
ಯಕ್ಷಗಾನದ ದಶಾವತಾರಿ ಎಂದೇ ಖ್ಯಾತರಾಗಿದ್ದ ಸಾರ್ವಕಾಲಿಕ ಶ್ರೇಷ್ಠ ಕಲಾವಿದ ಸೂರಿಕುಮೇರಿ ಗೋವಿಂದ ಭಟ್ (88) ನಿನ್ನೆ ತೀರ್ಥಹಳ್ಳಿಯ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು. ಅವರು ಮೂವರು ಪುತ್ರರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಬಂಟ್ವಾಳ ತಾಲೂಕಿನ ಕುಕ್ಕೆಮನೆಯ ಶಂಕರನಾರಾಯಣ ಭಟ್ ಮತ್ತು ಲಕ್ಷ್ಮಿಅಮ್ಮ ದಂಪತಿ ಪುತ್ರರಾದ ಇವರು ಹನ್ನೊಂದರ ಕಿರು ಹರೆಯದಲ್ಲೆ ಯಕ್ಷರಂಗ ಪ್ರವೇಶಿಸಿ ಏಳು ದಶಕಗಳ ಸುದೀರ್ಘ ಕಲಾಸೇವೆಯನ್ನು ಗೈದಿದ್ದಾರೆ. ಯಕ್ಷಗಾನದ ಸೀಮಾಪುರುಷ ಕುರಿಯ ವಿಠಲ ಶಾಸ್ತ್ರಿಗಳ ಶಿಷ್ಯರಾಗಿ ಮುಂದೆ ಪರಮಶಿವನ್ ಅವರಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿ ಯಕ್ಷಗಾನದ ನೃತ್ಯ ವಿಭಾಗದಲ್ಲಿ ಔನ್ನತ್ಯವನ್ನು ಸಾಧಿಸಿದರು. ಯಕ್ಷಗಾನದ ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಈ ನಾಲ್ಕೂ ಅಂಗಗಳಲ್ಲಿ ಸಿದ್ಧಿ – ಪ್ರಸಿದ್ಧಿ ಪಡೆದಿದ್ದ ಈ ಅನನ್ಯ ಕಲಾವಿದ ಬಡಗು ತಿಟ್ಟಿನಲ್ಲೂ ವೇಷಮಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. ಧರ್ಮಸ್ಥಳ ಮೇಳವೊಂದರಲ್ಲೇ ಐದುವರೆ ದಶಕಗಳ ತಿರುಗಾಟ ನಡೆಸಿದ್ದರು. ಮುಲ್ಕಿ, ಕೂಡ್ಲು, ಇರಾ, ಸುರತ್ಕಲ್ ಮೇಳಗಳಲ್ಲೂ ಕಲಾಸೇವೆ ಸಲ್ಲಿಸಿದ್ದರು. ಸ್ತ್ರೀವೇಷ, ಪುಂಡುವೇಷ, ರಾಜವೇಷ, ಹಾಸ್ಯ, ಬಣ್ಣ ಹೀಗೆ ಎಲ್ಲಾ ಪ್ರಕಾರದ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿ, ದೀರ್ಘಕಾಲ ನಾಯಕ- ಪ್ರತಿನಾಯಕ ಪಾತ್ರಗಳ ಮೂಲಕ ಕಲಾರಸಿಕರಿಗೆ ಸಂತೋಷ ನೀಡಿದ್ದರು. ಧರ್ಮಸ್ಥಳ ಕೇಂದ್ರವೂ ಸೇರಿದಂತೆ ಹಲವು ಕಡೆಗಳಲ್ಲಿ ಆಸಕ್ತರಿಗೆ ಯಕ್ಷಗಾನ ತರಬೇತಿ ನೀಡಿ ನೂರಾರು ಶಿಷ್ಯರನ್ನು ಈ ಕ್ಷೇತ್ರಕ್ಕೆ ತಂದ ಹೆಗ್ಗಳಿಕೆ ಇವರದು. ತಮ್ಮ ಅಸಾಧಾರಣ ವಾಗ್ವೖಖರಿಯಿಂದ ಆಟದಂತೆ ಕೂಟದಲ್ಲೂ ಸಮರ್ಥ ಅರ್ಥಧಾರಿಯಾಗಿ ಸ್ಥಾಪಿಸಿಕೊಂಡಿದ್ದರು. ಮಣಿ ಮೇಖಲೆ, ಕನಕ ರೇಖೆ, ಕಾವೇರಿ ಮಹಾತ್ಮೆಯೂ ಸೇರಿದಂತೆ ಏಳೆಂಟು ಪ್ರಸಂಗಗಳನ್ನು ರಚಿಸಿದ್ದರು. ಯಕ್ಷಗಾನದ ಮೇರು ಕಲಾವಿದ ಗೋವಿಂದ ಭಟ್ಟರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಬಂದಿದ್ದವು. ಸೋದೆ ಮಠಾಧೀಶ ಶ್ರೀಶ್ರೀ ವಿಶ್ವವಲ್ಲಭ ತೀರ್ಥರ ಪ್ರಥಮ ಪರ್ಯಾಯ ಸಂದರ್ಭದಲ್ಲಿ ಉಡುಪಿಯ ಅವರ ಅಭಿಮಾನಿ ಬಳಗ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಒಂದು ವಾರ ‘ಗೋವಿಂದ ವೈಭವ’ ನಡೆಸಿ ಅವರ ಪ್ರಸಿದ್ಧ ವೇಷಗಳ ದಾಖಲೀಕರಣದೊಂದಿಗೆ ಅವರ ಅಮೃತ ವರ್ಷವನ್ನು ಔಚಿತ್ಯಪೂರ್ಣವಾಗಿ ಆಚರಿಸಿತ್ತು. ಸಂಸ್ಥೆ ಅವರಿಗೆ ‘ಯಕ್ಷಗಾನಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿದೆ. ಸಂಸ್ಥೆ ಪ್ರತೀವರ್ಷ ನೆಡೆಸುವ ಕಲಾವಿದರ ಸಮಾವೇಷಕ್ಕೆ ತಪ್ಪದೆ ಹಾಜರಾಗುತ್ತಿದ್ದರು. ಮಹಾನ್ ಕಲಾವಿದರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಸ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
