ಮಲೆನಾಡಿನ ಯಕ್ಷಚೇತನಗಳು-34

ಶ್ರೀ ಕೆರೆಮನೆ ವೆಂಕಟಾಚಲ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ಕೆರೆಮನೆಯಲ್ಲಿ 01 ಸೆಪ್ಟೆಂಬರ್ 1936ರಲ್ಲಿ ವೆಂಕಟರಮಣ ಭಟ್ಟ ಅವರ ಮಗನಾಗಿ ಜನಿಸಿದರು. ಅವರಿಗೆ ರಾಮಚಂದ್ರ, ಗಣಪತಿ ಎಂಬ ಸಹೋದರರು. ಮೂಲತಃ ಅವರದ್ದು ಪುರೋಹಿತ ಮನೆತನ. ತಂದೆಯ ಹಾದಿಯನ್ನು ಉಳಿದ ಸಹೋದರರು ಹಿಡಿದರೆ ವೆಂಕಟಾಚಲ ಭಟ್ಟರು ಭಿನ್ನವಾದ ಹಾದಿಯಲ್ಲಿ ಕ್ರಮಿಸಿದ್ದರು. ನಾಲ್ಕನೇ ತರಗತಿಯವರೆಗೆ ಅಭ್ಯಾಸವನ್ನು ಮಾಡಿದ ಅವರು, ಮುಂದೆ ತಮ್ಮನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ವೆಂಕಟಾಚಲ ಭಟ್ ಅವರಿಗೆ ಪ್ರಸಿದ್ಧ ಭಾಗವತರಾಗಿದ್ದ ಅಡಕಳ್ಳಿ ಸುಬ್ರಾಯ ಹೆಗಡೆಯವರ ಪ್ರಭಾವ ಎಳವೆಯಲ್ಲಿಯೇ ಆಗಿತ್ತು. ತಮ್ಮ ಹತ್ತು ಹನ್ನೆರಡನೇ ವಯಸ್ಸಿಗೆ ಯಕ್ಷಗಾನದತ್ತ ಮನಸ್ಸನ್ನು ಹರಿಸಿದ್ದರು. ಆ ಕಾಲದಲ್ಲಿ ಒಳ್ಳೆಯ ಯಕ್ಷಗಾನದ ಗುರುಗಳಾಗಿದ್ದ ಶೀಗೆಹಳ್ಳಿಯ ಕಲ್ಲೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ, ಸಂಚಾಲಕ, ಪ್ರಧಾನ ನಟರು ಆಗಿದ್ದ ಪರಮೇಶ್ವರ ಭಟ್ಟರಲ್ಲಿ ನೃತ್ಯಾಭ್ಯಾಸವನ್ನು ಮಾಡಿದರು. ಜೊತೆಗೆ ಅಲ್ಲಿಯ ಮಕ್ಕಳ ಮೇಳದಲ್ಲಿ ಪ್ರಮುಖ ಸ್ತ್ರೀ ವೇಷಧಾರಿಗಳಾದರು. ಚುರುಕಾದ ಮಾತಿನ ಓಘ, ಸ್ತ್ರೀವೇಷಕ್ಕೆ ಪೂರಕವಾದ ಆಳಾಂಗ, ಹದವಾದ ಕುಣಿತ ಇತ್ಯಾದಿಗಳಿಂದ ಜನರ ಮನಸ್ಸಿಗೆ ಹತ್ತಿರವಾಗಿದ್ದರು. ಒಂದಷ್ಟು ವರುಷಗಳ ನಂತರ ಶೀಗೆಹಳ್ಳಿ ಮೇಳ ಅಂತ್ಯವಾಯಿತು. ಈ ಕಾರಣದಿಂದ ಮೇಳದ ಉಳಿದ ಕಲಾವಿದರು ಯಕ್ಷಗಾನದ ಸಂಸರ್ಗವನ್ನು ತೊರೆದರು. ಆದರೆ ವೆಂಕಟಾಚಲ ಭಟ್ಟರಿಗೆ ಅದು ಸಹ್ಯವಾಗಲಿಲ್ಲ. ಕಲೋಪಾಸನೆಯ ಹೊಸ ಹಾದಿಯನ್ನು ಅನ್ವೇಷಿಸಿದರು.

ಸುಮ್ಮನೇ ಕುಳಿತುಕೊಳ್ಳದ ಸದಾ ಕ್ರಿಯಾಶೀಲ ವ್ಯಕ್ತಿತ್ವದ ಭಟ್ಟರು ತಮ್ಮ ಸ್ನೇಹಿತರನ್ನು ಸೇರಿಸಿ 1960ರ ಹೊತ್ತಿಗೆ ಕಲ್ಲೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಎಂಬ ಮೇಳವನ್ನು ಸ್ಥಾಪಿಸಿದರು. ಇದರಲ್ಲಿ ಹಸಿರಗೋಡು ಲಕ್ಷ್ಮೀನಾರಾಯಣ, ದಂಟ್ಕಲ್ ಗಣಪತಿ ಹೆಗಡೆ ಮುಂತಾದವರು ಆ ಮೇಳದ ಕಲಾವಿದರಾಗಿದ್ದರು. 1964-1965ರಲ್ಲಿ ಟೆಂಟಿನ ಆಟವನ್ನು ಹಲವು ಕಡೆಗಳಲ್ಲಿ ಮಾಡಿ ಕೈಸುಟ್ಟುಕೊಂಡಿದ್ದರು. ಆದರೂ ಮೇಳವನ್ನು, ಯಕ್ಷಗಾನವನ್ನು ಬಿಡದೆ ಬಯಲಾಟದ ಮೇಳವಾಗಿ ಮುಂದುವರೆಸಿದರು. ಮೊದಲು ಸ್ತ್ರೀ ವೇಷವನ್ನು ಮಾಡುತ್ತಿದ್ದ ಭಟ್ಟರು ನಂತರ ಪುರುಷ ಪಾತ್ರಗಳನ್ನು ಆಯ್ದುಕೊಂಡರು. ಒಂದು ವಯಸ್ಸಿನ ಕಾರಣದಿಂದ ಮೊದಲಿನ ರೂಪ ಉಳಿದಿರಲಿಲ್ಲ. ಜೊತೆಗೆ ಪುರುಷ ಪಾತ್ರವನ್ನು ಮಾಡುವವರ ಸಂಖ್ಯೆ ಕೊರತೆಯೂ ಕೂಡ ಆ ದಿಸೆಯಲ್ಲಿ ಯತ್ನಶೀಲರಾಗುವುದಕ್ಕೆ ಕಾರಣವಾಯಿತು. ಹಾಗಂತ ಎಲ್ಲ ಪಾತ್ರಗಳೂ ಅವರಿಗೆ ಹೊಂದಿಕೆಯಾಗುತ್ತಿರಲಿಲ್ಲ. ಸಣ್ಣ ಆಳಾಂಗವನ್ನು ಹೊಂದಿದ್ದರಿಂದ ಕಿರೀಟ, ಮುಂಡಾಸು ಪಾತ್ರಗಳನ್ನು ಮಾಡಲು ಸಾಧ್ಯವಾಗದೆ ಪುಂಡು ಪಾತ್ರಗಳಿಗೆ ಮಾತ್ರ ಸೀಮಿತರಾದರು. ಅವರ ಸುಧಾನ್ವಾರ್ಜುನದ ಸುಧನ್ವ, ಮಾಗಧ ವಧೆಯ ಕೃಷ್ಣ, ಜಾಂಬವತಿ ಕಲ್ಯಾಣದ ಕೃಷ್ಣ ಮುಂತಾದ ಪಾತ್ರಗಳು ಜನರ ಮೆಚ್ಚುಗೆಯನ್ನು ಪಡೆದವು. ಕೆಲ ವರುಷಗಳ ನಂತರ ಆ ಮೇಳವೂ ಕಾರಣಾಂತರಗಳಿಂದ ನಿಂತಿತು.

ಯಕ್ಷಗಾನದಲ್ಲಿ ಕೆರೆಮನೆ ಮೇಳಕ್ಕೆ ದೊಡ್ಡ ಇತಿಹಾಸವಿದೆ. ಆ ಮೇಳದಲ್ಲಿ ವೆಂಕಟಾಚಲ ಭಟ್ಟರಿಗೆ ತಿರುಗಾಟವನ್ನು ಮಾಡುವ ಅವಕಾಶ ಲಭ್ಯವಾಯಿತು. ಅವರು ಮೇಳವನ್ನು ಪ್ರವೇಶಿಸುವುದಕ್ಕೆ ಸಣ್ಣ ಹಿನ್ನಲೆ ಇದ್ದಿತ್ತು. ೧೯೬೫ರಲ್ಲಿ ಸಿದ್ದಾಪುರ ತಾಲೂಕು ಬಾಳೂರಿನಲ್ಲಿ ಕೆರೆಮನೆ ಶಂಭು ಹೆಗಡೆಯವರಿಂದ ಯಕ್ಷಗಾನ ರಂಗತರಬೇತಿ, ನೃತ್ಯ, ವೇಷಭೂಷಣಗಳನ್ನು ಕುರಿತಂತೆ ಶಿಕ್ಷಣ ಶಿಬಿರ ತರಬೇತಿಯನ್ನು ಮಾಡುತ್ತಿದ್ದರು. ಆ ಶಿಬಿರದಲ್ಲಿ ವೆಂಕಟಾಚಲ ಭಟ್ಟರು ಭಾಗವಹಿಸಿದ್ದರು. ಅವರ ಸುಪ್ತ ಪ್ರತಿಭೆಯನ್ನು ಗುರುತಿಸಿದ ಶಂಭು ಹೆಗಡೆಯವರು, ತಮ್ಮ ಮೇಳಕ್ಕೆ ಬರುವಂತೆ ಆಹ್ವಾನವನ್ನು ನೀಡಿದರು. ಅವರ ಮಾತಿಗಾಗಿ ಮುಂದೆ ಭಟ್ಟರು 1966ರಲ್ಲಿ ಇಡಗುಂಜಿ ಮೇಳಕ್ಕೆ ಸೇರಿದರು. ಅಲ್ಲಿ ಅವರು ಭೀಷ್ಮ ವಿಜಯದ ಅಂಬೆ, ಕೀಚಕ ವಧೆಯ ಸೈರಂಧ್ರಿ, ಕಂಸವಧೆಯ ದೇವಕಿ, ಗದಾಪರ್ವ ಹಾಗೂ ಕರ್ಣಪರ್ವದ ಕೃಷ್ಣ, ಧೃಢವರ್ಮ ಕಾಳಗದ ರತ್ನಾವತಿ ಮುಂತಾದ ಹದಿನೈದಕ್ಕೂ ಹೆಚ್ಚು ಪಾತ್ರಗಳನ್ನು ಮಾಡಿದರು. ಜೊತೆಗೆ ಆ ಕಾಲದಲ್ಲಿ ಯಕ್ಷಗಾನೇತರ ವಲಯಗಳಲ್ಲಿ ಅನೇಕ ವೇಷಗಳನ್ನು ಮಾಡಿದರು. 1969ರಲ್ಲಿ ದಿಲ್ಲಿಯಲ್ಲಿ ಜರಾಸಂಧ ವಧೆಯ ಅರ್ಜುನ, 1972ರಲ್ಲಿ ಬೆಂಗಳೂರಿನಲ್ಲಿ ಗದಾಪರ್ವದ ಸಂಜಯ, 1976ರಲ್ಲಿ ಬೆಂಗಳೂರಿನಲ್ಲಿ ರಾಜಸೂಯಯಾಗದ ಕೃಷ್ಣ, ಚಂದ್ರಹಾಸದ ಮದನ ಮುಂತಾದ ಪಾತ್ರಗಳನ್ನು ಮಾಡಿದರು. ಇಡಗುಂಜಿ ಮೇಳದಲ್ಲಿ ಹಲವು ಪಾತ್ರಗಳು ಅವರಿಗೆ ಗೌರವವನ್ನು ತಂದುಕೊಟ್ಟಿವೆ. ಅದರಲ್ಲಿ ಸುಧಾನ್ವಾರ್ಜುನದ ಪ್ರಭಾವತಿ, ಕೃಷ್ಣ, ರತ್ನಾವತಿ ಕಲ್ಯಾಣದ ಚಿತ್ರಧ್ವಜ, ಬಭ್ರುವಾಹನದ ಚಿತ್ರಾಂಗದೆ, ಮಂತ್ರಿ, ಕೃಷ್ಣ ಸಂಧಾನದ ವಿದುರ ಮುಂತಾದ ಪಾತ್ರಗಳು ಸೇರಿವೆ.

ಸುಮಾರು ಏಳೆಂಟು ವರುಷ ಇಡಗುಂಜಿ ಮೇಳದಲ್ಲಿ ತಿರುಗಾಟ ಮಾಡಿದ ಮೇಲೆ ವೃತ್ತಿರಂಗದಿಂದ ಹೊರಬಂದು ಹವ್ಯಾಸಿಗಳಾಗಿ ಹಲವು ಮೇಳಗಳಲ್ಲಿ ವೇಷವನ್ನು ಮಾಡಿದ್ದಾರೆ. ಇದರಲ್ಲಿ ಗಡಿಮನೆ ಮೇಳ, ಅಮೃತೇಶ್ವರಿ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಹಾಗೆ ನೋಡಿದರೆ ವೆಂಕಟಾಚಲ ಭಟ್ಟರು ರಂಗನಟರಾಗಿ ಸಾಧಿಸಿದ್ದಕ್ಕಿಂತ ಹೆಚ್ಚು ತಾಳಮದ್ದಲೆಯಲ್ಲಿ ಸಾಧಿಸಿದ್ದರು ಎನ್ನಬಹುದು. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಯಲ್ಲಾಪುರ ಭಾಗದಲ್ಲಿ ತಾಳಮದ್ದಲೆಗೆ ತನ್ನದೇಯಾದ ಸಾಂಸ್ಕೃತಿಕ ಹಿನ್ನಲೆಯನ್ನು ಗುರುತಿಸಬಹುದು. ಭಟ್ಟರು ಈ ಪ್ರದೇಶದಲ್ಲಿ ತಾಳಮದ್ದಲೆಯ ಬಹುಮುಖ್ಯ ಕಲಾವಿದರಾಗಿ ರೂಪುಗೊಂಡಿದ್ದು ಗಮನಿಸಬೇಕಾದ ಅಂಶವಾಗಿದೆ. ಸುಮಾರು ಮೂರು ನಾಲ್ಕು ದಶಕಗಳ ಕಾಲ ತಾಳಮದ್ದಲೆಯ ಆಡುಂಬೊಲವಾಗಿ ಬೆಳೆದಿದ್ದರು.

ಭಟ್ಟರ ಹಲವು ಪಾತ್ರಗಳು ಜನರ ಮನ್ನಣೆಗೆ ಪಾತ್ರವಾಗಿವೆ. ಅದರಲ್ಲಿ ಮುಖ್ಯವಾಗಿ ಪಂಚವಟಿಯ ಶೂರ್ಪನಖಿ, ಕರ್ಣಪರ್ವದ ಕರ್ಣ, ಪಟ್ಟಾಭೀಷೇಕದ ಕೈಕೇಯಿ, ಮಂಥರೆ, ರಾಮನಿರ್ಯಾಣದ ಲಕ್ಷ್ಮಣ, ಭೀಷ್ಮ ಪರ್ವದ ಭೀಷ್ಮ, ಭೀಷ್ಮ ವಿಜಯದ ಅಂಬೆ, ಗದಾಯುದ್ಧದ ಸಂಜಯ, ಕೃಷ್ಣ ಸಂಧಾನದ ವಿದುರ ಮುಂತಾದ ಪಾತ್ರಗಳನ್ನು ಸೇರಿಸಬಹುದು. ಜೊತೆಗೆ ಯಕ್ಷಗಾನದ ಮೇರು ನಟರ ಜೊತೆಯಲ್ಲಿ ವೇದಿಕೆಯನ್ನು ಹಂಚಿಕೊಳ್ಳುವ ಅವಕಾಶ ಅವರಿಗೆ ದೊರಕಿದೆ. ಅವರಲ್ಲಿ ಕೆರೆಮನೆ ಶಿವರಾಮ ಹೆಗಡೆ, ಶೇಣಿ ಗೋಪಾಲಕೃಷ್ಣ ಭಟ್, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಡಾ. ಎಮ್ ಪ್ರಭಾಕರ ಜೋಷಿ, ಕೆರೆಕೈ ಕೃಷ್ಣ ಭಟ್, ಹೊಸ್ತೋಟ ಮಂಜುನಾಥ ಭಾಗವತ್, ಕಡತೋಕ ಮಂಜುನಾಥ ಭಾಗವತ್, ನೆಬ್ಬೂರು ನಾರಾಯಣ ಭಾಗವತ್ , ಆರ್ ಆರ್ ಹೆಗಡೆ ಸಂಕದಮನೆ, ಮಂಜುನಾಥ ಹೆಗಡೆ ಕೊವೇಸರ ಮುಂತಾದವರು ಪ್ರಮುಖರಾಗಿದ್ದಾರೆ. ಭಟ್ಟರು ದೊಡ್ಡ ಖ್ಯಾತಿಯನ್ನು ಹೊಂದಿದ್ದು ಅಂಬೆಯ ಪಾತ್ರದ ಮೂಲಕ ಎನ್ನಬಹುದು. ಅಂಬೆಯ ಪಾತ್ರಕ್ಕೆ ತನ್ನದೇಯಾದ ಖ್ಯಾತಿಯನ್ನು ಹೊಂದಿದ್ದ ಕೆರೆಮನೆ ಗಜಾನನ ಹೆಗಡೆಯವರಿಗೆ ಭಟ್ಟರು ಪ್ರೇರಣೆಯಾಗಿದ್ದು ವಿಶೇಷ ಎನ್ನಬಹುದು. ಅಂಬೆ, ಶೂರ್ಪನಖಿ ಪಾತ್ರಗಳೆಲ್ಲ ಪ್ರಬಲವಾದ ಸ್ತ್ರೀ ಆಶಯವನ್ನು ಬಿತ್ತಿರುವುದನ್ನು ಕಾಣಬಹುದಾಗಿತ್ತು.

ಭಟ್ಟರ ತಾಳಮದ್ದಲೆಯ ಶೈಲಿ, ಅರ್ಥಗಾರಿಕೆಯನ್ನು ಅವಲೋಕಿಸಿದಾಗ, ಅವರು ತಮ್ಮ ಅರ್ಥಗಾರಿಕೆಯಲ್ಲಿ ಶಾಸ್ತ್ರ, ಸುಭಾಷಿತ, ಶ್ಲೋಕ, ಪಾಂಡಿತ್ಯ ಭರಿತ ಮಾತುಗಳು ಇತ್ಯಾದಿಗಳನ್ನು ಬಳಸುತ್ತಿರಲಿಲ್ಲ. ಅವರ ಅರ್ಥಗಾರಿಕೆ ಶೈಲಿ ಸರಳ ಮತ್ತು ಸೂಕ್ಷ್ಮವಾಗಿರುತ್ತ ಸಾಮಾನ್ಯರಿಗೂ ಅರ್ಥವಾಗುವಂತಿರುತ್ತಿತ್ತು. ಜೊತೆಗೆ ತಮ್ಮದೇಯಾದ ಪಾತ್ರ ಚಿಂತನೆಯನ್ನು ಹದವಾಗಿ ಪಾತ್ರಗಳಲ್ಲಿ ಬೆರಸಿ ಅರ್ಥಗಾರಿಕೆಯಲ್ಲಿ ಬಳಸುತ್ತಿದ್ದರು. ಅವರ ಮಾತುಗಳು ತೀಕ್ಷ್ಣ ಮತ್ತು ಮೊನಚಾಗಿರುತ್ತಿತ್ತು. ಉದಾಹರಣೆಗೆ ಪಂಚವಟಿಯ ಲಕ್ಷ್ಮಣ ಪಾತ್ರವನ್ನು ಮಾಡಿ “ಅಣ್ಣ ನಾನು ಹಣ್ಣನ್ನು ಕಚ್ಚಲಿಲ್ಲ. ಕಣ್ಣನ್ನು ಮುಚ್ಚಲಿಲ್ಲ” ಎಂದು ಹೇಳುತ್ತಿದ್ದರು.

ತಾಳಮದ್ದಲೆ ಮತ್ತು ಯಕ್ಷಗಾನದಲ್ಲಿ ಶಾರೀರಕ್ಕೆ ತನ್ನದೇಯಾದ ಸ್ಥಾನವಿದೆ. ಆಡಿದ ಮಾತು ಅದು ಪ್ರೇಕ್ಷಕರ ಅಂತರಂಗವನ್ನು ತಟ್ಟಿತೆಂದರೆ ಕಲಾವಿದ ಗೆದ್ದ ಹಾಗೆ. ಕೆಲವೊಮ್ಮೆ ವಿಷಯಕ್ಕಿಂತ ಪ್ರತಿಪಾದಿಸುವ ಧ್ವನಿ, ಆ ತೀಕ್ಷ್ಣತೆಗಳು ಹೆಚ್ಚು ರಂಗದಲ್ಲಿ ಪರಿಣಾಮವನ್ನು ಒದಗಿಸುತ್ತವೆ. ಅಂತಹ ಶಕ್ತಿ, ಮಾತಿನ ಮಾಧುರ್ಯ ಭಟ್ಟರಲ್ಲಿ ಕಾಣಬಹುದಿತ್ತು. ಸಾಹಿತ್ಯದಲ್ಲಿ ಕಿರಿದೊಳ್ ಪಿರಿದರ್ಥ ಎನ್ನುವಂತೆ ಅವರು ಅರ್ಥಗಾರಿಕೆಯಲ್ಲಿ ಈ ಧೋರಣೆಯನ್ನು ಅನುಸಂಧಾನ ಮಾಡಿಕೊಂಡಿದ್ದರು. ಪಾತ್ರಗಳ ಮಾತಗಳನ್ನು ಬಹು ದೀರ್ಘಮಾಡದೆ, ಸಣ್ಣ ಸಣ್ಣ ಮಾತುಗಳಾಗಿ ತುಂಡರಿಸಿಕೊಳ್ಳುತ್ತ, ನಿರ್ವಹಿಸುತ್ತಿದ್ದರು. ಅವರು ಪಾತ್ರಗಳನ್ನು ಹೆಚ್ಚು ತಾರ್ಕಿಕ ಚಿಂತನೆಗೆ ಒಳಪಡಿಸದೆ, ಅದರ ಭಾವವನ್ನು ಮಾತ್ರ ಪ್ರಚುರಪಡಿಸುತ್ತ ಕಟ್ಟಿಕೊಡುವುದು ಅವರ ಬಗೆಯಾಗಿತ್ತು. ಪುಟ್ಟದಾದ ಆಳ್ತನ. ಹತ್ತು ಜನರ ಮಧ್ಯದಲ್ಲಿ ನಿಂತರೆ ಕಾಣಿಸುವುದು ಕಷ್ಟ ಎನ್ನುವಂತಿದ್ದರೂ ಪ್ರತಿಭೆ ಬಹಳ ಎತ್ತರವಾಗಿತ್ತು. ಶ್ರುತಿಬದ್ಧವಾದ ವಾಗ್ ಜರಿಯ ಪ್ರಭಾವವು ಎದೆಯಲ್ಲಿ ತಲ್ಲಣವನ್ನು ಏರ್ಪಡಿಸುವಂತೆ ಮಾಡುತ್ತಿದ್ದರು. ಅವರದ್ದೆಯಾದ ವಿಶಿಷ್ಟ ಮಾತಿನ ಶೈಲಿ, ಧ್ವನಿಪೂರ್ಣ ಮಾತುಗಾರಿಕೆ, ಪಾತ್ರ ತನ್ಮಯತೆ, ಭಾವಪೂರ್ಣವಾದ ಪ್ರತಿಪಾದನೆ ಹಾಗೂ ಪ್ರತ್ಯುತ್ಪನ್ನಮತಿ ಇವೆಲ್ಲ ಅವರನ್ನು ಉತ್ತಮ ಕಲಾವಿದರನ್ನಾಗಿ ರೂಪಿಸಿವೆ. ಅವರ ಅರ್ಥಗಾರಿಕೆಯಲ್ಲಿ ಚುರುಕು ಮಾತಿನ ಲಯ, ಚುಟುಕು ಹಾಸ್ಯ ಹಾಗೂ ದೇಸೀಯವಾದ ಹೋಲಿಕೆಗಳನ್ನು, ನುಡಿಗಟ್ಟುಗಳನ್ನು ಕಾಣಬಹುದಾಗಿತ್ತು.

ಯಾವುದೇ ಕಲೆಯ ಬೆಳವಣಿಗೆಗೆ ಹೊಸ ಹೊಸ ಪ್ರಯೋಗ, ಹೊಸ ಚಿಂತನೆಗಳು ಅವಶ್ಯವಾಗಿರುತ್ತವೆ. ಕಳೆದ ಒಂದು ಶತಮಾನದಲ್ಲಿ ಯಕ್ಷಗಾನದಲ್ಲಿ ಬಹಳಷ್ಟು ಪ್ರಯೋಗಗಳು ನಡೆದಿವೆ. ಅವೆಲ್ಲ ಹೆಚ್ಚಾಗಿ ಪ್ರಸಂಗ, ರಂಗಸಜ್ಜಿಕೆ ಇತ್ಯಾದಿಗಳ ಬಗ್ಗೆ ಇರುವುದೆ ವಿನಃ ಮಾತಿನ ಧ್ವನಿಯ ಬಗ್ಗೆ ಹೆಚ್ಚು ನಡೆದಿಲ್ಲ ಎನ್ನಬಹುದೇನೋ. ಈ ನಿಟ್ಟಿನಲ್ಲಿ ಭಟ್ಟರು ಪ್ರಯೋಗಶೀಲರಾಗಿ ಈ ವಿಷಯದ ಬಗ್ಗೆ ಕಾರ್ಯವನ್ನು ಮಾಡಿದ್ದಾರೆ. ಹೊರಹೊಮ್ಮುವ ಧ್ವನಿಯ ಪರಿಣಾಮಕ್ಕಾಗಿ ರಂಗದ ಸನ್ನಿವೇಷ ಸಂದರ್ಭಕ್ಕೆ ಅನುಗುಣವಾಗಿ ವ್ಯತ್ಯಾಸವನ್ನು ಮಾಡಿ ಅರ್ಥಗಾರಿಕೆಯನ್ನು ಮಾಡುತ್ತಿದ್ದರು. ಇದಕ್ಕಾಗಿ ಸತತವಾದ ಅಭ್ಯಾಸವನ್ನು ಮಾಡಿಕೊಳ್ಳುತ್ತಿದ್ದರು. ವಾಚಿಕಾಭಿನಯದ ಸಾಧ್ಯತೆಗಳನ್ನು ವಾಚ್ಯಕ್ಕಿಂತ ಸೂಚ್ಯವಾಗಿ ಅರ್ಥವಿಸುತ್ತ ಉದ್ಗಾರಗಳನ್ನು, ಆಂ, ಉಂ ಇತ್ಯಾದಿ ಆಶ್ಬಾದಿಕಗಳನ್ನು ನೈಪುಣ್ಯವಾಗಿ ಬಳಸಿಕೊಳ್ಳುತ್ತ ಅದರ ಮೂಲಕವಾಗಿ ಹೊಸತಾದ ಅರ್ಥ ಮೂಡುವಂತೆ ಮಾಡುತ್ತಿದ್ದರು. ಅವರೇನು ಪಂಡಿತರಲ್ಲ. ಪುರಾಣಗಳ ಅಧ್ಯಯಾನವನ್ನು ಮಾಡಿದವರೂ ಅಲ್ಲ. ಹಾಗಂತ ಹೊಸಗನ್ನಡದ ಅನೇಕ ಕೃತಿಗಳನ್ನು ಓದುತ್ತಿದ್ದರು. ತರಾಸು, ಕೃಷ್ಣಮೂರ್ತಿ ಪುರಾಣಿಕ್ ಮುಂತಾದವರ ಕೃತಿಗಳನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಇಲ್ಲಿ ಕೆನೆದ ಚಿಂತನೆಗಳನ್ನು, ತಮ್ಮ ಜೀವನದ ಅನುಭವಗಳು, ಲೋಕಧರ್ಮಕ್ಕೆ ಅನುಗುಣವಾಗಿ ಪಾತ್ರಗಳನ್ನು ಕಡೆಯುವುದಕ್ಕೆ ಯತ್ನಿಸುತ್ತಿದ್ದರು. ಬಹಳ ಮುಖ್ಯವಾಗಿ ಪ್ರಯೋಗಗಳ ಬಗ್ಗೆ ನಿರೀಕ್ಷೆಯನ್ನು ಹೊಂದುತ್ತಿರಲಿಲ್ಲ. ತಪ್ಪು/ಸರಿ ಎಂದು ಆಲೋಚಿಸದೆ ನಿರ್ಭಯವಾಗಿ ರಂಗದಲ್ಲಿ ಎಲ್ಲವನ್ನೂ ಪ್ರತಿಪಾದಿಸುತ್ತಿದ್ದರು. ಇದು ಕೆಲವೊಮ್ಮೆ ಇದು ಅವರ ಪ್ರತಿಭೆಯನ್ನು ಅಳೆಯುವುದಕ್ಕೆ ಕಷ್ಟವಾಗುತ್ತಿತ್ತು.

(ಯಕ್ಷಗಾನದಲ್ಲಿ ಸ್ವಾರಸ್ಯಗಳು ಭಾಗದಿಂದ)
ಎನ್.ಎಸ್ ಭಟ್ ಬಾಡರವರು ಇವರು ಶಿರಸಿ, ಸಿದ್ದಾಪುರ ಮೊದಲಾಗಿ ಘಟ್ಟದ ಮೇಲಿನ ಭಾಗದಲ್ಲಿ ಜನಪ್ರಿಯ ಅರ್ಥಧಾರಿಗಳಾಗಿದ್ದರು. ತೊಂಭತ್ತರ ದಶಕದಲ್ಲಿ ಕೆರೆಮನೆ ವೆಂಕಟಾಚಲ ಭಟ್ಟರ ಮತ್ತು ಎನ್.ಎಸ್ ಭಟ್ಟರ ಜೋಡಿ ಜನಪ್ರಿಯವಾಗಿತ್ತು. ವೆಂಕಟಾಚಲ ಭಟ್ಟರು ಏನಾದರೊಂದು ವಿಷಯದಲ್ಲಿ ಎದುರಾಳಿ ಅರ್ಥಧಾರಿಯನ್ನು ಕಕ್ಕಾ ಬಿಕ್ಕಿಗೊಳಿಸುವುದರಲ್ಲಿ ಎತ್ತಿದಕೈ. ಒಮ್ಮೆ ಭೀಷ್ಮ ವಿಜಯ ಪ್ರಸಂಗ. ವೆಂಕಟಾಚಲ ಭಟ್ಟರು ಅಂಬೆಯ ಪಾತ್ರ ಹೆಸರುವಾಸಿಯಾಗಿದ್ದರು. ಅಂದು ಬದಲಾವಣೆಗೋಸ್ಕರವಾಗಿ ಅವರು ಭೀಷ್ಮನ ಪಾತ್ರ ಮಾಡಿದ್ದರು. ಎನ್.ಎಸ್ ಭಟ್ ಅವರು ಅಂಬೆಯ ಪಾತ್ರವನ್ನು ನಿರ್ವಹಿಸಿದ್ದರು. “ಕೇಳು ಭೀಷ್ಮಾಚಾರ್ಯ ಬಿನ್ನಪವ” ಪದ್ಯಕ್ಕೆ ಎನ್. ಎಸ್ ಭಟ್ಟರು “ಈ ಅಂಬೆಯ ಮನದಾಳದ ನುಡಿಗಳನ್ನು ಆಲಿಸಬೇಕು ಆಚಾರ್ಯರೇ ..” ಎಂದದ್ದಕ್ಕೆ ವೆಂಕಟಾಚಲರು “ಅಂಬಾ ಎನ್ನುವುದು ನಿನ್ನ ಅಂಕಿತ ನಾಮವೋ ಅಥವಾ ಅನ್ವರ್ಥ ನಾಮವೋ? ಅಂತ ಕೇಳಿದರು. ಸಾವರಿಸಿಕೊಂಡು ಉತ್ತರಿಸಿದ ಎನ್.ಎಸ್ ಭಟ್ ಅವರು ಸಮಯಕ್ಕಾಗಿ ಕಾಯುತ್ತಿದ್ದರು. ನಂತರದಲ್ಲಿ ಭೀಷ್ಮನು “ನನ್ನ ತಮ್ಮ ವಿಚಿತ್ರವೀರ್ಯನಿಗಾಗಿ ನಿಮ್ಮನ್ನು ಗೆದ್ದು ತಂದಿದ್ದೇನೆ” ಎಂದಾಗ ಎನ್.ಎಸ್ ಭಟ್ರು “ನಿಮ್ಮ ತಮ್ಮನಿಗೆ ವಿಚಿತ್ರವೀರ್ಯ ಎನ್ನುವುದು ಅಂಕಿತ ನಾಮವೋ ಅಥವಾ ಅನ್ವರ್ಥ ನಾಮವೋ ? ಎಂದು ಕೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

ಒಮ್ಮೆ ಸುಧನ್ವ ಕಾಳಗದ ತಾಳಮದ್ದಲೆ. ಸುಧನ್ವನ ಪಾತ್ರದಲ್ಲಿ ವೆಂಕಟಾಚಲ ಭಟ್ಟರು, ಅರ್ಜುನನ ಪಾತ್ರದಲ್ಲಿ ಮತ್ತೊಬ್ಬ ಕಲಾವಿದರು ಅರ್ಥವನ್ನು ಹೇಳುತ್ತಿದ್ದರು. ಅರ್ಜುನ ಪಾತ್ರಧಾರಿ ಸುಧನ್ವನಲ್ಲಿ “ನೋಡು ಸುಧನ್ವ, ಹಸ್ತಿನಾವತಿಯ ನಮ್ಮ ಗೋ ಶಾಲೆಯಲ್ಲಿರುವ ದನಗಳನ್ನು ಚಂಪಾಕವತಿಯಲ್ಲಿ ಬಿಟ್ಟರೆ ಅವು ಮೇಯುವುದಕ್ಕೂ ಈ ಪ್ರದೇಶ ಸಾಲವುದಿಲ್ಲ. ಅಷ್ಟು ಸಣ್ಣ ಪ್ರದೇಶ ನಿಮ್ಮದು” ಎಂದು ಅಣಕಿಸುವ ಧ್ವನಿಯಲ್ಲಿ ಹೇಳಿದರಂತೆ. ಅದಕ್ಕೆ ವೆಂಕಟಾಚಲ ಭಟ್ಟರು ತಕ್ಷಣವೇ “ನೀ ದನ ಹೊಡೆದುಕೊಂಡು ಬಾರ, ನಾನು ಬ್ಯಾಣ ತೋರಿಸುತ್ತೇನೆ” ಎಂದಾಗ ಇಡೀ ಸಭೆ ನಗೆಯಾಡಿತಂತೆ.

ಒಮ್ಮೆ ಬಡವನೊಬ್ಬ ತನ್ನ ಹರಕೆಗಾಗಿ ಊರಿನ ದೇವಸ್ಥಾನದಲ್ಲಿ ಬಯಲಾಟವನ್ನು ಏರ್ಪಡಿಸಿದ್ದ. ವೇಷ ಮಾಡುವುದಕ್ಕೆ ಹಲವಾರು ಪ್ರಖ್ಯಾತ ಕಲಾವಿದರಿಗೆ ಆತ ಹೇಳಿದ್ದನಾದರೂ ಕೆಲವೇ ಮಂದಿ ಮಾತ್ರ ಆ ಕಾರ್ಯಕ್ರಮಕ್ಕೆ ಬಂದಿದ್ದರು. ಸಂಘಟಕರಿಗೆ ಆ ಕೊನೆಯ ಕ್ಷಣದಲ್ಲಿ ಕಲಾವಿದರಿಲ್ಲದೆ ಪಾತ್ರಗಳ ಹಂಚಿಕೆಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಡೀ ಕಾರ್ಯಕ್ರಮವೇ ನಿಲ್ಲುವ ಸ್ಥಿತಿಗೆ ಬಂದಿತ್ತು. ಈ ವಿಷಯ ಭಟ್ಟರಿಗೆ ತಿಳಿಯಿತು. ಯಾವುದೇ ಕಾರಣಕ್ಕೂ ಯಕ್ಷಗಾನ ನಿಲ್ಲಬಾರದು ತಾನಿದ್ದೇನೆ ಎಂದು ಹೇಳುತ್ತ, ರಾತ್ರಿ ಬೆಳಗಿನವರೆಗೆ ಮೂರು ನಾಲ್ಕು ವೇಷಗಳನ್ನು ಮಾಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟಿದ್ದರು.

ವೆಂಕಟಾಚಲ ಭಟ್ಟರ ಬದುಕು ವಿಕ್ಷಿಪ್ತವಾದುದು ಎನ್ನಬಹುದು. ರಂಗದಲ್ಲಿ ಯಾವ ಪಾತ್ರವನ್ನೂ ಆ ಕ್ಷಣದಲ್ಲಿ ಕಟ್ಟಿ ನಿಲ್ಲಿಸುವ ಚಾಣಕ್ಷತೆಯನ್ನು ಹೊಂದಿದ್ದರು ಎನ್ನುವುದು ಎಷ್ಟು ಸತ್ಯವಾಗಿತ್ತೋ ಅಷ್ಟೇ ಪ್ರಮಾಣದಲ್ಲಿ ಪಾತ್ರವನ್ನು ಹಾಳು ಮಾಡುವುದಕ್ಕೂ ಕಾರಣರಾಗಿರುತ್ತಿದ್ದರು. ಅದಕ್ಕೆ ಯಾವ ಪೂರ್ವಗ್ರಹವು ಇರಲಿಲ್ಲ. ಆ ಕ್ಷಣದ ಭಾವ ಎಂಬುದನ್ನು ಅವರ ಒಡನಾಡಿಗಳು ಹೇಳುತ್ತಾರೆ. ಈ ಅಸಂಗತ ವಿಷಯ ಅವರ ನಿಜ ಜೀವನಕ್ಕೂ ಅಂಟಿತ್ತು ಎನ್ನಬಹುದು. ಒಮ್ಮೆ ಊರಿನ ಗಣ್ಯರ ಮನೆಯಲ್ಲಿ ಸುಧನ್ವ ಕಾಳಗ ತಾಳಮದ್ದಲೆ. ಹಂಸಧ್ವಜನ ಪಾತ್ರಧಾರಿ ’ಸುಧನ್ವ’ ನನ್ನ ಹಿರಿಯ ಮಗ ಎಂದು ಅರ್ಥದಲ್ಲಿ ಹೇಳಿದರಂತೆ. ಆದರೆ ವೆಂಕಟಾಚಲ ಭಟ್ಟರು ಮಾತ್ರ ’ಸುಧನ್ವ’ ಹಂಸಧ್ವಜನ ಎರಡನೇ ಮಗ ಎಂಬ ವಾದವನ್ನು ಮುಂದಿಟ್ಟು ಮಾತನಾಡಿದರಂತೆ(ಪದ್ಯದಲ್ಲಿ ಸುರಥ, ಸುಧನ್ವ ಎಂದು ಹೇಳಿದ್ದರ ನೆಲೆಯಲ್ಲಿ). ಅವತ್ತು ತಾಳಮದ್ದಲೆ ಅಲ್ಲಿಗೆ ಮುಗಿದಿತ್ತು. ಆದರೆ ಮರುದಿನ ಬೆಳಗ್ಗೆ ತಿಂಡಿಯಲ್ಲಿ ಹಂಸಧ್ವಜನ ಪಾತ್ರಧಾರಿಗೆ ಹಾಗೂ ವೆಂಕಟಾಚಲ ಭಟ್ಟರಿಗೆ ’ಸುಧನ್ವ’ ಹಂಸಧ್ವಜನ ಎಷ್ಟನೇ ಮಗ ಎಂಬ ವಿಷಯದ ಬಗ್ಗೆ ದೊಡ್ಡ ಜಗಳವೇ ಏರ್ಪಟ್ಟಿತಂತೆ. ಬೇಸರಗೊಂಡ ಮನೆಯವರು ಪ್ರತಿ ವರುಷ ಮಾಡುತ್ತಿದ್ದ ತಾಳಮದ್ದಲೆಯನ್ನು ಈ ಗಲಾಟೆಯ ಕಾರಣದಿಂದ ಮತ್ತೆ ಮಾಡುವುದನ್ನೆ ನಿಲ್ಲಿಸಿದರಂತೆ. ಕೊನೆಗೆ ವೆಂಕಟಾಚಲ ಭಟ್ಟರಲ್ಲಿ ಆ ಪಶ್ಚಾತಾಪ ಶಾಶ್ವತವಾಗಿ ಮಡುಗಟ್ಟಿತ್ತು.

ಸಂಸಾರವನ್ನು ಕಟ್ಟಿಕೊಳ್ಳಲು ಬಯಸದ ಭಟ್ಟರು ಮದುವೆಯಾಗದೆ ಹಾಗೆ ಉಳಿದರು. ತಮ್ಮ ಪಾಲಿಗೆ ಬಂದಿದ್ದ ಆಸ್ತಿಯನ್ನು ಮಾರಿ ಅಲೆಮಾರಿ ಜೀವನವನ್ನು ನಡೆಸಿದರು. ಅನೇಕ ಕಡೆಗಳಲ್ಲಿ ವಲಸೆ ಹೋಗುತ್ತ, ಆ ಪ್ರದೇಶದ ಯಕ್ಷಗಾನ ಆಸಕ್ತರಿಗೆ ಪ್ರೇರಕರಾಗಿ ಕಲಿಸುತ್ತಿದ್ದರು. ಸೋಮಸಾಗರ, ದಂಟಕಲ್, ಹೊಸಗದ್ದೆ, ಹೆಗ್ಗರಣೆ, ಹಾರ್ಸಿಕಟ್ಟೆ, ಗೋಕರ್ಣ ಹೀಗೆ ಹಲವು ಪ್ರದೇಶಗಳನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡು ನೂರಾರು ಮಂದಿಗೆ ತಮಗೆ ತಿಳಿದಿರುವುದನ್ನು ಕಲಿಸಿಕೊಟ್ಟಿದ್ದಾರೆ. ಒಂದು ಹಂತದಲ್ಲಿ ಅವರು ಕಂಡ ಯಕ್ಷಗಾನದ ಕನಸುಗಳು ಸಂಪೂರ್ಣ ತೃಪ್ತಿಹೊಂದದೆ ಇರುವುದಕ್ಕೆ ಮನಸ್ಸನ್ನು ದುರ್ಧರವಾಗಿಸಿಕೊಂಡಿದ್ದರು. ತಮ್ಮೊಳಗಿನ ದುಗುಡ ದುಮ್ಮಾನಗಳನ್ನು ಮರೆಯಲು ವ್ಯಸನಕ್ಕೆ ತುತ್ತಾದರು. ಎರಡೆರಡು ಬಾರಿ ಸಾವಿನ ಹತ್ತಿರಕ್ಕೆ ಹೋಗಿ ಬಂದಿದ್ದರು. ಆದರೆ ಕೆಲವು ಸಮಯದ ನಂತರ ಕವಿದಿದ್ದ ವಿಸ್ಮೃತಿಯನ್ನು ಕಳೆದುಕೊಂಡು ಸಹಜತೆಗೆ ಮರಳಿದ್ದರು. ಆ ಸಮಯದಲ್ಲಿ ಅವರಿಗೆ ಸಿಕ್ಕ ಮನ್ನಣೆ ಆದರಣೆಗಳು ಬದುಕಿಗೊಂದು ಧನ್ಯತೆಯನ್ನು ಉಂಟು ಮಾಡಿತ್ತು. ಏಕಪಾತ್ರಭಿನಯದಲ್ಲಿಯೂ ಸಿದ್ಧಹಸ್ತರಾಗಿದ್ದ ಅವರು ಪಾಂಡೇಶ್ವರ ಗಣಪತಿ ವಿರಚಿತ ಬೊರಾವತಾರ ಪ್ರಸಂಗವನ್ನು ಹಲವು ಕಡೆಗಳಲ್ಲಿ ಪ್ರದರ್ಶಿಸಿದ್ದಾರೆ. ಕರ್ಣಪರ್ವ ಪ್ರಸಂಗ ಸಂಪಾದನೆಯನ್ನು ಸಹ ಅವರು ಮಾಡಿಕೊಟ್ಟಿದ್ದಾರೆ.

ಅವರಿಗೆ ಬದುಕಿನ ಬಗ್ಗೆ ವ್ಯಾವೋಹ ಇರಲಿಲ್ಲ. ಹವ್ಯಾಸ ವ್ಯಸನ, ಚಂಚಲ ಸ್ವಭಾವ ಮುಂತಾದವುಗಳು ಅವರಲ್ಲಿದ್ದರು ಕೂಡ ಯಕ್ಷಗಾನಕ್ಕೆ ತನ್ನನ್ನು ಅರ್ಪಿಸಿಕೊಳ್ಳುವ ಗುಣ, ಷರತ್ತುಗಳಿರದ ನಿರ್ವ್ಯಾಜ್ಯ ಪ್ರೀತಿ, ಹೃದಯವಂತಿಕೆ ಅವರಲ್ಲಿ ಅಧಿಕವಾಗಿತ್ತು. ಅವರ ಆರೋಗ್ಯ ಸರಿಯಾಗಿ ಇಲ್ಲದೇ ಇರುವ ಸಂದರ್ಭದಲ್ಲಿ ಯಾರಾದರೂ ಬಂದು ಅವರಲ್ಲಿ “ಹೇಗಿದ್ದೀರಾ?” ಎಂದು ಕೇಳಿದರೆ “ಆರಾಮಾಗಿದ್ದೇನೆ. ಸ್ವಲ್ಪ ಲೋ ಬಿ.ಪಿ, ಸ್ವಲ್ಪ ಕಸ ಇದೆ, ಹಾರ್ಟಿನದ್ದು ಸ್ವಲ್ಪ ತೊಂದರೆ ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ. ನಾನು ಆರಾಮ್ ಆಗಿಯೇ ಇದ್ದೇನೆ” ಎಂದು ಲಘುವಾಗಿ ಹೇಳಿ ಮುಗಿಸುತ್ತಿದ್ದರು. 1998ರಲ್ಲಿ ಸಿದ್ದಾಪುರದ ಇಟಗಿಯಲ್ಲಿ ಹೊಸತಾಗಿ ಪ್ರಾರಂಭಿಸಿದ ’ಯಕ್ಷಗಾನ’ ಪತ್ರಿಕೆಯ ಬಿಡುಗಡೆ ಆಯೋಜನೆಗೊಂಡಿತ್ತು. ಸಂಘಟಕರು ಆ ಸಮಾರಂಭಕ್ಕೆ ವಾಲಿ ವಧೆ ತಾಳಮದ್ದಲೆಯನ್ನು ಆಯೋಜಿಸಿದ್ದರು. ಅದಕ್ಕೆ ಭಟ್ಟರ ಸುಗ್ರೀವ ಪಾತ್ರವೆಂದು ನಿಗಧಿಯಾಗಿತ್ತು. ಆದರೆ ಅಲ್ಲಿ ನಡೆದಿದ್ದು ಬೇರೆಯೇ. ಆ ಕಾರ್ಯಕ್ರಮದ ಹಿಂದಿನ ದಿನ ಭಟ್ಟರು ಹೃದಯಾಘಾತದಿಂದ ತಮ್ಮ 63ನೇ ವಯಸ್ಸಿಗೆ ಈ ಲೋಕದ ಯಾತ್ರೆಯನ್ನು ಮುಗಿಸಿ ಬಿಟ್ಟಿದ್ದರು. ತಮ್ಮ ಪ್ರಿಯವಾದ ಪಾತ್ರ ಸುಗ್ರೀವನ ಪಾತ್ರವನ್ನು ಮಾಡದೆ ಈ ಬದುಕೆಂಬ ರಂಗಭೂಮಿಯ ಪಾತ್ರವೊಂದನ್ನು ಕಳಚಿಕೊಂಡಿದ್ದರು.

ಅವರನ್ನು ಕಳೆದುಕೊಂಡು ಹಲವು ವರುಷಗಳೇ ಸಂದಿದ್ದರೂ ಅವರ ನೆನಪು ಅವರ ಅಭಿಮಾನಿಗಳಲ್ಲಿ, ಶಿಷ್ಯರಲ್ಲಿ ಇನ್ನೂ ಕಾಡುತ್ತಿವೆ. ಅವರ ನೆನಪನ್ನು ಶಾಶ್ವತವಾಗಿಸುವ ದೃಷ್ಟಿಯಿಂದ ಶ್ರೀ ವ್ಯಾಸನ್ಯಾಸ(ರಿ), ಸೋಮಸಾಗರ ಎಂಬ ಸಂಸ್ಥೆಯ ಮೂಲಕವಾಗಿ ವಿವಿಧ ಕಾರ್ಯಕ್ರಮಗಳನ್ನು ಪ್ರತಿವರುಷವೂ ಮಾಡುತ್ತಿರುವುದು ವಿಶೇಷವಾಗಿದೆ. ಜೊತೆಗೆ ಅವರ ಹೆಸರಿನಲ್ಲಿ ಯಕ್ಷಗಾನದ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಔಚಿತ್ಯವೆನಿಸುತ್ತಿದೆ. ಅವರ ಅರ್ಥಗಾರಿಕೆಯ ಹಲವು ಪಾತ್ರಗಳನ್ನು ಆಡಿಯೋ ರೂಪದಲ್ಲಿ ದಾಖಲಿಸಿ ಮುಂದಿನ ತಲೆಮಾರಿಗೆ ಅವರ ನೆನಪನ್ನು ಉಳಿಸಿದ್ದಾರೆ.

ಈ ಲೋಕದಲ್ಲಿ ಎಲ್ಲರ ಬದುಕೆಂಬುದು ನರ್ತನವಿದ್ದಂತೆ. ಅಲ್ಲಿ ವಿಕ್ಷಿಪ್ತ, ಪರಿತ್ಯಕ್ತ, ಹತಾಶೆ, ನೋವು , ನಲಿವು, ಸಂತೋಷ, ದುಖಃ ಹಲವು ಭಾವಗಳು, ರಸಗಳ ಸಮ್ಮೀಳಿತವಾಗಿರುತ್ತವೆ. ಅದು ವ್ಯಕ್ತಿ ಭಾವ ಮತ್ತು ಅವನ ವ್ಯಕ್ತಿತ್ವಕ್ಕೆ ಅನುಗುಣವಾಗಿ ವ್ಯಥಯವನ್ನು ಹೊಂದಿರುತ್ತದೆ. ಇಂತಹ ಹಲವು ಭಾವಗಳನ್ನು ಬದುಕಿನುದ್ದಕ್ಕೂ ವೆಂಕಟಾಚಲ ಭಟ್ಟರು ಅನುಭವಿಸಿದ್ದಾರೆ. ಆದರೂ ಯಕ್ಷಗಾನದ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ. ಭಟ್ಟರ ತಾಳಮದ್ದಲೆಯ ಶೈಲಿ ಅಧ್ಯಯನಕ್ಕೆ ಯೋಗ್ಯವಾಗಿದೆ. ಇಂದು ಯಕ್ಷಗಾನ ಹಾಗೂ ತಾಳಮದ್ದಲೆಗಳ ಪ್ರಾದೇಶಿಕ ಭಿನ್ನತೆ, ಮಟ್ಟು, ತಿಟ್ಟುಗಳು ವ್ಯತ್ಯಾಸವೆಲ್ಲವು ಕಳೆದುಹೋಗುತ್ತ ಏಕರೂಪವನ್ನು ಹೊಂದುತ್ತಿರುವುದು ಗಮನಿಸಬೇಕಾದ ಅಂಶವಾಗಿದೆ. ಆದರೆ ಉತ್ತರಕನ್ನಡ ಜಿಲ್ಲೆಯ ತಾಳಮದ್ದಲೆಯ ಭಾಷೆ ಮತ್ತು ಭಾವಕ್ಕೆ ತನ್ನದೇಯಾದ ಪ್ರತ್ಯೇಕತೆ ಇರುವುದನ್ನು ಗಮನಿಸಬೇಕಿದೆ. ಇದನ್ನು ಭಟ್ಟರ ಅರ್ಥಗಾರಿಕೆಯಲ್ಲಿ ಸಮರ್ಥವಾಗಿ ಕಾಣಲು ಸಾಧ್ಯವಾಗುತ್ತದೆ. ಇಂತಹ ಅಪರೂಪದ ಸಾಧನೆಯನ್ನು ಮಾಡಿರುವ ವೆಂಕಟಾಚಲ ಭಟ್ಟರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತ ಅವರ ಚೇತನಕ್ಕೆ ನಮ್ಮ ನಮನಗಳನ್ನು ಸಲ್ಲಿಸೋಣ.

ಆಕರ: ಡಾ|| ವಿಜಯನಳಿನಿ ರಮೇಶ್ ಅವರ ತಾಳಮದ್ದಲೆ, ಡಾ.ರಾಮಕೃಷ್ಣ ಜೋಶಿಯವರ ’ಇಡಗುಂಜಿ ಮೇಳ’, 1998ರಲ್ಲಿ ಪ್ರಕಟವಾದ ’ಯಕ್ಷಗಾನ’ ಮಾಸ ಪತ್ರಿಕೆ,

ಮಾಹಿತಿ ಸಹಕಾರ: ಡಾ.ಎಮ್. ಪ್ರಭಾಕರ ಜೋಷಿ, ಶ್ರೀ ವಿದ್ವಾನ್ ಉಮಾಕಾಂತ್ ಭಟ್, ಶ್ರೀ ರಮಾಕಾಂತ್, ಶ್ರೀ ದಿವಾಕರ ಹೆಗಡೆ ಕೆರೆಹೊಂಡ, ಶ್ರೀ ದತ್ತು ಸೋಮಸಾಗರ, ಶ್ರೀ ಎಮ್.ಆರ್ ಹೆಗಡೆ , ಶ್ರೀ ರಾಜಶೇಖರ ಹೆಗಡೆ ಜೋಗಿಮನೆ, ಶ್ರೀ ವಿನಾಯಕ ಹೆಗಡೆ, ಶ್ರೀಮತಿ ಬಕುಳ ಹೆಗಡೆ, ಶ್ರೀ ವಸಂತ್ ಭಟ್, ಕುಮಟ, ಶ್ರೀ ದಿನೇಶ್ ಉಪ್ಪೂರ

  • ರವಿ ಮಡೋಡಿ, ಬೆಂಗಳೂರು
error: Content is protected !!
Share This