( ಮೇ ೩೧, ೧೯೩೧- ಸಪ್ಟಂಬರ ೨, ೨೦೨೨)

ಹೈಸ್ಕೂಲಿನಲ್ಲಿ ಕನ್ನಡ ಕಲಿಸಿದ ಗುರುಗಳಾದ ಟಿ ಜಿ ಮುಡೂರರನ್ನು ಕಳಕೊಂಡ ನೋವು ಮರೆಯುವ ಮುನ್ನವೇ ನನಗೆ ಎಂ ಎ ಯಲ್ಲಿ ಪಾಠ ಮಾಡಿದ ಪ್ರೊ. ಕೋಡಿ ಕುಶಾಲಪ್ಪ ಗೌಡರನ್ನು ಕಳಕೊಳ್ಳಬೇಕಾಯಿತು. ಇವರೆಲ್ಲ ಬರೇ ಪಾಠ ಮಾಡಿದ ಮಾಸ್ತರರಾಗಿದ್ದರೆ ಇಷ್ಟೊಂದು ವಿಷಾದ ಹುಟ್ಟಿಕೊಳ್ಳುತ್ತಿರಲಿಲ್ಲ. ಅವರು ನಮಗೆ ಬದುಕು ಕೊಟ್ಟ ಮಹನೀಯರಾಗಿದ್ದರು. ಡಾ. ಚಿನ್ನಪ್ಪ ಗೌಡ, ಪ್ರತಿಭಾ ನಂದಕುಮಾರ್‌, ಜೈನುಲ್ಲಾ ಬಳ್ಳಾರಿ ಮೊದಲಾದವರು ಅವರ ಗರಡಿಯಲ್ಲಿ ಪಳಗಿದವರು.

ಅಣ್ಣಾಮಲೈ ಮತ್ತು ಮದರಾಸಿನಲ್ಲಿಯೇ ವೃತ್ತಿ ಜೀವನವನ್ನು ಸಾಗಿಸಿದ್ದ ಪ್ರೊ. ಕುಶಾಲಪ್ಪ ಗೌಡರು ಅಂತಾರಾಷ್ಟ್ರೀಯ ಮಟ್ಟದ ಭಾಷಾ ವಿಜ್ಷಾನಿಗಳಾಗಿದ್ದರು ಎಂಬುದನ್ನು ಕರ್ನಾಟಕದ ಬಹುಮಂದಿ ಅರಿಯರು. ದ್ರಾವಿಡ ಭಾಷಾ ವಿಜ್ಞಾನ ಹಾಗೂ ಕನ್ನಡದ ಉಪ ಭಾಷೆಗಳ ಅಧ್ಯಯನ ಕ್ಷೇತ್ರದಲ್ಲಿ ಅವರದು ಪ್ರಮುಖ ಹೆಸರು. ಆಧುನಿಕ ಭಾಷಾ ವಿಜ್ಞಾನ ಹಾಗೂ ಪರಂಪರಾಗತ ವ್ಯಾಕರಣ ಶಾಸ್ತ್ರದಲ್ಲಿ ಅನುಪಮ ಪಾಂಡಿತ್ಯ ಪಡೆದುಕೊಂಡಿರುವ ಅವರು ಹಳಗನ್ನಡ, ಮತ್ತು ನಡುಗನ್ನಡ ಸಾಹಿತ್ಯಗಳಲ್ಲಿ ವಿಶೇಷ ಒಲವು ಹೊಂದಿದ್ದರು. ಅವರು ನನಗೆ ಶಬ್ದಮಣಿ ದರ್ಪಣವನ್ನೂ ಪಾಠಮಾಡಿದ್ದರು, ನಾಗವರ್ಮನ ಕರ್ನಾಟಕ ಕಾದಂಬರಿಯನ್ನೂ ಹೇಳಿಕೊಟ್ಟಿದ್ದರು. ಒಂದು ಬಹುಮಟ್ಟಿಗೆ ಶುಷ್ಕ, ಇನ್ನೊಂದು ಪ್ರಣಯ ಕಥನ. ಪ್ರೊ. ಗೌಡರು ಅವೆರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದುದೇ ಅಚ್ಚರಿ.

ಕುಶಾಲಪ್ಪ ಗೌಡರು ಹುಟ್ಟಿದ್ದು ಕೊಡಗು ಜಿಲ್ಲೆಯ ಪೆರಾಜೆಯ ಕೋಡಿ ಎಂಬಲ್ಲಿಯಾದರೂ ಹೊರ ಜಗತ್ತಿಗೆ ಅವರು ಸುಳ್ಯದವರೇ ಆಗಿದ್ದರು. ಮದ್ರಾಸ್‌ ವಿಶ್ವವಿದ್ಯಾಲಯದಿಂದ ಬಿ ಎ (ಆನರ್ಸ್), ಮತ್ತು ಎಂ ಎ ಪದವಿ ಪಡೆದ ಅವರು ೧೯೬೩ ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ, ಕ್ರಿಸ್ತ ಶಕ ೧೦೦೦ ರಿಂದ ೧೪೦೦ ರವರೆಗಿನ ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಕೊಡಗು ಜಿಲ್ಲೆಗಳ ಕನ್ನಡ ಶಾಸನಗಳ ಭಾಷಿಕ ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ಪಡೆದರು. ಆರಂಭಿಕ ಹಂತದಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ದುಡಿದಿದ್ದ ಅವರು ಮುಂದೆ ಬಹಳ ಕಾಲ ಅಣ್ಣಾಮಲೈ ವಿವಿ ಭಾಷಾ ವಿಜ್ಞಾನದ ಉನ್ನತ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಕೊನೆಗೆ ಮದ್ರಾಸ್‌ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರೂ ಮುಖ್ಯಸ್ಥರೂ ಆಗಿ ನಿವೃತ್ತಿ ಹೊಂದಿದರು.

ಕನ್ನಡ ಭಾಷೆ ಮತ್ತು ವ್ಯಾಕರಣಗಳು: ಒಂದು ಅಧ್ಯಯನ.(೧೯೮೭), ಕನ್ನಡ ತಿರುಳು ಕನ್ನಡ ಮತ್ತು ಸಮಾಜ(೧೯೯೧), ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಸಮೀಕ್ಷೆ.(೨೦೦೮), ಕನ್ನಡ ಸಂಕ್ಷಿಪ್ತ ವ್ಯಾಕರಣ(೨೦೧೪), ವಡ್ಡಾರಾಧನೆಯ ಭಾಷಿಕ ಅಧ್ಯಯನ, ಕನ್ನಡ ಭಾಷಾವಲೋಕನ ,Gowda Kannada.(೧೯೭೬), A Grammar of Kannada, Dravidian Case System, A Course in Modern Kannada ಕುಶಾಲಪ್ಪ ಗೌಡರ ಅಮೂಲ್ಯ ಕೃತಿಗಳು. ಇವುಗಳ ಜೊತೆಗೆ ಅವರು ಗಂಗಾದೇವಿ ವಿರಚಿತ ಮಧುರಾವಿಜಯಂ ಮತ್ತು ಕಂಬನ್‌ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಅರೆಭಾಷೆಯಲ್ಲಿ ಮಹಾಭಾರತವನ್ನು ಬರೆದ ಮೊದಲಿಗರು ಅವರು.

ಭಾಷಾ ಶಾಸ್ತ್ರದ ಮಹಾ ಪಂಡಿತರಾಗಿದ್ದರೂ ಕುಶಾಲಪ್ಪ ಗೌಡರಿಗೆ ಪ್ರಬಂಧ ಸಾಹಿತ್ಯದಲ್ಲಿ ಬಹಳ ಆಸಕ್ತಿಯಿತ್ತು. ಊರೊಸಗೆ, ಕಡಲ ತಡಿಯ ಕನವರಿಕೆ, ನಾನು ಸತ್ತಿಲ್ಲ, ಕೊಳಚೇಪುರಿಯ ಮಷಕ ಪುರಾಣಂ, ಪುಸ್ತಕಂ ವಿನಿತಾ ವಿತ್ತಂ, ಸತ್ಯದ ಸುಳ್ಳು, ಹೆಂಡತಿಯನ್ನು ಹೇಗೆ ಕರೆಯುವುದು, ಮೊದಲಾದುವು ಅವರ ಲಘು ಹಾಸ್ಯದ ಪ್ರಬಂಧ ಸಂಕಲನಗಳು. ತನ್ನ ಪತ್ನಿ ಕಮಲಾ ತೀರಿಕೊಂಡಾಗ ಕುಸಿದು ಹೋಗಿದ್ದ ಅವರು ಪತ್ನಿಯ ಗೌರವಾರ್ಥ ʼಕಮಲ ನಿಮೀಲನʼ ಎಂಬ ಪುಸ್ತಕ ಬರೆದರು. ನನಗೆ ತಿಳಿದಂತೆ ಈ ಬಗೆಯ ಇನ್ನೊಂದು ಪುಸ್ತಕ ಕನ್ನಡದಲ್ಲಿಲ್ಲ. ಅರೆಭಾಷೆ ಅಕಾಡೆಮಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿರುವ ಅವರ ವಿದ್ವತ್ತಿಗೆ ಪಂಪ ಪ್ರಶಸ್ತಿ ಎಂದೋ ಸಂದಾಯವಾಗಬೇಕಿತ್ತು.

ಕಳೆದ ತಿಂಗಳು ಊರಿಗೆ ಹೋದಾಗ ಪುತ್ತೂರಿನ ಅವರ ಮಗಳ ಮನೆಯಲ್ಲಿದ್ದ ಪ್ರೊಫೆಸರನ್ನು ಕಂಡು ಮಾತಾಡಿಸಿದ್ದೆ. ಇಬ್ಬರೂ ಮದ್ರಾಸಿನ ಹಳೆಯ ದಿನಗಳನ್ನು ತುಂಬ ಹೊತ್ತು ನೆನೆಸಿಕೊಂಡೆವು. ಅವರು ಮತ್ತು ನಾನು ಹರಟುವುದನ್ನು ಗಮನಿಸಿದ ಅವರ ಮಗಳು ಡಾ. ಮಾಲಿನಿ ಹೇಳಿದರು-ʼ ಅಪ್ಪಂಗೆ ನೋಡಿ ಈಗ ಎಷ್ಟು ಉತ್ಸಾಹ ಬಂದುಟುʼ!

ಈಗ ಅವರಿಲ್ಲ ಎಂಬುದು ಒಂದು ಸರಳವಾದ ಸತ್ಯ. ಆದರೆ ಅದನ್ನು ಅರಗಿಸಿಕೊಳ್ಳುವ ಕಲೆ ನನಗಿನ್ನೂ ಸಿದ್ದಿಸಿಲ್ಲ.
ಹೋಗಿ ಬನ್ನಿ ಸರ್!

error: Content is protected !!
Share This