• ಡಾ| ಎಂ. ಪ್ರಭಾಕರ ಜೋಶಿ

– 1-

ತಾನು ಪ್ರವರ್ತಿಸಿದ ಕ್ಷೇತ್ರಗಳಲ್ಲಿ ಯಶಸ್ಸು, ಕೀರ್ತಿ ಪಡೆಯುವುದು ಸಾಧನೆಯೆ. ಆದರೆ ಆ ಕ್ಷೇತ್ರದ ಬರಿಯ ಪ್ರತೀಕಾತ್ಮಕ, ಐಕಾನಿಕ್ ವ್ಯಕ್ತಿತ್ವ ಅನಿಸುವುದು ತುಂಬ ವಿರಳ ಸಿದ್ಧಿ. ಇದನ್ನು ಸರಳವಾಗಿ ಎಂಬಂತೆ ತಲಪಿದವರು ದೇರಾಜೆ ಸೀತಾರಾಮಯ್ಯ. ಓರ್ವ ಗಣ್ಯ ಸಾಮಾಜಿಕ, ಊರಿನ ಪಟೇಲ, ಸಹಕಾರಿ ಕಾರ್ಯನಿರತ, ಅರ್ಥಧಾರಿ, ಲೇಖಕ, ವ್ಯಕ್ತಿ – ಹೀಗೆ ಎಲ್ಲ ಮುಖಗಳಲ್ಲಿ ಇದು ನಿಜ. ಎಲ್ಲ ವಲಯಗಳಲ್ಲಿ ಹೆಚ್ಚುಕಡಿಮೆ ಅವಿರೋಧವನ್ನಬಹುದಾದ ಅಂಗೀಕಾರ ಅವರಿಗೆ ದೊರಕಿತ್ತು.

1966ರಿಂದ ಅವರ ನಿಧನದ ತನಕ – ನಿಕಟ ಎನ್ನಬಹುದಾದ ಒಡನಾಟ ನಮ್ಮೊಳಗಿತ್ತು. ವಯಸ್ಸಿನ ದೊಡ್ಡ ಅಂತರವು ಎಂದೂ ಸಂಕೋಚಕ್ಕೆ ಮುಜುಗರಕ್ಕೆ ಕಾರಣವಾಗದ ಹಾಗೆ ಅವರ ವರ್ತನೆಯಿತ್ತು. ಅದು ಉದ್ದೇಶಪೂರ್ವಕ ಪ್ರಯತ್ನವಾಗಿರಲಿಲ್ಲ. ಅವರ ವ್ಯಕ್ತಿತ್ವದ ಸಹಜವಾದ ರೂಪವಾಗಿತ್ತು.

– 2-

1967ರಲ್ಲಿ ನಾನಿನ್ನೂ ಅಂತಿಮ ಬಿಕಾಂ ವಿದ್ಯಾರ್ಥಿಯಾಗಿದ್ದಾಗ – ನನ್ನ ಭಾವ ಮುಂಡಾಜೆ ಕಡಂಬಳ್ಳಿಯ ದಿ| ರಾಮಚಂದ್ರ ಶ್ರವಣಿ ಅವರಲ್ಲಿ ಜರಗಿದ ಒಂದು ಕೂಟದಲ್ಲಿ ಪಾರ್ಥಸಾರಥ್ಯದ ಅವರ ಕೃಷ್ಣನೊಂದಿಗೆ ದುರ್ಯೋದsನನಾಗಿ ಭಾಗವಹಿಸುವ ಅವಕಾಶವಿತ್ತು. “ತನ್ನ ಭಾವನೆಂಬುದಕ್ಕಾಗಿ ದೇರಾಜೆ ಜತೆ ಅರ್ಥಹೇಳಿಸಿದ, ಸರಿಯಾಗಲಿಲ್ಲ” ಎಂದಾಗಿ ಬಿಡುತ್ತದೋ ಎಂಬ ಅಳುಕು ನನ್ನ ಭಾವನಿಗೂ ಇತ್ತು. ಆದರೂ ಹಾಗಾಗಲಿಲ್ಲ. ಅಂದಿನ ಕೂಟ ನನಗಿನ್ನೂ ಅಚ್ಚಿನಂತೆ, ಬೆಲ್ಲದ ಅಚ್ಚಿನಂತೆ ಕೂಡ ನೆನಪಿದೆ. ಸಂಭಾಷಣೆಯನ್ನವರು ನಿರ್ವಹಿಸಿ ನನ್ನನ್ನು ನೆಗಹಿ ಕಾಣಿಸಿದ ರೀತಿ ಅಸಾಮಾನ್ಯ, ಅವಿಸ್ಮರಣೀಯ. ಕೃಷ್ಣ, ಕೌರವರ ಸಂಭಾಷಣೆಗಳೂ ತುಂಬ ಸ್ವಾರಸ್ಯಕರವಾಗಿದ್ದುವು. ಆ ಕೂಟವು ನನ್ನನ್ನು ತಾಳಮದ್ದಳೆ ಕ್ಷೇತ್ರದಲ್ಲಿ ‘ಸುದ್ದಿ’ಯಾಗಲು ಕಾರಣವೆನಿಸಿತ್ತು. ಆ ಬಳಿಕ ನಮ್ಮೊಳಗೆ ಒಡನಾಟ ಬೆಳೆಯಿತು. ನಾಲ್ಕಾರು ಸಲ ಅವರ ಜೊತೆಗೆ ಅರ್ಥ ಹೇಳಿದ್ದೇನೆ. ಆ ಬಳಿಕ ಅವರು ನಿವೃತ್ತರಾದುದರಿಂದ, ಅವರ ಜೊತೆ ಹೆಚ್ಚು ಅವಕಾಶಗಳು ನನಗೆ ದೊರಕಲಿಲ್ಲ. ನಿವೃತ್ತಿ ಬಳಿಕ ಶ್ರೀಎಡನೀರು ಮಠದಲ್ಲಿ ಅವರ ಕೆಲವು ಅರ್ಥಗಳನ್ನು ಕೇಳಿದೆ. ಅವರೇ ಸ್ಥಾಪಿಸಿದ ಚೊಕ್ಕಾಡಿ ದೇವಳಕ್ಕಾಗಿ ಜರಗಿದ ಒಂದು ತಾಳಮದ್ದಳೆಯಲ್ಲಿ ಭೀಷ್ಮಾರ್ಜುನದ ಅವರ ಭೀಷ್ಮನಿಗೆ ನಾನು ಕೌರವನಾಗಿ ಭಾಗವಹಿಸಿದಾಗ,

– ತರಣಿಪಾಲಿಸು ಧರ್ಮಜಾತನು | ಪರಮ ಸಜ್ಜನ ……..

ಎಂಬ ಪದ್ಯಕ್ಕೆ ಅವರು ದsರ್ಮರಾಜನ ವ್ಯಕ್ತಿತ್ವವನ್ನು ವಿವರಿಸಿದ ರೀತಿ, ಕೌರವನನ್ನು ಒಲಿಸಿ ಮಾತಾಡಿಸಿದ ಕ್ರಮದಿಂದ ನನಗೆ ‘ಜರೆವುದೇತಕೆ ಎನ್ನನು ……’ ಎಂಬ ಪದ್ಯಕ್ಕೆ ಭೀಷ್ಮನನ್ನು ಪಕ್ಷಪಾತಿ ಎನ್ನಲು ಆಗಲಿಲ್ಲ. ಆ ಪದ್ಯವನ್ನು ಬಿಡುವಂತೆ ಬಾsಗವತರಿಗೆ ಹೇಳಿದೆ. ರಂಗ ದೃಷ್ಟಿಯಿಂದ ಇದು ತಪ್ಪೇ. ಆದರೆ ಅವರ ಭೀಷ್ಮಜ್ಜ ಹಾಗೆಯೆ ಇತ್ತು.

– 3 –

ಪಟೇಲಿಕೆ ಹುದ್ದೆ ರದ್ದಾಗಿದೆ, ಅದು ಪಾರಂಪರಿಕ ರಾಜತ್ವದ ರೀತಿ, ಆಧುನಿಕ ಸರ್ಕಾರಿ ವಿದಾsನ ಸೂಕ್ತ ಎಂಬ ವಿಚಾರ ಬರುತ್ತಲೆ, ಪಟೇಲಿಕೆಯನ್ನು ತ್ಯಜಿಸಿದ ರಾಜ್ಯದ ಮೊದಲಿಗರು ದೇರಾಜೆ. ಅಷ್ಟೇ ನಿರ್ಮೋಹದಿಂದ ತಾಳಮದ್ದಳೆ ಕ್ಷೇತ್ರದಿಂದ ನಿವೃತ್ತರಾದರು. ಸಹಕಾರಿ ಕ್ಷೇತ್ರದಲ್ಲೂ ಉನ್ನತ ಸ್ಥಾನಗಳ ಕೊಡುಗೆ ಬಂದಾಗ ‘ಒಲ್ಲೆ, ಕಿರಿಯರು ಬರಲಿ…’ ಎಂದರು. ಎಲ್ಲ ಕ್ಷೇತ್ರಗಳಲ್ಲಿ ಕಿರಿಯರ ಆಗಮನ, ಉತ್ಕರ್ಷೆಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು, ಬೆಂಬಲಿಸಿದರು.

– 4 –

1930ರ ದಶಕ. ಯಕ್ಷಗಾನ – ನಾಟಕ ಎಂಬ ಪ್ರಾಯೋಗಿಕ ಪ್ರಕಾರವೊಂದು ರೂಪಿತವಾದ ಕಾಲ. ಇದರ ಪ್ರವರ್ತಕರಲ್ಲಿ ದೇರಾಜೆ ಒಬ್ಬರು. ಚೊಕ್ಕಾಡಿಯ ಕರ್ನಾಟಕ ಯಕ್ಷಗಾನ ನಾಟಕ ಸಭಾ, ಕೋಳ್ಯೂರಿನ ಶಂಕರನಾರಾಯಣ ಯಕ್ಷಗಾನ ನಾಟಕ ಸಭಾ, ಇವು ಈ ಪ್ರಕಾರವನ್ನು ಆರಂಬಿಸಿದ ಎರಡು ಸಂಘಟನೆಗಳು. ಅವುಗಳೊಳಗೆ ಸಹಕಾರವೂ ಇತ್ತು. ಆಗ – ದೇರಾಜೆ ಅವರು, ಯಕ್ಷಗಾನಾಚಾರ್ಯ ಕುರಿಯ ವಿಠಲ ಶಾಸ್ತ್ರೀಗಳ ಕೃಷ್ಣನ ಜತೆ, ರೂಪಿಸಿದ ವಿಜಯ, ಮಕರಂದ ಪಾತ್ರವೇ ಇಂದು ಯಕ್ಷಗಾನ ಆಟಗಳಲ್ಲಿ ಸರ್ವತ್ರ ವ್ಯಾಪಿಯಾಗಿರುವ ಮಕರಂದನ ಚಿತ್ರಣದ ಮೂಲ ವಿನ್ಯಾಸ, ಪರಿಕಲ್ಪನೆ.

– 5 –

ದೇರಾಜೆ ಅರ್ಥಗಾರಿಕೆ – ಕನ್ನಡ ವಾಙ್ಮಯದ ಉನ್ನತ ಸಿದ್ದಿಗಳಲ್ಲಿ ಒಂದು. ಭಾವಾರ್ದ್ರವಾದ, ಆಳವುಳ್ಳ, ಆಟದ ಬೊಂಬೆಯಂತಲ್ಲದ ತೂಕದ ಸ್ವರ, ಚಿಕ್ಕ, ದೊಡ್ಡ ವಾಕ್ಯಗಳ ಹದವಾದ ಮೇಳೈಕೆ, ಭಾವ ವಿಲಾಸದ ಬಹುರೂಪಗಳು, ಸಿಡಿಲು ಬಡಿವ ಕಲಾತ್ಮಕ ಉಕ್ತಿಗಳು, ಸಂಬಾಷಣ ಸಾದ್ಯತೆಗಳ ಅಸಂಖ್ಯ ಪ್ರಯೋಗಗಳು, ಓತಪ್ರೋತವಾದ ಪಾತ್ರ ಚಿತ್ರದ ಸೂತ್ರ ಇವುಗಳಿಂದ ಅವರು ಮಾದರಿ ಅರ್ಥಧಾರಿ ಅನಿಸಿದರು. ಚರ್ಚೆಗೆ ಪ್ರಾಶಸ್ತ್ಯವಿಲ್ಲ. ಎಲ್ಲಮಟ್ಟದ ಅರ್ಥಧಾರಿಗಳೂ ಅವರ ಜತೆ ಅರ್ಥಹೇಳಬಹುದಾಗಿತ್ತು.

ಪೊಳಲಿ ಶಾಸ್ತ್ರೀ, ಕುಬಣೂರು ಬಾಲಕೃಷ್ಣರಾವ್, ಶೇಣಿ, ಸಾಮಗ ಸೋದರರು, ಪೆರ್ಲ ಕೃಷ್ಣ ಭಟ್ಟ, ಕಾಂತರೈ, ಕೀರಿಕ್ಕಾಡು ಮಾಸ್ತರ್, ಕೊಳಂಬೆ ಪುಟ್ಟಣ್ಣ ಗೌಡರು, ಉಡುವೆಕೋಡಿ ನಾರಾಯಣಯ್ಯ, ಬೆಳ್ಳಾರೆ ಕಿಟ್ಟಣ್ಣ ರೈ, – ಇನ್ನೂ ಮುಂತಾದ, ಹತ್ತು ಹಲವು ಬೇರೆ ಬೇರೆ ರೀತಿಯ ಪ್ರತಿಭೆಗಳ ಮಧ್ಯೆ, ಪ್ರತ್ಯೇಕ ಪ್ರತಿಭೆಯಿಂದ ಕಾಣಿಸಿದ ದೇರಾಜೆ, ನಿಜಕ್ಕೂ ‘ಚೊಕ್ಕಾಡಿ’. ಅರ್ಥಗಾರಿಕೆಯಲ್ಲಿ ಅವರೇರಿದ ಎತ್ತರ – ಅವರಿಗೇ ಸಾಧ್ಯವಾಗುವಂತಹದು.

ಅರ್ಥಗಾರಿಕೆಯ ನಿಜವಾದ ಯಶಸ್ಸಿಗೆ ಬೇಕಾದುದು ಅಂತಹ ದೊಡ್ಡ ‘ಪಾಂಡಿತ್ಯ’ ಅಲ್ಲ ‘ಕಲೆಗಾರಿಕೆ’ ಎಂದು ತೋರಿಸಿದ್ದು ಅವರ ಇನ್ನೊಂದು ಸಾಧನೆ. ಮುಂದೆ – ಅವರ ಉತ್ತರ ಕುಮಾರ, ಸುಗ್ರೀವ ಪಾತ್ರಗಳಿಗೆ ಸಿಕ್ಕಿದ ದೊಡ್ಡ ಖ್ಯಾತಿಯಿಂದ ಅವರ ನೈಜ ಉತ್ಕೃಷ್ಠ ಚಿತ್ರಣಗಳಾದ ಭೀಷ್ಮ, ಕರ್ಣ, ಕೃಷ್ಣ – ಈ ಪಾತ್ರಗಳಿಗೆ ಅನ್ಯಾಯವಾಯಿತೆನಿಸುತ್ತದೆ.

– 6 –

ದೇರಾಜೆಯವರ ಆಸ್ತಿಕ್ಯ, ವೇದಾಂತದ್ದು. ಆದರೂ ಅವರು ಶ್ರೀರಾಮ ದೇವಳ ಸ್ಥಾಪಿಸಿದ್ದು ಹೌದು. ಅದು ಸಾಂಸ್ಕೃತಿಕ ಕಲಾಕೇಂದ್ರವಾಗಬೇಕೆಂಬ ಅವರ ಹಂಬಲ, ಸಾಕಾರವಾಗಿದೆ ಎಂಬುದು ಸಮಾಧಾನಕರ.

ಅವರ ಹಲವು ಕೃತಿಗಳಲ್ಲಿ ಅವರ ಅರ್ಥ – ಪ್ರತಿಭೆಯ ಹಲವು ದೋರಣೆಗಳಿದ್ದರೂ, ಅವರ ಅತ್ಯುತ್ತಮ ಕೃತಿ ನಳದಮಯಂತಿ, ವೃತ್ತಿಪರ ಪುರ‍್ರಚನೆಯಾದ “ಪ್ರಿಯದರ್ಶನಂ” ಇದು ಕನ್ನಡದ ಶ್ರೇಷ್ಠ ಖಂಡಕಾವ್ಯಗಳಲ್ಲಿ ಒಂದು. ಅವರ ಅರ್ಥಗಾರಿಕೆಯ ಭಾಷೆ ಮತ್ತು ಬರಹದ ಭಾಷೆ ಇವು ತೀರ ಬೇರೆ ಆಗಿರುವುದೊಂದು ವಿಶೇಷ.

– 7 –

ಅವರ ವಿಟ್ಲದ ‘ಆರಾಧನಾ’ ಮನೆಯಲ್ಲಿ ಅವರ ಜತೆ ಕುಳಿತು ನಡೆಸಿದ ಯಕ್ಷಗಾನ, ಕಾವ್ಯ, ಸಂಸ್ಕೃತಿ ಸಲ್ಲಪಗಳು, ಸಂಭಾಷಿಸಿದ ಸುಖ ಸಂಕಟ ವಾರ್ತಾಲಾಪಗಳೆಲ್ಲಾ ಎಷ್ಟೋ..! ಅವೆಲ್ಲ ಮುಗಿಯದ ಮೆಲುಕು. ಹಸ್ತಪ್ರತಿಯಲ್ಲಿ ಅವರ ರಚನೆಗಳನ್ನು ಓದಿ ಹೇಳುವಾಗಿನ ಅವರ ಜೀವಂತಿಕೆ, ಅದು ಬೇರೆಯೇ ರೀತಿ. ಒಮ್ಮೆ ‘ಪ್ರಿಯದರ್ಶನಂ’ನ ಭಾಗಗಳನ್ನು ಒತ್ತಾಯಿಸಿ ಅವರಿಂದಲೆ, ನಾವು ಕೆಲ ಮಿತ್ರರು ಓದಿಸಿದ್ದೆವು. ಆಗ ನಮಗೆ ಆ ಕಾವ್ಯದ ಅಂತರಂಗದ ಒಂದು ದರ್ಶನವಾಗಿತ್ತು.

ಅವರ ಆರೋಗ್ಯ ಬಹು ಸೂಕ್ಷ್ಮ. ಉಬ್ಬಸದ ತೊಂದರೆಯೂ ಇತ್ತು. ಇಂಥವರನ್ನು ಆಗಾಗ ಜನರು ಭೇಟಿ ಆಗುವುದು, ದೀರ್ಘ ಸಂಭಾಷಣೆಯಲ್ಲಿ ತೊಡಗಿಸುವುದನ್ನು ಸಾಮಾನ್ಯವಾಗಿ – ಅವರ ಮನೆಯವರು ಇಷ್ಟಪಡುವುದಿಲ್ಲ. ಆದರೆ – ಶ್ರೀಮತಿ ದೇರಾಜೆ ಅವರು ಆಗಾಗ ಹೇಳುತ್ತಿದ್ದ ಮಾತು ನೆನಪಿದೆ – “ನೀವು, ನಿಮ್ಮಂತಹ ಆಪ್ತರು ಆಗಾಗ ಬನ್ನಿ. ಅವರಿಗೆ, ಓದಿ ಹೇಳಿ ಮಾತಾಡಿ, ಆಯಾಸ ಆಗುವುದಿಲ್ಲ. ಜವ್ವನ ಬರುತ್ತದೆ. ಉಬ್ಬಸದ ತೊಂದರೆಯೂ ಕಡಿಮೆ ಆಗುತ್ತದೆ.”

– 8 –

ಬದುಕಿನಲ್ಲಿ ಏನೇನು ಕಂಡೆ ಎಂದು ಕೇಳಿದರೆ – ಹೆಮ್ಮೆಯಿಂದ ಹೇಳಬಹುದಾದ ಒಂದು ಸಂಗತಿ ಎಂದರೆ “ದೇರಾಜೆ ಅವರ ಅರ್ಥಕೇಳಿದ್ದೇನೆ, ಒಡನಾಡಿದ್ದೇನೆ.”

(2015)

error: Content is protected !!
Share This