
ಶ್ರೀ ನಂದನೇಶ್ವರ ಯಕ್ಷಗಾನ ಮಂಡಳಿ ಇದರ ವತಿಯಿಂದ ದಿನಾಂಕ 08 ಫೆಬ್ರವರಿ 2026ರಂದು ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ‘ಯಕ್ಷ ಪರಮೇಶ’ ಎಂಬ ಪುಸ್ತಕ ಬಿಡುಗಡೆಗೊಂಡಿತು.
ಡಾ. ಎಂ. ಪ್ರಭಾಕರ ಜೋಷಿಯವರು “ಕಲಾ ವಲಯದಲ್ಲಿ ಪರಮೇಶರಿಗಿದ್ದ ಕೌಶಲತೆಯು ಅದ್ಭುತವಾದುದು. ಯಕ್ಷ ರಂಗದ ಪರಿಪೂರ್ಣ ಪರಿಚಯ, ಪ್ರಸಾದನಾ ವೇಗ, ಪೇಟಗಳ ರಚನೆ, ಬೇರೆ ಬೇರೆ ರಂಗಗಳ ದುಡಿಮೆ – ಎಲ್ಲವೂ ಮಿಳಿತವಾಗಿದ್ದ ಸರ್ವಾಂಗ ಸುಂದರ ಕಲಾವಿದ. ಪುಸ್ತಕದಿಂದಾಗಿ ದಾಖಲೆ ಆಯಿತು” ಎಂದು ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.
ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಪುನರೂರು ಇವರು ಬಿಡುಗಡೆಗೊಳಿಸಿ ಮಾತನಾಡಿ “ಇಂದು ಎಷ್ಟೋ ಕಲಾವಿದರು ಅಸಾಮಾನ್ಯ ಪ್ರತಿಭೆಯಿದ್ದರೂ ಮಾಸಿ ಹೋಗುತ್ತಿದ್ದಾರೆ. ಅವರ ಸಾಧನೆ, ವಿಭಿನ್ನ ದೃಷ್ಟಿಯ ವೇಷಗಾರಿಕೆ, ಕಲಾ ವಲಯಕ್ಕೆ ಅವರದ್ದೇ ಆದ ಕೊಡುಗೆಗಳು ಗುರುತಿಸಲ್ಪಡಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಅದಕ್ಕೆ ಅನೇಕ ಆಯಾಮಗಳಿವೆ. ರವಿಯವರು ಅಳಿದ ಶ್ರೇಷ್ಠ ಕಲಾವಿದ ಸವ್ಯಸಾಚಿ ಪಿ.ವಿ. ಪರಮೇಶರ ಜೀವನಗಾಥೆಯನ್ನು ಪುಸ್ತಕದ ದಾಖಲೆಯಲ್ಲಿ ಮೂಡಿಸಿದ್ದಾರೆ. ವಾಸುದೇವ ಐತಾಳರ ಆರ್ಥಿಕ ಬೆಂಬಲದಿಂದ ಪ್ರಕಟಗೊಂಡ ಈ ಪುಸ್ತಕದಂತೆಯೇ ಎಲೆಮರೆಯ ಕಲಾವಿದರ ಕೃತಿಗಳೂ ಬರಲಿ” ಎಂದು ಹೇಳಿದರು.

