ಡಾ.ಎಂ.ಪ್ರಭಾಕರ ಜೋಶಿ

ಜಗತ್ತಿನ ತತ್ತ್ವ ಶಾಸ್ತ್ರ ಚರಿತ್ರೆಯ ಸಾರ್ವಕಾಲಿಕ ಅತ್ಯಂತ ವಿಶಿಷ್ಟ ಮತ್ತು ಮೇಧಾವಿ ಚಿಂತಕರಲ್ಲಿ ಓರ್ವರೆಂದು ಕೀರ್ತಿತರಾದವರು ಆಚಾರ್ಯ ಆದಿಶಂಕರರು. (ಸು.ಕ್ರಿ.ಶ. 750. ಬಹುಮತದ ಅಭಿಪ್ರಾಯದಲ್ಲಿ ಕ್ರಿ.ಶ.788-820: ಅಂದರೆ ಒಟ್ಟು ಮೂವತ್ತೆರಡು ವರುಷಗಳ ಜೀವಿತ).ಅವರ ಜಯಂತಿಯು ವೈಶಾಖ ಶುದ್ಧ ಪಂಚಮಿ (ಈ ವರ್ಷ ಮೇ 6). ಅದರ ನೆಪದಲ್ಲಿ ತತ್ತ್ವ ಜ್ಞಾನ ಸಾಮ್ರಾಜ್ಯವನ್ನು ಮೂರಡಿಯಲ್ಲಿ ಅಳೆದ ಈ ಕಾಲಡಿಯ ಬಾಲಕನ ದರ್ಶನ ಪರಿಣಾಮದ ಅಣುಮಾತ್ರವೂ ಅಲ್ಲದ ಒಂದು ನೋಟ ಇದು.

“…ಶಂಕರರ ದರ್ಶನವು ರಾವಣನ (ಅಂಧಕಾರದ ಹತ್ತುಮುಖ) ಬಂಧನದಲ್ಲಿದ್ದ ಜೀವ (ಸೀತೆಯನ್ನು ಶೋಧಿಸಿ ರಾಮ (ಬ್ರಹ್ಮತತ್ತ್ವ )ನೊಂದಿಗೆ ಒಂದಾಗಿಸುವ, ಅತ್ಯಂತ ಕಠಿನವಾದ ಸಮುದ್ರೋಲ್ಲಂಘನದ, ಸೀತಾನ್ವೇಷಣೆಯ ಹೋರಾಟದ ಕಾರ್ಯದಂತೆ”.

(ಮಾಧವೀಯ ಶಂಕರ ವಿಜಯದ ಬಗೆಗೆ ಆರ್.ಕೃಷ್ಣಮೂರ್ತಿ ಶಾಸ್ತ್ರಿಗಳ್ ಅವರ ವ್ಯಾಖ್ಯಾನದಲ್ಲಿ ).

ಅರ್ಥಾತ್ ಭಾರತೀಯ ವೇದಾಂತ-ದರ್ಶನದ ಮರು ಶೋಧನೆ, ಪುನಃಪ್ರಾಪ್ತಿ, ಸೀತೆಯ ಅನ್ವೇಷಣೆಯ ಹಾಗೆ, ರಾಜರ್ಷಿ ಜನಕ ಮಹಾರಾಜನು ನೆಲದೊಳಗಿನ ವೇದಾಂತ ರಹಸ್ಯವನ್ನು ಉಳುಮೆ ಮಾಡಿ ಶೋಧಿಸಿದರೆ, ಆಂಜನೇಯನು ಅದನ್ನು ಮರಳಿ ದರ್ಶಿಸಿದನು. ಆದುದರಿಂದ ಶಂಕರರದು ಮಹಾ ಪ್ರತ್ಯಭಿಜ್ಞಾ ವಜ್ರಾಂಗ, ಹನುಮಂತ ಪ್ರಜ್ಞೆ.

ಶಂಕರರ ಯೋಜನೆ: ಆಚಾರ್ಯ ಶಂಕರರು ಒಂದು ಸಂಕೀರ್ಣ ದಾರ್ಶನಿಕ ಯುಗದಲ್ಲಿ ಉದಿಸಿದವರು. ಆಗ ಆರು ವೈದಿಕ ಸಾಂಖ್ಯ, ಯೋಗ ,ನ್ಯಾಯ, ವೈಶೇಷಿಕ, ಮಿಮಾಂಸಾ,ವೇದಾಂತ) ಗಳೂ, ಅವೈದಿಕ ಮಾರ್ಗಗಳೂ(ಜೈನ, ಚಾರ್ವಾಕ, ಬೌದ್ಧ, ಆಜೀವಕ ಇತ್ಯಾದಿ), ವಿವಿಧ ಆಗಮ ಆರಾಧನಾ ಪದ್ಧತಿಗಳು (ಶೈವ, ಶಾಕ್ತ, ವೈಷ್ಣವ, ಸ್ಕಾಂದ, ಭೂತ, ಜಾನಪದಾದಿ ವಿಧಗಳು) ಬೆಳೆದು ಆಕಾರ ತಾಳಿದ್ದವು.

ಇವುಗಳನ್ನೆಲ್ಲ ನೋಡಿ, ಗೌರವಿಸಿ, ಸಮಗ್ರವೆನ್ನಬಹುದಾದ ಒಂದು ದರ್ಶನ ಮತ-ಆರಾಧನಾ ಪದ್ಧತಿಯನ್ನು ರೂಪಿಸುವುದು ಅವರ ಮಹಾ ಯೋಜನೆ ಆಗಿತ್ತು. ಜತೆಗೆ ಜ್ಞಾನ ವಿಧಾನ ಪ್ರಮಾಣ ಶಾಸ್ತ್ರಗಳನ್ನೂ ವ್ಯವಸ್ಥೆಗೊಳಿಸುವ ಚಿಂತನೆ ಅವರದಾಗಿತ್ತು. ಇದನ್ನೆಲ್ಲ ವೇದ ವೇದಾಂತಗಳ ಆಧಾರದಲ್ಲಿ ತರ್ಕ ಸಮ್ಮತವಾಗಿಯೂ, ನಂಬುಗೆಗಳಿಗೆ ಚ್ಯುತಿ ಇಲ್ಲದೆಯೂ ಅವರು ಸಾಧಿಸಿದರು. ಮಾತ್ರವಲ್ಲ, ಒಂದು ಅಕಲ್ಪನೀಯವಾದ ಪ್ರಚಂಡವೆನಿಸುವ ದರ್ಶನ ಹಿಮಾಲಯವನ್ನು ಅಭಿವ್ಯಕ್ತಿಸಿದರು. ಅದಕ್ಕಾಗಿಯೇ ಶಂಕರನ ಅವತಾರ, ಜ್ಞಾನಾವತಾರ ಶಂಭು ಎನಿಸಿದರು.

ಈ ಯತ್ನದಲ್ಲಿ ತನ್ನೆಲ್ಲವನ್ನೂ – ಪಾಂಡಿತ್ಯ, ಪ್ರತಿಭೆ, ಸಮಗ್ರದೃಷ್ಟಿ, ಅಂತರ್ಬೋಧೆ ಸತತ ಯತ್ನಗಳೆಲ್ಲವನ್ನೂ ಮುಡಿಪಿಟ್ಟು ದರ್ಶನ ಕ್ಷೇತ್ರದ ಮುಡಿ ಮುಡಿಪಾದರು. ಇಷ್ಟನ್ನು ಸಾಧಿಸಲು ಮನುಷ್ಯನಿಗೆ ಅಸಾಧ್ಯ ಎಂಬ ನ್ಯಾಯವಾದ ಬೆರಗಿನಿಂದ ‘ಅವತಾರ’ ಎನಿಸಿದರು.

ಈ ಸಿದ್ಧಿಯಲ್ಲಿ ಅವರ ಯೋಜನೆಯ ಕೆಲವು ಮುಖ್ಯ ಮಜಲುಗಳು, ಮುಖಗಳು ಇವು.

1. ಅಧ್ಯಾಸ ಕಲ್ಪನೆ: ಬ್ರಹ್ಮಸೂತ್ರ ಭಾಷ್ಯದ ಆರಂಭದಲ್ಲಿ ಬರುವ ನಾಲ್ಕಾರು ಪುಟಗಳಷ್ಟೆ ಇರುವ ಅಧ್ಯಾಸ ಭಾಷ್ಯದಲ್ಲಿ ಮಂಡಿಸಿದ ಜ್ಞಾನ ವಿಚಾರವಿದು. ಅಧ್ಯಾಸ ಭಾಷ್ಯವು ಭಾರತೀಯ ದಾರ್ಶನಿಕ ಶಾಸ್ತ್ರ ಸಾಹಿತ್ಯದಲ್ಲೇ ವಿಶಿಷ್ಟ.

ಅದರಲ್ಲಿ ಅವರು ವಿವರಿಸಿದ ಅಧ್ಯಾಸ ಕಲ್ಪನೆ ಅದೊಂದು ಸರ್ವಕಾಲ-ಸರ್ವಶಾಸ್ತ್ರ ಎಂದರೆ ಅದೊಂದು ಸರ್ವ ವೈಚಾರಿಕ ಸಂದರ್ಭಗಳಿಗೆ ಅನ್ವಯಿಸುವ ಸೂತ್ರಪ್ರಾಯ ಚಿಂತನ ಸಾರ.

2. ಒಂದನ್ನು ಇನ್ನೊಂದಾಗಿ ತಿಳಿಯುವುದು: ನೈಸರ್ಗಿಕ ಅನಿವಾರ್ಯವಾಗಿ ಜೀವರಿಗೆ ಸ್ವಭಾವ. ಇದನ್ನು ತಪ್ಪುತಿಳಿವು, ಗೊಂದಲ, ನೆನಪಿನ ತಪ್ಪು, ಅಜ್ಞಾನ ಎನ್ನಬಹುದು. ಇದು ಒಂದನ್ನು ಇನ್ನೊಂದಾಗಿ ತಿಳಿಯುವ ರೂಢಿ. ಅದೇ ಅಧ್ಯಾಸ-(ಕಂಪೊಸಿಟ್ಕನ್‌ಪ್ಯೂಷನ್) ಹೇರುವಿಕೆ, ಮಿಶ್ರಣ ಬ್ರಹ್ಮವು ವಸ್ತುಗಳಾಗಿ, ಒಂದೇ ಆತ್ಮದ ಗುಣ ದೇಹಕ್ಕೆ, ದೇಹದ್ದು ಆತ್ಮಕ್ಕೆ ಹಲವಾಗಿ ಕಾಣುವುದಲ್ಲ ಇದರಿಂದಲೆ, ಇದರ ನಿವಾರಣೆಗೂ ವೇದವು ದಾರಿ ಹೇಳಿದೆ. ಅದೇ ತತ್ತ್ವಮಸಿ , (ನೀನು ಅದೇ), ‘ನೇಹನಾನಾಸ್ತಿ ಕಿಂಚನ (ಇಲ್ಲಿ ವೈವಿಧ್ಯವಿಲ್ಲ, ಏಕತ್ವವೇ ಇದೆ), ಅಹಂ ಬ್ರಹ್ಮಾಸ್ಮಿ (ಜೀವವು ಬ್ರಹ್ಮವೇ) ಇತ್ಯಾದಿ ವಾಕ್ಯಗಳ ಉಪನಿಷತ್ತುಗಳ ಸಾರದ ಅನುಸಂಧಾನ . ಅದೇ ಅಧ್ಯಾಸದ ಮಾಯೆ/ಭ್ರಮೆ.ಅವಿದ್ಯೆಗಳನ್ನು ದಾಟಿ ತಲುಪುವ ಅರಿವಿನ ಅರಿವು, ಕಣ್ಣಿನ ಕಣ್ಣು, ವೇದದ ವೇದ.ಮುಳ್ಳು -ಔಷಧಿ ಎರಡೂ ಪ್ರಕೃತಿಯ ಒಳಗೇ ಉಂಟು.

3.ದರ್ಶನ ಖಂಡನ ಸ್ವೀಕಾರ: ಭಾರತದ ಬಹುಪ್ರಾಚೀನ ಮತ್ತು ಬಹುಶಃ ಎಲ್ಲ ದರ್ಶನಗಳಿಗೂ ಪ್ರೇರಕ ಪೋಷಕವಾದ -ಪ್ರಕೃತಿ ಪುರುಷ ಎಂಬ ಅದ್ಭುತ ಸೂತ್ರವನ್ನಿತ್ತ ಸಾಂಖ್ಯರ ಪ್ರಕೃತಿಗೂ ಶಂಕರರ ಮಾಯೆಗೂ ಹತ್ತಿರ ಹತ್ತಿರ. ಪುರುಷ ಇತ್ಯಾದಿ ವಿಚಾರಗಳು ದೂರ. ಸಾಂಖ್ಯವು ತನಗೆ ಪ್ರಧಾನ ಮಲ್ಲ (ಮುಖ್ಯ ಪ್ರತಿಪಕ್ಷ) ಎಂದಿದ್ದಾರೆ ಶಂಕರರು. ಇದು ಹೇಗೆಂದರೆ, ದ್ರೋಣರನ್ನು ಅರ್ಜುನ ಇದಿರಿಸಲಿಲ್ಲವೆ? ಹಾಗೆನ್ನಬಹುದು.

ಮೀಮಾಂಸಕರ ಕರ್ಮಠತೆ, ಯಜ್ಞಯಾಗಗಳೇ ಸರ್ವಸ್ವವೆಂಬ ದೃಷ್ಟಿ(ಕರ್ಮಕಾಂಡ) ಶಂಕರರ ಜ್ಞಾನದೃಷ್ಟಿಗೆ ಅಸಮ್ಮತ. ಆದರೆ ಪ್ರಮಾಣ ವಿಷಯ (ಪ್ರತ್ಯಕ್ಷ, ಅನುಮಾನ, ವೇದ ಇತ್ಯಾದಿ) ಮಾನ್ಯವಾಗಿದೆ. ತಾರ್ಕಿಕರ ವೈಶೇಷಿಕ ವಿಚಾರಗಳೂ ಹಾಗೆಯೇ ವಿಷಯದಲ್ಲಿ ಒಪ್ಪಿಗೆ ಅಥವಾ ಅಸಮ್ಮತಿ, ಒಟ್ಟು ನಿರಾಕರಣೆ ಇಲ್ಲ.

ಬ್ರಹ್ಮ ಅದೈತ
ಬ್ರಹ್ಮವೇದಂ ಅಮೃತಂ
ಪುರಸ್ತಾತ್ ಬ್ರಹ್ಮ
ಪಶ್ಚಾತ್ ಬ್ರಹ್ಮ
ದಕ್ಷಿಣಶ್ಚ ಉತ್ತರೇಣ
ಅಧಶ್ಚ ಊರ್ಧ್ವಚ ಪ್ರಸೃತಂ
ಬ್ರಹ್ಮ್ಮೈವೇದಂ ವಿಶ್ವಂ
ಇದಂ ವರಿಷ್ಠಂ
– ಮುಂಡಕೋಪನಿಷತ್

4. ಬೌದ್ಧ ಸಮನ್ವಯ: ಶಂಕರರಿಗೂ ಬುದ್ಧ (ಬೌದ್ಧನಿಗೂ ಇರುವ ಸಂಬಂಧಗಳ ಕುರಿತು ಕಳೆದ ಸಾವಿರ ವರ್ಷಗಳಿಂದ ವಿಪುಲ ಚರ್ಚೆ ನಡೆದಿದೆ. ವೇದಾಂತಿಗಳಲ್ಲಿ ಈಶ್ವರವಾದಿಗಳಿಗೆ ಶಂಕರರು ಪ್ರಚ್ಛನ್ನ (ಗುಟ್ಟಿನ ರಹಸ್ಯ ಬೌದ್ಧ. ಮಾಯವಾದವೂ ಬೌದ್ಧವೇ ಎಂದು ಪದಪುರಾಣದ ಘೋಷಣೆ. ಕೆಲವರಿಗೆ (ಮುಖ್ಯತ: ಆಧುನಿಕ ದಾರ್ಶನಿಕ ರಾಜಕಾರಣಿಗಳಿಗೆ) ಬೌದ್ಧರನ್ನು ಸೋಲಿಸಿ ಓಡಿಸಿದ ಹಿಂದೂ ಉತ್ಥಾನವಾದಿ (ಕೋಮುವಾದಿ ಎಂದು ಓದಿ ಶಂಕರರು ! ಹೇಗಿದೆ, ಈ ನಿಲುಮೆಗಳೇ ಎರಡನ್ನೂ ಸುಳ್ಳೆಂದು ಸ್ಥಾಪಿಸುತ್ತವೆ.

ಶಂಕರರ ಕಾಲಕ್ಕೆ ಬೌದ್ಧ ಧರ್ಮ ದರ್ಶನಕ್ಕೆ ಪ್ರತಿಷ್ಠೆ, ಗೌರವ ಇದ್ದುವು. ಆದರೆ ಅದು ಶಕ್ತಿಶಾಲಿ ಆಗಿರಲಿಲ್ಲ. ಮಹಾಯಾನ ಬೌದ್ಧದ ಬುದ್ಧ ಭಗವಂತ, ಮಂದಿರ, ಉತ್ಸವಾದಿಗಳಿಂದ ಅದು ‘ಹಿಂದು’ವೇ ಆಗಿತ್ತು. ಅದಕ್ಕೆ ಮೂಲವೂ ಉಪನಿಷತ್ತ ತಾನೆ? ಹಾಗಾಗಿ ಓಡಿಸುವ ಕೆಲಸ ಇರಲೇ ಇಲ್ಲ. ಅಲ್ಲದೆ-ಶೂನ್ಯವೇ ಪರಮಸತ್ಯ ಎಂದು ಹೇಳಿ, ಪಾಪಪುಣ್ಯ ಪುನರ್ಜನ್ಮ ಎಲ್ಲ ಹೇಳಿದರೆ ಅದು ದಾರ್ಶನಿಕ ವೈರುಧ್ಯವೇ ಸರಿ. ಬೌದ್ಧರ ಖಂಡನೆ ಮಾಡಿದ್ದು ಕುಮಾರಿಲರೇ ಹೊರತು ಶಂಕರರಲ್ಲ. ಇದನ್ನು ವಿಚಾರಪರರು ಪರಾಂಬರಿಸಬೇಕು. ಬುದ್ಧನನ್ನು ಉಪನಿಷತ್ ಪರಂಪರೆಯ ಭಾಗವೆಂದು
ಮಾನ್ಯ ಮಾಡಿದ್ದು, ಯಥಾರ್ಥವಾಗಿ ಶಂಕರರು, ಗೌಡಪಾದರು.

ಶಂಕರರು ಬುದ್ಧನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಆತನ ಕರ್ಮಕಾಂಡಗಳ ನಿರಾಸಕ್ತಿ, ಅದ್ವಯ ಚಿಂತನೆ, ಸತ್ಯದ ಎರಡು ಸ್ತರಗಳು (ಸಂವೃತಿ ಮತ್ತು ಪಾರಮಾರ್ಥಿಕ ಸತ್ಯ), ನಿರ್ವಾಣ ಇವೆಲ್ಲ ಶಂಕರರಿಗೂ ಅವರ ಗುರು ಗೌಡಪಾದರಿಗೂ ಒಪ್ಪಿತವೇ ಆಗಿದ್ದುವು. ಅದನ್ನವರು ಮರಳಿ ಉಪನಿಷನ್ಮಾರ್ಗಕ್ಕೆ ಸಮನ್ವಯಗೊಳಿಸಿದರು. ಉಪನಿಷತ್ತಿನ ದಾರಿಯಲ್ಲಿ ಹೊರಟ ಬುದ್ಧ ಮತ್ತು ವೇದಾಂತ ವ್ಯಾಸರು ಶಂಕರರಲ್ಲಿ ಒಂದಾಗಿ ನಿಂತರು. ಇದೇ ಪ್ರಚ್ಛನ್ನ ಬೌದ್ಧ ಎಂಬ ನಿಜವಾದ ಹೊಗಳಿಕೆ.

ಅವರು ಬೌದ್ಧರ ಶೂನ್ಯವಾದವನ್ನು ಚರ್ಚೆಗೂ ಯೋಗ್ಯವಲ್ಲವೆಂದು ಖಂಡಿಸಿದ್ದಾರೆ ನಿಜ. ವೇದಾಂತಿಗಳಾದ ರಾಮಾನುಜ, ಮದ್ದರೂ ಹಿಂದಿನ ವೇದಾಂತಿಗಳನ್ನು ಕಟುವಾಗಿ ಖಂಡಿಸಿಲ್ಲವೇ, ಬೌದ್ಧರ ಎರಡು ಸತ್ಯಗಳನ್ನು, ಶಂಕರರು ಮೂರಾಗಿ ಪರಿಷ್ಕರಿಸಿದ್ದು ದಾರ್ಶನಿಕ ಸೃಜನಶೀಲತೆ.

ಸಂವೃತಿ ಸತ್ಯ, ಪರಮಾರ್ಥ ಸತ್ಯ ಬೌದ್ಧರದು. ಪ್ರಾತಿಭಾಸಿಕ ಸತ್ಯ, ವ್ಯಾವಹಾರಿಕ ಸತ್ಯ, ಪಾರಮಾರ್ಥಿಕ ಸತ್ಯ ಶಂಕರರದು. ಬುದ್ಧನು(ಆಕಾಶ)ಶೂನ್ಯ ಅಧ್ಯಯವಾದಿ, ಶಂಕರರು ಪೂರ್ಣ (ಬ್ರಹ್ಮ) ಅದ್ವಯ ಅದೈತಿ! ವೇದ ಬುದ್ಧ ಉದ್ದುದ್ದ ಶಂಕರ.

5. ಪಂಚ ಆಯತನ: ಶಂಕರರ ಕಾಲಕ್ಕೆ ವಿವಿಧ ದೇವತಾ ಪೂಜೆ, ಇಷ್ಟ ದೇವತಾರಾಧನೆ, ಷಣ್ಮತ, ಜಾನಪದ ಆರಾಧನೆ ಎಲ್ಲ ಇತ್ತು. ಅವೆಲ್ಲವನ್ನೂ ಒಟ್ಟಾಗಿಸಿ, ಪ್ರಾಣಿಬಲಿಯನ್ನು ನಿಷೇಧಿಸಿ, ಕರ್ಮಕಾಂಡವನ್ನು ಅಪ್ರಸ್ತುತಗೊಳಿಸಿ, ಭಕ್ತಿಯನ್ನು ಉಳಿಸಿ ಪಂಚಾಯ ತನವನ್ನು ಪಸರಿಸಿದರು. ಸಕಲದೇವತಾ ಆಯತನಕ್ಕೂ ಮಾನ್ಯತೆ ಕೊಟ್ಟರು. ಆದುದರಿಂದಲೇ ಅವರು ಶೈವ, ವೈಷ್ಣವ, ಶಾಕ್ತ, ಗಾಣಾಪತ್ಯ, ಎಲ್ಲವೂ, ಯಾವುದೂ ಅಲ್ಲದ ಬ್ರಹ್ಮವಾದಿ. ಅವರ ಭಜಗೋವಿಂದಂ, ಶಿವಾನಂದ ಲಹರಿ, ಸೌಂದರ್ಯ ಲಹರೀ, ಸಂದ ಸ್ತೋತ್ರಗಳು ಭಕ್ತಿಸಾಹಿತ್ಯದ ಮಹೋನ್ನತ ಕಾವ್ಯರತ್ನಗಳು, ಸಮನ್ವಯದ ಮಹಾ ರೂಪಕಗಳು.

ಶಂಕರ ದರ್ಶನ ಸರ್ವಾಶ್ರಯ ಸರ್ವಾಸ್ತಿ ವಾದಿ.
ವಟುರ್ವಾ ಗೇಹೀವಾ ಯತಿರಪಿ ಜಟೀವಾ ತದಿತರೋ
ನರೋವಾ ಯ: ಕಶ್ಚಿದ್ಭವತು ಭವಾ
ಕಿಂತೇನ ಭವತಿ |
ಯದೀಯಾ ಹೃತ್ ಪದ್ಮಂ ಯದಿ ಭವದಧೀನಂ ಪಶುಪತೇ
ತದೀಯಂ ಸ್ವಂ ಶಂಭೋ ಭವಸಿ
ಭವಭಾರಂ ಚ ಹರಸಿ || (ಶಿವಾನಂದ ಲಹರೀ 11)

(ಹೊಸದಿಗಂತ) 5.5 2022

error: Content is protected !!
Share This