ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ: ಸದಾನಂದ ಸುವರ್ಣ ಪ್ರಾಯೋಜಿತ ಶಿವರಾಮ ಕಾರಂತ ದತ್ತಿ ಉಪನ್ಯಾಸ ಮಾಲಿಕೆ- 2025ರ ಕಾರ್ಯಕ್ರಮ
ರಾಮಾಯಣದ ಅಡಿ ಚೆಂದ; ಭಾಗವತದ ಮುಡಿ ಚೆಂದ; ಮಹಾಭಾರತದ ನಡು ಚೆಂದ. ಯಕ್ಷಗಾನ ಪ್ರಸಂಗವಾಗಿ ಆಡಿ ತೋರಿಸುವ ಕೃಷ್ಣಸಂಧಾನವು ದೇಶ ವಿದೇಶಗಳಲ್ಲೂ ಮತ್ತು ಎಲ್ಲ ಕಾಲಕ್ಕೂ ಪ್ರಸ್ತುತ. ಅದು ಎಲ್ಲ ಸಮುದಾಯಗಳೂ ಆನಂದಿಸಬಹುದಾದ ಒಂದು ಪ್ರಸಂಗ. ಅದರಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಂಸಾರಿಕ ಆಯಾಮಗಳಿವೆ. ಅಲ್ಲದೆ ಜಗಳವನ್ನು ಶಮನಗೊಳಿಸಬೇಕೆಂಬ ಸಾರ್ವತ್ರಿಕ ಸಂದೇಶವಿದೆ. ಮೂಲ ಭಾರತದಲ್ಲಿ ಸಂಧಾನ ಆಗಬೇಕೆಂದು ಕೃಷ್ಣನು ಹಾರ್ದಿಕವಾಗಿ ಬಯಸಿದ್ದಾನೆ. ಅವನು ನರರಿಗೆ ಸಾರಥಿಯಾಗಬಯಸುವನು. ವ್ಯಾಸರ ಕೃಷ್ಣ ಸಂಧಿಪ್ರಿಯನಾದರೆ ಪ್ರಸಂಗದ ಕೃಷ್ಣ ಯುದ್ಧಪ್ರಿಯ. ದುರ್ಯೋಧನ ಚಲದೊಳ್ ಅಲ್ಲ; ಹಠದೊಳ್ ಕೌರವ. ಕೃಷ್ಣ ಸಂಧಾನ ಪ್ರಸಂಗವು ಬಹಳ ಆಸಕ್ತಿಕರವಾದುದು; ಹಾಗಾಗಿ ಶಾಶ್ವತವಾಗಿ ಉಳಿದಿದೆ ಎಂದು ಹಿರಿಯ ಕಲಾವಿದರು, ಯಕ್ಷಗಾನ ವಿದ್ವಾಂಸರೂ ಆದ ಡಾ. ಎಂ. ಪ್ರಭಾಕರ ಜೋಶಿ ನುಡಿದರು. ಅವರು ಆಗಸ್ಟ್ 12ರ ಮಂಗಳವಾರದಂದು ಕಲೀನಾ ಕ್ಯಾಂಪಸ್ ನ ಜೆ. ಪಿ. ನಾಯಕ್ ಭವನದಲ್ಲಿ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ಸದಾನಂದ ಸುವರ್ಣ ಪ್ರಾಯೋಜಿತ ದತ್ತಿ ಉಪನ್ಯಾಸ ಮಾಲಿಕೆ -2025ರ ಕಾರ್ಯಕ್ರಮದಲ್ಲಿ ‘ಯಕ್ಷಗಾನ- ಕೃಷ್ಣ ಸಂಧಾನ ‘ ವಿಷಯದ ಕುರಿತು ಉಪನ್ಯಾಸ ನೀಡಿದರು. ಅವರು ಸುಮಾರು ಐದು ಸಾವಿರ ಪ್ರಸಂಗಗಳ ಕರ್ತೃ ದೇವಿದಾಸ ಕವಿಯ ಪದ್ಯಗಳನ್ನು ಉದ್ಧರಿಸುತ್ತಾ ತಮ್ಮ ವಿಷಯವನ್ನು ಮಂಡಿಸಿದರು.

ಯಾವ ಕಲೆಗೆ ಪ್ರಾದೇಶಿಕ ತಳಹದಿ ಗಟ್ಟಿ ಇರುತ್ತದೋ ಅಂತಹ ಕಲೆ ಮಾತ್ರ ಶಾಶ್ವತವಾಗಿ ಉಳಿಯಲು ಸಾಧ್ಯ. ಯಕ್ಷಗಾನ ಕಲೆಯು ಇಂದು ಎತ್ತರಕ್ಕೆ ಏರಿದೆ ಎಂದರೆ ಅದು ತನ್ನ ಸಾಮರ್ಥ್ಯದಿಂದ. ಯಾವುದೇ ಕಲೆ ಶಕ್ತಿ ಗಳಿಸಬೇಕಾದರೆ ಕಲಾವಿದರು ಬೇಕು. ಕಲ್ಲು ಮುಟ್ಟಿ ಚಿನ್ನ ಮಾಡುವ ಶಕ್ತಿ ಕಲಾವಿದನಿಗೆ ಬೇಕು. ಕಾರಂತರು ಶತಮಾನದ ಕನ್ನಡ ಬೆಳಕು. ಕಾರಂತರು ಮಾಡದ ಕೆಲಸವೇ ಇಲ್ಲ. ಕಾರಂತರ ಕೀರ್ತಿಗೆ ಯಕ್ಷಗಾನ ಬೇಡ; ಯಕ್ಷಗಾನಕ್ಕೆ ಕಾರಂತರು ಬೇಕು. ಕೀರ್ತಿಶೇಷ ಸದಾನಂದ ಸುವರ್ಣರು ಪುಣ್ಯ ಪುರುಷರು ಎಂದು ಅವರು ಈ ಸಂದರ್ಭದಲ್ಲಿ ಅಗಲಿದ ಹಿರಿಯರನ್ನು ನೆನಪಿಸಿಕೊಂಡರು.

ಡಾ. ಎಂ. ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ದೇವಿಪ್ರಸಾದ್ ಆಳ್ವ, ತಲಪಾಡಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಶೆಟ್ಟಿ ವಗೆನಾಡು ಮೊದಲಾದ ಕಲಾವಿದರಿಗೆ ಕೃತಿ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.

ಅದೇ ದಿನ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಅಜೆಕಾರು ಕಲಾಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ವೈ. ವಿ. ಮಧುಸೂದನ ರಾವ್ ಅವರ ಮಹಾಪ್ರಬಂಧ ” ಮುಂಬೈ ಯಕ್ಷಗಾನ ರಂಗಭೂಮಿ’ ಕೃತಿಯನ್ನು ಯಕ್ಷಗಾನ ವಿದ್ವಾಂಸ, ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಅವರು ಲೋಕಾರ್ಪಣೆ ಮಾಡಿದರು. ಈ ಕೃತಿಯು ಕನ್ನಡ ವಿಭಾಗದ 111ನೆಯ ಪ್ರಕಟಣೆಯಾಗಿದೆ.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅವರು ‘ಪ್ರಬಂಧಕಾರರಾಗಿ ಕಾರಂತರು’ ಎಂಬ ತಮ್ಮ ಎಂ. ಎ. ಸಂಪ್ರಬಂಧವನ್ನು, ಕನ್ನಡ ವಿಭಾಗದ ಪ್ರಕಾಶನದಡಿಯಲ್ಲಿ ಕೃತಿ ರೂಪದಲ್ಲಿ ಪ್ರಕಟಿಸಿ, ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದರು.
ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಸ್ವಾಗತ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಸಹಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಶೆಟ್ಟಿ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರು, ಕಲಾಭಿಮಾನಿಗಳು, ಸಾಹಿತ್ಯಾಸಕ್ತರು ಮತ್ತು ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.