ತೆಂಕುತಿಟ್ಟು ಯಕ್ಷಗಾನದಲ್ಲಿ ಬಲಿಪ ಪರಂಪರೆಯ ಸಮರ್ಥ ಉತ್ತರಾಧಿಕಾರಿಯಾಗಿ ಭರವಸೆ ಮೂಡಿದ್ದ ಪ್ರಸಿದ್ಧ ಭಾಗವತರಾದ ಬಲಿಪ ಪ್ರಸಾದ ಭಾಗವತರು ಇಂದು [ಎಪ್ರಿಲ್ 11] ವಿಧಿವಶರಾಗಿದ್ದಾರೆ. ಅವರು ಕಳೆದ ಕೆಲವು ಸಮಯದಿಂದ ಅಸೌಖ್ಯದಿಂದಿದ್ದರು. ಅವರು ಈಗ ನಮ್ಮೊಂದಿಗಿರುವ ಅಗ್ರಗಣ್ಯ ಭಾಗವತರಾದ ಬಲಿಪ ನಾರಾಯಣ ಭಾಗವತರ ತೃತೀಯ ಪುತ್ರರು.
ತೀರ್ಥರೂಪರ ಸಹಾಯಕರಾಗಿ ಕಟೀಲು ಮೇಳ ಸೇರಿದ ಪ್ರಸಾದ ಬಲಿಪರು ಪೂರ್ವರಂಗ ವಿಭಾಗದಲ್ಲಿ ಅನುಭವ ಹೊಂದಿ ಉತ್ತರರಂಗವನ್ನು ಪ್ರವೇಶಿಸಿದವರು. ಮದ್ಲೆಗಾರರಾಗಿದ್ದ ಪೆರುವಾಯಿ ನಾರಾಯಣ ಭಟ್ಟರು ಕೂಡ ಪ್ರಸಾದರನ್ನು ತಿದ್ದಿ ತೀಡಿ ರಂಗಕ್ಕೆ ಸಜ್ಜುಗೊಳಿಸಿದರು. ಮುಂದೆ ಪ್ರಧಾನ ಭಾಗವತರಾಗಿ ಕಟೀಲು ಎರಡನೆಯ ಮೇಳವನ್ನು ಬಹುಕಾಲ ಮುನ್ನಡೆಸಿದರು. ಭಾರತೀಯ ರಂಗಸಂಗೀತ ಪರಂಪರೆಯಲ್ಲಿ ತನ್ನದೇ ಅನನ್ಯತೆಯನ್ನು ಸ್ಥಾಪಿಸಿರುವ ಬಲಿಪ ಶೈಲಿಯ ಪರಂಪರೆಯನ್ನು ನಿಷ್ಠೆಯಿಂದ ಅಳವಡಿಸಿಕೊಂಡು, ತಾಳಗತಿ, ಛಂದೋಬದ್ಧತೆ, ರಂಗನಡೆಗಳಲ್ಲಿ ತೀರ್ಥರೂಪರನ್ನೇ ಶ್ರದ್ಧೆಯಿಂದ ಅನುಸರಿಸಿದವರು. ಅಂಶ ಮತ್ತು ಮಾತ್ರಾಗತಿಯ ಪದ್ಯಗಳನ್ನು ತ್ತಿತ್ತಿತ್ತೈ ಸೇರಿದಂದೆ ಎಲ್ಲ ತಾಳಗಳಿಗೆ ಬದ್ಧವಾಗಿ ಹಾಡುವ ಮತ್ತು ಸಂಗೀತದ ರಾಗಗಳನ್ನು ಅನುಸರಿಸದೆ ಅಪ್ಪಟ ಯಕ್ಷಗಾನ ಮಟ್ಟುಗಳನ್ನು ಗಮಕಗಳೊಂದಿಗೆ ಬಳಸುವ ಬದ್ಧತೆ ಅವರಲ್ಲಿತ್ತು. ವೀರರಸದ ಸ್ಥಾಯಿ-ಸಂಚಾರಿಗಳನ್ನು ಅವರಂತೆ ಅನಾವರಣಗೊಳಿಸುತ್ತಿದ್ದವರು ವಿರಳ. ಇತ್ತೀಚೆಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ಗಾನವೈಭವ ಕಲಾಪಗಳಲ್ಲಿಯೂ ಸ್ವಂತಿಕೆಯನ್ನು ಬಿಟ್ಟುಕೊಡದೆ ಪದ್ಯವನ್ನು ಪ್ರಸ್ತುತಿಪಡಿಸುವ ಶ್ರದ್ಧೆ ಅವರಲ್ಲಿತ್ತು. ತನ್ನ ವೃತ್ತಿಬದುಕಿನಲ್ಲಿ ಪೆರುವಾಯಿ ನಾರಾಯಣ ಶೆಟ್ಟಿ , ರೆಂಜಾಳ ರಾಮಕೃಷ್ಣ ರಾವ್, ಅಜೆಕಾರು ರಾಜೀವ ಶೆಟ್ಟಿ, ಗುಂಡಿಮಜಲು ಗೋಪಾಲಭಟ್ಟರಂಥ ಅಪ್ಪಟ ಬಯಲಾಟ ಮಾರ್ಗದ ವೇಷಧಾರಿಗಳನ್ನು ರಂಗದಲ್ಲಿ ಮೆರೆಸಿದ ಹೆಗ್ಗಳಿಕೆ ಪ್ರಸಾದ ಬಲಿಪರದ್ದು. ಯಕ್ಷಗಾನ ಕಲಾರಂಗ ಸಂಯೋಜಿಸಿದ ಯಕ್ಷಗಾನ ಪ್ರಯೋಗ-ಪ್ರದರ್ಶನಗಳಲ್ಲಿ ಅವರು ಅಭಿಮಾನವಿರಿಸಿ ಪಾಲ್ಗೊಳ್ಳುತ್ತಿದ್ದರು.
ಪ್ರಸಾದ ಬಲಿಪರು ಪ್ರಸಿದ್ಧ ಭಾಗವತ ಬಲಿಪ ಶಿವಶಂಕರ ಭಾಗವತರು ಸೇರಿದಂತೆ ಮೂವರು ಸಹೋದರರನ್ನು ಮತ್ತು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಪ್ರಸಾದ ಬಲಿಪರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ನಿನ್ನೆ ಸಂಜೆ ಕಳೆದು ಆವರಿಸುತ್ತಿರುವ ಕತ್ತಲಿನೊಂದಿಗೆ ಮಹಾನ್ ಭಾಗವತನ ನಿರ್ಗಮನದ ಸುದ್ದಿಯು ಹರಡುತ್ತಿದ್ದಂತೆ ಯಕ್ಷಗಾನದ ಚೌಕಿಮನೆಗಳಲ್ಲಿ ಭಾರವಾದ ಮೌನ ನೆಲೆಸಿತು. ಈ ದಿನ ಬೆಳಗ್ಗೆ ತೆಂಕು-ಬಡಗಿನ ಭೇದವಿಲ್ಲದೆ ಇಡೀ ಯಕ್ಷಗಾನ ರಂಗವೇ ವಯೋವೃದ್ಧ , ಜ್ಞಾನವೃದ್ಧ ಬಲಿಪ ನಾರಾಯಣ ಭಾಗವತರ ಜೊತೆಗೆ ನಿಂತು ಸಂತೈಸುತ್ತಿರುವಂತೆ ಭಾಸವಾಗುತ್ತಿದೆ.

