ಹಡಿನಬಾಳು ಶ್ರೀಪಾದ ಹೆಗಡೆಯವರು ನಿನ್ನೆ ನಮ್ಮನ್ನ ಅಗಲಿದ್ದು ಮನಸ್ಸಿಗೆ ಮಂಕು ಕವಿಸಿದೆ. ನಮ್ಮ ಮೇಳದಲ್ಲಿ ಬಹುದೀರ್ಘ ಒಡನಾಟ ಹಾಗೇ ದಾಯಾದ್ಯ ಸಂಬಂಧ ಬೆಳೆದು ಬಂದಿದೆ. ಒಬ್ಬ ಕಲಾವಿದನಾಗಿ ಹಡಿನಬಾಳರ ಸಾಧನೆ ಅಪೂರ್ವ. ಆದರೆ ಅದಕ್ಕೆ ತಕ್ಕ ಪ್ರತಿಫಲ ಅವರಿಗೆ ದೊರೆಯಲಿಲ್ಲ. ಬಡಾಬಡಗಿನ ನಾಟ್ಯ ಅದರಲ್ಲೂ ಅಭಿನಯದಲ್ಲಿ ಅವರ ಸಾಧನೆ ಹೆಚ್ಚು. ಬಲರಾಮ, ಕಂಸ, ಹನುಮಂತ, ಋತುಪರ್ಣ, ವಿವಿಧ ಪ್ರಸಂಗಗಳಲ್ಲಿ ಭೀಮ, ವಿಶ್ವಾಮಿತ್ರ, ಜಮದಗ್ನಿ ಹೀಗೆ ನಾಯಕ ಪ್ರತಿನಾಯಕ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುತ್ತಿದ್ದ ಅವರ ಕಲಾಶಕ್ತಿ ನೆನಪು ಸದಾ ಉಳಿಯುವಂತದ್ದು. ಅವರ ಪಾತ್ರಗಳು ಹೆಚ್ಚಾಗಿ ಕೆರೆಮನೆ ಮಹಾಬಲ ಹೆಗಡೆಯವರ ಪ್ರಭಾವಕ್ಕೆ ಒಳಗಾಗಿದ್ದರೂ ಅವರ ಆಳುತನ, ನಾಟ್ಯ ವೈವಿಧ್ಯತೆಯಿಂದ ಅವರದ್ದೇ ಆದ ಅಭಿವ್ಯಕ್ತಿ ಶೈಲಿಯನ್ನ ಕೇವಲ ಅನುಕರಣೆ ಎನಿಸದಂತಹ ಮಾರ್ಗ ಕಂಡುಕೊಂಡರು. ಚಿಕ್ಕಪುಟ್ಟ ಹಾಸ್ಯದಿಂದ ಹಿಡಿದು ಎತ್ತರದ ಎಲ್ಲಾ ವಿಧದ ಪಾತ್ರ ಮಾಡಿದವರು. ನಿರಂತರ ರಂಗದಲ್ಲಿ ದಣೀವಿಲ್ಲದೇ ಕುಣಿದ ಹೆಗಡೆಯವರು ಹಲವು ಮೇಳಗಳಲ್ಲಿ ಕಲಾಸೇವೆ ಮಾಡಿದ್ದರೂ ಕೂಡಾ ಇಡಗುಂಜಿ ಮೇಳದಲ್ಲಿ ಬಹುಕಾಲ ಸೇವೆ ಸಲ್ಲಿಸಿದ್ದಾರೆ. ವೈಯಕ್ತಿಕವಾಗಿ ಅವರ ಸಾತ್ವಿಕ ಸ್ವಭಾವ, ಶುದ್ಧತೆ ಗಮನಿಸುವಂತಹದ್ದು. ಬದುಕಿನಲ್ಲಿ ಕಡು ಕಷ್ಟವನ್ನು ಕಂಡವರು. ಕೇವಲ ಯಕ್ಷಗಾನ ಕಲಾವಿದರಾಗಿದ್ದಲ್ಲದೇ ಅತ್ಯಂತ ಉತ್ತಮ ಮಣ್ಣಿನ ಶಿಲ್ಪ ಮಾಡುವ ಕಲಾವಿದರು ಕೂಡಾ. ಯಾವುದೇ ಕೆಲಸವನ್ನ ಶೃದ್ಧೆಯಿಂದ ಮಾಡಬಲ್ಲ ಅವರ ಸರಳತೆ, ಜೀವನದಲ್ಲಿ ಇಂಥಹದ್ದೇ ಬೇಕೆಂಬ ಒತ್ತಡಕ್ಕೆ ಒಳಗಾಗದ ಕ್ರಮ ಎಲ್ಲರಿಗೂ ಆದರ್ಶ. ಅವರ ನಿರ್ಗಮನ ನನಗೆ ನಮ್ಮ ಮೇಳಕ್ಕೆ ತುಂಬಲಾರದ ನಷ್ಟ. ವೈಯಕ್ತಿಕವಾಗಿ ಬಹು ಪ್ರೀತಿಯಿಂದ ‘ಶ್ರೀಪಾದಣ್ಣ’ ಎಂದು ಕರೆಯುತ್ತಿದ್ದ ನನ್ನ ಮನೋಭಾವ ಇಂದು ಬತ್ತಿದೆ.

ಅವರ ವಾಲಿ, ಅಕ್ರೂರ, ಹರಿಶ್ಚಂದ್ರದ ವೀರವಾಹುಕ ಮುಂತಾದ ಪಾತ್ರಗಳು ಕಣ್ಣಮುಂದೆ ಕುಣಿಯುತ್ತದೆ. ಭಕ್ತಿಯಲ್ಲಿ ಮೈಮರೆಯುವ ಹನುಮಂತ, ನಿತ್ಯಜೀವನದಲ್ಲಿ ಅತ್ಯಂತ ಆಸ್ತಿಕ್ಯದಿಂದ ಬದುಕಿದ ರೀತಿ, ಜೀವನ ಶೃದ್ಧೆ, ಸರಳತನದ ನಡವಳಿಕೆ ಮತ್ತೆ ಮತ್ತೆ ಅಶ್ರುವನ್ನು ತರಿಸುತ್ತದೆ. ಬಹುಷ ಈಗ ಅದಕ್ಕಿಂದ ಹೆಚ್ಚು ಬರೆಯಲಾರೆ.

ಕೆರೆಮನೆ ಶಿವಾನಂದ ಹೆಗಡೆ

error: Content is protected !!
Share This