ನಿನ್ನೆ ನಿಧನರಾದ ತೋಡಿಕಾನ ವಿಶ್ವನಾಥ ಗೌಡರು ತೆಂಕುತಿಟ್ಟಿನ ಯಕ್ಷಗಾನ ರಂಗದಲ್ಲಿ ಮಿಂಚಿದ ಕಲಾವಿದರು . ಪುಂಡು ವೇಷಧಾರಿಯಾಗಿ , ಗಯ್ಯಾಳಿ ಹಾಗೂ ಗರತಿ ಸ್ತ್ರೀ ಪಾತ್ರಗಳಲ್ಲಿ ಏಕಪ್ರಕಾರವಾಗಿ ತಮ್ಮ ಅದ್ಭುತ ಪ್ರತಿಭೆಯ ಮೂಲಕ ಯಕ್ಷಗಾನ ರಸಿಕರ ಮನೋಪಟಲದಲ್ಲಿ ಸ್ಥಾಪಿತಗೊಂಡ ಕಲಾವಿದರು.

ಸುಮಾರು ನಾಲ್ಕು ದಶಕಗಳ ಕಾಲ ಯಕ್ಷಗಾನ ತಿರುಗಾಟ ನಡೆಸಿ , ಮೂರು ವರ್ಷಗಳ ಹಿಂದೆ ಯಕ್ಷರಂಗದಿಂದ ನಿವೃತ್ತರಾಗಿದ್ದರು . ಆದರೂ , ಯಕ್ಷಗಾನದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು . ಸುಂಕದಕಟ್ಟೆ ಮೇಳದಲ್ಲಿ ಸೇವೆಯನ್ನು ಮಾಡಿದ್ದರು.

23.08.1959 ರಂದು ಸುಳ್ಯ ತಾಲೂಕಿನ ತೋಡಿಕಾನದ ಅಡ್ಯಡ್ಕದಲ್ಲಿ ಸುಬ್ಬಪ್ಪ ಗೌಡ – ರಾಮಕ್ಕ ದಂಪತಿಗಳ ಸುಪುತ್ರರಾಗಿ ಜನಿಸಿದ ವಿಶ್ವನಾಥ ಗೌಡರು ತಮ್ಮ ಶಾಲಾ ದಿನಗಳಲ್ಲೇ ನಾಟಕ , ಯಕ್ಷಗಾನದತ್ತ ಒಲವು ಹೊಂದಿದ್ದರು . ಕುದ್ಕಾಡಿ ವಿಶ್ವನಾಥ ರೈಗಳಲ್ಲಿ ಭರತ ನಾಟ್ಯ ಅಭ್ಯಸಿಸಿದರು . ತಮ್ಮ 10 ನೇ ತರಗತಿಯ ವ್ಯಾಸಂಗ ಪೂರೈಸಿ , ಸುಪ್ರಸಿದ್ಧ ಯಕ್ಷಗಾನ ಗುರುಗಳಾದ ಪಡ್ರೆ ಚಂದುರವರಲ್ಲಿ ಹಾಗೂ ಕುರಿಯ ವಿಠಲ ಶಾಸ್ತ್ರಿಯವರಲ್ಲಿ ಶಿಷ್ಯರಾಗಿ ಸೇರಿ ಯಕ್ಷಗಾನದ ಎಲ್ಲಾ ನಾಟ್ಯಾಭ್ಯಾಸ ಕರಗತ ಮಾಡಿಕೊಂಡರು .1970 – 80 ರ ದಶಕದಲ್ಲಿ ಅತಿರಥ ಮಹಾರಥರ ಸಾಂಗತ್ಯದ ಕರ್ಣಾಟಕ ಮೇಳ ಸೇರಿದರು . ಪುಂಡುವೇಷ ಹಾಗೂ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿ ಪ್ರಸಿದ್ಧರಾದರು . ಕರ್ಣಾಟಕ ಮೇಳದಲ್ಲಿ 9 ವರ್ಷಗಳ ತಿರುಗಾಟ ಪೂರೈಸಿ ಕರ್ನೂರು ಕೊರಗಪ್ಪ ರೈಗಳ ಯಾಜಮಾನ್ಯದ ಕದ್ರಿ ಮೇಳ ಸೇರಿದರು . ನಂತರ ಕುಂಬ್ಳೆ ಮೇಳದಲ್ಲೂ ತಿರುಗಾಟ ನಡೆಸಿ , 1990 ರಲ್ಲಿ ಕಟೀಲು ಮೇಳದಲ್ಲಿ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿ ಸೇರ್ಪಡೆಯಾದರು . ಕಟೀಲು ಮೇಳದಲ್ಲಿ ಸುಮಾರು 29 ವರ್ಷಗಳ ದೀರ್ಘ ಕಾಲದ ತಿರುಗಾಟ ನಡೆಸಿ , ಮೂರು ವರ್ಷಗಳ ಹಿಂದೆ ಯಕ್ಷರಂಗದಿಂದ ನಿವೃತ್ತರಾದರು.

ತೋಡಿಕಾನ ವಿಶ್ವನಾಥ ಗೌಡರು ಸುಮಾರು 43 ವರ್ಷಗಳ ಯಕ್ಷಗಾನದ ತಿರುಗಾಟ ನಡೆಸಿದವರು . ಕರ್ಣಾಟಕ ಮೇಳದಲ್ಲಿ ಪ್ರಾರಂಭದಲ್ಲಿ ಪುಂಡುವೇಷ ಮಾಡುತ್ತಿದ್ದವರು , ಶಾರೀರಿಕವಾಗಿ ಸ್ವಲ್ಪ ಉದ್ದವಿರುವ ಕಾರಣ, ನಂತರದಲ್ಲಿ ಸ್ತ್ರೀ ಪಾತ್ರದಲ್ಲೇ ತೊಡಗಿಸಿಕೊಂಡರು . 1980 ರ ದಶಕದಲ್ಲಿ ಕರ್ಣಾಟಕ ಮೇಳದವರಿಂದ ಅಭೂತಪೂರ್ವ ಯಶಸ್ಸು ಗಳಿಸಿದ ಅನಂತರಾಮ್ ಬಂಗಾಡಿಯವರ ” ಕಾಡಮಲ್ಲಿಗೆ ” ತುಳು ಪ್ರಸಂಗದಲ್ಲಿ ಪ್ರಾರಂಭದಲ್ಲಿ ಜೋಡಿಪಾತ್ರವಾದ ಪುಂಡುವೇಷ ಮಾಡಿ , ನಂತರ ಸ್ತ್ರೀ ಪಾತ್ರ ನಿರ್ವಹಿಸುತ್ತಿದ್ದರು.

ನಂತರದಲ್ಲಿ ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳ ಸೇರುವಾಗ ಆ ವರ್ಷ ಡಿ.ಮನೋಹರ ಕುಮಾರರ ” ಗೆಜ್ಜೆದ ಪೂಜೆ ” ಪ್ರಸಂಗದ ಕಾಲ . ಆ ಪ್ರಸಂಗದಲ್ಲಿ ವೇಶ್ಯೆ ಮಂಜರಿಯ ಪಾತ್ರ ನಿರ್ವಹಿಸಿ ಕಲಾಭಿಮಾನಿಗಳ ಮನ ಗೆದ್ದು ಪ್ರಸಿದ್ಧರಾದರು . ನಂತರದಲ್ಲಿ ತಮ್ಮ ಕರ್ಣಾಟಕ ಮೇಳದಲ್ಲಿ ಒಡನಾಡಿಗಳಾದ ದಾಸಪ್ಪ ರೈಗಳ ವ್ಯವಸ್ಥಾಪಕತ್ವದ ಕುಂಬಳೆ ಮೇಳ ಸೇರಿದರು . ನಂತರ ಕಟೀಲು ಮೇಳ ಸೇರಿ ಸುಮಾರು 29 ವರ್ಷಗಳ ತನಕ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದೆ ಯಕ್ಷರಂಗದಿಂದ ನಿವೃತ್ತರಾದರು .ಕಟೀಲು ಮೇಳದಲ್ಲಿ ಬಲಿಪ ಭಾಗವತರು , ಕುಬಣೂರು ಶ್ರೀಧರ್ ರಾವ್ , ಕುರಿಯ ಗಣಪತಿ ಶಾಸ್ತ್ರಿ , ಪಟ್ಲ ಸತೀಶ್ ಶೆಟ್ಟಿ , ಗಂಗಯ್ಯ ಶೆಟ್ಟಿ , ಕೊಳ್ಯೂರು ರಾಮಚಂದ್ರ ರಾವ್ , ಪೆರುವಾಯಿ ನಾರಾಯಣ ಶೆಟ್ಟಿ , ಸುಣ್ಣಂಬಳ ವಿಶ್ವೇಶ್ವರ ಭಟ್ , ಬೆಳ್ಳಾರೆ ಮಂಜುನಾಥ ಭಟ್ , ಸುಬ್ರಾಯ ಹೊಳ್ಳ , ಕೈರಂಗಳ ಕೃಷ್ಣ ಮೂಲ್ಯ ಮುಂತಾದವರ ಒಡನಾಟದಲ್ಲಿ ಮಿಂಚಿದರು. ಶ್ರೀದೇವಿ , ಲಲಿತಾಂಬಿಕೆ , ದಮಯಂತಿ , ಮಂಡೋದರಿ , ಚಂದ್ರಮತಿ , ಯಶೋಮತಿ , ಚಂದ್ರಾವಳಿ , ಪದ್ಮಾವತಿ , ಅಂಬೆ , ಸತ್ಯಭಾಮೆ , ಶಾರದೆ , ಮಾಯಾ ಶೂರ್ಪನಖೀ , ಲಕ್ಷ್ಮಿ , ಶಾರದೆ , ದ್ರೌಪದಿ , ಕಯಾದು , ಶಶಿಪ್ರಭೆ ಮುಂತಾದವು ತೋಡಿಕಾನರಿಗೆ ಪ್ರಸಿದ್ಧಿ ತಂದು ಕೊಟ್ಟ ಪಾತ್ರಗಳು.

ತೋಡಿಕಾನರ ಪಾತ್ರ ನಿರೂಪಣೆ ಸುಂದರ. ನಾಟ್ಯದಲ್ಲಿ ಲಾಸ್ಯವಿತ್ತು , ಲಾಲಿತ್ಯವಿತ್ತು. ಪ್ರಸಂಗದ ನಡೆಯನ್ನು ಅರಿತೇ ಪಾತ್ರ ಚಿತ್ರಣ ನೀಡುತ್ತಿದ್ದರು . ಕಟೀಲು ಮೇಳದಲ್ಲಿ ” ಶ್ರೀದೇವಿ ಮಹಾತ್ಮೆ ” ಪ್ರಸಂಗದ ಶ್ರೀದೇವಿಯ ಪಾತ್ರದಲ್ಲಿ ಪ್ರಸಿದ್ಧರಾದ ಪುರುಷೋತ್ತಮ ಭಟ್ , ಮುಳಿಯಾಲ ಭೀಮಭಟ್ಟರ ನಂತರದಲ್ಲಿ ಪ್ರಸಿದ್ಧಿ ಗಳಿಸಿದವರು ಕುಂದಾಪುರ ಕುಷ್ಟ ಗಾಣಿಗರು . ತೋಡಿಕಾನರ ಶ್ರೀದೇವಿಯ ಪಾತ್ರವು ಕುಷ್ಟ ಗಾಣಿಗರ ಪ್ರಸ್ತುತಿಯಂತೇ ಭಾಸವಾಗುತ್ತಿತ್ತು ಎಂಬುದು ಹಿರಿಯ ಯಕ್ಷಗಾನ ಪ್ರೇಕ್ಷಕರ ಅಭಿಪ್ರಾಯ ಸುಳ್ಳಲ್ಲ .ಹಾಗೆಂದು ಅದು ಕುಷ್ಟರ ಅನುಕರಣೆಯಲ್ಲ ಎಂಬುದು ಗಮನಾರ್ಹ . ಯಶೋಮತಿಯಾಗಿ ಭಾವಪೂರ್ಣ ಅಭಿನಯ ನೀಡಿದ್ದನ್ನು ಮರೆಯಲೇ ಸಾಧ್ಯವಿಲ್ಲ . ಅಪರೂಪಕ್ಕೊಮ್ಮೆ ನಿರ್ವಹಿಸುತಿದ್ದ ಶ್ರೀಕೃಷ್ಣ , ಶ್ರೀವಿಷ್ಣು ಮುಂತಾದ ಪಾತ್ರಗಳಲ್ಲಿ ತೋಡಿಕಾನರ ಪ್ರಸ್ತುತಿ ಅತ್ಯುತ್ತಮ . ಸುಮಾರು 43 ವರ್ಷಗಳ ತಿರುಗಾಟ ನಡೆಸಿದ ತೋಡಿಕಾನರು ಸದಾ ಹಸನ್ಮುಖಿಯಾಗಿದ್ದು ಸರಳ , ನಯ , ವಿನಯತೆಯ ಸ್ವಭಾವದವರು . ಒಡನಾಡಿ ಕಲಾವಿದರೊಂದಿಗೆ ಸ್ನೇಹಭಾವ ಹೊಂದಿದ್ದು , ಎಲ್ಲರ ಪ್ರೀತಿಗೆ ಪಾತ್ರರಾಗಿ ಅಜಾತಶತ್ರು ಎನಿಸಿದ್ದರು . ಸಹ ಕಲಾವಿದರಿಗೆ ಪ್ರಸಂಗದ ನಡೆ , ಕಥಾಸಂದರ್ಭ ತಿಳಿಸಿ ತಿದ್ದುವ ಗುಣ ಹೊಂದಿದ್ದರು. ದಾಮೋದರ ಮಂಡೆಚ್ಚ , ದಿನೇಶ್ ಅಮ್ಮಣ್ಣಾಯ , ರಾಮದಾಸ ಸಾಮಗ , ಕೊಳ್ಯೂರು ರಾಮಚಂದ್ರ ರಾವ್ , ಮಿಜಾರು ಅಣ್ಣಪ್ಪ , ಅಳಿಕೆ ರಾಮಯ್ಯ ರೈ , ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ , ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ , ಪ್ರಭಾಕರ ಗೋರೆ , ಗುಂಪೆ ರಾಮಯ್ಯ ರೈ , ಬೆಳ್ಳಾರೆ ವಿಶ್ವನಾಥ ರೈ , ಅರುವ ಕೊರಗಪ್ಪ ಶೆಟ್ಟಿ , ದಾಸಪ್ಪ ರೈ , ಮುಂಡಾಜೆ ಸದಾಶಿವ ಶೆಟ್ಟಿ , ಮುಂಡಾಜೆ ಬಾಲಕೃಷ್ಣ ಶೆಟ್ಟಿ , ಮಿಜಾರು ತಿಮ್ಮಪ್ಪ , ಪುಳಿಂಚ ರಾಮಯ್ಯ ರೈ , ಅಳಿಕೆ ಲಕ್ಷ್ಮಣ ಶೆಟ್ಟಿ , ಪುಂಡರೀಕಾಕ್ಷ ಉಪಾಧ್ಯಾಯ , ಬಾಯಾರು ರಘುನಾಥ ಶೆಟ್ಟಿ , ಜೆಪ್ಪು ದಯಾನಂದ , ಮನೋಹರ್ ಕುಮಾರ್ , ಸರಪಾಡಿ ಅಶೋಕ ಶೆಟ್ಟಿ , ಅಂಬಾಪ್ರಸಾದ್ ಪಾತಾಳ , ಸಂಜಯ ಕುಮಾರ್ ಮುಂತಾದ ಕಲಾವಿದರೊಂದಿಗೆ ತಿರುಗಾಟ ನಡೆಸಿ ಪ್ರಸಿದ್ಧಿ ಗಳಿಸಿದ್ದರು.

ನನಗೆ ತೋಡಿಕಾನರು ಕರ್ಣಾಟಕ ಮೇಳದಲ್ಲಿ ಇರುವಾಗಲೇ ಪರಿಚಿತರು . ಆದರೆ , ಅವರೊಂದಿಗೆ ಮಿತ್ರತ್ವ ಗಾಢವಾದುದು ಅವರು ಕರ್ನೂರರ ಕದ್ರಿ ಮೇಳದಲ್ಲಿ ಇರುವಾಗ . ಆ ಕಾಲದಲ್ಲಿ ತೋಡಿಕಾನರು ಸ್ವಲ್ಪ ವಿನೋದದ ಸ್ವಭಾವ ಹೊಂದಿದ್ದರು . ಪರಿಚಿತರಲ್ಲಿ ವಿನೋದವಾಗಿಯೇ ಮಾತಾಡುತ್ತಿದ್ದರು . ಈ ಕಾರಣಕ್ಕಾಗಿ ಕಿರಿಯ ಕಲಾವಿದರು ತೋಡಿಕಾನರ ಸುತ್ತಲೇ ಇರುತ್ತಿದ್ದರು .ನನ್ನೊಂದಿಗೆ ಮಾತಾಡುವಾಗಲೂ ತೋಡಿಕಾನರದ್ದು ವಿನೋದದ ಸಂಭಾಷಣೆ . ಬಹುಶಃ ಅವರು ಕಟೀಲು ಮೇಳ ಸೇರಿದ ನಂತರ ಗಂಭೀರದ ಸ್ವಭಾವ ಹೊಂದಿದರೇನೋ ? 6 ವರ್ಷಗಳ ಹಿಂದೆ ನನ್ನ ಮಿತ್ರರಾದ ಪ್ರಶಾಂತ ಉಡುಪರು ಸುರತ್ಕಲ್ ನಲ್ಲಿ ” ಯಕ್ಷಾಭಿಮಾನಿ ಬಳಗ ” ವತಿಯಿಂದ ವಿಶಿಷ್ಟ ರೀತಿಯಲ್ಲಿ ” ಶ್ರೀದೇವಿ ಮಹಾತ್ಮೆ ” ಪ್ರದರ್ಶನ ನೀಡಿದ್ದರು . ಅಂದು ಬಲಿಪ ಭಾಗವತರು , ತೋಡಿಕಾನ ವಿಶ್ವನಾಥ ಗೌಡರು ಸಹಿತ 6 ಮಂದಿ ಕಲಾವಿದರಿಗೆ ಸಂಮಾನ ಕಾರ್ಯಕ್ರಮವನ್ನೂ ನೆರವೇರಿಸಿದ್ದರು . ಅಂದು ಆರೂ ಮಂದಿ ಕಲಾವಿದರ ಅಭಿನಂದನಾ ಭಾಷಣ ಮಾಡಲು ಪ್ರಶಾಂತ ಉಡುಪರು ನನ್ನಲ್ಲಿ ಕೇಳಿಕೊಂಡಿದ್ದರು . ಆ ಸಂದರ್ಭದಲ್ಲಿ ನಾನು ತೋಡಿಕಾನರಿಗೆ ಕರೆ ಮಾಡಿ ” ತೋಡಿಕಾನರೇ , ನಿಮ್ಮ ಬಗ್ಗೆ ಅಭಿನಂದನಾ ಭಾಷಣ ಮಾಡಲು ಹೇಳಿದ್ದಾರೆ . ನಿಮ್ಮ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ” ಎಂದಿದ್ದೆ . ಆಗ ತೋಡಿಕಾನರು , ” ಕುಡ್ವರೇ , ನಿಮಗೆ ನನ್ನ ಬಗ್ಗೆ ಸಂಪೂರ್ಣ ತಿಳಿದಿದೆ. ನೀವು ಅಷ್ಟು ಮಾತ್ರ ಹೇಳಿದರೆ ಸಾಕು , ಅದೇ ಒಂದು ಅಭಿನಂದನಾ ಭಾಷಣವಾಗುತ್ತದೆ ” ಎಂದು ವಿನೋದವಾಗಿಯೇ ಹೇಳಿದ್ದು ಇದೀಗ ನೆನಪಾಗುತ್ತಿದೆ. ಆದರೆ , ಅಂದಿನ ಸಂಮಾನ ಕಾರ್ಯಕ್ರಮದ ಸಮಯದಲ್ಲೇ ತೋಡಿಕಾನರಿಗೆ ಅಪಘಾತವಾಗಿ ಸಂಮಾನ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಅಂದು ತೋಡಿಕಾನರಿಗೆ ಸುಗ್ರೀವನ ಪಾತ್ರ ವಿಶೇಷವಾಗಿ ನೀಡಲಾಗಿತ್ತು . ನಂತರದಲ್ಲಿ ಸಂಘಟಕರು ತೋಡಿಕಾನರ ಮನೆಗೇ ತೆರಳಿ ಸಂಮಾನಿಸಿದ್ದರು.

ತೋಡಿಕಾನರ ಪ್ರತಿಭೆಯನ್ನು ಗುರುತಿಸಿ ಅವರಿಗೆ ನೂರಾರು ಸಂಮಾನಗಳು , ” ಯಕ್ಷ ಮಂಜರಿ “‘ , ” ನಾಟ್ಯ ಮಯೂರಿ “* ಎಂಬ ಬಿರುದುಗಳು ಅಭಿಮಾನಿಗಳಿಂದ ಸಂದಿದೆ . ತೋಡಿಕಾನರು , ಪುತ್ರರಾದ ಶರತ್ ಹಾಗೂ ಶಿಶಿರ್ ರನ್ನು ಅಗಲಿದ್ದಾರೆ. ತೋಡಿಕಾನರಿಗೆ ವಿಷ್ಣು ಸಾಯುಜ್ಯ ದೊರಕಲಿ ಹಾಗೂ ಅವರ ಕುಟುಂಬಸ್ಥರಿಗೆ ಮತ್ತು ಅಭಿಮಾನಿಗಳಿಗೆ ತೋಡಿಕಾನರ ಅಗಲುವಿಕೆಯ ಶೋಕವನ್ನು ಭರಿಸುವ ಶಕ್ತಿ ನೀಡಲಿ ಎಂದು ” ಯಕ್ಷಸಂಗಮ – ಮೂಡಬಿದಿರೆ ” ಹಾಗೂ ಸಮಸ್ತ ಅಭಿಮಾನಿಗಳ ಪರವಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

  • ಎಂ‌.ಶಾಂತರಾಮ ಕುಡ್ವ ಮೂಡಬಿದಿರೆ
error: Content is protected !!
Share This