(ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ಇತ್ತೀಚೆಗೆ ನಿಧನರಾದ ಸೂರಿಕುಮೇರು ಗೋವಿಂದ ಭಟ್ಟ (೧೯೩೯ -೨೦೨೬) ರ ಸಂಸ್ಮರಣ ಲೇಖನ)

ತೆಂಕು ತಿಟ್ಟು ದಶಕಗಳಿಂದ ಅಸಮತೋಲನದ ಅಪಾಯಗಳನ್ನೂ ಆತಂಕಗಳನ್ನೂ ಅನಿಷ್ಟ ಆಘಾತಗಳನ್ನೂ ಅನಿವಾರ್ಯವಾಗಿ ಅನುಭವಿಸಿಕೊಂಡು ಬಂದಿತ್ತು.ಅಲ್ಲೊಬ್ಬರು ಇಲ್ಲೊಬ್ಬರು ಸಮತೋಲನ ಪ್ರಜ್ಞೆ ಉಳ್ಳವರಿದ್ದರೂ ಅವರಿಗೆ ಸಾಕಷ್ಟು ಪೂರ್ವತಯಾರಿ ಮತ್ತು ದೂರಗಾಮೀ ದೃಷ್ಟಿಕೋನ, ಕೃತುಶಕ್ತಿ ಇಲ್ಲದುದರಿಂದ ಸ್ಥಾಪಿತ ಪ್ರಭಾವದ ಭೇರಿ ಒಡೆದು ಪ್ರಕಟವಾಗಲು ಸಾಧ್ಯವಾಗಿರಲಿಲ್ಲ.ಇವೆಲ್ಲವೂ ವ್ಯವಸಾಯೀ ಅಗತ್ಯಗಳಿಗಾದುದರಿಂದ ಸಹ್ಯವೇ ಆಗಿತ್ತು.ಇನ್ನು ಈ ತಿಟ್ಟಿನಲ್ಲಿ ಸಮತೋಲನ ಸಾಧ್ಯವೇ ಇಲ್ಲವೆನ್ನಿಸುತ್ತಿರುವಾಗ ಹೆಚ್ಚು ತೋರುಗಾಣಿಕೆ, ಸದ್ದು ಗದ್ದಲ ಇಲ್ಲದೆ ಕಿನಿಲ ಗೋವಿಂದ ಭಟ್ಟರು (ಜ-೧೯೪೦) ಮತ್ತು ಅವರಿಂದ ತಯಾರಾದ ಶಿಷ್ಯವರ್ಗ ತೆಂಕಿನಲ್ಲಿ ಒಂದು ಪ್ರಮಾಣದ ಪುನರುತ್ಥಾನ ಪರ್ವಕ್ಕೆ ‘ಗಜಮುಖದವಗೇ….’ಹಾಡತೊಡಗಿದ್ದು ಭರವಸೆಯ ಬೀಜವೇ ಆಯಿತು.

ಗೋವಿಂದ ಭಟ್ಟರು ಈ ರಂಗಮಾಧ್ಯಮವನ್ನು ಆಯ್ಕೆಮಾಡಿಕೊಂಡ ಉದ್ದೇಶ,ಹೊಂದಿದ ದೃಷ್ಟಿಕೋನ,ಸಜ್ಜುಗೊಂಡ ರೀತಿ,ಮನೋಧರ್ಮ ಎಲ್ಲವೂ ಅವರ ಸಮತೋಲನ ಪ್ರಜ್ಞೆಗೆ ಸಾಕ್ಷಿಗಳಾದುವು. ‘ಎಲ್ಲ ಅಂಗಗಳ ಆಕರ್ಷಣೆಯ ಶ್ರೀಯುತರು ತೆಂಕುತಿಟ್ಟಿನ ಮಾದರಿ ಕಲಾವಿದರು’, ‘ಪರಿಪೂರ್ಣತೆಯತ್ತ ಮುಖ ಮಾಡಿದ ಕಲಾವಿದ’, ‘ಬಹುಮುಖ ಪ್ರತಿಭೆಯ ಸರ್ವಾಂಗ ಕಲಾವಿದ’, ‘ತೆಂಕು ತಿಟ್ಟಿನ ಪುನರುತ್ಥಾನಕ್ಕೆ ಕಾರಣರಾದವರು’ ಮಂತಾಗಿ ಕುಂಬಳೆ ಸುಂದರ ರಾಯರು, ಡಾ. ಎಮ್.ಪ್ರಭಾಕರ ಜೋಶಿ, ಪೇಜಾವರ ಸ್ವಾಮೀಜಿ ಮುಂತಾದವರೇ ಪ್ರಮಾಣೀಕರಿಸುವಂತಾಯಿತು. ಇಂಥ ತೀರ್ಮಾನದ ಮಾತುಗಳಲ್ಲಿ ತಿಟ್ಟುಗಳ ನಡವಣ ತೌಲನಿಕ ದೃಷ್ಟಿ ಇರಬಹುದಾದರೂ ಗೋವಿಂದ ಭಟ್ಟರು ಇವಕ್ಕೆಲ್ಲ ಅರ್ಹರೇ ಆಗಿದ್ದರು.

ವಿಶೇಷ ನಿರೀಕ್ಷೆಗಳನ್ನಿಟ್ಟುಕೊಳ್ಳದೆ,ಅನ್ನ ಮತ್ತು ಆತ್ಮಾಭಿಮಾನಕ್ಕಾಗಿ ಈ ರಂಗಮಾಧ್ಯಮವನ್ನು ಆಯ್ಕೆ ಮಾಡಿಕೊಂಡ ಭಟ್ಟರು ಈ ಮಾಧ್ಯಮಕ್ಕಾಗಿಯೇ ತೀರ ತಳ ಹಂತದಿಂದ ತಮ್ಮನ್ನು ತಾವು ರೂಪಿಸಿಕೊಳ್ಳುತ್ತ,ಮಾಧ್ಯಮಕ್ಕೆ ಬದ್ಧರಾಗುತ್ತ ಬೇರೆ ಆಕರ್ಷಣೆಗಳಿದ್ದರೂ ಈ ರಂಗಭೂಮಿಯನ್ನೇ ನಿರಂತರವಾಗಿ ನೆಚ್ಚಿಕೊಂಡು ಬಂದವರು.ಕೀರ್ತಿಶೇಷ ವಿಠ್ಠಲಶಾಸ್ತ್ರಿಗಳಿಂದಲೇ ಪ್ರಾಥಮಿಕ ಪಾಠ ದೊರೆತರೂ ಅವರನ್ನು ಅನುಕರಿಸಲಿಲ್ಲ. ‘ತಮ್ಮನ್ನು ಮಾತ್ರ ಅನುಕರಿಸಬೇಡಿ’ ಎನ್ನುವ ವಿಠ್ಠಲ ಶಾಸ್ತ್ರಿಗಳ ಸೂಚನೆಯನ್ನು ಅಕ್ಷರಶಃ ಪಾಲಿಸಿದವರು. ಕಲಿಕೆಯ ಕಾಲದಲ್ಲಿಯೇ ನಿಧಾನ,ಮಧ್ಯಮ, ತ್ವರಿತ ಗತಿಗಳನ್ನು ರೂಢಿಸಿಕೊಂಡುದು ತೆಂಕುತಿಟ್ಟಿನ ಆರ್ಷೇಯ ನಡೆಗೆ ಹೊಂದುವ ಉತ್ತರ ಕನ್ನಡದ ಸಭಾಹಿತ ಮಟ್ಟನ್ನೂ ಅನುಸರಿಸಲು ಅನುವಾಯಿತು. ಪರಂಪರೆಯ ಸಶಕ್ತ ತಳಪಾಯ ಹಾಕಿಕೊಂಡು ಪೂರ್ವರಂಗದಲ್ಲಿಯೂ ಪರಿಣಿತಿ ಪಡೆದು ಕೋಡಂಗಿ, ಬಾಲಗೋಪಾಲ, ಪೀಠಿಕೆ, ಸಖಿ, ಸ್ತ್ರೀವೇಷಗಳನ್ನು ನಿರ್ವಹಿಸುತ್ತ ಹಂತಹಂತವಾಗಿ ಮೇಲೇರಿದವರು. ರಾಗ,ತಾಳಗಳ ಲಯಜ್ಞಾನ,ನೃತ್ಯದ ಬಿಡಿಭಾಗಗಳ ಕಲಿಕೆ, ಅವನ್ನು ಪಾತ್ರೋಚಿತವಾಗಿ ಬಳಸುವ ಎಚ್ಚರ, ಪುರಾಣಗಳ ಖಚಿತ ಜ್ಞಾನ, ಪ್ರಸಂಗ ಮತ್ತು ರಂಗ ಮಾಹಿತಿ, ಕಥಾವಿಸ್ತರಣೆಯ ಕೌಶಲ, ಪ್ರೌಢಿಮೆಯುಳ್ಳ ರಂಗಭಾಷೆ, ಸೂಕ್ತ ಆಹಾರ್ಯ ಪ್ರಜ್ಞೆ ಇವೆಲ್ಲವೂ ಗೋವಿಂದ ಭಟ್ಟರನ್ನು ಸಮತೋಲನನಿಷ್ಠ ರಂಗನಟನನ್ನಾಗಿ ಸಜ್ಜಾಗಿಸುವಲ್ಲಿ ನೆರವಾಗಿವೆ.

ಅವರ ಬೆಳವಣಿಗೆಗೆ ಸಹಕಾರಿಯಾದ ಬಹಳ ದೊಡ್ಡ ಗುಣ ಅವರ ‘ಸ್ವೀಕಾರ ಸೌಜನ್ಯ’. ತಿಟ್ಟು,ಮಟ್ಟು,ಪ್ರದೇಶ,ಜಾತಿ, ಮತ,ವಯಸ್ಸು ಮುಂತಾದವುಗಳ ತಾರತಮ್ಯವಿಲ್ಲದೆ ಎಲ್ಲರಿಂದೊಂದು ಸಂಗತಿಗಳನ್ನು ಸ್ವೀಕರಿಸಿಕೊಂಡು ತಮಗೆ ಬೇಕಾದಂತೆ ಪರಿವರ್ತಿಸಿಕೊಂಡು ತಮ್ಮ ವ್ಯಕ್ತಿಶೈಲಿಯಲ್ಲಿ ಅಳವಡಿಸಿಕೊಂಡವರು.ವಿಭಿನ್ನ ಅಂಗೋಪಾಂಗಗಳಲ್ಲಿ ನಿಷ್ಣಾತರಾದವರೊಟ್ಟಿಗೆ ಸಂಪರ್ಕ,ಸಹವಾಸ ಇಟ್ಟುಕೊಂಡು ಅವರಿಂದ ತಮಗೆ ಬೇಕಾದುದನ್ನು ಸ್ವೀಕರಿಸಲು ಹಿಂದೆ ಮುಂದೆ ನೋಡಿದವರಲ್ಲ. ಬಡಗಿನ ವೀರಭದ್ರ ನಾಯಕರಿಂದಲೂ ಹೆಜ್ಜೆಗಾರಿಕೆ ಕಲಿತವರು. ‘ತೆಂಕಿನ ಕಲಾವಿದ ಗೋವಿಂದ ಭಟ್ಟರಂಥವರು ಸಾಲ್ವನಂಥ ಪಾತ್ರ ನಿರ್ವಹಿಸುವಾಗ ನನ್ನ ಹಾದಿಯ ಬಗ್ಗೆ ಕುತೂಹಲ ತಾಳಿ ವಿಚಾರಿಸಿದ್ದಿದೆ’ಎಂದು ತಮ್ಮ ಕುರಿತಾದ ಅಧ್ಯಯನ ಗ್ರಂಥದ ಮುನ್ನುಡಿಯಲ್ಲಿ ಕೆರೆಮನೆ ಶಂಭು ಹೆಗಡೆಯವರೂ ಬರೆದಿದ್ದಾರೆ.ಶೇಣಿಯವರನ್ನು ‘ತೆಂಕಿನ ಸಾಮಗ’ಎಂದು ಕರೆದಂತೆ ಗೋವಿಂದ ಭಟ್ಟರನ್ನು ‘ತೆಂಕಿನ ಶಂಭು ಹೆಗಡೆ’ ಎಂದು ಕರೆದುದು ಪರಿಣಾಮದ ದೃಷ್ಟಿಯಿಂದ ಮಾತ್ರವಲ್ಲ ಸಂತುಲಿತ ವಿಧಾನದ ದೃಷ್ಟಿಯಿಂದಲೂ ಆಗಿರಬಹುದು.

ಅಂಗೋಪಾಂಗಗಳ ಸಮತೋಲನದ ತೀವ್ರ ಹಂಬಲವುಳ್ಳ ಗೋವಿಂದ ಭಟ್ಟರು ಅದಕ್ಕಾಗಿ ಎದುರಿಸಿದ ಸವಾಲು ಈ ರಂಗಚರಿತ್ರೆಯಲ್ಲಿ ಬಹಳ ಮುಖ್ಯವಾದುದು. ಯಕ್ಷಗಾನ ರಂಗಮಾಧ್ಯಮದಲ್ಲಿ ಮಾತೇ ಮುಖ್ಯ,ಉಳಿದುದೆಲ್ಲವೂ ಗೌಣವೆನ್ನುವ ಬಲವಾದ ನಂಬಿಗೆಯಿರುವ ಕಾಲಘಟ್ಟದಲ್ಲಿ ಆರ್ಷೇಯವಾಗಿದ್ದ ನೃತ್ಯವೈವಿಧ್ಯಗಳೆಲ್ಲ ಲುಪ್ತವಾಗುತ್ತಬಂದರೆ ಆಶ್ಚರ‍್ಯವಿಲ್ಲ. ಪಾರಂಪರಿಕವಾಗಿ ಬಂದ ಹೆಜ್ಜೆಗತಿಗಳೂ ಹಸ್ತಾಭಿನಯಗಳೂ ಮಾದುಹೋಗಿರಬಹುದು. ಅದೇ ಕಾಲಕ್ಕೆ ಡಾ.ರಾಘವ ನಂಬಿಯಾರರಂಥವರು‘ತೆಂಕು ತಿಟ್ಟಿನ ನೃತ್ಯಪ್ರಕಾರದಲ್ಲಿ ವೈವಿಧ್ಯವಿಲ್ಲ’ಎಂದೂ ಹೇಳಿರಬಹುದು. ಹೀಗಿರುವಾಗ ಸಮತೋಲನದ ಸಾಧನೆ ಗೋವಿಂದ ಭಟ್ಟರಿಗೆ ಸಮಸ್ಯೆಯೇ ಆಗಿರಬಹುದು.ಅಗತ್ಯವಾದ ವಾಚಿಕಾಂಗವನ್ನು ರೂಢಿಸಿಕೊಳ್ಳುವದು ಅವರಿಗೆ ಸಮಸ್ಯೆಯಾಗಿರಲಿಕ್ಕಿಲ್ಲ.ಘಟಾನುಘಟಿ ವಾಚಿಕಾಂಗ ನಿಷ್ಣಾತರು ತೆಂಕುತಿಟ್ಟಿನಲ್ಲಿ ಆಶುವೈಭವವನ್ನು ಸಿದ್ಧಪಡಿಸಿಟ್ಟಿದ್ದರು. ಅದನ್ನು ಪ್ರಮಾಣ ಬದ್ಧಗೊಳಿಸಿಕೊಂಡು ರಂಗಗುಣ ಸಾಧಿಸಿಕೊಳ್ಳುವುದಷ್ಟೇ ಅವರಿಗಿದ್ದ ಹೊಣೆಗಾರಿಕೆಯಾಗಿತ್ತು.

ಸಮಸ್ಯೆ ನೃತಾಭಿನಯದ್ದು. ದಿ.ಕುರಿಯ ವಿಠ್ಠಲಶಾಸ್ತ್ರಿ, ಡಾ.ಪರಮಶಿವನ್, ಮಾಧವ ಮೆನನ್,ಮತ್ತು ರಾಜನ್ ಅಯ್ಯರ್ ಈ ನಾಲ್ಕು ನಾಟ್ಯ ಗುರುಗಳಲ್ಲಿ ಶಿಷ್ಯ ವೃತ್ತಿ ಮಾಡಿದರು.ಆದರೆ ತಮ್ಮ ನೃತ್ಯಾಭಿನಯ ಯಕ್ಷಗಾನೇತರ ಭರತ ನಾಟ್ಯವೇ ಆಗಿಬಿಡಬಹುದಾದ ಅಪಾಯವನ್ನು ಜಾಣ್ಮೆಯಿಂದ ತಪ್ಪಿಸಿಕೊಂಡರು.ಯಕ್ಷಗಾನದ ಹೆಜ್ಜೆಗಳ ಒರಟು ತನಕ್ಕೆ ಭರತನಾಟ್ಯದ ಲಾಲಿತ್ಯವನ್ನು ಹದವಾಗಿ ಸಂಯೋಜಿಸಿದರು.ಮೇಲು ನೋಟಕ್ಕೆ ಯಕ್ಷಗಾನ ನೃತ್ಯಾಭಿನಯ ತ್ರಾಣಾಧಾರಿತ ಎಂದು ತೋರಿದರೂ ತ್ರಾಣವೇ ಅದರ ಸರ್ವಸ್ವವಲ್ಲ. ಇಷ್ಟಾಗಿಯೂ ಅವರ ನೃತ್ಯಾಭಿನಯದಲ್ಲಿ ಯಕ್ಷಗಾನದ್ದಲ್ಲದ ಭಂಗಿ, ಪದಗತಿ, ಹಸ್ತಾಭಿನಯಗಳ ಮಿಶ್ರಶೈಲಿಯಿದೆ ಎಂಬ ಆರೋಪವಿದೆ.ಈ ಶೈಲಿ ಭಾರತೀಯ ನೃತ್ಯಶೈಲಿಗೆ ಹೊಂದಿಕೆಯಾದರೆ ಅಪರಾಧವಲ್ಲ.

ತೆಂಕಿನ ನೃತ್ಯಾಭಿನಯ ವಿಧಾನದಲ್ಲಿ ಆವಿಷ್ಕಾರ ಅಗತ್ಯ ಎಂಬುದನ್ನು ಮನಗಂಡ ಅವರಿಗೆ ಬಹಳ ಮುಖ್ಯವಾಗಿ ಒದಗಿದ್ದು ಕಡತೋಕಾ ಮಂಜುನಾಥ ಭಾಗವತರ ಹಾಡುಗಾರಿಕೆ.ಗೋವಿಂದ ಭಟ್ಟರು ಸುಮಾರು ಹತ್ತಕ್ಕಿಂತ ಹೆಚ್ಚು ಭಾಗವತರುಗಳ ಭಾಗವತಿಕೆಯಲ್ಲಿ ಪಾತ್ರನಿರ್ವಹಣೆ ಮಾಡಿದ್ದಾರೆ.ಆದರೆ ಎಲ್ಲ ಭಾಗವತರ ಪೈಕಿ ತಾನು ಅತ್ಯಂತ ಹೆಚ್ಚು ನೆನಪಿಟ್ಟುಕೊಂಡುದು ಕಡತೋಕದವರನ್ನು ಎಂದು ಅವರೇ ಒಂದು ಸಂದರ್ಭದಲ್ಲಿ ಹೇಳುತ್ತಾರೆ.ಎಲ್ಲರೂ ಬಲ್ಲ ಹಾಗೆ ಕಡತೋಕದವರು ಬಡಗು ತಿಟ್ಟಿನ,ಸಭಾಹಿತ ಮಟ್ಟಿನ ವಿವರವಾದ ನೃತ್ಯಾಭಿನಯ ಸಂಪ್ರದಾಯದಲ್ಲಿ ತಯಾರಾಗಿ ಅಲ್ಲಿನ ಘಟಾನುಘಟಿ ರಂಗನಟರನ್ನು ರಂಗದಲ್ಲಿ ಕುಣಿಸಿದವರು.ತೆಂಕು,ಬಡಗುಗಳ ಗುಣಾತ್ಮಕ ಅಂಶಗಳ ಸಮ್ಮಿಶ್ರ ಹಾಡುಗಾರಿಕೆಯ ಶೈಲಿಯಿಂದ ತೆಂಕಿನ ರಂಗಕ್ಕೊಂದು ಹೊಸ ಉತ್ಸಾಹ ತುಂಬಿದವರು.ಗೋವಿಂದ ಭಟ್ಟರು ಕಡತೋಕದವರನ್ನು ಸಂಪ್ರದಾಯದ ಸಂಕುಚಿತ ದೃಷ್ಟಿಯಿಂದ ನೋಡದೆ ಹೊಸ ಸಾಧ್ಯತೆಗೆ ಬಳಸಿಕೊಳ್ಳುವುದರ ಬಗ್ಗೆ ಯೋಚಿಸಿದರು.ಕಡತೋಕದವರ ಹಾಡುಗಾರಿಕೆ ತೆಂಕಿನ ನೃತ್ಯಾಭಿನಯ ವಿಧಾನವನ್ನು ವ್ಯವಸ್ಥೆಗೆ ಒಗ್ಗಿಸಲು ನೆರವಾಯಿತು.ಗೋವಿಂದ ಭಟ್ಟರಿಗೆ ತನ್ನ ನೃತ್ಯಾಭಿನಯದ ಹೊಸಹೊಸ ಪಟ್ಟುಗಳನ್ನು ಹೊರತೆಗೆದು ರೂಢಿಸಿಕೊಳ್ಳಲು ಅನುವಾಯಿತು. ‘ಅವರು ಹಾಗೆ ಕೆಲಸ ತೆಗೆಯುವವರಾಗಿದ್ದುರಂದ ನಾನು ಯಕ್ಷಗಾನದ ಒಂದೊಂದು ತಾಳಕ್ಕೂ ಏಳೆಂಟು ಬಗೆಯ ನೃತ್ಯವನ್ನು ಆವಿಷ್ಕರಿಸುವುದು ಅನಿವಾರ್ಯವಾಯಿತು.’ಎಂದು ನಿಸ್ಪ್ರಹವಾಗಿ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.ಈ ಆವಿಷ್ಕಾರ ತೆಂಕಿನ ಆಂಗಿಕಾಭಿನಯದ ಸಮತೋಲನಕ್ಕೆ ಒದಗಿದ ರೀತಿ ಗಮನಾರ್ಹ.ನೃತ್ಯಾಭಿನಯವನ್ನು ಆವಿಷ್ಕರಿಸುವುದೆಂದರೆ ಹಸ್ತಾಭಿನಯವನ್ನೂ ಮರುನಿರ್ಮಾಣ ಮಾಡಿಕೊಳ್ಳುವುದು.ಅಷ್ಟು ಹೊತ್ತಿಗಾಗಲೇ ತೆಂಕುತಿಟ್ಟಿನಲ್ಲಿ ಹಸ್ತಾಭಿನಯಗಳೇ ಇಲ್ಲವೆಂಬ ತಿಳುವಳಿಕೆ ಉಂಟಾಗಿಬಿಟ್ಟಿತ್ತು.ಮಾತುಗಾರರ ಉರಾವರಿಯಿಂದ ಆರ್ಷೇಯವಾದ ಹಸ್ತಾಭಿನಯವೂ ಲುಪ್ತವಾಗಿತ್ತು.‘ತೆಂಕು ತಿಟ್ಟಿನಲ್ಲಿ ಹಸ್ತಾಭಿನ ಇಲ್ಲವೆನ್ನುವುದಕ್ಕೆ ಅವರ (ಗೋವಿಂದ ಭಟ್ಟರ ಎನ್ನುವುದು ಪೂವಾನ್ವಯ) ಅಭಿನಯವೇ ಉತ್ತರ ನೀಡುತ್ತದೆ’ಎಂದು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಹೇಳುತ್ತಾರೆ. ಅಷ್ಟೇ ಅಲ್ಲ ಅವರು ಬಳಸುತ್ತಿದ್ದ ಮುದ್ರೆಗಳ ಅರ್ಥವಂತಿಕೆಯನ್ನೂ ಸ್ಥಾಯಿಭಾವಕ್ಕೆ ಅಪಚಾರವಾಗದಂತೆ ಪದಾಭಿನಯವನ್ನು ಮೇಳೈಸುವ ಗೋವಿಂದ ಭಟ್ಟರ ಅಭಿನಯ ಸಾಮರ್ಥ್ಯವನ್ನೂ ಡಾ.ಭಾರದ್ವಾಜರು ಗುರುತಿಸುತ್ತಾರೆ.ಡಾ.ಭಾರದ್ವಾಜರ ಮಾತನ್ನೇ ಬುನಾದಿಯಾಗಿಟ್ಟಕೊಂಡು ಗೋವಿಂದ ಭಟ್ಟರು ನಿರ್ಮಾಣ ಮಾಡಿದ ಕರಸಂಕೇತಗಳನ್ನೂ ಅದನ್ನು ಅವರು ಬಳಸಿದ ರೀತಿಯನ್ನೂ ಅದರಿಂದಾಗಿ ತೆಂಕಿನ ನೃತ್ಯಾಭಿನಯ ವಿಧಾನದಲ್ಲಿ ಆದ ಅರ್ಥಶಕ್ತಿಯ ಹೆಚ್ಚಳವನ್ನೂ ಒಂದು ಸಮೀಕ್ಷಾಧ್ಯಯನಕ್ಕೆ ಒಳಪಡಿಸಬಹುದು.

ಇವೆಲ್ಲವುಗಳ ಜತೆಗೆ ಗೋವಿಂದಭಟ್ಟರು ಅವರ್ತನ ತಂತ್ರ ಅಳವಡಿಸಿಕೊಂಡುದೂ ಈಗಾಗಲೇ ಪ್ರಸ್ತಾಪವಾಗಿದೆ.ಭಾಗವತರು ಹಾಡುವ ಹಾಡಿನ ಎಳೆ ಎಳೆಯನ್ನೂ ಹಿಂಜಿ ಹಿರಿದು, ಅದನ್ನು ತಮ್ಮ ಅಭಿನಯ ಕೌಶಲದಿಂದ ಮೆರೆಸುವ ಕಲಾವಿದ ಗೋವಿಂದ ಭಟ್ಟರೊಬ್ಬರಲ್ಲದೆ ಮತ್ತೊಬ್ಬರಿಲ್ಲ ಎಂಬ ಕಡುಸತ್ಯವನ್ನು ಬರೆ ಕೇಶವ ಭಟ್ಟರೂ ಎತ್ತಿ ಆಡಿದ್ದಾರೆ.ಇವನ್ನೆಲ್ಲ ಮನದಂದರೆ ತೆಂಕು ತಿಟ್ಟಿನ ರಂಗಮಾಧ್ಯಮದ ಸಮತೋಲನದ ಪುನರುತ್ಥಾನ ಪರ್ವದಲ್ಲಿ ಗೋವಿಂದ ಭಟ್ಟರ ಸ್ಥಾನ ಮತ್ತು ಪಾತ್ರ ಮನವರಿಕೆಯಾಗುತ್ತದೆ.

ಗೋವಿಂದ ಭಟ್ಟರು ಧರ್ಮಸ್ಥಳ ಕ್ಷೇತ್ರ ನಡೆಸುತ್ತಿದ್ದ ಲಲಿತಕಲಾ ಕೇಂದ್ರದಲ್ಲಿ ಗುರುವಾಗಿಯೂ ಕಾರ್ಯನಿರ್ವಸಿದ್ದರಿಂದ ಅವರ ಪಾತ್ರನಿರ್ವಣಾ ಧೋರಣೆಯಲ್ಲಿಯೇ ತಯಾರಾದ ಅಂಗೋಪಾಂಗ ಸಮನ್ವಯನಿಷ್ಠ ರಂಗನಟರ ಒಂದು ತಂಡ ನಿರ್ಮಾಣವಾದುದು ಸಮತೋಲನ ಸಾತತ್ಯಕ್ಕೇ ಅನುಕೂಲವಾಯಿತು.ಇದರ ಫಲವಾಗಿಯೇ ಸುಬ್ರಹ್ಮಣ್ಯ ಶಾಸ್ತ್ರಿ,ದೇಲಂತ ಮಜಲು ಸುಬ್ರಹ್ಮಣ್ಯ ಭಟ್ಟ,ಪದ್ಮನಾಭ ಉಪಾಧ್ಯ,ನೇರೋಳು ಗಣಪತಿ ನಾಯ್ಕ,ಮುಂತಾದ ಹಿಮ್ಮೇಳದ ಕಲಾವಿದರು ನಿರ್ಮಾಣವಾದುದು ದಾಖಲಾಗಿದೆ.ರಂಗನಟರಾಗಿ ಸುಣ್ಣಂಬಳ ವಿಶ್ವೇಶ್ವರ, ಚಿದಂಬರ ಬಾಬು,ಜಗದಭಿರಾಮ, ತಾರಾನಾಥ ವರ್ಕಾಡಿ, ವಸಂತ ಭಾರದ್ವಾಜ, ಅಂಬಾಪ್ರಸಾದ ಪಾತಾಳ, ಸಂಪಾಜೆ ಸುಬ್ರಾಯ, ಕೆದಿಲ ಜಯರಾಮ, ಸರವು ರಮೇಶ ಮುಂತಾದವರ ಹೆಸರುಗಳು ಪ್ರಸ್ತಾಪವಾಗುತ್ತವೆ.ಇವರಲ್ಲಿ ಹೆಚ್ಚಿನವರು ಈ ಕ್ಷೇತ್ರದಲ್ಲಿಯೇ ಮುಂದುವರಿದು ಸಮತೋಲನದ ಸಾತತ್ಯಕ್ಕೆ ಕಾರಣರಾಗಿದ್ದಾರೆ. ಇನ್ನು ಕೆಲವರು ಮಾತ್ರ ಪೂರಕವಾದ ಪಕ್ಕದ ದಾರಿ ಹಿಡಿದು ಹೊರಟಿದ್ದಾರೆ.

ಗೋವಿಂದ ಭಟ್ಟರು ಪ್ರತ್ಯಕ್ಷ ರಂಗನಟರಾಗಿ,ಸುದೀರ್ಘ ಅನುಭವವುಳ್ಳವರೂ ಆದುದರಿಂದ ಯಕ್ಷಗಾನ ರಂಗಶಿಕ್ಷಣದ ಕುರಿತಾದ ಅವರ ನಿಲುವುಗಳು, ಧೋರಣೆಗಳು, ಪ್ರಯತ್ನಗಳು ಅಂಗೋಪಾಂಗಗಳ ಅಸಮತೋಲನದ ದೃಷ್ಟಿಯಿಂದಲೂ ಬಹಳ ಮುಖ್ಯವಾಗುತ್ತವೆ.ತೆಂಕುತಿಟ್ಟು ಯಕ್ಷಗಾನ ಪ್ರಕಾರಕ್ಕೆ ಸರ್ವಸಮ್ಮತವಾದ ಸಂವಿಧಾನವಿಲ್ಲದಿರುವುದು ಒಂದು ಕೊರತೆಯೆಂದು ಹಿರಿಯ ಕಲಾವಿದರು ಮತ್ತು ವಿಮರ್ಶಕರು ವ್ಯಕ್ತಪಡಿಸುವ ಅಭಿಪ್ರಾಯವನ್ನು ಗೋವಿಂದ ಭಟ್ಟರು ಅನುಮೋದಿಸುತ್ತಾರೆ.ಈ ಮಾತು ಎಲ್ಲ ತಿಟ್ಟುಗಳಿಗೂ ಸಮವಾಗಿ ಅನ್ವಯಿಸುತ್ತದೆ. ‘ನೃತ್ಯ, ಅಭಿನಯ,ಮತ್ತು ಮಾತುಗಾರಿಕೆಗಳನ್ನು ಹದವಾಗಿ ಸಮ್ಮಿಶ್ರಗೊಳಿಸಿ ತಾಳ, ಲಯ, ಸ್ವರ ಮತ್ತು ಪ್ರಸಂಗಜ್ಞಾನಗಳೊಡನೆ ರಂಗತಂತ್ರವನ್ನು ಮತ್ತು ಮುಖವರ್ಣಿಕೆಯನ್ನು ಸೇರಿಸಿ ಕಲಾವಿದರನ್ನು ಸೃಷ್ಟಿಸುವ ಬಗ್ಗೆ ತೆಂಕು ತಿಟ್ಟಿನಲ್ಲಿ ಅಲ್ಲಿಯ ವರೆಗೆ ಪ್ರಯತ್ನಗಳಾದದ್ದು ನನ್ನ ಗಮನಕ್ಕೆ ಬಂದಿರಲಿಲ್ಲ’. ಡಾ.ವೀರೇಂದ್ರ ಹೆಗಡೆಯವರ ರಂಗಶಿಕ್ಷಣ ಕೇಂದ್ರದ ವಿಷಯದಲ್ಲಿ ಗೋವಿಂದಭಟ್ಟರು ತಳೆದ ನಿಲುವು ಅವರ ಸಮತೋಲನ ಪ್ರಜ್ಞೆಗೆ ಬರೆದ ಭಾಷ್ಯವೇ ಆಗುತ್ತಿತ್ತು. ತೆಂಕು ತಿಟ್ಟು ನೃತ್ಯವನ್ನು ಬಾಯಿ ತಾಳದ ಆಧಾರದಲ್ಲಿ ಕಲಿಸಬೇಕು,ಸಾಂಪ್ರದಾಯಿಕ ಹೆಜ್ಜೆಗಾರಿಕೆಯೊಡನೆ ಆವಿಷ್ಕಾರಿಕ ನೃತ್ಯವನ್ನೂ ಪ್ರಶಿಕ್ಷಣಾರ್ಥಿಗಳಿಗೆ ನೀಡಬೇಕು,ಪಠ್ಯಕ್ರಮ ಅಗತ್ಯ ಮುಂತಾದ ನಿಲುವುಗಳೆಲ್ಲವೂ ಅಂಗೋಪಾಂಗ ಸಮತೋಲನೋದ್ದೇಶಿತವೇ.ಆದರೆ ಈ ಆದರ್ಶಗಳನ್ನು ಸಾಕ್ಷಾತ್ಕರಿಸಲು ಸ್ಥಾಯೀ ಪ್ರಯತ್ನವಾಗದಿರುವುದು ವಿಷಾದನೀಯ.

ಗೋವಿಂದ ಭಟ್ಟರು ಯಕ್ಷಗಾನ ರಂಗಭೂಮಿಯ ಸಕಲ ಸಂಗತಿಗಳ ಬಗೆಗೂ ಅಭ್ಯಸಿಸಿ, ಆಲೋಚಿಸಿ ಬರೆದುದು ಸತ್ಯ.ಸ್ವತಂತ್ರ ಗ್ರಂಥವೇ ಆಗಬಲ್ಲ ಆ ವಿಚಾರಗಳು ‘ಸವ್ಯಸಾಚಿ’ ಅಭಿನಂದನ ಗ್ರಂಥದಲ್ಲಿ ‘ಯಕ್ಷಗಾನ ಚಿಂತನೆ’ ಹೆಸರಿನಲ್ಲಿ ಪ್ರಕಟವಾಗಿವೆ.ಆದರೆ ಈ ಎಲ್ಲ ವಿಚಾರಗಳಲ್ಲಿ ಯಕ್ಷಗಾನ ರಂಗಮಾಧ್ಯಮ ಸಂಪೂರ್ಣ ಭರತನ ನಾಟ್ಯಶಾಸ್ತ್ರದ ದಟ್ಟ ನೆರಳೆಂದು ಬಿಂಬಿತವಾಗುವದು ರಂಗಮಾಧ್ಯಮದ ಅಸ್ತಿತ್ವವನ್ನೂ ಅಸ್ಮಿತೆಯನ್ನೂ ಬಲವಾಗಿ ಅಲುಗಾಡಿಸಿಬಿಡುತ್ತದೆ. ಯಕ್ಷಗಾನ ರಂಗಶಾಸ್ತ್ರದಲ್ಲಿ ಕೆಲವೊಂದು ಪರಿಭಾಷೆಗಳು ಸಂಸ್ಕೃತದ್ದಾಗಿರುವುದು ನಿಜ.ಪರಿಭಾಷೆಗಳು ಎರವಲಾದ ತಕ್ಷಣ ಪರಿಕಲ್ಪನೆಗಳೂ ಎರವಲೆಂದು ಭಾವಿಸಬೇಕಾಗಿಲ್ಲ.ದಿನನಿತ್ಯದ ವ್ಯವಹಾರದಲ್ಲಿ ‘ಉಪ್ಪು’ ಪದ ಬಳಸುವ ಕನ್ನಡಿಗರು ಶಾಸ್ತ್ರಕ್ಕೆ ಹೋದ ತಕ್ಷಣ ‘ಲವಣ’ಪದವನ್ನು ಆಶ್ರಯಿಸುತ್ತಾರೆನ್ನುವ ಭಾಷಾಶಾಸ್ತ್ರಜ್ಞ ನಾಡೋಜ ಡಿ.ಎನ್.ಶಂಕರ ಭಟ್ಟರ ಮಾತು ನಿಜವಾಗುತ್ತದೆ. ಈ ಎಲ್ಲ ಆಲೋಚನೆಗಳೂ ಗೋವಿಂದ ಭಟ್ಟರ ಸಮೃದ್ಧ ರಂಗಾನುಭವದಿಂದ ಅಲಂಕೃತವಾಗಿದ್ದರೆ.ಅವಗಳ ಸಿಂಧುತ್ವವೇ ಬೇರೆ ರೀತಿಯದಾಗಿರುತ್ತಿತ್ತು.

ಗೋವಿಂದ ಭಟ್ಟರ ಕುರಿತಾಗಿ ಅವರ ಆತ್ಮಚರಿತ್ರೆ ‘ಯಕ್ಷೆಪಾಸನೆ’ ಮತ್ತು ಅಭಿನಂದನ ಗ್ರಂಥ ‘ಸವ್ಯಸಾಚಿ’ ಎರಡು ಗ್ರಂಥಗಳು ಬಂದಿವೆ.ಆದರೂ ಅವರ ಸಾಧನೆ, ಕೊಡುಗೆಗಳನ್ನು ಹೊರತಿಟ್ಟಿಗೆ ಪರಿಚಯಿಸಿಕೊಟ್ಟಿದ್ದು ಸಾಕಾಗಲಿಲ್ಲವೆಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ‘ತೆಂಕು ತಿಟ್ಟಿನ ಧನ್ವಂತರಿ’ಯಾಗಬಹುದಾದ ಅವರ ಕುರಿತು ಪೂರ್ಣಪ್ರಮಾಣದ ಅಧ್ಯಯನವೇ ಅಗತ್ಯ. ಅವರ ಕೃತುಶಕ್ತಿಯ ಪರಮ ಪ್ರಯೋಜನ ಪಡೆಯಬಲ್ಲ ಪ್ರಾಯೋಜನೆಯೊಂದು ಸಿದ್ಧಗೊಳ್ಳಬೇಕಾದ ಅಗತ್ಯವೂ ಇದೆ.

ಗೋವಿಂದ ಭಟ್ಟರು ನಿರ್ವಹಿಸಿದ ಪಾತ್ರಗಳ ಸಂಖ್ಯೆ ಮತ್ತು ವೈವಿಧ್ಯವೂ ವಿಸ್ತಾರವಾದುದೇ. ಕೆಲವೊಂದು ಗೊಂದಲ ಮತ್ತು ಅನಿಶ್ಚಿತತೆ ಇದ್ದ ಮುಖವರ್ಣಿಕೆ ಮತ್ತು ವೇಷಭೂಷಣಗಳನ್ನು ಬಿಟ್ಟರೆ ಬಹು ಮಟ್ಟಿಗೆ ಅವರಲ್ಲಿ ಆಹಾರ್ಯ ಪ್ರಜ್ಞೆ ಜಾಗೃತವಾದುದೇ.ಒಂದು ಕಾಲಘಟ್ಟದ ಅವರ ಸ್ತ್ರೀಪಾತ್ರಗಳ ವೇಷಭೂಷಣ ಸಾಮಾಜಿಕವಾದುದೇ ಆಗಿತ್ತೆಂಬುದಕ್ಕೆ ‘ಸವ್ಯಸಾಚಿ’ಯ ‘ಗೋವಿಂದ ಚಿತ್ರ ವೈಭವ’ದ ಪುಟ ಎ೧೭ರಲ್ಲಿ ಪ್ರಕಟವಾದ ‘ಇರಾ ಶ್ರೀ ಗೋಪಾಲ ಕೃಷ್ಣ ಭಾಗವತರೊಂದಿಗೆ ಗೋವಿಂದ ಭಟ್ಟರ ಸ್ತ್ರೀ ವೇಷ’ ಸಾಕ್ಷಿ. ಇದೇ ಭಟ್ಟರು ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಸ್ತ್ರೀ ವೇಷ ಮಾಡಿದ ಚಿತ್ರಗಳೂ ಇವೆ. ಆಹಾರ್ಯವಿಧಾನದಲ್ಲಿ ಅವರು ಮಾಡಿರಬಹುದಾದ ಆವಿಷ್ಕಾರಗಳೂ ವಿಸ್ತೃತ ಅಧ್ಯಯನದಿಂದಲೇ ದಾಖಲಾಗಬೇಕಾಗಿದೆ. ಮುಖ್ಯವಾಗಿ ಅವರ ನಿರ್ವಹಣೆಯಲ್ಲಿ ನೃತ್ಯಾಭಿನಯ ಮತ್ತು ವಾಚಿಕಾಭಿನಯದ ಪ್ರಮಾಣ ಸಮತೋಲನದ್ದು. ಅವರು ತಾಳಮದ್ದಳೆಯ ಸಮರ್ಥ ಅರ್ಥಧಾರಿಗಳೂ ಹೌದಾದುದರಿಂದ ಅವರನ್ನು ‘ಸವ್ಯಸಾಚಿ’ ಎಂದು ಕರೆದುದು.ಅವರು ಎಂದೂ ವೇಷ ಹಾಕಿಕೊಂಡು ತಾಳ ಮದ್ದಳೆ ಮಾಡುವುದಿಲ್ಲ. ಕೆಲ ಕಾಲ ಹರಿ ಕೀರ್ತನೆ ಮಾಡಿದ್ದಾರಾದರೂ ರಂಗದಲ್ಲಿ ಹರಿಕಥೆ ಮಾಡುವುದಿಲ್ಲ.ಈ ಕಲಾಮಾಧ್ಯಮಗಳಲ್ಲಿರುವ ಒಳ ವ್ಯತ್ಯಾಸದ ಪ್ರಜ್ಞೆ ಅವರಲ್ಲಿ ಗಾಢವಾಗಿಯೇ ಇದೆ.

ಗೋವಿಂದ ಭಟ್ಟರು ನಿರ್ವಹಿಸಿದ ಪಾತ್ರಗಳ ಯಾದಿಯಲ್ಲಿ ಗದಾಪರ್ವದ ದುರ್ಯೋಧನನ ಪಾತ್ರವೂ ಇದೆ.ಈ ಪ್ರಸಂಗದ ಪ್ರದರ್ಶನ ಮತ್ತು ಪಾತ್ರ ಚಿತ್ರಣ ಕ್ರಮ ಉತ್ತರ ಕನ್ನಡದ ಬಡಗು ತಿಟ್ಟಿಗೂ ತೆಂಕುತಿಟ್ಟಿಗೂ ವ್ಯತ್ಯಾಸವಿತ್ತು.ಗೋವಿಂದ ಭಟ್ಟರು ಕಡತೋಕಾ ಮಂಜುನಾಥ ಭಾಗವತರು ಮುಮ್ಮೇಳದಲ್ಲಿದ್ದಾಗ ಉತ್ತರಕನ್ನಡದ ಕ್ರಮವನ್ನು ಸ್ವೀಕರಿಸಿದ್ದಾರೆ.ತಮ್ಮ ಆತ್ಮಚರಿತ್ರಯಲ್ಲಿಯೂ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಡಾ. ಎಮ್. ಪ್ರಭಾಕರ ಜೋಶಿಯವರೂ ‘ಕೆಲವು ಗೋವಿಂದ ಚಿತ್ರಗಳು’ಬರಹದಲ್ಲಿ ಅನುರಣಿಸಿದ್ದಾರೆ.ಪದ್ಯದ ಕೆಲವು ಸಂದರ್ಭಗಳಲ್ಲಿ ‘ಕಡತೋಕ ಮಂಜುನಾಥ ಭಾಗವತರು ಹಲವು ಬಾರಿ ಈ ಸಾಲುಗಳನ್ನು ಆವರ್ತಿಸಿ ನನ್ನಿಂದ ತುಂಬಾ ಕೆಲಸ ಮಾಡಿಸಿ ಬಿಡುತ್ತಿದ್ದರು’ ಎಂದು ಭಟ್ಟರು ಹೇಳಿದ್ದಾರಲ್ಲದೆ,ಈ ವಿಷಯದಲ್ಲಿ ಶೇಣಿಯವರು ಎತ್ತಿದ ಆಕ್ಷೇಪವನ್ನೂ ದಾಖಲಿಸಿದ್ದಾರೆ. ಉತ್ತರ ಕನ್ನಡದ ಬಡಗುತಿಟ್ಟಿನಲ್ಲಿ ವಿಶೇಷವಾಗಿ ಕೆರೆಮನೆ ಶಂಭು ಹೆಗಡೆಯವರು ಬಳಸುತ್ತಿದ್ದ ಈ ಆವರ್ತನ ತಂತ್ರ ಮತ್ತು ಅದಕ್ಕೆ ಬಂದ ಆಕ್ಷೇಪ ಸಹಜವಾದುದುದೇ.ಆದರೆ ಅದೇ ರಂಗಕೃತಿಯಲ್ಲಿ ಬರುವ ಶೋಕಭಾವದ ನೃತ್ಯಾತ್ಮಕ ನಿರ್ವಹಣೆಯ ಕುರಿತು ಮಾತ್ರ ಆತ್ಮಚರಿತ್ರೆಯಲ್ಲಿ ಏನನ್ನೂ ಹೇಳಿಕೊಳ್ಳಲಿಲ್ಲ.ನಿಧಾನ ನಡೆಯ ಸಭಾಹಿತ ಮಟ್ಟಿನ ಮೂಲದಿಂದ ಬಂದ ಕಡತೋಕೆಯವರು ನಿಧಾನ ಲಯದ ಶೋಕ ಭಾವದ ಪದ್ಯಗಳನ್ನು ನೃತ್ಯಾಭಿನಯಕ್ಕೆ ಅನುಕೂಲಿಸುವಂತೆ ಲಯವಿತರಣೆ ಮಾಡಿ ಹಾಡಬಲ್ಲರು.ಕಡತೋಕೆಯವರ ಹಾಡುಗಾರಿಕೆಗೇ ನೃತ್ಯಾಭಿನಯ ಮಾಡಲಿಲ್ಲವೆಂದಾದರೆ ಗೋವಿಂದ ಭಟ್ಟರ ಶೋಕಭಾವದ ನೃತ್ಯಾಭಿನಯ ಸಾಮರ್ಥ್ಯದ ಬಗ್ಗೆ ತೀರ್ಮಾನಕ್ಕೆ ಬರುವುದು ಕಷ್ಟಸಾಧ್ಯ. ನಾನು ನೋಡಿದ ಅವರ ಗದಾಪರ್ವದ ಕೌರವನ ಪಾತ್ರದ ಶೋಕಭಾವದ ಸಂದರ್ಭದಲ್ಲಿ ನೃತ್ಯಾಭಿನಯ ಮಾಡಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.ಬಹುಶಃ ಹಿಮ್ಮೇಳ ಅವರಿಗೆ ಒದಗಿರಲಿಕ್ಕಿಲ್ಲ ಎಂದು ಭಾವಿಸುತ್ತೇನೆ. ಶೋಕಭಾವದ ನೃತ್ಯಾಭಿನಯ ಹೆಚ್ಚು ತ್ರಾಣಾಧಾರಿತವಲ್ಲದುದರಿಂದ ಮನಸ್ಸು ಮಾಡಿದರೆ ಈಗಲೂ ಅವರಂದ ಸಾಧ್ಯವಿದೆ. ಅಲ್ಲದೆ ‘ನೃತ್ಯ ಆನಂದದ,ಭಾವಾವೇಶದ ಪ್ರತೀಕ’ಎನ್ನುವುದು ಗೋವಿಂದ ಭಟ್ಟರ ಗ್ರಹಿಕೆಯೇ ಆದುದರಿಂದ ಅವರಿಂದ ಶೋಕಭಾವದ ನೃತ್ಯವನ್ನು ನಿರೀಕ್ಷಿಸಲು ಸಾಧ್ಯವಿರಲಾರದು. ಉಳಿದಂತೆ ‘ಪಡುವಲಪಾಯ ಯಕ್ಷಗಾನದಲ್ಲಿ ತೆಂಕುತಿಟ್ಟು ಸಾತ್ವಿಕಾಭಿನಯದಲ್ಲಿಯೂ ಹಿಂದಿದೆ. ಇದರ ಆಹಾರ‍್ಯ-ಆಂಗಿಕಗಳೂ ಈ ಹಿನ್ನಡೆಗೆ ಹೇತುಗಳಾಗಿವೆ.’ ಎನ್ನುವ ಡಾ. ಗಣೇಶ ಅವರ ಸಾಂದರ್ಭಿಕ ಆಕ್ಷೇಪಕ್ಕೆ ಗೋವಿಂದ ಭಟ್ಟರು ಮಿಕ್ಕ ರಸಭಾವಗಳಾದ ಶೃಂಗಾರ, ರೌದ್ರ, ವೀರ, ಹಾಸ್ಯಗಳ ನಿರ್ವಹಣೆಯ ವಿಷಯದಲ್ಲಿ ಅವರ ನಿರ್ವಹಣಾ ಸಾಮರ್ಥ್ಯದ ಮೂಲಕ ಒಂದು ಪ್ರಮಾಣದ ಉತ್ತರ ನೀಡಿದ್ದಾರೆ. ವೀರ ಮತ್ತು ರೌದ್ರವನ್ನೂ ಪ್ರತ್ಯೇಕಿಸಿ ಅಭಿನಯಿಸಿದ ಒಂದು ಸಂದರ್ಭವನ್ನು ಪ್ರೊ.ಎಮ್.ಎಲ್. ಸಾಮಗರು ಉಲ್ಲೇಖಿಸಿದ್ದಾರೆ.ಸ್ಥಾಯಿ,ಸಂಚಾರಿಗಳ ಕಲ್ಪನೆಯೂ ಅವರಿಗೆ ಸ್ಪಷ್ಟವಾಗಿಯೇ ಇದೆ. ತೆಂಕುತಿಟ್ಟಿನಲ್ಲಿ ಇಲ್ಲಿಯ ವರೆಗೆ ವಾಚಿಕಾಂಗದಿಂದ ಮಾತ್ರ ರಸಭಾವಗಳ ಅಭಿವ್ಯಕ್ತಿ ಸಾಧ್ಯವೆನ್ನುವ ಸಾರ್ವತ್ರಿಕ ಅಭಿಪ್ರಾಯಕ್ಕೆ ಸಾಧ್ಯತೆಯ ಇನ್ನೊಂದು ಆಯಾಮವನ್ನು ತೋರಿಸಿದ್ದಾರೆ.

ಇಷ್ಟಾಗಿಯೂ ‘ತೆಂಕು ತಿಟ್ಟಿನ ಮುಮ್ಮೇಳಕ್ಕೆ ಆವಿಷ್ಕಾರಿಕ ಆಯಾಮ ನೀಡಿದ ಶಕ ಪುರುಷ.ಯಕ್ಷಗಾನದ ಸಂಪ್ರದಾಯ ಮತ್ತು ಸೃಜನಶೀಲತೆಗಳ ಮಹಾನ್ ಕಲಾವಿದ’ಎನ್ನುವ ಟಿ.ಶಾಮಭಟ್ಟರ ಮಾತು ನಿಬಂಧನೆಗೆ ಒಳಪಡುತ್ತದೆ. ವಿಸ್ತಾರವಾದ ಅವಲೋಕನ ಮತ್ತು ಅಧ್ಯಯನದಿಂದ ಮಾತ್ರ ಇಂಥ ತೀರ್ಮಾನಕ್ಕೆ ಬರಬಹುದು. ತೆಂಕುತಿಟ್ಟಿನ ದಶಕಗಳ ಅಸಮತೋಲನ ಪರಂಪರೆಗೆ ಆಶಾದಾಯಕವಾದ ತಿರುವು ಇವರಿಂದ ಸಿಕ್ಕಿದ್ದಂತೂ ನಿಜ. ಆದ್ದರಿಂದ ಗೋವಿಂದ ಭಟ್ಟರ ಕಾಲಘಟ್ಟವನ್ನು ‘ ತೆಂಕುತಿಟ್ಟು ಯಕ್ಷಗಾನದ ಪುನರುತ್ಥಾನ ಪರ್ವ’ ಎಂದು ಹೆಸರಿಸಿದರೆ ಆಕ್ಷೇಪಾರ್ಹವಾಗಲಾರದಲ್ಲವೆ?

ಗೋವಿಂದ ಭಟ್ಟರ ಪ್ರಯತ್ನಗಳಲ್ಲಿ ಇದ್ದಿರಬಹುದಾದ ಮಿತಿಗಳನ್ನು ನಿವಾರಿಸಿಕೊಂಡು ಸಮತೋಲನದ ಸಾತತ್ಯ ಸಾಧಿಸಬೇಕಾದುದು ತೆಂಕಿನವರೆಲ್ಲರ ಹೊಣೆಗಾರಿಕೆ. ಶ್ರೀಯುತರಿಗೆ ೨೦೧೬ರಲ್ಲಿ ಕೇಂದ್ರಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ‘ಈಚೆಗೆ ಮಂಗಳೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವ ಮೂಲಕ ಇವರ ಪ್ರಯತ್ನ. ಸಾಧನೆ, ಕೊಡುಗೆ ಗಳಿಗೆ ಅಧಿಕೃತವಾದ ಶೈಕ್ಷಣಿಕ ಮುದ್ರೆ ಒತ್ತಿದೆ.’)

(೨೦೧೭ರಲ್ಲಿ ಪ್ರಕಟವಾದ ‘ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ’ ಎನ್ನುವ ೧೩೬ ಪುಟಗಳ ಗ್ರಂಥದಿಂದ ಈ ಭಾಗವನ್ನು ಆಯ್ದು ಇಲ್ಲಿ ಪ್ರಕಟಿಸಲಾಗಿದೆ. ಈ ಗ್ರಂಥಕ್ಕೆ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಯಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ಕೃತಿಪ್ರಶಸ್ತಿಯೂ ದೊರಕಿದೆ)

ಜಿ.ಎಸ್.ಭಟ್ಟ,ಸಾಗರ

error: Content is protected !!
Share This