ಪಠ್ಯಗಳು ಬದುಕುಳಿಯುವ ಚೋದ್ಯದ  ಕುರಿತೊಂದು  ಚಿಂತನೆ :

ಶ್ರೀ ವಿಜಯನ ಕವಿರಾಜಮಾರ್ಗ ಕೃತಿಯನ್ನು ಯಶಸ್ವಿಯಾಗಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಜೆ ಎನ್ ಯು ಕನ್ನಡ ಅಧ್ಯಯನ ಪೀಠವು ಇದೀಗ 10ನೇ ಶತಮಾನದ ಶಕ್ತಿಶಾಲೀ ಕವಿ ರನ್ನನ ಗದಾಯುದ್ಧಂ ಕೃತಿಯನ್ನು ಇಂಗ್ಲೀಷಿಗೆ ಅನುವಾದ ಮಾಡಿ, ಇದೇ ಫೆಬ್ರವರಿ 16 ರಂದು ಜೆ ಎನ್ ಯು ವಿನ ಮುಖ್ಯ ಸಭಾಂಗಣದಲ್ಲಿ ಬಿಡುಗಡೆ ಮಾಡಲಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಬಹುಭಾಷಾ ವಿಶಾರದ ಪ್ರೊ. ಆರ್ ವಿ ಎಸ್ ಸುಂದರಂ ಮತ್ತು ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕಿ ಅಮ್ನೇಲ್ ಶೆರೋನ್ ಅವರು ಕೃತಿಯನ್ನು ಅನುವಾದ ಮಾಡಿದ್ದಾರೆ.  ಪ್ರೊ. ಅಕ್ಕಮಹಾದೇವಿ ಅವರು ಸಂಪಾದನಾ ಕೆಲಸಗಳನ್ನು ನಿರ್ವಹಿಸಿದ್ದಾರೆ. ಕನ್ನಡಪೀಠ ಮತ್ತು ದೆಹಲಿಯ ಮನೋಹರ ಪ್ರಕಾಶನದವರು ಜಂಟಿಯಾಗಿ ಪುಸ್ತಕವನ್ನು ಹೊರತಂದಿದ್ದಾರೆ.

ಹೊಸ ರೀತಿಯಲ್ಲಿ ಬಿಡುಗಡೆ: 

ಕನ್ನಡ ಅಭಿಜಾತ ಪರಂಪರೆಯ ಕೃತಿಗಳು ಕಾಲ ಮತ್ತು ದೇಶಗಳ ಚೌಕಟ್ಟುಗಳಲ್ಲಿ ಸ್ಥಗಿತವಾಗಿ ಉಳಿದಿಲ್ಲ. ಕುಮಾರವ್ಯಾಸನು ಕಾವ್ಯದ ಕೇಳುಗರ ಪಟ್ಟಿಯಲ್ಲಿ  ‘ಜಂಗಮ ಜನಾರ್ಧನ’ರನ್ನೂ ಸೇರಿಸಿದ್ದಾನೆ. ನಮ್ಮ ಕಾವ್ಯಗಳು ಜಂಗಮ ಜನರ‍್ಧನರನ್ನು ತಲುಪಿದ್ದು ಹೇಗೆ ಎಂದು ಕೇಳಿಕೊಂಡರೆ ನಮ್ಮಲ್ಲಿ ಜನಪ್ರಿಯವಾಗಿದ್ದ ಗಮಕ ಪರಂಪರೆಯ ಬಗ್ಗೆ ಒಂದು ತಿಳುವಳಿಕೆ ಮೂಡುತ್ತದೆ. ಮುಂದೆ ಹರಿಕತಾ ಪರಂಪರೆಯು ಗಮಕ ಪರಂಪರೆಯನ್ನು ತನ್ನೊಡನೆ ಜೋಡಿಸಿಕೊಂಡು, ಕನ್ನಡ ಕಾವ್ಯಗಳನ್ನು ಮತ್ತಷ್ಟು ವಿಸ್ತರಿಸಿತು. ಮುಂದೆ 17 ಮತ್ತು 18ನೇ ಶತಮಾನದಲ್ಲಿ ಕನ್ನಡ ಕಾವ್ಯಗಳನ್ನೇ ಆಧರಿಸಿ ಬರೆಯಲಾದ ನೂರಾರು ಸಂಖ್ಯೆಯ ಯಕ್ಷಗಾನ ಪ್ರಸಂಗಗಳು ಕಾಣಿಸಿಕೊಂಡುವು. ಈ ಯಕ್ಷಗಾನ ಕವಿಗಳು ನಡುಗನ್ನಡ ಕಾವ್ಯಗಳ ಸಾಲುಗಳನ್ನು ಇಡಿಇಡಿಯಾಗಿಯೇ ಎತ್ತಿಕೊಂಡು, ಅವುಗಳನ್ನು ಅಲ್ಪಸ್ವಲ್ಪ ಮಾರ್ಪಡಿಸಿ ಪ್ರಸಂಗ ರೂಪದಲ್ಲಿ  ರಂಗಭೂಮಿಗೆ ಅಳವಡಿಸಿದರು. ಚಂಡೆಮದ್ದಳೆ ಭಾಗವತಿಕೆಗಳ ಜೊತೆಗೆ ಬಣ್ಣ, ಕುಣಿತ, ವೇಷಭೂಷಣ ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕ ಕಾವ್ಯಗಳು ರಂಗಭೂಮಿಗೆ ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು.  ಅವುಗಳನ್ನು ಲಕ್ಷಾಂತರ ಜನ ನೋಡುವಂತಾಯಿತು.

ಈ ಚಿಂತನಾಕ್ರಮವನ್ನು ಆಧರಿಸಿ ಗದಾಯುದ್ಧ ಪುಸ್ತಕ ಬಿಡುಗಡೆಯನ್ನು ವಿಶಿಷ್ಟವಾಗಿ ಆಯೋಜಿಸಲಾಗಿದೆ. ಆ ದಿನ ರನ್ನನ ಗದಾಯುದ್ಧದ ಕೃತಿಯ ಇಂಗ್ಲಿಷ್ ಅನುವಾದವನ್ನು ಪ್ರಾಧ್ಯಾಪಕರಾದ ಪ್ರೊ. ವೆಂಕಟಾಚಲ ಹೆಗಡೆ ಅವರು ಬಿಡುಗಡೆಗೊಳಿಸಲಿದ್ದಾರೆ. ಅನುವಾದಕರಾದ ಪ್ರೊ. ಆರ್ ವಿ ಎಸ್ ಸುಂದರಂ ಮತ್ತು ಅಮ್ನೇಲ್ ಶೆರೋನ್ ಅವರು ಮೂಲ ಕೃತಿ ಹಾಗೂ ಅನುವಾದದ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ. ವಿಜಯಪುರದ ಶ್ರೀ ಕೃಷ್ಣ ಕೊಲ್ಲಾರ ಕುಲಕರ್ಣಿ ಹಾಗೂ ಬೆಂಗಳೂರಿನ ಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯಭಟ್ ಅವರು ರನ್ನನ ಗದಾಯುದ್ಧವನ್ನು ಗಮಕದಲ್ಲಿ ಪ್ರಸ್ತುತ ಪಡಿಸಿದರೆ,  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದರಾದ ಡಾ. ಲಕ್ಷ್ಮಣದಾಸರು ತಮ್ಮ ತಂಡದೊಂದಿಗೆ ಗದಾಯುದ್ಧವನ್ನು ಹರಿಕತೆ ರೂಪದಲ್ಲಿ ಮಂಡಿಸಲಿದ್ದಾರೆ. ಕೊನೆಯಲ್ಲಿ ಪ್ರಖ್ಯಾತವಾದ ಕೆರೆಮನೆ ಇಡಗುಂಜಿ ಮೇಳದ ಕಲಾವಿದರು ಗದಾಯುದ್ಧ ಯಕ್ಷಗಾನ ಪ್ರಸಂಗವನ್ನೂ ಪ್ರರ‍್ಶಿಸಲಿದ್ದಾರೆ. 1930ರಷ್ಟು  ಹಿಂದೆ  ಅರ್ನಾಲ್ಡ್ ಬಾಕೆ ಯು  ದಾಖಲಿಸಿದ ಗದಾಯುದ್ಧದ ಓದಿನ ಕ್ರಮವನ್ನೂ ಪ್ರಸ್ತುತ ಪಡಿಸಲಾಗುವುದು.

ಹೀಗೆ 10ನೇ ಶತಮಾನದ ಒಂದು ಪಠ್ಯವು ಬಹುರೂಪಿಯಾಗಿ ವಿಸ್ತಾರಗೊಳ್ಳುತ್ತಾ ಇವತ್ತಿನವರೆಗೆ ಬದುಕುಳಿದ ಬಗೆಯ ಚೋದ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಕರ‍್ಯ ಕ್ರಮದ ಉದ್ಧೇಶ. ಸಂಶೋಧಕರಿಗೆ ಪ್ರಸ್ತುತಗೊಳಿಸಲಾಗುವುದು. ಅಭಿಜಾತ ಕೃತಿಗಳನ್ನು ಅಧ್ಯಯನ ಮಾಡುವ ಸುಮಾರು 250 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪುರುಷೋತ್ತಮ ಬಿಳಿಮಲೆ

ಪ್ರಾಧ್ಯಾಪಕ

ಕನ್ನಡ ಅಧ್ಯಯನ ಪೀಠ, ಜೆ ಎನ್ ಯು, ನವದೆಹಲಿ

error: Content is protected !!
Share This
%d bloggers like this: