ಉಲಿಯ ಉಯ್ಯಾಲೆ
ತಾಳಮದ್ದಲೆ ಎಂಬ ಮೋಹಕ ಲೋಕ
ರಾಧಾಕೃಷ್ಣ ಕಲ್ಚಾರ್
ಅಕ್ಷರ ಪ್ರಕಾಶನ, ಹೆಗ್ಗೋಡು
ಪುಟ 168, ಬೆಲೆ ರೂ.170, 2022

ಪ್ರಮುಖ ಅರ್ಥದಾರಿ, ಲೇಖಕ,ಅಂಕಣಕಾರ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ತನ್ನ ತಾಳಮದ್ದಲೆಯ ಆಸಕ್ತಿ,ಪ್ರವೃತ್ತಿ, ಪ್ರಗತಿ,ಅರ್ಥ ಚಿಂತನೆಗಳನ್ನು ಹೆಣೆದು ರಚಿಸಿ,ಈಗ ಸಂಕಲನವಾಗಿಸಿದ ಈ ಲೇಖನ ಮಾಲೆ ಯಕ್ಷಗಾನದ – ಮುಖ್ಯವಾಗಿ ತಾಳಮದ್ದಲೆ ಕ್ಷೇತ್ರದಲ್ಲಿ ವಿಶಿಷ್ಟ ಮಹತ್ತ್ವದ ಕೃತಿ.

ಈ ಪುಸ್ತಕದ ಯೋಜನೆ ಹೇಗಿದೆ ಅಂದರೆ ಇದರಲ್ಲಿ ಕಲಾವಿದನೊಬ್ಬನು ಒಂದು ಕ್ಷೇತ್ರಕ್ಕೆ ಬಂದ, ಬೆಳೆದ ಪ್ರವರ್ತಿಸಿದ ಮತ್ತು ಕಂಡ ರೀತಿ ಇದರೊಡನೆ ಉಂಡ ಸಿಹಿಕಹಿ, ಜತೆಗೆ ಈ ರಂಗದ ಕುರಿತಾದ ಚಿಂತನೆ, ತಾಳಮದ್ದಲೆ ಅರ್ಥದ ಅರ್ಥ – ಈ ಎಲ್ಲವೂ ಹದವಾದ ಪಾಕವಾಗಿ, ಸಹಜವಾದ ಸಂಯುಕ್ತವಾಗಿ ರೂಪಿತವಾಗಿದೆ. ವಿಶೇಷತಃ ನನ್ನಂತಹ ಹಲವರಿಗೆ ಇದು ಹಲವು ಕಡೆ ನಮ್ಮ ಕಲಾಯಾನದ ಬಿಂಬ ಸಾಮ್ಯ, ನಮ್ಮದೇ ಕಥೆ ಎಂಬಷ್ಟು ಆಪ್ತವಾಗುತ್ತದೆ. ಮೂವತ್ತು ಅಧ್ಯಾಯಗಳ, ೧೬೮ ಪುಟಗಳ ಈ ಕೃತಿ ಜಗತ್ತಿನ ಕಲಾ – ಸಾಹಿತ್ಯದ ಒಂದು ದೊಡ್ಡ ಪ್ರಕಾರವಾದ ತಾಳಮದ್ದಲೆಯ ಒಳಗನ್ನು ಒಳಹೊರಗಿನ ಆಸಕ್ತರಿಗೆ – ಕಲಾವಿದ, ರಸಿಕ, ಸಾಹಿತ್ಯಾಭ್ಯಾಸಿ, ಕಲಾಭ್ಯಾಸಿಗಳಿಗೆ ಶ್ರುತಗೊಳಿಸುವ ಪುಸ್ತಕ. ಕಲ್ಮಡ್ಕ, ಪಂಬೆತ್ತಾಡಿಯ ಬಾಲ್ಯದ ದಿನಗಳಿಂದ ಬಂದ ಓರ್ವ ಹುಡುಗನ ಆಸಕ್ತಿ, ವಿಸ್ಮಯ, ಓರ್ವ ಕಲಾವಿದ, ವಿಮರ್ಶಕನಾಗಿ ಅವನು ಬೆಳೆದ ಬಗೆಯನ್ನು ಚಿಕ್ಕ ಚೊಕ್ಕ ಪುಟಗಳ ಫೋಲ್ಡರ್ ಸರಣಿಯಂತೆ ಚಿತ್ರಿಸುತ್ತ ಹೋಗಿರುವ ಈ ಉಯ್ಯಾಲೆ ಸರಣಿ – ಈ ರೀತಿಯ‌ ಬರಹಕ್ಕೆ‌ ಒಂದು ಮಾದರಿ ಕೂಡ ಹೌದು. ಇದು ಉತ್ತರೋತ್ತರವಾಗಿ, ಸೂಕ್ಷ್ಮ ಪ್ರೌಢವೂ ಆಗುತ್ತ, ಆತ್ಮ ಕಥನ, ಕಲಾಕಥನ, ವಿಚಾರ ಕಥನವಾಗಿ ವಿಸ್ತರಿಸಿದ್ದು ಕೃತಿ – ಕೃತಿಕಾರ ಏಕತ್ವದಂತಿದೆ. ಮೊದ ಪಾರಾವೇ ಅಷ್ಟು ಕಾವ್ಯಾತ್ಮಕ. ಕೊನೆಯಲ್ಲಿ ಬರುವ ಒಂದು ಬಗೆಯ ನಿರ್ವೇದದಂತಹ ಅನಿಸಿಕೆವರೆಗೂ.

ಈ ಗ್ರಂಥದ ಪೌರಾಣಿಕ ಸೂತ – ಸೂತ್ರ ಏಕತ್ರ. ಶಿರೋನಾಮೆಗಳೂ ಹಾಗೆಯೇ – ಪಂಬೆತ್ತಾಡಿಯ ಪ್ರಜ್ಞೆ, ಚಿಟ್ಟೆ ಪಟ್ಟಿಯ ನೋವು, ಸಂಘಗಳ ಸಂಗದಲ್ಲಿ, ಇತ್ತಲಿಂತಿರುವಾಗ, ಹೊಸಗಾಳಿ ಸುಳಿಸುಳಿದು, ಹೊರಗೆ ನಿಂತು ನೋಡಿದಾಗ, ಕದಡಿದ ಸಲಿಲಂ..ಇತ್ಯಾದಿ ಬರಿಯ ರೋಚಕತೆ ಎನಿಸದೆ, ಅರ್ಥಗರ್ಭಿತವಿದೆ. ಅನಿಸಿಕೆ, ಚಿಂತನೆ, ವಿಮರ್ಶೆ, ನೋವು ನಲಿವು, ರಂಗದ ಇತಿಹಾಸದ ಹೆಜ್ಜೆಗಳು ಜಾಲದಂತೆ ಸೇರಿಬಂದಿವೆ. ಬಾಲ್ಯದ ಮುಗ್ಧತೆಯ ಚಿತ್ರಗಳೂ ಸೊಗಸಾಗಿವೆ.

ತಾಳಮದ್ದಲೆಯ ಮುಕ್ತ ವಿದ್ಯಾಲಯದಂತಿರುವ, ಓರ್ವ ಅರ್ಥದಾರಿಯ ರೂಪೀಕರಣಕ್ಕೆ ಬೇಕೇ ಬೇಕಾದ, ಸರಳ, ಈಗ ತುಸು ವಿರಳವಾಗುತ್ತಿರುವ ತಾಳಮದ್ದಲೆ ಸಂಘಗಳ ( ವಾರದ ಅಥವಾ ನಿಶ್ಚಿತ ಅವಧಿಯ ದಿನದ ಊರಿನ ಅಭ್ಯಾಸ ಕೂಟಗಳ ) ಕುರಿತಾದ ಅನೇಕ ವಿವರಗಳು ತುಂಬ ಮುಖ್ಯವೆನಿಸುತ್ತವೆ. ಕೆರಿಯರಿಸಂ, ಖ್ಯಾತಿಪ್ರಜ್ಞೆ ಬೆಳೆಯುವ ಈ ಕಾಲದಲ್ಲಿ ಸಂಘಗಳ ಸಂಗ ಉಳಿಸಿದಾಗ ಮಾತ್ರ ಸಂತಸ, ರೋಮಾಂಚನವಾಗುತ್ತದೆ. ಕೃತಿಯ ಉದ್ದಕ್ಕೂ ರಂಗದ ಇತಿಹಾಸ – ಐತಿಹ್ಯ – ಅಂದಂದಿನ ವರ್ತಮಾನ ಹದದಿಂದ‌ ಕೂಡಿ ಬಂದಿದೆ. ಅನುಭವಗಳನ್ನು ವಿವರಿಸುವಲ್ಲಿ ತಾನು ಎಡವಿದ್ದು, ಮಾಡಿದ ಪ್ರಮಾದಗಳನ್ನು, ಉದಾ. ಪದಪ್ರಯೋಗದ ಎಡವಟ್ಟು. (ಬದುಕಿದ್ದ ಒಬ್ಬರಿಗೆ ದಿವಂಗತ ಎಂದು ಬರೆದು ಈಗಲೂ ಇರುವ ಕೊರಗು, ರಂಗದಲ್ಲಾದ ಪದಪ್ರಯೋಗದ‌ ಎಡವಟ್ಟು ಇತ್ಯಾದಿ) ಹೇಳಿದ್ದಾರೆ. ಬದಲಾದ ಸನ್ನಿವೇಶ, ಹೊಸ ಪ್ರತಿಭೆಗಳ ಪ್ರಾದುರ್ಭಾವವನ್ನು ಗುರುತಿಸಿದ್ದಾರೆ. ಅನೇಕ ಸಹಕಲಾವಿದರು – ಗೆಳೆಯ – ಒಡನಾಡಿ – ಸಾಂದರ್ಭಿಕ ಸಹವರ್ತಿಗಳನ್ನು ನೆನಪಿಸಿದ್ದು, ಹಲವು ಕಡೆ ಅವರಿಗೊಂದು ರೀತಿಯ ನ್ಯಾಯ ಒದಗಿಸಿದೆ. ತಾಳಮದ್ದಲೆಯ ರಂಗದಲ್ಲಿ ಸಂಘಟನೆ – ಅವಕಾಶ – ಒಳಸುಳಿಗಳು – ಎರಡೂ ಅರ್ಥದಲ್ಲಿ – ರಂಗದ ಸಂಗತಿಗಳು (ಇನ್ನೂ ಹೆಚ್ಚು ಬರಬಹುದಿತ್ತು) ಮೊದಲಾಗಿ ಲಿಖಿತವಾಗಿವೆ.

ಆಶುಭಾಷಣದ ಈ ರಂಗದ‌ ದೊಡ್ಡ ತೊಡಕಾದ ಆಕ್ರಮಣ ಮತ್ತು ಎಳೆದುಕೊಳ್ಳುವಿಕೆಗಳ ಬಗೆಗೆ ಹೇಳಿರುವುದು ಸೂಚಕವಾಗಿದೆ. ಪ್ರಸಂಗ, ಪಾತ್ರ, ಪುರಾಣ ಎಲ್ಲದಕ್ಕೂ ತಾನೇ ‘ಅರ್ಥ’ ಹೇಳುವ ಒಂದು ದುಷ್ಪ್ರವೃತ್ತಿಯ ಕುರಿತು (ಪುಟ ೧೨೭) ಸರಿಯಾಗಿ ಹೇಳುವ ನೋಟಕರು, ಅದೇ ರೀತಿಯನ್ನು ಬಹಳಷ್ಟು ಕಾಲ ಬಹಳ ಬಾರಿ ಮಾಡಿರುವ ಓರ್ವರ ಬಗ್ಗೆ ಮೃದುವಾಗಿ ಬರೆದ ಸಾಲು ಅನಿಸಿತು.

ಬರಹದ ಶೈಲಿ ಸಂಕ್ಷೇಪ, ಸಾರಗ್ರಾಹಿಯಾಗಿದೆ. ಕೆಲವೆಡೆ ಸೂತ್ರಪ್ರಾಯವಾಗಿದೆ. ಇದು ಕೆಲವೊಮ್ಮೆ ವಿವರದ ಅಭಾವದಿಂದ ಸಮಸ್ಯೆಯೂ ಆಗುವುದುಂಟು.ತಾಳಮದ್ದಲೆಯ ಇಲ್ಲಿಯ ಇತಿಹಾಸದ‌ ಕೆಲವು ನೋಟಗಳ ಕುರಿತು ನನಗೆ ತೀರಾ ಬೇರೆ ಅಭಿಪ್ರಾಯ ಇದೆ.

ಒಟ್ಟಿನಲ್ಲಿ ತಾಳಮದ್ದಲೆ ರಂಗದ ಒಂದು ಗಮನಾರ್ಹ ದಾಖಲಾತಿಯಾಗಿ ಈ ಸಂಕಲನ ಅಧ್ಯಯನಾರ್ಹವಾಗಿದೆ.

ಬೆನ್ನುಡಿಯಲ್ಲಿ ಪ್ರಕಾಶಕರಾದ ಹಿರಿಯ ರಂಗತಜ್ಞ ಕೆ.ವಿ. ಅಕ್ಷರ ಹೇಳಿರುವ ಮಾತುಗಳು..

“…ಒಂದು ಕಡೆಯಿಂದ ಇದು ಕಲಾವಿದನೊಬ್ಬನ ಆತ್ಮಕಥನ – ಹಳ್ಳಿಯ ಸಾದಾ ಹುಡುಗನೊಬ್ಬ ಪುರಾಣದ ಪಾತ್ರವಿಸ್ಮಯಗಳಿಂದ ಮರುಳಾಗಿ ಸತತ ವ್ಯವಸಾಯದ ಮುಖಾಂತರ ಈ ಜಿಜ್ಞಾಸೆಯ ಮಾಧ್ಯಮಕ್ಕೆ ಪ್ರವೇಶ ಪಡೆದ ವೃತ್ತಾಂತ ಇಲ್ಲಿದೆ. ಇನ್ನೊಂದೆಡೆ, ಇದು ಆ ಮಾಧ್ಯಮದ ಒಳಗಿನ ಕಥನ – ಅರ್ಥದಾರಿಯೊಬ್ಬ ತನ್ನ ಸಂಪ್ರದಾಯದೊಳಗೆ ಸಿಕ್ಕ ಹಿರಿಕಿರಿಯರ ವೈವಿಧ್ಯಮಯ ಮಾರ್ಗಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅವರೊಂದಿಗಿನ ಕೊಡುಕೊಳೆಯ ಸಂಬಂಧದೊಳಗೆ ತನ್ನ ರೂಪುರೇಷೆಗಳನ್ನು ನಿರ್ಮಿಸಿಕೊಂಡ ಶೈಕ್ಷಣಿಕ ಕಥೆಯೂ ಇಲ್ಲಿದೆ. ಇಷ್ಟರ ಮೇಲೆ, ನಾಲ್ಕೇ ಜಿಲ್ಲೆಗಳನ್ನೊಳಗೊಂಡ ಪುಟ್ಟ ಪ್ರಾಂತ್ಯವೊಂದು ಈ ಜಗತ್ತಿನಲ್ಲಿಯೇ ವಿಶಿಷ್ಟವಾದ ಹೊಸ ಬಗೆಯ ರಂಗಮಾಧ್ಯಮವೊಂದನ್ನು ಹೇಗೆ ಬೆಳೆಸಿ ಉಳಿಸಿ ಕೊಳ್ಳುತ್ತಿದೆ ಎಂಬ ಕಲಾ ಇತಿಹಾಸದ ಪರೋಕ್ಷ ಕಥಾನಕವೂ ಈ ಪುಸ್ತಕದೊಳಗಿದೆ. ಹಾಗಿರುವುದರಿಂದ ಇದು ತಾಳಮದ್ದಲೆಯ ಒಳಗಿನವರಿಗೂ ಹೊರಗಿನವರಿಗೂ ರಂಗಭೂಮಿಯ ಹಿರಿಯರಿಗೂ ಕಿರಿಯರಿಗೂ ಸಾಂಸ್ಕೃತಿಕ ಕುತೂಹಲಿಗಳಿಗೂ ವಿದ್ವಾಂಸರಿಗೂ ಉಪಯುಕ್ತವಾಗಬಲ್ಲ ಹೊತ್ತಿಗೆ” ಎಂಬ ಮಾತುಗಳು ಇದರ ನಿರ್ವಚನದಂತಿವೆ.

ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು

error: Content is protected !!
Share This