
ಯಕ್ಷಗಾನ ಕ್ಷೇತ್ರದಲ್ಲಿ ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಂಡು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಪ್ರಯೋಗಗಳು, ಬದಲಾವಣೆಗಳು ಆಗಬೇಕು ಎಂದು ಕರ್ಣಾಟಕ ವ್ಯವಸ್ಥಾಪಕ ನಿರ್ದೆಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್ ಹೇಳಿದರು. ಅವರು ಗುಂಡ್ಲಿಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರಕ್ಕೆ ಡಿ. 26ರಂದು ಭೇಟಿ ನೀಡಿ ಯಕ್ಷಗಾನ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾತನಾಡಿದರು. ಎಲ್ಲ ಕ್ಷೇತ್ರದಲ್ಲೂ ಬದಲಾವಣೆ ಆಗುತ್ತಿದೆ. ಯಕ್ಷಗಾನ ಕ್ಷೇತ್ರದಲ್ಲೂ ಇಂದು ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಕರಾವಳಿಗೆ ಯಕ್ಷಗಾನ ಸೀಮಿತವಾಗಿರದೇ ವಿವಿಧ ಭಾಷೆಗಳಲ್ಲಿಯೂ ಇದರ ಪ್ರಯೋಗಗಳು ಆಗಿ ದೇಶ ವಿದೇಶದ ಮೂಲೆ ಮೂಲೆಗೂ ಕಲೆಯ ಪ್ರಸಾರ ಹಾಗೂ ವಿಸ್ತಾರ ಆಗಬೇಕಾಗಿದೆ ಎಂದರು.
ಇದೇ ಸಂದರ್ಭ ಅವರು ಕರ್ಣಾಟಕ ಬ್ಯಾಂಕ್ ವತಿಯಿಂದ ಯಕ್ಷಗಾನ ಕಲಾಕೇಂದ್ರಕ್ಕೆ ಜನರೇಟರ್ ಅನ್ನು ಕೊಡುಗೆಯಾಗಿ ನೀಡಿದರು. ಕಲಾಕೇಂದ್ರದ ವತಿಯಿಂದ ಮಹಾಬಲೇಶ್ವರ ಎಂ.ಎಸ್ ಅವರನ್ನು ಗೌರವಿಸಲಾಯಿತು.
ಕಲಾಕೇಂದ್ರದ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಅನಂತ ಪದ್ಮನಾಭ ಐತಾಳ, ಹಿರಿಯರಾದ ರಾಮಕೃಷ್ಣ ಐತಾಳ, ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ವೈಕುಂಠ ಹೇರ್ಳೆ ಉಪಸ್ಥಿತರಿದ್ದರು.
