ಡಾ. ಆರ್. ಗಣೇಶ ಸಾರಸ್ವತ ಪ್ರಪಂಚದ ಒಂದು ಅನನ್ಯ ಪ್ರತಿಭೆ. ಪ್ರತಿಭೆಗೆ ಸಲ್ಲುವ ಏನೆಲ್ಲ ವಿಶೇಷಣಗಳು ಇವೆಯೋ ಅವುಗಳೆಲ್ಲ ಗಣೇಶರಲ್ಲಿ ನಿರ್ವಿವಾದವಾಗಿ ಅನ್ವಯವಾಗುತ್ತವೆ. ಅವರನ್ನು ಪುರುಷ ಸರಸ್ವತೀ ಎಂತಲೂ, ವಿದ್ವಲ್ಲೋಕದ ವಿಸ್ಮಯವೆಂತಲೂ ಶ್ರೇಷ್ಠ ವಾಗ್ಮೀ ಎಂತಲೂ ಕರೆಯುತ್ತಾರೆ. ಹಾಗೆಯೇ ಕವಿ, ಲೇಖಕ, ಅವಧಾನಿ, ವಿದ್ವಾಂಸ, ಅಲಂಕಾರ ಶಾಸ್ತ್ರಜ್ಞ, ತತ್ವಶಾಸ್ತ್ರಜ್ಞ, ಸಂಗೀತ ಶಾಸ್ತ್ರಜ್ಞ ಹೀಗೆ ಅವರನ್ನು ಭಾರತೀಯ ವಿದ್ಯೆಗಳ ಅಥವ ಅಭಿಜಾತ ಕಲೆಗಳ ಏನೆಲ್ಲ ಪ್ರಕಾರಗಳು ಇವೆಯೋ ಅವುಗಳ ವಿಶಾರದ ಎಂದು ನಿಸ್ಸಂದೇಹವಾಗಿ ಕರೆಯಬಹುದು.

ಅವರ ಜ್ಞಾನದ ಹಸಿವು ವಿಸ್ಮಯವೇ! ಸಾಹಿತ್ಯವನ್ನು ಅದರ ಮೂಲಭಾಷೆಯಲ್ಲಿಯೇ ಓದಬೇಕು ಎಂಬ ಇಚ್ಛೆಯಿಂದ ಇಂಗ್ಲಿಷ್, ಗ್ರೀಕ್ ಲ್ಯಾಟಿನ್ ಭಾಷೆಗಳನ್ನೂ ಹಾಗೆಯೇ ದೇಶೀಯ ಭಾಷೆಗಳಾದ ಸಂಸ್ಕೃತ, ತೆಲುಗು, ಹಿಂದಿ,, ಮಲೆಯಾಳಂ ಇತ್ಯಾದಿ ಭಾಷೆಗಳನ್ನು ಜೀರ್ಣಿಸಿಕೊಂಡು. ವಿಶಾಲವಾದ ಸಾಹಿತ್ಯಲೋಕದಲ್ಲಿ ವಿಹರಿಸಿದರು. ಬೌದ್ಧದರ್ಶನದ ಗ್ರಂಥಗಳನ್ನು (ತ್ರಿಪಿಟಕಗಳು ಇತ್ಯಾದಿ) ಓದಲು ಪಾಳಿ ಭಾಷೆಯನ್ನು ಕಲಿತರು.

ವೇದವಾಙ್ಮಯ, ಷಡ್ದರ್ಶನಗಳು, ಬೌದ್ಧ, ಜೈನ ಗ್ರಂಥಗಳು, ಹದಿನೆಂಟು ಪುರಾಣಗಳು, ಸ್ಮೃತಿಗ್ರಂಥಗಳು, ವ್ಯಾಕರಣ ಶಾಸ್ತç ಮುಂತಾದ ಜ್ಞಾನಬಂಢಾರವನ್ನು ಅವುಗಳ ಭಾಷ್ಯ ವ್ಯಾಖ್ಯಾನಗಳನ್ನು ಮೂಲದಲ್ಲಿಯೇ ಓದಿದ ಶಾಸ್ತç ಸವ್ಯಸಾಚಿ ಗಣೇಶರು. ಒಂದು ಲಕ್ಷ ಶ್ಲೋಕದ ಮಹಾಭಾರತವನ್ನು ಮೂರು-ನಾಲ್ಕು ಬಾರಿ ಕೂಲಂಕಷವಾಗಿ ಅಧ್ಯಯನ ಮಾಡಿದ ಪಂಡಿತವರೇಣ್ಯ. ನಾನಾ ಭಾಷೆಗಳ ಪ್ರಾಚೀನ, ಮಧ್ಯಕಾಲೀನ, ಆಧುನಿಕ ಸಾಹಿತ್ಯವನ್ನೂ ಜೀರ್ಣಸಿಕೊಂಡ ಪುರುಷ ಸರಸ್ವತಿ.

ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಗಣೇಶರು ಮೆಟಲರ್ಜಿಯಲ್ಲಿ ಎಮ್.ಎಸ್‌ಸಿ., ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಲ್ಲದೆ ‘ಕನ್ನಡದಲ್ಲಿ ಅವಧಾನ ಕಲೆ’ ಎಂಬ ವಿಶಿಷ್ಟ ಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದರು.
ಅವಧಾನ ಕಲೆ : ಇದು ಬಹು ವಿಶಿಷ್ಟವಾದದು. ಸಮಸ್ಯಾಪೂರಣ, ದತ್ತಪದಿ, ಆಶುಕವಿತ್ವ ಚಿತ್ರಕಾವ್ಯ ಹೀಗೆ ಮುಂತಾದ ಎಂಟು ವಿಧದ ರೂಪಗಳನ್ನು ಒಳಗೊಂಡು ಸ್ಮರಣಶಕ್ತಿ, ಸೃಜನಶೀಲತೆ, ಸಮಸ್ಯಾಪೂರ್ಣಗೊಳಿಸುವ ವಿದ್ವತ್ತು, ಛಂದಸ್ಸಿನ ಪರಿಣತಿಗಳನ್ನು ಅಪೇಕ್ಷಿಸುವ ಬಹು ರಮ್ಯವಾದ, ರಸಭರಿತವಾದ ಅಪರೂಪದ ಕಲೆ. ಎಂಟು ಜನ ಪೃಚ್ಛಕರ ಪ್ರಶ್ನೆಗಳನ್ನು ಎದುರಿಸಿ ನೀಡುವ ಉತ್ತರಗಳು, ರಚಿಸುವ ಛಂದೋಬದ್ಧ ಆಶುಕವಿತೆಗಳು ಇವೆಲ್ಲವೂ ಪ್ರೇಕ್ಷಕನಿಗೆ ರಸದೌತಣವನ್ನು ನೀಡುತ್ತವೆ. ಮೊದಲ ಅಷ್ಟಾವಧಾನ 19 ನೆಯ ವಯಸ್ಸಿನಲ್ಲಿ ಶತಾವಧಾನ 29 ನೆಯ ವಯಸ್ಸಿನಲ್ಲಿ ನೆರವೇರಿಸಿದ ಪ್ರತಿಭಾಸಂಪನ್ನ ಆರ್. ಗಣೇಶ. 1300 ಕ್ಕೂ ಹೆಚ್ಚು ಅಷ್ಟಾವಧಾನಗಳನ್ನು, ಐದು ಬಾರಿ ಶತಾವಧಾನಗಳನ್ನು ಪೂರೈಸಿದ ಕೀರ್ತಿ ಇವರದು.

ರಾಯಚೂರಿನಲ್ಲಿ ಅವಧಾನ : 80 ರ ದಶಕದ ಕೊನೆ ಅಥವ 90 ರ ಪ್ರಾರಂಭದಲ್ಲಿ ಇರಬಹುದು, ರಾಯಚೂರಿನಲ್ಲಿ ಗಣೇಶರ ಅವಧಾನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅವಧಾನವನ್ನು ಕರ್ನಾಟಕ ಸಂಘದಲ್ಲಿ ಆಯೋಜಿಸಿತ್ತು. ಅಂದು ಪೃಚ್ಛಕರಲ್ಲಿ ಶಾಂತರಸರು ಒಬ್ಬರಾಗಿದ್ದರು. ಕಾವ್ಯವಾಚನದ ಪ್ರಶ್ನೆಯನ್ನು ಶಾಂತರಸರು ಕೇಳುತ್ತಿದ್ದರೆ, ನಿರಾಯಾಸವಾಗಿ ಅವುಗಳಿಗೆ ಉತ್ತರಗಳನ್ನು ಗಣೇಶರು ಹೇಳುತ್ತಾ ಹೋದರು. ಕಾವ್ಯವಾಚನವೆಂದರೆ, ಹಳಗನ್ನಡದ ಯಾವುದೇ ಕೃತಿಯ ಪದ್ಯವನ್ನು ಓದುವುದು. ಅದಕ್ಕೆ ಅವಧಾನಿಗಳು ಕವಿ, ಕೃತಿಗಳನ್ನು ಹೇಳಿ ಸಂದರ್ಭವನ್ನು ಸೂಚಿಸಬೇಕು. ಗಿರಿಜಾಕಲ್ಯಾಣ, ಯಶೋಧರ ಚರಿತೆ, ಗದಾಯುದ್ಧ ಮುಂತಾದ ಕೃತಿಗಳ ಪದ್ಯಗಳನ್ನು ಶಾಂತರಸರು ಓದುತ್ತಿದ್ದರೆ, ಗಣೇಶರು ತಕ್ಷಣ ಕೃತಿಯ ಹೆಸರು ಸಂದರ್ಭವನ್ನು ವಿವರಿಸಿದಾಗ ಸಭೆಯು ಬೆರಗಿನಿಂದ ಕೇಳುತ್ತಿತ್ತು.. ತ್ರಿವಿಕ್ರಮ ಜೋಷಿ ಘಂಟಾಗಣನೆಯ ಪೃಚ್ಛಕರಾಗಿದ್ದರು. ಉಳಿದ ಪೃಚ್ಛಕರು ನೆನಪಿಲ್ಲ. ಪ್ರಸ್ತುತ ಗಣೇಶರು ಕಾವ್ಯವಾಚನ, ಘಂಟಾವಾದನಗಳ ಸರಳ ವಿಧಗಳನ್ನು ತ್ಯಜಿಸಿ ಕ್ಲಿಷ್ಟವಾದ ಚಿತ್ರಕಾವ್ಯ, ನ್ಯಸ್ತಾಕ್ಷರಿ, ಸಂಖ್ಯಾ ಬಂಧ ಮುಂತಾದವುಗಳನ್ನು ಅಳವಡಿಸಿಕೊಂಡಿದ್ದಾರೆ.

ವಿದ್ವತ್ತು, ಮತ್ತು ಪ್ರವಚನ : ವೇದಾಂತಾದಿ ಭಾರತೀಯ ದರ್ಶನ ಶಾಸ್ತ್ರಗಳು, ಪುರಾಣಗಳು, ಕಾವ್ಯಗಳು, ಕಾವ್ಯಮೀಮಾಂಸೆ, ಸಂಗೀತ, ನೃತ್ಯ ಇತ್ಯಾದಿ ವಿಷಯಗಳ ಮೇಲೆ ಅಗಾಧ ಪಾಂಡಿತ್ಯ ಹೊಂದಿದ ಗಣೇಶರು 15000 ಗಂಟೆಗಳಿಗೂ ಹೆಚ್ಚಿನ ಉಪನ್ಯಾಗಳನ್ನು ನೀಡಿದ್ದಾರೆ. ಡಿ.ವಿ.ಜಿ.ಯವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ಸಂಸ್ಥೆಯ ಯೂಟ್ಯೂಬ್ ವಾಹಿನಿಯಲ್ಲಿ ಅವು ಲಭ್ಯವಿವೆ. ಆಸಕ್ತರು ಪ್ರಮುಖವಾಗಿ ಯುವಕರು ದಯವಿಟ್ಟು ಗಮನಿಸಬೇಕು. ವಿಷಯಗಳ ಹರವು ಅತ್ಯಂತ ವಿಸ್ಮಯ. ಪ್ರಾಚೀನ ಹಾಗೂ ಆಧುನಿಕ ಸಂಸ್ಕೃತ ಕನ್ನಡ ಕವಿಗಳು, ಲೇಖಕರು, ವಿದ್ವಾಂಸರು ಮುಂತಾದ ಸಂಸ್ಕೃತಿ ಧೀಮಂತರ ಕುರಿತು, ಅವರ ಕೃತಿಗಳ ಕುರಿತು ಅನನ್ಯವಾಗಿ ಮಾತಾಡಿದ್ದಾರೆ. ವಿನೋದ, ಗಾಂಭೀರ್ಯ, ಕಟಕಿ, ಗಾದೆಗಳು ಅವರ ಮಾತಿನ ಓಘಕ್ಕೆ ಸರಕಾಗಿವೆ. ಆಧುನಿಕ ದೃಷ್ಟಿ ಹಾಗೂ ಪ್ರಾಚೀನ ವಿವೇಕಗಳಿಂದ ಅವರ ಉಪನ್ಯಾಸಗಳು ಕೇವಲ ಪಳೆಯುಳಿಕೆಗಳಾಗದೆ ವರ್ತಮಾನಕ್ಕೆ ಬಹುರೀತಿಯಿಂದ ಸಲ್ಲುವ ಅತ್ಯುತ್ತಮ ಚೌಕಟ್ಟನ್ನು ಒದಗಿಸಿವೆ. ಭಾರತೀಯ ವಿದ್ಯೆ ಅದು ರಸಾತ್ಮಕವಾಗಿ ಹೇಗೆ ನಮ್ಮ ಬದುಕನ್ನು ಸುಂದರಗೊಳಿಸುತ್ತದೆ ಎಂಬ ಅಂಶವು ಗಣೇಶರ ಉಪನ್ಯಾಸಗಳ ನಾಡಿಮಿಡಿತವಾಗಿದೆ.

ಗ್ರಂಥ ರಚನೆ : ಗಣೇಶರು 70 ಕ್ಕೂ ಅಧಿಕ ಗ್ರಂಥಗಳನ್ನು ರಚಿಸಿದ್ದಾರೆ. ಕಾವ್ಯ, ಅವಧಾನ, ದರ್ಶನ, ಕಲೆ, ಸಂಸ್ಕೃತಿ, ಕಾವ್ಯ ಮೀಮಾಂಸೆ, ಛಂದಸ್ಸು, ಸಂಶೋಧನೆ, ಜೀವನ ಚರಿತ್ರೆ, ಕಾದಂಬರಿ, ಅಧ್ಯಾತ್ಮ, ಅನುವಾದ, ಲಲಿತ ಪ್ರಬಂಧ, ವಿಮರ್ಶಾ ಪ್ರಬಂಧ, ಸಂಪಾದನೆ ಹೀಗೆ ವಿವಿಧ ಪ್ರಕಾರಗಳಲ್ಲಿ ಅವರ ಬರೆವಣಿಗೆ ಸಾಗಿದೆ. ಅವರ ಭಾಷೆ, ಶಬ್ದ ಪ್ರಯೋಗಗಳು ಚೇತೋಹಾರಿ. ಬರೆವಣಿಗೆಯ ಬಂಧದ ಸೌಂದರ್ಯ, ಒಳನೋಟಗಳೂ ಅಷ್ಟೇ ಹೃದ್ಯವಾಗಿರುತ್ತವೆ.

ಪ್ರಶಸ್ತಿಗಳು : ದೇವಡು ಅವರ ಮಹಾಬ್ರಾಹ್ಮಣ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಅನುವಾದ ಪ್ರಶಸ್ತಿ, ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೋರೇಟ್, ರಾಷ್ಟ್ರಪತಿಗಳು ಕೊಡಮಾಡುವ ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ, ರಾಜ್ಯೋತ್ಸವ ಪ್ರಶಸ್ತಿ ಇವು ಅವರಿಗೆ ಸಂದ ಹತ್ತಾರು ಪ್ರಶಸ್ತಿಗಳಲ್ಲಿ ಕೆಲವು ಮಾತ್ರ. ಈ ಬಾರಿ ಕೇಂದ್ರ ಸರ್ಕಾರ ಪ್ರದಾನ ಮಾಡುವ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವುದು, ಅವರ ಅಭಿಮಾನಿ ಶಿಷ್ಯ ಬಳಗಕ್ಕೆ ಅತೀವ ಸಂತಸವನ್ನು ನೀಡಿದೆ.

2015 ರಲ್ಲಿ ಅಭೂತಪೂರ್ವವಾಗಿ 5 ದಿನಗಳ ಕಾಲ ನಡೆದ ಗುರುಗಳಾದ ಬನ್ನಂಜೆಯವರ 80 ರ ಸಂಭ್ರಮದಲ್ಲಿ ಗಣೇಶರು ಸಮಿತಿಯ ಭಾಗವಾಗಿ, ಭಾಷಣಕಾರರಾಗಿ, ಗೋಷ್ಠಿಯ ಸಮನ್ವಯಕಾರರಾಗಿ ಭಾಗವಹಿಸಿದ್ದು ಇನ್ನೂ ನೆನಪಿನಲ್ಲಿದೆ. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಬಗ್ಗೆ ಅಂದು ಅವರಾಡಿದ ಮಾತು; ವರಕವಿ ಎಂದರೆ ಬೇಂದ್ರೆಯವರು ಮಾತ್ರ ನೆನಪಾಗುತ್ತಾರೆ. ಕವಿಕುಲಗುರು ಎಂದರೆ ಕಾಳಿದಾಸನಲ್ಲದೆ ಮತ್ಯಾರು? ವಿದ್ಯಾಲಂಕಾರ ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವವರು ಎಸ್.ಕೆ.ರಾಮಚಂದ್ರರಾಯರು. ಹಾಗೆಯೇ ವಿದ್ಯಾವಾಚಸ್ಪತಿ ಎಂದಾಗ ಬನ್ನಂಜೆಯವರೇ ಅನ್ವರ್ಥವಾಗಿ ಕಾಣಿಸುತ್ತಾರೆ. – ಅವರ ಈ ಮಾತು ಆಚಾರ್ಯ ಬನ್ನಂಜೆಯವರ ವೈದುಷ್ಯದ ಉತ್ತಮ ವ್ಯಾಖಾನ. ಬನ್ನಂಜೆಯವರ ಸಂಸ್ಕೃತ ಅದು 2-3 ನೆಯ ಶತಮಾನದ ಸಂಸ್ಕೃತ. ಹೀಗಾಗಿ ಅವರ ಸಂಸ್ಕೃತ ಭಾಷೆ ಮನೋಜ್ಞವಾಗಿದೆ, ಸಹಜವಾಗಿದೆ ಎನ್ನುತ್ತಾರೆ ಗಣೇಶರು. ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ ಎಂಬ ಮಾತಿನಂತೆ ವಿದ್ಯಾವಾಚಸ್ಪತಿಗಳ ವಿದ್ವತ್ತನ್ನು ನಿಜಾರ್ಥದಲ್ಲಿ ಅರ್ಥೈಸಿಕೊಂಡಿದ್ದರು.
ನಾನು ಮೊದಲಬಾರಿ ಅವರನ್ನು ಕಂಡದ್ದು ಭಾರತೀಯ ವಿದ್ಯಾಭವನದಲ್ಲಿ. ಬೆಂಗಳೂರಿನಲ್ಲಿ ಒಂದೆರಡು ವರ್ಷಕಾಲ ಇದ್ದಾಗ ವಿದ್ಯಾಭವನಕ್ಕೆ ನಿಯಮಿತವಾಗಿ ಭೇಟಿಕೊಡುತ್ತಿದ್ದೆ. ಅಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಅಗಾಧ ವಿದ್ವತ್ತನ್ನು ಬೆರಗಿನಿಂದ ನೋಡುತ್ತಿದ್ದೆ. ನಂತರದ ವರ್ಷಗಳಲ್ಲಿ ಗೋಖಲೆಯಲ್ಲಿ ಹಲವಾರು ಬಾರಿ ಅವರ ಉಪನ್ಯಾಸಗಳನ್ನು ಕೇಳಿದ್ದೇನೆ. ಒಂದೆರಡು ಬಾರಿ ಅವರನ್ನು ಮಾತನಾಡಿಸುವ ಸಾಹಸವನ್ನೂ ಮಾಡಿದ್ದೇನೆ. ಹೃದಯವಂತಿಕೆಯ ಸಾಕಾರಮೂರ್ತಿಯಾಗಿ ಅವರ ಮಾತು ಆಪ್ಯಾಯಕವೆನಿಸುತ್ತದೆ. ತಾಳ್ಮೆಯಿಂದ ಮಾತನ್ನು ಆಲಿಸುತ್ತಾರೆ.

ಅವರ ತಾಯಿಯು ಅಸ್ವಸ್ಥತೆಯಿಂದ ಮೂರ್ನಾಲ್ಕು ವರ್ಷ ಹಾಸಿಗೆ ಹಿಡಿದಾಗ, ನಿರಂತರವಾಗಿ ಶುಶ್ರೂಷೆ ಮಾಡಿ ಮಗುವಿನಂತೆ ನೋಡಿಕೊಂಡರು. ಅಧ್ಯಯನ ಅಧ್ಯಾಪನದಲ್ಲೇ ಮುಳುಗಿದ ಗಣೇಶರು ಬ್ರಹ್ಮಚಾರಿಯಾಗಿಯೇ ಉಳಿದರು.

ಭಾರತರತ್ನ ಪಿ.ವಿ.ಕಾಣೆ, ಎಂ.ಹಿರಿಯಣ್ಣ, ಡಿ.ವಿ.ಜಿ. ಸೇಡಿಯಾಪು ಕೃಷ್ಣಭಟ್ಟ, ವಿ. ರಾಘವನ್, ಲಂಕಾ ಕೃಷ್ಣಮೂರ್ತಿ, ಕೆ. ಕೃಷ್ಣಮೂರ್ತಿ, ಸಾ.ಕೃ.ರಾಮಚಂದ್ರರಾವ್. ಎಸ್.ಶ್ರೀಕಂಠಶಾಸ್ತಿç, ಎನ್. ರಂಗನಾಥಶರ್ಮಾ ಇಂಥ ಪ್ರಗಲ್ಭ ವಿದ್ವಾಂಸರನ್ನು ಮೇಲಿಂದ ಮೇಲೆ ಸ್ಮರಿಸಿಕೊಳ್ಳುವ ಗಣೇಶರು ಆ ವಿದ್ವನ್ಮಣಿಗಳ ಸಾಂಸ್ಕೃತಿಕ ಕೊಡುಗೆಯ ಹರವು ಹವಣುಗಳನ್ನು ಮನದಟ್ಟು ಮಾಡಿಕೊಡುವಲ್ಲಿ ಸದಾ ನಿರತರು.
ಶಾಸ್ತ್ರೀಯ ಸಂಗೀತದಂತೆ ಸಿನಿಮಾ ಸಂಗೀತವನ್ನೂ ಆಸ್ವಾದಿಸಬಲ್ಲರು. ಅಭಿಜಾತ ನೃತ್ಯದಂತೆ, ವಾಲ್ಟ್ಡಿಸ್ನಿಯ ಕಾರ್ಟೂನ್‌ಗಳನ್ನೂ ವಿಶ್ಲೇಷಿಸಬಲ್ಲರು. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಸಿನಿಮಾಗಳನ್ನು ನೋಡಿ ಅವುಗಳ ಮೌಲ್ಯವನ್ನು ಅಳೆಯಬಲ್ಲರು. ಏಕವ್ಯಕ್ತಿ ಯಕ್ಷಗಾನ ಹಾಗೂ ಏಕವ್ಯಕ್ತಿ ತಾಳಮದ್ದಳೆಯನ್ನು ಪರಿಕಲ್ಪನೆ ಮಾಡಿ, ಈ ಕ್ಷೇತ್ರಗಳಲ್ಲಿ ಹೊಸತನ್ನು ನೀಡಿದ ಮಹತಿಯೂ ಅವರದೇ.

ಗಣೇಶರು ಸರ್ವತಂತ್ರ ಸ್ವತಂತ್ರರು, ಧೀರರು, ಅಪ್ರಾಮಾಣಿಕತೆ ಅನಾಚಾರಗಳನ್ನು ಕಟುಟೀಕೆಗೆ ಒಳಪಡಿಸುವವರು, ಪ್ರಾಮಾಣಿಕತೆಯನ್ನು ಮನದುಂಬಿ ಹರಸುವವರು. ಗಂಭೀರ ಚಿಂತಕರಾದರೂ ವಿನೋದ ಮಾಡುವುದರಲ್ಲಿ ಮುಂದಿರುವವರು. ಬುದ್ಧಿ ಮತ್ತು ಭಾವಗಳನ್ನು ಹದವಾಗಿ ಮೇಳೈಸಿಕೊಂಡಿರುವ ಸಮತೋಲಿತವಾದ ವ್ಯಕ್ತಿತ್ವ ಅವರದು.

ಪ್ರಜ್ಞೆಯನ್ನು ವಿಕಾಸಗೊಳಿಸುವ, ಆರ್ಷ ಪರಂಪರೆಯನ್ನು ಸಮಾಜಕ್ಕೆ ದಾಟಿಸುವ, ಸರ್ವತೋಮುಖವಾದ ವಿಚಾರವನ್ನು ಬೆಳೆಸುವ ಕೈಂಕರ್ಯದಲ್ಲಿ ತೊಡಗಿರುವ ಶತಾವಧಾನಿಗಳನ್ನು ಅಭಿನಂದಿಸುತ್ತ ನೂರ್ಕಾಲ ಬಾಳಲಿ ಎಂದು ಪ್ರಾರ್ಥಿಸುತ್ತೇನೆ.

  • ವಸುಧೇಂದ್ರ ಸಿರವಾರ

ಶತಾವಧಾನಿ ಶ್ರೀ ಆರ್.ಗಣೇಶರು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ರಾಯಚೂರವಾಣಿ ಪತ್ರಿಕೆಗೆ ಬರೆದ ಲೇಖನ.

error: Content is protected !!
Share This