ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹಗುರವಾಗಿ ಪರಿಗಣಿಸಬಾರದು. ಪ್ರತಿಯೊಂದರಲ್ಲೂ ಅಭೂತಪೂರ್ವವಾದ ಮಾಯಾಶಕ್ತಿ ಇರುತ್ತದೆ ಎಂದು ವಿಮರ್ಶಕ ಡಾ. ರಮಾನಂದ ಬನಾರಿ ಹೇಳಿದರು.

ಯಕ್ಷಗಾನ ಅರ್ಥಧಾರಿ ಡಾ. ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಜೋಶಿ ವಾಗರ್ಥ ಗೌರವ’ ಸಂವಾದ, ವಿಚಾರ ಸಂಕಿರಣ, ತಾಳಮದ್ದಳೆ, ಬಯಲಾಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಕ್ಷಗಾನದಲ್ಲಿ ಅರ್ಥಧಾರಿಕೆಯೇ ಪ್ರತ್ಯೇಕ ಕಲೆ. ಅದು ಎಲ್ಲರಿಗೂ ಸುಲಭವಾಗಿ ಬರುವುದಿಲ್ಲ. ಪಾತ್ರಧಾರಿಯಲ್ಲಿ ಪ್ರತಿಭೆಯೂ ಅಗತ್ಯವಾಗಿ ಇರಲೇಬೇಕು. ಇಲ್ಲದೆ ಇದ್ದರೆ ಸಮಚಿತ್ತದಿಂದ ಪಾತ್ರ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಮರ್ಶಕ ಸೀತಾರಾಮ ಭಟ್ ದಾಮ್ಲೆ ಮಾತನಾಡಿ, ಯಕ್ಷಗಾನ, ತಾಳಮದ್ದಳೆಗಳು ಇಂದು ಕಡಿಮೆಯಾಗಿವೆ. ಇಂದಿನ ಕೆಲವು ಕಲಾವಿದರಲ್ಲಿ ಸೌಜನ್ಯದ ಕೊರತೆ ಇದೆ. ಅಂಥವರು ಇನ್ನೊಬ್ಬ ಕಲಾವಿದನನ್ನು ಬೆಳೆಸುವುದೂ ಇಲ್ಲ. ಆತನನ್ನು ಆ ಕ್ಷೇತ್ರದಲ್ಲಿ ಉಳಿಸಿಕೊಳ್ಳುವ ಕೆಲಸವನ್ನೂ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುವೆಂಪು ವಿ.ವಿ ವಿಶ್ರಾಂತ ಕುಲಪತಿ ಕೆ. ಚಿದಾನಂದ ಗೌಡ ಮಾತನಾಡಿದರು.

ಡಾ. ಪ್ರಭಾಕರ ಜೋಶಿ, ಜೋಶಿ ಅಭಿನಂದನಾ ಸಮಿತಿ ಅಧ್ಯಕ್ಷ ಎಂ. ಬಾಲಚಂದ್ರ ಡೋಂಗ್ರೆ, ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಸಮಿತಿ ಕಾರ್ಯದರ್ಶಿ ವಿದ್ವಾನ್ ಗ.ನಾ.ಭಟ್ಟ ಇದ್ದರು.

ಜೋಶಿ ಅವರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು. ನಂತರ ಅವರೊಂದಿಗೆ ಸಂವಾದ ನಡೆಯಿತು. ಬಳಿಕ ‘ಅಂಬಾ ದುರಂತ’ ತಾಳಮದ್ದಳೆ ನಡೆಯಿತು.

ಪ್ರಜಾವಾಣಿ ದಿನಾಂಕ 14-05-2017 ರಲ್ಲಿ ಪ್ರಕಟಿತ

error: Content is protected !!
Share This