ಪೂರ್ವರಂಗ

ಕಥಾ ಕೀರ್ತನಮೇರು ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ಮತ್ತು ಕೀರ್ತನ ಧ್ರುವತಾರೆ ಸದ್ಗುರು ಶ್ರೀ ಕೇಶವದಾಸರು ಇವರ ಶಿಷ್ಯರಾದ ಲಕ್ಷ್ಮಣದಾಸರು ಹರಿಕಥಾ ಕ್ಷೇತ್ರದಲ್ಲಿ ತನ್ನದೇ ಆದ ಒಂದು ವರ್ಚಸ್ಸನ್ನು ಬೀರಿದವರು. ಉತ್ತಮ ವಾಗ್ಮಿಗಳೂ, ದಕ್ಷ ಲೇಖಕರು, ತತ್ವಜ್ಞಾನಿಗಳೂ ಅಧ್ಯಾತ್ಮಪ್ರವೃತ್ತಿಯ ಸಂತ ಹೃದಯೀಗಳು ಆಗಿದ್ದಾರೆ.

23-10-1939 ರಲ್ಲಿ ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಹತ್ಯಡ್ಕ ಗ್ರಾಮದಲ್ಲಿ ಚಿತ್ಪಾವನ ಬ್ರಾಹ್ಮಣ ವೈದಿಕ ಮನೆತನದಲ್ಲಿ ಶ್ರೇಷ್ಠ ವೈದಿಕ ವಿದ್ವನ್ ಮಣಿದಿ| ಕೃಷ್ಣಗಣೇಶ ವೇಲಣಕರ್ ಮತ್ತು ರುಕ್ಮಿಣಿಬಾಯಿ ಇಂತಹ ಪವಿತ್ರ ಪುಣ್ಯಾತ್ಮರಾದ ದಂಪತಿಗಳ ಎರಡನೇಯ ಗಂಡುಮಗುವಾಗಿ ಇವರ ಜನ್ಮವಾಯಿತು. ಉಪನಯನವಾದ ಬಳಿಕ ವೇದ ವಿದ್ಯೆಯ ಅಧ್ಯಯನವನ್ನು ಒವರ ಅಜ್ಜ ಕಂಬಳಿ ನಾರಾಯಣ ಭಟ್ಟರಲ್ಲಿ ಪ್ರಾರಂಭಿಸಿದರು. ಸಾಕಷ್ಟು ಯಾಜ್ಞಿಕ ವಿದೆಯನ್ನು ಅಭ್ಯಸಿಸಿದ ಕಾರಣ ಯಾವುದೇ ಲೌಕಿಕ ವಿದ್ಯೆಯ ಕಲಿಕೆ ಆಗಲಿಲ್ಲ. ಇವರು ಶಾಲೆಗೆ ಹೋದವರೇ ಅಲ್ಲ. ಅನಂತರ ಸ್ವಂತ ಪರಿಶ್ರಮದಿಂದ ಅಲ್ಪ ಸ್ವಲ್ಪ ಜ್ಯೋತಿಷ್ಯ, ಸಂಸ್ಕೃತ, ಕನ್ನಡ ಸಾಹಿತ್ಯ, ಮರಾಠೀ ಹಿಂದಿ ಸಂತ ಸಾಹಿತ್ಯ ಮುಂತಾದವುಗಳನ್ನು ಕರಗತಮಾಡಿಕೊಂಡರು.

1960 ಬೆಂಗಳೂರಿಗೆ ಬಂದು ಭದ್ರಗಿರಿ ಸಹೋದರರಲ್ಲಿ ಆಶ್ರಯ ಪಡೆದು ಕಥಾ ಕೀರ್ತನವನ್ನು ಅಭ್ಯಸಿಸಲು ಪ್ರಾರಂಭಿಸಿದರು. ದಾಸಾಶ್ರಮ ಅಂತರಾಷ್ಟ್ರೀಯ ಕೇಂದ್ರವನ್ನು ಸೇರಿ ಗುರುಕುಲ ಪಧ್ಧತಿಯಂತೆ ಆಶ್ರಮದ ಎಲ್ಲಾ ಕಾರ್ಯವನ್ನು ನಿರ್ವಹಿಸುತ್ತಾ, ಕೀರ್ತನ ಕಲೆಯನ್ನು ಕಲಿಯತೊಡಗಿದರು. ಸಂತ ಅಚ್ಯುತದಾಸರೊಂದಿಗೆ ಹೆಚ್ಚಾಗಿ ಇದ್ದು, ಅವರ ಹರಿಕಥಾ ಅಧ್ಯಯನದಲ್ಲಿ ಸಹಭಾಗಿಯಾದರು. ಅವರ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ವೇದಾಧ್ಯಯನ ವೈದಿಕ ಜ್ಞಾನವಿದ್ದುದರಿಂದ ಆಶ್ರಮದಲ್ಲಿ ದೇವರ ಪೂಜೆ ಇವರ ಪಾಲಿಗೆ ಬಂದಿತು. ಅನೇಕ ವರ್ಷ ಪಾಂಡುರಂಗ ವಿಠ್ಠಲನನ್ನು ಪೂಜಿಸಿದರು.

ಹರಿದಾಸ – ಮಾರ್ಗದರ್ಶಕ

1964 ರಲ್ಲಿ ಅಖಿಲ ಭಾರತ ಕೀರ್ತನ ಸಮ್ಮೇಳನದಲ್ಲಿ ಇವರ ಮೊದಲ ಹರಿಕಥಾ ಕಾರ್ಯಕ್ರಮ ನಡೆಯಿತು. ಅಂದಿನಿಂದ ಇಂದಿನವರೆಗೂ ಹರಿಕಥಾ ಕ್ಷೇತ್ರದಲ್ಲೇ ದುಡಿಯುತ್ತಿದ್ದಾರೆ. ಸಾಮಾನ್ಯವಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇವರು ಕಥಾ ಕೀರ್ತನ ನಡೆಸಿದ್ದಾರೆ. ಅಲ್ಲದೇ ಹೈದ್ರಾಬಾದ್ ಮಹಾರಾಷ್ಟ್ರ ಮುಂತಾದ ಹೊರನಾಡಿನಲ್ಲಿಯೂ ಹರಿಕಥೆ ಮಾಡಿದ್ದಾರೆ. ಸಾಧು ಸಂತರ ಚರಿತ್ರೆಗಳನ್ನು ನಿರೂಪಿಸುವುದು ಇವರ ವೈಶಿಷ್ಟ್ಯ. ತತ್ತ್ವಜ್ಞಾನದ ಆಳವಾದ ಅಭ್ಯಾಸ ಇರುವುದರಿಂದ ಇವರ ಪೂರ್ವರಂಗ (ಪೀಠಿಕೆ) ವಿಶಿಷ್ಟವಾದುದು. ರಾಮಾಯಣ, ಭಾಗವತ, ಮಹಾಭಾರತ ಮಹಾಗ್ರಂಥಗಳನ್ನು ಹರಿಕಥಾರೂಪದಲ್ಲಿ ನಿರೂಪಿಸಿರುವರು. ಪ್ರವಚನದಲ್ಲಿಯೂ ಇವರು ಸಿದ್ದಹಸ್ತರು. ಬಾಲ್ಯದಲ್ಲಿ ನಾಟಕ ಯಕ್ಷಗಾನದ ಅನುಭವವು ಇದೆ.

ದಾಸಾಶ್ರಮ ಕೀರ್ತನ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಎಂಟು ಹತ್ತು ವರ್ಷಗಳು ದುಡಿದು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಅನೇಕ ಕೀರ್ತನ ಶಿಕ್ಷಣ ಶಿಬಿರಗಳನ್ನು ಸಂಘಟಿಸಿ, ನೇತೃತ್ವವಹಿಸಿ ಕೀರ್ತನಾಭ್ಯಾಸಿಗಳಿಗೆ ಮಾರ್ಗದರ್ಶನ ನೀಡಿರುವರು. ಇವರಿಗೆ ಹರಿಕಥಾ ಶಿಷ್ಯಸಂಪತ್ತು ಸಾಕಷ್ಟಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಲ್ಲಿ ಸದಸ್ಯರಾಗಿಯೂ ದುಡಿದಿದ್ದಾರೆ.

ಲೇಖಕ

ಸಾಹಿತ್ಯ ಕ್ಷೇತ್ರದಲ್ಲಿ ದಾಸಾಶ್ರಮ ಅಂತಾರಾಷ್ಟ್ರೀಯ ಕೇಂದ್ರದ ‘ದಾಸವಾಣಿ’ ಮಾಸಪತ್ರಿಕೆಯ ಸಂಪಾದಕರಾಗಿ ಅನೇಕ ಧಾರ್ಮಿಕ ಲೇಖನಗಳನ್ನು ಬರೆದಿರುವರು. ‘ಕಥಾ ಕೀರ್ತನ ಶಾಸ್ತ್ರ’ ಇವರು ಬರೆದ ಗ್ರಂಥವು ಹರಿಕಥಾ ಕ್ಷೇತ್ರದಲ್ಲಿ ಕನ್ನಡಭಾಷೆಯಲ್ಲಿ ಮೊದಲನೆಯ ಲಕ್ಷಣ ಗ್ರಂಥ. ಉತ್ತರ ಪ್ರದೇಶದ ಗೋರಖಪುರ ಗೀತಾಪ್ರೆಸ್ಸಿನಿಂದ ಸುಮಾರು ನೂರಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡದಲ್ಲಿ ಅನುವಾದಿಸಿದ್ದಾರೆ. ಇವರು ಹಿಂದಿ, ಮರಾಠೀ ಮತ್ತು ಸಂಸ್ಕೃತದಿಂದ ಅನುವಾದಿಸಿದ 18,000 ಪುಟಗಳಿಗೂ ಮೀರಿದ ಸಾಹಿತ್ಯ ಬೆಳಕು ಕಂಡಿದೆ. ಅನೇಕ ಕಥಾ ಕೀರ್ತನ ಪ್ರಸಂಗಗಳನ್ನು ರಚಿಸಿದ್ದಾರೆ. ಶ್ರೀಮದ್ಭಾಗವತ ಪ್ರವಚನ ಮತ್ತು ಶ್ರೀ ದುರ್ಗಾ ಸಪ್ತಶತಿ ಪ್ರವಚನ ಗ್ರಂಥಗಳನ್ನು ಬರೆದಿದ್ದಾರೆ.

ಕಥಾ ಕೀರ್ತನೆಯನ್ನು ಯುವ ಪೀಳಿಗೆಗೆ ತಲುಪಿಸಿ ಕಲೆಯನ್ನು ಪ್ರಚಾರ ಮಾಡುವ ಮಹತ್ ಉದ್ದೇಶದಿಂದ ಬೆಂಗಳೂರಿನಲ್ಲಿ ‘ಷಡ್ಜ ಕಲಾ ಕೇಂದ್ರ ಟ್ರಸ್ಟ್’ ವನ್ನು ಸ್ಥಾಪಿಸಿದರು. ಲಕ್ಷ್ಮಣದಾಸರನ್ನು ಅರಸಿ ಅನೇಕ ಪುರಸ್ಕಾರಗಳು ಬಂದಿವೆ.

  • ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
  • ಬೆಂಗಳೂರಿನ ಸಾಕ್ಷಿ ಸಂಸ್ಥೆಯವರು ‘ಕಪಾಲಿ ಶಾಸ್ತ್ರೀ’ ಗೌರವ ಪುರಸ್ಕಾರ’ ನೀಡಿದ್ದಾರೆ.
  • ರಾಜ್ಯೊತ್ಸವ ಪ್ರಶಸ್ತಿ – ಸ್ಟೇಟ್ ಬ್ಯಾಂಕ ಆಫ್ ಮೈಸೂರು
  • ಬೆಳ್ತಂಗಡಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ಪ್ರಶಸ್ತಿ
  • ಅನೇಕ ಮಠ-ಮಂದಿರ ಸಂಸ್ಥಾನಗಳಿಂದ ಗೌರವಗಳನ್ನು ಪಡೆದಿದ್ದಾರೆ.

ಇವರು ಎಂದೂ ಅಭಿಮಾನಕ್ಕೆ ತುತ್ತಾಗದೆ ಭಕ್ತರಲ್ಲಿರುವ ‘ತೃಣಾದಪಿ ಸುನೀಚೇನ ತರೋರಪಿ ಸಹಿಷ್ಣುನಾ’ ಇದ್ದಂತೆ ಬಾಳಿದವರು. ಜೀವನವೆಂಬುದು ಅಖಂಡ ಸಾಧನೆಯೆಂದು ಸ್ವೀಕರಿಸಿ ಲೌಕಿಕ ಮಾನ ಸಮ್ಮಾನಗಳಿಗೆ ಮನಗೊಡದೆ ಇವರು ನಿಜವಾದ ಆಧ್ಯಾತ್ಮಸಾಧಕರೇ ಆಗಿದ್ದಾರೆ.

“ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೇ”

error: Content is protected !!
Share This