• ಡಾ.ತಾರಾನಾಥ ವರ್ಕಾಡಿ

ಸುಮಾರು ಏಳು ದಶಕಗಳಿಗಿಂತಲೂ ಹೆಚ್ಚಿನ ಕಾಲ ರಂಗಸ್ಥಳದಲ್ಲಿ ಮೆರೆದ ಮಹಾನ್ ಕಲಾವಿದ ಕೆ. ಗೋವಿಂದ ಭಟ್ ನಮ್ಮ ನಡುವಿನಿಂದ ಎದ್ದು ಹೋಗಿದ್ದಾರೆ. ಯಕ್ಷರಂಗದ ಸಮಗ್ರತೆಯ ಸಂಕೇತವಾಗಿದ್ದ ಮೇರು ಕಲಾವಿದನ ಯುಗಾಂತ್ಯವಾಗಿದೆ. ಶ್ರೀ ಧರ್ಮಸ್ಥಳ ಮೇಳ ಒಂದರಲ್ಲೇ ಸುಧೀರ್ಘ 55 ವರ್ಷಗಳ ಕಾಲ ತಿರುಗಾಟ ಮಾಡಿದ ಕೆ. ಗೋವಿಂದ ಭಟ್, ಮೂಲ್ಕಿ, ಕೂಡ್ಲು, ಕುಂಡಾವು, ಸುರತ್ಕಲ್ ಮುಂತಾದ ಕೆಲವು ಮೇಳಗಳಲ್ಲೂ ತಿರುಗಾಟ ಮಾಡಿದ್ದಾರೆ. ತುಳು – ಕನ್ನಡ, ಪೌರಾಣಿಕ – ಕಾಲ್ಪನಿಕ, ತೆಂಕು – ಬಡಗು… ಹೀಗೆ ಎಲ್ಲಾ ಜಾತಿಯ ಪ್ರಸಂಗಗಳಲ್ಲೂ, ಎಲ್ಲಾ ತಿಟ್ಟುಗಳಲ್ಲೂ ಪಾತ್ರಗಳನ್ನು ನಿರ್ವಹಿಸಿದ ಹಿರಿಯ ಅನುಭವಿ ಕಲಾವಿದರಾದ ಇವರು, ತಾಳಮದ್ದಳೆಯ ಅರ್ಥದಾರಿಗಳಾಗಿಯೂ ತಮ್ಮ ವಾಗ್ವಿಲಾಸದಿಂದ ಪ್ರಸಿದ್ದರು.

ಶ್ರೇಷ್ಠ ಕಲಾವಿದ ಕೆ. ಗೋವಿಂದ ಭಟ್

ವೈಶಂಪಾಯನ ಸರೋವರದಿಂದ ಮೇಲೇಳುವ ಕೌರವ, ಶಿವನನ್ನು ನಿಂದಿಸುವ ದಕ್ಷ, ವಸಿಷ್ಠನ ಮುಂದೆ ಪ್ರತಿಜ್ಞಾ ಬದ್ಧನಾಗುವ ಕೌಶಿಕ, ಭೂದೇವಿಯನ್ನು ತುಡುಕುವ ಹಿರಣ್ಯಾಕ್ಷ, ದೀಕ್ಷೆಯನ್ನು ಬಿಸುಟೇಳುವ ಇಂದ್ರಜಿತು, ತ್ರಿಶಂಕುವನ್ನು ಸ್ವರ್ಗಕ್ಕೇರಿಸುವ ವಿಶ್ವಾಮಿತ್ರ, ಸ್ಯಮಂತಕ ರತ್ನವನ್ನು ಉಳಿಸಿಕೊಳ್ಳಲು ಹೋರುವ ಜಾಂಬವ, ಶ್ರೀ ಕೃಷ್ಣನನ್ನು ಪಚಾರಿಸುವ ಮಾಗದ… ಹೀಗೆ ಹಲವಾರು ವೇಷಗಳು ಕಣ್ಣೆದುರು ಕುಣಿಯುತ್ತವೆ. ರಾಜವೇಷದ ಸ್ಪಷ್ಟ ರೂಪ ಹೊಂದಿರುವ ಅಂಗ ಸೌಷ್ಠವ, ವೇಷದ ಸೌಂದರ್ಯ ಮತ್ತು ಪ್ರಖರತೆಗಳಿಂದ ವೀರಾವೇಶದ ಅವರ ರಾಜವೇಷಗಳು ಸಾಟಿಯಿಲ್ಲದ್ದು. ಈ ಸಂದರ್ಭದಲ್ಲಿ ಅವರೊಳಗಿನ ಅನೂಹ್ಯ ಪ್ರತಿಭೆಯ ಕಲಾವಿದನನ್ನು ನೆಗಹಿ ತೋರಿದ ಕಡತೋಕಾ ಮಂಜುನಾಥ ಭಾಗವತರನ್ನು ಸ್ಮರಿಸಲೇಬೇಕು.

ರಾತ್ರಿಯಿಂದ ಬೆಳಗಿನ ತನಕ ಕೆಲವು ವೇಷಗಳನ್ನು ಕಟ್ಟಿ, ಅವುಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಆಯಾಸವೆಂದರೆ ಏನೆಂಬುದೇ ಅರಿಯದ ಕುಣಿತ, ಕಂಚಿನ ಕಂಠದಿಂದ ಹೊರಹೊಮ್ಮುತ್ತಿದ್ದ ಅರ್ಥಗಾರಿಕೆ ಎಂದರೆ ಒಮ್ಮೆಗೆ ಪ್ರೇಕ್ಷಕರ ನಿದ್ದೆ ಬಿಟ್ಟೋಡಬೇಕು. ವಿದ್ವಾಂಸರೇ ಬೆರಗಾಗುವಂತಹ ಕಾವ್ಯ ಶೈಲಿಯ ಪ್ರೌಢ ಮಾತುಗಾರಿಕೆ, “ಪುರಾಣದ ರಮ್ಯಾದ್ಭುತ ಪಾತ್ರಗಳ ಮಾತುಗಾರಿಕೆ ಕೆ. ಗೋವಿಂದ ಭಟ್ಟರ ಮಾತಿನಂತಿರಬೇಕು” ಎಂದು ದಾಮೋದರ ಮಂಡೆಚ್ಚರೇ ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. ನಿರಂತರ ಓದಿನಿಂದ ಪರಿಪಕ್ವಗೊಂಡ ಅವರ ರಂಗಸ್ಥಳದ ಭಾಷೆ ಅನುಪಮವಾದದ್ದು. ಆಳಿನಿಂದ ಅರಸನ ತನಕ ಎಲ್ಲಾ ಜಾತಿಯ ಪಾತ್ರಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದ ಇಂತಹ ಯಕ್ಷಗಾನ ನಟಸಾರ್ವಭೌಮನನ್ನು ನಾನು ಕಂಡಿಲ್ಲ. ಅಳಿಕೆ ರಾಮಯ ರೈಗಳು “ನನ್ನ ನಂತರ ರಂಗಸ್ಥಳವನ್ನು ಈ ಮಾಣಿಯೇ ಬೆಳಗುತ್ತಾನೆ” ಎಂದು ಅಂದೇ ಹೇಳಿದ್ದರಂತೆ.

ತಿದ್ದಿ ತೀಡಿದ ಅಚ್ಚುಕಟ್ಟಾದ ಕುಣಿತ, ಶಾಸ್ತ್ರೀಯ – ಲೌಕಿಕಗಳೆರಡೂ ಬೆರೆತ ಅಪ್ರತಿಮ ಅಭಿನಯ ಕೌಶಲ. ನಿಂತದ್ದೇ ಭಂಗಿ, ಕಾಲಿಟ್ಟದ್ದೆ ಹೆಜ್ಜೆ. ಅಪೂರ್ವ ಲಯ ಜ್ಞಾನ. ಎಂತಹ ವಾಕ್ಪಟುವನ್ನು ಬಾಯಿ ಮುಚ್ಚಿಸುವ ತರ್ಕ ಕೌಶಲ. ಎಳ್ಳಿನಿತೂ ವಿಕಾರವಿಲ್ಲದ ಸರ್ವಾಂಗ ಸುಂದರ ವೇಷ. ಕಲಾನಿಷ್ಠೆ, ಪಾತ್ರನಿಷ್ಠೆ, ಮೇಳನಿಷ್ಠೆ, ಮುಪ್ಪುರಿಗೊಂಡ ಮೂರ್ತರೂಪಕ್ಕೆ ಇನ್ನೊಂದು ಹೆಸರೇ ಕೆ. ಗೋವಿಂದ ಭಟ್. ಅನಗತ್ಯ ಹರಟೆಗೆ ಅವರಲ್ಲಿ ಅವಕಾಶವಿಲ್ಲ. ಮೌನಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಬಿಡಾರದಲ್ಲಿ, ಚೌಕಿಯಲ್ಲಿ ಗಂಟೆಗಟ್ಟಲೆ ಧ್ಯಾನ, ಪಾರಾಯಣ, ಜಪ, ಪ್ರಾಣಾಯಾಮ ಇತ್ಯಾದಿ ಆಧ್ಯಾತ್ಮಿಕ ಸಾಧನೆ. ಯಾರೊಡನೆಯೂ ಬೆರೆಯದ ನಿರ್ಲಿಪ್ತತೆ. ಸುಖ – ದುಃಖಗಳಲ್ಲಿ ಧೃತಿಗೆಡದ ಯುಧಿಷ್ಠಿರ ಪ್ರಜ್ಞೆ. “ಕಲ್ಲಾಗಿರಬೇಕು ಕಠಿಣ ಭವತೊರೆಯೊಳಗೆ…” ಎಂದು ದಾಸರು ಹಾಡಿದ್ದಾರಲ್ಲ ಹಾಗೆ. ಸಂಕಷ್ಟಕ್ಕೊಳಗಾಗಿ ಕೈ ಚಾಚಿದರೆ ಸಹಾಯ ಹಸ್ತ ನೀಡುವ ಕಾರುಣ್ಯ. ದಿನದ ಕ್ಷಣ ಕ್ಷಣಗಳನ್ನು ಸಾರ್ಥಕ ಗೊಳಿಸಿದ ಅವರ ಜೀವನವೇ ಒಂದು ಯಶೋಗಾಥೆ. ಜನನ ಮಾರ್ಚ್ 10, 1940. ತಂದೆ ಕಿನಿಲ ಶಂಕರನಾರಾಯಣ ಭಟ್. ತಾಯಿ ಕುಕ್ಕೆಮನೆ ಲಕ್ಷ್ಮಿಯಮ್ಮ. ನಾಲ್ಕು ಮಂದಿ ಒಡಹುಟ್ಟುಗಳು 86 ವರ್ಷ 10 ದಿನಗಳ ಜೀವನಯಾನದಲ್ಲಿ ಬಾಲ್ಯದ 14 ವರ್ಷಗಳು ಮತ್ತು ನಿವೃತ್ತಿ ಜೀವನದ ನಾಲ್ಕೈದು ಸಂವತ್ಸರಗಳನ್ನು ಬಿಟ್ಟರೆ, ಉಳಿದ ಆಯುಷ್ಯವನ್ನೆಲ್ಲ ಯಕ್ಷಗಾನಕ್ಕಾಗಿ ಧಾರೆ ಎರೆದವರು. ಕಲಾವಿದ, ಕಲಾಗುರು, ಹರಿದಾಸ, ಅರ್ಥದಾರಿ, ಬರೆಹಗಾರ, ಪ್ರಸಂಗಕರ್ತ… ಹೀಗೆ ಸಾವಿರ ಬಾಹುಗಳ ವಿರಾಟ್ ಪುರುಷನಂತೆ ಬಹುಮುಖದ ಪ್ರತಿಭೆಗಳಿಂದ ಸಾವಿರದ ನೆನಪಾಗಿ ರಂಗಸ್ಥಳದಲ್ಲಿ ಉಳಿಯಬಹುದಾದ ಕಲಾವಿದ ಕೆ. ಗೋವಿಂದ ಭಟ್.

1985ರಲ್ಲಿ ನಾನು ಸಲ್ಲಿಸಿದ ಗುರುವಂದನೆಯ ಸಮ್ಮಾನದಿಂದ ಆರಂಭಿಸಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸಹಿತ ಸಾವಿರಾರು ಪ್ರಶಸ್ತಿ ಸಮ್ಮಾನಗಳು ಸಂದರೂ ಎಂದು ಬೀಗದ ವಿದ್ವಜ್ಜನರ ಮುಂದೆ ಬಾಗಿದ ನಟಸಾರ್ವಭೌಮ. ಕಡುಬಡತನದಿಂದ ಜೀವನಕ್ಕಾಗಿ ಯಕ್ಷಗಾನವನ್ನು ಆಶ್ರಯಿಸಿದರೂ ಕೇವಲ ಕಲೋಪಜೀವಿಯಾಗದೆ ಕಲೋಪಾಸಕನಾಗಿ, ಕಲಾ ಶ್ರೀಮಂತಿಕೆಯನ್ನು ಎತ್ತಿ ಹಿಡಿದ ಕಲಾ ಮಂದರಧರ ಗೋವಿಂದ. ಇವರ ಜೀವನಯಾನದ ಹಾದಿ ಹೂವಿನಹಾಸಾಗಿರಲಿಲ್ಲ. ಅದು ಕಲ್ಲು ಮುಳ್ಳುಗಳ ಗುಪ್ಪೆ. ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಕಲಾಗಂಗೆಯನ್ನು ಯಕ್ಷ ಭುವನಕ್ಕಿಳಿಸಿದ ಈ ಕಲಾ ಭಗೀರಥನ ಸಾಧನೆ ಸಾಮಾನ್ಯವಾದದಲ್ಲ. “ಬೆಲೆಯಿಂದಕ್ಕುಮೇ ಕೃತಿ ಭುವನದ ಭಾಗ್ಯದಿಂದಕ್ಕುಂ” ನೇಮಿಚಂದ್ರನ ಈ ಮಾತನ್ನು ಅನ್ವಯಿಸಿ ಹೇಳುವುದಾದರೆ, ಇದು ಗೋವಿಂದಭಟ್ಟರಿಗೆ ಬಹಳ ಒಪ್ಪುತ್ತದೆ. ಕವಿ ಮುದ್ದಣ್ಣ ಹೇಳಿದಂತೆ “ಕಾಲಪುರುಷಂಗೆ ಗುಣಮಣಂ ಇಲ್ಲಂಗಡ”. ಭಾವಹೀನ ಕಾಲ ಯಕ್ಷಗಾನ ಕಲಾ ಸರಸ್ವತಿಯ ತಾರಹಾರದ ಒಂದೊಂದೇ ರನ್ನವಣಿಗಳನ್ನು ಕೀಳುತ್ತಿದೆ. ಇದೀಗ ಕೊಹಿನೂರ್ ವಜ್ರವೂ ಕಳಚಿ ಹೋಯಿತು. ಯಕ್ಷಗಾನ ಹೋರಾಟವನ್ನು ಅಪೇಕ್ಷಿಸುವ ಕ್ಷಾತ್ರ ಕಲೆ. ಕೆ. ಗೋವಿಂದ ಭಟ್ ಇಲ್ಲಿ ಹೋರಾಡಿ ಗೆದ್ದಿದ್ದಾರೆ. ಚೌಕಿಯ ಒಳಗೆ – ಹೊರಗೆ, ರಂಗಸ್ಥಳದಲ್ಲಿ ಬಿಡಾರದಲ್ಲಿ, ಸಮಾಜದಲ್ಲಿ ಕಲಾವಿದರು ಹೇಗಿರಬೇಕೆಂಬುದಕ್ಕೆ ಇವರೇ ಮಾದರಿ.

ಒಂದು ಪಾತ್ರವನ್ನು ನಿರ್ವಹಿಸುವಾಗ ಅನೇಕ ಪಾತ್ರಗಳನ್ನು ನೋಡಿದವರಾಗಿದ್ದರೂ, ಆ ಕಥೆಯ ಮೂಲ ಆಕರವನ್ನು ಓದಿ, ಆ ಪಾತ್ರಕ್ಕೆ ಸಂಬಂಧಿಸಿದ ಕಥೆ, ಕಾದಂಬರಿ, ಕಾವ್ಯ, ಬರೆಹ, ಇತ್ಯಾದಿ ಯಾವುದೇ ಮೂಲದ ಚಿತ್ರಣಗಳನ್ನು ಶೋಧಿಸಿ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಂತೆ ಇಳಿ ವಯಸ್ಸಿನಲ್ಲಿಯೂ ಓದುತ್ತಾ, ಸ್ವತಂತ್ರವಾಗಿ ಪಾತ್ರಗಳಿಗೆ ಹೊಸ ಜೀವ ತುಂಬುವ ಗೋವಿಂದ ಭಟ್ ಅಧ್ಯಯನಶೀಲ ಕಲಾವಿದರಿಗೆ ಮೇಲ್ಪಂಕ್ತಿಯಾಗಿದ್ದಾರೆ.

ಸಾಧನೆಯ ತೀವ್ರ ಕೊರತೆಯಿಂದ ಸೊರಗುತ್ತಿರುವ ಯಕ್ಷಗಾನ ರಂಗಸ್ಥಳದಲ್ಲಿ ಕೆ. ಗೋವಿಂದ ಭಟ್ ರಂತಹಾ ಕಲಾವಿದರು ಇನ್ನೆಂದು ಹುಟ್ಟಿ ಬರುವರೋ ಕಾದು ನೋಡಬೇಕು.

error: Content is protected !!
Share This