ಭಾಗವತ ಹಂಸ

ಭಾಗವತ ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಅಭಿನಂದನ ಗ್ರಂಥ

ಗೌರವ ಸಂಪಾದಕರು: ಎ. ಈಶ್ವರಯ್ಯ

ಪ್ರಕಾಶಕರು: ರಘುರಾಮಾಭಿನಂದನಮ್ ಸಂಮಾನ ಸಮಿತಿ – ಮಂಗಳೂರು

ಮುದ್ರಣ: 2014

ಬೆಲೆ: ರೂ. 250/-


ಸುಮಾರು 1930-1970ರ ಅವಧಿಯಲ್ಲಿ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ, ಓರ್ವ ಗಣ್ಯ ಭಾಗವತರಾಗಿ ಪ್ರವರ್ತಿಸಿದ್ದ ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು ನಾನು ಕಂಡದ್ದು ನಾಲ್ಕಾರು ಬಾರಿ ಮಾತ್ರ. ಅವರ ಕುರಿತು ದಾಖಲಿಸಲೇಬೇಕಾದ ಕೆಲವು ಅಂಶಗಳನ್ನು ನೆನಪಿಸಿ ಇಲ್ಲಿ ಪ್ರಸ್ತಾವಿಸಿದೆ.

ಗಿಡ್ಡ ಮೈಕಟ್ಟು, ಗಾಂಧಿ ಟೊಪ್ಪಿ, ಬಿಳಿ ಮೀಸೆ, ಸರಳ ನಗು, ಹೆಚ್ಚಾಗಿ ನೀಲಿ ಬಣ್ಣದ ಅರ್ಧತೋಳಿನ ಅಂಗಿಯ ಓರ್ವ ಹಳ್ಳಿ ಮಾಸ್ತರರ ಚಿತ್ರ – ನಾನು ಕಂಡ ಜೋಯಿಸರು. ಸೌಮ್ಯತೆ, ಸಜ್ಜನಿಕೆಗಳ, ತೀರ ಸರಳತೆಯ ವ್ಯಕ್ತಿತ್ವ ಅವರದು.

ಮಂಗಳೂರಿನ ಸರಕಾರಿ ಕಾಲೇಜಿನ ಸಭಾಭವನದಲ್ಲಿ (ಈಗಿನ ರವೀಂದ್ರ ಕಲಾಭವನ) ಬಹುಶಃ 1967ರಲ್ಲಿ ಮಂಗಳೂರು ಕನ್ನಡ ಸಂಘದ ಆಶ್ರಯದಲ್ಲಿ ಮಿತ್ರ ದಿ| ಅ. ಬಾಲಕೃಷ್ಣ ಶೆಟ್ಟರು ಸಂಘಟಿಸಿದ್ದ ಒಂದು ತಾಳಮದ್ದಳೆ ‘ಮಾಗಧ ವಧೆ’ಗೆ ಅವರು ಭಾಗವತರಾಗಿದ್ದರು (ಪೊಳಲಿ ಶಾಸ್ತ್ರಿಗಳ ‘ಮಾಗಧ’, ಶೇಣಿಯವರ ‘ಕೃಷ್ಣ’). ಅಂದು ಅವರ ಭಾಗವತಿಕೆ ನನಗೆ ವಿಶಿಷ್ಟವಾದ ಅನುಭವ ನೀಡಿತ್ತು. ಆ ಬಳಿಕ 1971ರಲ್ಲಿ ಮಂಚಿಯಲ್ಲಿ ಜಯರಾಮ ಕಾರಂತರು ಮತ್ತು ಮಿತ್ರರು ಸಂಘಟಿಸಿದ ಒಂದು ವಿಶೇಷ ಯಕ್ಷಗಾನ ಸಮ್ಮೇಳನದಲ್ಲಿ ಜೋಯಿಸ ಭಾಗವತರು ಹಿಮ್ಮೇಳದ ಪ್ರಾತ್ಯಕ್ಷಿಕೆಯಲ್ಲೂ ಆಮೇಲೆ ಸುಧನ್ವಾರ್ಜುನ ಮತ್ತು ಇಂದ್ರಜಿತು ಕಾಳಗ ಪ್ರಸಂಗ ಪ್ರದರ್ಶನದಲ್ಲೂ ಭಾಗಶಃ ಭಾಗವತರಾಗಿ ಹಾಡುವುದನ್ನು ಕೇಳುವ ಸುಯೋಗ ಒದಗಿತು. ಅವರೋರ್ವ ಪ್ರಾತಿನಿಧಿಕ ಭಾಗವತರೆಂಬ ಅವರಿಗಿದ್ದ ಖ್ಯಾತಿ ನಿಜವೆನಿಸಿತು. ಆಗ ಇಳಿ ವಯಸ್ಸಿನಲ್ಲಿದ್ದ ಅವರು, ಬಹಳ ಉತ್ಸಾಹದಿಂದ ಚೊಕ್ಕವಾಗಿ ಹಾಡಿ, ಆಟವನ್ನು ನಿರ್ವಹಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾದರು.

ಸ್ಪಷ್ಟ ಉಚ್ಚಾರದ, ಅತಿ ಏರು ಸ್ವರದ ಆರ್ಭಟೆಯಾಗಲಿ, ಬಲಾತ್ಕಾರದ ಸ್ವರಭಾರವಾಗಲಿ ಇಲ್ಲದ ಮಧುರ ಸುಂದರ ಹಾಡುವಿಕೆ ಅವರದು. ರಾಗಗಳ ಶೈಲಿ, ಆಕೃತಿ, ಬಳಕೆ ಸ್ವಚ್ಛ, ಕಲಾತ್ಮಕ, ಆ ವಯಸ್ಸಿನಲ್ಲೂ ಆಕರ್ಷಕ ಮಾಧುರ್ಯ ಅವರ ಗಾನಕ್ಕೆ ಇತ್ತು. ಭಾಗವತಿಕೆ ವರ್ಚಸ್ವಿಯೂ ಆಗಿತ್ತು.

ಡಾ| ಶಿವರಾಮ ಕಾರಂತರ ರಾಗ ಸಂಶೋಧನಾ ಶಿಬಿರಗಳಲ್ಲಿ ಅವರು ಭಾಗವಹಿಸಿ ಅರ್ಥಪೂರ್ಣವಾಗಿ ಅನುಭವ ನೀಡಿದ್ದರು. ಮಾಂಡ್, ಪೀಲು, ಅಠಾಣ, ಮುಖಾರಿ ಮೊದಲಾದ ಕೆಲವು ರಾಗಗಳ ಸ್ಪಷ್ಟ ಆಕಾರ ತಿಳಿಯಲು ಮತ್ತು ತೆಂಕುತಿಟ್ಟಿನ ಪ್ರಾಚೀನ ಸಂಪ್ರದಾಯದ ಹಲವು ಅಂಶಗಳನ್ನು ತಿಳಿಯಲು ಜೋಯಿಸರಿಂದ ತನಗೆ ತುಂಬ ನೆರವು ದೊರಕಿತೆಂದು ಡಾ| ಕಾರಂತರು ಹೇಳಿದ್ದರು (ಬಹುಶಃ ಇದನ್ನವರು ಎಲ್ಲೋ ಬರಹದಲ್ಲಿ ಉಲ್ಲೇಖಿಸಿದ್ದಾರೆಂದು ನೆನಪು). ಕಾರಂತರ ಈ ಪ್ರಶಂಸೆ ಮಹತ್ವದ್ದೆಂದು ಪ್ರತ್ಯೇಕ ಹೇಳಬೇಕಾಗಿಲ್ಲ.

ಗಿಡ್ಡ ಆಕೃತಿಯ ಜೋಯಿಸ ಭಾಗವತರು ರಂಗದಲ್ಲಿ ಮಂಚದ ಹಿಂದೆ ಹಾಡುವಾಗ “ಹಾಡು ಕೇಳುತ್ತಿತ್ತು, ಭಾಗವತರು ಕಾಣುತ್ತಿರಲಿಲ್ಲ” ಎಂದು ವಿನೋದವಾಗಿ ಪ್ರಖ್ಯಾತ ಹಿಮ್ಮೇಳ ವಾದಕ ದಿ| ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಹೇಳುತ್ತಿದ್ದರು. ಹಿಂದೆ ಕಾಣುತ್ತಿದ್ದುದು ತಾನು ಮಾತ್ರ ಅನ್ನುತ್ತಿದ್ದರು. ಕಾರಣ ಬಲ್ಲಾಳರು ಭರ್ತಿ ಎತ್ತರದ ಆಳಂಗದವರಷ್ಟೆ..?

ತನ್ನ ಊರು ಬೋವಿಕಾನದ ಸುತ್ತ ಐದು ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದ ಪುಣ್ಯ ಪುರುಷರು ಈ ಜೋಯಿಸ ಭಾಗವತರೆಂಬುದು ದಾಖಲಾಗದೆ ಹೋಗಿದೆ. ಅವರು ಯಕ್ಷಗಾನದ ಭಾಗವತರಾಗಿಯೇ ಗುರುತಿಸಲ್ಪಟ್ಟುದರಿಂದ ಹಾಗಾಗಿರಬೇಕು. ಇಂತಹ ಓರ್ವ ವ್ಯಕ್ತಿ ಶಿಕ್ಷಣ ಕ್ಷೇತ್ರವನ್ನು ಬಿಟ್ಟು, ವೃತ್ತಿ ಕಲಾವಿದರಾಗಿ ಯಕ್ಷಗಾನದಲ್ಲೇ ಪ್ರವೃತ್ತರಾದುದು, ಅವರ ತೀವ್ರ ಕಲಾಸಕ್ತಿ ಮತ್ತು ಈ ಕಲೆಯ ಮೋಹಕ ಶಕ್ತಿಗಳೇ ಸಾಕ್ಷಿ.

ಹಿರಿಯ ಬಲಿಪ ಭಾಗವತರ ಪ್ರಚಂಡ ವರ್ಚಸ್ಸು, ಅಬ್ಬರ, ಮಾಂಬಾಡಿ ಭಾಗವತರ ಆಚಾರ್ಯತ್ವದ ಪ್ರಸಿದ್ಧಿಗಳ ನಡುವೆ ಬಹುಶಃ ಜೋಯಿಸ ಭಾಗವತರಿಗೆ ಸಿಗಬೇಕಾದ ಮನ್ನಣೆ ಸಿಗದೇ ಹೋಯಿತೇನೋ ಅಂತ ಅನ್ನಿಸುತ್ತದೆ. ಸೌಮ್ಯ, ಸರಳ ಹೊಂದಾಣಿಕೆಯ ಮೇಳ ಸಂಚಾಲಕರಾಗಿ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದರು. ವ್ಯಕ್ತಿ, ಸಾಮಾಜಿಕ, ಕಲಾವಿದ – ಈ ಮೂರೂ ಆಗಿ ಸ್ಮರಣೀಯ ಹಿರಿಯರು ಜೋಯಿಸ ಭಾಗವತರು.

– ಡಾ. ಎಂ. ಪ್ರಭಾಕರ ಜೋಶಿ

error: Content is protected !!
Share This
%d bloggers like this: