ಭದಲ್ಲಿ ಅವರನ್ನು ಗೌರವಿಸಿತ್ತು. ತನ್ನ 12ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ನಾರಾಯಣ ಗಾಣಿಗರು ಬಹುಬೇಗ ಪ್ರಸಿದ್ಧಿಯ ಪಥವೇರಿದರು. ಸ್ತ್ರೀ ಭೂಮಿಕೆಯಲ್ಲಿ ಹಲವಾರು ಪೌರಾಣಿಕ ಪ್ರಸಂಗಗಳ ಪಾತ್ರಕ್ಕೆ ಸುಭದ್ರವಾದ ತಳಹದಿ ಒದಗಿಸಿದ ಕೀರ್ತಿ ಇವರದ್ದು. ಮಾರಣಕಟ್ಟೆ, ಮಂದಾರ್ತಿ, ಕೊಲ್ಲೂರು, ಧರ್ಮಸ್ಥಳ, ಕುಂಡಾವು, ಕೂಡ್ಲು, ಸುರತ್ಕಲ್, ಇಡಗುಂಜಿ ಮೊದಲಾದ ಮೇಳಗಳಲ್ಲಿ ನಾಲ್ಕುವರೆ ದಶಕಗಳ ಕಾಲ ಕಲಾಸೇವೆಗೈದಿದ್ದಾರೆ. ಸ್ವರದ ಮಾರ್ಧವತೆ ಮೂಲಕ ಹಾವ-ಭಾವ, ಒನಪು-ಒಯ್ಯಾರದ ಪ್ರಕಾಷ್ಠ ಪ್ರತಿಭೆ, ಶೃಂಗಾರ ಕರುಣಾ, ಭಕ್ತಿ ರಸಗಳಲ್ಲಿ ಇವರ ಅಭಿನಯ ಅನುಪಮ. ಮೋಹಿನಿ, ಶಿವೆ, ಸುಶೀಲೆ, ರೂಪರೇಖಾ, ಪ್ರಭಾವತಿ ಪಾತ್ರಗಳು ಹೆಣ್ಣನ್ನೇ ನಾಚಿಸಿವೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

error: Content is protected !!
Share This